ಅಮೆರಿಕ-ಉತ್ತರ ಕೊರಿಯಾ ಬಿಕ್ಕಟ್ಟು
-

ಕೊರಿಯಾ ಪರ್ಯಾಯ ದ್ವೀಪ ಪ್ರಾಂತದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ವಿಶ್ವ ಸಂಸ್ಥೆಯು ಸಾಕಷ್ಟು ಉತ್ತರಗಳನ್ನು ನೀಡಬೇಕಿದೆ. ವಿಶ್ವಸಂಸ್ಥೆಯ ಧ್ವಜದಡಿಯಲ್ಲಿ ಅಮೆರಿಕ ಮತ್ತು ದಕ್ಷಿಣ ಕೊರಿಯಾಗಳು, ಕೊರಿಯಾ ಯುದ್ಧದಲ್ಲಿ ನಡೆಸಿದ ಯುದ್ಧಾಪರಾಧಗಳ ಬಗ್ಗೆ ಅದು ಹೊಣೆಗಾರಿಕೆಯನ್ನು ಪ್ರದರ್ಶಿಸಬೇಕಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಯಾವುದೇ ವಿಷಯವನ್ನು ತಾಳ್ಮೆ ಮತ್ತು ವಿವೇಕಗಳಿಂದ ನಿರ್ವಹಿಸುವುದೇ ಇಲ್ಲವೆಂಬುದು ಈಗ ಜಗಜ್ಜಾಹೀರಾಗಿದೆ. ಅವರು ಅಧ್ಯಕ್ಷರಾದ ಮೇಲೆ ಏಶ್ಯಾದಲ್ಲಿ ಪ್ರಪ್ರಥಮ ಭೇಟಿ ನೀಡಿದ್ದು ಜಪಾನಿಗೆ. ಅಲ್ಲಿ ಅವರು ತಮ್ಮ ಪ್ರವಾಸವನ್ನು ಜಪಾನಿನ ಪ್ರಧಾನಿ ಶಿನ್ಜೋ ಅಬೆ ಅವರ ಜೊತೆ ಗಾಲ್ಫ್ ಆಟ ಆಡುವ ಮೂಲಕ ಪ್ರಾರಂಭಿಸಿದರು. ಜಪಾನಿನ ಪ್ರಧಾನಿ ಅಬೆಯವರು ತಮ್ಮ ದೇಶವು ಯಾವುದೇ ಅಂತಾರಾಷ್ಟ್ರೀಯ ವಿವಾದಗಳನ್ನು ಯುದ್ಧದ ಮೂಲಕ ಬಗೆಹರಿಸಿಕೊಳ್ಳುವ ಅವಕಾಶವನ್ನು ನಿಷೇಧಿಸುವ ಮತ್ತು ನಿಶಸ್ತ್ರ ಶಾಂತಿಯನ್ನು ಕಡ್ಡಾಯ ಮಾಡುವ ತಮ್ಮ ದೇಶದ ಸಂವಿಧಾನದ 9ನೇ ಕಲಮಿಗೆ ತಿದ್ದುಪಡಿತರುವ ಹುನ್ನಾರದಲ್ಲಿದ್ದಾರೆ. ಇದು ಜಾರಿಯಾದಲ್ಲಿ ಅಮೆರಿಕದ ಮಿಲಿಟರಿ ಕೈಗಾರಿಕಾ ಸಂಕೀರ್ಣದ ಉದ್ಯಮಪತಿಗಳು ತಮಗೆ ಬೃಹತ್ ಶಸ್ತ್ರಾಸ್ತ್ರ ಮಾರುಕಟ್ಟೆ ದೊರೆಯುವ ನಿರೀಕ್ಷೆಯಲ್ಲಿದ್ದಾರೆ. ಅದರಲ್ಲಿ ಅಮೆರಿಕದ ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಮಾರುಕಟ್ಟೆ ಮೊದಲನೆಯದು. ಹೀಗಾಗಿ ಗಾಲ್ಫ್ ಆಟದ ನಂತರ ಇಬ್ಬರು ಪ್ರಮುಖರು ನಡೆಸಿದ ಚರ್ಚೆಯಲ್ಲಿ ಸಹಜವಾಗಿ ಉತ್ತರ ಕೊರಿಯಾ ಸೃಷ್ಟಿಸುತ್ತಿರುವ ಯುದ್ಧಕೋರ ವಾತಾವರಣವು ಹೆಚ್ಚಿನ ಸಮಯವನ್ನು ಕಬಳಿಸಿತು. ಆ ನಂತರ ನಡೆದ ಪತ್ರಿಕಾಗೋಷ್ಟಿಯಲ್ಲಿ ಉತ್ತರ ಕೊರಿಯಾಗೆ ಸಂಬಂಧಪಟ್ಟಂತೆ ಜಪಾನ್ ಮತ್ತು ಅಮೆರಿಕ ನೂರಕ್ಕೆ ನೂರು ಭಾಗ ಒಂದೇ ಅಭಿಪ್ರಾಯವನ್ನು ಹೊಂದಿದೆಯೆಂದು ಜಪಾನಿ ಪ್ರಧಾನಿ ಅಬೆ ಮತ್ತೊಮ್ಮೆ ಪುನರುಚ್ಚರಿಸಿದರು. ಇನ್ನೂ ಟ್ರಂಪ್ ಅಂತೂ ಕೇಳಲೇ ಬೇಕಿಲ್ಲ.
ಅಮೆರಿಕದ ಭದ್ರತೆಗೆ ಬೆದರಿಕೆಯೊಡ್ಡುತ್ತಿರುವ ಉತ್ತರ ಕೊರಿಯಾವನ್ನು ನಿಯಂತ್ರಿಸಲು ತಮ್ಮ ಮುಂದೆ, ಯುದ್ಧ ಹಾಗೂ ಅಣ್ವಸ್ತ್ರಗಳನ್ನೂ ಒಳಗೊಂಡಂತೆ ಎಲ್ಲಾ ಆಯ್ಕೆಗಳು ಮುಕ್ತವಾಗಿದೆಯೆಂದೂ ಅವರು ಮಗದೊಮ್ಮೆ ಘೊಷಿಸಿದರು. ತಮ್ಮ ಅಂತಾರಾಷ್ಟ್ರೀಯ ಪ್ರವಾಸವನ್ನು ಮುಂದುವರಿಸಿ ದಕ್ಷಿಣ ಕೊರಿಯಾಗೆ ಭೇಟಿ ನೀಡಿದ ಟ್ರಂಪ್ ಅವರು ಅದರ ರಾಷ್ಟ್ರೀಯ ಸಂಸತ್ತನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಉತ್ತರ ಕೊರಿಯಾವನ್ನು ಖಂಡಿಸುವ ಭರದಲ್ಲಿ ತಮ್ಮ ಎಲ್ಲಾ ಪ್ರತಿಗಾಮಿ ಧೋರಣೆಗಳನ್ನು ಮತ್ತು ಯುದ್ಧಕೋರತನವನ್ನು ನಗ್ನವಾಗಿ ಪ್ರದರ್ಶಿಸಿದರು.
ಉತ್ತರ ಕೊರಿಯಾವನ್ನು ಈ ರೀತಿ ಸೈತಾನೀಕರಿಸುತ್ತಿರುವುದು ಹೊಸದೇನಲ್ಲ- 1945ರಲ್ಲಿ ಅಮೆರಿಕದ ಆಕ್ರಮಣಶೀಲ ಸೈನ್ಯವು ದಕ್ಷಿಣ ಕೊರಿಯಾಗೆ ಬಂದು ನೆಲೆನಿಂತಾಗಿನಿಂದಲೂ ಉತ್ತರ ಕೊರಿಯಾದ ಬಗ್ಗೆ ಈ ಧೋರಣೆ ಅಮೆರಿಕದ ಸ್ಥಾಯಿ ವಿದೇಶಾಂಗ ನೀತಿಯಾಗಿದೆ. ಅದಕ್ಕೆ ಒಂದು ತಿಂಗಳ ಮುಂಚೆ, 1945ರ ಆಗಸ್ಟ್‌ನಲ್ಲಿ ರಶ್ಯಾದ ಕೆಂಪು ಸೈನ್ಯವು ಕೊರಿಯಾವನ್ನು ಪ್ರವೇಶಿಸಿ ಆಗಸ್ಟ್ ಮಧ್ಯದ ವೇಳೆಗೆ ಜಪಾನಿನ ಶರಣಾಗತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿತು. ಆದರೆ ಯಾವುದೋ ಕಾರಣಕ್ಕೆ ಅದು ತನ್ನ ಎರಡನೇ ವಿಶ್ವ ಯುದ್ಧದ ಮೈತ್ರಿಕೂಟದ ಸ್ನೇಹಿತರ ಮಾತಿಗೆ ಮನ್ನಣೆ ನೀಡಿ ತನ್ನ ಸೈನ್ಯವು 38ನೇ ಅಕ್ಷಾಂಶವನ್ನು ದಾಟದಂತೆ ತಡೆಹಿಡಿಯಿತು. ಅಮೆರಿಕದ ಸೈನ್ಯವು ಬರುವ ಮುಂಚೆ, ಸೆಪ್ಟಂಬರ್ ಆದಿಭಾಗದಲ್ಲಿ ಸಿಯೋಲ್‌ನಲ್ಲಿ ನಡೆದ ರಾಷ್ಟ್ರೀಯ ಸಮ್ಮೇಳನದಲ್ಲಿ ವಿಕೇಂದ್ರಿತ ಪ್ರಜಾ ಸಮಿತಿಗಳ ನಾಯಕತ್ವದಲ್ಲಿ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾ- ಕೊರಿಯಾದ ಪ್ರಜಾ ಗಣರಾಜ್ಯ-ವನ್ನು ಘೋಷಿಸಲಾಗಿತ್ತು. ಇದನ್ನು ಬಹುಸಂಖ್ಯಾತ ಕೊರಿಯಾನ್ನರು ಮಾತ್ರವಲ್ಲದೆ ಉತ್ತರದಲ್ಲಿದ್ದ ಸೋವಿಯತ್ ಪಡೆಗಳೂ ಕೂಡಾ ಮಾನ್ಯ ಮಾಡಿದ್ದವು. ಆದರೆ ಕೊರಿಯಾದ ಬಲಪಂಥೀಯರ ಜೊತೆ ಮೈತ್ರಿ ಮಾಡಿಕೊಂಡ ಅಮೆರಿಕದ ಆಕ್ರಮಣ ಪಡೆಗಳಿಗೆ ಬೇರೆಯದೇ ಆದ ಯೋಜನೆಯೊಂದಿತ್ತು. ಅವರು ದಕ್ಷಿಣ ಪ್ರಾಂತದಲ್ಲಿ ಪ್ರಜಾ ಸಮಿತಿಗಳನ್ನು ಮತ್ತು ಪ್ರಜಾ ಗಣರಾಜ್ಯವನ್ನು ಬರಖಾಸ್ತು ಮಾಡಿದ್ದು ಮಾತ್ರವಲ್ಲದೆ ದೇಶದ ವಿಭಜನೆಯನ್ನು ಶಾಶ್ವತಗೊಳಿಸಿತು.
ಜಪಾನಿ ಶರಣಾಗತಿ ಮತ್ತು ಪೂರ್ಣ ಪ್ರಮಾಣದ ಯುದ್ಧ ಪ್ರಾರಂಭವಾದ 1950ರ ಜೂನ್ ನಡುವಿನ ಅವಧಿಯಲ್ಲಿ ದಕ್ಷಿಣ ಪ್ರಾಂತದಲ್ಲಿದ್ದ ಪ್ರಜಾ ಸಮಿತಿಗಳನ್ನು ಮತ್ತಿತರ ಜನಪ್ರಿಯ ಪ್ರಜಾ ಸಂಘಟನೆಗಳನ್ನು ನಾಶಗೊಳಿಸುವ ಪ್ರಕ್ರಿಯೆಯಲ್ಲಿ ವಿಶ್ವಸಂಸ್ಥೆಯ ನಿಗಾದಡಿಯಲ್ಲೇ ಒಂದು ಲಕ್ಷಕ್ಕೂ ಹೆಚ್ಚು ಜನರ ಕಗ್ಗೊಲೆಯಾಯಿತು. ಹಾಗೆ ನೋಡಿದರೆ ಅಮೆರಿಕದ ಮಧ್ಯಪ್ರವೇಶದ ಮೂಲಕವೇ ಅಂತರ್ಯುದ್ಧವೆಂದು ಕರೆಯಬಹುದಾದ ಕೊರಿಯಾ ಯುದ್ಧದ ಮೊದಲ ಹಂತವು 1945ರಲ್ಲೇ ಪ್ರಾರಂಭವಾಯಿತೆಂದು ಹೇಳಬಹುದು. 1950-53ರ ನಡುವೆ ನಡೆದ ಯುದ್ಧವು ಇದೇ ಯುದ್ಧದ ಮತ್ತೊಂದು ರೀತಿಯ ಮುಂದುವರಿಕೆಯಾಗಿದ್ದು ಅದರಲ್ಲಿ ನಪಾಮನ್ನು ಒಳಗೊಂಡಂತೆ ಅಮೆರಿಕವು ತಾನು ಬಯಸಿದ ಎಲ್ಲಾ ಶಸ್ತ್ರಾಸ್ತ್ರಗಳನ್ನು ಕೊರಿಯಾನ್ನರ ವಿರುದ್ಧ ಪ್ರಯೋಗಿಸಿತು. 1953ರಲ್ಲಿ ಕದನ ವಿರಾಮಕ್ಕೆ ಸಹಿ ಹಾಕುವ ಮೂಲಕ ಯುದ್ಧವು ಕೊನೆಗೊಂಡರೂ ಒಂದು ಶಾಂತಿ ಒಪ್ಪಂದ ಮಾತ್ರ ಕುದುರಲೇ ಇಲ್ಲ. ಹೀಗಾಗಿ ತಾಂತ್ರಿಕವಾಗಿ ಅಮೆರಿಕ ಮತ್ತು ಉತ್ತರ ಕೊರಿಯಾ ಸದಾ ಯುದ್ಧ ಸನ್ನದ್ಧ ಸ್ಥಿತಿಯಲ್ಲೇ ಉಳಿದುಬಿಟ್ಟಿವೆ.
ಅಮೆರಿಕವು ಉತ್ತರ ಕೊರಿಯಾವನ್ನು ದುಷ್ಟ ಶಕ್ತಿಯೆಂದು ಬಣ್ಣಿಸುವುದನ್ನು ಮುಂದುವರಿಸಿತು. 1970ರಲ್ಲಿ ಚೀನಾವು ಅಮೆರಿಕದೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಪುನರ್ ಸ್ಥಾಪಿಸಿಕೊಂಡಿತು. 1990ರಲ್ಲಿ ಅಮೆರಿಕ-ರಶ್ಯಾಗಳ ಶೀತಲ ಸಮರ ಕೊನೆಗೊಂಡಿತು. ಈ ಎಲ್ಲಾ ಬೆಳವಣಿಗೆಗಳಿಂದಾಗಿ ಆವರೆಗೆ ಉತ್ತರ ಕೊರಿಯಾಗಿದ್ದ ಅಣ್ವಸ್ತ್ರ ರಾಷ್ಟ್ರಗಳ ರಕ್ಷಾ ಕವಚ ಇಲ್ಲದಂತಾಯಿತು. ಹೀಗಾಗಿ ತಾನೇ ಖುದ್ದು ಅಣ್ವಸ್ತ್ರ ರಾಷ್ಟ್ರವಾಗುವ ಜರೂರು ಉದ್ಭವಿಸಿತು. ಹೀಗಾಗಿ ಅದು ಒಂದೆಡೆ ತಾನೇ ಅಣ್ವಸ್ತ್ರಗಳನ್ನು ಉತ್ಪಾದಿಸುವ ಕ್ರಮಗಳಿಗೆ ಮುಂದಾಯಿತು. ಮತ್ತೊಂದೆಡೆ ಜಪಾನಿನೊಡನೆ ಸಂಬಂಧಗಳನ್ನು ಸುಧಾರಿಸಿಕೊಳ್ಳುವ ಪ್ರಯತ್ನದಲ್ಲೂ ತೊಡಗಿತು. ಅದರ ಪರಿಣಾಮವಾಗಿಯೇ 2002ರ ಸೆಪ್ಟಂಬರ್‌ನಲ್ಲಿ ಪ್ಯಾಂಗ್‌ಯಾಂಗ್ ಘೋಷಣೆಯಾಯಿತು. ಆದರೆ ಆ ವೇಳೆಗಾಗಲೇ ಅಮೆರಿಕವು ಇರಾಕ್, ಇರಾನ್‌ನೊಂದಿಗೆ ಉತ್ತರ ಕೊರಿಯಾವನ್ನು ದುಷ್ಟ ಕೂಟವೆಂದು ವರ್ಗೀಕರಿಸಿ ಅವುಗಳು ಅಸ್ತಿತ್ವದಲ್ಲಿರುವ ಹಕ್ಕನ್ನೇ ಪ್ರಶ್ನೆ ಮಾಡಲು ಪ್ರಾರಂಭಿಸಿತ್ತು. ಉತ್ತರ ಕೊರಿಯಾವು ಅಣ್ವಸ್ತ್ರಗಳಿಗೆ ಬೇಕಿರುವ ಯುರೇನಿಯಂ ಎನ್‌ರಿಚ್‌ಮೆಂಟ್ ಕಾರ್ಯಕ್ರಮದಲ್ಲಿ ತೊಡಗಿಕೊಳ್ಳುತ್ತಿದ್ದಂತೆ 2006ರ ಸೆಪ್ಟ್ಟಂಬರ್ ವೇಳೆಗೆ ಉತ್ತರ ಕೊರಿಯಾದೊಡನೆ ತನ್ನ ಸ್ನೇಹವನ್ನು ಕಡಿತಗೊಳಿಸಿ, ಅದರ ವಿರುದ್ಧ ತನ್ನ ಜೊತೆಗೂಡಲು ಅಮೆರಿಕವು ಜಪಾನಿನ ಮನ ಒಲಿಸಿತು.
ನಂತರದ ಬೆಳವಣಿಗೆಯಲ್ಲಿ 2006ರ ಅಕ್ಟೋಬರ್‌ನಲ್ಲಿ ಉತ್ತರ ಕೊರಿಯಾವು ತನ್ನ ಮೊಟ್ಟಮೊದಲ ಭೂಗತ ಅಣ್ವಸ್ತ್ರ ಪರೀಕ್ಷೆಯನ್ನು ನಡೆಸಿತು. 2016ರ ಜನವರಿಯ ವೇಳೆಗೆ ಅದು ಅಂತಹ ನಾಲ್ಕು ಪರೀಕ್ಷೆಗಳನ್ನು ನಡೆಸಿತ್ತು. ಅದರ ಜೊತೆಜೊತೆಗೆ ಉತ್ತರ ಕೊರಿಯಾವು ದೂರವಾಹಕ ಕ್ಷಿಪಣಿ ಉಡಾವಣಾ ಸಾಮರ್ಥ್ಯವನ್ನೂ ಬೆಳೆಸಿಕೊಂಡಿತು. ಪರಿಣಾಮವಾಗಿ 2017ರ ಜುಲೈನಲ್ಲಿ ಅದು ತನ್ನ ಪ್ರಪ್ರಥಮ ಖಂಡಾಂತರ ಕ್ಷಿಪಣಿ ಉಡಾವಣೆಯ ಪರೀಕ್ಷಾರ್ಥ ಪ್ರಯೋಗವನ್ನು ನಡೆಸಿತು. ವಿಶ್ವ ಸಂಸ್ಥೆಯ ತೀವ್ರ ಸ್ವರೂಪದ ಸಾಲುಸಾಲು ನಿರ್ಬಂಧಗಳಾಗಲೀ, ವಿಶ್ವ ಸಂಸ್ಥೆಯ ಸರ್ವಸದಸ್ಯ ಸಭೆಯ ವೇದಿಕೆಯಿಂದಲೇ ಅಮೆರಿಕದ ಅಧ್ಯಕ್ಷ ಹಾಕಿದ ಸಂಪೂರ್ಣ ವಿನಾಶದ ಬೆದರಿಕೆಯಾಗಲೀ, ಉತ್ತರ ಕೊರಿಯಾದ ಮೇಲೆ ಆಕ್ರಮಣ ಮಾಡಿ ಸರ್ವನಾಶ ಮಾಡಲು ಅಮೆರಿಕ ಮತ್ತು ದಕ್ಷಿಣ ಕೊರಿಯಾ ಪಡೆಗಳು ನಡೆಸುತ್ತಿರುವ ಜಂಟಿ ತಾಲೀಮುಗಳಾಗಲೀ (ಇದಕ್ಕಾಗಿ ಅಮೆರಿಕಕ್ಕೆ ಅತ್ಯಗತ್ಯವಾಗಿ ಬೇಕಿರುವ ಸೇನಾ ನೆಲೆಗಳನ್ನು ಜಪಾನ್ ಒದಗಿಸಿದೆ)ಉತ್ತರ ಕೊರಿಯಾವನ್ನು ಕಿಂಚಿತ್ತೂ ಅಲುಗಾಡಿಸಿಲ್ಲ. ಹಾಗೆ ನೋಡಿದರೆ ಉತ್ತರ ಕೊರಿಯಾವು ಈಗ ಗಳಿಸಿಕೊಂಡಿರುವ ಅಣ್ವಸ್ತ್ರ ಶಕ್ತಿಯೇ ಅದರ ಅಸ್ಥಿತ್ವಕ್ಕೆ ಬೇಕಿರುವ ಭದ್ರತೆಯನ್ನು ಒದಗಿಸಿದೆ ಎಂದರೆ ತಪ್ಪಾಗಲಾರದು.
ಕೊರಿಯಾ ಪರ್ಯಾಯ ದ್ವೀಪ ಪ್ರಾಂತದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ವಿಶ್ವ ಸಂಸ್ಥೆಯು ಸಾಕಷ್ಟು ಉತ್ತರಗಳನ್ನು ನೀಡಬೇಕಿದೆ. ವಿಶ್ವಸಂಸ್ಥೆಯ ಧ್ವಜದಡಿಯಲ್ಲಿ ಅಮೆರಿಕ ಮತ್ತು ದಕ್ಷಿಣ ಕೊರಿಯಾಗಳು, ಕೊರಿಯಾ ಯುದ್ಧದಲ್ಲಿ ನಡೆಸಿದ ಯುದ್ಧಾಪರಾಧಗಳ ಬಗ್ಗೆ ಅದು ಹೊಣೆಗಾರಿಕೆಯನ್ನು ಪ್ರದರ್ಶಿಸಬೇಕಿದೆ. ಏನಿಲ್ಲವೆಂದರೂ 2005-10ರ ನಡುವಿನ ಅವಧಿಯಲ್ಲಿ ಅಸ್ತಿತ್ವದಲ್ಲಿದ್ದ ಸತ್ಯ ಮತ್ತು ಮರುಸಂಧಾನ ಆಯೋಗದೆದುರು (ಟೃಥ್ ಆ್ಯಂಡ್ ರಿಕಾನ್ಸಿಲೇಷನ್ ಕಮಿಷನ್) ಸ್ವತಃ ದಕ್ಷಿಣ ಕೊರಿಯಾವೇ ಒಪ್ಪಿಕೊಂಡ ಅಪರಾಧಗಳ ಬಗ್ಗೆಯಾದರೂ ಅದು ಕ್ರಮಗಳನ್ನು ತೆಗೆದುಕೊಳ್ಳಲೇ ಬೇಕಿದೆ. ಅಷ್ಟು ಮಾತ್ರವಲ್ಲದೆ ಕಳೆದ ಏಳು ದಶಕಗಳಿಂದ ಅಮೆರಿಕವು ಉತ್ತರ ಕೊರಿಯಾದ ಮೇಲೆ ಹಾಕುತ್ತಲೇ ಬಂದಿರುವ ಅಣ್ವಸ್ತ್ರ ಬೆದರಿಕೆಯ ಬಗ್ಗೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಿರುವ ಬಗ್ಗೆಯೂ ವಿಶ್ವಸಂಸ್ಥೆಯು ಜವಾಬ್ದಾರಿಯನ್ನು ಹೊರಬೇಕಿದೆ. ವಾಸ್ತವವೇನೆಂದರೆ 38ನೇ ಅಕ್ಷಾಂಶದ ಎರಡೂ ಬದಿಯಲ್ಲಿ ಪ್ರಗತಿಪರ ಶಾಂತಿಯುತ ರಾಜಕೀಯ ನಡೆಯದಿರಲು, ಎರಡು ಕಡೆಯವರು ಕೂತು ಮರುಸಂಧಾನದ ಮಾತುಕತೆ ಆಡದಂತಾಗದಿರಲು ಮತ್ತು ಆ ಮೂಲಕ ಕೊರಿಯಾನ್ನರೇ ನಿರ್ಧರಿಸಿಕೊಳ್ಳುವ ಪರಸ್ಪರ ಸಮ್ಮತಿ ಇರುವ ಶರತ್ತುಗಳನ್ವಯ ಎರಡು ದೇಶಗಳು ಒಂದಾಗದಿರಲು ಏನಾದರೂ ದೊಡ್ಡ ಅಡ್ಡಿಯೊಂದಿದ್ದರೆ ಅದು ಅಮೆರಿಕ ಸಾಮ್ರಾಜ್ಯಶಾಹಿಯೇ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
ಕೃಪೆ:Economic and Political Weekly
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.