ಮಗನ ಜತೆ ಮುನಿಸು: 1.5 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಗಳನ್ನು ರಾಜ್ಯಪಾಲರಿಗೆ ಉಡುಗೊರೆಯಾಗಿ ನೀಡಿದ ತಂದೆ!

ಮುಜಾಫರ್‌ನಗರ: ಮಗ ಹಾಗೂ ಸೊಸೆಯ ಮೇಲೆ ಮುನಿಸಿನಿಂದಾಗಿ ವ್ಯಕ್ತಿಯೊಬ್ಬರು 1.5 ಕೋಟಿ ರೂಪಾಯಿ ಮೌಲ್ಯದ ತಮ್ಮ ಸ್ಥಿರಾಸ್ತಿಗಳನ್ನು ರಾಜ್ಯಪಾಲರಿಗೆ ಉಡುಗೊರೆಯಾಗಿ ನೀಡಿರುವ ಸ್ವಾರಸ್ಯಕರ ಪ್ರಕರಣ ವರದಿಯಾಗಿದೆ. ತನ್ನನ್ನು ಮಗ ಹಾಗೂ ಸೊಸೆ ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ; ಆದ್ದರಿಂದ ನನ್ನ ಆಸ್ತಿಗಳನ್ನು ಉತ್ತರಾಧಿಕಾರಿಗಳಿಗೆ ನೀಡಲು ಬಯಸುವುದಿಲ್ಲ ಎಂದು 80 ವರ್ಷದ ನಾತು ಸಿಂಗ್ ಹೇಳಿದ್ದಾರೆ.
ಮುಜಾಫರ್‌ನಗರದ ಬಿರಲ್ ಗ್ರಾಮದ ನಿವಾಸಿಯಾಗಿರುವ ಸಿಂಗ್, ಪ್ರಸ್ತುತ ವೃದ್ಧಾಶ್ರಮವೊಂದರಲ್ಲಿ ವಾಸವಿದ್ದಾರೆ. ಇವರಿಗೆ ಮಗ ಹಾಗೂ ಮೂವರು ಹೆಣ್ಣುಮಕ್ಕಳಿದ್ದಾರೆ. "ನನ್ನ ಯಾವ ಮಕ್ಕಳಿಗೂ ಈ ಆಸ್ತಿಯ ಉತ್ತರಾಧಿಕಾರತ್ವ ನೀಡಲು ಬಯಸುವುದಿಲ್ಲ. ಆದ್ದರಿಂದ ಮರಣದ ಬಳಿಕ ಈ ಎಲ್ಲ ಆಸ್ತಿಗಳನ್ನು ಉತ್ತರ ಪ್ರದೇಶದ ರಾಜ್ಯಪಾಲರಿಗೆ ನೀಡುವ ಸಂಬಂಧ ಅಫಿಡವಿಟ್ ಸಲ್ಲಿಸಿದ್ದೇನೆ" ಎಂದು ಸ್ಪಷ್ಟಪಡಿಸಿದ್ದಾರೆ.
ಈ ಭೂಮಿಯಲ್ಲಿ ಸರಕಾರಿ ಶಾಲೆ ಅಥವಾ ಆಸ್ಪತ್ರೆ ನಿರ್ಮಿಸಬೇಕು ಎನ್ನುವುದು ಅವರ ಬಯಕೆ.
"ಈ ವಯಸ್ಸಿನಲ್ಲಿ ನಾನು ಮಗ- ಸೊಸೆ ಜತೆ ವಾಸ ಇರಬೇಕು. ಆದರೆ ಅವರು ನನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಈ ಕಾರಣದಿಂದ ಆಸ್ತಿಯನ್ನು ರಾಜ್ಯಪಾಲರಿಗೆ ಹಸ್ತಾಂತರಿಸುವ ನಿರ್ಧಾರಕ್ಕೆ ಬಂದಿದ್ದೇನೆ. ಅವರು ಅದನ್ನು ಸಮರ್ಪಕವಾಗಿ ಬಳಸಲಿ" ಎಂದು ಮಾಧ್ಯಮದ ಜತೆ ಮಾತನಾಡಿದ ಸಿಂಗ್ ಸ್ಪಷ್ಟಪಡಿಸಿದರು.
"ಸಿಂಗ್ ತಮ್ಮ ಅಂತ್ಯಸಂಸ್ಕಾರದಲ್ಲಿ ಕೂಡಾ ಕುಟುಂಬದವರು ಯಾರೂ ಪಾಲ್ಗೊಳ್ಳಬಾರದು" ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾಗಿ ವೃದ್ಧಾಶ್ರಮದ ಉಸ್ತುವಾರಿ ಹೊಂದಿರುವ ರೇಖಾ ಸಿಂಗ್ ವಿವರಿಸಿದ್ದಾರೆ.
An 80-year-old man in UP’s #Muzaffarnagar has given his immovable property worth around Rs 1.5 crore to the state governor. The man, Nathu Singh, a farmer, claimed that his son and daughter-in-law had not been treating him well. pic.twitter.com/6bmAUIn6Os
— TOIWestUP (@TOIWestUP) March 6, 2023







