--

ಪ್ರವಾಹ ಬಂದು ಹೋಯಿತು, ಮುಂದೇನು...?

ಪ್ರವಾಹ ಪರಿಸ್ಥಿತಿ ಅವಲೋಕನ ಮಾಡಿದಾಗ ನೀರಿನ ವ್ಯವಸ್ಥಿತ ನಿರ್ವಹಣೆಯಲ್ಲಿ ಇರಬೇಕಾದ ಕನಿಷ್ಠತಮ ಅನುಭವ ಮತ್ತು ಜ್ಞಾನದ ಕೊರತೆ ಕಾಣುತ್ತದೆ. ಬರಗಾಲವನ್ನು ತಾತ್ಕಾಲಿಕವಾಗಿ ಮುಂದೂಡಿದಂತೆ ಮತ್ತು ಪ್ರವಾಹವನ್ನು ತಾತ್ಕಾಲಿಕವಾಗಿ ಮುಂದೂಡಲಾಗದು ಎಂಬ ಪರಿಜ್ಞಾನದ ಕೊರತೆ ಮೇಲ್ನೋಟಕ್ಕೆ ಎದ್ದು ಕಾಣುತ್ತದೆ. ಪ್ರಕೃತಿ ನಿರ್ಮಿತ ಮತ್ತು ಮಾನವ ನಿರ್ಮಿತ ಎಂಬ ಎರಡು ವಿಧದ ಕಾರಣಗಳಿಂದ ಸಂಕಷ್ಟಗಳು ನಮ್ಮ ಪ್ರದೇಶದ ಜನರನ್ನು ಕಾಡುತ್ತಿವೆ. ಕಾಡಿವೆ. 

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಭೀಮಾ, ಕೃಷ್ಣ, ಗೋದಾವರಿ, ತುಂಗಭದ್ರಾ ನದಿಗಳು ಮತ್ತು ಅವುಗಳ ಉಪನದಿಗಳ ವಿಸ್ತೃತ ಜಾಲವಿದೆ. ಮಳೆ ಆಶ್ರಿತ ಪ್ರದೇಶವಾದ ಕಾರಣ ಮಳೆಗಾಲದಲ್ಲಿ ತುಂಬಿ ಹರಿವ ನದಿಗಳು ಬೇಸಿಗೆಯಲ್ಲಿ ಬತ್ತುತ್ತವೆ. ಯಾವ ರಾಜ ಬಂದರೂ ರಾಗಿ ಬೀಸುವುದು ತಪ್ಪುವುದಿಲ್ಲ ಎಂಬಂತೆ ಮಳೆ ಬಂದರೆ ಪ್ರವಾಹ ಬರದಿದ್ದಲ್ಲಿ ಬರಗಾಲ ಎಂಬಂತೆ ಒಟ್ಟಿನಲ್ಲಿ ಸಂಕಷ್ಟ, ಸರಮಾಲೆಗಳು ಕಲ್ಯಾಣ ಕರ್ನಾಟಕ ಪ್ರದೇಶದ ಜನರ ಜೀವನದ ರೀತಿನೀತಿಗಳಾಗಿವೆ. ಮೊದಲೇ ಕೊರೋನ ಪೀಡೆಯಿಂದ ಕಂಗೆಟ್ಟಿದ್ದ ಜನರಿಗೆ ಈ ಸಲದ ಮಳೆಯಿಂದ ಭೀಮಾ, ಕೃಷ್ಣ ಮತ್ತು ತುಂಗಭದ್ರಾ ನದಿಗಳು ಮೈತುಂಬಿ ಮೇಲೆದ್ದು, ಮೈಕೊಡವಿ ನಿಂತಾಗ ಪ್ರವಾಹದ ರುದ್ರ ದರ್ಶನ ಮಾಡಿಸಿದವು. ಮಳೆಯ ಅಭಾವದಿಂದ ಪ್ರತಿಸಲದಂತೆ ಬರಗಾಲದ ಬೇಗೆಯಲ್ಲಿ ಬಳಲುತ್ತಿದ್ದ ಜನರಿಗೆ ಮಳೆ ಬಂದು ಹೊಸ ಅನುಭವ ನೀಡಿದೆ. ಮಹಾರಾಷ್ಟ್ರದಿಂದ ಏಕಾಏಕಿ ಲಕ್ಷಗಟ್ಟಲೆ ಕ್ಯೂಸೆಕ್ ನೀರು ಬಿಟ್ಟದ್ದರಿಂದ ಭೀಮಾ, ಕೃಷ್ಣಾ ನದಿಗಳ ಉಪನದಿಗಳು ಸ್ವತಃ ಸ್ವತಂತ್ರ ನದಿಗಳಾಗಿ ಮಾರ್ಪಟ್ಟವು. ನದಿ ಪಾತ್ರದ ಉದ್ದ, ಅಗಲಗಳಲ್ಲಿ ನಿರ್ಮಿಸಿದ ರಸ್ತೆ, ಕೆರೆಗಳು ತುಂಬಿ ಅಣೆಕಟ್ಟುಗಳು ಒಡೆದು ನದಿತೀರದ ಹಳ್ಳಿಗಳನ್ನು ಅಕ್ಷರಶ: ಸ್ವಾಹಮಾಡಿದವು. ಹೊಲಗದ್ದೆಗಳಷ್ಟೇ ಅಲ್ಲ ರಸ್ತೆಗಳು, ಸೇತುವೆಗಳ ಮೇಲೆ ನೀರು ತುಂಬಿತು. ಮನೆಗಳಿಗೆ ನುಗ್ಗಿ ಕೇಕೆ ಹಾಕಿತು. ಜಲಪ್ರಳಯದಿಂದಾಗಿ ಸಮುದ್ರವನ್ನೇ ಕಾಣದ ಜನರಿಗೆ ಸಮುದ್ರದ ದರ್ಶನ ಮಾಡಿಸಿದವು. ಶ್ರೀಮಂತ, ಬಡವರೆನ್ನದೆ ಮನೆಗೆ ನುಗ್ಗಿದ ನೀರು ಜನರ ಬದುಕನ್ನು ಬಟಾಬಯಲಾಗಿಸಿತು. ಅನೇಕ ಹಳ್ಳಿಗಳ ಸಂತ್ರಸ್ತರಿಗೆ ತಲೆ ಮೇಲೆ ಸೂರಿರಲಿಲ್ಲ. ಹಲವು ಗಂಟೆಗಳ ಕಾಲ ನೀರಿನ ನಡುವೆ ಇದ್ದರೂ ದಾಹ ತಣಿಸುವ ಕುಡಿಯುವ ನೀರ ಹನಿ ಸಿಗಲಿಲ್ಲ. ಹಸಿವೆ ನೀಗಿಸುವ ಅನ್ನ ಸಿಗಲಿಲ್ಲ. ಶರೀರ ಬೆಚ್ಚಗಿಡಲು ಬಟ್ಟೆಗಳಿಗಾಗಿ ಬಡಿದಾಡುವಂತೆ ಆಯಿತು. ಎಲ್ಲವೂ ಇದ್ದ ಮನೆಯಲ್ಲಿ ಪ್ರವಾಹದಿಂದಾಗಿ ಎಲ್ಲವೂ ನೀರುಪಾಲಾಗಿ ಮಕ್ಕಳು ವೃದ್ಧರೆನ್ನದೆ, ಬಡವ ಶ್ರೀಮಂತರೆನ್ನದೆ ಜನರೆಲ್ಲರೂ ಅಕ್ಷರಶಃ ಬೀದಿಗೆ ಬಂದರು.

ಕಲ್ಯಾಣ ಕರ್ನಾಟಕದ ಪ್ರದೇಶದಲ್ಲಿ ಪ್ರತಿ ವರ್ಷ ಬೇಕೋ ಬೇಡವೋ ಬರಗಾಲವಂತೂ ಅತಿಥಿಯಂತೆ ಕರೆಯದೇ ಬರುತ್ತದೆ. ಕಾಡುತ್ತದೆ. ಪ್ರದೇಶದ ಜನ ಬರಗಾಲಕ್ಕೆ ಎಷ್ಟು ಹೊಂದಿಕೊಂಡಿದ್ದಾರೆ ಎಂದರೆ ‘‘ಎಷ್ಟು ಕಾಡತಿ ನೀ ಕಾಡು, ನೀ ಕಾಡಿದಷ್ಟು ಎನಗೆ ಪಾಡು’’ (ಒಳ್ಳೆಯದು) ಎಂದು ನಂಬಿದ್ದಾರೆ. ತಿಂಗಳುಗಳ ಕಾಲ ಬರಗಾಲ ಎದುರಿಸುವ ಚೈತನ್ಯವಂತ ಬಯಲುನಾಡಿನ ಜನರು ಈ ಸಲ ಮಲೆನಾಡಿನಂತೆ ಧೋ ಎಂದು ಸುರಿದ ಮಳೆಗೆ ಕಂಗಾಲಾಗಿ ಕೈಚೆಲ್ಲಿ ಕುಳಿತರು.

ಬರಗಾಲಕ್ಕೆ ಹೊಂದಿಕೊಂಡು ಬದುಕುತ್ತಿರುವ ಜನರಿಗಾಗಿ ಮಂತ್ರಿಗಳು, ಶಾಸಕರು, ಅಧಿಕಾರಿಗಳು ಮೂಗಿಗೆ ತುಪ್ಪಸವರುವ ರೀತಿಯಲ್ಲಿ ತಾತ್ಕಾಲಿಕ ಕಾಮಗಾರಿಗಳನ್ನು ಕೈಗೊಳ್ಳುತ್ತಾರೆ. ಉದಾ: ಕುಡಿವ ನೀರಿನ ಲಾರಿಗಳನ್ನು ಕಳಿಸುವುದು. ನೀರಿಲ್ಲದ ಜಾಗದಲ್ಲಿ ಬೋರ್‌ವೆಲ್ ಹಾಕುವುದು. ನೀರಿನ ಕಾಮಗಾರಿ ಹೆಸರಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ಮಾಡಿಸುವುದು... ಬರಗಾಲ ಹಲವರಿಗೆ ತೊಂದರೆ ಕೊಟ್ಟರೂ ಕೆಲವರಿಗೆ ಸುಖಕಾಲ ತಂದಿರುತ್ತದೆ ಎಂಬ ಸತ್ಯ ಸ್ಪಷ್ಟವಾಗುತ್ತದೆ. ಎಲ್ಲವೂ ತಾತ್ಕಾಲಿಕ ಕೆಲಸಗಳು. ಶಾಶ್ವತ ರೀತಿಯ ಕೆಲಸ ಮಾಡಿದರೆ ಮುಂದಿನ ವರ್ಷ ಮಾಡುವುದಾದರು ಏನು? ಎಂಬುದು ಅಧಿಕಾರಿಗಳಿಗೆ ಕಾಡುವ ಯಕ್ಷಪ್ರಶ್ನೆ ಆಗುತ್ತದೆ. ಅಲ್ಪತೃಪ್ತರಾದ ಜನರಿರುವ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ದೂರದೃಷ್ಟಿಯುಳ್ಳ ಶಾಶ್ವತ ಅಥವಾ ದೀರ್ಘಕಾಲದ ಕಾಮಗಾರಿಗಳ ಯೋಜನೆ ರೂಪಿಸಿ ಅನುಷ್ಠಾನ ಮಾಡುವ ಚಿಂತನೆ ಮಾಡಿಲ್ಲ. ಈ ಸಲ ನಿರಂತರ ಧೋ ಎಂದು ಸುರಿದ ಮಳೆಯಿಂದಾಗಿ ಮಹಾರಾಷ್ಟ್ರದಿಂದ ನದಿಗಳಿಗೆ ದಿಢೀರನೇ ಬಿಟ್ಟ ಲಕ್ಷಲಕ್ಷ ಕ್ಯೂಸೆಕ್ಸ್ ನೀರು ನಿರ್ವಹಣೆ ಮಾಡಲು ಜನ ಮತ್ತು ಅಧಿಕಾರಿಗಳಲ್ಲಿ ಪೂರ್ವ ಸಿದ್ಧತೆ ಇರಲಿಲ್ಲ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಐದಾರು ದಶಕಗಳಲ್ಲಿ ಕಂಡು ಕೇಳರಿಯದ ಮಲೆನಾಡಿನಂತಹ ಮಳೆ ಬಿಸಲುನಾಡಿನ ಕಲ್ಯಾಣ ಕರ್ನಾಟಕದಲ್ಲಿ ಬಂದಿದೆ. ಈ ಪ್ರದೇಶ 4-6 ತಿಂಗಳು ಬಿಸಿಲು ಕಾಣದಂತೆ ಮೋಡದಿಂದ ಆವೃತ ಅಥವಾ ಜಿಟಿಜಿಟಿ ಮಳೆಯಿಂದ ಕೂಡಿತ್ತು. ಭೀಮಾ, ಕೃಷ್ಣಾ ನದಿಗಳ/ ಉಪ ನದಿಗಳು ತುಂಬಿ ಒಂದೆಡೆ ಹರಿಯಬಿಟ್ಟ ನೀರು ಊರುಗಳನ್ನು ಹಾಳುಮಾಡಿದರೆ, ಮತ್ತೊಂದೆಡೆ ಹಿನ್ನೀರು ಬೆಳೆಗಳನ್ನು ಮನೆಗಳನ್ನು ನಾಶಮಾಡಿತು. ಮಳೆ ಚೆನ್ನಾಗಿ ಆಗಿದ್ದರಿಂದ ಮುಂಗಾರು ಬೆಳೆ (ಹೆಸರು, ಉದ್ದು, ಎಳ್ಳು, ಹತ್ತಿ, ಮೆಣಸಿನಕಾಯಿ, ತೊಗರಿ ಮುಂತಾದ ಬೆಳೆಗಳು) ಹೊಲದಲ್ಲಿ ಇತ್ತು. ಆದರೆ ಬೆಳೆ ಕಂಡ ರೈತನ ಮುಖದಲ್ಲಿನ ಮಂದಹಾಸವನ್ನು ಪ್ರವಾಹ ಕಣ್ಣೀರಾಗಿ ಪರಿವರ್ತಿಸಿತು. ಕಣ್ಣಿಗೆ ಕಾಣಿಸಿದ ಮುಂಗಾರಿನ ಸಮೃದ್ಧ ಬೆಳೆ ನಿರಂತರ ಮಳೆಯಿಂದಾಗಿ ರಾಶಿ ಮಾಡಲಾಗದೆ ಮನೆ ತುಂಬಲಿಲ್ಲ. ಭೂಮಿಯಲ್ಲಿ ಹಿಂಗಾರು ಬಿತ್ತನೆ ಸೂಕ್ತ ಸಮಯದಲ್ಲಿ ಮಾಡಲಾಗಲಿಲ್ಲ. ಹೆಸರು ಹೆಸರಿಲ್ಲದೆ ಹೋಯ್ತು, ತೊಗರಿ ಬೆಳೆ ಹಳದಿ ಆಯ್ತು. ಹತ್ತಿ ಹಾಳಾಯ್ತು, ಭತ್ತ ಪ್ರವಾಹಕ್ಕೆ ಕೊಚ್ಚಿ ಹೋಯ್ತು. ಜೋಳ ಬಿತ್ತಲಾಗಲಿಲ್ಲ. ಅಳಿದುಳಿದ ತೊಗರಿ, ಮುಂದೆ ಬರಬಹುದಾದ ಜೋಳದ ಆಸೆ ಕನಸು ಹೊತ್ತು ಬದುಕು ಕಟ್ಟಿಕೊಳ್ಳಲು ರೈತ ಪ್ರಯತ್ನಿಸುತ್ತಿದ್ದಾನೆ. ಪ್ರವಾಹದಿಂದ ಮನೆ ಒಳಗೆ ನುಗ್ಗಿದ ನೀರು ಅನೇಕ ಗ್ರಾಮೀಣರ ಬದುಕನ್ನು ಕೊಚ್ಚಿ ಹಾಕಿತು. ಜಲಾವೃತವಾಗಿ ಮನೆಗಳು ಕುಸಿದವು. ಗೋವು, ಆಡು, ಕುರಿಗಳು ಸೇರಿದಂತೆ ಪಶುಸಂಪತ್ತು ಜಲಸಮಾಧಿಯಾಗಿವೆ. ಸಂಕಷ್ಟಗಳು ನಿರಂತರ ನಿತ್ಯ ಬೆಂಬಿಡದೆ ಕಾಡುತ್ತಿವೆ. ಪ್ರವಾಹ ಪರಿಸ್ಥಿತಿ ಅವಲೋಕನ ಮಾಡಿದಾಗ ನೀರಿನ ವ್ಯವಸ್ಥಿತ ನಿರ್ವಹಣೆಯಲ್ಲಿ ಇರಬೇಕಾದ ಕನಿಷ್ಠತಮ ಅನುಭವ ಮತ್ತು ಜ್ಞಾನದ ಕೊರತೆ ಕಾಣುತ್ತದೆ. ಬರಗಾಲವನ್ನು ತಾತ್ಕಾಲಿಕವಾಗಿ ಮುಂದೂಡಿದಂತೆ ಮತ್ತು ಪ್ರವಾಹವನ್ನು ತಾತ್ಕಾಲಿಕವಾಗಿ ಮುಂದೂಡಲಾಗದು ಎಂಬ ಪರಿಜ್ಞಾನದ ಕೊರತೆ ಮೇಲ್ನೋಟಕ್ಕೆ ಎದ್ದು ಕಾಣುತ್ತದೆ. ಪ್ರಕೃತಿ ನಿರ್ಮಿತ ಮತ್ತು ಮಾನವ ನಿರ್ಮಿತ ಎಂಬ ಎರಡು ವಿಧದ ಕಾರಣಗಳಿಂದ ಸಂಕಷ್ಟಗಳು ನಮ್ಮ ಪ್ರದೇಶದ ಜನರನ್ನು ಕಾಡುತ್ತಿವೆ. ಕಾಡಿವೆ. ಸನಾತನರ ಪ್ರಕೃತಿ ಸ್ನೇಹಿ ಜೀವನಕ್ಕೆ ವಿದಾಯ ಹೇಳಿದ್ದು ಬಹು ಮಹತ್ವದ ಕಾರಣವಾಗಿದೆ. ಪ್ರವಾಹಕ್ಕೆ ನಿರಂತರ ಮಳೆ ಕಾರಣ ಅನ್ನಿಸಿದರೂ ನದಿ ನೀರಿನ ವ್ಯವಸ್ಥೆ ಸಮರ್ಪಕವಾಗಿ ಮಾಡದ್ದು ಮುಖ್ಯ ಕಾರಣವೆಂದು ಕಾಣುತ್ತದೆ. ಕಲ್ಯಾಣ ಕರ್ನಾಟಕ ಪ್ರದೇಶದ ಪ್ರಮುಖ ನದಿಗಳಾದ ಭೀಮೆ, ಕೃಷ್ಣೆಗೆ ಪ್ರವಾಹಕ್ಕೆ ಕಾರಣ ಮಹಾರಾಷ್ಟ್ರದ ಮುಂಬೈ ಮತ್ತು ಪೂನಾದಲ್ಲಿ ಆಗುವ ಮಳೆಯ ಪ್ರಮಾಣ ಮತ್ತು ಅಲ್ಲಿನ ಅಣೆಕಟ್ಟುಗಳಿಂದ ಬಿಡುವ ಲಕ್ಷ ಲಕ್ಷ ಕ್ಯೂಸೆಕ್ಸ್ ನೀರಿನ ಪ್ರಮಾಣವಾಗಿದೆ. ಹಿಂದಿನ ದಶಕಗಳಲ್ಲಿ ಕೆರೆಗಳಲ್ಲಿನ ನೀರು ನಿರ್ವಹಿಸಲು ನೀರಗಂಟಿ ಎಂಬ ಹುದ್ದೆ ಇರುತ್ತಿತ್ತು. ಅಲ್ಲಿರುವ ವ್ಯಕ್ತಿ ಅನಕ್ಷರಸ್ಥನಾಗಿದ್ದರೂ ನೀರು ನಿರ್ವಹಣೆಯಲ್ಲಿ ಪರಿಣತನಾಗಿರುತ್ತಿದ್ದ. ದಿನ ನಿತ್ಯ ಕೆರೆಯನ್ನು ಸುತ್ತಿ ಸೂಕ್ಷ್ಮವಾಗಿ ಗಮನಿಸುತ್ತಿದ್ದ. ಕೆರೆಯ ನೀರು ಸದ್ಬಳಕೆಯಾಗುವಂತೆ ಯೋಜನೆ ಮಾಡುತ್ತಿದ್ದ. ವಿಪರೀತ ಮಳೆಯಾಗಿ ಕೋಡಿ ಒಡೆಯುವ ಸಂದರ್ಭದಲ್ಲಿ ಹೆಚ್ಚಿನ ನೀರು ಬಿಡುವ ಬಗ್ಗೆ ಮತ್ತು ಕೆರೆಗೆ ಒಡೆದರೆ ಅದನ್ನು ಹಗಲು ರಾತ್ರಿ ಎನ್ನದೆ ಸಂಬಂಧಿಸಿದವರ ಗಮನಕ್ಕೆ ತಂದು ತಕ್ಷಣ ನಿಯಂತ್ರಿಸಿ ನೀರು ಸಂರಕ್ಷಣೆಗೆ ಪ್ರಯತ್ನಿಸುತ್ತಿದ್ದ. ಅದೇ ರೀತಿ ಮಳೆಯಿಂದ ಹಾಳಾಗುತ್ತಿರುವ ರಸ್ತೆಗಳನ್ನು ಸಂಚಾರಯೋಗ್ಯವಾಗಿ ಮಾಡುವ ಗ್ಯಾಂಗ್‌ಮೆನ್ ವ್ಯವಸ್ಥೆ ಅಂದಿನ ಲೋಕೋಪಯೋಗಿ ಇಲಾಖೆಯಲ್ಲಿತ್ತು. ಅಲ್ಪಸ್ವಲ್ಪ ಹಾಳಾದ ಅಥವಾ ಹಾಳಾಗಬಹುದಾದ ರಸ್ತೆಗಳ ದುರಸ್ತಿ(ಮರಮ್ಮತ್ತಿಗೆ) ಗ್ಯಾಂಗಮನ್‌ಗಳ ತಂಡ ಮತ್ತು ಕೆರೆಕಟ್ಟೆಗಳ ಮೇಲ್ವಿಚಾರಣೆ, ನಿರ್ವಹಣೆಗೆ ನೀರಡಿಗ ಸಿಬ್ಬಂದಿ ಸದಾ ಸಿದ್ಧವಾಗಿರುತ್ತಿತ್ತು. ಅವರು ಬೇಸಿಗೆಕಾಲ, ಮಳೆಗಾಲ, ಚಳಿಗಾಲ ಯಾವುದೇ ಇರಲಿ ಎಲ್ಲಕಾಲಗಳಲ್ಲಿ ಅವುಗಳ ಬಗ್ಗೆ ಗಮನಹರಿಸಿ ತಕ್ಕಣ ದುರಸ್ತಿ ಮಾಡುತ್ತಿದ್ದರು. ಹರಿದಾಗ ಹಾಕಿದ ಒಂದು ಹೊಲಿಗೆ ಅನೇಕ ರಕ್ಷಣಾತ್ಮಕ ಕೆಲಸಗಳಿಗೆ ಪೂರಕವಾಗುತ್ತಿತ್ತು. ಪುಸ್ತಕದ ಜ್ಞಾನ ಹೊಂದಿರುವ ಇಂಜಿನಿಯರ್‌ಗಳಿಗೆ ನದಿ, ಹಳ್ಳ, ಕೆರೆಗಳ ನಿರ್ವಹಣೆಯ ಪ್ರಾಥಮಿಕ ಶಿಕ್ಷಣದ ಕೊರತೆ ಇದೆ. ಹಿರಿಯರಿಂದ ಸಿಗುವ ಅನುಭವ ಕಡಿಮೆ ಕಾರಣವಾಗಿದೆ. ಕೆರೆ, ಹಳ್ಳ, ನದಿ, ಸರೋವರ ಮತ್ತು ಸಮುದ್ರಗಳಂತಹ ಜಲಾಶಯಗಳಲ್ಲಿ ಸಂಗ್ರಹವಾದ ನೀರು ಸೂರ್ಯನ ಬಿಸಿಲಿಗೆ ಆವಿಯಾಗಿ ಮೋಡವಾಗಿ ಬೆಟ್ಟ ಗುಡ್ಡಗಳು, ಎತ್ತರದ ಕಾಡುಗಳಲ್ಲಿ ಮಳೆಯಾಗಿ ಭೂಮಿಗೆ ಸುರಿಯುತ್ತದೆ. ಅದೇ ನೀರು ಮತ್ತೆ ಕೆರೆ, ಹಳ್ಳ, ನದಿ, ಸರೋವರ ಮತ್ತು ಸಮುದ್ರ ಸೇರುವುದನ್ನು ಮಳೆಯ ಚಕ್ರ ಎಂದು ಕರೆಯಲಾಗುತ್ತಿತ್ತು. ಮಾನವನ ಅತಿಯಾಸೆ, ಸ್ವಾರ್ಥದ ಕಾರಣದಿಂದಾಗಿ ಜಲಾನಯನ ಪ್ರದೇಶದ ಒತ್ತುವರಿಯಾಗಿ ನೀರಿನ ಚಕ್ರ ಸ್ತಬ್ಧವಾಗಿದೆ. ಪ್ರಕೃತಿ ಶೋಷಣೆ ಹೆಚ್ಚಾಗಿದೆ. ನೀರಿನ ವ್ಯವಸ್ಥಿತ ನಿರ್ವಹಣೆಗೆ ಮಾದರಿಯಾಗುವಂತೆ ನಮ್ಮ ಹಿರಿಯರು ದೀಪಾವಳಿಯ ಮೊದಲ ದಿನ ನೀರು ತುಂಬುವ ಹಬ್ಬ ನೀಡಿದ್ದಾರೆ. ಹಬ್ಬದ ಸಂದರ್ಭದಲ್ಲಿ ನೀರು ಕಡಿಮೆ ಆಗದಂತೆ ಇರಲು ನೀರು ಸಂಗ್ರಹ ಮಾಡಿಕೊಂಡು ನಿರ್ವಹಣೆ ಮಾಡಿ ಎಂಬ ಸಂದೇಶ ಇದೆ. ಕೃಷಿಕರಿಗೆ ಮಳೆಗಾಲ ಮುಗಿಯುತ್ತ ಬಂತು. ಕೆರೆ ಕಟ್ಟೆಗಳಲ್ಲಿ ನೀರು ತುಂಬಿರುವಂತೆ ನೋಡಿಕೊಳ್ಳಿ ಮತ್ತು ಮುಂದಿನ ಮಳೆಗಾಲದವರೆಗೆ ನೀರಿನ ಕೊರತೆ ಕಾಡದಂತೆ ನೀರು ನಿರ್ವಹಣೆ ಮಾಡಿ ಎಂಬ ಸಂದೇಶ ನೀರು ತುಂಬುವ ಹಬ್ಬ ನೀಡುತ್ತದೆ.

 ಕಳೆದ 3-4 ದಶಕಗಳಿಂದ ಹೆಚ್ಚು ಮಳೆ ಬರದೇ ಇದ್ದ ಕಾರಣ ಬೆಂಗಳೂರಿನಲ್ಲಿ ರಾಜ ಕಾಲುವೆ ಒತ್ತುವರಿಯಂತೆ ಕಲ್ಯಾಣ ಕರ್ನಾಟಕದ ಪ್ರದೇಶಗಳಲ್ಲಿ ಹರಿವ ನದಿ, ಉಪನದಿ, ಹಳ್ಳ, ಕೆರೆಗಳ ನೀರು ಹರಿವು ಇರುವ ಜಾಗ ಒತ್ತುವರಿಯಾಗಿದೆ. ಬೆಟ್ಟಗುಡ್ಡಗಳಿಂದ ತಡೆ ತಡೆದು ಹರಿದು ಬರುತ್ತಿದ್ದ ನೀರು, ಅವುಗಳ ನಾಶದಿಂದ ಧುಮ್ಮಿಕ್ಕಿ ಹರಿದು ಬಂದಿತು. ಅತ್ಯಂತ ಭೀಕರ ಮಳೆಯಿಂದ ಬಂದ ನೀರು ತನ್ನ ಸ್ವಾಭಾವಿಕ ದಾರಿಯಲ್ಲಿರುವ ಒತ್ತುವರಿ ಅಥವಾ ಅಡಚಣೆಗಳಿಂದ ಸಿಕ್ಕಸಿಕ್ಕ ಕಡೆ ನುಗ್ಗಿ ಅನಾಹುತ, ಆತಂಕ ಸೃಷ್ಟಿಸಿದೆ. ಪ್ರವಾಹದ ಭೀಕರತೆ ಹೆಚ್ಚಿಸಿದೆ. ನಗರಪ್ರದೇಶಗಳಲ್ಲಿ ಎಲ್ಲಡೆ ಟಾರ್, ಸಿಮೆಂಟ್ ರಸ್ತೆಗಳು, ಅವ್ಯವಸ್ಥಿತ ಚರಂಡಿ, ಒಳಚರಂಡಿಗಳಿಂದಾಗಿ ರಸ್ತೆ ಮೇಲೆ ಹಳ್ಳಗಳ ದೃಶ್ಯ ಕಾಣುವಂತಾಯಿತು. ನಿರಂತರ ಮಳೆ, ಜಲಾನಯನ ಅಚ್ಚುಕಟ್ಟು ಪ್ರದೇಶದಲ್ಲಿ ಬೀಳಬಹುದಾದ ಮಳೆ, ನೀರಿನ ಒಳ ಹರಿವು, ಬಿಡಬೇಕಾದ ಹೊರ ಹರಿವು, ನದಿ ತೀರದ ಪ್ರದೇಶಗಳಲ್ಲಿನ ಜನರಿಗೆ ಎಚ್ಚರಿಕೆ ನೀಡುವುದು ಮುಂತಾದ ಮುಂಜಾಗರೂಕತೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಪ್ರವಾಹ ಪರಿಸ್ಥಿತಿಯನ್ನು ಹತೋಟಿಯಲ್ಲಿಡಬಹುದಿತ್ತು. ಮುಖ್ಯವಾಗಿ ಮಹಾರಾಷ್ಟ್ರದ ಅಧಿಕಾರಿಗಳೊಡನೆ ಸೌಹಾರ್ದ ಸಂಪರ್ಕ ಇದ್ದಲ್ಲಿ ಅನುಕೂಲವಾಗುತ್ತಿತ್ತು. ಕರ್ನಾಟಕದ ನೀರಾವರಿ ಅಧಿಕಾರಿಗಳು, ಮಹಾರಾಷ್ಟ್ರದ ನೀರಾವರಿ ಅಧಿಕಾರಿಗಳ ಜೊತೆ ಸಂಪರ್ಕ ಸಂವಹನ, ಸಹಕಾರದ ಕೊರತೆಯಿಂದ ಭೀಮಾ, ಕೃಷ್ಣಾ ನದಿಗಳಿಗೆ ಅನಿಯಂತ್ರಿತ ನೀರು ಬಿಡಲಾಗುತ್ತಿದೆ. ನೀರು ನಿರ್ವಹಣೆ ಒಂದು ವಿಶಿಷ್ಟ ಕೌಶಲ್ಯ. ಪುಸ್ತಕ ಜ್ಞಾನದ ಜೊತೆಗೆ ಅನುಭವ ಜ್ಞಾನ ಮೇಳೈಸಿ ನೀರು ನಿರ್ವಹಣೆ (ವಾಟರ್ ಮ್ಯಾನೇಜ್‌ಮೆಂಟ್) ಮಾಡಿದಾಗ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಾಧಿಸಲಾಗದ ಜಲ ಸಂರಕ್ಷಣೆ, ಜಲ ಸಂವರ್ಧನೆ ಮಾಡಿ ಪ್ರದೇಶಗಳಲ್ಲಿ ಸಂಭವಿಸಬಹುದಾದ ಬರಗಾಲ ಮತ್ತು ಪ್ರವಾಹಗಳಿಂದ ಮುಕ್ತಿ ಪಡೆಯಬಹುದು. ಅಂದು ಯಾವುದನ್ನು ಗ್ರಾಮದ ನೀರಗಂಟಿ ಸಮರ್ಥವಾಗಿ ನಿರ್ವಹಿಸುತ್ತಿದ್ದನೋ ಇಂದು ಅದನ್ನು ಸಿವಿಲ್ ಇಂಜಿನಿಯರ್ ನಿರ್ವಹಿಸಲಾಗುತ್ತಿಲ್ಲ. ಏಕೆಂದರೆ ಕಾಲುವೆ, ಕೆರೆ, ಅಣೆಕಟ್ಟು ನಿರ್ಮಾಣ ಕುರಿತು ಸ್ವಲ್ಪಮಟ್ಟಿಗೆ ಕಲಿತಿರುತ್ತಾರೆ ವಿನಹ ನೀರಿನ ಪ್ರತ್ಯಕ್ಷ ಹಾಗೂ ವ್ಯವಸ್ಥಿತ ನಿರ್ವಹಣೆಯ ಶಿಕ್ಷಣ ಪಠ್ಯಕ್ರಮದಲ್ಲಿ ಇಲ್ಲದಿರುವುದು ಮುಖ್ಯ ಕಾರಣವಾಗಿ ಕಾಣಿಸುತ್ತದೆ. ರಸ್ತೆ ಆಗಲಿ, ಕೆರೆ ಕಟ್ಟೆಗಳಾಗಲಿ ಪೂರ್ಣ ಹಾಳಾದ ಮೇಲೆ ಪುನರ್ ನಿರ್ಮಿಸುವ ವಿಚಾರ ಮಾಡಲಾಗುತ್ತಿದೆ. ರಿಪೇರಿ ಆಗುವವರೆಗೆ ಜನರ, ಪಶು-ಪ್ರಾಣಿಗಳ ಜೀವಹಾನಿ ಸೇರಿದಂತೆ ಲೆಕ್ಕ ಇಡಲಾಗದಷ್ಟು ಹಾನಿ ಸಂಭವಿಸಿರುತ್ತದೆ.

ಪ್ರವಾಹ ಸಂದರ್ಭದಲ್ಲಿ ಸಂತ್ರಸ್ತರಿಗೆ ಸಹಾಯ ಹಸ್ತ ನೀಡುವ ಕೆಲಸ ಸರಕಾರ ಮತ್ತು ಸಂಘಸಂಸ್ಥೆಗಳು ಮಾಡಿವೆ. ದಿನಾ ಸಾಯುವವರಿಗೆ ಅಳುವವರಾರು? ಎಂಬಂತೆ ಪ್ರವಾಹ ಇಳಿದ ತಕ್ಷಣ ಎಲ್ಲ ದೂರಾಗಿವೆ. ಆದರೆ ಅಲ್ಲಿದ್ದವರ ಅಳಲು ಇನ್ನೂ ಮುಂದುವರಿದಿದೆ. ಸಂತ್ರಸ್ತರ ಸಂಕಷ್ಟಗಳನ್ನು ಸಾಮಾಜಿಕ ಜಾಲತಾಣದಲ್ಲಿ, ಟಿವಿ ಮಾಧ್ಯಮಗಳಲ್ಲಿ ನೋಡಿದ ಮತ್ತು ಪತ್ರಿಕೆಗಳಲ್ಲಿ ಸುದ್ದಿ ಓದಿದ ಸಂವೇದನಾಶೀಲ ವ್ಯಕ್ತಿಗಳು ಕಣ್ಣೀರು ಸುರಿಸಿದ್ದಾರೆ. ಕೈಲಾದ ಸಹಾಯ ನೀಡಿದ್ದಾರೆ. ಆದರೆ ಪ್ರವಾಹ ನಂತರದ ಜೀವನ ಕೂಡಾ ನರಕಯಾತನೆಯಂತೆ ಮುಂದುವರಿದಿದೆ. ಸಾಂಕ್ರಾಮಿಕ ರೋಗಗಳ ಹಾವಳಿ, ನಿರುದ್ಯೋಗ, ನಿತ್ಯದ ಊಟಕ್ಕೆ ಕೈಚಾಚುವ ಪರಿಸ್ಥಿತಿ, ಸರಕಾರ ಘೋಷಿಸಿದ ಅನುದಾನ ಅಂಗೈಗೆ ಬರದಿರುವುದು ಒಂದೇ ಎರಡೇ.. ಸಾಲು ಸಾಲು ಸಂಕಷ್ಟಗಳು.. ಸರಕಾರ ಇನ್ನಾದರೂ ಈ ಮಟ್ಟದ ಮಳೆ ಹಾನಿಯ ಕಾರಣಗಳನ್ನು ಗುರುತಿಸಿ ಅವುಗಳನ್ನು ಸರಿಪಡಿಸುವ ಮತ್ತು ಮುಂದೆ ಈ ಪರಿಸ್ಥಿತಿ ಮರುಕಳಿಸದಂತೆ ಮಾಡುವ ಕಾರ್ಯಕ್ಕೆ ಮುಂದಾಗಬೇಕಾಗಿದೆ. ಕಂಗಾಲಾದ ಜನತೆಗೆ ಬದುಕು ಕಟ್ಟಿಕೊಳ್ಳಲು ಮತ್ತು ಆತ್ಮಸ್ಥೈರ್ಯ ತುಂಬಲು ಮುಂದಾಗಬೇಕು. ಕಲ್ಯಾಣ ಕರ್ನಾಟಕದ ಅದರಲ್ಲೂ ಕಲಬುರಗಿ ಜಿಲ್ಲೆಯ ನದಿತೀರದ ಅಫ್ಝಲಪುರ, ಜೇವರ್ಗಿ, ಚಿತ್ತಾಪೂರ, ಚಿಂಚೋಳಿ, ಸೇಡಂ ತಾಲೂಕುಗಳ ಪ್ರವಾಹಪೀಡಿತ ಗ್ರಾಮಗಳ ಮತ್ತು ಯಾದಗಿರಿ ಜಿಲ್ಲೆಯ ಯಾದಗಿರಿ, ಶಹಾಪೂರ, ಸುರಪುರ ತಾಲೂಕಿನ ಗ್ರಾಮಗಳಲ್ಲಿನ ಪ್ರವಾಹ ಸಂತ್ರಸ್ತರ ಮುಖದಲ್ಲಿ ಮಂದಹಾಸ ಮೂಡಿಸಲು ಮುಂದಾಗಬೇಕು. ಮಾನವೀಯತೆಯಿಂದ ಸ್ಪಂದಿಸುವುದು ಕಾಲದ ಕರೆಯಾಗಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top