‘ವಂದೇ ಭಾರತ್ ಎಕ್ಸ್ಪ್ರೆಸ್’ ಚಲಾಯಿಸಿದ ಏಶ್ಯಾದ ಮೊದಲ ಮಹಿಳಾ ರೈಲು ಚಾಲಕಿ
ಮುಂಬೈ, ಮಾ. 14: ಏಶ್ಯಾದ ಮೊದಲ ಮಹಿಳಾ ರೈಲು ಚಾಲಕಿ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಸುರೇಖಾ ಯಾದವ್ ತನ್ನ ತುರಾಯಿಗೆ ಇನ್ನೊಂದು ಗರಿಯನ್ನು ಸೇರಿಸಿಕೊಂಡಿದ್ದಾರೆ. ಹೊಸದಾಗಿ ಪರಿಚಯಿಸಲಾಗುತ್ತಿರುವ ‘ವಂದೇ ಭಾರತ್ ಎಕ್ಸ್ಪ್ರೆಸ್’ ರೈಲನ್ನು ಚಲಾಯಿಸಿದ ಮೊದಲ ಮಹಿಳಾ ರೈಲು ಚಾಲಕಿ ಎಂಬ ಕೀರ್ತಿಗೂ ಅವರು ಈಗ ಪಾತ್ರರಾಗಿದ್ದಾರೆ ಎಂದು ಮಧ್ಯ ರೈಲ್ವೇ ತಿಳಿಸಿದೆ.
ಅವರು ಸೆಮಿ-ಹೈ ಸ್ಪೀಡ್ ರೈಲನ್ನು ಸೋಮವಾರ ಸೋಲಾಪುರ ನಿಲ್ದಾಣದಿಂದ ಮುಂಬೈಯ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಸಿಎಸ್ಎಮ್ಟಿ)ವರೆಗೆ ಚಲಾಯಿಸಿದರು ಎಂದು ರೈಲ್ವೇ ಹೇಳಿದೆ.
ರೈಲು ಮಾರ್ಚ್ 13ರಂದು ಸೋಲಾಪುರ ನಿಲ್ದಾಣದಿಂದ ಸರಿಯಾದ ಸಮಯಕ್ಕೆ ಹೊರಟಿತು ಹಾಗೂ ಸಿಎಸ್ಎಮ್ಟಿ ನಿಲ್ದಾಣವನ್ನು ನಿಗದಿತ ಅವಧಿಗಿಂತ 5 ನಿಮಿಷ ಮುಂಚಿತವಾಗಿಯೇ ತಲುಪಿತು.
450 ಕಿ.ಮೀ.ಗೂ ಅಧಿಕ ಪ್ರಯಾಣದ ಬಳಿಕ ಸುರೇಖಾ ಯಾದವ್ರನ್ನು ಸಿಎಸ್ಎಮ್ಟಿಯ 8ನೇ ಸಂಖ್ಯೆಯ ಪ್ಲಾಟ್ಫಾರ್ಮ್ನಲ್ಲಿ ಸನ್ಮಾನಿಸಲಾಯಿತು ಎಂದು ಮಧ್ಯ ರೈಲ್ವೇಯ ಹೇಳಿಕೆ ತಿಳಿಸಿದೆ. ಪಶ್ಚಿಮ ಮಹಾರಾಷ್ಟ್ರದ ಸತಾರ ಮೂಲದವರಾದ ಸುರೇಖಾ 1988ರಲ್ಲಿ ಭಾರತದ ಮೊದಲ ಮಹಿಳಾ ರೈಲು ಚಾಲಕಿಯಾದರು. ಅವರು ತನ್ನ ಸೇವೆಗಾಗಿ ರಾಜ್ಯ ಮತ್ತು ರಾಷ್ಟ್ರ ಮಟ್ಟಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ.