ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಿಸುತ್ತಿರುವ ಬಿಜೆಪಿ ಶಾಸಕನ ವೀಡಿಯೋ ವೈರಲ್
ಅಗರ್ತಲಾ: ತ್ರಿಪುರಾದ ಬಿಜೆಪಿ (BJP) ಶಾಸಕರೊಬ್ಬರು ತಮ್ಮ ಮೊಬೈಲ್ ಫೋನ್ನಲ್ಲಿ ಅಶ್ಲೀಲ ವೀಡಿಯೋ ವೀಕ್ಷಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆಯಲ್ಲದೆ ವ್ಯಾಪಕ ಆಕ್ರೋಶಕ್ಕೂ ಕಾರಣವಾಗಿದೆ. ಈ ಶಾಸಕ ಜಾದವ್ ಲಾಲ್ ನಾಥ್ ಅವರು ಬಗ್ಬಸ್ಸಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ರಾಜ್ಯ ಬಜೆಟ್ ಕುರಿತು ಸದನದಲ್ಲಿ ಚರ್ಚೆ ನಡೆಯುತ್ತಿರುವಾಗ ಈ ವಿದ್ಯಮಾನ ನಡೆದಿದೆಯೆನ್ನಲಾಗಿದ್ದು, ನಾಥ್ ಅವರ ಹಿಂದಿನ ಸಾಲಿನಲ್ಲಿ ಕುಳಿತವರಲ್ಲೊಬ್ಬರು ಈ ವೀಡಿಯೋ ಸೆರೆಹಿಡಿದಿದ್ದಾರೆ. ಅದರಲ್ಲಿ ನಾಥ್ ಅವರು ಕೆಲವೊಂದು ವೀಡಿಯೋ ತುಣುಕುಗಳನ್ನು ವೀಕ್ಷಿಸುತ್ತಿರುವುದು ಹಾಗೂ ಅಶ್ಲೀಲವೆಂದು ಕಂಡು ಬರುವ ವೀಡಿಯೋ ಕ್ಲಿಪ್ ಅನ್ನು ವೀಕ್ಷಿಸುತ್ತಿರುವುದು ಕಾಣಿಸುತ್ತದೆ. ಈ ಸಂದರ್ಭ ಸ್ಪೀಕರ್ ಹಾಗೂ ಶಾಸಕರೊಬ್ಬರು ಸದನದಲ್ಲಿ ಮಾತನಾಡುತ್ತಿದ್ದರು.
ಈ ವಿದ್ಯಮಾನದ ಕುರಿತು ಬಿಜೆಪಿಯು ಶಾಸಕನಿಂದ ವಿವರಣೆಯನ್ನು ಕೇಳಿ ಅವರಿಗೆ ಸಮನ್ಸ್ ಕಳುಹಿಸಿದೆ ಎಂದು ಪಕ್ಷ ಮೂಲಗಳು ತಿಳಿಸಿವೆ. ಅಶ್ಲೀಲ ಚಿತ್ರವನ್ನು ಮೊಬೈಲ್ನಲ್ಲಿ ವೀಕ್ಷಿಸಿದ್ದರೆಂಬ ಆರೋಪಕ್ಕೆ ಶಾಸಕ ಇನ್ನೂ ಪ್ರತಿಕ್ರಿಯಿಸಿಲ್ಲ. ಅಧಿವೇಶನ ಮುಗಿಯುತ್ತಲೇ ಅವರು ಸದನದಿಂದ ಹೊರಟು ಹೋಗಿದ್ದರೆಂದು ತಿಳಿದು ಬಂದಿದೆ.