ಇಂಟರ್ನೆಟ್ ಸೇವೆ ಸ್ಥಗಿತ ಆದೇಶ: ಸತತ ಐದನೇ ವರ್ಷವೂ ಭಾರತ ಅಗ್ರ ಸ್ಥಾನದಲ್ಲಿ !

ಹೊಸದಿಲ್ಲಿ: ಜಗತ್ತಿನಲ್ಲಿ 2022ರಲ್ಲಿ ಗರಿಷ್ಠ ಸಂಖ್ಯೆಯ ಅಂತರ್ಜಾಲ ಸ್ಥಗಿತ ಆದೇಶಗಳನ್ನು ಭಾರತದಲ್ಲಿ ಹೇರಲಾಗಿತ್ತು ಇಂಟರ್ನೆಟ್ ಅಡ್ವೊಕೆಸಿ ವಾಚ್‌ಡಾಗ್ ಆಕ್ಸೆಸ್ ನೌ ತಿಳಿಸಿದೆ. ಸತತ ಐದು ವರ್ಷಗಳಲ್ಲಿ ಭಾರತ ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ.
ನ್ಯೂಯಾರ್ಕ್ ಮೂಲದ Access Now ಅಂಕಿಅಂಶಗಳ ಪ್ರಕಾರ ಜಗತ್ತಿನಾದ್ಯಂತ ಕಳೆದ ವರ್ಷ 187 ಅಂತರ್ಜಾಲ ಸ್ಥಗಿತ ಆದೇಶಗಳನ್ನು ನೀಡಲಾಗಿದ್ದರೆ ಅವುಗಳ ಪೈಕಿ 84 ಭಾರತದಲ್ಲಿ ಹಾಗೂ ಈ 84 ರಲ್ಲಿ 49 ಅಂತರ್ಜಾಲ ಸೇವೆ ಸ್ಥಗಿತ ಆದೇಶ ಕಾಶ್ಮೀರದಲ್ಲಿ ಜಾರಿಯಾಗಿದ್ದವು ಎಂದು ವರದಿಯಾಗಿದೆ.
ರಾಜಕೀಯ ಅಸ್ಥಿರತೆ ಮತ್ತು ಹಿಂಸೆಯ ಕಾರಣ ಕಾಶ್ಮೀರದಲ್ಲಿ 49 ಬಾರಿ ಅಂತರ್ಜಾಲ ಸೇವೆ ಸ್ಥಗಿತಗೊಳಿಸಲಾಗಿತ್ತು ಇದರಲ್ಲಿ ಜನವರಿ ಹಾಗೂ ಫೆಬ್ರವರಿ 2022 ರಲ್ಲಿ ಸತತವಾಗಿ 16 ಬಾರಿಯ ಮೂರು ದಿನಗಳ ಕಾಲದ ದಿನಪೂರ್ತಿ ಕರ್ಫ್ಯೂ ಮಾದರಿಯಲ್ಲಿ ಅಂತರ್ಜಾಲ ಸೇವೆ ಸ್ಥಗಿತಗೊಳಿಸಲಾಗಿತ್ತು ಎಂದ ವರದಿಯಲ್ಲಿ ಹೇಳಲಾಗಿದೆ.
ಆದರೆ 2017ರ ನಂತರ ಮೊದಲ ಬಾರಿಗೆ ವರ್ಷವೊಂದರಲ್ಲಿ 100ಕ್ಕಿಂತ ಕಡಿಮೆ ಅಂತರ್ಜಾಲ ಸೇವೆ ಸ್ಥಗಿತ ವಿದ್ಯಮಾನಗಳು ಭಾರತದಲ್ಲಿ ದಾಖಲಾಗಿವೆ.
ಉಕ್ರೇನ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು ಇಲ್ಲಿ 22 ಬಾರಿ ಅಂತರ್ಜಾಲ ಸೇವೆ ಸ್ಥಗಿತ ಆದೇಶ ಹೊರಡಿಸಲಾಗಿತ್ತು. ಮೂರನೇ ಸ್ಥಾನದಲ್ಲಿ 18 ಬಾರಿ ಅಂತರ್ಜಾಲ ಸೇವೆ ಸ್ಥಗಿತಗೊಳಿಸಿದ ಇರಾನ್ ಇದೆ.
ಕಳೆದ ವರ್ಷದಲ್ಲಿ ಇರಾನ್‌ನಲ್ಲಿ ಹಿಜಾಬ್ ನಿಯಮ ವಿರೋಧಿಸಿ ಸರ್ಕಾರದ ವಿರುದ್ಧ ಪ್ರತಿಭಟನೆಗಳು ವ್ಯಾಪಕವಾಗಿ ನಡೆದಾಗ ಅಂತರ್ಜಾಲ ಸೇವೆ ಸ್ಥಗಿತಗೊಳಿಸಲಾಗಿತ್ತು.
ಇದನ್ನೂ ಓದಿ: ಗುರ್ಮೀತ್ ಸಿಂಗ್ ಕುಖ್ಯಾತ ಅಪರಾಧಿ ಅಲ್ಲ: ಡೇರಾ ಸಚ್ಚಾ ಮುಖ್ಯಸ್ಥನನ್ನು ಸಮರ್ಥಿಸಿಕೊಂಡ ಹರ್ಯಾಣ ಬಿಜೆಪಿ ಸರ್ಕಾರ







