ಮಹಾರಾಷ್ಟ್ರದಲ್ಲಿ ನದಿಮಾಲಿನ್ಯ ಅತ್ಯಧಿಕ: ಪರಿಸರ ಮಂಡಳಿ ವರದಿ

ಪುಣೆ: ದಏಶದಲ್ಲಿ 279 ನದಿಗಳ 311 ಸ್ಥಳಗಳನ್ನು ಮಾಲಿನ್ಯಕಾರಕ ತಾಣಗಳಾಗಿ ಗುರುತಿಸಲಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಪ್ರಕಟಿಸಿದೆ. ಮಹಾರಾಷ್ಟ್ರ ನದಿಮಾಲಿನ್ಯದಲ್ಲಿ ಅಗ್ರಸ್ಥಾನಿಯಾಗಿದ್ದು, ರಾಜ್ಯದ 55 ನದಿ ದಂಡೆಗಳನ್ನು ಮಾಲಿನ್ಯಕಾರಕ ತಾಣಗಳೆಂದು ಪರಿಗಣಿಸಲಾಗಿದೆ.
ಸಿಪಿಸಿಬಿ ಪ್ರಕಾರ, ಬಿಹಾರ, ಛತ್ತೀಸ್ಗಢ, ಹರ್ಯಾಣ, ಹಿಮಾಚಲ ಪ್ರದೇಶ, ಜಾರ್ಖಂಡ್ ಸೇರಿದಂತೆ ದೇಶದ 13 ರಾಜ್ಯಗಳಲ್ಲಿ ನದಿ ಮಾಲಿನ್ಯ ತಾಣಗಳು ಹೆಚ್ಚಿದ್ದು, ಈ ಪೈಕಿ ಮಹಾರಾಷ್ಟ್ರ ಕೂಡಾ ಸೇರಿದೆ. ನಾಲ್ಕು ವರ್ಷದ ಹಿಂದೆ ಅಂದರೆ 2018ರಲ್ಲಿ 53 ನದಿ ದಂಡೆಗಳನ್ನು ಮಾಲಿನ್ಯಕಾರಕ ಸ್ಥಳಗಳೆಂದು ಗುರುತಿಸಲಾಗಿತ್ತು.
ಈ ಎಲ್ಲ ಮಾಲಿನ್ಯಕಾರಕ ಪ್ರದೇಶಗಳಲ್ಲಿ ನೈಸರ್ಗಿಕ ಹರಿವನ್ನು ಕಡ್ಡಾಯವಾಗಿ ಖಾತರಿಪಡಿಸುವಂತೆ ಎಲ್ಲ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ಸೂಚಿಸಲಾಗಿದೆ. ನೈಸರ್ಗಿಕ ಹರಿವು ಎಂದರೆ ನದಿಯನ್ನು ಸ್ವಚ್ಛವಾಗಿ ನಿರ್ವಹಿಸಲು ಬೇಕಾದ ಕನಿಷ್ಠ ನೀರು ಹರಿವಿನ ಪ್ರಮಾಣವಾಗಿದೆ.
ಈ ಮಲಿನ ಪ್ರದೇಶಗಳಲ್ಲಿ ನದಿ ನೀರಿನಲ್ಲಿ ಅಧಿಕ ಮಟ್ಟದ ಜೀವ ರಾಸಾಯನಿಕ ಆಮ್ಲಜನಕ ಬೇಡಿಕೆ ಮಟ್ಟ (ಬಿಓಡಿ) ಕಂಡುಬಂದಿದೆ. ಮಲಿನ ಪ್ರದೇಶಗಳಲ್ಲಿ ಈ ನದಿ ನೀರು ಸ್ನಾನಕ್ಕೆ ನಿಗದಿಪಡಿಸಿದ ಬಿಓಡಿ ಮಾನದಂಡವನ್ನೂ ತಲುಪಿಲ್ಲ. ಈ ಪ್ರದೇಶಗಳಲ್ಲಿ ಬಿಓಡಿ ಮಟ್ಟ ಪ್ರತಿ ಲೀಟರ್ಗೆ 3 ಮಿಲಿಗ್ರಾಂಗಿಂತ ಅಧಿಕ ಇದೆ ಎಂದು ಸ್ಪಷ್ಟಪಡಿಸಿದೆ.
ಮಹಾರಾಷ್ಟ್ರದಲ್ಲಿ 56 ನದಿಗಳ ನೀರಿನ ಗುಣಮಟ್ಟ ಪರೀಕ್ಷಿಸಲಾಗಿತ್ತು. ಈ ಪೈಕಿ 55 ನದಿಗಳ 147 ಕಡೆಗಳಲ್ಲಿ ಬಿಓಡಿ ಮಟ್ಟ ನಿಗದಿತ ಪ್ರಮಾಣಕ್ಕಿಂತ ಅಧಿಕ ಇದೆ.







