ದಿಲ್ಲಿ: 16 ವರ್ಷದ ಬಾಲಕಿಯ ಬರ್ಬರ ಹತ್ಯೆಗೈದ ಆರೋಪಿಯ ಬಂಧನ
ಹೊಸದಿಲ್ಲಿ: ರವಿವಾರ ರಾಜಧಾನಿ ದಿಲ್ಲಿಯ ರೋಹಿಣಿ ಪ್ರದೇಶದಲ್ಲಿ 16 ವರ್ಷದ ಹುಡುಗಿಯನ್ನು ಚೂರಿಯಿಂದ ಸತತ ಇರಿದು ಬರ್ಬರವಾಗಿ ಹತ್ಯೆಗೈದ ಆರೋಪದ ಮೇಲೆ ಹುಡುಗಿಯ ಪ್ರೇಮಿ ಎಂದು ತಿಳಿಯಲಾದ 20 ವರ್ಷದ ಯುವಕನನ್ನು ಪೊಲೀಸರು ಉತ್ತರ ಪ್ರದೇಶದ ಬುಲಂದ್ಶಹರ್ನಿಂದ ಬಂಧಿಸಿದ್ದಾರೆ.
ಆರೋಪಿಯನ್ನು ಸಾಹಿಲ್ ಎಂದು ಗುರುತಿಸಲಾಗಿದೆ. ಆತ ಎಸಿ, ರೆಫ್ರಿಜರೇಟರ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದಾನೆ. ತನಿಖೆ ನಡೆಯುತ್ತಿದೆ ಎಂದು ದಿಲ್ಲಿ ಪೊಲೀಸ್ ಆಯುಕ್ತ ಸುಮನ್ ನಲ್ವಾ ಹೇಳಿದ್ದಾರೆ.
ಸಂತ್ರಸ್ತೆ ರವಿವಾರ ತನ್ನ ಸ್ನೇಹಿತೆಯ ಮಗನ ಹುಟ್ಟುಹಬ್ಬದ ಪಾರ್ಟಿಗೆಂದು ತೆರಳುತ್ತಿದ್ದಾಗ ಆರೋಪಿ ಆಕೆಯನ್ನು ಬರ್ಬರವಾಗಿ ರಸ್ತೆಯಲ್ಲಿಯೇ ಕೊಲೆಗೈದು ನಂತರ ಆಕೆಯ ಮೇಲೆ ಕಲ್ಲನ್ನೆತ್ತಿ ಹಾಕಿದ್ದ. ಹುಡುಗಿಯನ್ನು 20ಕ್ಕೂ ಹೆಚ್ಚು ಬಾರಿ ಇರಿಯಲಾಗಿದೆ ಎಂದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬರ್ಬರ ಹತ್ಯೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಆನ್ಲೈನ್ನಲ್ಲಿ ಹರಿದಾಡುತ್ತಿದೆ. ಯುವಕ ಆ ಹುಡುಗಿಯನ್ನು ಗೋಡೆಗೆ ಒತ್ತಿ ಹಿಡಿದು ನಂತರ ಇರಿಯುತ್ತಿರುವುದು ಕಾಣಿಸುತ್ತದೆ. ಅಲ್ಲಿ ಸಾಕಷ್ಟು ಜನರು ಅತ್ತಿತ್ತ ಹೋಗುತ್ತಿದ್ದರೂ ಯಾರೂ ಆತನನ್ನು ತಡೆಯಲು ಹೋಗಿರಲಿಲ್ಲ. ಸುಮಾರು 90 ಸೆಕೆಂಡ್ಗಳ ಈ ವೀಡಿಯೋದ ಕೊನೆಗೆ ಆತ ಆಕೆಯ ದೇಹವನ್ನು ಕಾಲಿನಿಂದ ತುಳಿಯುವುದು ಕಾಣಿಸುತ್ತದೆ.