ವಿವಿಗಳಲ್ಲಿ ಬೋಧಿಸಲ್ಪಡಲಿದೆ ‘ವಿಶ್ವಗುರು’ ರಾಜತಾಂತ್ರಿಕತೆ: ವರದಿ

ಹೊಸದಿಲ್ಲಿ: ಕೇಂದ್ರ ಸರಕಾರವು ಭಾರತದ ವಿದೇಶಾಂಗ ನೀತಿಯಲ್ಲಿ 2014ರಿಂದ ಆಗಿರುವ ಬದಲಾವಣೆಗಳನ್ನು ಪ್ರತಿಬಿಂಬಿಸಲು ಅಂತರರಾಷ್ಟ್ರೀಯ ಸಂಬಂಧಗಳ ಬೋಧನೆಯನ್ನು ಬಯಸಿದೆ. ಈ ಸಂಬಂಧ ಮಾ.17-18ರಂದು ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್, ವಿದೇಶಾಂಗ ಕಾರ್ಯದರ್ಶಿ ವಿನಯ ಕ್ವಾತ್ರಾ ಮತ್ತು ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ (ಐಸಿಸಿಆರ್)ಯ ಅಧ್ಯಕ್ಷ ವಿನಯ ಸಹಸ್ರಬುದ್ಧೆ ಅವರು 40ಕ್ಕೂ ಅಧಿಕ ಕೇಂದ್ರೀಯ ವಿವಿಗಳ ಅಂತರರಾಷ್ಟ್ರೀಯ ಸಂಬಂಧಗಳ ವಿಭಾಗಗಳ ಮುಖ್ಯಸ್ಥರು ಮತ್ತು ಪ್ರೊಫೆಸರ್ ಗಳೊಂದಿಗೆ ಮಾತನಾಡಲಿದ್ದಾರೆ ಎಂದು thewire.in ವರದಿ ಮಾಡಿದೆ.
ಈ ಅಭೂತಪೂರ್ವ ಕ್ರಮದೊಂದಿಗೆ ಮೋದಿ ಸರಕಾರವು ಅಂತರರಾಷ್ಟ್ರೀಯ ಸಂಬಂಧಗಳನ್ನು ಬೋಧಿಸುವ ರೀತಿಯನ್ನು 2014ರಿಂದ ವಿದೇಶಾಂಗ ನೀತಿಯಲ್ಲಿನ ಬದಲಾವಣೆಗಳೊಂದಿಗೆ ಸಂಯೋಜಿಸಲು ಬಯಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮಾ.17-18ರಂದು ಐಸಿಸಿಆರ್ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಜೈಶಂಕರ್ ಮತ್ತು ಕ್ವಾತ್ರಾ ಅವರು, ಮೋದಿ ಆಡಳಿತದಡಿ ರಾಜತಾಂತ್ರಿಕತೆಯಲ್ಲಿ ಗಣನೀಯ ಬದಲಾವಣೆಗಳು ಹಾಗೂ ಭಾರತೀಯ ರಾಜತಾಂತ್ರಿಕತೆ ಮತ್ತು ಜಾಗತಿಕ ರಾಜಕೀಯದಲ್ಲಿ ದೇಶದ ಪಾತ್ರದ ಮೇಲೆ ಅವು ಮಹತ್ವದ ಪರಿಣಾಮಗಳನ್ನು ಬೀರುವ ಸಾಧ್ಯತೆಯ ಕುರಿತು ಶಿಕ್ಷಣ ತಜ್ಞರೊಂದಿಗೆ ಮಾತನಾಡಲಿದ್ದಾರೆ.
‘ಪ್ರಧಾನಿ ಮೋದಿಯವರಡಿ ಭಾರತೀಯ ವಿದೇಶಾಂಗ ನೀತಿಯಲ್ಲಿ ಮಹತ್ತರ ಪರಿವರ್ತನೆಗಳಾಗಿದ್ದು, ವಿಶ್ವದಲ್ಲಿ ಭಾರತದ ಸ್ಥಾನವು ಬಲಗೊಳ್ಳುತ್ತಿರುವ ರೀತಿಯು ಇದನ್ನು ಪ್ರತಿಬಿಂಬಿಸಿದೆ. ನಮ್ಮ ಧ್ವನಿಯು ಈಗ ಹೆಚ್ಚಿನ ಆತ್ಮವಿಶ್ವಾಸದಿಂದ ಕೂಡಿದೆ ಮತ್ತು ಹೆಚ್ಚು ದೃಢವಾಗಿದೆ. ಇಂದು ನಮ್ಮ ವಿವಿಗಳಲ್ಲಿ ಅಂತರರಾಷ್ಟ್ರೀಯ ಸಂಬಂಧಗಳನ್ನು ಕಲಿಸುತ್ತಿರುವ ರೀತಿಯು ಅದನ್ನು ಪ್ರತಿಬಿಂಬಿಸುವ ಅಗತ್ಯವಿದೆ’ ಎಂದು ಸಹಸ್ರಬುದ್ಧೆ ತಿಳಿಸಿದರು.
ವರದಿಯಂತೆ ಸಚಿವ ಜೈಶಂಕರ್ ಅವರು ‘ದಕ್ಷಿಣದ ಧ್ವನಿಯಾಗಿ ಭಾರತದ ಉದಯೋನ್ಮುಖ ಅಧಿಕಾರ, ಜಿ20, ಕ್ವಾಡ್ ನಂತಹ ಸಂಘಟನೆಗಳಲ್ಲಿ ಭಾರತದ ಪಾತ್ರ ಮತ್ತು ಜಾಗತಿಕ ವಿಷಯಗಳಲ್ಲಿ ದೇಶದ ಹೆಚ್ಚುತ್ತಿರುವ ಪ್ರಭಾವ’ ಕುರಿತು ಮಾತನಾಡಲಿದ್ದಾರೆ. ಕ್ವಾತ್ರಾ ಅವರು ಭಾರತದ ನೆರೆಕರೆ ಮತ್ತು ಸಹಸ್ರಬುದ್ಧೆ ಅವರು ರಾಜತಾಂತ್ರಿಕತೆಯ ಮೂಲಕ ತನ್ನ ಗುರಿಗಳನ್ನು ಸಾಧಿಸುವ ಭಾರತದ ಸಾಮರ್ಥ್ಯದ ಬಗ್ಗೆ ಮಾತನಾಡಲಿದ್ದಾರೆ.
ಬಿಜೆಪಿ ಅಭಿಯಾನದ ಪ್ರಮುಖ ಭಾಗವು ಭಾರತವನ್ನು ‘ವಿಶ್ವಗುರು’ ಪಟ್ಟಕ್ಕೇರಿಸಲು ಪ್ರಧಾನಿ ಮೋದಿಯವರು ಹೇಗೆ ಶಕ್ತಿಶಾಲಿ ವಿದೇಶಾಂಗ ನೀತಿಯನ್ನು ಸೃಷ್ಟಿಸಿದ್ದಾರೆ ಎನ್ನುವುದರ ಸುತ್ತ ಕೇಂದ್ರೀಕೃತವಾಗಿದೆ ಎಂದು thewire.in ವರದಿ ಮಾಡಿದೆ.
ಇದನ್ನೂ ಓದಿ: ಲುಲು ಗ್ರೂಪ್ ಅಧ್ಯಕ್ಷ ಯೂಸುಫ್ ಅಲಿ ಅವರಿಗೆ ಈಡಿ ಸಮನ್ಸ್







