ಟಿಪ್ಪುಸುಲ್ತಾನ್ ಮತ್ತು ವ್ಯಂಗ್ಯಚಿತ್ರ
-

ಟಿಪ್ಪು ಸುಲ್ತಾನ್ ಹುಟ್ಟು ಹಾಕಿದ್ದ ಹುಲಿಯ ರೂಪಕ ಬ್ರಿಟಿಷರಿಗೆ ಸವಾಲಾಗಿತ್ತು. ಬ್ರಿಟಿಷರ ಲಾಂಛನ ಸಿಂಹವಾಗಿತ್ತು ಹಾಗೂ ಅವರು ಹುಲಿಯನ್ನು ಸಿಂಹ ಕೊಲ್ಲುವ ಚಿತ್ರಗಳನ್ನು ಸಾಧ್ಯವಾದೆಡೆಯೆಲ್ಲಾ ಬಳಸಿದರು. ಟಿಪ್ಪುನನ್ನು ಕೊಂದ ಸೈನಿಕರಿಗೆ ಇಂಗ್ಲೆಂಡಿನಲ್ಲಿ ‘ಸೆರಿಂಗಪಟಂ ಪದಕ’ ನೀಡಿ ಸನ್ಮಾನಿಸಿದರು. ಆ ಪದಕದಲ್ಲಿ ಒಂದೆಡೆ ಹುಲಿಯನ್ನು ಸಿಂಹ ಕೊಲ್ಲುತ್ತಿರುವ ಚಿತ್ರವಿತ್ತು. ಟಿಪ್ಪುಸಾವಿನ ನಂತರವೂ ಹುಲಿಯ ಸಂಕೇತದ ಮೇಲಿನ ಅವರ ಸಿಟ್ಟು ಕಡಿಮೆಯಾಗಲಿಲ್ಲ. ಅದೇ ಸಿಟ್ಟಿನಿಂದ ಭಾರತದ ಕಾಡುಗಳಲ್ಲಿ ಹುಲಿಗಳನ್ನು ಕೊಂದು ಅವುಗಳ ಮೇಲೆ ಕಾಲನ್ನಿಟ್ಟು ಫೋಟೊ ತೆಗೆಸಿಕೊಂಡು ಗರ್ವದಿಂದ ಬೀಗುತ್ತಿದ್ದರು.
18ನೇ ಶತಮಾನದಲ್ಲಿ ಟಿಪ್ಪುಸುಲ್ತಾನ್ ಮೈಸೂರಿನ ಮೇಲಿನ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ದಾಳಿಯನ್ನು ಸಮರ್ಥವಾಗಿ ಎದುರಿಸಿದ್ದ. ಮೈಸೂರಿನ ಮೇಲೆ ಮೂರು ಬಾರಿ ದಾಳಿ ಮಾಡಿದ್ದರೂ ಅವರು ಯಶಸ್ವಿಯಾಗಿರಲಿಲ್ಲ. ಆದರೆ ಅವರು 1799ರಲ್ಲಿ ಶ್ರೀರಂಗಪಟ್ಟಣದ ಮೇಲೆ ದಾಳಿ ಮಾಡಿ ಟಿಪ್ಪುನನ್ನು ಕೊಂದುಬಿಟ್ಟರು. ‘ಮೈಸೂರಿನ ಹುಲಿ’ಯೆಂದು ಪ್ರಖ್ಯಾತನಾಗಿದ್ದ ಟಿಪ್ಪು ಸುಲ್ತಾನನನ್ನು ಮತ್ತು ಆತನ ಹುಲಿಯ ರೂಪಕವನ್ನು ನಾವು ಬೇರೆಬೇರೆಯಾಗಿ ನೋಡುವುದು ಸಾಧ್ಯವಿಲ್ಲ. ಟಿಪ್ಪುಹುಲಿಯ ರೂಪಕವನ್ನು ಅತಿರೇಕಕ್ಕೆ ಕೊಂಡೊಯ್ದಿದ್ದ.
ಆತನ ರಾಜಮುದ್ರೆಯಲ್ಲಿ, ನಾಣ್ಯಗಳಲ್ಲಿ, ಗೋಡೆಗಳ ಮೇಲೆ, ಬಾವುಟಗಳಲ್ಲಿ, ಅವನ ಅಡಿಕೆ ಡಬ್ಬಿಯ ಮೇಲೆಯೂ ಹುಲಿಯ ಚಿತ್ರವಿತ್ತು. ಹುಲಿಯ ಪಟ್ಟೆಗಳ ವಿನ್ಯಾಸದ ವಸ್ತ್ರ ಧರಿಸುತ್ತಿದ್ದ, ತನ್ನ ಸೈನಿಕರಿಗೂ ಅಂಥದೇ ವಸ್ತ್ರಗಳನ್ನು ಕೊಟ್ಟಿದ್ದ. ಅವನ ಕೆಲವು ಚಿಕ್ಕ ಫಿರಂಗಿಗಳನ್ನು ಸಹ ದಾಳಿಮಾಡಲು ಸಿದ್ಧವಿರುವ ಹುಲಿಗಳಂತೆ ವಿನ್ಯಾಸಗೊಳಿಸಲಾಗಿತ್ತು. ಅವನ ಸಿಂಹಾಸನಕ್ಕೆ ಹುಲಿಯ ಕಾಲುಗಳು ಹಾಗೂ ಹುಲಿಯ ತಲೆಗಳ ಆಕೃತಿಗಳಿದ್ದವು. ಟಿಪ್ಪುಶತ್ರುಗಳಿಗೆ ತನ್ನ ಶಕ್ತಿಯನ್ನು ಪ್ರದರ್ಶಿಸಲು ಒಂದು ಪ್ರಬಲ ಮತ್ತು ಪರಿಣಾಮಕಾರಿ ಸಂಕೇತವನ್ನು ಬಳಸಿಕೊಂಡಿದ್ದ. ಬ್ರಿಟಿಷರಿಗೆ ಟಿಪ್ಪುಸುಲ್ತಾನ್ ‘ವ್ಯಾಘ್ರಸ್ವಪ್ನ’ವಾಗಿದ್ದ. ಬ್ರಿಟಿಷರನ್ನು ಎದುರಿಸುತ್ತಿದ್ದ ರೀತಿ ಹಾಗೂ ಬ್ರಿಟಿಷರ ಮೇಲಿನ ಅವನ ದ್ವೇಷ ಇಂಗ್ಲೆಂಡಿನಲ್ಲಿ ದಂತಕತೆಯೇ ಆಗಿತ್ತು.
‘ಶತ್ರುವಿನ ಶತ್ರು ತನಗೆ ಮಿತ್ರ’ ಎಂಬಂತೆ ಬ್ರಿಟಿಷರ ಶತ್ರುಗಳಾದ ಫ್ರೆಂಚರ ಗೆಳೆತನವನ್ನು ಟಿಪ್ಪು ಸುಲ್ತಾನನಿಗಿಂತ ಮೊದಲು ಆತನ ತಂದೆ ಹೈದರಲಿ ಗಳಿಸಿದ್ದ. ಬ್ರಿಟಿಷರು ಮತ್ತು ಫ್ರೆಂಚರು ಇಬ್ಬರೂ ಭಾರತದಲ್ಲಿ ತಮ್ಮ ಆಧಿಪತ್ಯವನ್ನು ಸ್ಥಾಪಿಸಲು ಪೈಪೋಟಿ ನಡೆಸುತ್ತಿದ್ದರು. ಫ್ರೆಂಚರ ಬಹುಮುಖ್ಯ ವ್ಯಾಪಾರ ಕೇಂದ್ರಸ್ಥಾನವಾಗಿದ್ದ ಪಾಂಡಿಚೇರಿ 1756ರಿಂದ 1763ರವರೆಗೆ ನಡೆದ ಏಳು ವರ್ಷಗಳ ಯುದ್ಧದಲ್ಲಿ ಹಾಗೂ ಪುನಃ 1775-1783ರವರೆಗೆ ನಡೆದ ಅಮೆರಿಕನ್ ಕ್ರಾಂತಿ ಯುದ್ಧದಲ್ಲಿ ಬ್ರಿಟಿಷರ ವಶವಾಗಿತ್ತು. ಆದರೆ 1778-1784ರವರೆಗೆ ನಡೆದ ಎರಡನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಹೈದರ್ ಆಲಿ ಮತ್ತು ಟಿಪ್ಪು ಸುಲ್ತಾನ್ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯನ್ನು ಸೋಲಿಸಿದರು. ಆಗ ಪಾಂಡಿಚೆರಿಯಿಂದ ಹೊರದೂಡಲ್ಪಟ್ಟಿದ್ದ ಫ್ರೆಂಚ್ ಸೈನಿಕರು ಸಹ ಹೈದರಲಿ ಮತ್ತು ಟಿಪ್ಪುಸುಲ್ತಾನರೊಂದಿಗೆ ಬ್ರಿಟಿಷರ ವಿರುದ್ಧ ಹೋರಾಡಿದರು. ಪಾಂಡಿಚೇರಿ ಪುನಃ ಫ್ರೆಂಚರಿಗೇ ದೊರಕಿತು. ಇಡೀ ಫ್ರೆಂಚ್ ದೇಶ ಕುಣಿದಾಡಿತು ಹಾಗೂ ಹೈದರಲಿ ಮತ್ತು ಟಿಪ್ಪುರನ್ನು ಹೊಗಳಿತು. ಹೈದರಲಿ 1782ರಲ್ಲಿ ಅನಾರೋಗ್ಯದಿಂದ ಮರಣಹೊಂದಿದ.
1783ರಲ್ಲಿ ಫ್ರೆಂಚ್ ಚಿತ್ರ ಕಲಾವಿದ ಆಂತ್ವಾನ್ ಬೋರೆಲ್ ಒಂದು ವ್ಯಂಗ್ಯಚಿತ್ರ ರಚಿಸಿ ಪ್ಯಾರಿಸ್‌ನಲ್ಲಿ ಪ್ರದರ್ಶನಕ್ಕಿರಿಸಿದ. ಅದರಲ್ಲಿ ಹೈದರಲಿ ಬ್ರಿಟಿಷ್ ಅಧಿಕಾರಿಯೊಬ್ಬನ ಕುಂಡೆಗೆ ಬರಲಿನಿಂದ ಹೊಡೆಯುತ್ತಿದ್ದಾನೆ ಹಾಗೂ ಬ್ರಿಟಿಷನ ಕುಂಡೆ ಕೆಂಪಗಾಗಿದೆ; ಹಿಂದಿನಿಂದ ಫ್ರೆಂಚ್ ಸೈನಿಕನೊಬ್ಬ ಹೈದರಲಿಗೆ ಬರಲು ಸರಬರಾಜು ಮಾಡುತ್ತಿದ್ದಾನೆ. ಬ್ರಿಟಿಷ್ ಅಧಿಕಾರಿ ತನ್ನ ಬಾಯಿಯಿಂದ ಚೀಟಿಯೊಂದನ್ನು ಕಕ್ಕುತ್ತಿದ್ದಾನೆ ಹಾಗೂ ಅದರ ಮೇಲೆ ‘ಪಾಂಟಿಚೆರಿ’ (ಪಾಂಡಿಚೇರಿ) ಎಂದು ಬರೆದಿದೆ. ಬೊರೆಲ್‌ನ ಈ ವ್ಯಂಗ್ಯಚಿತ್ರ ಹೈದರ್ ಮತ್ತು ಟಿಪ್ಪುಸುಲ್ತಾನರ ಕೈಯಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ಸೈನ್ಯದ ಸೋಲನ್ನು ಹಾಗೂ ಅದರಲ್ಲಿ ಫ್ರೆಂಚರ ಪಾತ್ರವನ್ನು ತೋರಿಸುತ್ತಿದೆ.
ಟಿಪ್ಪುತನ್ನ ರಾಜಧಾನಿಯಾದ ಶ್ರೀರಂಗಪಟ್ಟಣದಲ್ಲಿ ನಗರದ ಹಲವೆಡೆ ವ್ಯಂಗ್ಯಚಿತ್ರಗಳೆನ್ನಬಹುದಾದ ಬೃಹತ್ ಚಿತ್ರಗಳನ್ನು ಬರೆಸಿದ್ದನೆಂಬ ಉಲ್ಲೇಖಗಳಿವೆ. ಅವುಗಳಲ್ಲಿ ಯುರೋಪಿಯನ್ನರ, ವಿಶೇಷವಾಗಿ ಬ್ರಿಟಿಷರ ಮೇಲೆ ದಾಳಿ ಮಾಡುತ್ತಿರುವ ಹುಲಿ, ಆನೆಗಳ ಚಿತ್ರಗಳಿದ್ದವು. ಟಿಪ್ಪುವಿನ ಬ್ರಿಟಿಷರ ಬಗೆಗಿನ ಈ ವ್ಯಂಗ್ಯ ಭಾವನೆಯ ಉತ್ತುಂಗವೆಂದರೆ ಆತ ಹೇಳಿ ಮಾಡಿಸಿದ ಬ್ರಿಟಿಷರ ಮೇಲೆ ದಾಳಿ ನಡೆಸುತ್ತಿರುವ ಹುಲಿಯ ಯಂತ್ರ ಗೊಂಬೆ. ಈಗ ಲಂಡನ್‌ನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನಲ್ಲಿರುವ ಈ ಯಂತ್ರಹುಲಿಯ ಎಡಭಾಗದಲ್ಲಿರುವ ಹಿಡಿಕೆಯನ್ನು ತಿರುಗಿಸಿದರೆ ಹುಲಿ ಗರ್ಜಿಸಿದಂತೆ ಹಾಗೂ ಕೆಳಗೆ ಬಿದ್ದಿರುವ ಬ್ರಿಟಿಷ್ ಸೈನಿಕ ರೋದಿಸಿದಂತೆ ಶಬ್ದವಾಗುತ್ತದೆ.
ಆ ಕಾಲದಲ್ಲಿ ಟಿಪ್ಪುಒಳಗೊಂಡಂತೆ ಅದನ್ನು ನೋಡಿದವರೆಲ್ಲರಿಗೂ ಅದು ಮನರಂಜನೆ ನೀಡುತ್ತಿತ್ತೆಂಬುದರಲ್ಲಿ ಸಂಶಯವಿಲ್ಲ. 1799ರಲ್ಲಿ ಟಿಪ್ಪುನನ್ನು ಕೊಂದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ಸೈನಿಕರು ಅದನ್ನು ಲಂಡನ್‌ಗೆ ಕೊಂಡೊಯ್ದು ಅಲ್ಲಿ ಪ್ರದರ್ಶನಕ್ಕಿರಿಸಿ ಅವರೂ ಮನರಂಜನೆ ಪಡೆದುಕೊಂಡಿದ್ದಾರೆ. ಟಿಪ್ಪುಮಡಿದ ನಂತರ 1800ರಲ್ಲಿ ಜೇಮ್ಸ್ ಸಾಲ್ಮಂಡ್ ಎಂಬಾತ ಬರೆದ ‘ಎ ರಿವ್ಯೆ ಆಫ್ ದ ಆರಿಜಿನ್, ಪ್ರೊಗ್ರೆಸ್ ಆ್ಯಂಡ್ ರಿಸಲ್ಟ್ ಆಫ್ ದ ಲೇಟ್ ಡಿಸಿಸಿವ್ ವಾರ್ ಇನ್ ಮೈಸೂರ್ ವಿಥ್ ನೋಟ್ಸ್’ ಪುಸ್ತಕದ ಮುಂಪುಟದಲ್ಲೇ ಟಿಪ್ಪುವಿನ ಯಂತ್ರ ಹುಲಿಯ ಚಿತ್ರವಿತ್ತು ಹಾಗೂ ಆ ಯಂತ್ರ ಹುಲಿಯ ಮೊತ್ತಮೊದಲ ಚಿತ್ರವೂ ಇದೇ ಆಗಿದೆ.
ಟಿಪ್ಪುಬ್ರಿಟಿಷರನ್ನು ಎದುರಿಸುತ್ತಿದ್ದ ದಂತಕತೆಯೂ ಸಹ ಟಿಪ್ಪುವ್ಯಂಗ್ಯಚಿತ್ರದ ವಸ್ತುವಾಗಲು ಪ್ರೇರೇಪಣೆ ನೀಡಿದೆ. ಟಿಪ್ಪುಬದುಕಿದ್ದಾಗಲೇ 1791ರಲ್ಲಿ ಜೇಮ್ಸ್ ಗಿಲ್‌ರೇ ಎಂಬ (ವ್ಯಂಗ್ಯ) ಚಿತ್ರಕಾರ ಇಂಗ್ಲೆಂಡಿನಲ್ಲಿ ‘ದ ಕಮಿಂಗ್ ಆನ್ ಆಫ್ ದ ಮಾನ್ಸೂನ್ಸ್ ಆರ್ ದ ರಿಟ್ರೀಟ್ ಫ್ರಂ ಸೆರಿಂಗಪಟಂ’ (ಬ್ರಿಟಿಷರು ಶ್ರೀರಂಗಪಟ್ಟಣವನ್ನು ಸೆರಿಂಗಪಟಂ ಎಂದು ಕರೆಯುತ್ತಿದ್ದರು) ಎಂಬ ವ್ಯಂಗ್ಯಚಿತ್ರ ಟಿಪ್ಪುವಿನ ಬಗೆಗೆ ಬರೆದ ಜಗತ್ತಿನ ಮೊತ್ತಮೊದಲ ವ್ಯಂಗ್ಯಚಿತ್ರವೆನ್ನಬಹುದು. ಆ ಚಿತ್ರದಲ್ಲಿ ಈ ವರ್ಣಚಿತ್ರದ ಮೂಲ ಪ್ರತಿ ಈಗಲೂ ಲಂಡನ್‌ನ ನ್ಯಾಶನಲ್ ಪೋರ್ಟ್ರೇಟ್ ಗ್ಯಾಲರಿಯಲ್ಲಿದೆ. ಈ ವ್ಯಂಗ್ಯಚಿತ್ರದಲ್ಲಿ ಚಾರ್ಲ್ಸ್ ಕಾರ್ನ್‌ವಾಲಿಸ್ ಟಿಪ್ಪುವಿನ ‘ದಾಳಿಗೆ ಹೆದರಿ ತನ್ನ ಹೇಸರಕತ್ತೆಯ ಮೇಲೆ ಕೂತು ಓಡುತ್ತಿದ್ದಾನೆ. ಕೋಟೆಯ ಹಿಂದೆ ಗಹಗಹಿಸುತ್ತಾ ನಿಂತಿರುವ ಟಿಪ್ಪು ಕತ್ತಿ ಹಿಡಿದು ಕಾರ್ನ್‌ವಾಲಿಸ್ ಹಾಗೂ ಓಡುತ್ತಿರುವ ಬ್ರಿಟಿಷ್ ಸೈನಿಕರ ಮೇಲೆ ಅತ್ಯಂತ ರಭಸದಿಂದ (‘ಕಮಿಂಗ್ ಆನ್ ಆಫ್ ದ ಮಾನ್ಸೂನ್!’) ಮೂತ್ರ ಮಾಡುತ್ತಿದ್ದಾನೆ. ಕಾರ್ನ್‌ವಾಲಿಸ್‌ನ ಟೋಪಿ ಹಾರಿದೆ, ಕತ್ತಿ ಕೈಯಿಂದ ಜಾರಿದೆ ಹಾಗೂ ಪಿಸ್ತೂಲು ಕೆಳಗೆ ಬಿದ್ದಿದೆ. ಹಲವಾರು ಬ್ರಿಟಿಷ್ ಸೈನಿಕರು ನೆಲದ ಮೇಲೆ ಸತ್ತು ಬಿದ್ದಿದ್ದಾರೆ. ಇದರಿಂದಲೇ ಬ್ರಿಟಿಷರಿಗೆ ಟಿಪ್ಪು ಕಂಡರೆ ಎಷ್ಟು ಹೆದರಿಕೆ ಇತ್ತೆಂದು ತಿಳಿಯುತ್ತದೆ.
ಟಿಪ್ಪುನನ್ನು ಕೊಂದದ್ದೂ ಇಂಗ್ಲೆಂಡಿನಲ್ಲಿ ವ್ಯಂಗ್ಯಚಿತ್ರದ ವಿಷಯವಾಯಿತು. ಆದರೆ ಅದರಲ್ಲಿ ಲೇವಡಿ ಮಾಡಿರುವುದು ಟಿಪ್ಪುನನ್ನಲ್ಲ, ಬದಲಿಗೆ ಅವನನ್ನು ಕೊಂದ ಬ್ರಿಟಿಷರನ್ನು. 1760ರಿಂದ 1790ರವರೆಗೂ ಬ್ರಿಟಿಷರಿಗೆ ಮೈಸೂರನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಟಿಪ್ಪುಬ್ರಿಟಿಷರನ್ನು ಬಗ್ಗುಬಡಿಯಲು ಫ್ರೆಂಚರ ಸಹಾಯ ಕೋರುತ್ತಿದ್ದ. ನೆಪೋಲಿಯನ್ ಈಜಿಪ್ಟಿಗೆ ಧಾವಿಸಿದಾಗ ಆತ ಭಾರತಕ್ಕೂ ಬಂದುಬಿಡಬಹುದೆಂಬ ಹೆದರಿಕೆ ಬ್ರಿಟಿಷರನ್ನು ಕಾಡಿತು. ಅದಕ್ಕೆ ಮೊದಲೇ ಮೈಸೂರನ್ನು ವಶಪಡಿಸಿಕೊಳ್ಳಲು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ಯೋಜನೆ ಹಾಕಿತು.
ಆದರೆ ಟಿಪ್ಪುಸುಲ್ತಾನನಿಗೆ ಫ್ರೆಂಚರ ಸಹಾಯ ದೊರಕಲಿಲ್ಲ. ಅಮೆರಿಕನ್ ಕ್ರಾಂತಿಯ ಕೊನೆಯಲ್ಲಿ ಫ್ರಾನ್ಸ್‌ನ ದೊರೆ 16ನೇ ಲೂಯಿ ಬ್ರಿಟನ್‌ನೊಂದಿಗೆ ಶಾಂತಿ ಸಂಧಾನ ಮಾಡಿಕೊಂಡು ಭಾರತದಲ್ಲಿ ಬ್ರಿಟಿಷರ ವಿರುದ್ಧ ಯುದ್ಧ ಮಾಡುವುದಿಲ್ಲವೆಂದು ಘೋಷಿಸಿದ. ಇದು ಟಿಪ್ಪುನನ್ನು ರೊಚ್ಚಿಗೆಬ್ಬಿಸಿತು ಹಾಗೂ ಹಲವಾರು ಫ್ರೆಂಚ್ ಅಧಿಕಾರಿಗಳೂ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. 16ನೇ ಲೂಯಿಯ ನೌಕಾ ಸೇನೆಯ ಕಮಿಶನರ್ ಲೌನೆ ಪತ್ರವೊಂದರಲ್ಲಿ ವ್ಯಕ್ತಪಡಿಸಿದ್ದಂತೆ ಫ್ರಾನ್ಸ್ ಬ್ರಿಟನ್‌ನೊಂದಿಗೆ ಸಂಧಾನ ಮಾಡಿಕೊಳ್ಳದೆ ಟಿಪ್ಪುನ ಸಹಾಯದೊಂದಿಗೆ ಬ್ರಿಟಿಷರ ಮೇಲೆ ಯುದ್ಧ ಮುಂದು ವರಿಸಿದ್ದಲ್ಲಿ ಅವರನ್ನು ಭಾರತದಲ್ಲಿ ಬಗ್ಗು ಬಡಿಯಬಹುದಿತ್ತು.
ಬ್ರಿಟಿಷರು ಇಪ್ಪತ್ತೈದು ಸಾವಿರ ಸೈನಿಕರ ಸೇನೆಯೊಂದಿಗೆ ಮಾರ್ಚ್ 1799ರಲ್ಲಿ ಶ್ರೀರಂಗಪಟ್ಟಣದ ಮೇಲೆ ದಾಳಿ ಮಾಡಿದರು. ಒಂದು ತಿಂಗಳಿಗೂ ಹೆಚ್ಚು ಕಾಲ ಟಿಪ್ಪುವಿನ ಕೋಟೆ ಅಭೇದ್ಯ ವಾಗಿತ್ತು. ಕೊನೆಗೂ ಮೇ 4ರಂದು ಬ್ರಿಟಿಷರು ಒಳನುಗ್ಗುವಲ್ಲಿ ಯಶಸ್ವಿಯಾದರು. ಅವರೊಂದಿಗೆ ವೀರಾವೇಶದಿಂದ ಹೋರಾಡಿದ ಟಿಪ್ಪುಸಾವನ್ನಪ್ಪಿದ. ಅವನ ಸಾವಿನ ನಂತರ ನಲವತ್ತೆಂಟು ಗಂಟೆಗಳ ಕಾಲ ಬ್ರಿಟಿಷರು ಟಿಪ್ಪುವಿನ ಅರಮನೆ ಹಾಗೂ ನಗರವನ್ನು ಕೊಳ್ಳೆಹೊಡೆಯುತ್ತಾರೆ, ಸಾವಿರಾರು ಜನರನ್ನು ಕೊಲ್ಲುತ್ತಾರೆ. ಟಿಪ್ಪುವಿನ ಸಾವಿನಿಂದ ಬ್ರಿಟನ್‌ನ ಜನ ಸಂತೋಷದಿಂದ ಕುಣಿದಾಡಿದರಂತೆ.
ಆಗ ಅಕ್ಟೋಬರ್ 8, 1799ರಂದು ‘ದ ಡೆತ್ ಆಫ್ ಟಿಪ್ಪುಆರ್ ಬಿಸೀಜಿಂಗ್ ದ ಹೇರಂ’ ಎಂಬ ವ್ಯಂಗ್ಯಚಿತ್ರ ಪ್ರಕಟವಾಯಿತು. ಆ ವ್ಯಂಗ್ಯಚಿತ್ರದಲ್ಲಿ ಟಿಪ್ಪುನನ್ನು ಕೊಂದನಂತರ ಅವನ ಅಂತಃಪುರಕ್ಕೆ ನುಗ್ಗಿ ಟಿಪ್ಪುವಿನ ರಾಣಿಯರನ್ನು ಅತ್ಯಾಚಾರ ಮಾಡುತ್ತಿರುವುದು ಆ ವ್ಯಂಗ್ಯಚಿತ್ರದಲ್ಲಿದೆ. ಅವರಲ್ಲಿ ಒಬ್ಬ ಮಹಿಳೆಯನ್ನು ಕೊಂಡೊಯ್ಯುತ್ತಿರುವ ಒಬ್ಬಾತ, ‘Hurrah my Honey, now for the Black Joke’ ಎನ್ನುತ್ತಿದ್ದಾನೆ (‘ಬ್ಲಾಕ್ ಜೋಕ್ ಎನ್ನುವುದು ಆಗಿನ ಇಂಗ್ಲಿಷಿನಲ್ಲಿ ಹೆಣ್ಣಿನ ಜನನಾಂಗಕ್ಕೆ ಇದ್ದ ಅಡ್ಡಹೆಸರು). ಮತ್ತೊಬ್ಬಾತ ‘Cheerup my girls, will supply his place well’ ಎನ್ನುತ್ತಿದ್ದಾನೆ. ಒಬ್ಬ ಹೆಣ್ಣು ಒಬ್ಬಾತನನ್ನು ಕೆಳಕ್ಕೆ ದಬ್ಬಿ ಕುತ್ತಿಗೆ ಹಿಸುಕುತ್ತಿದ್ದಾಳೆ.
ಆದರೆ ಬ್ರಿಟನ್‌ನ ವಸಾಹತುಶಾಹಿ ದಬ್ಬಾಳಿಕೆ, ಆಕ್ರಮಣವನ್ನು ಬ್ರಿಟನ್‌ನ ಹಲವಾರು ಜನ ವಿರೋಧಿಸುತ್ತಿದ್ದರು. ‘ದ ಡೆತ್ ಆಫ್ ಟಿಪ್ಪುಆರ್ ಬಿಸೀಜಿಂಗ್ ದ ಹೇರಂ’ ವ್ಯಂಗ್ಯಚಿತ್ರ ಅಂತಹ ಒಂದು ವಿರೋಧದ ಅಭಿವ್ಯಕ್ತಿ ಎನ್ನುವವರಿದ್ದಾರೆ. ‘ಭಾರತೀಯರು ಅನಾಗರಿಕರು ಹಾಗೂ ಅಲ್ಲಿನ ರಾಜ, ಮಹಾರಾಜರಿಂದಲೇ ದಬ್ಬಾಳಿಕೆಗೆ ಒಳಗಾದವರು. ಅಲ್ಲಿನ ಜನರನ್ನು ಸಭ್ಯ, ನಾಗರಿಕ ಬ್ರಿಟಿಷರಾದ ನಾವು ಕಾಪಾಡುತ್ತಿದ್ದೇವೆ ಎನ್ನುವ ಚಿತ್ರಣವನ್ನು ಬ್ರಿಟನ್‌ಗೆ ಕೊಟ್ಟಿದ್ದ ಈಸ್ಟ್ ಇಂಡಿಯಾ ಕಂಪೆನಿಯ ಮತ್ತೊಂದು ಮುಖವನ್ನು ತೋರಿಸುವ ಪ್ರಯತ್ನ ಈ ವ್ಯಂಗ್ಯಚಿತ್ರದ್ದಾಗಿತ್ತು.
ಆದರೆ ಆ ವ್ಯಂಗ್ಯಚಿತ್ರದಲ್ಲಿ ತೋರಿಸಿರುವ ಹೆಣ್ಣಿನ ಸಾಕಷ್ಟು ನಗ್ನತೆ ಬ್ರಿಟಿಷರ ವಸಾಹತುಶಾಹಿ ದಬ್ಬಾಳಿಕೆಯನ್ನು ತೋರಿಸುವ ಉದ್ದೇಶ ಹೊಂದಿರಲಿಲ್ಲ, ಬದಲಿಗೆ ಆಗಿನ ಬ್ರಿಟಿಷ್ ‘ಸಭ್ಯ ನಾಗರಿಕರ ಮನಸ್ಸಿಗೆ ಕಚಗುಳಿ ಇಡುವುದಷ್ಟೇ ಆಗಿತ್ತು ಎಂದು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಹಾಗೂ ಚರಿತ್ರಕಾರ ತನ್ನ 2006ರ ‘City of Laughter: Sex and Satire in Eighteenth-century London’ಪುಸ್ತಕದಲ್ಲಿ ಆ ಸಮಯದ ವ್ಯಂಗ್ಯಚಿತ್ರ ಮತ್ತು ಅಶ್ಲೀಲ ಸಾಹಿತ್ಯದ ನಡುವಿನ ಸಂಬಂಧಗಳ ವಿಶ್ಲೇಷಣೆಯಲ್ಲಿ ತಿಳಿಸಿದ್ದಾನೆ.
ಈ ಚಿತ್ರ ಬಿಡಿಸಿದ ಕಲಾಕಾರನಿಗೆ ಆಗಿನ ಭಾರತೀಯ ಸಮಾಜದ ಹೆಣ್ಣಿನ ಚಿತ್ರಣವಿರಲಿಲ್ಲವೆನ್ನಿಸುತ್ತದೆ, ಏಕೆಂದರೆ ಆ ವ್ಯಂಗ್ಯಚಿತ್ರದಲ್ಲಿನ ಸ್ತ್ರೀಯರು ಧರಿಸಿರುವ ವಸ್ತ್ರಗಳು ಯೂರೋಪಿಯನ್ ಸ್ತ್ರೀಯರ ವಸ್ತ್ರಗಳಂತಿವೆ. ಆ ವ್ಯಂಗ್ಯಚಿತ್ರ ಬಿಡಿಸಿದ ಕಲಾವಿದ ಯಾರೆಂಬುದರ ಬಗ್ಗೆ ಈಗಲೂ ಏಕಾಭಿಪ್ರಾಯವಿಲ್ಲ- ಕೆಲವರು ರೋಲ್ಯಾಂಡ್‌ಸನ್ ಎಂದರೆ ಆ ಚಿತ್ರ ರಚನೆ ಹಾಗೂ ಅದರಲ್ಲಿನ ಬರಹದ ಶೈಲಿಯಿಂದ ಕೆಲವರು ಜಾನ್ ಕಾಸ್ ಎನ್ನುತ್ತಾರೆ.
ಟಿಪ್ಪು ಸುಲ್ತಾನ್ ಹುಟ್ಟು ಹಾಕಿದ್ದ ಹುಲಿಯ ರೂಪಕ ಬ್ರಿಟಿಷರಿಗೆ ಸವಾಲಾಗಿತ್ತು. ಬ್ರಿಟಿಷರ ಲಾಂಛನ ಸಿಂಹವಾಗಿತ್ತು ಹಾಗೂ ಅವರು ಹುಲಿಯನ್ನು ಸಿಂಹ ಕೊಲ್ಲುವ ಚಿತ್ರಗಳನ್ನು ಸಾಧ್ಯವಾದೆಡೆಯೆಲ್ಲಾ ಬಳಸಿದರು. ಟಿಪ್ಪುನನ್ನು ಕೊಂದ ಸೈನಿಕರಿಗೆ ಇಂಗ್ಲೆಂಡಿನಲ್ಲಿ ‘ಸೆರಿಂಗಪಟಂ ಪದಕ’ ನೀಡಿ ಸನ್ಮಾನಿಸಿದರು. ಆ ಪದಕದಲ್ಲಿ ಒಂದೆಡೆ ಹುಲಿಯನ್ನು ಸಿಂಹ ಕೊಲ್ಲುತ್ತಿರುವ ಚಿತ್ರವಿತ್ತು. ಟಿಪ್ಪು ಸಾವಿನ ನಂತರವೂ ಹುಲಿಯ ಸಂಕೇತದ ಮೇಲಿನ ಅವರ ಸಿಟ್ಟು ಕಡಿಮೆಯಾಗಲಿಲ್ಲ. ಅದೇ ಸಿಟ್ಟಿನಿಂದ ಭಾರತದ ಕಾಡುಗಳಲ್ಲಿ ಹುಲಿಗಳನ್ನು ಕೊಂದು ಅವುಗಳ ಮೇಲೆ ಕಾಲನ್ನಿಟ್ಟು ಫೋಟೊ ತೆಗೆಸಿಕೊಂಡು ಗರ್ವದಿಂದ ಬೀಗುತ್ತಿದ್ದರು.
1857ರ ಸಿಪಾಯಿ ದಂಗೆಯ ಸಮಯದಲ್ಲಿ ಬ್ರಿಟನ್‌ನ ವ್ಯಂಗ್ಯಚಿತ್ರಗಳಿಗೆಂದೇ ಮೀಸಲಾಗಿರುವ ಪತ್ರಿಕೆ ‘ಪಂಚ್’ನ 1857ರ ಆಗಸ್ಟ್ 22ರ ಸಂಚಿಕೆಯಲ್ಲಿ ಜಾನ್ ಟೆನ್ನಿಯಲ್ ಎಂಬಾತನ ‘ದ ಬ್ರಿಟಿಷ್ ಲಯನ್ಸ್ ವೆನ್‌ಜಿಯೆನ್ಸ್ ಆನ್ ದ ಬೆಂಗಾಲ್ ಟೈಗರ್’ ಎಂಬ ವ್ಯಂಗ್ಯಚಿತ್ರ ಪ್ರಕಟವಾಯಿತು. ಅದರಲ್ಲಿ ಹುಲಿಯೊಂದು ಮಗು ಮತ್ತು ಹೆಣ್ಣಿನ ಮೇಲೆ ದಾಳಿ ಮಾಡಿದೆ ಹಾಗೂ ಆ ಮಗು ಮತ್ತು ಹೆಣ್ಣನ್ನು ಕಾಪಾಡಲೋ ಎಂಬಂತೆ ಸಿಂಹವೊಂದು ಹುಲಿಯ ಮೇಲೆ ದಾಳಿ ಮಾಡಿದೆ. ಟಿಪ್ಪುವಿನ ಯಂತ್ರ ಹುಲಿ ಬ್ರಿಟಿಷನ ಮೇಲೆ ದಾಳಿ ಮಾಡಿ ಘರ್ಜಿಸುತ್ತಿದ್ದರೆ ‘ಪಂಚ್’ನ ವ್ಯಂಗ್ಯಚಿತ್ರ ಅದಕ್ಕೆ ವಿರುದ್ಧವಾಗಿ ಹುಲಿಯ ಮೇಲೆ ದಾಳಿ ಮಾಡಿ ಸೇಡು ತೀರಿಸಿಕೊಳ್ಳುತ್ತಿರುವಂತಿದೆ. ಅದರ ಶೀರ್ಷಿಕೆಯೂ ಅದನ್ನೇ ಹೇಳುತ್ತದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.