ವಿಧಾನಸಭಾ ಚುನಾವಣೆ: ತ್ರಿಪುರಾ,ನಾಗಾಲ್ಯಾಂಡ್ ನಲ್ಲಿ ಬಿಜೆಪಿ, ಮಿತ್ರಪಕ್ಷಗಳಿಗೆ ಆರಂಭಿಕ ಮುನ್ನಡೆ
ಹೊಸದಿಲ್ಲಿ: ವಿಧಾನಸಭಾ ಚುನಾವಣೆ ಮತ ಎಣಿಕೆ ಗುರುವಾರ ಬೆಳಗ್ಗೆ ಆರಂಭವಾದ ಕೆಲವೇ ಕ್ಷಣಗಳಲ್ಲಿ ತ್ರಿಪುರಾ ಹಾಗೂ ನಾಗಾಲ್ಯಾಂಡ್ನಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಆರಂಭಿಕ ಮುನ್ನಡೆ ಸಾಧಿಸಿವೆ.
ಏತನ್ಮಧ್ಯೆ, ನಿರೀಕ್ಷೆಯಂತೆ ಮೇಘಾಲಯದಲ್ಲಿ ತೀವ್ರ ಪೈಪೋಟಿ ಕಂಡುಬಂದಿದೆ.
ಮೇಘಾಲಯದ ಚುನಾವಣಾ ಫಲಿತಾಂಶಗಳು ಎಕ್ಸಿಟ್ ಪೋಲ್ ಪ್ರಕಾರ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗುವ ಸಾಧ್ಯತೆ ಕಾಣುತ್ತಿಲ್ಲ.
ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್ಪಿಪಿ) 60 ಸ್ಥಾನಗಳಲ್ಲಿ ಸುಮಾರು 20 ಸ್ಥಾನಗಳಲ್ಲಿ ಮುಂದಿದೆ, ಆರಂಭಿಕ ಟ್ರೆಂಡ್ ಪ್ರಕಾರ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮೇಘಾಲಯದಲ್ಲಿ ಬಹುಮತಕ್ಕೆ 31 ಸ್ಥಾನ ಗೆಲ್ಲಬೇಕಾಗಿದೆ. ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷಗಳು ಕ್ರಮವಾಗಿ 10 ಹಾಗೂ 8 ಸ್ಥಾನಗಳಲ್ಲಿ ಮುನ್ನಡೆಯಲ್ಲಿವೆ. ಕಾಂಗ್ರೆಸ್ 6 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.
ತ್ರಿಪುರಾದಲ್ಲಿ ಪ್ರಸ್ತುತ ಬಿಜೆಪಿ ಮಿತ್ರಪಕ್ಷಗಳು 31ರಲ್ಲಿ ಮುನ್ನಡೆ ಸಾಧಿಸಿದೆ. ರಾಜ ಕುಟುಂಬದ ಪ್ರದ್ಯೋತ್ ಮಾಣಿಕ್ಯ ದೆಬ್ಬರ್ಮಾ ನೇತೃತ್ವದ ತಿಪ್ರಾ ಮೋಥಾ ಪಕ್ಷವು 12 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಗ್ರೇಟರ್ ಟಿಪ್ರಾಲ್ಯಾಂಡ್ಗಾಗಿ ಒತ್ತಾಯಿಸುತ್ತಿರುವ ಬುಡಕಟ್ಟು ಪ್ರಾಬಲ್ಯದ ಪಕ್ಷವನ್ನು ಈ ಚುನಾವಣೆಗಳಲ್ಲಿ 'ಎಕ್ಸ್-ಫ್ಯಾಕ್ಟರ್' ಎಂದು ನೋಡಲಾಗುತ್ತಿದೆ.
ಸದ್ಯ ಕಾಂಗ್ರೆಸ್-ಸಿಪಿಎಂ ಮೈತ್ರಿಕೂಟ 16 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಬಿಜೆಪಿ ನೇತೃತ್ವದ ಸಮ್ಮಿಶ್ರ ಸರಕಾರವು ನಾಗಾಲ್ಯಾಂಡ್ನಲ್ಲಿ ಭಾರಿ ಗೆಲುವಿಗೆ ಸಿದ್ಧವಾಗಿದೆ, ಫೆಬ್ರವರಿ 27 ರಂದು ನಡೆದ ವಿಧಾನಸಭಾ ಚುನಾವಣೆಯ ಮತಗಳ ಎಣಿಕೆ ಆರಂಭವಾಗುತ್ತಿದ್ದಂತೆ ಆರಂಭಿಕ ಟ್ರೆಂಡ್ ಪ್ರಕಾರ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷವಾದ ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ (ಎನ್ಡಿಪಿಪಿ) 60 ಸ್ಥಾನಗಳಲ್ಲಿ 42 ರಲ್ಲಿ ಮುಂದಿದೆ, ಅಲ್ಲಿ ಬಹುಮತಕ್ಕೆ 31 ಸ್ಥಾನ ಗೆಲ್ಲಬೇಕಾಗಿದೆ.
ಮೇಘಾಲಯ ಹಾಗೂ ನಾಗಾಲ್ಯಾಂಡ್ನಲ್ಲಿ ತಲಾ 60 ಸ್ಥಾನಗಳಿಗೆ ಒಟ್ಟು 352 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಏತನ್ಮಧ್ಯೆ, ತ್ರಿಪುರಾದ ಬಹುಕೋನ ಸ್ಪರ್ಧೆಯಲ್ಲಿ 60 ಸ್ಥಾನಗಳನ್ನು ತುಂಬಲು 259 ಅಭ್ಯರ್ಥಿಗಳು ಕಣದಲ್ಲಿದ್ದಾರೆ.