ಅದಾನಿ ಗ್ರೂಪ್ ಔದ್ಯಮಿಕ ಪ್ರಗತಿ ಬಗ್ಗೆ ಎಲ್ಐಸಿಗೆ ವಿಶ್ವಾಸ ಭಾರತೀಯ ಜೀವವಿಮಾ ನಿಗಮ ಚೇರ್ಮನ್ ಎಂ.ಆರ್.ಕುಮಾರ್
ಹಿಂಡನ್ಬರ್ಗ್ ವಿವಾದ
ಹೊಸದಿಲ್ಲಿ,ಮಾ.25 : ಅದಾನಿ -ಹಿಂಡನ್ಬರ್ಗ್ ವಿವಾದ ಹಿನ್ನೆಲೆಯಲ್ಲಿ ತನ್ನ ತಂಡವು ಆದಾನಿ ಸಮೂಹಸಂಸ್ಥೆಯ ಉನ್ನತ ಆಡಳಿತವರ್ಗವನ್ನು ಭೇಟಿಯಾಗಿರುವುದಾಗಿ ಭಾರತೀಯ ಜೀವವಿಮಾ ನಿಗಮ (LIC)ದ ಅಧ್ಯಕ್ಷ ಎಂ.ಆರ್.ಕುಮಾರ್ ರವಿವಾರ ತಿಳಿಸಿದ್ದಾರೆ.
ಬಂದರಿನಿಂದ ಹಿಡಿದು ವಿದ್ಯುತ್ ಕ್ಷೇತ್ರದವರೆಗೆ ವಿವಿಧ ಉದ್ಯಮಗಳನ್ನು ನಿರ್ವಹಿಸುತ್ತಿರುವ ಅದಾನಿ ಗ್ರೂಪ್ನ ಔದ್ಯಮಿಕ ಪ್ರಗತಿಯ ಬಗ್ಗೆ ತನಗೆ ಹೆಚ್ಚಿನ ಆತ್ಮವಿಶ್ವಾಸ ಮೂಡಿರುವುದಾಗಿ ಕುಮಾರ್ ಅವರು ಸಂದರ್ಶನದಲ್ಲಿ ತಿಳಿಸಿದ್ದಾರೆ.
ಬ್ಯುಸಿನೆಸ್ ಟುಡೇ ಟಿವಿ ವಾಹಿನಿಯ ಆಡಳಿತ ನಿರ್ದೇಶಕ ಸಿದ್ಧಾರ್ಥ ಝಾರಾಬಿ ನೀಡಿದ ವಿಶೇಷ ಸಂದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂಡೆನ್ಬರ್ಗ್ ವಿವಾದಕ್ಕೆ ಸಂಬಂಧಿಸಿದ ವಿಷಯದ ಬಗ್ಗೆ ಉತ್ತಮ ತಿಳುವಳಿಕೆಯನ್ನು ಪಡೆಯಲು ಎಲ್ಐಸಿ ಆದಾನಿ ಗ್ರೂಪ್ನ ಆಡಳಿತವರ್ಗವನ್ನು ಭೇಟಿಯಾಗಲಿದೆಯೆಂದು ತಿಳಿಸಿದರು..
ಅದಾನಿ ಉದ್ಯಮ ಸಮೂಹವು ಶೇರುಮೌಲ್ಯದಲ್ಲಿ ವಂಚನೆಯೆಸಗಿದೆ ಹಾಗೂ ಸಾಗರೋತ್ತರ ದೇಶಗಳಲ್ಲಿ ಬೇನಾಮಿ ಕಂಪೆನಿಗಳನ್ನು ನಡೆಸುತ್ತಿದೆ, ಕಾರ್ಪೊರೇಟ್ಆಡಳಿತದ ನಿಯಮಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅಮೆರಿಕದ ಮೂಲದ ಶೇರು ವಿಕ್ರಯದಾರ ಸಂಸ್ಥೆ ಹಿಂಡನ್ಬರ್ಗ್ ರಿಸಚ್ ಆಪಾದಿಸಿದ ಬಳಿಕ ಆದಾನಿ ಗ್ರೂಪ್ನ ಬಹುತೇಕ ಕಂಪೆನಿಗಳ ಶೇರುಗಳು ಒಂದೇ ಸಮನೆ ಕುಸಿಯತೊಡಗಿವೆ.
2022ರ ಡಿಸೆಂಬರ್ವರೆಗೆ ಅದಾನಿ ಗ್ರೂಪ್ ಗೆ ಸೇರಿದ 10 ಕಂಪೆನಿಗಳಲ್ಲಿ ಭಾರತೀಯ ಜೀವವಿಮಾ ನಿಗಮವು ಹೂಡಿಕೆ ಮಾಡಿದೆ. ಅದಾನಿ ಪೋರ್ಟ್ಸ್ ನಲ್ಲಿ (Adani Ports) ಎಲ್ಐಸಿ 9.14 ಶೇರುಗಳನ್ನು ಹೊಂದಿದ್ದರೆ, ಅದಾನಿ ಟೋಟಲ್ ಗ್ಯಾಸ್ ನಲ್ಲಿ(Adani Total Gas) ಶೇ.5.96, ಅದಾನಿ ಎಂಟರ್ಪ್ರೈಸಸ್ ನಲ್ಲಿ(Adani Enterprises) 4.23 ಶೇಕಡ, ಅದಾನಿ ಟ್ರಾನ್ಸ್ಮಿಶನ್ ನಲ್ಲಿ (Adani Transmission) 3.65 ಶೇಕಡ ಹಾಗೂ ಅದಾನಿ ಗ್ರೀನ್ ಎನರ್ಜಿಯಲ್ಲಿ (Adani Green Energy) 1.28 ಶೇಕಡ ಶೇರುಗಳನ್ನು ಅದು ಪಡೆದಿದೆ.
ಅದಾನಿ ಉದ್ಯಮ ಸಮೂಹದ ಕಂಪೆನಿಗಳ ಶೇರುಗಳ ಮೇಲೆ ಎಲ್ಐಸಿ ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್ ಅತಿಯಾಗಿ ಹೂಡಿಕೆ ಮಾಡಿದೆಯೆಂದು ಆಪಾದಿಸಿ ಪ್ರತಿಪಕ್ಷಗಳು ಸಂಸತ್ನ ಬಜೆಟ್ ಅಧಿವೇಶನದಲ್ಲಿ ಆಪಾದಿಸಿದ್ದವು. ಅದಾನಿ ಸಮೂಹದ ಕಂಪೆನಿಗಳಲ್ಲಿ ಎಲ್ಐಸಿ ಹೊಂದಿದ್ದ ಶೇರುಗಳ ಒಟ್ಟು ಮೌಲ್ಯವು ಈ ವರ್ಷದ ಫೆಬ್ರವರಿ 24ರ ವೇಳೆಗೆ 29,893.13 ಕೋಟಿ ರೂ.ಗೆ ಇಳಿದಿತ್ತು. ಎಲ್ಐಸಿ ಈ ಶೇರುಗಳನ್ನು 30.127 ಕೋಟಿ ರೂ.ಗೆ ಖರೀದಿಸಿತ್ತು.
ಇದನ್ನು ಓದಿ: ‘ಆಘಾತಕಾರಿ,ಪಿತೃಪ್ರಭುತ್ವದ ಪಕ್ಷಪಾತ’: ಕೋರ್ಟ್ ತೀರ್ಪಿಗೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಟೀಕೆ