ಆರೆಸ್ಸೆಸ್ ಜೊತೆ ಸಭೆ ನಡೆಸಿದ ಜಮಾಅತೆ ಇಸ್ಲಾಮಿ ಸಂಘಟನೆಯ ಮುಖಂಡರು: ವ್ಯಾಪಕ ಟೀಕೆ
ಸಭೆಯ ಮಾಹಿತಿಗಳನ್ನು ಬಹಿರಂಗಪಡಿಸಲು ಪಿಣರಾಯಿ ವಿಜಯನ್ ಒತ್ತಾಯ

ಹೊಸದಿಲ್ಲಿ: ಜನವರಿ 14ರಂದು ಬಲಪಂಥೀಯ ಆರೆಸ್ಸೆಸ್ ಸಂಘಟನೆಯ ಮುಖ್ಯಸ್ಥರೊಂದಿಗೆ ಮುಸ್ಲಿಂ ಸಂಘಟನೆ ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆಯ ಉನ್ನತ ನಾಯಕರು ಮಾತುಕತೆ ನಡೆಸಿರುವ ಕುರಿತು ಆಕ್ರೋಶ ವ್ಯಕ್ತವಾಗಿದೆ. ಈ ನಡುವೆ, ಈ ಸಭೆಯಲ್ಲಿನ ಮಾಹಿತಿಗಳನ್ನು ಬಹಿರಂಗಪಡಿಸುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಒತ್ತಾಯಿಸಿದ್ದಾರೆ.
ಫೇಸ್‌ಬುಕ್ ಪೋಸ್ಟ್‌ನಲ್ಲಿ ಈ ಸಭೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದ ಪಿಣರಾಯಿ ವಿಜಯನ್, "ಸಂಘಪರಿವಾರದೊಂದಿಗಿನ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಮಾತುಕತೆಯ ಅಗತ್ಯವಿದೆ ಎಂಬ ಜಮಾಅತೆ ಇಸ್ಲಾಮಿ ಸಂಘಟನೆಯ ವಾದವು ಅದರ ಬೂಟಾಟಿಕೆಯನ್ನು ಬಹಿರಂಗಪಡಿಸುತ್ತದೆ" ಎಂದು ಹೇಳಿದರು.
“ದೇಶದ ಆಡಳಿತವನ್ನು ನಿಯಂತ್ರಿಸುವ ಆರೆಸ್ಸೆಸ್ ನ ಮುಂದೆ ಭಾರತೀಯ ಅಲ್ಪಸಂಖ್ಯಾತರು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳನ್ನು ಪ್ರಸ್ತುತಪಡಿಸಲು ಚರ್ಚೆ ನಡೆಸಲಾಗಿದೆ ಎಂದು ವಾದಿಸುವುದು ವಿಚಿತ್ರವಾಗಿದೆ… ಎಲ್ಲ ಅಲ್ಪಸಂಖ್ಯಾತರ ಪರವಾಗಿ ಮಾತನಾಡುವ ಹಕ್ಕನ್ನು ಜಮಾಅತ್-ಎ-ಇಸ್ಲಾಮಿಗೆ ನೀಡಿದವರು ಯಾರು? ಚರ್ಚೆಯ ವಿಷಯ ಏನೇ ಇರಲಿ, ಅದು ಅಲ್ಪಸಂಖ್ಯಾತರಿಗೆ ಸಹಾಯ ಮಾಡಲಂತೂ ಅಲ್ಲ, ಅಲ್ಪಸಂಖ್ಯಾತರ ರಕ್ಷಣೆ ಎಂದರೆ ಜಾತ್ಯತೀತತೆಯ ರಕ್ಷಣೆ" ಎಂದು ಹೇಳಿದ್ದಾರೆ.
ಸಮಸ್ತ ಕೇರಳ ಜಮಿಯ್ಯತುಲ್ ಉಲಮಾದ ಮುಶಾವರ ಸದಸ್ಯ ಉಮರ್ ಫೈಝಿ, "ಜಮಾಅತೆ ಇಸ್ಲಾಮಿ ಹಿಂದ್ ಆರೆಸ್ಸೆಸ್ ಗೆ ಭಯಪಡುತ್ತಿದೆ" ಎಂದು ಹೇಳಿದ್ದಾಗಿ thehindu.com ವರದಿ ಮಾಡಿದೆ. ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ನೇತೃತ್ವದ ಕೇರಳ ಮುಸ್ಲಿಂ ಜಮಾಅತ್, "ಆರೆಸ್ಸೆಸ್ ಜೊತೆ ಸೌಹಾರ್ದ ಚರ್ಚೆ ನಡೆಸುವ ಮೂಲಕ ಜಮಾಅತೆ ಇಸ್ಲಾಮಿ ಹಿಂದ್ ಐತಿಹಾಸಿಕ ಪ್ರಮಾದ ಎಸಗಿದೆ" ಎಂದು ಹೇಳಿದ್ದಾಗಿ ವರದಿ ಉಲ್ಲೇಖಿಸಿದೆ.
ಮುಸ್ಲಿಂ ಜಮಾತ್ ಪ್ರಕಾರ, "ಆರೆಸ್ಸೆಸ್ ಭಾರತ ಮತ್ತು ಭಾರತೀಯ ಜಾತ್ಯತೀತ ಮೌಲ್ಯಗಳ ಶತ್ರುವಾಗಿದೆ ಮತ್ತು ಅಂತಹ ಸಂಘಟನೆಯೊಂದಿಗಿನ ಯಾವುದೇ ಮಾತುಕತೆಯು ಶತ್ರುವನ್ನು ಅಪ್ಪಿಕೊಂಡಂತೆ ಆಗುತ್ತದೆ. ಜಮಾಅತೆ ಇಸ್ಲಾಮಿ ಸಂಘಟನೆಯು ಆರೆಸ್ಸೆಸ್ ಗೆ ಬಿಳಿ ಬಣ್ಣ ಬಳಿಯಲು ಮುಂದಾಗಿದೆ" ಎಂದು ತಿಳಿಸಿದೆ.
ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮುಖಂಡರಾದ ಪಿ.ಕೆ. ಕುನ್ಹಾಲಿಕುಟ್ಟಿ ಮತ್ತು ಎಂ.ಕೆ.ಮುನೀರ್ thehindu.comನೊಂದಿಗೆ ಮಾತನಾಡಿ, "ಆರೆಸ್ಸೆಸ್ ನೊಂದಿಗೆ ಸಂವಾದಕ್ಕೆ ತೆರಳುವಂತಹ ವಿಶೇಷ ಪರಿಸ್ಥಿತಿ ಏನೂ ಇಲ್ಲಿ ಉಂಟಾಗಿಲ್ಲ" ಎಂದು ಹೇಳಿದ್ದಾರೆ. ಕೇರಳ ನದ್ವತುಲ್ ಮುಜಾಹಿದೀನ್ ರಾಜ್ಯಾಧ್ಯಕ್ಷ ಟಿ.ಪಿ.ಅಬ್ದುಲ್ಲಕೋಯ ಮದನಿ ಜಮಾಅತೆ ಇಸ್ಲಾಮಿ ಮತ್ತು ಆರೆಸ್ಸೆಸ್ ನಡುವೆ ನಡೆದಿರುವುದು ಏಕಪಕ್ಷೀಯ ಮಾತುಕತೆಯಾಗಿದ್ದು, ಜಮಾಅತೆ ಇಸ್ಲಾಮಿಗೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ರಕ್ಷಣೆ ಇದೆ ಎಂಬ ಅನುಮಾನ ಈ ಸಂದರ್ಭದಲ್ಲಿ ಮೂಡುವುದು ಸಹಜ" ಎಂದಿದ್ದಾರೆ.
ಸುನ್ನಿ ಯುವಜನ ಸಂಘದ ಮುಖಂಡ ಅಬ್ದುಸ್ಸಮದ್ ಪೂಕೋಟೂರ್ ಮಾತನಾಡಿ, "ಆರೆಸ್ಸೆಸ್ ನೊಂದಿಗೆ ಸಂವಾದ ನಡೆಸುವ ಜಮಾತೆ ಇಸ್ಲಾಮಿಯ ನಿಲುವನ್ನು ಒಪ್ಪಲು ಸಾಧ್ಯವೇ ಇಲ್ಲ" ಎಂದಿದ್ದಾಗಿ ವರದಿ ಉಲ್ಲೇಖಿಸಿದೆ.
ವಿವಾದಾತ್ಮಕ ಮಾತುಕತೆ ನಡೆದ ಸುಮಾರು ಒಂದು ತಿಂಗಳ ನಂತರ ಪ್ರತಿಕ್ರಿಯಿಸಿದ್ದ ಜಮಾಅತೆ ಇಸ್ಲಾಮಿ ಹಿಂದ್ ಪ್ರಧಾನ ಕಾರ್ಯದರ್ಶಿ ಟಿ. ಆರಿಫ್ ಅಲಿ, "ಆರೆಸ್ಸೆಸ್ ಸರಕಾರ ನಿಯಂತ್ರಿಸುತ್ತಿರುವುರಿಂದ ನಾವು ಅವರೊಂದಿಗೆ ಚರ್ಚೆ ನಡೆಸಿದ್ದೆವು. ಚರ್ಚೆಗಳು ದೇಶದ ಹಲವು ಭಾಗಗಳಲ್ಲಿ ಗುಂಪು ಹತ್ಯೆ ಮತ್ತು ಅಲ್ಪಸಂಖ್ಯಾತರ ಮೇಲಿನ ದಾಳಿಯ ಮೇಲೆ ಕೇಂದ್ರೀಕೃತವಾಗಿತ್ತು" ಎಂದು ಹೇಳಿದ್ದರು.
"ಸಂವಾದದಲ್ಲಿ ಪಾಲ್ಗೊಳ್ಳುವ ನಿರ್ಧಾರವನ್ನು ನಮ್ಮ ರಾಷ್ಟ್ರೀಯ ನಾಯಕತ್ವವು ಕೈಗೊಂಡಿತ್ತು. ಜಮೀಯತುಲ್ ಉಲಮಾದ ಎರಡು ಬಣಗಳು ಚರ್ಚೆಯಲ್ಲಿ ಭಾಗವಹಿಸಿದ್ದವು. ಅವರು ಸಮುದಾಯದ ದೊಡ್ಡ ವಿಭಾಗವನ್ನು ಪ್ರತಿನಿಧಿಸುತ್ತಾರೆ. ಅಹ್ಲೇ ಹದೀಸ್, ಶಿಯಾ ಮತ್ತು ಅಜ್ಮೀರ್ ಚಿಶ್ತಿಯ ಪ್ರತಿನಿಧಿಗಳು ಮತ್ತು ಮುಸ್ಲಿಂ ವಿದ್ವಾಂಸರೂ ಭಾಗವಹಿಸಿದ್ದರು" ಎಂದು ಅಲಿ ಹೇಳಿದ್ದರು.







