ಮತ್ತೊಂದು ಪರಮಾಣು ಸಿಡಿತಲೆ ಪ್ರದರ್ಶಿಸಿದ ಉತ್ತರ ಕೊರಿಯಾ
ಪ್ಯೋಂಗ್ಯಾಂಗ್, ಮಾ.29: ಉತ್ತರ ಕೊರಿಯಾವು ಹೊಸ ಪರಮಾಣು ಸಿಡಿತಲೆಯನ್ನು ಅನಾವರಣಗೊಳಿಸಿದ್ದು ತನ್ನ ಶಸ್ತ್ರಾಗಾರವನ್ನು ವಿಸ್ತರಿಸಲು ಇನ್ನಷ್ಟು ಪರಮಾಣು ದರ್ಜೆಯ ಶಸ್ತ್ರಾಸ್ತ್ರ ಉತ್ಪಾದಿಸುವುದಾಗಿ ಘೋಷಿಸಿದೆ.
ದಕ್ಷಿಣ ಕೊರಿಯಾದೊಂದಿಗೆ ನಡೆಸುವ ಜಂಟಿ ಸಮಾರಾಭ್ಯಾಸದಲ್ಲಿ ಪಾಲ್ಗೊಳ್ಳಲು ಅಮೆರಿಕದ ವಿಮಾನವಾಹಕ ನೌಕೆ ದಕ್ಷಿಣ ಕೊರಿಯಾಕ್ಕೆ ಆಗಮಿಸಿದ ಬೆನ್ನಿಗೇ ಉತ್ತರ ಕೊರಿಯಾ ತನ್ನ ಹೊಸ ಪರಮಾಣು ಸಿಡಿತಲೆಯನ್ನು ಅನಾವರಣಗೊಳಿಸಿ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಹ್ವಸಾನ್-31ಎಸ್ ಎಂದು ಹೆಸರಿಸಲಾಗಿರುವ ಪರಮಾಣು ಸಿಡಿತಲೆಯ ಫೋಟೋಗಳನ್ನು ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ(ಕೆಸಿಎನ್ಎ) ಪ್ರಕಟಿಸಿದೆ. ಅಧ್ಯಕ್ಷ ಕಿಮ್ಜಾಂಗ್ ಉನ್ ಪರಮಾಣು ಶಸ್ತ್ರಾಸ್ತ್ರ ಸಂಸ್ಥೆಗೆ ಭೇಟಿ ನೀಡಿ ಹೊಸ ಯುದ್ಧತಂತ್ರದ ಆಯುಧಗಳನ್ನು ಪರಿಶೀಲಿಸಿದ್ದಾರೆ. ಈ ಪರಮಾಣು ಸಿಡಿತಲೆಗಳನ್ನು ಬ್ಯಾಲಿಸ್ಟಿಕ್ ಕ್ಷಿಪಣಿಗಳಲ್ಲಿ ಅಳವಡಿಸಲಾಗುವುದು.
ಇವು ಅತ್ಯಂತ ಶಕ್ತಿಶಾಲಿ ಪರಮಾಣು ಸಿಡಿತಲೆಯ ಕಿರಿಯ ಆವೃತ್ತಿಯಾಗಿದ್ದು ಇವನ್ನು ಖಂಡಾಂತರ ಕ್ಷಿಪಣಿಗಳಲ್ಲಿ(ಅಮೆರಿಕವನ್ನು ತಲುಪುವ ಸಾಮಥ್ರ್ಯವಿರುವ) ಸುಲಭದಲ್ಲಿ ಅಳವಡಿಸಬಹುದಾಗಿದೆ ಎಂದು ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಪರಮಾಣು ಶಸ್ತ್ರಾಗಾರವನ್ನು ಪರಿಣಾಮಕಾರಿಯಾಗಿ ಉನ್ನತೀಕರಿಸಲು ಮತ್ತು ದೂರದೃಷ್ಟಿಯ ರೀತಿಯಲ್ಲಿ ಶಕ್ತಿಯುತ ಶಸ್ತ್ರಾಸ್ತ್ರಗಳನ್ನು ಕ್ಷಿಪ್ರವಾಗಿ ನಿರ್ಮಿಸಲು ಆದೇಶಿಸಿರುವುದಾಗಿ ಕೆಸಿಎನ್ಎ ವರದಿ ಮಾಡಿದೆ.