ಅತ್ಯಾಚಾರ ಪ್ರಕರಣದ ಆರೋಪಿಯ ತಾಯಿಗೆ ಗುಂಡಿಕ್ಕಿದ ಅಪ್ರಾಪ್ತ ವಯಸ್ಸಿನ ಸಂತ್ರಸ್ತೆ!
ಹೊಸದಿಲ್ಲಿ: ಹದಿನಾರು ವರ್ಷ ವಯಸ್ಸಿನ ಅತ್ಯಾಚಾರ ಸಂತ್ರಸ್ತೆಯೊಬ್ಬಳು, ಅತ್ಯಾಚಾರಿಯ 50 ವರ್ಷ ವಯಸ್ಸಿನ ತಾಯಿಗೆ ಗುಂಡು ಹೊಡೆದು ಗಾಯಗೊಳಿಸಿದ ಪ್ರಕರಣ ಈಶಾನ್ಯ ದಿಲ್ಲಿಯ ಭಜನಪುರದಲ್ಲಿ ಶನಿವಾರ ನಡೆದಿದ್ದು, ಅಪ್ರಾಪ್ತ ವಯಸ್ಸಿನ ಯುವತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಅಪ್ರಾಪ್ತ ವಯಸ್ಸಿನ ಯುವತಿ 2021ರಲ್ಲಿ, ಮಹಿಳೆಯ 25 ವರ್ಷ ವಯಸ್ಸಿನ ಮಗ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾಗಿ ಆರೋಪಿಸಿದ್ದಳು. ಆರೋಪಿ ಯುವಕ ಪ್ರಸ್ತುತ ಜೈಲಿನಲ್ಲಿದ್ದಾನೆ. ನಾಡಪಿಸ್ತೂಲಿನಿಂದ ಮಹಿಳೆಯ ಮೇಲೆ ಗುಂಡು ಹಾರಿಸಿದ್ದರಿಂದ ಗುಂಡೇಟು ತಗುಲಿರುವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಭಜನಪುರದ ಘೋಂಡಾ ಪ್ರದೇಶದಲ್ಲಿ ಗುಂಡು ಹಾರಿಸಿದ ಬಗ್ಗೆ ಪೊಲೀಸ್ ನಿಯಂತ್ರಣ ಕಚೇರಿಗೆ ಸಂಜೆ 5.30ರ ವೇಳೆಗೆ ಕರೆ ಬಂದಿತ್ತು. ಪೊಲೀಸರು ಸ್ಥಳಕ್ಕೆ ಧಾವಿಸಿದಾಗ, ಮಹಿಳೆಯ ಮೇಲೆ ಅಪ್ರಾಪ್ತ ವಯಸ್ಸಿನ ಪರಿಚಿತ ಯುವತಿ ಗುಂಡು ಹಾರಿಸಿದ್ದು ತಿಳಿದು ಬಂತು. ಗುಂಡೇಟು ತಗುಲಿದ ಮಹಿಳೆಯನ್ನು ಸ್ಥಳೀಯರು ಜಗ್ ಪ್ರವೇಶ್ ಚಂದ್ರ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಡಿಸಿಪಿ ಸಂಜಯ್ ಕುಮಾರ್ ಸೈನ್ ವಿವರ ನೀಡಿದ್ದಾರೆ.
ಮಹಿಳೆ ತಾನು ವಾಸವಿದ್ದ ಮನೆಯ ನೆಲಮಹಡಿಯಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದರು. ಯುವತಿ ಅಂಗಡಿಗೆ ಬಂದು ಗುಂಡು ಹೊಡೆದು ಪರಾರಿಯಾದಳು. ಯುವತಿಯನ್ನು ವಶಕ್ಕೆ ಪಡೆದು ಕೃತ್ಯಕ್ಕೆ ಬಳಸಿದ ನಾಡಪಿಸ್ತೂಲು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ | ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್: ಯುವ ಉದ್ಯಮಿ ಮೃತ್ಯು