ವಿದ್ಯಾರ್ಥಿಗೆ ಪರೀಕ್ಷೆಗೆ ನಿರ್ಬಂಧ ಹೇರುವಾಗ ದಿಲ್ಲಿ ವಿ.ವಿ. ಬುದ್ಧಿ ಉಪಯೋಗಿಸಲಿಲ್ಲ: ಹೈಕೋರ್ಟ್
ಮೋದಿ ಸಾಕ್ಷ್ಯ ಚಿತ್ರ ಪ್ರದರ್ಶನ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಆಯೋಜಿಸಿದ್ದ ಆರೋಪದ ಮೇಲೆ ವಿದ್ಯಾರ್ಥಿಯೊಬ್ಬನಿಗೆ ಪರೀಕ್ಷೆಗಳಿಗೆ ನಿರ್ಬಂಧ ವಿಧಿಸುವ ನಿರ್ಧಾರ ತೆಗೆದುಕೊಳ್ಳುವಾಗಿ ದಿಲ್ಲಿ ವಿಶ್ವವಿದ್ಯಾನಿಲಯ ತನ್ನ ಬುದ್ದಿ ಉಪಯೋಗಿಸಲಿಲ್ಲ ಎಂದು ದಿಲ್ಲಿ ಉಚ್ಚ ನ್ಯಾಯಾಲಯ ಮಂಗಳವಾರ ಅಭಿಪ್ರಾಯಿಸಿದೆ.
ವಿಶ್ವವಿದ್ಯಾನಿಲಯದ ನಿರ್ಧಾರವನ್ನು ಪ್ರಶ್ನಿಸಿ ಸಂಶೋಧನಾ ವಿದ್ಯಾರ್ಥಿ ಲೋಕೇಶ್ ಚೌಗ್ ಸಲ್ಲಿಸಿದ ಮನವಿಯನ್ನು ಉಚ್ಚ ನ್ಯಾಯಾಲಯ ವಿಚಾರಣೆ ನಡೆಸಿತು. ಅರ್ಜಿಯ ಕುರಿತು ಮೂರು ದಿನಗಳ ಒಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ನ್ಯಾಯಾಲಯ ದಿಲ್ಲಿ ವಿಶ್ವವಿದ್ಯಾನಿಲಯಕ್ಕೆ ಸೂಚಿಸಿತು.
‘‘ನಿಮ್ಮದು ವಿಶ್ವವಿದ್ಯಾನಿಲಯ. ಈ ಆಕ್ಷೇಪಾರ್ಹ ಆದೇಶವು ನೀವು ಬುದ್ಧಿಯನ್ನು ಅನ್ವಯಿಸಿಲ್ಲ ಎಂಬುದನ್ನು ತೋರಿಸುತ್ತದೆ. ನೀವು ಈ ನಿರ್ಧಾರಕ್ಕೆ ಯಾಕೆ ಬಂದಿದ್ದೀರಿ ಎಂಬುದನ್ನು ಆದೇಶ ಪ್ರತಿಬಿಂಬಿಸಬೇಕು’’ ಎಂದು ನ್ಯಾಯಮೂರ್ತಿ ಪುರಶೈಂದ್ರ ಕುಮಾರ್ ಕೌರವ್ ತಿಳಿಸಿದ್ದಾರೆ.
ಜನವರಿ 27ರಂದು ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ಬಿಬಿಸಿ ಸಾಕ್ಷ್ಯಚಿತ್ರ ‘‘ಇಂಡಿಯಾ: ದಿ ಮೋದಿ ಕ್ವಶ್ಚನ್’’ ಅನ್ನು ಪ್ರದರ್ಶಿಸಲಾಗಿತ್ತು.





