ಮದುವೆ ಸಮಾರಂಭದಲ್ಲಿ ಡಿಜೆ ನಿಲ್ಲಿಸಿದ ಪೊಲೀಸರು: ಠಾಣೆ ಎದುರು ಕುಳಿತು ಪ್ರತಿಭಟಿಸಿದ ವಧು-ವರರು
ರತ್ಲಾಮ್: ಮದುವೆ ಸಮಾರಂಭದಲ್ಲಿ ಸಂಗೀತ ಪ್ರದರ್ಶನವನ್ನು ಸ್ಥಗಿತಗೊಳಿಸುವಂತೆ ಡಿಜೆಗೆ ಕೆಲವು ಪೊಲೀಸರು ಸೂಚಿಸಿದ್ದನ್ನು ವಿರೋಧಿಸಿ ನವ ದಂಪತಿಗಳು ಪೊಲೀಸ್ ಠಾಣೆಯೊಂದರ ಮುಂದೆ ಪ್ರತಿಭಟನೆ ನಡೆಸಿರುವ ಘಟನೆ ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿ ನಡೆದಿದೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.
ಗುರುವಾರ ರಾತ್ರಿ ಪೊಲೀಸ್ ಠಾಣೆ ಎದುರು ವಧು-ವರರು ಪ್ರತಿಭಟನೆ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಈ ಘಟನೆಯು ಗುರುವಾರ ಮಧ್ಯರಾತ್ರಿ ಸಂಭವಿಸಿದ್ದು, ಮದುವೆ ಸಮಾರಂಭದ ಸ್ಥಳಕ್ಕೆ ಆಗಮಿಸಿದ ಔದ್ಯೋಗಿಕ್ ಪೊಲೀಸ್ ಠಾಣೆ ವ್ಯಾಪ್ತಿಯ ಇಬ್ಬರು ಪೊಲೀಸರು ಸಂಗೀತ ಪ್ರದರ್ಶನ ನೀಡುವುದನ್ನು ನಿಲ್ಲಿಸುವಂತೆ ಡಿಜೆಗೆ ಸೂಚಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಮದುವೆ ಸಮಾರಂಭದಲ್ಲಿ ಪೊಲೀಸರು ಮಹಿಳೆಯೊಬ್ಬರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ನವ ದಂಪತಿಗಳು ತಮ್ಮ ಕುಟುಂಬದ ಸದಸ್ಯರೊಂದಿಗೆ ಪೊಲೀಸ್ ಠಾಣೆ ಬಳಿ ತೆರಳಿ, ಠಾಣೆಯ ಮುಂದೆ ಮೂರು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು ಎಂದು ಹೇಳಿದ್ದಾರೆ.
ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ವರ ಅಜಯ್ ಸೋಲಂಕಿ, ಪೊಲೀಸರು ನಮ್ಮ ಕುಟುಂಬದ ಮಹಿಳೆಯೊಬ್ಬರೊಂದಿಗೆ ಅನುಚಿತವಾಗಿ ವರ್ತಿಸಿದ್ದು, ನನ್ನ ಮದುವೆಯನ್ನು ಹಾಳುಗೆಡವಿದ್ದಾರೆ ಎಂದು ಆರೋಪಿಸಿದ್ದಾರೆ.
ಮೊದಲಿಗೆ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ತಮ್ಮ ವಿವಾಹ ಸಮಾರಂಭವನ್ನು ವಿಧಿವತ್ತಾಗಿ ಪೂರ್ಣಗೊಳಿಸಲು ದಂಪತಿಗಳು ನಿರಾಕರಿಸಿದ್ದಾರೆ.
ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ವಧು-ವರರು ಮದುವೆ ಸಮಾರಂಭ ಸ್ಥಳಕ್ಕೆ ಮರಳಿದರು ಎಂದು ಔದ್ಯೋಗಿಕ್ ಪೊಲೀಸ್ ಠಾಣೆಯ ಉಸ್ತುವಾರಿ ರಾಜೇಂದ್ರ ವರ್ಮ ತಿಳಿಸಿದ್ದಾರೆ.
#Ratlam पुलिस ने डीजे बंद कराया तो फेरे लिए बगैर दुल्हा-दुल्हन ने थाने में दिया धरना
— Rudra Ravi Sharma (@RudraRaviSharma) April 7, 2023
#ratlam #MadhyaPradesh pic.twitter.com/uGfd3GsTKC