ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಗೆ ಚುನಾವಣೆ ಇಲ್ಲ, ನಾಮನಿರ್ದೇಶನಕ್ಕೆ ಮಲ್ಲಿಕಾರ್ಜುನ ಖರ್ಗೆಗೆ ಅಧಿಕಾರ
ಹೊಸದಿಲ್ಲಿ: ಪ್ರತಿಪಕ್ಷ ಕಾಂಗ್ರೆಸ್ನ ಪರ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಅದರ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಅವರು ನಾಮನಿರ್ದೇಶನ ಮಾಡುತ್ತಾರೆ ಹಾಗೂ ಚುನಾವಣೆಯ ಮೂಲಕ ಸದಸ್ಯರನ್ನು ಆಯ್ಕೆ ಮಾಡಲಾಗುವುದಿಲ್ಲ ಎಂದು ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
ಎಲ್ಲಾ ಸಿಡಬ್ಲ್ಯೂಸಿ (ಕಾಂಗ್ರೆಸ್ ಕಾರ್ಯಕಾರಿ ಸಮಿತಿ) ಸದಸ್ಯರನ್ನು ನಾಮನಿರ್ದೇಶನ ಮಾಡಲು ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಧಿಕಾರ ನೀಡಲು ಕಾಂಗ್ರೆಸ್ ಉಸ್ತುವಾರಿ ಸಮಿತಿಯು ಸರ್ವಾನುಮತದಿಂದ ನಿರ್ಧರಿಸಿದೆ ಎಂದು ಸಂವಹನಗಳ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಶುಕ್ರವಾರ ತಿಳಿಸಿದ್ದಾರೆ.
ಛತ್ತೀಸ್ಗಢದ ರಾಯ್ಪುರದಲ್ಲಿ ನಡೆದ ಕಾಂಗ್ರೆಸ್ನ 85ನೇ ಸರ್ವಸದಸ್ಯ ಅಧಿವೇಶನದ ಭಾಗವಾಗಿ ನಡೆದ ಸಭೆಯಲ್ಲಿ ಅಜಯ್ ಮಾಕನ್, ಅಭಿಷೇಕ್ ಮನು ಸಿಂಘ್ವಿ ಹಾಗೂ ದಿಗ್ವಿಜಯ ಸಿಂಗ್ ಅವರಂತಹ ನಾಯಕರು ಚುನಾವಣೆಗೆ ಒಲವು ತೋರಿದ್ದರಿಂದ ಈ ನಿರ್ಧಾರವು ಸರ್ವಾನುಮತದಿಂದ ಆಗಿಲ್ಲ ಎಂದು ಮೂಲಗಳು ತಿಳಿಸಿವೆ.
2024 ರ ರಾಷ್ಟ್ರೀಯ ಚುನಾವಣೆಯ ನಂತರವೂ ಚುನಾವಣೆಗಳನ್ನು ನಡೆಸಬಹುದು ಎಂದು ಸಿಂಘ್ವಿ ಸಲಹೆ ನೀಡಿದರು.
ಹೊಸ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲು ಹಾಗೂ ನಿರ್ಧಾರಗಳ ಮೇಲೆ ಯಾವುದೇ ರೀತಿಯಲ್ಲಿ ಪ್ರಭಾವ ಬೀರದಿರಲು ಬಯಸಿರುವ ಕಾಂಗ್ರೆಸ್ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಪುತ್ರ ರಾಹುಲ್ ಹಾಗೂ ಪುತ್ರಿ ಪ್ರಿಯಾಂಕಾ ಅವರು ಶುಕ್ರವಾರ ನಡೆದ ಈ ಪ್ರಮುಖ ಸಭೆಯಿಂದ ಹೊರಗುಳಿದರು.