ಬಿಹಾರ: ಆಸ್ತಿ ವಿವಾದದಲ್ಲಿ ಎಂಟರ ಹರೆಯದ ಬಾಲಕಿಯ ಹತ್ಯೆ
ಪಾಟ್ನಾ,ಮಾ.25: ಬಿಹಾರದ ಭೋಜಪುರ ಜಿಲ್ಲೆಯ ಭಿಲಾಯಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳ ಯದ್ವಾತದ್ವಾ ಗುಂಡಿನ ದಾಳಿಯಿಂದ ಎಂಟರ ಹರೆಯದ ಬಾಲಕಿಯೋರ್ವಳು ಕೊಲ್ಲಲ್ಪಟ್ಟಿದ್ದಾಳೆ.
ಘಟನೆಯ ಬಳಿಕ ಆರೋಪಿಗಳು ಗ್ರಾಮದಿಂದ ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
‘ರೋಹ್ತಾಸ್ ಜಿಲ್ಲೆಯ ವ್ಯಕ್ತಿಯೊಂದಿಗೆ ನನಗೆ ಆಸ್ತಿ ವಿವಾದವಿದ್ದು,ಆತ ನನ್ನನ್ನು ಕೊಲ್ಲಲು ಜನರನ್ನು ಕಳುಹಿಸಿದ್ದ. ಅವರು ಬಲವಂತದಿಂದ ಮನೆಯೊಳಗೆ ನುಗ್ಗಿ ಗುಂಡುಗಳನ್ನು ಹಾರಿಸಿದ್ದರಿಂದ ನನ್ನ ಮಗಳು ಕೊಲ್ಲಲ್ಪಟ್ಟಿದ್ದಾಳೆ ’ ಎಂದು ಮೃತ ಬಾಲಕಿಯ ತಂದೆ ಕೃಷ್ಣಸಿಂಗ್ ತಿಳಿಸಿದರು.
‘ಅವರು ನಾಲ್ಕು ವರ್ಷಗಳ ಹಿಂದೆ ನನ್ನ ಸೋದರನ ಹತ್ಯೆಯಲ್ಲೂ ಭಾಗಿಯಾಗಿದ್ದರು. ಆ ಸಂದರ್ಭ ನನಗೂ ಗುಂಡಿನ ಗಾಯಗಳಾಗಿದ್ದರೂ ದಾಳಿಯಿಂದ ಬದುಕುಳಿದಿದ್ದೆ ’ಎಂದರು.
ಮೂಲತಃ ನೆರೆಯ ರೋಹ್ತಾಸ್ ಜಿಲ್ಲೆಯ ಕುಂದ್ ಗ್ರಾಮದವರಾಗಿರುವ ಸಿಂಗ್ ಗ್ರಾಮದ ಕೆಲವು ಪ್ರಬಲರೊಂದಿಗೆ ಆಸ್ತಿ ವಿವಾದ ಹೊಂದಿದ್ದಾರೆ. ಸಿಂಗ್ಗೆ ಸೇರಿದ 25 ಎಕರೆ ಭೂಮಿಯ ಮೇಲೆ ಅವರು ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.