ಸಂವೇದನೆಯ ಒಡಲು ಬರಿದಾಗುತ್ತಿದೆ
-

ಇತಿಹಾಸ ಕೆದಕಬೇಕಿಲ್ಲ. ಕಣ್ಣೆದುರಿನಲ್ಲೇ ಸತ್ಯ ನಿಂತಿದೆ. ಆದರೆ ನಾವು ತೊಟ್ಟಿರುವ ಮಸೂರಗಳು ನಮ್ಮನ್ನು ನಿರ್ಲಿಪ್ತರನ್ನಾಗಿಸುತ್ತಿವೆ, ಕೆಲವೊಮ್ಮೆ ನಿಷ್ಕ್ರಿಯರನ್ನಾಗಿಸುತ್ತಿವೆ. ಆದರೆ ನಮ್ಮ ಸಂವೇದನಾಶೀಲ ಮನಸುಗಳಿಗೆ ಚರಮಗೀತೆ ಹಾಡಲು ಸದೃಢ ಭೂಮಿಕೆ ನಿರ್ಮಿಸಿರುವವರು ಹೆಚ್ಚು ಕ್ರಿಯಾಶೀಲರಾಗುತ್ತಿದ್ದಾರೆ. ಹಾಗಾಗಿಯೇ ತಬ್ರೇಝ್, ಪಾಯಲ್, ಪ್ರತಾಪ, ಅಖ್ಲಾಕ್, ಪೆಹ್ಲ್ಲೂಖಾನ್, ಸಂಜೀವ್ ಭಟ್ ಅಂತಹವರು ಬಲಿಪಶುಗಳಾಗಿದ್ದಾರೆ. ಪ್ರಕೃತಿ ಬರಿದಾಗುತ್ತಿದೆ, ಪ್ರಕೃತಿಯ ಒಡಲು ಬರಿದಾಗುತ್ತಿದೆ, ಜಲಸಂಪತ್ತು ಬರಿದಾಗುತ್ತಿದೆ, ವನ ಸಂಪತ್ತು ಬರಿದಾಗುತ್ತಿದೆ, ಹಾಗೆಯೇ ಮಾನವ ಸಮಾಜದ ಸಂವೇದನೆಯ ಒಡಲೂ ಬರಿದಾಗುತ್ತಿದೆ.
ಒಂದು ಸಮಾಜದ ಸ್ವಾಸ್ಥ್ಯ ಮತ್ತು ಜೀವಂತಿಕೆ ಇರುವುದು ಬಾಹ್ಯ ಲೋಕದ ಆಡಂಬರಗಳಲ್ಲಿ ಅಲ್ಲ ಆಂತರ್ಯದಲ್ಲಿ ಅಡಗಿರುವ ಸಂವೇದನೆ ಮತ್ತು ಸೂಕ್ಷ್ಮತೆಯಲ್ಲಿ. ಭಾರತದ ಇಂದಿನ ಪರಿಸ್ಥಿತಿಯನ್ನು ಗಮನಿಸಿದಾಗ ನಾವು ಇದನ್ನು ಕಳೆದುಕೊಂಡಿದ್ದೇವೆ ಎನಿಸುತ್ತದೆ. ಅಮಾಯಕರ ಸಾವು ನಮ್ಮನ್ನು ಬಾಧಿಸಿ ದಶಕಗಳೇ ಕಳೆದಿವೆ. ಅಸಹಾಯಕರ ಸಾವು ನಮ್ಮನ್ನು ವಿಚಲಿತಗೊಳಿಸಿ ವರುಷಗಳೇ ಕಳೆದಿವೆ. ಶೋಷಿತರ ಆಕ್ರಂದನ ನಮ್ಮ ಪ್ರಜ್ಞೆಯನ್ನು ತಟ್ಟುತ್ತಲೇ ಇಲ್ಲ. ಸಾವಿನ ಮೆರವಣಿಗೆಗಳೂ ನಮ್ಮಿಳಗೆ ಬುದ್ಧ ಪ್ರಜ್ಞೆಯನ್ನು ಬಡಿದೆಬ್ಬಿಸುತ್ತಿಲ್ಲ. ಇದು ಸಾರ್ವತ್ರಿಕ ಅಲ್ಲದಿದ್ದರೂ ನವ ಭಾರತದ ಒಂದು ಚಿತ್ರಣ ಎನ್ನಲು ಅಡ್ಡಿಯಿಲ್ಲ. ರಕ್ತಸಿಕ್ತ ಕೈಗಳು ಜನಸ್ತೋಮದ ಮುಂದೆ ನಿಂತು ವಂದಿಸುವಾಗ ಬೆರಳು ಸಂದುಗಳಿಂದ ತೊಟ್ಟಿಕ್ಕುವ ನೆತ್ತರ ಹನಿ ನಮ್ಮ ಮನುಜ ಪ್ರಜ್ಞೆಯನ್ನು ತೋಯಿಸುತ್ತಿಲ್ಲ. ಸೌಹಾರ್ದ, ಶಾಂತಿ, ಸಹಿಷ್ಣುತೆ, ಭ್ರಾತೃತ್ವ, ಸಮಾನತೆ ಮತ್ತು ಪುಟವಿಟ್ಟ ಚಿನ್ನದಂತೆ ಮಾನವೀಯತೆಯ ಬಗ್ಗೆಯೂ ಮಾತನಾಡುತ್ತಿದ್ದೇವೆ. ಆದರೆ ಈ ಮಾತಿನ ಕೋಟೆಗಳ ಅಡಿಯಲ್ಲಿ ನಲುಗಿಹೋಗುತ್ತಿರುವ ಜೀವಂತಿಕೆ ನಮ್ಮ ಗಮನಕ್ಕೆ ಬರುತ್ತಿಲ್ಲ. ಭ್ರಮೆ ಮತ್ತು ವಾಸ್ತವದ ನಡುವೆ ಇರುವ ಸೂಕ್ಷ್ಮ ಅಂತರವನ್ನು ಗ್ರಹಿಸಲೂ ವಿಫಲರಾಗುತ್ತಿದ್ದೇವೆ. ಪಶ್ಚಾತ್ತಾಪ, ವಿಷಾದ ಮತ್ತು ಕಂಗಳಿಂದ ಒಸರುವ ಉಪ್ಪುನೀರು ಈ ಅಂತರವನ್ನು ನೇಪಥ್ಯಕ್ಕೆ ತಳ್ಳುತ್ತಿದೆ.
ಸಾವನ್ನು ಸಂಭ್ರಮಿಸುವ ಒಂದು ಪರಂಪರೆಯನ್ನು ತಿಳಿದೋ ತಿಳಿಯದೆಯೋ ಒಪ್ಪಿಕೊಂಡಿರುವ ಭಾರತದ ಸುಸಂಸ್ಕೃತ ಸಮಾಜದ ಒಂದು ವರ್ಗ ಬಹುಶಃ ನವ ಭಾರತ ನಿರ್ಮಾಣದ ಹುರುಪಿನಲ್ಲಿ ಮಾನವ ಸಂವೇದನೆಯನ್ನೇ ಕಳೆದುಕೊಂಡಿದೆ ಎನಿಸುತ್ತಿದೆ. ನಿಜ, ರಾಜಕೀಯ ವ್ಯತ್ಯಯಗಳನ್ನು ಬದಿಗಿಟ್ಟು ನೋಡಿದರೂ ಭಾರತದಲ್ಲಿ ಸಾವು ಸದಾ ಸಾಪೇಕ್ಷ ಮೌಲ್ಯವನ್ನೇ ಹೊಂದಿದೆ. ನೈಸರ್ಗಿಕ ವಿಕೋಪ, ಅನಿರೀಕ್ಷಿತ ಅಪಘಾತಗಳು, ರಾಜಕೀಯ ಗಲಭೆ, ಕೋಮು ರಾಜಕಾರಣ, ಭಯೋತ್ಪಾದನೆ, ಮತೀಯ ಹತ್ಯಾಕಾಂಡ ಹೀಗೆ ಸಾವಿಗೆ ಕಾರಣವಾಗುವ ಎಲ್ಲವೂ ಮಾರುಕಟ್ಟೆಯ ಸರಕುಗಳಂತೆ ಮೌಲ್ಯೀಕರಣ, ಅಪಮೌಲ್ಯೀಕರಣಕ್ಕೊಳಗಾಗುತ್ತಿವೆ. ಹಲ್ಲೆ, ಆಕ್ರಮಣ, ದೊಂಬಿ, ಗಲಭೆ ಮತ್ತಿತರ ಹಿಂಸಾತ್ಮಕ ಕೃತ್ಯಗಳೂ ಸಹ ಇದೇ ಚೌಕಟ್ಟಿನಲ್ಲಿ ಸಿಲುಕಿವೆ. ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆ ಮತ್ತು ಈ ವ್ಯವಸ್ಥೆಯನ್ನು ಕಾಡುವ ಶ್ರೇಷ್ಠತೆಯ ವ್ಯಸನ ಬಹುಶಃ ಎಲ್ಲ ಜಾತಿಗಳಿಗೂ ಹರಡಿದ್ದು ಹಿಂಸೆ, ನೋವು ಮತ್ತು ಸಾವು ಸಹಿಸಬಹುದಾದ ವಿದ್ಯಮಾನಗಳಾಗಿಬಿಟ್ಟಿವೆ. ಅತ್ಯಾಚಾರಕ್ಕೊಳಗಾದ ಮಹಿಳೆ ಇರಲಿ, ಹಲ್ಲೆಗೊಳಗಾದ ಅಸ್ಪಶ್ಯನಿರಲಿ ಅಥವಾ ಥಳಿತಕ್ಕೊಳಗಾದ ಮುಸಲ್ಮಾನ ಇರಲಿ ಎಲ್ಲರೂ ಸಹ ಶ್ರೇಷ್ಠತೆಯ ವ್ಯಸನದಿಂದ ಸೃಷ್ಟಿಯಾಗುವ ನಿರ್ಲಿಪ್ತತೆಯ ಪರಿಣಾಮ ನಿರ್ಲಕ್ಷ್ಯಕ್ಕೊಳಗಾಗುತ್ತಾರೆ, ಕೆಲವೊಮ್ಮೆ ಅವಹೇಳನಕ್ಕೂ ಗುರಿಯಾಗುತ್ತಾರೆ.
ಹಾಗಾಗಿಯೇ ಗುಂಡ್ಲುಪೇಟೆಯ ಪ್ರತಾಪ ನಮ್ಮ ನಾಗರಿಕ ಪ್ರಜ್ಞೆಯನ್ನು ಕದಡುವುದಿಲ್ಲ. ಆಂಧ್ರಪ್ರದೇಶದಲ್ಲಿ ನಡೆಯುವ ಮಾರ್ಯಾದಾ ಹತ್ಯೆ ನಮ್ಮನ್ನು ವಿಚಲಿತಗೊಳಿಸುವುದಿಲ್ಲ. ಜಾರ್ಖಂಡ್‌ನ ತಬ್ರೇಝ್ ನಮ್ಮವನೇ ಎಂದು ನಾಗರಿಕ ಸಮಾಜ ಭಾವಿಸುವುದೇ ಇಲ್ಲ. ಮತ್ತೊಂದೆಡೆ ಬಿಜೆಪಿ ನಾಯಕ ವಿಜಯವರ್ಗೀಯ ಅಧಿಕಾರಿಯೊಬ್ಬರನ್ನು ಮನಬಂದಂತೆ ಥಳಿಸಿದರೆ ಅದು ರಾಜಕೀಯ ಸ್ವರೂಪ ಪಡೆಯುತ್ತದೆಯೇ ಹೊರತು ನಾಗರಿಕ ಸಮಾಜದ ಒಂದು ಕೊಳಕು ಅಭಿವ್ಯಕ್ತಿಯಾಗಿ ಕಾಣುವುದೇ ಇಲ್ಲ. ಗುಂಡ್ಲುಪೇಟೆಯ ಪ್ರತಾಪ ನಮ್ಮ ನಡುವಿನ ನಗ್ನಮುನಿಯಂತೆ ಕಾಣುತ್ತಾನೆ. ಮೇಲ್ಜಾತಿಯ ಪ್ರಭಾವಕ್ಕೊಳಗಾಗಿ ಒಬ್ಬ ಅಮಾಯಕ ವ್ಯಕ್ತಿಯನ್ನು ಬೆತ್ತಲೆಗೊಳಿಸುವ ಒಂದು ವಿಕೃತ ಸಮಾಜವನ್ನು ನಮಗೇ ಅರಿವಿಲ್ಲದೆ ನಾವು ಕಟ್ಟಿಬಿಟ್ಟಿದ್ದೇವೆ. ಸ್ಥಳೀಯ ದಲಿತ ಸಂಘಟನೆಗಳ ಉಗ್ರ ಪ್ರತಿಭಟನೆ, ಹೋರಾಟ, ಅಹವಾಲು ಮತ್ತು ಅರ್ಜಿಗಳು ವಿಧಾನಸೌಧದ ಮೆಟ್ಟಿಲುಗಳಲ್ಲೇ ಅಂತ್ಯ ಕಾಣುತ್ತವೆ. ಏಕೆಂದರೆ ಅಧಿಕಾರ ಕೇಂದ್ರದ ನಿರ್ವಾಹಕರ ಚಿತ್ತ ಬೇರೆಡೆ ಇರುತ್ತದೆ. ಅತ್ತ ತಬ್ರೇಝ್ ಸಂಸತ್ತಿನ ಆವರಣವನ್ನೂ ಪ್ರವೇಶಿಸುವುದಿಲ್ಲ. ಏಕೆಂದರೆ ಪಶ್ಚಿಮ ಬಂಗಾಳದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ರಾಜಕೀಯ ಕಗ್ಗೊಲೆಗಳು ಹೆಚ್ಚು ಪ್ರಾಶಸ್ತ್ಯ ಪಡೆಯುತ್ತವೆ. ತಬ್ರೇಝ್‌ನ ಸಾವಿಗೆ ಒಂದು ಕಾರಣ ಇದೆ ಅಲ್ಲವೇ? ಈ ಕಾರಣದ ಸೃಷ್ಟಿಕರ್ತರು ಕ್ಷಮಿಸಿಬಿಡಿ ಎಂದು ಗೋಗರೆದಾಗ ಅವರ ಬೆರಳ ಸಂದುಗಳಿಂದ ತೊಟ್ಟಿಕ್ಕುವ ನೆತ್ತರಹನಿಗಳು ನಮಗೆ ಗೋಚರಿಸುವುದೇ ಇಲ್ಲ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ನೆತ್ತರು ಮತ್ತು ನೀರಿನ ನಡುವಿನ ಅಂತರ ಕಡಿಮೆಯಾಗಿಬಿಟ್ಟಿದೆ.
ಪ್ರಧಾನಿ ನರೇಂದ್ರ ಮೋದಿ ಹೇಳುವುದರಲ್ಲಿ ಅರ್ಥವಿದೆ. ತಬ್ರೇಝ್‌ನ ಸಾವಿಗಾಗಿ ಜಾರ್ಖಂಡ್ ರಾಜ್ಯವನ್ನು ಅವಮಾನಿಸುವುದು ಬೇಕಿಲ್ಲ. ಇದು ಒಂದು ರಾಜ್ಯದ ಪ್ರಶ್ನೆಯಲ್ಲ, ರಾಷ್ಟ್ರದ ಪ್ರಶ್ನೆಯೂ ಅಲ್ಲ. ಆದರೆ ರಾಷ್ಟ್ರೀಯತೆಯ ಪ್ರಶ್ನೆ. ಈ ವಿಕೃತ ರಾಷ್ಟ್ರೀಯತೆಯನ್ನು ಅವಮಾನಿಸಲು, ಪ್ರಶ್ನಿಸಲು, ಖಂಡಿಸಲು ಅಡ್ಡಿಯಿಲ್ಲ. ಛತ್ತೀಸ್‌ಗಡ, ಜಾರ್ಖಂಡ್, ಬಿಹಾರ, ಉತ್ತರಪ್ರದೇಶ ಇಲ್ಲೆಲ್ಲಾ ಭೂಮಾಲಕರ ಗುಂಡೇಟಿಗೆ ಬಲಿಯಾದ ಜೀವಗಳ ಸಂಖ್ಯೆಯನ್ನು ನಾವು ಲೆಕ್ಕಕ್ಕೇ ಇಟ್ಟಿಲ್ಲ. ಛತ್ತೀಸ್‌ಗಡದಲ್ಲಿ ಲಕ್ಷಾಂತರ ಎಕರೆ ಅರಣ್ಯ ಪ್ರದೇಶಗಳನ್ನು ಕಳೆದುಕೊಂಡಾಗ ನಮಗೆ ಕಿಂಚಿತ್ತೂ ನೋವಾಗುವುದಿಲ್ಲ ಆದರೆ ಒಬ್ಬ ಯೋಧನ ಸಾವು ರಾಷ್ಟ್ರೀಯತೆಯ ಭಾವನೆಗಳನ್ನು ಉಕ್ಕಿಹರಿಯುವಂತೆ ಮಾಡುತ್ತದೆ. ಒಬ್ಬ ನಕ್ಸಲನ ಸಾವು ಸಂಭ್ರಮಕ್ಕೆ ಕಾರಣವಾಗುತ್ತದೆ. ಛತ್ತೀಸ್‌ಗಡ, ಜಾರ್ಖಂಡ್ ಮತ್ತಿತರ ರಾಜ್ಯಗಳಲ್ಲಿ ತಬ್ರೇಝ್‌ನಂತಹ ಲಕ್ಷಾಂತರ ಶ್ರಮಜೀವಿಗಳ ತಮ್ಮ ಬದುಕಿನ ಮೂಲ ನೆಲೆಯನ್ನೇ ಕಳೆದುಕೊಳ್ಳುತ್ತಿರುವುದೂ ನಮ್ಮನ್ನು ಬಾಧಿಸುತ್ತಿಲ್ಲ. ಒಂದೆಡೆ ನಾಗರಿಕತೆಯನ್ನು ಸಲಹುವ ಸಂಪನ್ಮೂಲಗಳ ಕಗ್ಗೊಲೆಯಾಗುತ್ತಿರುವುದನ್ನು ಸಂಭ್ರಮಿಸುವ ನಮ್ಮ ಮನಸುಗಳು, ಮತ್ತೊಂದೆಡೆ ನಾಗರಿಕತೆಯನ್ನು ಅವಮಾನಿಸುವ ಹಿಂಸಾತ್ಮಕ ಕೃತ್ಯಗಳ ಬಗ್ಗೆ ಚಕಾರ ಎತ್ತುವುದಿಲ್ಲ. ಈ ದ್ವಂದ್ವ ಎಲ್ಲಿಯವರೆಗೆ?
ಪ್ರತಾಪನ ಬೆತ್ತಲೆ ಮೆರವಣಿಗೆ ನಾಡಿನ ಸಾಕ್ಷಿಪ್ರಜ್ಞೆಯನ್ನು ಕಲುಕಿದೆ ನಿಜ. ಆದರೆ ಎಷ್ಟು ಪ್ರತಾಪರು ಬೇಕು ನಮ್ಮನ್ನು ನಾಗರಿಕರನ್ನಾಗಿಸಲು? ಈ ಸಂದರ್ಭದಲ್ಲಿ ನಡೆದ ದಲಿತರ ಹೋರಾಟ ಮತ್ತು ಮತಾಂತರ ಪ್ರಕ್ರಿಯೆ ಪ್ರಬಲ ವರ್ಗಗಳಿಗೆ ಎಚ್ಚರಿಕೆಯ ಗಂಟೆ ಎಂದು ಭಾವಿಸಬಹುದಾದರೂ, ಇದು ನಮ್ಮ ಸಾಮಾಜಿಕ ಮೌಲ್ಯಗಳನ್ನು ಪರಾಮರ್ಶಿಸಲು ನೆರವಾಗುವುದೇ? ಇಷ್ಟೆಲ್ಲಾ ನಡೆದರೂ ದಲಿತ ಸಮುದಾಯದ ಹಿರಿಯ ನಾಯಕರೇಕೆ ತೆಪ್ಪಗಿದ್ದಾರೆ ಎಂಬ ಪ್ರಶ್ನೆ ಸಹಜವಾಗಿ ಕೇಳಿಬರುತ್ತದೆ. ಆದರೆ ಮಾನವೀಯ ಸಂವೇದನೆಯನ್ನೇ ಪ್ರಶ್ನಿಸುವ ಒಂದು ಘಟನೆಗೆ ಪ್ರತಿಕ್ರಿಯಿಸುವುದಕ್ಕೂ ಜಾತಿಯ ಚೌಕಟ್ಟು ಅಗತ್ಯವೇ ಎಂಬ ಪ್ರಶ್ನೆ ಉದ್ಭವಿಸುವುದೇ ಇಲ್ಲ. ‘‘ಅವ ನಮ್ಮವನಲ್ಲ’’ ಎಂಬ ಕುತ್ಸಿತ ಭಾವನೆ ಮಾನವ ಸಮಾಜದ ಆಂತರಿಕ ಮೌಲ್ಯಗಳನ್ನೇ ಹೊಸಕಿಹಾಕಿಬಿಟ್ಟಿದೆ. ಈ ದೇಶದ ವೈದಿಕ ಪರಂಪರೆ ಮತ್ತು ಜಾತಿ ಶ್ರೇಷ್ಠತೆಯ ವ್ಯಸನ ಈ ಹೊಸಕಿಹಾಕುವ ಪ್ರಕ್ರಿಯೆಗೆ ಮಾನ್ಯತೆಯನ್ನೂ ನೀಡಿಬಿಟ್ಟಿದೆ. ಹಾಗಾಗಿಯೇ ಈ ಪರಂಪರೆಯನ್ನೇ ಎತ್ತಿಹಿಡಿಯುವ ಭಾರತದ ಆಡಳಿತ ವ್ಯವಸ್ಥೆಯಲ್ಲಿ ರಾಜಕೀಯ ಪ್ರಾಶಸ್ತ್ಯವಿಲ್ಲದ ಯಾವುದೇ ಹಿಂಸಾತ್ಮಕ ಘಟನೆಗಳೂ ಆಳುವ ವರ್ಗಗಳನ್ನು ಅಲುಗಾಡಿಸುವುದಿಲ್ಲ ಅಲ್ಲವೇ ?
ತಬ್ರೇಝ್‌ನ ಸಾವಿನಿಂದ ನೋವಾಗಿದೆ ಆದರೆ ಇಡೀ ರಾಜ್ಯವನ್ನು ಅವಮಾನಪಡಿಸಬೇಡಿ ಎಂದು ಕೈಮುಗಿಯುವ ದೇಶದ ಪ್ರಧಾನಿ, ತಬ್ರೇಝ್, ಅಖ್ಲಾಕ್, ಪೆಹ್ಲೂಖಾನ್ ಮುಂತಾದವರನ್ನು ತುಂಡು ಮಾಂಸಕ್ಕಾಗಿ ಹತ್ಯೆ ಮಾಡುವ ಕೊಲೆಗಡುಕರಿಗೆ, ಹಾಗೆಲ್ಲಾ ಮಾಡಬೇಡ್ರಪ್ಪಾ ಎಂದು ಕೈಮುಗಿಯುವುದಿಲ್ಲವೇಕೆ? ಭಯೋತ್ಪಾದನೆಯನ್ನು ತಳಮಟ್ಟದಿಂದಲೇ ಉಚ್ಛಾಟಿಸುವ ಕ್ಷಮತೆ ಇರುವ ಒಂದು ಆಡಳಿತ ವ್ಯವಸ್ಥೆಗೆ, ದಿನನಿತ್ಯ ಶ್ರಮಜೀವಿಗಳ ಬದುಕಿನಲ್ಲಿ ಭೀತಿ ಸೃಷ್ಟಿಸುವ ಕೊಲೆಗಡುಕರನ್ನು ನಿಯಂತ್ರಿಸುವುದು ಏಕೆ ಸಾಧ್ಯವಿಲ್ಲ? ಇರಲಿ, ಮರೆತುಬಿಡೋಣ, ನಮಗೆ ಮರೆವು ಸಹಜ ಪ್ರಕ್ರಿಯೆಯಾಗಿದೆ. ಸಾವಿರಾರು ಸಾವುಗಳನ್ನು ಕಂಡಿದ್ದೇವೆ ಎಲ್ಲವನ್ನೂ ಮರೆತೂಬಿಟ್ಟಿದ್ದೇವೆ. ಸಾವಿರಾರು ಜೀವಗಳ ಬಲಿಪಡೆದ ಹತ್ಯಾಕಾಂಡಗಳನ್ನೂ ಮರೆತುಬಿಟ್ಟಿದ್ದೇವೆ. ಸತ್ತವರೇನೂ ರಾಜಕೀಯ ನಾಯಕರಲ್ಲವಲ್ಲ್ಲ, ವರ್ಷಕ್ಕೊಮ್ಮೆ ಸ್ಮರಿಸಿ ಪಿಂಡದಾನ ಮಾಡಲು ? ರಾಜಕೀಯ ಪ್ರಾಶಸ್ತ್ಯ ಎಂದೆನಲ್ಲವೇ, ಸುಮ್ಮನೆ ಹಿಂದಿರುಗಿ ನೋಡಿ, 17 ವರ್ಷಗಳ ಹಿಂದೆ ಮಡಿದ ಸಾವಿರಾರು ಅಮಾಯಕರಿಗೆ ದೊರೆಯದ ನ್ಯಾಯ, ಮೂವತ್ತು ವರ್ಷಗಳ ಹಿಂದೆ ಮಡಿದ ಒಬ್ಬ ಅಮಾಯಕನಿಗೆ ದೊರೆಯುತ್ತದೆ.
ಪೊಲೀಸ್ ಅಧಿಕಾರಿ ಸಂಜೀವ್ ಭಟ್ ಸಮವಸ್ತ್ರ ಧರಿಸಿದ ಅಖ್ಲಾಕ್‌ನಂತೆ ಕಾಣುವುದಿಲ್ಲವೇ? ಮತಧರ್ಮಗಳ ಅಮಲು ಮತ್ತು ಆಧಿಪತ್ಯ ರಾಜಕಾರಣದ ಮದ ದೇಶದ ರಾಜಕಾರಣವನ್ನು ಮಾತ್ರ ಆವರಿಸಿಲ್ಲ, ನಾಗರಿಕ ಪ್ರಜ್ಞೆಯನ್ನೂ ಆವರಿಸಿದೆ ಎನಿಸುವುದಿಲ್ಲವೇ? ಗುಂಡ್ಲುಪೇಟೆಯ ಪ್ರತಾಪ, ಕೆಲವು ವರ್ಷಗಳ ಹಿಂದೆ ಮಂಡ್ಯದಲ್ಲಿ ಮರ್ಯಾದಾ ಹತ್ಯೆಗೆ ಬಲಿಯಾದ ಜೀವ, ಧಾನೇಶ್ವರಿ, ಸೌಜನ್ಯ, ಉಡುಪಿ, ಕುಂದಾಪುರದಲ್ಲಿ ಬಲಿಯಾದವರು ಇವರೆಲ್ಲರಿಗೂ ನ್ಯಾಯ ದೊರೆತಿದೆಯೇ ಎಂದು ಹಿಂದಿರುಗಿ ನೋಡಿದಾಗ ನಮ್ಮ ರಾಜಕೀಯ ವ್ಯವಸ್ಥೆ ಹೇಗೆ ಮನುಜ ಪ್ರಜ್ಞೆಯನ್ನು ತಮ್ಮ ಅಧಿಕಾರ ಪೀಠಗಳಿಗಾಗಿ ಒತ್ತೆ ಇಟ್ಟಿದೆ ಎಂದು ಅರಿವಾಗುತ್ತದೆ. ಇಲ್ಲಿ ಪ್ರಶ್ನೆ ಇರುವುದು, ಇರಬೇಕಾದ್ದು ಆಡಳಿತ ವ್ಯವಸ್ಥೆಯ ನಿಷ್ಪಕ್ಷಪಾತ ಧೋರಣೆಯ ಬಗ್ಗೆ ಮತ್ತು ಸಾಮಾಜಿಕ ಕಳಕಳಿಯ ಬಗ್ಗೆ. ಕೋಲ್ಕತಾದ ರಾಜಕೀಯ ಕಗ್ಗೊಲೆಗಳು ಪ್ರತಿನಿಧಿಸಿದಷ್ಟು ಪ್ರಬಲವಾಗಿ ತಬ್ರೇಝ್ ಸಂಸತ್ತಿನಲ್ಲಿ ಪ್ರತಿಧ್ವನಿಸಲಿಲ್ಲವೇಕೆ? ಅಥವಾ ದೂರದ ಕರ್ನಾಟಕದ ಪ್ರತಾಪ ಸಂಸತ್ತಿನ ಆವರಣವನ್ನೂ ಪ್ರವೇಶಿಸುವುದಿಲ್ಲವೇಕೆ? ಕೋಲ್ಕತಾದಲ್ಲಿ ಹಲ್ಲೆಗೊಳಗಾದ ವೈದ್ಯರ ದನಿ ಇಡೀ ಸಂಸತ್ತನ್ನೇ ಆವರಿಸಿದ್ದರೂ ಪಾಯಲ್ ಎಂಬ ಯುವತಿಯ ದನಿ ಮುಂಬೈಯ ಚೋರ್ ಬಝಾರಿನಲ್ಲೇ ಹುದುಗಿಹೋಗಿದ್ದೇಕೆ?
ನಾವು ಏನನ್ನು ಕಳೆದುಕೊಳ್ಳುತ್ತಿದ್ದೇವೆ? ಯಾರನ್ನೂ ದೂಷಿಸುವುದು ಬೇಡ. ನಮ್ಮನ್ನೇ ಪ್ರಶ್ನಿಸಿಕೊಳ್ಳೋಣ. ಬೇಕೋ ಬೇಡವೋ ಒಂದು ಆಡಳಿತ ವ್ಯವಸ್ಥೆಯನ್ನು ಒಪ್ಪಿಕೊಂಡುಬಿಟ್ಟಿದ್ದೇವೆ. ಅಧಿಕಾರಪೀಠದಲ್ಲಿ ವಿರಾಜಮಾನರಾಗಿರುವವರನ್ನು ಸ್ವೀಕರಿಸಿಬಿಟ್ಟಿದ್ದೇವೆ. ಆದರೆ ನಮ್ಮ ಹೊಣೆಗಾರಿಕೆ ಇಷ್ಟಕ್ಕೇ ಮುಗಿದುಹೋಯಿತೇ? ನಾವು ಹೀಗಿರಲಿಲ್ಲ ಅಲ್ಲವೇ ? 50 ವರ್ಷ ಹಿಂದಕ್ಕೆ ಹೋಗೋಣ. ಇತಿಹಾಸ ಕೆದಕಬೇಕಿಲ್ಲ. ಕಣ್ಣೆದುರಿನಲ್ಲೇ ಸತ್ಯ ನಿಂತಿದೆ. ಆದರೆ ನಾವು ತೊಟ್ಟಿರುವ ಮಸೂರಗಳು ನಮ್ಮನ್ನು ನಿರ್ಲಿಪ್ತರನ್ನಾಗಿಸುತ್ತಿವೆ, ಕೆಲವೊಮ್ಮೆ ನಿಷ್ಕ್ರಿಯರನ್ನಾಗಿಸುತ್ತಿವೆ. ಆದರೆ ನಮ್ಮ ಸಂವೇದನಾಶೀಲ ಮನಸುಗಳಿಗೆ ಚರಮಗೀತೆ ಹಾಡಲು ಸದೃಢ ಭೂಮಿಕೆ ನಿರ್ಮಿಸಿರುವವರು ಹೆಚ್ಚು ಕ್ರಿಯಾಶೀಲರಾಗುತ್ತಿದ್ದಾರೆ. ಹಾಗಾಗಿಯೇ ತಬ್ರೇಝ್, ಪಾಯಲ್, ಪ್ರತಾಪ, ಅಖ್ಲಾಕ್, ಪೆಹ್ಲ್ಲೂಖಾನ್, ಸಂಜೀವ್ ಭಟ್ ಅಂತಹವರು ಬಲಿಪಶುಗಳಾಗಿದ್ದಾರೆ. ಪ್ರಕೃತಿ ಬರಿದಾಗುತ್ತಿದೆ, ಪ್ರಕೃತಿಯ ಒಡಲು ಬರಿದಾಗುತ್ತಿದೆ, ಜಲಸಂಪತ್ತು ಬರಿದಾಗುತ್ತಿದೆ, ವನ ಸಂಪತ್ತು ಬರಿದಾಗುತ್ತಿದೆ, ಹಾಗೆಯೇ ಮಾನವ ಸಮಾಜದ ಸಂವೇದನೆಯ ಒಡಲೂ ಬರಿದಾಗುತ್ತಿದೆ. ಇನ್ನೂ ನಿರ್ಲಿಪ್ತರಾಗಿರಬೇಕೇ? ಯೋಚಿಸೋಣ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.