72 ವರ್ಷ ಹಳೆಯ ಪ್ರಕರಣ ಕೊನೆಗೂ ಇತ್ಯರ್ಥ

ಕೊಲ್ಕತ್ತಾ: ದೇಶದ ಅತ್ಯಂತ ಹಳೆಯ ಬಾಕಿ ಪ್ರಕರಣ ಎನಿಸಿಕೊಂಡಿದ್ದ 72 ವರ್ಷ ಹಳೆಯ ಪ್ರಕರಣವನ್ನು ದೇಶದ ಅತ್ಯಂತ ಪ್ರಾಚೀನ ಹೈಕೋರ್ಟ್ ಎನಿಸಿದ ಕೊಲ್ಕತ್ತಾ ಹೈಕೋರ್ಟ್ ಕಳೆದ ವಾರ ಇತ್ಯರ್ಥಪಡಿಸಿದೆ. ವಿಚಿತ್ರವೆಂದರೆ 1951ರಲ್ಲಿ ಈ ದಾವೆ ಸಲ್ಲಿಸಿದ ಹತ್ತು ವರ್ಷಗಳ ಬಳಿಕ, ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಜನಿಸಿದ್ದರು!
ಈ ಹಿಂದೆ ಅಸ್ತಿತ್ವದಲ್ಲಿದ್ದ ಬೆಹ್ರ್ರಾಪುರ ಬ್ಯಾಂಕ್ ಲಿಮಿಟೆಡ್ ಸಮಾಪನಾ ಪ್ರಕ್ರಿಯೆ ಸಂಬಂಧದ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿತು. ದೇಶದ ಇನ್ನೂ ಐದು ಅತ್ಯಂತ ಹಳೆಯ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇದ್ದು, ಈ ಎಲ್ಲವೂ 1952ರಲ್ಲಿ ಸಲ್ಲಿಕೆಯಾದವುಗಳು.
ಉಳಿದ ಮೂರು ಪ್ರಕರಣಗಳಲ್ಲಿ ಎರಡು ಸಿವಿಲ್ ದಾವೆಗಳಾಗಿದ್ದು, ಬಂಗಾಳದ ಮಾಲ್ಡಾ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ. ಒಂದು ಬಾಕಿ ಪ್ರಕರಣ ಮದ್ರಾಸ್ ಹೈಕೋರ್ಟ್‍ನಲ್ಲಿದೆ. ಮಾಲ್ಡಾ ನ್ಯಾಯಾಲಯ ಈ ಪ್ರಕರಣಗಳ ವಿಚಾರಣೆಯನ್ನು ಮಾರ್ಚ್ ಹಾಗೂ ನವೆಂಬರ್‍ನಲ್ಲಿ ನಡೆಸಲು ದಿನಾಂಕ ನಿಗದಿಪಡಿಸಿವೆ.
ಜನವರಿ 9ರವರೆಗೂ ಭಾರತದ ನ್ಯಾಷನಲ್ ಜ್ಯುಡೀಶಿಯಲ್ ಗ್ರಿಡ್‍ನಲ್ಲಿ ಬೆಹ್ರ್ರಾಂಪುರ ಪ್ರಕರಣ, ದೇಶದ ಅತ್ಯಂತ ಹಳೆಯ ಪ್ರಕರಣ ಎಂದು ದಾಖಲಾಗಿತ್ತು. ನ್ಯಾಯಮೂರ್ತಿ ರವಿಕೃಷ್ಣನ್ ಕಾಪುಲ್ ಅವರು ವಿಲೇವಾರಿ ಆದೇಶಕ್ಕೆ ಕಳೆದ ವರ್ಷದ ಸೆಪ್ಟೆಂಬರ್ 19ರಂದು ಸಹಿ ಮಾಡಿದರೂ, ಅದನ್ನು ಮುಚ್ಚಿದ ಲಕೋಟೆಯಲ್ಲಿ ಟೈಪಿಂಗ್ ತಿದ್ದುಪಡಿಗಳ ಬಳಿಕ ವಿತರಿಸಲಾಗಿದೆ.
ಈ ಪ್ರಕರಣ 1948ರ ನವೆಂಬರ್ 19ರ ಮೂಲದ್ದು. ಹಲವು ವ್ಯಾಜ್ಯಗಳಿಗೆ ಗುರಿಯಾಗಿದ್ದ ಬೆಹ್ರ್ರಾಂಪುರ ಬ್ಯಾಂಕ್‍ನ ಸಮಾಪನಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅವಕಾಶ ಕೋರಿ ಈ ಅರ್ಜಿ ಸಲ್ಲಿಕೆಯಾಗಿತ್ತು. ಇದನ್ನು ಪ್ರಶ್ನಿಸಿ 1951ರ ಜನವರಿಯಲ್ಲಿ ದಾವೆ ಸಲ್ಲಿಸಲಾಗಿತ್ತು. ಇದು ಪ್ರಕರಣ ಸಂಖ್ಯೆ "71/1951" ಆಗಿ ದಾಖಲಾಗಿತ್ತು.
ಬ್ಯಾಂಕಿನ ಸಮಪನಾ ಪ್ರಕ್ರಿಯೆ ಪ್ರಶ್ನಿಸಿದ್ದ ಅರ್ಜಿ ಕಳೆದ ಸೆಪ್ಟೆಂಬರ್‍ನಲ್ಲಿ ಎರಡು ಬಾರಿ ವಿಚಾರಣೆಗೆ ಬಂದಿತ್ತು. ನ್ಯಾಯಮೂರ್ತಿ ಕಾಪುರ್ ಅವರು ನ್ಯಾಯಾಲಯದ ಸಮಾಪನಾದಾರರಿಂದ ಈ ಬಗ್ಗೆ ವರದಿ ಕೇಳಿದ್ದರು. ಈ ಪ್ರಕರಣ 2006ರ ಆಗಸ್ಟ್‍ನಲ್ಲೇ ಇತ್ಯರ್ಥವಾಗಿದ್ದು, ಇದು ದಾಖಲೆಗಳಲ್ಲಿ ಪರಿಷ್ಕರಣೆಗೊಳ್ಳದೇ ಬಾಕಿ ಪ್ರಕರಣಗಳ ಪಟ್ಟಿಯಲ್ಲಿ ಉಳಿದಿತ್ತು ಎಂದು ಸಹಾಯಕ ಸಮಾಪನಾದಾರರು ವರದಿ ನೀಡಿದ್ದರು.







