10 ಸಾವಿರದ ಗಡಿ ದಾಟಿದ ದೈನಿಕ ಕೋವಿಡ್ ಪ್ರಕರಣ
ಹೊಸದಿಲ್ಲಿ: ದೇಶದಲ್ಲಿ ದೈನಿಕ ಕೋವಿಡ್-19 ಪ್ರಕರಣಗಳ ಸಂಖ್ಯೆ 5 ಸಾವಿರದ ಗಡಿ ದಾಟಿದ ಒಂದು ವಾರದಲ್ಲೇ ಬುಧವಾರ ದೇಶದ ಹೊಸ ದೈನಿಕ ಪ್ರಕರಣಗಳ ಸಂಖ್ಯೆ ದ್ವಿಗುಣಗೊಂಡು 10 ಸಾವಿರ ತಲುಪಿದೆ. ಕಳೆದ ವರ್ಷದ ಆಗಸ್ಟ್ 25ರ ಬಳಿಕ ದಾಖಲಾದ ಗರಿಷ್ಠ ಸಂಖ್ಯೆ ಇದಾಗಿದೆ. ಕೇರಳದಲ್ಲಿ ಪ್ರಕರಣಗಳು ಗಣನೀಯವಾಗಿ ಹೆಚ್ಚಿದ್ದು, ದೆಹಲಿ, ತಮಿಳುನಾಡು ಮತ್ತು ಇತರ ಹಲವು ಉತ್ತರ ರಾಜ್ಯಗಳಲ್ಲಿ ಪ್ರಕರಣಗಳು ಹೆಚ್ಚುತ್ತಿವೆ.
ದೇಶಾದ್ಯಂತ ಬುಧವಾರ 10168 ಪ್ರಕರಣಗಳು ದಾಖಲಾಗಿದ್ದು, 15 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಕಳೆದ ಏಳು ದಿನಗಳಲ್ಲಿ 47 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದು, ಹಿಂದಿನ ಏಳು ದಿನಗಳಲ್ಲಿ ದಾಖಲಾದ 26300 ಪ್ರಕರಣಗಳಿಗೆ ಹೋಲಿಸಿದರೆ ಇದು ಶೇಕಡ 80ರಷ್ಟು ಅಧಿಕ. ಇದೇ ಅವಧಿಯಲ್ಲಿ ಮೃತರ ಸಂಖ್ಯೆ 48 ರಿಂದ 85ಕ್ಕೇರಿದೆ.
ಗುರುವಾರ ತಡರಾತ್ರಿ ವೇಳೆಗೆ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 46 ಸಾವಿರ ಇತ್ತು. ವಾರದ ಹಿಂದೆ ಇದು 26 ಸಾವಿರ ಆಗಿತ್ತು. ಅಂತೆಯೇ ಟೆಸ್ಟ್ ಪಾಸಿಟಿವಿಟಿ ದರ ಹಿಂದಿನ ವಾರ 3.22% ಇದ್ದುದು ಇದೀಗ ಶೇಕಡ 4.46ಕ್ಕೇರಿದೆ.
ಕೇರಳದಲ್ಲಿ 3420 ಹೊಸ ಪ್ರಕರಣಗಳು ವರದಿಯಾಗಿದ್ದು, ಕಳೆದ ವರ್ಷದ ಜುಲೈ 13ರ ಬಳಿಕ ದಾಖಲಾದ ಗರಿಷ್ಠ ಪ್ರಕರಣ ಇದಾಗಿದೆ. ದೆಹಲಿ (1159) ಮತ್ತು ಮಹಾರಾಷ್ಟ್ರ (1155) ದಲ್ಲಿ ಕೂಡಾ ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗಿವೆ.