ಹೊಸ ವರ್ಷದ ಮುನ್ನಾದಿನ 10ನೇ ತರಗತಿ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ
ಜಲಪೈಗುರಿ (ಪಶ್ಚಿಮ ಬಂಗಾಳ): ಹೊಸ ವರ್ಷಾಚರಣೆಯ ಮುನ್ನಾದಿನ ರಾತ್ರಿ ಹತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎನ್ನಲಾದ ಘಟನೆಗೆ ಸಂಬಂಧಿಸಿದಂತೆ ಜಲಪೈಗುರಿಯ ಬಾಲ ಪಾರಾದಲ್ಲಿ ನಾಗರಿಕರು ಪ್ರತಿಭಟನೆ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಸಂತ್ರಸ್ತೆ ವಿದ್ಯಾರ್ಥಿನಿಯ ತಂದೆ ಐದು ಮಂದಿ ಯುವಕರ ವಿರುದ್ಧ ಎಫ್ಐಆರ್ ದಾಖಲಿಸಿದ ಬೆನ್ನಲ್ಲೇ ಸ್ಥಳೀಯರು ದಾಂಧಲೆ ನಡೆಸಿ, ಆರೋಪಿ ಯುವಕರ ಮನೆಗಳನ್ನು ಧ್ವಂಸಗೊಳಿಸಿದರು.
ಶನಿವಾರ ರಾತ್ರಿ ಪೋಷಕರು ಇಲ್ಲದ ವೇಳೆ ಹತ್ತನೇ ತರಗತಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಒಬ್ಬ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಎಸ್ಪಿ ಬಿಸ್ವಜೀತ್ ಮಹತೊ ಹೇಳಿದ್ದಾರೆ. ಘಟನೆ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ಅವರು ವಿವರಿಸಿದ್ದಾರೆ.
ಆರೋಪಿಗಳ ಪೈಕಿ ಒಬ್ಬ ಕರೆ ಮಾಡಿ, ಮಗಳ ಸಾವಿನ ಬಗ್ಗೆ ಮಾಹಿತಿ ನೀಡಿದ್ದಾಗಿ ಸಂತ್ರಸ್ತೆಯ ತಂದೆ ಹೇಳಿಕೆ ನೀಡಿದ್ದಾರೆ. ಮನೆಗೆ ಹೋಗಿ ನೋಡಿದಾಗ ನೆಲದ ಮೇಲೆ ಬಿದ್ದಿದ್ದ ಮಗಳ ದೇಹದ ಮೇಲೆ ಗಾಯದ ಗುರುತುಗಳಿದ್ದವು ಎಂದು ತಿಳಿಸಿದ್ದಾರೆ. "ಯುವಕರು ನನ್ನ ಪುತ್ರಿಗೆ ಕಿರುಕುಳ ನೀಡಿ, ನಿಂದಿಸಿದ್ದಾರೆ. ಧೀರ್ಘಕಾಲದಿಂದ ಅವರು ಮಗಳ ಹಿಂದೆ ಬಿದ್ದಿದ್ದರು. ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ಅವರಿಗೆ ಶಿಕ್ಷೆಯಾಗಬೇಕು" ಎಂದು ತಂದೆ ಹೇಳಿದ್ದಾರೆ.
ಈ ಸುದ್ದಿ ಹರಡುತ್ತಿದ್ದಂತೆ ನೂರಾರು ಮಂದಿ ಸ್ಥಳೀಯರು ಐದು ಮಂದಿ ಆರೋಪಿಗಳ ಮನೆಗಳ ಮೇಲೆ ದಾಳಿ ಮಾಡಿ ಧ್ವಂಸಗೊಳಿಸಿದರು. ಗ್ರಾಮದಲ್ಲಿ ಬಿಗಿ ಬಂದೋಬಸ್ತ್ ಅಯೋಜಿಸಲಾಗಿದೆ. ಪೊಲೀಸ್ ಠಾಣೆಯಲ್ಲೂ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ತಪ್ಪಿತಸ್ಥರನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸಿದರು.