-

ಶೋಷಿತ ವರ್ಗಗಳ ಮುಕ್ತಿಗಾಗಿ ಇಂಗ್ಲಿಷ್

-

ಜಾತಿ ಮತ್ತು ವರ್ಗಗಳ ನೆಲೆಯಲ್ಲಿ ಶೋಷಣೆಗೊಳಗಾದ ಜನಸಮೂಹಕ್ಕೆ ಇಂಗ್ಲಿಷ್ ಮುಕ್ತಿ ನೀಡಬಹುದು ಎನ್ನುವುದನ್ನು, ಇಂಗ್ಲಿಷ್ ಪದಗಳು ಮತ್ತು ನೂತನ ತಂತ್ರಜ್ಞಾನಗಳ ಹೆಸರುಗಳಿಂದ ಭಾರತೀಯ ಜನಜೀವನದಲ್ಲಿ ಆಗಿರುವ ಬದಲಾವಣೆಗಳಿಂದ ನಾನು ಅರಿತುಕೊಂಡಿದ್ದೇನೆ. ಈಗ ಇಡೀ ಜಗತ್ತು ಇಂಗ್ಲಿಷ್ ಭಾಷೆಯ ಸಂವಹನಕ್ಕೆ ತೆರೆದುಕೊಂಡಿದೆ. ಫ್ರೆಂಚ್ ಮತ್ತು ಪೋರ್ಚುಗೀಸರ ಆಳ್ವಿಕೆಗೆ ಒಳಪಟ್ಟಿರುವ ವಸಾಹತುಗಳೂ ಈಗ ತಮ್ಮ ಶಿಕ್ಷಣ ವ್ಯವಸ್ಥೆಯನ್ನು ಇಂಗ್ಲಿಷ್‌ಗೆ ವರ್ಗಾಯಿಸುತ್ತಿವೆ. ಇಂಗ್ಲಿಷನ್ನು ವಿರೋಧಿಸುತ್ತಿದ್ದ ಚೀನಾವು ತನ್ನ ಮಕ್ಕಳು ಮತ್ತು ಯುವಕರ ಇಂಗ್ಲಿಷ್ ಶಿಕ್ಷಣಕ್ಕಾಗಿ ಅಗಾಧ ಹಣವನ್ನು ಹೂಡುತ್ತಿದೆ.


ಅಕ್ಟೋಬರ್ 5ನ್ನು ಅಂತರ್‌ರಾಷ್ಟ್ರೀಯ ಶಿಕ್ಷಕರ ದಿನವಾಗಿ ಆಚರಿಸಲಾಗುತ್ತದೆ. ಅದನ್ನು ಭಾರತೀಯ ಇಂಗ್ಲಿಷ್ ದಿನವಾಗಿಯೂ ಆಚರಿಸಲಾಗುತ್ತಿದೆ. ಭಾರತದಲ್ಲಿ ಇಂಗ್ಲಿಷ್ ಭಾಷೆಯ ಶಿಕ್ಷಣಕ್ಕೆ 205 ವರ್ಷಗಳ ಇತಿಹಾಸವಿದೆ.

ವಿಲಿಯಮ್ ಕ್ಯಾರಿ ಮತ್ತು ರಾಜಾರಾಮ್ ಮೋಹನ್ ರಾಯ್ 1817ರಲ್ಲಿ ಕೋಲ್ಕತಾದಲ್ಲಿ (ಅಂದಿನ ಕಲ್ಕತ್ತಾ) ಮೊದಲ ಇಂಗ್ಲಿಷ್ ಮಾಧ್ಯಮ ಶಾಲೆಯನ್ನು ಆರಂಭಿಸಿದರು. 2022ರ ವೇಳೆಗೆ, ವೈದ್ಯಕೀಯ ವಿಜ್ಞಾನದ ಬೆಳವಣಿಗೆಯಿಂದಾಗಿ ಜಗತ್ತು ನಿರಾಳವಾಗಿದೆ. ಈ ವೈದ್ಯಕೀಯ ವಿಜ್ಞಾನವು ಮುಖ್ಯವಾಗಿ ಇಂಗ್ಲಿಷ್ ಭಾಷೆಯನ್ನು ಜಾಗತಿಕ ಸಂವಹನ ಮಾಧ್ಯಮವಾಗಿ ಬಳಸಿಕೊಂಡು ಈ ಮಟ್ಟಕ್ಕೆ ಬೆಳೆದಿದೆ ಹಾಗೂ ಜಗತ್ತನ್ನು ವಿನಾಶದಿಂದ ರಕ್ಷಿಸಿದೆ. ವಿಜ್ಞಾನ ಮತ್ತು ಇಂಗ್ಲಿಷ್ ಜೊತೆ ಜೊತೆಯಾಗಿ ಸಾಗಿರದಿದ್ದರೆ, ಕೊರೋನದಿಂದಾಗಿ ಜಗತ್ತು ಈ ಹೊತ್ತಿಗೆ ಸ್ಮಶಾನವಾಗಿರುತ್ತಿತ್ತು.
ಈವರೆಗೆ ಭಾರತದಲ್ಲಿ ಎರಡು ರಾಜ್ಯ ಸರಕಾರಗಳು- ಆಂಧ್ರಪ್ರದೇಶ ಮತ್ತು ತೆಲಂಗಾಣ- ಎಲ್ಲಾ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದ ಕಲಿಕೆಯನ್ನು ಕಡ್ಡಾಯಗೊಳಿಸಿವೆ. ಇದು ಭಾರತದಲ್ಲಿ ಶೈಕ್ಷಣಿಕ ಕ್ರಾಂತಿಯ ಆರಂಭವಾಗಿದೆ. ಈಗಾಗಲೇ ನಾಗಾಲ್ಯಾಂಡ್‌ನ ಎಲ್ಲಾ ಸರಕಾರಿ ಶಾಲೆಗಳಲ್ಲಿ ಸುದೀರ್ಘ ಸಮಯದಿಂದ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ, ಹೆಚ್ಚಿನ ರಾಜ್ಯ ಸರಕಾರಗಳು ಒಂದನೇ ತರಗತಿಯಿಂದಲೇ ಇಂಗ್ಲಿಷನ್ನು ಕಡ್ಡಾಯ ವಿಷಯವಾಗಿ ಕಲಿಸಲು ಆರಂಭಿಸಿವೆ. ಕಾಶ್ಮೀರವು ತುಂಬಾ ಹಿಂದಿನಿಂದಲೇ ಇಂಗ್ಲಿಷನ್ನು ಒಂದು ವಿಷಯವಾಗಿ ಒಂದನೇ ತರಗತಿಯಿಂದಲೇ ಕಲಿಸುತ್ತಿದೆ. ದಿಲ್ಲಿಯಲ್ಲಿ ಆಮ್ ಆದ್ಮಿ ಪಕ್ಷದ ಸರಕಾರವು ರಾಜ್ಯದ ಎಲ್ಲಾ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸುವಿಕೆಯನ್ನು ಮೇಲ್ದರ್ಜೆಗೆ ಏರಿಸಿದೆ.
ಇದಲ್ಲದೆ, ದೇಶಾದ್ಯಂತ ಸಾವಿರಾರು ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳಿವೆ.
ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದ ಶಿಕ್ಷಣವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ವಿರೋಧಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ಆದರೆ, ಇಂಗ್ಲಿಷ್ ಮಾಧ್ಯಮಗಳಲ್ಲಿ ಕಲಿಸುತ್ತಿರುವ ಖಾಸಗಿ ಶಾಲೆಗಳನ್ನು ಅವರು ವಿರೋಧಿಸುತ್ತಿಲ್ಲ. ಬಡವರನ್ನು ಇಂಗ್ಲಿಷ್ ಶಿಕ್ಷಣದಿಂದ ದೂರವಿರಿಸುವುದು ಅವುಗಳ ಉದ್ದೇಶವಾಗಿದೆ. ಇಂಗ್ಲಿಷ್ ಮಾಧ್ಯಮದ ಶಿಕ್ಷಣವು ಜನರನ್ನು ಬಡತನ, ಸಂಪ್ರದಾಯವಾದ ಮತ್ತು ಮೂಢನಂಬಿಕೆಯಿಂದ ಹೊರತರುತ್ತದೆ ಎನ್ನುವುದು ಅವರಿಗೆ ಗೊತ್ತಿದೆ.
2014ರಲ್ಲಿ ಬಿಜೆಪಿ/ಆರೆಸ್ಸೆಸ್ ಅಧಿಕಾರಕ್ಕೆ ಬಂದ ಬಳಿಕ, ಖಾಸಗಿ ವಲಯವು ಶ್ರೀಮಂತರಿಗಾಗಿ ದುಬಾರಿ ಇಂಗ್ಲಿಷ್ ಮಾಧ್ಯಮ ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತೆರೆದಿದೆ. ಆದರೆ, ಬಡವರು ಪ್ರಾದೇಶಿಕ ಭಾಷೆಗಳಲ್ಲಿ ಕಲಿಯಬೇಕೆಂದು ಕೇಂದ್ರ ಸರಕಾರವು ಪಟ್ಟು ಹಿಡಿಯುತ್ತಿದೆ. ಯಾಕೆಂದರೆ ಬಡವರ ಪೈಕಿ ಹೆಚ್ಚಿನವರು ಶೂದ್ರ/ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳಿಗೆ ಸೇರಿದವರು. ಅದು ಸರಕಾರದ ವರ್ಣ, ಧರ್ಮ ಭಾಷಾ ನೀತಿ.

ಮಣ್ಣು ಮತ್ತು ಇಂಗ್ಲಿಷ್‌ನೊಂದಿಗೆ ನನ್ನ ಮುಖಾಮುಖಿ
ನನ್ನ 70 ವರ್ಷಗಳ ಬದುಕಿನಲ್ಲಿ, ನನಗೆ ಐದು ವರ್ಷ ಆಗಿದ್ದಾಗಿನಿಂದ ಮಣ್ಣು, ಪ್ರಾಣಿಗಳು, ಬೆಳೆಗಳೊಂದಿಗೆ ನಿರಂತರವಾಗಿ ಪ್ರಜ್ಞಾಪೂರ್ವಕವಾಗಿ ಸಂವಹನ ನಡೆಸುತ್ತಾ ಬಂದಿದ್ದೇನೆ. ಅಂದರೆ, 65 ವರ್ಷಗಳ ಕಾಲ ನಾನು ಈ ಮಣ್ಣಿನಲ್ಲಿ ಪ್ರಜ್ಞಾಪೂರ್ವಕ ಜೀವನ ನಡೆಸಿದ್ದೇನೆ. ನಾನು ಮಗುವಾಗಿದ್ದಾಗ ಈ ನೆಲದ ಧೂಳು, ಮಣ್ಣಿನಲ್ಲಿ ಕುರಿಗಳು, ಕರುಗಳು, ಎಮ್ಮೆಗಳು ಮತ್ತು ದನಗಳೊಂದಿಗೆ ಆಡಿದ್ದೇನೆ. ಭಾರತದ ಹಳ್ಳಿಗಳ ಹೆಚ್ಚಿನ ಮಕ್ಕಳು ಮಾಡುವಂತೆ ನಾನು ಕೂಡ ಮಣ್ಣು ತಿಂದಿದ್ದೇನೆ.

ನನ್ನ ಬಾಲ್ಯದಲ್ಲಿ, ನನ್ನ ಜಾತಿಯ ಜನರು ಮಾನವರು ಮತ್ತು ಪ್ರಾಣಿಗಳೊಂದಿಗೆ 'ಕುರುಮ ಭಾಷಾ' ಎಂಬ ಭಾಷೆಯಲ್ಲಿ ಮಾತನಾಡುತ್ತಿದ್ದರು. ಈ 'ಕುರುಮ ಭಾಷಾ'ದ ಮೂಲ ಕನ್ನಡದ 'ಕುರುಬ ಭಾಷೆ'. ಆ ಭಾಷೆ ಗೊತ್ತಿದ್ದದ್ದು ತುಂಬಾ ಕಡಿಮೆ ಜನರಿಗೆ. ಅದಕ್ಕೆ ಲಿಪಿಯಿರಲಿಲ್ಲ. ನನ್ನ ಇಡೀ ಸಮುದಾಯ ಅನಕ್ಷರಸ್ಥವಾಗಿತ್ತು ಹಾಗೂ ತನ್ನೊಳಗೆ ಲಿಪಿಯಿಲ್ಲದ ಭಾಷೆಯೊಂದರಲ್ಲಿ ಮಾತನಾಡುತ್ತಿತ್ತು. ಗ್ರಾಮದ ಇತರರಿಗೆ ಆ ಭಾಷೆ ಅರ್ಥವಾಗುತ್ತಿರಲಿಲ್ಲ.

ನನ್ನ ಸಣ್ಣ ಗ್ರಾಮದ ಸುತ್ತಲೂ ಇದ್ದದ್ದು ಲಂಬಾಡ ಬುಡಕಟ್ಟು ಹಳ್ಳಿಗಳು. ಅವರು ಮಾತನಾಡುತ್ತಿದ್ದದ್ದು ಗೋರ್ ಬೋಲಿ (ಲಂಬಾಡಿ ಭಾಷೆ). ನಮ್ಮ ಗ್ರಾಮದಲ್ಲಿ ಕೆಲವು ಮುಸ್ಲಿಮ್ ಮನೆಗಳಿದ್ದವು. ಅವರು ಮಾತನಾಡುತ್ತಿದ್ದದ್ದು ಉರ್ದು. ಕೃಷಿ ಕೆಲಸಗಳನ್ನು ಮಾಡುತ್ತಿದ್ದ ಹೆಚ್ಚಿನ ಜಾತಿಗಳ ಜನರು ತೆಲಂಗಾಣ ಮಾದರಿಯ ತೆಲುಗು ಮಾತನಾಡುತ್ತಿದ್ದರು. ಆ ಭಾಷೆಯಲ್ಲಿ ತುಂಬಾ ಉರ್ದು ಪದಗಳು ಸೇರಿಕೊಂಡಿದ್ದವು. ಅಲ್ಲಿ ಸಮುದಾಯಗಳ ನಡುವೆ ಹೆಚ್ಚಿನ ಸಂವಹನ ಇರುತ್ತಿರಲಿಲ್ಲ. ಒಂದು ಭಾಷೆಯನ್ನಾಡುವ ಜನರು ಮತ್ತೊಂದು ಭಾಷೆಯನ್ನಾಡುವ ಜನರೊಂದಿಗೆ ವ್ಯವಹರಿಸಬೇಕಾದ ಸಂದರ್ಭ ಬಂದಾಗ ಹರಕು ಮುರುಕು ಭಾಷೆಗಳಲ್ಲಿ ಮತ್ತು ಸಂಕೇತಗಳ ಮೂಲಕ ವ್ಯವಹರಿಸುತ್ತಿದ್ದರು.

ನಾನು ಬೆಳೆಯುತ್ತಿದ್ದಂತೆಯೇ, ನಮ್ಮ ಕುಟುಂಬವು ನಮ್ಮ ಜಾತಿಯ ಭಾಷೆಯಿಂದ ತೆಲುಗು ಭಾಷೆಗೆ ಪರಿವರ್ತನೆಗೊಂಡೆವು. ಜಾತಿ ಬಿಡಿ, ಭಾಷೆಗಳ ವಿಷಯದಲ್ಲೂ ನಾವೀಗಲೂ ಹರಿದು ಹಂಚಿ ಹೋಗಿರುವ ಜನರು. ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ವರ್ಗಾವಣೆಗೊಳ್ಳುವುದು ಕಷ್ಟದ ಪ್ರಯಾಣ.
ಕಳೆದ 65 ವರ್ಷಗಳ ನನ್ನ ಜಾಗೃತ ಮತ್ತು ಸಂವಹನಾತ್ಮಕ ಬದುಕಿನಲ್ಲಿ, ಸಾವಧಾನದ ಮತ್ತು ವೌನ ಕ್ರಾಂತಿಯೊಂದು ಸಂಭವಿಸಿದೆ. ಅಕ್ಷರಸ್ಥರು, ಅನಕ್ಷರಸ್ಥರು, ಗ್ರಾಮೀಣರು ಮತ್ತು ನಗರವಾಸಿಗಳು- ಎಲ್ಲರ ಮನೆಗಳಿಗೆ ಇಂಗ್ಲಿಷ್ ಬಂದಿದೆ. ಅದು ಬದಲಾವಣೆಯೊಂದಕ್ಕೆ ನಾಂದಿ ಹಾಡಿದೆ.
ನಾವು 'ಬಿಯ್ಯಮ್' ಎಂದು ಹೇಳುವಲ್ಲಿ 'ರೈಸ್' ಬಂತು, 'ಮಾನ್ಸಮು'ನ ಸ್ಥಾನವನ್ನು 'ಮಟನ್' ಪಡೆಯಿತು, 'ಚೆಪಾಲು' 'ಫಿಶ್' ಆಯಿತು, 'ಕೋಡಿ ಕುರ' 'ಚಿಕನ್' ಆಯಿತು, 'ಕೂರ ಕಾಯಲು'ನ್ನು 'ವೆಜಿಟೆಬಲ್' ಎಂದು ಕರೆಯಲಾಯಿತು. ಆಂಧ್ರಪ್ರದೇಶ ಮತ್ತು ತೆಲಂಗಾಣದ ಎಲ್ಲ ಗ್ರಾಮಗಳು ಮತ್ತು ಕುಗ್ರಾಮಗಳ ಎಲ್ಲಾ ಸಮುದಾಯಗಳು ಇದರ ಪ್ರಭಾವಕ್ಕೆ ಒಳಗಾದವು.
ಅಷ್ಟೇ ಅಲ್ಲ, 'ನೀಲ್ಲು' 'ವಾಟರ್' ಆಯಿತು, 'ಪಾಲು' 'ಮಿಲ್ಕ್, 'ಉಪ್ಪು' 'ಸಾಲ್ಟ್', 'ನೂಣೆ' 'ಆಯಿಲ್', 'ಅಂಗಿ' 'ಶರ್ಟ್', 'ಲಾಗು' 'ಪ್ಯಾಂಟ್', 'ಕೂಲಿ' 'ಲೇಬರ್' ಆಯಿತು. ಇಂಥ ಹೆಚ್ಚಿನ ಇಂಗ್ಲಿಷ್ ಪದಗಳು ಈಗ ಸಾಮಾನ್ಯವಾಗಿವೆ. ತೆಲುಗಿನ 'ಪೆಂಡ್ಲಿ' ಈಗ 'ಮ್ಯಾರೇಜ್' ಆಗಿದೆ!

'ಅಮ್ಮ'ನ ಸ್ಥಾನದಲ್ಲಿ 'ಮಮ್ಮಿ' ಮತ್ತು 'ನನ್ನ'ನ ಸ್ಥಾನದಲ್ಲಿ 'ಡ್ಯಾಡಿ' ಬಂದಿರುವುದಕ್ಕೆ ಇಂಗ್ಲಿಷ್ ವಿರೋಧಿ ಪಂಡಿತರು ಬೊಬ್ಬೆ ಹಾಕುತ್ತಿದ್ದಾರೆ. ಹಳ್ಳಿಗಳಲ್ಲೂ ಎಲ್ಲ ಮಾರುಕಟ್ಟೆಗಳು ಇಂಗ್ಲಿಷ್ ಪದಗಳಿಂದಲೇ ತುಂಬಿ ಹೋಗಿರುವುದರ ಬಗ್ಗೆ ಅವರು ದಿವ್ಯ ಮರೆವನ್ನು ಹೊಂದಿದ್ದಾರೆ. ಇದು ತೆಲುಗು ಪ್ರದೇಶಗಳಲ್ಲಿ ಮಾತ್ರವಲ್ಲ, ಭಾರತದಾದ್ಯಂತ ಸಂಭವಿಸಿದೆ. ವಸ್ತುಗಳ ಸ್ಥಳೀಯ ಹೆಸರುಗಳ ಸ್ಥಾನವನ್ನು ಇಂಗ್ಲಿಷ್ ಹೆಸರುಗಳು ಪಡೆದಿವೆ. ನಿಧಾನವಾಗಿ ಮತ್ತು ನಿಖರವಾಗಿ, ಭಾರತೀಯ ಜನಜೀವನವು ಆಂಗ್ಲೀಕರಣಗೊಳ್ಳುತ್ತಿದೆ.
ನನ್ನ ಬಾಲ್ಯದಲ್ಲಿ ನಾನು ಹೊಂದಿದ್ದ ಭಾಷೆಯ ಮೂಲಕ ಇತರರೊಂದಿಗೆ ಸಂವಹನ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆ ಪರಿಸ್ಥಿತಿ ಈಗ ತೀವ್ರವಾಗಿ ಬದಲಾಗುತ್ತಿದೆ. ನನ್ನ ಬಾಲ್ಯದ ಭಾಷೆ ಕುರುಮ ಭಾಷೆ ಈಗ ಸತ್ತು ಹೋಗಿದೆ. ಹಳ್ಳಿಗಳು, ಪಟ್ಟಣಗಳು ಮತ್ತು ನಗರಗಳಲ್ಲಿ, ಎಲ್ಲ ವರ್ಗಗಳಿಗೆ ಸೇರಿದ ಜನರ ಮಾತೃಭಾಷೆಯ ಪದಗಳನ್ನು ಇಂಗ್ಲಿಷ್ ಪದಗಳು ಆವರಿಸಿವೆ.
ತೆಲುಗು, ಉರ್ದು ಅಥವಾ ಲಂಬಾಡಿ ಭಾಷೆ ಮಾತನಾಡುವ ಜನರು ತಮ್ಮ ದಿನನಿತ್ಯದ ಆಹಾರ ಪದಾರ್ಥಗಳು ಮತ್ತು ತಂತ್ರಜ್ಞಾನಗಳನ್ನು ಅವುಗಳ ಇಂಗ್ಲಿಷ್ ಹೆಸರಿನಿಂದಲೇ ಗುರುತಿಸುತ್ತಾರೆ. ಅವರ ಜೀವನಕ್ಕೆ (ಭಾಷೆಗಳಿಗಲ್ಲ) ಹೊಸದಾಗಿ ಬಂದಿರುವ ಇಂಗ್ಲಿಷ್ ಪದಗಳು ಅವರ ಭವಿಷ್ಯವನ್ನು ಬದಲಾಯಿಸಿವೆ.

ಈಗಿನ ಮಟ್ಟಿಗೆ, ಪುರುಷರು ಮತ್ತು ಮಹಿಳೆಯರು ಸೇರಿದಂತೆ ಪ್ರತೀ ಗ್ರಾಮಸ್ಥರಿಗೆ ಕೆಲವು ನೂರು ಇಂಗ್ಲಿಷ್ ಪದಗಳು ತಿಳಿದಿವೆ.
ಇಂದು, ಅದೇ ಜನರು ಇಂಗ್ಲಿಷ್ ಮಾತನಾಡುವ ಯಂತ್ರಗಳನ್ನು 'ಸೆಲ್ ಫೋನ್' ಎಂಬ ಅವುಗಳ ಇಂಗ್ಲಿಷ್ ಹೆಸರಿನಿಂದಲೇ ಬಳಸುತ್ತಿದ್ದಾರೆ. ಅವರ ಮಾತೃಭಾಷೆಯಲ್ಲಿ 'ಸೆಲ್' ಮತ್ತು 'ಫೋನ್'ಗೆ ಪದಗಳಿಲ್ಲ. ಪ್ರಾದೇಶಿಕ ಟಿವಿ ಚಾನೆಲ್‌ಗಳು 30ರಿಂದ 40 ಶೇಕಡಾ ಇಂಗ್ಲಿಷ್ ಪದಗಳನ್ನು ಮತ್ತು ವಾಕ್ಯಗಳನ್ನು ಬಳಸುತ್ತಿವೆ. ಮಾರ್ನಿಂಗ್ ನ್ಯೂಸ್, ಈವ್ನಿಂಗ್ ನ್ಯೂಸ್, ಬರ್ನಿಂಗ್ ಟಾಪಿಕ್, ಗನ್ ಶಾಟ್, ಬಿಗ್ ಫೈಟ್, ಬಿಗ್ ಡಿಬೇಟ್, ನ್ಯೂಸ್ ಎಕ್ಸ್‌ಪ್ರೆಸ್ ಮುಂತಾದವುಗಳು. ಇವುಗಳು ತಥಾಕಥಿತ ತೆಲುಗು ಟಿವಿ ಪರದೆಗಳಲ್ಲಿ ಅತ್ಯಂತ ಸಾಮಾನ್ಯವಾಗಿವೆ. ಇತರ ಭಾಷೆಯ ಟಿವಿ ಚಾನೆಲ್‌ಗಳಲ್ಲೂ ಹೀಗೆಯೇ ಇರಬಹುದು. ಕೇವಲ ಪ್ರಾದೇಶಿಕ ಭಾಷೆಗಳನ್ನೇ ಬಳಸುವ ಚಾನೆಲ್‌ಗಳಿಗೆ ವೀಕ್ಷಕರೇ ಇಲ್ಲ.

ಭಾಷೆ ಬದಲಾವಣೆಯ ಇತಿಹಾಸ
ಇಂಗ್ಲಿಷ್ ಹೆಸರುಗಳು ಮತ್ತು ಪದಗಳು ನಮ್ಮ ಮನೆಗಳಿಗೆ ಪ್ರವೇಶಿಸಿರುವ ಪ್ರಕ್ರಿಯೆ ಆರಂಭವಾಗಿದ್ದು ಇತ್ತೀಚೆಗೆ ಏನಲ್ಲ. ಅದು ತುಂಬಾ ಹಿಂದೆಯೇ ಆರಂಭವಾಗಿತ್ತು. 1950ರ ದಶಕದಲ್ಲಿ ನನ್ನ ಬಾಲ್ಯದ ದಿನಗಳಲ್ಲಿ, ಬಸ್ ಮತ್ತು ಟ್ರೇನ್ ಮುಂತಾದ ಇಂಗ್ಲಿಷ್ ಪದಗಳನ್ನು ಗ್ರಾಮಸ್ಥರು ತಿಳಿದುಕೊಂಡರು. ಹಾಗೆಯೇ, ಟಿಕೆಟ್ ಮತ್ತು ಕಂಡಕ್ಟರ್ ಎಂಬ ಪದಗಳ ಪರಿಚಯವೂ ಅವರಿಗೆ ಆಯಿತು. ವರ್ಷಗಳು ಉರುಳಿದಂತೆ ಉಪಕರಣಗಳು ಮತ್ತು ಯಂತ್ರಗಳ ಇಂಗ್ಲಿಷ್ ಹೆಸರುಗಳು ಹಳ್ಳಿಗಳಿಗೆ ಬಂದವು. ಈ ಪ್ರಕ್ರಿಯೆ ಪ್ರತಿಯೊಂದು ರಾಜ್ಯದಲ್ಲಿ, ಬುಡಕಟ್ಟು ಅಥವಾ ಬುಡಕಟ್ಟೇತರ ಸೇರಿದಂತೆ ಪ್ರತಿಯೊಂದು ಪ್ರದೇಶಗಳಿಗೆ ಕಾಲಿಟ್ಟಿತು.

ನನ್ನ ಬಾಲ್ಯ ಕಾಲದ ಕುರುಮ ಭಾಷೆ ಸತ್ತು ಹೋಗಿರುವುದಕ್ಕೆ ನನಗೆ ಯಾವುದೇ ವಿಷಾದವಿಲ್ಲ. ಉರ್ದು ಪದಗಳನ್ನು ಧಾರಾಳವಾಗಿ ಹೊಂದಿರುವ ತೆಲುಗು ಭಾಷೆಯನ್ನು ಮಾತನಾಡಲು ಆರಂಭಿಸಿದಾಗ ನಾನು ಸಂತೋಷ ಪಟ್ಟಿದ್ದೆ. ಈಗ ಹೆಚ್ಚಿನ ಸಂವಹನಗಳಲ್ಲಿ ತೆಲುಗು ಪದಗಳ ಸ್ಥಾನವನ್ನು ಇಂಗ್ಲಿಷ್ ವಹಿಸಿದೆ. ಇದು ಆಗುತ್ತಿರುವಂತೆಯೇ ನಾನು ಹೆಚ್ಚೆಚ್ಚು ಸಂತೋಷ ಪಡುತ್ತಿದ್ದೇನೆ. ಯಾಕೆಂದರೆ, ವ್ಯಾಕರಣಬದ್ಧವಾಗಿ ಮಾತನಾಡಲು ಸಾಧ್ಯವಾಗದಿದ್ದರೂ ಹೆಚ್ಚೆಚ್ಚು ಜನರು ಇಂಗ್ಲಿಷ್ ಪದಗಳು ಮತ್ತು ವಸ್ತುಗಳ ಹೆಸರುಗಳನ್ನು ಬಳಸುವ ಮೂಲಕ ಪರಸ್ಪರರೊಂದಿಗೆ ಸಂವಹನ ನಡೆಸುತ್ತಿದ್ದಾರೆ.
ನನ್ನ ಕಾಲದಲ್ಲಿ, ಕೇವಲ ಇಂಗ್ಲಿಷ್ ಹೆಸರುಗಳನ್ನು ಹೊಂದಿರುವ ಯಂತ್ರಗಳೊಂದಿಗೆ ವ್ಯವಹರಿಸಲು ಜನರು ಆರಂಭಿಸಿದ್ದಾರೆ. ಈ ಯಂತ್ರಗಳ ಬಿಡಿಭಾಗಗಳ ಹೆಸರುಗಳೂ ಇಂಗ್ಲಿಷ್‌ನಲ್ಲಿವೆ. ಉದಾಹರಣೆಗೆ; 1960ರ ದಶಕದಲ್ಲಿ 'ಸೈಕಲ್' ಎಂಬ ಹೆಸರಿನಲ್ಲಿ ಸೈಕಲ್ ಜನರ ಬದುಕಿಗೆ ಬಂತು. ಅದರ ಚೇನ್ ಚೇನ್ ಆಗಿಯೇ ಉಳಿಯಿತು. ಅದರ ಹ್ಯಾಂಡಲ್ 'ಹ್ಯಾಂಡಲ್' ಆಯಿತು. ಗ್ರಾಮಗಳಿಗೆ ವಿದ್ಯುತ್ 'ಕರೆಂಟ್' ಎಂಬ ಹೆಸರಿನಿಂದ ಬಂತು. ಆಯಿಲ್ ಇಂಜಿನ್‌ನ ಹೆಸರು 'ಆಯಿಲ್ ಇಂಜಿನ್' ಆಯಿತು. ಎಲ್ಲರೂ, ಅದರಲ್ಲೂ ಮುಖ್ಯವಾಗಿ ಅನಕ್ಷರಸ್ಥರು ಈ ಯಂತ್ರಗಳ ಪಾತ್ರ ಮತ್ತು ಕೆಲಸಗಳನ್ನು ಅವುಗಳ ಇಂಗ್ಲಿಷ್ ಹೆಸರುಗಳಿಂದ ಮಾತ್ರ ಅರ್ಥ ಮಾಡಿಕೊಳ್ಳಬಲ್ಲರು.
ಆದರೆ, ಕಳೆದ 65 ವರ್ಷಗಳಲ್ಲಿ ಜನರ ಬದುಕಿಗೆ ಇಂಗ್ಲಿಷ್ ಬಂದದ್ದು ಮಾರುಕಟ್ಟೆ ಸಂಪರ್ಕಗಳ ಮೂಲಕ, ವ್ಯವಸ್ಥಿತ ಶಿಕ್ಷಣದ ಮೂಲಕವಲ್ಲ. ಇದೆಲ್ಲಾ ಆಗಿದ್ದು ಬ್ರಿಟಿಷರು ಭಾರತದಿಂದ ಹೋದ ಬಳಿಕ. ಆದರೆ, ದ್ವಿಜ ಕುಲೀನರು ಬ್ರಿಟಿಷರ ಕಾಲದಲ್ಲೇ ಖಾಸಗಿ ಇಂಗ್ಲಿಷ್ ಮಾಧ್ಯಮದ ಶಿಕ್ಷಣದ ಮೂಲಕ ಇಂಗ್ಲಿಷ್ ಭಾಷೆಯನ್ನು ತಮ್ಮದಾಗಿಸಿಕೊಂಡಿದ್ದರು.

ಜಾತಿ ಮತ್ತು ವರ್ಗಗಳ ನೆಲೆಯಲ್ಲಿ ಶೋಷಣೆಗೊಳಗಾದ ಜನಸಮೂಹಕ್ಕೆ ಇಂಗ್ಲಿಷ್ ಮುಕ್ತಿ ನೀಡಬಹುದು ಎನ್ನುವುದನ್ನು, ಇಂಗ್ಲಿಷ್ ಪದಗಳು ಮತ್ತು ನೂತನ ತಂತ್ರಜ್ಞಾನಗಳ ಹೆಸರುಗಳಿಂದ ಭಾರತೀಯ ಜನಜೀವನದಲ್ಲಿ ಆಗಿರುವ ಬದಲಾವಣೆಗಳಿಂದ ನಾನು ಅರಿತುಕೊಂಡಿದ್ದೇನೆ. ಈಗ ಇಡೀ ಜಗತ್ತು ಇಂಗ್ಲಿಷ್ ಭಾಷೆಯ ಸಂವಹನಕ್ಕೆ ತೆರೆದುಕೊಂಡಿದೆ. ಫ್ರೆಂಚ್ ಮತ್ತು ಪೋರ್ಚುಗೀಸರ ಆಳ್ವಿಕೆಗೆ ಒಳಪಟ್ಟಿರುವ ವಸಾಹತುಗಳೂ ಈಗ ತಮ್ಮ ಶಿಕ್ಷಣ ವ್ಯವಸ್ಥೆಯನ್ನು ಇಂಗ್ಲಿಷ್‌ಗೆ ವರ್ಗಾಯಿಸುತ್ತಿವೆ. ಇಂಗ್ಲಿಷನ್ನು ವಿರೋಧಿಸುತ್ತಿದ್ದ ಚೀನಾವು ತನ್ನ ಮಕ್ಕಳು ಮತ್ತು ಯುವಕರ ಇಂಗ್ಲಿಷ್ ಶಿಕ್ಷಣಕ್ಕಾಗಿ ಅಗಾಧ ಹಣವನ್ನು ಹೂಡುತ್ತಿದೆ.

ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸಂವಹನ ವ್ಯವಸ್ಥೆಯು ಇಂಗ್ಲಿಷ್‌ನೊಂದಿಗೆ ಅತ್ಯಂತ ಗಾಢವಾಗಿ ಬೆಸೆದುಕೊಂಡಿರುವ ಈ ಕಾಲದಲ್ಲೂ, ಖಾಸಗಿ ಇಂಗ್ಲಿಷ್ ಶಾಲೆಗಳಲ್ಲಿ ಶಿಕ್ಷಣ ಪಡೆದಿರುವ ಭಾರತೀಯ ಶ್ರೀಮಂತರು ಜನ ಸಮೂಹವನ್ನು ವಂಚಿಸಲು ಬಯಸುತ್ತಿದ್ದಾರೆ. ಬಡವರ ಮಕ್ಕಳು ಇಂಗ್ಲಿಷ್ ಶಿಕ್ಷಣ ಪಡೆಯುವುದು ಬಡ ತಾಯಂದಿರಲ್ಲಿ ಭರವಸೆಯನ್ನು ಹುಟ್ಟಿಸುತ್ತದೆ. ಇಂಥ ಪರಿಸ್ಥಿತಿಯಲ್ಲಿ ಸರಕಾರಿ ಶಾಲೆಗಳಲ್ಲಿ ಉಚಿತವಾಗಿ ಸಿಗುವ ಇಂಗ್ಲಿಷ್ ಶಿಕ್ಷಣವು ಖಂಡಿತವಾಗಿಯೂ ಒಂದು ಆಶಾ ಕಿರಣವಾಗಿದೆ.
ಕೃಪೆ: countercurrents.org

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top