ಸೂಕ್ಷ್ಮತೆ ಇಲ್ಲದ ಸಮಾಜವೂ, ಸಂವೇದನೆ ಇಲ್ಲದ ವ್ಯವಸ್ಥೆಯೂ | Vartha Bharati- ವಾರ್ತಾ ಭಾರತಿ

--

ಸೂಕ್ಷ್ಮತೆ ಇಲ್ಲದ ಸಮಾಜವೂ, ಸಂವೇದನೆ ಇಲ್ಲದ ವ್ಯವಸ್ಥೆಯೂ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳಿಂದಲೇ ಆಯ್ಕೆಯಾಗುವ ಒಂದು ಸರಕಾರ, ದೇಶದ ಜನಸಾಮಾನ್ಯರ ನೋವು ಸಂಕಷ್ಟಗಳಿಗೆ ತಕ್ಷಣವೇ ಸ್ಪಂದಿಸುವುದು ಅತ್ಯಗತ್ಯ. ಪ್ರಜಾಸತ್ತಾತ್ಮಕ ಆಳ್ವಿಕೆ ಎಂದರೆ ಕೇವಲ ಸಾರ್ವತ್ರಿಕ ಮತದಾನದ ಮೂಲಕ ಚುನಾಯಿತವಾಗಿ, ಅಧಿಕಾರ ನಡೆಸುವ ಸಾಂಸ್ಥಿಕ ಪ್ರಕ್ರಿಯೆ ಮಾತ್ರ ಅಲ್ಲ ಎನ್ನುವ ವಾಸ್ತವವನ್ನು ಭಾರತದ ಆಳುವ ವರ್ಗಗಳು ಅರ್ಥಮಾಡಿಕೊಳ್ಳಬೇಕಿದೆ. ಸಮಾಜದಲ್ಲಿ ನಡೆಯುವ ಪ್ರತಿಯೊಂದು ದುರಂತಗಳಿಗೂ, ಉಂಟಾಗುವ ಪ್ರತಿಯೊಂದು ವ್ಯತ್ಯಯಗಳಿಗೂ, ಜನಸಾಮಾನ್ಯರು ಎದುರಿಸುವ ಪ್ರತಿ ಸಂಕಷ್ಟಕರ ಸಮಸ್ಯೆಗಳಿಗೂ ಕೂಡಲೇ ಸ್ಪಂದಿಸುವುದರ ಮೂಲಕವೇ ಆಳುವ ವರ್ಗ ತನ್ನ ಮತ್ತು ಪ್ರಜೆಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಸಾಧ್ಯ. ಭಾರತದ ದುರಂತ ಎಂದರೆ ಇಂದಿನ ಆಡಳಿತ ವ್ಯವಸ್ಥೆ ಜನತೆಯ ನೋವಿಗೆ ಕಿವಿಗೊಡಲೂ ಮುಂದಾಗುತ್ತಿಲ್ಲ. ರೈತ ಮುಷ್ಕರದ ಬಗ್ಗೆ ಆಡಳಿತ ವ್ಯವಸ್ಥೆಯ ಚೌಕಟ್ಟಿನಲ್ಲೇ ನಡೆಯುತ್ತಿರುವ ಹಿಂಸಾಕಾಂಡ, ಹತ್ಯಾಕಾಂಡದ ಬಗ್ಗೆ ದೇಶದ ಪ್ರಧಾನಿಗಳೂ ಮೌನ ವಹಿಸಿರುವುದೇ ಸಾಕ್ಷಿ.

ಅಸ್ಸಾಮಿನಲ್ಲಿ ಪೊಲೀಸರಿಂದಲೇ ನಡೆದ ಅಮಾಯಕರ ಹತ್ಯೆ, ಛಾಯಾಗ್ರಾಹಕನೊಬ್ಬನ ಶವನರ್ತನ, ಇತ್ತೀಚೆಗೆ ಲಖಿಂಪುರದಲ್ಲಿ ಕೇಂದ್ರ ಸಚಿವರ ಪುತ್ರನಿಂದಲೇ ನಡೆದ ಹತ್ಯೆ, ಕರ್ನಾಟಕದ ಯಾದಗಿರಿಯಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ, ಬೆಳಗಾವಿಯಲ್ಲಿ ಮತಾಂಧರಿಂದ ನಡೆದ ಮುಸ್ಲಿಂ ಯುವಕನ ಕೊಲೆ ಈ ಘಟನೆಗಳ ಬಗ್ಗೆ ಅಧಿಕಾರ ಪೀಠದಲ್ಲಿರುವವರು ಸ್ಪಂದಿಸುವುದಕ್ಕೂ ಹಿಂಜರಿಯುತ್ತಿರುವುದು, ಆಳ್ವಿಕರಲ್ಲಿನ ಅಸೂಕ್ಷ್ಮತೆಯನ್ನು ಬಿಂಬಿಸುತ್ತದೆ. ಈ ಅಸೂಕ್ಷ್ಮತೆಗೆ ಮತ್ತು ಸಂವೇದನಾರಹಿತ ನಿರ್ಲಜ್ಜತೆಗೆ ಒಂದು ಸಾಂಸ್ಕೃತಿಕ ಆಯಾಮ ಇರುವಂತೆಯೇ ರಾಜಕೀಯ ಆಯಾಮವೂ ಇದೆ. ಯಾವುದೋ ಒಂದು ರಾಜ್ಯದಲ್ಲಿ ನಡೆದ ರೈಲು ದುರಂತಕ್ಕೆ ನೈತಿಕ ಹೊಣೆ ಹೊತ್ತು ತಮ್ಮ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಲಾಲ್‌ಬಹಾದ್ದೂರ್ ಶಾಸ್ತ್ರಿ ಇಂದು ದಂತಕತೆಯಂತೆ ಕಾಣುತ್ತಾರೆ. ತಮ್ಮ ಸಚಿವರ ಪುತ್ರನಿಂದಲೇ ನಡೆಯಿತೆನ್ನುವ ಹತ್ಯೆಗೆ ಈ ದೇಶದ ಪ್ರಧಾನಿ ಪ್ರತಿಕ್ರಿಯಿಸಲೂ ಮುಂದಾಗದಿರುವುದನ್ನು ನೋಡಿದರೆ, ಭಾರತದ ಪ್ರಜಾಪ್ರಭುತ್ವ ಎಷ್ಟು ನಿರ್ದಯಿಯಾಗಿದೆ ಎಂದು ಅರಿವಾಗುತ್ತದೆ.

ನಿಷ್ಕ್ರಿಯತೆಯ ಸೈದ್ಧಾಂತಿಕ ಆಯಾಮ

ಭಾರತ ಇಂದು ಎರಡು ಅಪಾಯಗಳನ್ನು ಎದುರಿಸುತ್ತಿದೆ. ಒಂದು ಹಣಕಾಸು ಬಂಡವಾಳದ ಜಾಗತೀಕರಣ ಮತ್ತು ನವ ಉದಾರವಾದದ ಆರ್ಥಿಕ ನೀತಿಗಳು, ಮತ್ತೊಂದು ಹಿಂದುತ್ವ ರಾಜಕಾರಣದ ಸಾಂಸ್ಕೃತಿಕ ರಾಷ್ಟ್ರೀಯತೆ. ಈ ಎರಡೂ ವಿದ್ಯಮಾನಗಳು ಬಹುಮಟ್ಟಿಗೆ ಒಟ್ಟೊಟ್ಟಿಗೆ ಸಂಭವಿಸುತ್ತಿರುವುದನ್ನು ಕಳೆದ ಮೂರು ದಶಕಗಳಿಂದಲೂ ಗಮನಿಸುತ್ತಿದ್ದೇವೆ. ಬಲಪಂಥೀಯ ರಾಜಕಾರಣ ಮತ್ತು ನವ ಉದಾರವಾದದ ಸಾಫಲ್ಯಕ್ಕೆ ಪೂರಕವಾದ ವಾತಾವರಣವನ್ನು ಭಾರತದಲ್ಲೂ ಸೃಷ್ಟಿಸಲಾಗುತ್ತಿದೆ. ಒಂದೆಡೆ ಹೊಸ ಆರ್ಥಿಕ ನೀತಿಯಿಂದ ಅಭಿವೃದ್ಧಿ ಪಥದ ಅಂಚಿನಲ್ಲಿರುವ ಜನಸಮುದಾಯಗಳು ಮತ್ತಷ್ಟು ನಿರ್ಗತಿಕತೆಗೆ ದೂಡಲ್ಪಡುತ್ತಿದ್ದರೆ ಮತ್ತೊಂದೆಡೆ ಸಾಂಸ್ಕೃತಿಕ ರಾಜಕಾರಣ ಈ ಅವಕಾಶವಂಚಿತ ಜನರನ್ನು ಜಾತಿ-ಮತದ ಅಸ್ಮಿತೆಯ ಚೌಕಟ್ಟಿನಲ್ಲಿ ಬಂಧಿಸಿ, ವೈಚಾರಿಕತೆಯಿಂದ ದೂರ ಮಾಡುತ್ತಿದೆ. ಮಾರುಕಟ್ಟೆ ಮತ್ತು ಮತೀಯ ರಾಜಕಾರಣದ ಸಾಂಸ್ಥಿಕ ನೆಲೆಗಳ ಈ ಜಂಟಿ ಕಾರ್ಯಾಚರಣೆಯಲ್ಲಿ, ಒಂದು ಇಡೀ ಪೀಳಿಗೆ ನಿಷ್ಕ್ರಿಯತೆಯತ್ತ ಸಾಗುತ್ತಿರುವುದನ್ನು ಗಮನಿಸುತ್ತಿದ್ದೇವೆ.

ಬಂಡವಾಳಶಾಹಿ ಆರ್ಥಿಕ ಜಗತ್ತಿನಲ್ಲಿ ಎಲ್ಲವೂ ಮೌಲ್ಯೀಕರಣಕ್ಕೊಳಗಾಗುತ್ತವೆ. ಮಾರುಕಟ್ಟೆ ಕೇಂದ್ರಿತ ಆಡಳಿತ ವ್ಯವಸ್ಥೆಯಲ್ಲಿ ಉತ್ಪಾದನೆಯ ಸಂಬಂಧಗಳು ಆಳುವ ಬಂಡವಾಳಶಾಹಿ ವರ್ಗಗಳ ಪಾರಮ್ಯವನ್ನು ನಿರ್ಧರಿಸುವ ಮಾಪಕವಾದರೆ ಮನುಜ ಸಂಬಂಧಗಳು ಈ ಪಾರಮ್ಯವನ್ನು ಗಟ್ಟಿಗೊಳಿಸಲು ಅಗತ್ಯವಾದ ಸಾಮಾಜಿಕ ಮಾನದಂಡಗಳಾಗಿ ಪರಿಣಮಿಸುತ್ತವೆ. ಹಾಗಾಗಿ ಆರ್ಥಿಕ ಮಾರುಕಟ್ಟೆಯ ಬುನಾದಿಯನ್ನು ಸ್ಥಿರವಾಗಿರಿಸಲು, ಸಾಮುದಾಯಿಕ ವಿಘಟನೆಯ ನಡುವೆಯೇ, ವ್ಯಕ್ತಿಗತ ಮನುಜ ಸಂಬಂಧಗಳನ್ನು ನಿರ್ದಿಷ್ಟ ಕೋಮುಗಳ ಚೌಕಟ್ಟಿನೊಳಗೆ ಗಟ್ಟಿಗೊಳಿಸುತ್ತಾ, ತನ್ಮೂಲಕ ‘ಅನ್ಯ’ರನ್ನು ಸೃಷ್ಟಿಸುವ ಪ್ರಯತ್ನಗಳನ್ನೂ ಆಳುವ ವರ್ಗಗಳು ಮಾಡುತ್ತಲೇ ಇರುತ್ತವೆ. ಜಾತಿ ಮತಗಳ ಅಸ್ಮಿತೆಯ ಚೌಕಟ್ಟಿನಲ್ಲಿ ಧ್ರುವೀಕರಣಕ್ಕೊಳಗಾಗುವ ಯುವ ಪೀಳಿಗೆ, ನವ ಉದಾರವಾದ ಸೃಷ್ಟಿಸಿರುವ ಸಾಮಾಜಿಕಾರ್ಥಿಕ ಬಿಕ್ಕಟ್ಟುಗಳೆಲ್ಲವೂ ಈ ‘ಅನ್ಯ’ರ ಅತಿಕ್ರಮಣದಿಂದಲೇ ಸಂಭವಿಸುತ್ತಿದೆ ಎಂದು ಭಾವಿಸುವ ರೀತಿಯಲ್ಲಿ ನಿರೂಪಿಸಲಾಗುತ್ತದೆ. ಬಂಡವಾಳ ಮತ್ತು ಮಾರುಕಟ್ಟೆಯ ಹಿಡಿತದಲ್ಲಿರುವ ಸಂವಹನ ಮಾಧ್ಯಮಗಳು ಈ ನಿರೂಪಣೆಯನ್ನೇ ಸಾರ್ವತ್ರಿಕವಾಗಿಸಲು ಸಕಲ ಪ್ರಯತ್ನಗಳನ್ನೂ ಮಾಡುತ್ತವೆ. ಬಂಡವಾಳ, ಉತ್ಪಾದನೆ, ಸರಕು ಮಾರುಕಟ್ಟೆ, ಪದಾರ್ಥಗಳ ಸರಬರಾಜು ಮತ್ತು ಖರೀದಿ ಈ ಪ್ರಕ್ರಿಯೆಗಳ ಸುತ್ತ ಒಂದು ಪ್ರಭಾವಳಿಯನ್ನು ನಿರ್ಮಿಸುವ ನಿಟ್ಟಿನಲ್ಲಿ ಬಂಡವಾಳಶಾಹಿ ವ್ಯವಸ್ಥೆ ಮಾನವ ಸಮಾಜವನ್ನು ಸುಲಭವಾಗಿ ಬಂಧಿಸಬಹುದಾದ ಸಾಂಸ್ಕೃತಿಕ ನೆಲೆಗಳನ್ನೂ ಒಂದು ವಿನಿಮಯ ಸರಕಿನಂತೆಯೇ ಬಳಸಿಕೊಳ್ಳುತ್ತದೆ. ಶ್ರೇಣೀಕೃತ ಜಾತಿ ವ್ಯವಸ್ಥೆ ಪೀಡಿತ ಭಾರತದಲ್ಲಿ ಈ ಪ್ರಕ್ರಿಯೆಗೆ ಜಾತಿ ಸಂಬಂಧಗಳೂ, ಮತೀಯ ಅಸ್ಮಿತೆಗಳೂ ಲಾಭದಾಯಕ ಸರಕುಗಳಾಗಿ ಪರಿಣಮಿಸುತ್ತವೆ. ಸರಕುಗಳ ಉತ್ಪಾದನೆ, ವಿತರಣೆ, ವಿನಿಮಯ ಮತ್ತು ಮರು ಉತ್ಪಾದನೆ ಈ ಪ್ರಕ್ರಿಯೆಯಿಂದಾಚೆಗೂ ಒಂದು ಸಮಾಜದಲ್ಲಿ ಮನುಜ ಸಂಬಂಧಗಳು ಮಾರುಕಟ್ಟೆ ಸೂಕ್ಷ್ಮಗಳನ್ನು ಮೀರಿ ಬೆಳೆದಿರುತ್ತವೆ. ನಿತ್ಯ ಜೀವನದಲ್ಲಿ ಸಮಾಜದ ಪ್ರತಿಯೊಬ್ಬ ಸದಸ್ಯನೂ ತನ್ನ ಅಸ್ತಿತ್ವಕ್ಕಾಗಿ ಯಾವುದೋ ಒಂದು ಅಸ್ಮಿತೆಯ ಚೌಕಟ್ಟಿನಲ್ಲಿ ಬೌದ್ಧಿಕ ಬೆಳವಣಿಗೆಯನ್ನು ಬಯಸುತ್ತಿರುತ್ತಾನೆ.

ಈ ಬೌದ್ಧಿಕ ಚಿಂತನಾವಾಹಿನಿಯನ್ನು ನಿಯಂತ್ರಿಸದೆ ಹೋದರೆ, ಮಾರುಕಟ್ಟೆ ಆರ್ಥಿಕತೆ ಮತ್ತು ಬಂಡವಾಳಶಾಹಿಯ ಅಧಿಕಾರದ ಬೇರುಗಳು ಗಟ್ಟಿಯಾಗುವುದಿಲ್ಲ. ಪರಂಪರೆ, ಸಂಪ್ರದಾಯ ಮತ್ತು ಚಾರಿತ್ರಿಕ ಅಸ್ತಿತ್ವವನ್ನು ಕಾಪಾಡಿಕೊಂಡೇ ಬಂಡವಾಳಶಾಹಿ ವ್ಯವಸ್ಥೆಯ ಮಾರುಕಟ್ಟೆ ಸಂಸ್ಕೃತಿಗೆ ಒಗ್ಗಿಕೊಳ್ಳುವ ಒಂದು ಪ್ರಕ್ರಿಯೆಯನ್ನು ಸಹಜವಾಗಿಯೇ ಕಾಣಬಹುದು. ಈ ಪ್ರಕ್ರಿಯೆಯನ್ನು ನಿಯಂತ್ರಿಸುವ ಸಲುವಾಗಿಯೇ ಸಮಸ್ತ ಸಮಾಜದ ಚಿಂತನೆ ಮತ್ತು ಆಲೋಚನೆಗಳನ್ನು ಆಡಳಿತಾತ್ಮಕವಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಆಳುವ ವರ್ಗಗಳು ಎಂತಹ ಕ್ರೂರ ಮಾರ್ಗವನ್ನು ಬೇಕಾದರೂ ಅನುಸರಿಸಲು ಸಿದ್ಧವಾಗಿರುತ್ತವೆ. ಸರಕಾರ ತರಾತುರಿಯಲ್ಲಿ ಅನುಷ್ಠಾನಗೊಳಿಸುತ್ತಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020, ಈ ನಿಟ್ಟಿನಲ್ಲಿ ಒಂದು ವಿಕೃತ ಪ್ರಯತ್ನವಾಗಿದೆ. ಆಧುನಿಕ ಸಮಾಜವನ್ನು ಸಾಂಪ್ರದಾಯಿಕತೆಗೆ ಕರೆದೊಯ್ಯುವ ಹಿಮ್ಮುಖ ಚಲನೆಯನ್ನು ಈ ಶಿಕ್ಷಣ ನೀತಿಯಲ್ಲಿ ಗುರುತಿಸಬಹುದು. ಇದರೊಂದಿಗೆ ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಗಳಲ್ಲಿ, ಪರಂಪರೆ ಮತ್ತು ಸಂಪ್ರದಾಯದ ವೈಭವೀಕರಣದ ಮೂಲಕ, ಸಮಾಜದಲ್ಲಿ ಬೌದ್ಧಿಕ ನಿಷ್ಕ್ರಿಯತೆಯನ್ನು ಸೃಷ್ಟಿಸಲಾಗುತ್ತಿದೆ.

21ನೆಯ ಶತಮಾನದ ಆಧುನಿಕತೆಯ ನಡುವೆ, ಡಿಜಿಟಲ್ ಯುಗದ ಆವರಣದಲ್ಲಿ ಆತ್ಮನಿರ್ಭರ ಭಾರತದ ಆಳುವ ವರ್ಗ ಈ ಹಾದಿಯಲ್ಲಿ ಹೆಜ್ಜೆ ಹಾಕುತ್ತಿದೆ. ಜನಸಾಮಾನ್ಯರ ಬದುಕು ಮತ್ತು ಈ ಬದುಕಿನ ಸುತ್ತ ಬೆಸೆದುಕೊಳ್ಳುವ ಸಾಂಸ್ಕೃತಿಕ-ಸಾಮಾಜಿಕ ಆಲೋಚನೆಗಳು ತಮ್ಮ ಸ್ವಂತಿಕೆಯನ್ನು ಕಳೆದುಕೊಂಡು, ಬಂಡವಾಳ ಮಾರುಕಟ್ಟೆಯ ಕೊಳ್ಳುಬಾಕ ಸಂಸ್ಕೃತಿಯೊಡನೆ ರಾಜಿಯಾಗುತ್ತಾ, ಮಾರುಕಟ್ಟೆ ಅರ್ಥ ವ್ಯವಸ್ಥೆಯ ಅಗತ್ಯತೆಗಳನ್ನು ಪೂರೈಸುವ ಬೌದ್ಧಿಕ ವಾಹಿನಿಗಳಾಗಿ ಪರಿವರ್ತನೆಯಾಗುತ್ತವೆ. ಈ ಗುರಿಯನ್ನು ಸಾಧಿಸಲು ಆಳುವ ವರ್ಗಗಳಿಗೆ ಮಾನವ ಸಮಾಜದಲ್ಲಿ ಅಂತರ್ಗತವಾಗಿರಬಹುದಾದ ಸೂಕ್ಷ್ಮ ಸಂವೇದನೆಗಳನ್ನು ಹೊಸಕಿ ಹಾಕುವುದು ಅನಿವಾರ್ಯವಾಗಿಬಿಡುತ್ತದೆ. ಭಾರತದಂತಹ ಶ್ರೇಣೀಕೃತ ಸಮಾಜದಲ್ಲಿ, ಜಾತಿ ಶ್ರೇಷ್ಠತೆ, ಹಿಂದೂ-ಮುಸ್ಲಿಂ-ಸಿಖ್ ಮತೀಯ ಅಸ್ಮಿತೆಗಳು ಮತ್ತು ಸುಶಿಕ್ಷಿತರಲ್ಲೂ ಬೇರೂರಿರುವ ಮೌಢ್ಯ, ಈ ಹೊಸಕಿ ಹಾಕುವ ಕ್ರಿಯೆಗೆ ಚಾಲಕಶಕ್ತಿಯನ್ನು ನೀಡುತ್ತವೆ. ಈ ಪ್ರಯತ್ನದ ಒಂದು ಆಯಾಮವನ್ನೂ ಕೇಂದ್ರ ಸರಕಾರ ಜಾರಿಗೊಳಿಸಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020ರಲ್ಲಿ ಗುರುತಿಸಬಹುದು. ಹಿಂದುತ್ವ ರಾಜಕಾರಣದ ಕೋಮುವಾದಿ ಧೋರಣೆ ಮತ್ತು ಇದಕ್ಕೆ ಪೂರಕವಾಗಿ ಬೇರೂರುತ್ತಿರುವ ಹಿಂದೂ ಮತ ಕೇಂದ್ರಿತ ಬೌದ್ಧಿಕ ನೆಲೆಗಳಿಗೆ ಸುಭದ್ರ ತಳಪಾಯವನ್ನು ನಿರ್ಮಿಸುವ ನಿಟ್ಟಿನಲ್ಲಿ ಪ್ರಾಥಮಿಕ ತರಗತಿಯಿಂದಲೇ ಬೌದ್ಧಿಕ ಸರಕುಗಳನ್ನು ಉತ್ಪಾದಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ. ಸಮಾಜದ ಆಗುಹೋಗುಗಳನ್ನು ಅನುಭಾವದ ನೆಲೆಯಲ್ಲಿ ಗ್ರಹಿಸುವ ಬದಲು, ಬೋಧನೆಗಳ ಮೂಲಕ ಗ್ರಹಿಸುವಂತೆ ಮಾಡುವ ಒಂದು ಪ್ರಯತ್ನವಾಗಿ ಪ್ರಾಚೀನ ಗುರುಕುಲ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಲಾಗುತ್ತದೆ. ಮಕ್ಕಳ ಬೌದ್ಧಿಕ ವಿಕಸನದ ಹಂತದಲ್ಲಿ ಸೃಷ್ಟಿಸಲಾಗುವ ಪರಕೀಯತೆಯ ಭಾವನೆ ಮತ್ತು ‘ಅನ್ಯ’ರನ್ನು ಗುರುತಿಸುವ ಧೋರಣೆ ಮುಂದಿನ ಪೀಳಿಗೆಗಳನ್ನು ಒಂದು ಸಾಂಸ್ಕೃತಿಕ ಚೌಕಟ್ಟಿನಲ್ಲಿ ಬಂಧಿಸಿಬಿಡುತ್ತದೆ. ‘‘ಹಿಂದೂ ಧರ್ಮ ಅಪಾಯದಲ್ಲಿದೆ’’ ಎಂಬ ಕೂಗು ಹಿಂದೂ ಮತಾನು ಯಾಯಿಗಳನ್ನು ಕಾಪಾಡುವುದಕ್ಕಿಂತಲೂ ಹೆಚ್ಚಾಗಿ ಅನ್ಯಮತಸ್ಥರನ್ನು ಬೆದರಿಸುವ ಒಂದು ತಂತ್ರವಾಗಿ ಕಾಣಲಾರಂಭಿಸುತ್ತದೆ. ಒಂದು ಮತದ ಉಳಿವಿಗೆ ಮತ್ತೊಂದು ಮತದ ಅವಸಾನ ಅನಿವಾರ್ಯವೇನೋ ಎನ್ನುವಂತೆ, ಭಾರತದಲ್ಲಿ ಅನ್ಯಮತ ದ್ವೇಷ ಮತ್ತು ಅನ್ಯಮತ ಭೀತಿಯನ್ನು ನಿರಂತರವಾಗಿ ಸೃಷ್ಟಿಸುವುದು ಈ ದೇಶದ ಸಾಂಸ್ಕೃತಿಕ ರಾಷ್ಟ್ರೀಯತೆಯ ಮೂಲ ಧ್ಯೇಯವೂ ಆಗಿದೆ. ಹಾಗಾಗಿಯೇ ನವ ಉದಾರವಾದ ಮತ್ತು ಜಾಗತೀಕರಣ ಜನಸಾಮಾನ್ಯರಲ್ಲಿ ಸೃಷ್ಟಿಸುತ್ತಿರುವ ಅಭದ್ರತೆ ಮತ್ತು ಅನಿಶ್ಚಿತತೆಗೆ ಸುಲಭವಾಗಿ ಈ ‘ಅನ್ಯ’ರನ್ನು ಕಾರಣಕರ್ತರನ್ನಾಗಿ ಬಿಂಬಿಸಲಾಗುತ್ತದೆ. ನವ ಉದಾರವಾದ ನಿರ್ಮಿಸುತ್ತಿರುವ ಪ್ರತಿಯೊಂದು ಮಹಲುಗಳ ಹಿಂದೆಯೂ ಒಂದು ನಿರ್ಗತಿಕ ಸಮಾಜ ರೂಪುಗೊಳ್ಳುತ್ತಿದ್ದರೆ, ಆ ಸಮಾಜದಲ್ಲಿ ‘ಅನ್ಯ’ರನ್ನು ಶೋಧಿಸಲು ಸಾಂಸ್ಕೃತಿಕ ರಾಜಕಾರಣ ಮುಂದಾಗುತ್ತದೆ.

ಆದುದರಿಂದಲೇ ಭಾರತದ ರಾಜಕಾರಣದಲ್ಲಿ ಶೋಷಿತರ ದನಿ ಯಾರಿಗೂ ಕೇಳದಂತಾಗಿದೆ. ಅವಕಾಶವಂಚಿತರ ಅಳಲು ಅರಣ್ಯರೋದನವಾಗುತ್ತಿದೆ. ಭಾರತವನ್ನು ಜಗದ್ವಿಖ್ಯಾತ ರಾಷ್ಟ್ರವನ್ನಾಗಿ ರೂಪಿಸುವ ಹಿಂದೂ ರಾಷ್ಟ್ರ ಪ್ರತಿಪಾದಕರಿಗೆ ಆಂತರಿಕವಾಗಿ ಕೊಳೆಯುತ್ತಿರುವ ಸಾಮಾಜಿಕ ಸೂಕ್ಷ್ಮತೆ ಮತ್ತು ಮಾನವ ಸಂವೇದನೆ, ಒಂದು ಶಕ್ತಿಯುತ ಅಸ್ತ್ರವಾಗಿಯೇ ಕಾಣುತ್ತದೆ. ಅಸ್ಸಾಮಿನಲ್ಲಿ ಅಕ್ರಮ ವಲಸಿಗರು ಎಂದು ಗುರುತಿಸಲ್ಪಟ್ಟು ತಮ್ಮ ನೆಲೆಯನ್ನೇ ಕಳೆದುಕೊಳ್ಳುತ್ತಿರುವ ಲಕ್ಷಾಂತರ ದುಡಿಮೆಗಾರರು, ದಶಕಗಳ ಕಾಲ ಈ ದೇಶದ ಸಂಪತ್ತಿನ ವೃದ್ಧಿಗೆ ಕಾರಣರಾಗಿದ್ದರೂ ಇಂದು ನಿರಾಶ್ರಿತರಾಗಿ ಹಂದಿಗೂಡುಗಳಲ್ಲಿ ಬಂಧಿತರಾಗಿರುವುದನ್ನು ಗಮನಿಸುವ ವ್ಯವಧಾನವನ್ನೂ ಈ ದೇಶದ ಬೌದ್ಧಿಕ ವಲಯ ಕಳೆದುಕೊಂಡಿದೆ. ಹಾಗೆಯೇ ನಿತ್ಯ ನಾರಕಿಗಳಾಗಿ ಬದುಕುತ್ತಿರುವ ಬಹುಸಂಖ್ಯಾತ ದಲಿತರು, ಅಲ್ಪಸಂಖ್ಯಾತರು, ಆದಿವಾಸಿಗಳು ಮತ್ತು ಗ್ರಾಮೀಣ ಬಡಜನತೆ, ಅಭಿವೃದ್ಧಿ ಪಥದ ಅನಿವಾರ್ಯ ಬಲಿಪಶುಗಳಾಗಿ ನಿರ್ಲಕ್ಷಕ್ಕೊಳಗಾಗಿದ್ದಾರೆ.

ಶತಮಾನಗಳಿಂದ ತಮ್ಮ ನೆಲೆ ಕಂಡುಕೊಂಡಿರುವ ಜನಸಮುದಾಯಗಳನ್ನು, ವಿಶೇಷವಾಗಿ ಆದಿವಾಸಿ ಬುಡಕಟ್ಟು ಜನರನ್ನು, ಅಭಿವೃದ್ಧಿಯ ಹೆಸರಿನಲ್ಲಿ ಒಕ್ಕಲೆಬ್ಬಿಸುವ ನಿರ್ದಯಿ ಪ್ರಕ್ರಿಯೆಗೆ ಭಾರತದ ಸುಶಿಕ್ಷಿತ ಬೌದ್ಧಿಕ ವಲಯ ಸ್ಪಂದಿಸುತ್ತಲೇ ಇಲ್ಲ ಎನ್ನುವುದು ಆತಂಕ ಉಂಟುಮಾಡುವ ವಿಚಾರ. ಪರಿಸರವಾದಿ ಗಳು, ಎಡಪಂಥೀಯ ಪ್ರಗತಿಪರರು ಮತ್ತು ಶೋಷಿತರ ವಿಮೋಚನೆಗಾಗಿ ಶ್ರಮಿಸುವ ದಲಿತ-ಅಲ್ಪಸಂಖ್ಯಾತ ಸಂಘಟನೆಗಳನ್ನು ಹೊರತುಪಡಿಸಿ, ಆಡಳಿತ ನೀತಿಯ ಫಲಾನುಭವಿ ಮಧ್ಯಮ ವರ್ಗಗಳು ಬಹುಮಟ್ಟಿಗೆ ನಿಷ್ಕ್ರಿಯವಾಗಿದ್ದು ತಮ್ಮ ಹಿತವಲಯಗಳಲ್ಲಿ ವಿಶ್ರಮಿಸುತ್ತಿರುವುದನ್ನು ಈ ಸಂದರ್ಭದಲ್ಲಿ ಗಂಭೀರವಾಗಿ ಗಮನಿಸಬೇಕಿದೆ. ಪ್ರತಿಯೊಂದು ಅಣೆಕಟ್ಟಿನ ಬುಡದಲ್ಲೂ, ಪ್ರತಿಯೊಂದು ಕಲ್ಲಿದ್ದಲ, ಖನಿಜಗಳ ಗಣಿಯ ಇಕ್ಕೆಲಗಳಲ್ಲೂ ಸಾವಿರಾರು ನಿರ್ಗತಿಕ ಕುಟುಂಬಗಳ ಸಮಾಧಿ ಇರುವುದನ್ನು ಕಂಡೂ ಕಾಣದಂತೆ ಈ ದೇಶದ ಬೌದ್ಧಿಕ ವಲಯ ನಿಷ್ಕ್ರಿಯವಾಗಿದೆ. ಇದಕ್ಕೆ ಕಾರಣ ನವ ಉದಾರವಾದ ಸೃಷ್ಟಿಸಿರುವ ಮಾರುಕಟ್ಟೆಯ ಸುಂದರ ಭ್ರಮೆ ಮತ್ತು ಸಾಂಸ್ಕೃತಿಕ ರಾಜಕಾರಣ ಸೃಷ್ಟಿಸಿರುವ ಕಲ್ಪಿತ ‘ಅನ್ಯ’ ಶತ್ರುಗಳ ಬಗ್ಗೆ ಇರುವ ದ್ವೇಷ. ಈ ದ್ವೇಷ ರಾಜಕಾರಣವೇ ಪ್ರಜಾಸತ್ತಾತ್ಮಕ ಭಾರತವನ್ನು ಹಂತಹಂತವಾಗಿ ಕೊಲ್ಲುತ್ತಾ ಬಂದಿದೆ. ನಮ್ಮ ನಡುವಿನ ಸಾಮಾಜಿಕ ಸೂಕ್ಷ್ಮತೆಯನ್ನು, ಮಾನವ ಸಂವೇದನೆಯನ್ನು ಕೊಲ್ಲುತ್ತಾ ಬಂದಿದೆ. ಮನುಜ ಸಂಬಂಧಗಳನ್ನು ಶಿಥಿಲಗೊಳಿಸುತ್ತಾ ಬಂದಿದೆ. ಹಾಗೆಯೇ ಜಾತಿ ಮತ ಕೇಂದ್ರಿತ ಅಸ್ಮಿತೆಯ ಚೌಕಟ್ಟುಗಳನ್ನು ಬಲಪಡಿಸುತ್ತಾ ಬಂದಿದೆ. ಒಂದೆಡೆ ಸಮಾಜದ ಬಹುಸಂಖ್ಯೆಯ ಜನತೆ ಸಾಮಾಜಿಕ ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತಿದ್ದರೆ ಮತ್ತೊಂದೆಡೆ ಇಡೀ ವ್ಯವಸ್ಥೆಯೇ ಸಂವೇದನಾಶೀಲತೆಯನ್ನು ಕಳೆದುಕೊಳ್ಳುತ್ತಿರುವ ದುರಂತ ಸನ್ನಿವೇಶವನ್ನು ನಾವು ಕಾಣುತ್ತಿದ್ದೇವೆ. ಇದು ಆತ್ಮನಿರ್ಭರ ಭಾರತ ಎದುರಿಸುತ್ತಿರುವ ಜಟಿಲ ಸಮಸ್ಯೆ. ಇದನ್ನು ಪರಿಹರಿಸುವುದೆಂದರೆ, ಸಾಂಸ್ಕೃತಿಕ ರಾಜಕಾರಣವನ್ನು ತಿರಸ್ಕರಿಸಿ, ನವ ಉದಾರವಾದವನ್ನು ನಿರಾಕರಿಸುವುದೇ ಆಗಿದೆ. ಪ್ರಜಾಸತ್ತಾತ್ಮಕ ಆಂದೋಲನಗಳು ಈ ನಿಟ್ಟಿನಲ್ಲೇ ಸಾಗಬೇಕಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top