-

ಡೊನಾಲ್ಡ್ ಟ್ರಂಪ್ ಇಂಡಿಯಾ ಭೇಟಿಯ ಸುತ್ತಮುತ್ತ

-

ಕಳೆದ 2019ರ ಸೆಪ್ಟಂಬರ್‌ನಲ್ಲಿ ಅಮೆರಿಕದ ಹೋಸ್ಟನ್‌ನಲ್ಲಿ ಆಯೋಜಿಸಿದ್ದ ‘ಹೌಡಿ ಮೋದಿ’ ಕಾರ್ಯಕ್ರಮಕ್ಕೂ ಇಂಡಿಯಾದ ಮಾಧ್ಯಮಗಳು ಭಾರೀ ಪ್ರಚಾರ ನೀಡಿದ್ದನ್ನು ನಾವಿಲ್ಲಿ ಗಮನಿಸಬಹುದು. ಈ ಎರಡೂ ಕಾರ್ಯಕ್ರಮಗಳಿಗೂ ಹಲವು ಸಾಮ್ಯಗಳಿವೆ. ಅವೇನೆಂದರೆ ಎರಡೂ ಕಾರ್ಯಕ್ರಮಗಳೂ ಚುನಾವಣಾ ಲೆಕ್ಕಾಚಾರಗಳನ್ನೇ ಪ್ರಧಾನವಾಗಿ ಕೇಂದ್ರೀಕರಿಸಿದ್ದು. ‘ಹೌಡಿ ಮೋದಿ’ ಕಾರ್ಯಕ್ರಮಕ್ಕೆ ಇಲ್ಲಿನ ಲೋಕಸಭಾ ಚುನಾವಣೆಯ ಹಿನ್ನೆಲೆಯಿದ್ದರೆ ‘ನಮಸ್ತೇ ಟ್ರಂಪ್’ ಕಾರ್ಯಕ್ರಮಕ್ಕೆ ಇದೇ ವರ್ಷದ ಅಂತ್ಯದ ವೇಳೆಗೆ ನಡೆಯುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆ ಇದೆ. ಪ್ರಧಾನಿ ಮೋದಿ ಹಾಗೂ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಜನಾದರಣೆ ಕ್ಷೀಣಿಸಿರುವ ಸಂದರ್ಭಗಳಲ್ಲಿ, ಹಾಗೇನೆ ಅವರವರ ರಾಷ್ಟ್ರಗಳಲ್ಲಿ ಮತ್ತೆ ಗೆಲುವು ಸಾಧಿಸಲು ಕಷ್ಟಕರವೆನಿಸುವ ಸಂದರ್ಭಗಳಲ್ಲಿ ಆಯೋಜಿಸಿದ್ದ ಕಾರ್ಯಕ್ರಮಗಳಾಗಿದ್ದವು ಇವುಗಳು.


ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ತಿಂಗಳ 24 ಹಾಗೂ 25ರಂದು ಇಂಡಿಯಾಕ್ಕೆ ಅಧಿಕೃತ ಭೇಟಿ ನೀಡಿದ್ದು ಇಲ್ಲಿನ ವಿದ್ಯುನ್ಮಾನ ಮಾಧ್ಯಮ ಹಾಗೂ ಮುದ್ರಣ ಮಾಧ್ಯಮಗಳಲ್ಲಿ ಭಾರೀ ಸುದ್ದಿಯ ವಿಚಾರವಾಗಿತ್ತು. ಟ್ರಂಪ್ ಅಮೆರಿಕದ ಅಧ್ಯಕ್ಷರಾದ ಮೇಲೆ ಮೊದಲ ಇಂಡಿಯಾ ಭೇಟಿಯಿದು. ಅವರೊಂದಿಗೆ ಅವರ ಬಾಳಸಂಗಾತಿ, ಮಗಳು ಹಾಗೂ ಅಳಿಯ ಇದ್ದರು. ಮಗಳು ಹಾಗೂ ಅಳಿಯ ಟ್ರಂಪ್‌ರ ಅಧಿಕೃತ ಸಲಹೆಗಾರರೂ ಹೌದು. ಪ್ರಧಾನಿ ಮೋದಿ ಟ್ರಂಪ್‌ರಿಗಾಗಿ ಅಹ್ಮದಾಬಾದ್‌ನಲ್ಲಿ ಆಯೋಜಿಸಿದ್ದ ಸಮಾವೇಶಕ್ಕೆ ‘ನಮಸ್ತೇ ಟ್ರಂಪ್’ ಎಂದು ಕರೆಯಲಾಗಿತ್ತು.

 ಕಳೆದ 2019ರ ಸೆಪ್ಟಂಬರ್‌ನಲ್ಲಿ ಅಮೆರಿಕದ ಹೋಸ್ಟನ್‌ನಲ್ಲಿ ಆಯೋಜಿಸಿದ್ದ ‘ಹೌಡಿ ಮೋದಿ’ ಕಾರ್ಯಕ್ರಮಕ್ಕೂ ಇಂಡಿಯಾದ ಮಾಧ್ಯಮಗಳು ಭಾರೀ ಪ್ರಚಾರ ನೀಡಿದ್ದನ್ನು ನಾವಿಲ್ಲಿ ಗಮನಿಸಬಹುದು. ಈ ಎರಡೂ ಕಾರ್ಯಕ್ರಮಗಳಿಗೂ ಹಲವು ಸಾಮ್ಯಗಳಿವೆ. ಅವೇನೆಂದರೆ ಎರಡೂ ಕಾರ್ಯಕ್ರಮಗಳೂ ಚುನಾವಣಾ ಲೆಕ್ಕಾಚಾರಗಳನ್ನೇ ಪ್ರಧಾನವಾಗಿ ಕೇಂದ್ರೀಕರಿಸಿದ್ದು. ‘ಹೌಡಿ ಮೋದಿ’ ಕಾರ್ಯಕ್ರಮಕ್ಕೆ ಇಲ್ಲಿನ ಲೋಕಸಭಾ ಚುನಾವಣೆಯ ಹಿನ್ನೆಲೆಯಿದ್ದರೆ ‘ನಮಸ್ತೇ ಟ್ರಂಪ್’ ಕಾರ್ಯಕ್ರಮಕ್ಕೆ ಇದೇ ವರ್ಷದ ಅಂತ್ಯದ ವೇಳೆಗೆ ನಡೆಯುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆ ಇದೆ. ಪ್ರಧಾನಿ ಮೋದಿ ಹಾಗೂ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಜನಾದರಣೆ ಕ್ಷೀಣಿಸಿರುವ ಸಂದರ್ಭಗಳಲ್ಲಿ, ಹಾಗೇನೆ ಅವರವರ ರಾಷ್ಟ್ರಗಳಲ್ಲಿ ಮತ್ತೆ ಗೆಲುವು ಸಾಧಿಸಲು ಕಷ್ಟಕರವೆನಿಸುವ ಸಂದರ್ಭಗಳಲ್ಲಿ ಆಯೋಜಿಸಿದ್ದ ಕಾರ್ಯಕ್ರಮಗಳಾಗಿದ್ದವು ಇವುಗಳು. ಅಮೆರಿಕ ಸುಮಾರು ಇಪ್ಪತ್ತು ಲಕ್ಷದ ನಲವತ್ತು ಸಾವಿರದಷ್ಟು ದೊಡ್ಡ ಸಂಖ್ಯೆಯ ಇಂಡಿಯಾ ಮೂಲದ ಮತದಾರರನ್ನು ಹೊಂದಿದೆ. ಈ ಮತಗಳು ಅಮೆರಿಕದ ಅಧ್ಯಕ್ಷರ ಆಯ್ಕೆಯಲ್ಲಿ ಒಂದು ನಿರ್ಣಾಯಕ ಪಾತ್ರ ವಹಿಸುತ್ತದೆ ಎನ್ನುವುದನ್ನು ಗಮನಿಸಬೇಕು.

‘ನಮಸ್ತೇ ಟ್ರಂಪ್’ ಸಂದರ್ಭದಲ್ಲಿ 24 ಎಮ್‌ಎಚ್-60 ಸೀ ಹಾಕ್ ಸಮರ ಹೆಲಿಕಾಪ್ಟರ್‌ಗಳೂ ಸೇರಿದಂತೆ 3 ಬಿಲಿಯನ್ ಡಾಲರ್‌ಗಳರಕ್ಷಣಾ ಸಲಕರಣೆಗಳನ್ನು ಅಮೆರಿಕದಿಂದ ಕೊಳ್ಳುವ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಇನ್ನುಳಿದಂತೆ ವ್ಯಾಪಾರಿ ಒಪ್ಪಂದಗಳಲ್ಲವಾದರೂ ಔಷಧಿ ಕ್ಷೇತ್ರದಲ್ಲಿ ದರ ನಿಗದಿಪಡಿಸುವಲ್ಲಿ ಇಂಡಿಯಾದ ಸಹಕಾರ, ಇಂಡಿಯಾ ಹಾಗೂ ಅಮೆರಿಕ ಪರಸ್ಪರ ಮಾಹಿತಿ ವಿನಿಮಯಗಳಿಗಾಗಿ ಸುಸಜ್ಜಿತ ಯಂತ್ರಾಂಗವೊಂದನ್ನು ಸ್ಥಾಪಿಸುವ ಬಗ್ಗೆ, ಅಮೆರಿಕದಿಂದ ಅನಿಲ ಪೂರೈಕೆ ಮಾಡಲು ಎಕ್ಸಾನ್ ಮೊಬಿಲ್ ಹಾಗೂ ಇಂಡಿಯನ್ ಆಯಿಲ್ ಕಾರ್ಪೊರೇಷನ್ ನಡುವೆ ಒಪ್ಪಂದ ಏರ್ಪಡಿಸಿಕೊಳ್ಳುವ ಬಗ್ಗೆ, ಜೊತೆಗೆ ಮಾನಸಿಕ ಆರೋಗ್ಯ ಸಂಬಂಧಪಟ್ಟಂತೆ ಎರಡೂ ರಾಷ್ಟ್ರಗಳು ತಿಳುವಳಿಕಾ ಪತ್ರಗಳಿಗೆ ಸಹಿ ಹಾಕಲಾಗಿದೆ ಎನ್ನಲಾಗಿದೆ. ಇವೆಲ್ಲಾ ಈಗ ಕಾರ್ಯರೂಪಕ್ಕೆ ಬರುವುದಿಲ್ಲ. ಜೊತೆಗೆ ಆಂತರಿಕ ಭದ್ರತೆ, ಫೆಂಟಾನೈಲ್‌ನಂತಹ ಮಾದಕ ವಸ್ತುಗಳ ಕಳ್ಳಸಾಗಾಟದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂಬ ವರದಿಗಳಿವೆ.

ಹೃದಯಕ್ಕೆ ಅಳವಡಿಸುವ ಸ್ಟೆಂಟ್ ಇತ್ಯಾದಿ ವೈದ್ಯಕೀಯ ಉಪಕರಣಗಳ ಮೇಲಿನ ಇಂಡಿಯಾದಲ್ಲಿರುವ ದರ ನಿಗದಿ ಮಿತಿಯ ಬಗ್ಗೆ ಅಮೆರಿಕದ ವ್ಯಾಪಾರಿ ವೈದ್ಯಕೀಯ ಕಂಪೆನಿಗಳು ಅಸಮಾಧಾನಗೊಂಡಿರುವುದನ್ನು ಇಲ್ಲಿ ನಾವು ಗಮನಿಸಬೇಕು. ಹಾಗಾಗಿ ಈಗ ಹೇಳಲಾಗಿರುವ ತಿಳುವಳಿಕಾ ಪತ್ರಗಳ ಸಾರಾಂಶವೆಂದರೆ ಔಷಧಿಗಳನ್ನು ದರನಿಗದಿ ಮಿತಿಯಿಂದ ಮುಕ್ತಗೊಳಿಸಿ ಔಷಧ ಕಂಪೆನಿಗಳಿಗೆ ದರ ನಿಗದಿಯ ಮೇಲಿನ ಸಂಪೂರ್ಣ ಹಿಡಿತ ಸಾಧಿಸಲು ಅನುವು ಮಾಡಿಕೊಡಬೇಕು ಎನ್ನುವುದೇ ಆಗಿದೆ. ಈಗಾಗಲೇ ಹಲವು ಜೀವ ರಕ್ಷಕ ಔಷಧಿಗಳನ್ನು ಹಾಗೆ ಮುಕ್ತಗೊಳಿಸಲಾಗಿದೆ. ಎಪ್ರಿಲ್ 1 ರಿಂದ ದೇಶದಲ್ಲಿ ವೈದ್ಯಕೀಯ ಉಪಕರಣಗಳನ್ನೂ ಕೂಡ ಔಷಧಿಗಳೆಂದೇ ಪರಿಗಣಿಸಬೇಕೆಂಬ ನಿಯಮ ಜಾರಿಯಾಗಲಿದೆ ಎನ್ನಲಾಗಿದೆ. ಮಾಹಿತಿ ವಿನಿಮಯ ಯಂತ್ರಾಂಗವೆಂದರೆ ಅದು ಗೂಢಚಾರಿಕೆ, ರಕ್ಷಣೆಗೆ ಸಂಬಂಧ ಪಟ್ಟ ಮಾಹಿತಿಗಳನ್ನು ಹಂಚಿಕೊಳ್ಳುವ, ಬಳಸಿಕೊಳ್ಳುವ ಉದ್ದೇಶದ್ದಾಗಿದೆ. ದೇಶದ ಈ ರೀತಿಯ ಜನಸಾಮಾನ್ಯರ ಹಿತಾಸಕ್ತಿಗಳಿಗೆ ಮತ್ತಷ್ಟು ಮಾರಕವಾಗಬಹುದಾದ ವಿಚಾರಗಳೇ ಈ ಸಾಮಾನ್ಯ ಗ್ರಹಿಕೆಗಳಾಗಿವೆ ಎನ್ನುವುದರಲ್ಲಿ ಅನುಮಾನ ಬೇಕಿಲ್ಲ. ಹಿತಾಸಕ್ತಿಗಳೇ ಇಲ್ಲಿ ಕೆಲಸ ಮಾಡುತ್ತಿರುವುದು. ಇದರಿಂದಾಗಿ ಅತ್ಯಗತ್ಯ ವೈದ್ಯಕೀಯ ಉಪಕರಣಗಳು ಜನಸಾಮಾನ್ಯರಿಗೆ ಪೂರ್ಣವಾಗಿ ಕೈಗೆಟುಕದೇ ಹೋಗಬಹುದು. ಈ ತಿಳುವಳಿಕಾ ಪತ್ರಗಳಂತೆ ಒಪ್ಪಂದಗಳು ಏರ್ಪಟ್ಟಲ್ಲಿ ಇಂಡಿಯಾದ ಈ ಎಲ್ಲಾ ಕ್ಷೇತ್ರಗಳ ಸಣ್ಣ ಮತ್ತು ಮಧ್ಯಮ ತಯಾರಕರು ತಮ್ಮ ಕಂಪೆನಿಗಳನ್ನು ಶಾಶ್ವತವಾಗಿ ಮುಚ್ಚಬೇಕಾಗಿ ಬರಬಹುದು. ಅಮೆರಿಕ ಇಂಡಿಯಾವನ್ನು ತನ್ನ ಆದ್ಯತಾ ವ್ಯಾಪಾರಿ ಪಟ್ಟಿಯಿಂದ ಹೊರಗಿಟ್ಟಿದ್ದನ್ನು ಇಲ್ಲಿ ಗಮನಿಸಬೇಕು. 2018ರಲ್ಲಿ ವ್ಯೆಹಾತ್ಮಕ ವಾಣಿಜ್ಯ ಮಂಜೂರಾತಿ 1 ಎಂದು ಇಂಡಿಯಾವನ್ನು ಅಮೆರಿಕ ಪರಿಗಣಿಸಿ ತನ್ನ ಶಸ್ತ್ರಸಜ್ಜಿತ ದ್ರೋಣ್‌ನಂತಹ ಆಧುನಿಕ ಸೂಕ್ಷ್ಮ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಲು ಅನುಕೂಲ ಮಾಡಿಕೊಂಡಿತ್ತು. ಅದಕ್ಕೆ ಪೂರಕವಾಗಿ ಮೋದಿ ಸರಕಾರ ಅಮೆರಿಕಕ್ಕೆ ರಕ್ಷಣಾ ಮಾಹಿತಿಗಳನ್ನು ಹಂಚಿಕೊಳ್ಳುವ ಹಾಗೂ ರಕ್ಷಣಾ ಸೌಲಭ್ಯಗಳನ್ನು ಬಳಸಿಕೊಳ್ಳಲು ಅನುಕೂಲ ಮಾಡಿಕೊಡುವ ಒಪ್ಪಂದಗಳಿಗೆ ಸಹಿ ಮಾಡಿತ್ತು.

ಅಲ್ಲದೆ ಭಾರತದ ಮೇಲೆ ಅಮೆರಿಕದ ಡೈರಿ ಉತ್ಪನ್ನಗಳು, ಮಾಂಸದ ಉತ್ಪನ್ನಗಳನ್ನು ಹೇರುವ ಸನ್ನಾಹದಲ್ಲಿದೆ. ಇಂಡಿಯಾದಲ್ಲಿರುವ ಕೃಷಿ, ಆಹಾರಗಳು ಮೊದಲಾದವುಗಳ ಮೇಲಿನ ಅಳಿದುಳಿದಿರುವ ಸಹಾಯಧನ ಇತ್ಯಾದಿ ಸೌಲಭ್ಯಗಳನ್ನು ರದ್ದುಗೊಳಿಸಿ ಮುಕ್ತಗೊಳಿಸಲು ಒತ್ತಡ ಹೇರುತ್ತಿದೆ. ಅಮೆರಿಕ ನಿರ್ಮಿತ ದುಬಾರಿ ಹಾರ್ಲೆ ಡೇವಿಡ್ಸನ್ ಮೋಟಾರು ಬೈಕುಗಳ ಮೇಲಿನ ಆಮದು ಸುಂಕವನ್ನು ಕಡಿತಗೊಳಿಸಬೇಕೆಂಬ ಒತ್ತಾಯ ಕೂಡ ಇದೆ. ಕಳೆದ ವರ್ಷದಲ್ಲಿ ಭಾರತ ಅಮೆರಿಕ ವ್ಯಾಪಾರ ವ್ಯವಹಾರ 142 ಬಿಲಿಯನ್ ಡಾಲರುಗಳಷ್ಟಿದ್ದರೆ, ಅದೇ ವೇಳೆ ಅಮೆರಿಕ ಚೀನಾ ವ್ಯಾಪಾರ ವ್ಯವಹಾರ 737 ಬಿಲಿಯನ್ ಡಾಲರುಗಳಷ್ಟಿತ್ತು. ಪರಸ್ಪರ ವ್ಯಾಪಾರಿ ಸಮರದ ನಡುವೆಯೂ ಅಮೆರಿಕದ ಚೀನಾ ಜೊತೆಗಿನ ವ್ಯಾಪಾರ ವ್ಯವಹಾರ ಇಷ್ಟೊಂದು ಅಗಾಧ ಪ್ರಮಾಣದಲ್ಲಿದೆ. ಟ್ರಂಪ್ ಅಹ್ಮದಾಬಾದ್‌ನ ‘ನಮಸ್ತೇ ಟ್ರಂಪ್’ ಕಾರ್ಯಕ್ರಮದಲ್ಲಿ ಪಾಕಿಸ್ತಾನದ ಹೆಸರನ್ನೂ ಪ್ರಸ್ತಾಪಿಸಿ ಆ ದೇಶದ ಅಭಿವೃದ್ಧಿಗೆ ಹಾಗೂ ಭಯೋತ್ಪಾದನೆಯನ್ನು ಮಟ್ಟಹಾಕಲು ಸಹಕರಿಸುವುದರೊಂದಿಗೆ ಪಾಕಿಸ್ತಾನದೊಂದಿಗೆ ಸೌಹಾದರ್ ಸಂಬಂಧಗಳನ್ನು ಕಾಪಾಡುತ್ತದೆ ಎಂಬಂತೆಯೂ ಮಾತನಾಡಿದ್ದರು. ಜೊತೆಗೆ ಉಭಯ ದೇಶಗಳೂ ಈ ಪ್ರದೇಶದಲ್ಲಿ ಶಾಂತಿ ಕಾಪಾಡಲು ಶ್ರಮಿಸಬೇಕೆಂದೂ ಹೇಳಿದರು. ಭಾಷಣದ ಕೊನೆಯ ಭಾಗದಲ್ಲಿ ಉತ್ತರ ದಕ್ಷಿಣ, ಹಿಂದೂ ಮುಸ್ಲಿಮ್, ಯಹೂದಿಗಳು ಕ್ರಿಶ್ಚಿಯನ್, ಶ್ರೀಮಂತರು ಬಡವರು, ವೃದ್ಧರು ಯುವಪೀಳಿಗೆ ಎಲ್ಲರೂ ಹಿಂದಿನ ವೈಭವಗಳ ಬಗ್ಗೆ ಹೆಮ್ಮೆ ಪಡುತ್ತಾ ಮುಂದಿನ ಭವಿಷ್ಯಕ್ಕಾಗಿ ಒಗ್ಗಟ್ಟಾಗಿರೋಣ ಎಂಬಂತೆಯೂ ಹೇಳಿದರು. ಆದರೆ ಟ್ರಂಪ್ ಭಾರತದಿಂದ ಹೊರಡುವ ತಯಾರಿಯಲ್ಲಿರುವಾಗಲೇ ದೇಶದ ರಾಜಧಾನಿಯಲ್ಲಿ ಪುಂಡರನ್ನು ಫ್ಯಾಶಿಸ್ಟ್ ಹಿಂದುತ್ವದ ನಶೆಯೇರಿಸಿ ಮುಸ್ಲಿಮರ ಮೇಲೆ ಛೂ ಬಿಡಲಾಗಿ ನಲವತ್ತಕ್ಕೂ ಹೆಚ್ಚು ಜನರ ಉಸಿರುಗಳನ್ನು, ಸಾವಿರಾರು ಜನರ ಬದುಕಿನ ಮೂಲಗಳನ್ನು ಕಿತ್ತುಕೊಳ್ಳಲಾಯಿತು. ನೂರಾರು ಜನರಿಗೆ ಗಂಭೀರ ಗಾಯಗಳನ್ನು ಮಾಡಲಾಯಿತು. ಮಹಿಳೆಯರು ಮಕ್ಕಳ ಮೇಲೆ ಕ್ರೂರ ದಾಳಿ ನಡೆಸಲಾಯಿತು.

ಸುಮಾರು 25,000 ಕೋಟಿ ರೂಪಾಯಿಗಳಷ್ಟು ಆಸ್ತಿ ಹಾನಿಯಾಗಿರುವ ವರದಿಯಾಗಿದೆ. ದಿಲ್ಲಿಯ ಮುಸ್ಲಿಮರ ಮೇಲಿನ ನರಮೇಧವನ್ನು ಖಂಡಿಸಿ ಹಾಗೂ ಧಾರ್ಮಿಕ ಮಾನದಂಡದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಅಮೆರಿಕದಲ್ಲಿರುವ ಸಾವಿರಾರು ಇಂಡಿಯಾ ಮೂಲದವರು ಭಾರೀ ಪ್ರತಿಭಟನೆಯನ್ನು ನಡೆಸಿದ್ದಾರೆ. ಇದರಿಂದಾಗಿ ಭಾರತ ಭೇಟಿಯಿಂದ ಟ್ರಂಪ್ ರಾಜಕೀಯವಾಗಿ ಎಷ್ಟು ಅನುಕೂಲ ಪಡೆದುಕೊಳ್ಳುತ್ತಾರೆಂಬುದು ಪ್ರಶ್ನೆಯಾಗಿ ಉಳಿಯುತ್ತದೆ.

 ಇಂಡಿಯಾ ಭೇಟಿಯ ಬೆನ್ನಲ್ಲೇ ಟ್ರಂಪ್ ಆಡಳಿತ ಅಫ್ಘಾನಿಸ್ತಾನದ ತಾಲಿಬಾನಿ ಬಂಡುಕೋರರೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲು ಹೊರಟಿದೆ. ಅಮೆರಿಕ ತಾಲಿಬಾನ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಪರಿಗಣಿಸಿತ್ತು. ಈಗ ಅದರ ಜೊತೆಗೇನೆ ಶಾಂತಿ ಒಪ್ಪಂದ ಕುದುರಿಸಿ ಅಫ್ಘಾನಿಸ್ತಾನದಲ್ಲಿರುವ ತನ್ನ ಸೇನೆಯನ್ನು ಸಂಪೂರ್ಣವಾಗಿ ಹಿಂದೆಗೆದುಕೊಳ್ಳಲು ಒಪ್ಪಿಕೊಂಡಿದೆ ಎನ್ನಲಾಗಿದೆ. ‘ನ್ಯೂಯಾರ್ಕ್ ಟೈಮ್ಸ್’ನ ವರದಿಯ ಪ್ರಕಾರ ಸುಮಾರು ಹದಿನೆಂಟು ವರ್ಷಗಳ ಅಫ್ಘಾನಿಸ್ತಾನದ ಮೇಲಿನ ಆಕ್ರಮಣದಲ್ಲಿ ಅಮೆರಿಕ ಸುಮಾರು 2 ಟ್ರಿಲಿಯನ್ ಡಾಲರುಗಳನ್ನು ಖರ್ಚು ಮಾಡಿತು. ಆದರೆ ತಾಲಿಬಾನ್ ಅಧಿಕಾರ ವಂಚಿತವಾದರೂ ದಿನೇ ದಿನೇ ಬಲಗೊಳ್ಳುತ್ತಾ ಅಮೆರಿಕಕ್ಕೆ ಭಾರೀ ಹೊಡೆತಗಳನ್ನು ನೀಡುತ್ತಾ ಬರತೊಡಗಿತು. 2,400ಕ್ಕೂ ಹೆಚ್ಚು ಅಮೆರಿಕ ಸೈನಿಕರು ಪ್ರಾಣ ಕಳೆದುಕೊಂಡರು. ಸುಮಾರು 38,000 ಅಫ್ಘಾನಿಯರು ಕೊಲೆಗೀಡಾದರು, 500 ಬಿಲಿಯನ್ ಡಾಲರುಗಳಷ್ಟು ಹಣ ಸಾಲದ ಬಡ್ಡಿಗೆ ವ್ಯಯವಾದವಂತೆ, 1.4 ಟ್ರಿಲಿಯನ್ ಡಾಲರುಗಳು ಯುದ್ಧ್ದದ ಗಾಯಾಳುಗಳ ಚಿಕಿತ್ಸಾ ವೆಚ್ಚಗಳಿಗಾಗಿ 2059ರವರೆಗೆ ಬೇಕಾಗುತ್ತದಂತೆ. ಇನ್ನು ಅಫ್ಘಾನಿಸ್ತಾನ ಪುನರ್ ರಚನೆ ಇತ್ಯಾದಿ ಅಭಿವೃದ್ಧ್ಧಿಯ ಹೆಸರಿನ ಯೋಜನೆಗಳ ಹೆಸರಿನಲ್ಲಿ ಸುಮಾರು 30 ಬಿಲಿಯನ್ ಡಾಲರುಗಳಷ್ಟು ಹಣ ಹೂಡಿದ್ದರೂ ಆ ಹಣ ಬಹುತೇಕವಾಗಿ ಭ್ರಷ್ಟಾಚಾರಗಳಡಿ ಮುಳುಗಿಹೋಗಿದೆಯಂತೆ.

ಅಮೆರಿಕ ಈಗ ತನ್ನ ಸೈನ್ಯವನ್ನು ಅಫ್ಘಾನಿಸ್ತಾನದಲ್ಲಿ ಮುಂದುವರಿಸುವ ಪರಿಸ್ಥಿತಿಯಲ್ಲಿ ಇಲ್ಲ. ಅದು ಭಾರೀ ದುಬಾರಿಯಾಗಿ ಕಾಣತೊಡಗಿದೆ. ಅದರಿಂದ ಆರ್ಥಿಕವಾಗಿ ಮತ್ತಷ್ಟು ನಷ್ಟವೇ ಹೊರತು ಲಾಭದ ಭರವಸೆಯಿಲ್ಲ. ಹಾಗಾಗಿ ತಾನೇ ಘೋಷಿಸಿಕೊಂಡ ಭಯೋತ್ಪಾದನಾ ಸಂಘಟನೆಯ ಜೊತೆಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದೆ. ಅಫ್ಘಾನಿಸ್ತಾನದ ಜನರ ರಕ್ಷಣೆ ಹಾಗೂ ಪ್ರಜಾಪ್ರಭುತ್ವ ಖಾತರಿಗೊಳಿಸಲೆಂದೇ ಸೇನೆ ಕಳಿಸಲಾಗಿದೆ ಎಂದೆಲ್ಲಾ ಬಿಂಬಿಸಿದ್ದ ಅದೇ ಅಮೆರಿಕ ಈಗ ತನ್ನ ಮಾತಿನ ವರಸೆ ಬದಲಿಸಿದೆ. ಶಾಂತಿಯ ವಕ್ತಾರನ ವೇಷ ತೊಟ್ಟಿದೆ. ಮುಸ್ಲಿಮರ ಕುರಿತು ಭಯಾಂದೋಲನ (ಇಸ್ಲಾಮೋಫೋಬಿಯಾ) ಹುಟ್ಟು ಹಾಕಿ ಜಗತ್ತಿನಾದ್ಯಂತ ಮುಸ್ಲಿಮರನ್ನು ಮಾರಣ ಹೋಮಕ್ಕೆ ಈಡು ಮಾಡುವಲ್ಲಿ ಅಮೆರಿಕದ ಪಾತ್ರ ಪ್ರಧಾನವಾದುದಾಗಿದೆ. ಇಂಡಿಯಾ ಪಾಕಿಸ್ತಾನದ ನಡುವೆ ವೈಷಮ್ಯ ಬಿತ್ತಿ ಎರಡೂ ದೇಶಗಳಲ್ಲಿ ತನ್ನ ಆರ್ಥಿಕ ಹಿತಾಸಕ್ತಿಗಳಿಗೆ ವಿರೋಧ ಬೆಳೆಯದಂತೆ ಮಾಡುತ್ತಾ, ಅದರ ಲಾಭ ಹೊಡೆಯುವುದರಲ್ಲಿ ಅಮೆರಿಕ ಮುಂದಿದೆ. ಅದರಲ್ಲಿ ಯುದ್ಧಾಸ್ತ್ರಗಳ ವ್ಯಾಪಾರದ ಹಿತಾಸಕ್ತಿಯೂ ಕೆಲಸ ಮಾಡಿದೆ. ಸಂಘ ಪರಿವಾರ ಕೂಡ ಪ್ರಧಾನವಾಗಿ ಅಮೆರಿಕದ ತಾಳಕ್ಕೆ ತಕ್ಕಂತೆಯೇ ಕುಣಿಯುತ್ತಿರುವುದು ಎನ್ನುವುದನ್ನು ಇಲ್ಲಿ ಗಮನಿಸಬೇಕಿದೆ. ಈಗ ಅಮೆರಿಕದೊಂದಿಗೆ ಇಸ್ರೇಲ್ ಕೂಡ ಸೇರಿಕೊಂಡಿದೆ.

ಯಾವುದೇ ರೀತಿಯಿಂದ ನೋಡಿದರೂ ನಮ್ಮ ದೇಶದ ಜನಸಾಮಾನ್ಯರ ಪ್ರಧಾನ ಶತ್ರುವೆಂದು ಪರಿಗಣಿಸಬೇಕಾದ ಅಮೆರಿಕವನ್ನು ಸಂಘ ಪರಿವಾರ ವಿರೋಧಿಸದೆ ಪಾಕಿಸ್ತಾನವನ್ನೋ ಬಾಂಗ್ಲಾದೇಶದ ಜನರನ್ನೋ ದ್ವೇಷಿಸುವಂತೆ ಸಮೂಹ ಸನ್ನಿ ಹಿಡಿಸುವಲ್ಲಿ ಈ ಕಾರಣಗಳೇ ಕೆಲಸಮಾಡುತ್ತಿವೆ. ಇಂಡಿಯಾದ ಗೋಮಾಂಸ ರಫ್ತಿನ ಭಾರೀ ಕಾರ್ಪೊರೇಟ್‌ಗಳು ಬಹುತೇಕವಾಗಿ ದೇಶದ ಬ್ರಾಹ್ಮಣ ಹಾಗೂ ಜೈನರ ಒಡೆತನದಲ್ಲಿದ್ದರೆ ಪ್ರಧಾನ ಗ್ರಾಹಕ ಅಮೆರಿಕವೇ ಆಗಿದೆ. ಮೋದಿ ಸರಕಾರ ಬಂದ ಮೇಲೆ ಗೋಮಾಂಸ ರಫ್ತಿನಲ್ಲಿ ಇಂಡಿಯಾ ಮೊದಲ ಸ್ಥಾನ ಪಡೆದಿದೆ ಎಂದು ಅಂಕಿ ಅಂಶಗಳು ಹೇಳುತ್ತವೆ. ಗೋವನ್ನು ಪೂಜನೀಯವೆಂದು ಜನರೆದುರು ಕೊಂಡಾಡುವ ಸಂಘ ಪರಿವಾರ ಇಲ್ಲಿ ವಹಿಸುವ ಮೌನ ಇದನ್ನೇ ಸ್ಪಷ್ಟಪಡಿಸುತ್ತದೆ. ಅದರ ಹುಸಿ ರಾಷ್ಟ್ರಪ್ರೇಮ, ಯುವಜನಾಂಗವನ್ನು ದಿಕ್ಕುತಪ್ಪಿಸುವ ಸುಳ್ಳು, ಅರೆ ಸುಳ್ಳು, ಸತ್ಯದ ಲೇಪನಗಳ ಕಾರ್ಯತಂತ್ರಗಳನ್ನು ಈ ಹಿನ್ನೆಲೆಯಲ್ಲಿಯೇ ಅರ್ಥ ಮಾಡಿಕೊಳ್ಳಬೇಕಿದೆ. ಟ್ರಂಪ್ ಭೇಟಿಯನ್ನು ಭಾರೀ ಸಂಭ್ರಮದಿಂದ ಸ್ವಾಗತಿಸುವ ಸಂಘಪರಿವಾರ, ಅಮೆರಿಕದ ಆಳುವ ಶಕ್ತಿಗಳು ಹಾಗೂ ಮತ್ತವುಗಳ ಸರಕಾರಗಳು ನಮ್ಮ ದೇಶದ ಮೇಲೆ ಮಾಡುತ್ತಿರುವ ಹೇರಿಕೆ ಹಾಗೂ ಆಕ್ರಮಣಗಳನ್ನು ಜನಸಾಮಾನ್ಯರ ಹಾಗೂ ಯುವ ಜನರ ಗಮನಕ್ಕೆ ಬಾರದಂತೆ ತಡೆಯಲು ಶ್ರಮಿಸುತ್ತಾ ಬರುತ್ತಿರುವುದನ್ನು ನಾವು ಗಮನಿಸಬೇಕಾಗಿದೆ. ನಮ್ಮ ದೇಶಕ್ಕೆ ಮಾರಕವಾಗಿರುವ ಇಂತಹ ವಿಚಾರಗಳನ್ನು ಮಾಧ್ಯಮಗಳು ಅದರಲ್ಲೂ ವಿದ್ಯುನ್ಮಾನ ಮಾಧ್ಯಮಗಳು ಜನರ ಮುಂದಿಡುವುದು ವಿರಳವೆಂದೇ ಹೇಳಬೇಕಾಗಿದೆ. ಆದರೆ ನಮ್ಮ ದೇಶದ ಜನಸಾಮಾನ್ಯರ ಹಿತಾಸಕ್ತಿಗಳಿಗೆ ಪ್ರಧಾನವಾಗಿ ಅಪಾಯಗಳನ್ನು ಒಡ್ಡದ ಪಾಕಿಸ್ತಾನದಂತಹ ದೇಶಗಳ ಜನಸಾಮಾನ್ಯರ ಮೇಲೆ, ದೇಶದ ಮುಸ್ಲಿಮ್ ಅಲ್ಪಸಂಖ್ಯಾತರ ಮೇಲೆ ದ್ವೇಷ ಬಿತ್ತುತ್ತಾ ಇತರರನ್ನು ಅವರ ಮೇಲೆ ಛೂ ಬಿಡುವಲ್ಲೇ ತಮ್ಮ ಶಕ್ತಿ ಸಾಮರ್ಥ್ಯಗಳನ್ನು ವ್ಯಯಿಸುತ್ತಿವೆ. ದಿನೇ ದಿನೇ ಜನರಿಂದ ದೂರವಾಗುತ್ತಿರುವ ಈ ವಾಹಿನಿಗಳು ಅತಂತ್ರ ಸ್ಥಿತಿಗೆ ಜಾರುವ ದಿನಗಳು ದೂರವಿಲ್ಲ.

ಮಿಂಚಂಚೆ: nandakumarnandana67gmail.com

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top