ಕಾರ್ಮಿಕರ ಕುರಿತು ಸುಳ್ಳು ಸುದ್ದಿ ಹರಡಿದ ಬಿಜೆಪಿ ವಕ್ತಾರನಿಗೆ ಕ್ಷಮೆಯಾಚಿಸುವಂತೆ ಸೂಚಿಸಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ: ತಮಿಳುನಾಡಿನಲ್ಲಿ ಬಿಹಾರದ ವಲಸಿಗ ಕಾರ್ಮಿಕರ ಮೇಲೆ ದಾಳಿ ನಡೆಯುತ್ತಿದೆ ಎಂದು ಟ್ವಿಟರ್‌ನಲ್ಲಿ ಸುಳ್ಳು ಸುದ್ದಿ ಹರಡಿದ್ದಕ್ಕಾಗಿ ಕ್ಷಮೆಯಾಚಿಸುವಂತೆ ಉತ್ತರಪ್ರದೇಶ ಬಿಜೆಪಿ (BJP) ವಕ್ತಾರ ಹಾಗೂ ವಕೀಲ ಪ್ರಶಾಂತ್ ಪಟೇಲ್ ಉಮ್ರಾವೋ ಅವರಿಗೆ ಸುಪ್ರೀಂ ಕೋರ್ಟ್ (Supreme Court) ಸೂಚಿಸಿದೆ.
ಹಿಂದಿ ಮಾತನಾಡಿದ್ದಕ್ಕೆ 15 ವಲಸಿಗ ಕಾರ್ಮಿಕರ ಮೇಲೆ ಹಲ್ಲೆ ನಡೆದಿದೆ ಹಾಗೂ ಅವರಲ್ಲಿ 12 ಮಂದಿ ಮೃತಪಟ್ಟಿದ್ದಾರೆ ಎಂದು ಪಟೇಲ್ ಅವರು ಫೆಬ್ರವರಿ 23 ರಂದು ಟ್ವೀಟ್ ಮಾಡಿದ್ದರು.
ತೂತುಕುಡಿ ಪೊಲೀಸರು ಪಟೇಲ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ನಂತರ ಅವರಿಗೆ ಮದ್ರಾಸ್ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರುಗೊಳಿಸಿತ್ತು. ಆದರೆ 15 ದಿನಗಳ ಕಾಲ ತನಿಖಾಧಿಕಾರಿ ಮುಂದೆ ಹಾಜರಾಗಬೇಕೆಂದು ಹೈಕೋರ್ಟ್ ಅವರಿಗೆ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು.
ತಮ್ಮ ವಿರುದ್ಧ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಎಫ್‌ಐಆರ್‌ಗಳನ್ನು ಜೊತೆಗೆ ಸೇರಿಸಬೇಕು ಎಂದು ಕೋರಿ ಹಾಗೂ ಮದ್ರಾಸ್ ಹೈಕೋರ್ಟ್ ವಿಧಿಸಿದ ಷರತ್ತನ್ನು ವಿರೋಧಿಸಿ ಪಟೇಲ್ ಸಲ್ಲಿಸಿದ್ದ ಎರಡು ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಪಂಕಜ್ ಮಿತ್ತಲ್ ಅವರ ಪೀಠ ವಿಚಾರಣೆ ನಡೆಸಿತು. ಎಫ್‌ಐಆರ್ ಕುರಿತ ಅರ್ಜಿಗೆ ಸಂಬಂಧಿಸಿದಂತೆ ನೋಟಿಸ್ ಜಾರಿಗೊಳಿಸಿದ ಸುಪ್ರೀಂ ಕೋರ್ಟ್, ಮದ್ರಾಸ್ ಹೈಕೋರ್ಟ್ ವಿಧಿಸಿದ ಷರತ್ತನ್ನು ಮಾರ್ಪಡಿಸಿದೆ. 15 ದಿನಗಳ ಕಾಲ ಬೆಳಿಗ್ಗೆ 10.30 ಹಾಗೂ ಸಂಜೆ 5.30ರ ನಡುವೆ ಠಾಣೆಗೆ ಹಾಜರಾಗಬೇಕೆಂಬ ಷರತ್ತನ್ನು ಮಾರ್ಪಡಿಸಿ ಸೋಮವಾರ ಬೆಳಿಗ್ಗೆ 10 ಗಂಟೆಗೆ ಹಾಗೂ ನಂತರ ತನಿಖಾಧಿಕಾರಿಗೆ ಅಗತ್ಯವಿರುವಾಗ ಹಾಜರಾಗುವಂತೆ ಸೂಚಿಸಿತು.
ಮುಂದಿನ ವಿಚಾರಣೆ ನಡೆಯುವುದಕ್ಕಿಂತ ಮುನ್ನ ಅರ್ಜಿದಾರರು ತಮ್ಮ ಕೃತ್ಯಕ್ಕೆ ಕ್ಷಮೆಯಾಚಿಸಬೇಕೆಂದು ನ್ಯಾಯಾಲಯ ಸೂಚಿಸಿದೆ.







