ಬಾವಿಗೆ ಬಿದ್ದ ಕಿರಿಯ ಸಹೋದರನನ್ನು ರಕ್ಷಿಸಿದ ಎಂಟು ವರ್ಷದ ಬಾಲಕಿ ಫಾತಿಮಾ

ಮವೆಲಿಕ್ಕರ: ಮಂಗಳವಾರ ಸಂಜೆ 5 ಗಂಟೆ ಸಮಯದಲ್ಲಿ ಬಾವಿಗೆ ಬಿದ್ದ ತನ್ನ ಎರಡು ವರ್ಷದ ಸಹೋದರನನ್ನು ಎಂಟು ವರ್ಷದ ಬಾಲಕಿಯೊಬ್ಬಳು ಅಸಾಧಾರಣ ಶೌರ್ಯ ಪ್ರದರ್ಶಿಸಿ ರಕ್ಷಿಸಿರುವ ಘಟನೆ ಮಂಕಾಂಕುಳಿಯಲ್ಲಿ ನಡೆದಿದೆ. ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಕುಟುಂಬವೊಂದರ ದಿಯಾ ಫಾತಿಮಾ ಎಂಬ ಬಾಲಕಿಯು ತನ್ನ ಕಿರಿಯ ಸಹೋದರ ಐವಾನ್ (ಅಕ್ಕು) ಅನ್ನು ರಕ್ಷಿಸಿದ್ದಾಳೆ ಎಂದು onmanorama.com ವರದಿ ಮಾಡಿದೆ.
ಅವರ ತಾಯಿ ಶಾಜಿಲಾ ಮನೆಯ ಅಂಗಳದಲ್ಲಿ ಪಾತ್ರೆಗಳನ್ನು ತೊಳೆಯುತ್ತಿದ್ದರೆ, ದಿಯಾ ಹಾಗೂ ಆಕೆಯ ಕಿರಿಯ ಸಹೋದರಿ ದುನಿಯಾ ಒಣಗಿ ಹಾಕಿದ್ದ ಬಟ್ಟೆಗಳನ್ನು ತೆಗೆಯುತ್ತಿದ್ದರು. ಈ ಸಂದರ್ಭದಲ್ಲಿ ಯಾರಿಗೂ ಐವಾನ್ ಮೇಲೆ ಗಮನವಿಲ್ಲದೆ ಇದ್ದುದರಿಂದ ಐವಾನ್ ಬಾವಿಯ ಪಕ್ಕವಿದ್ದ ಪಂಪ್ಸೆಟ್ ಮೇಲೆ ಹೆಜ್ಜೆಯಿಟ್ಟು ಬಾವಿಯನ್ನು ಮುಚ್ಚಿದ್ದ ಕಬ್ಬಿಣದ ಕವಚದ ಮೇಲೆ ಜಿಗಿದಿದ್ದಾನೆ. ಕವಚದ ಮಧ್ಯಭಾಗ ತುಕ್ಕು ಹಿಡಿದಿದ್ದುದರಿಂದ ಅದು ಮುರಿದು ಆತ ಇಪ್ಪತ್ತು ಅಡಿಯ ಆಳವಿರುವ ಬಾವಿಗೆ ಬಿದ್ದಿದ್ದಾನೆ.
ಬಾವಿಗೆ ಬಿದ್ದ ಸದ್ದು ಕೇಳುತ್ತಲೇ ಬಾವಿಯತ್ತ ದೌಡಾಯಿಸಿರುವ ದಿಯಾ, ಬಾವಿಯಲ್ಲಿ ತನ್ನ ಕಿರಿಯ ಸಹೋದರ ಹೋರಾಡುತ್ತಿರುವುದನ್ನು ಕಂಡಿದ್ದಾಳೆ. ಕೂಡಲೇ ಒಂದು ಕ್ಷಣವನ್ನೂ ವ್ಯರ್ಥ ಮಾಡದೆ ಬಾವಿಗೆ ಇಳಿ ಬಿಟ್ಟಿದ್ದ ಪಿವಿಸಿ ಕೊಳವೆಯನ್ನು ಹಿಡಿದುಕೊಂಡು ಬಾವಿಗೆ ಇಳಿದಿದ್ದಾಳೆ. ಒಂದು ಕೈಯಲ್ಲಿ ಪಿವಿಸಿ ಕೊಳವೆ ಹಿಡಿದುಕೊಂಡು, ಮತ್ತೊಂದು ಕೈಯಿಂದ ಐವಾನ್ನನ್ನು ತನ್ನತ್ತ ಸೆಳೆದುಕೊಂಡಿದ್ದಾಳೆ. ಶಾಜಿಲಾರ ಕಿರುಚಾಟ ಕೇಳಿದ ನೆರೆಯವರಾದ ಅಖಿಲ್ ಚಂದ್ರನ್, ಬಿನೋಯ್ ಹಾಗೂ ವಲಸೆ ಕಾರ್ಮಿಕ ಮುನ್ನಾ ಮನೆಯತ್ತ ಧಾವಿಸಿ ಬಂದು, ಇಬ್ಬರೂ ಮಕ್ಕಳನ್ನು ಬಾವಿಯಿಂದ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವರದಿಯಾಗಿದೆ.
ಘಟನೆಯಲ್ಲಿ ಐವಾನ್ ತಲೆಗೆ ಸಣ್ಣ ಪುಟ್ಟ ಗಾಯವಾಗಿದ್ದು, ಆತನಿಗೆ ಅಲಪುಳ್ಳ ವೈದ್ಯಕೀಯ ಕಾಲೇಜಿನ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಲ್ಲಿ ದಿಯಾಗೆ ಯಾವುದೇ ಗಾಯಗಳಾಗಿಲ್ಲ. ಆಲಪ್ಪುಝ ನಿವಾಸಿಯಾದ ಐವಾನ್ ತಂದೆ ಸನಲ್ ಎರುಮಲಿಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ದಿಯಾ ವೆಟ್ಟಿಯಾರ್ನಲ್ಲಿರುವ ಇರಟ್ಟಪಲ್ಲಿಕೂದಮ್ ಸರ್ಕಾರಿ ಶಾಲೆಯಲ್ಲಿ ಮೂರನೆ ತರಗತಿಯ ವಿದ್ಯಾರ್ಥಿಯಾಗಿದ್ದಾಳೆ.
ಇದನ್ನೂ ಓದಿ: ತಾವೇ ಗೋಹತ್ಯೆಗೈದು ಮುಸ್ಲಿಮರ ತಲೆಗೆ ಕಟ್ಟಲು ಪ್ರಯತ್ನಿಸಿದ್ದ ಹಿಂದೂ ಮಹಾಸಭಾದ ಕಾರ್ಯಕರ್ತರ ಬಂಧನ: ವರದಿ







