ಅಶ್ಲೀಲ ಚಿತ್ರನಟಿಯ ಬಾಯಿ ಮುಚ್ಚಿಸಲು ಹಣ: ಟ್ರಂಪ್ ವಿರುದ್ಧ ಹೊಸ ಆರೋಪ
ಹೊಸದಿಲ್ಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 2016ರ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಅಶ್ಲೀಲ ಚಿತ್ರನಟಿಯೊಬ್ಬರ ಬಾಯಿ ಮುಚ್ಚಿಸಲು ಹಣ ಪಾವತಿಸಿದ ಬಗ್ಗೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷರಾಗುವ ಕನಸು ಕಾಣುತ್ತಿರುವ ಟ್ರಂಪ್ಗೆ ಇದು ದೊಡ್ಡ ಹಿನ್ನಡೆಯಾಗಿದೆ.
ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಡೊನಾಲ್ಡ್ ಟ್ರಂಪ್, 2006 ಜುಲೈನಲ್ಲಿ ಗಾಲ್ಫ್ ಟೂರ್ನಿಯೊಂದರ ಸಂದರ್ಭ ಅಶ್ಲೀಲ ಚಿತ್ರಗಳಲ್ಲಿ ನಟಿಸುವ ನಟಿ ಸ್ಟಾರ್ಮಿ ಡೇನಿಯನ್ ಎಂಬವರನ್ನು ಭೇಟಿಯಾಗಿದ್ದರು. ಆಗ ಡೇನಿಯಲ್ಗೆ 27 ವರ್ಷ ಮತ್ತು ಟ್ರಂಪ್ಗೆ 60 ವರ್ಷ. 2018ರಲ್ಲಿ ಟ್ರಂಪ್ ಜತೆಗಿನ ’ಸಮಾಗಮ’ದ ಬಗ್ಗೆ "ಫುಲ್ ಡಿಸ್ಕ್ಲೋಶರ್" ಎಂಬ ಪುಸ್ತಕದಲ್ಲಿ ಡೇನಿಯಲ್ ವಿವರ ಬಹಿರಂಗಪಡಿಸಿದ್ದರು.
ಟ್ರಂಪ್ ಅವರ ಅಂಗರಕ್ಷಕರ ಪೈಕಿ ಒಬ್ಬ ತಮ್ಮನ್ನು ಟ್ರಂಪ್ ಅವರ ಪೆಂಟ್ಹೌಸ್ನಲ್ಲಿ ಔತಣಕೂಟಕ್ಕೆ ಆಹ್ವಾನಿಸಿದ್ದ. ಬಳಿಕ ಟ್ರಂಪ್ ಜತೆ ಲೈಂಗಿಕತೆ ನಡೆಸಿದ್ದಾಗಿ ಡೇನಿಯಲ್ ತಮ್ಮ ಕೃತಿಯಲ್ಲಿ ವಿವರಿಸಿದ್ದರು. ಇದನ್ನು ಟ್ರಂಪ್ ನಿರಾಕರಿಸಿ, ಹಣ ಕೀಳುವ ಸಲುವಾಗಿ ಈ ಆರೋಪ ಮಾಡಲಾಗಿದೆ ಎಂದು ಪ್ರತ್ಯಾರೋಪ ಮಾಡಿದ್ದರು.
2016ರ ಚುನಾವಣೆಯ ಸಂದರ್ಭದಲ್ಲಿ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದ ಟ್ರಂಪ್ ಅವರ ಖಾಸಗಿ ವಕೀಲ ಮೈಕೆಲ್ ಕೊಹೆನ್, ಈ ಪ್ರಕರಣವನ್ನು ಮುಚ್ಚಿ ಹಾಕುವ ಸಲುವಾಗಿ ಆಕೆಯ ಬಾಯಿ ಮುಚ್ಚಿಸಲು 1.30 ಲಕ್ಷ ಡಾಲರ್ ಹಣ ಪಾವತಿಸಿದ್ದಾಗಿ ಒಪ್ಪಿಕೊಂಡಿದ್ದರು. ಈ ಪಾವತಿಯನ್ನು ವಾಲ್ಸ್ಟ್ರೀಟ್ ಜರ್ನಲ್ 2018ರ ಜನವರಿಯಲ್ಲಿ ಬಹಿರಂಗಪಡಿಸಿತ್ತು ಮತ್ತು ಇದು ಟ್ರಂಪ್ ವಿರುದ್ಧದ ಪ್ರಕರಣಕ್ಕೆ ಮೂಲ ಆಧಾರ ಎನಿಸಿದೆ.