Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಈ ವಾರ

ಈ ವಾರ

19 March 2023 10:00 AM IST
share

ಪ್ರಧಾನಿ ಸ್ವಾಗತಕ್ಕೆ ರೌಡಿಶೀಟರ್!

ಕಳೆದ ರವಿವಾರ ಪ್ರಧಾನಿ ಮೋದಿ ರಾಜ್ಯಕ್ಕೆ ಬಂದಿದ್ದರು. ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ರಸ್ತೆ ಲೋಕಾರ್ಪಣೆ, ಮಂಡ್ಯದಲ್ಲಿ ರೋಡ್ ಶೋ, ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾದರು. ತಮ್ಮ ಭಾಷಣದಲ್ಲಿ ಎಲ್ಲೂ ಜೆಡಿಎಸ್ ಬಗ್ಗೆ ಪ್ರಸ್ತಾಪಿಸದೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಪ್ರಧಾನಿ ಕಾರ್ಯಕ್ರಮ ಹಲವು ಗೊಂದಲ ಮತ್ತು ಚರ್ಚೆಗೆ ಕಾರಣವಾಯಿತು. ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಪ್ರತಾಪ ಸಿಂಹ ಹೆಸರು ಇರದೆ, ಸುಮಲತಾ ಹೆಸರಿತ್ತು. ಕೊನೆಗೆ ಪ್ರತಾಪ ಸಿಂಹ ಕಾರ್ಯಕ್ರಮ ಮಂಡ್ಯದಲ್ಲಿರುವುದರಿಂದ ಹೀಗಾಗಿದೆ ಎಂದು ತೇಪೆ ಹಚ್ಚಿದರು. ಪ್ರಧಾನಿ ಮಂಡ್ಯಕ್ಕೆ ಬಂದಿಳಿಯುತ್ತಿದ್ದಂತೆ ಅವರನ್ನು ಸ್ವಾಗತಿಸಿದವರಲ್ಲಿ ರೌಡಿ ಶೀಟರ್ ಫೈಟರ್ ರವಿ ಇದ್ದದ್ದು ಚರ್ಚೆಗೆ ಗ್ರಾಸವಾಯಿತು. ಪ್ರಧಾನಿ ಫೈಟರ್ ರವಿಗೆ ನಮಸ್ಕರಿಸಿದ ಫೋಟೊ ತೋರಿಸಿ ಕಾಂಗ್ರೆಸ್, ಜೆಡಿಎಸ್‌ಗಳು ಬಿಜೆಪಿಯ ನಿಲುವನ್ನು ಪ್ರಶ್ನಿಸಿದವು. ರೌಡಿಶೀಟರ್‌ಗೆ ಕೈ ಮುಗಿಯುವ ಮೂಲಕ ಪ್ರಧಾನಿ ಹುದ್ದೆಯ ಘನತೆ ಕಡಿಮೆ ಮಾಡಿದ್ದಾರೆ ಎಂದು ಆರೋಪಿಸಿದವು. ಸ್ವಾಗತ ಪಟ್ಟಿಯಲ್ಲಿ ರವಿ ಹೆಸರು ಹೇಗೆ ಬಂತು, ಇದೊಂದು ಲೋಪ ಎಂದು ಸ್ವತಃ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಪ್ರಧಾನಿ ಕಾರ್ಯಕ್ರಮವೆಂದರೆ ತಮಾಷೆಯಲ್ಲ. ಪ್ರತಿಯೊಂದೂ ಮೊದಲೇ ನಿಗದಿಯಾಗಿರುತ್ತದೆ. ಪ್ರಧಾನಿ ಕಾರ್ಯಾಲಯ ಎಲ್ಲ ವಿವರವನ್ನೂ ತೆಗೆದುಕೊಂಡಿರುತ್ತದೆ. ಹೀಗಿದ್ದೂ ರೌಡಿ ಶೀಟರ್ ಒಬ್ಬನ ಬಗ್ಗೆ ಯಾಕೆ ಗಮನಕ್ಕೆ ಬಂದಿಲ್ಲ? ರಾಜ್ಯ ಬಿಜೆಪಿ ಮಾಹಿತಿ ನೀಡಿರಲಿಲ್ಲವೇ? ಅಥವಾ ರಾಜ್ಯ ಬಿಜೆಪಿ ಮುಖಂಡರೇ ಫೈಟರ್ ರವಿ ಕೂಡ ನಮ್ಮ ಮುಖ್ಯ ನಾಯಕ ಎಂದು ತೀರ್ಮಾನಿಸಿಯೇ ಪ್ರಧಾನಿ ಮುಂದೆ ನಿಲ್ಲಿಸಿದರೆ?

ಶೋಕಿಗೊಂದು ಎಕ್ಸ್‌ಪ್ರೆಸ್ ವೇ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ನಿರ್ಮಾಣದ ಶ್ರೇಯಸ್ಸು ಯಾರಿಗೆ ಎಂಬುದರ ಚರ್ಚೆ ಜೋರಾಗಿಯೇ ನಡೆಯಿತು. ಇದೊಂದು ಅವೈಜ್ಞಾನಿಕ ಎಕ್ಸ್‌ಪ್ರೆಸ್ ವೇ ಮತ್ತು ಆತುರವಾಗಿ ಕೇವಲ ಚುನಾವಣೆಗಾಗಿ ಲೋಕಾರ್ಪಣೆ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂತು. ಕಾಮಗಾರಿ ಮುಗಿಯುವ ಮುಂಚೆ ಲೋಕಾರ್ಪಣೆ ಯಾಕೆ ಎಂದು ಜನರೂ ಪ್ರಶ್ನೆ ಮಾಡಿದರು. ರಸ್ತೆ ಉದ್ಘಾಟನೆಯಾಗುತ್ತಿದ್ದಂತೆ ಟೋಲ್ ಸಂಗ್ರಹ ಆರಂಭವಾಯಿತು. ದುಬಾರಿ ಟೋಲ್ ವಿರುದ್ಧ ಜನ ಸಿಡಿದೆದ್ದರೆ, ಲೋಕಾರ್ಪಣೆ ಆದ ಒಂದೇ ದಿನಕ್ಕೆ ರಸ್ತೆ ಕಿತ್ತುಬಂದ ಬಗ್ಗೆಯೂ ವರದಿಯಾಯಿತು. ಸಾಲದ್ದಕ್ಕೆ ಸರಿಯಾಗಿ ಎಲ್ಲ ಕಡೆ ಸರ್ವಿಸ್ ರಸ್ತೆ ಮಾಡಿದರೆ ಟೋಲ್ ಕಟ್ಟುವವರು ಯಾರು ಎಂದು ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಹೇಳಿದ್ದು ಜನರ ಗಾಯಕ್ಕೆ ಉಪ್ಪುಸವರಿದ ಹಾಗಾಯಿತು. ದೂರದೃಷ್ಟಿ ಇಲ್ಲದೆ, ಜನರ ಅಗತ್ಯ ಅರಿಯದೆ, ಕೇವಲ ಪ್ರಚಾರಕ್ಕೆ, ಶೋಕಿಗೆ ಆತುರದಿಂದ ಯೋಜನೆ ಆದರೆ ಏನಾದೀತೋ ಅದೇ ಇಲ್ಲೂ ಆಗಿದೆ. ಅನಿವಾರ್ಯವಾಗಿ ಸ್ವಲ್ಪದೂರ ಸಾಗಲೂ ಪೂರ್ತಿ ಟೋಲ್ ಕಟ್ಟುವಂತೆ ಜನರಿಂದ ಬಲವಂತವಾಗಿ ಸುಲಿಗೆ ಮಾಡಲಾಗುತ್ತಿದೆ. ಒಟ್ಟಾರೆ ಬಡವರು ಬದುಕಲಾರದ ಸ್ಥಿತಿ ನಿರ್ಮಾಣವಾಗುತ್ತಿದೆ.

ಲಿಂಗಾಯತರ ಸಿಟ್ಟು

ವಿಜಯೇಂದ್ರ ಅವರಿಗೆ ಬಿಜೆಪಿ ಟಿಕೆಟ್ ಕುರಿತ ಪ್ರಶ್ನೆ ಬಂದಾಗ, ‘‘ಟಿಕೆಟನ್ನು ಯಾರದೋ ಮನೆಯ ಕಿಚನ್‌ನಲ್ಲಿ ಡಿಸೈಡ್ ಮಾಡುವುದಿಲ್ಲ, ಯಾರೋ ಒಬ್ಬರಿಗೆ ಇಡೀ ಪಕ್ಷವನ್ನು ಕೊಟ್ಟು ಬಿಡುವುದಕ್ಕಾಗುವುದಿಲ್ಲ’’ ಎಂದು ಸಿ.ಟಿ. ರವಿ ಹೇಳಿದ್ದು ವಿವಾದಕ್ಕೆ ಕಾರಣವಾಯಿತು. ಈ ನಡುವೆ ವೀರಶೈವ ಲಿಂಗಾಯತರ ಕುರಿತು ಅವರು ನೀಡಿದ್ದಾರೆ ಎನ್ನಲಾದ ಹೇಳಿಕೆ ವಿರುದ್ಧ ವೀರಶೈವ ಲಿಂಗಾಯತ ಸಮುದಾಯದ ಸಂಘಟನೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದೇ ವೀರಶೈವ ಲಿಂಗಾಯತರಿಂದ ಎಂದು ನೆನಪಿಸಿದೆ. ಪ್ರಚಾರಕ್ಕೆ ಬಂದರೆ ಛೀಮಾರಿ ಹಾಕುವಂತೆಯೂ ಹೇಳಿದೆ. ರಾಜ್ಯದಲ್ಲಿ ಬಿಜೆಪಿ ಬೆಳೆಯಲು, ಲಿಂಗಾಯತರು ಮತ್ತು ಬಿಎಸ್‌ವೈ ಕಾರಣ. ಇಂದಿಗೂ ಯಡಿಯೂರಪ್ಪ ಸಮುದಾಯದ ಪ್ರಶ್ನಾತೀತ ನಾಯಕ. ಯಡಿಯೂರಪ್ಪ ಅವರಿಂದ ಅಧಿಕಾರ ಕಸಿದದ್ದು, ಜಗದೀಶ್ ಶೆಟ್ಟರ್‌ರನ್ನು ಬದಿಗೆ ಸರಿಸಿರುವುದರ ಬಗ್ಗೆ ಸಮುದಾಯಕ್ಕೆ ಸಿಟ್ಟಿದೆ. ಪಂಚಮಸಾಲಿ ಮೀಸಲಾತಿ ಕುರಿತು ಸರಕಾರದ ವಿರುದ್ಧ ಆಕ್ರೋಶ ಇದೆ. ಇಂತಹ ಹೊತ್ತಲ್ಲಿ ಸಿ.ಟಿ. ರವಿ ಹೇಳಿಕೆ ಬಿಜೆಪಿಗೆ ದೊಡ್ಡ ಪೆಟ್ಟು ಕೊಡಲೂಬಹುದು. ಒಂದು ಕಾಲದಲ್ಲಿ ಕಾಂಗ್ರೆಸ್‌ನಿಂದ ಹೇಗೆ ಲಿಂಗಾಯತರು ದೂರ ಸರಿದರೋ ಅಂಥದ್ದೇ ಅಪಾಯ ಈಗ ಬಿಜೆಪಿಗಿದೆ. ‘‘ಯಡಿಯೂರಪ್ಪಅವರನ್ನು ಬಿಟ್ಟು ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಎದೆಗಾರಿಕೆ ನಿಮಗಿದೆಯೇ?’’ ಎಂದೇ ವಿಜಯೇಂದ್ರ ಸವಾಲು ಹಾಕಿದ್ದಾರೆ. ಇನ್ನು ಬಿಜೆಪಿಯಿಂದ ಕಾಂಗ್ರೆಸ್‌ಗೆ ಹೋಗುತ್ತಿರುವವರ ಪಟ್ಟಿಯೂ ದೊಡ್ಡದಾಗುತ್ತಿದೆ. ಇಡೀ ದೇಶದಲ್ಲಿ ಬಿಜೆಪಿ ಯಾವ ಸ್ಥಿತಿಯಲ್ಲಿದೆಯೋ ಅದರ ವಿರುದ್ಧ ದಿಕ್ಕಿನಲ್ಲಿ ರಾಜ್ಯ ಬಿಜೆಪಿ ಇದೆ. ಹಿಂದುತ್ವ, ಮೋದಿ ವರ್ಚಸ್ಸು, ಪ್ರಬಲ ನಾಯಕತ್ವ, ಗೆಲ್ಲುವ ಹುಮ್ಮಸ್ಸು ಇದ್ಯಾವುದೂ ಕಾಣುತ್ತಿಲ್ಲ.

ಇವರ ಹಣೆಬರಹವೂ ಇಷ್ಟೇ

ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಶುಕ್ರವಾರ ಅಂತಿಮಗೊಂಡಿದೆ. ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್ ಸಿಕ್ಕಿದೆ. ಕೆಲವು ಕ್ಷೇತ್ರಗಳಲ್ಲಿ ಇಬ್ಬರ ಹೆಸರಿದ್ದು ಅದನ್ನು ಈ ಸಭೆಯಲ್ಲಿ ಅಂತಿಮಗೊಳಿಸಲಾಗಿದೆ. ಡಿಕೆಶಿ ಬಣ, ಸಿದ್ದರಾಮಯ್ಯ ಬಣದಲ್ಲಿ ಯಾರ ಕೈ ಮೇಲಾಗುವುದೋ ಗೊತ್ತಿಲ್ಲ. ಚುನಾವಣೆಗೆ ಅಭ್ಯರ್ಥಿಗಳ ಅಂತಿಮಗೊಳಿಸುವಿಕೆ ಯಾವ ಪಕ್ಷಕ್ಕಾದರೂ ಸವಾಲೇ ಸರಿ. ಡಿಕೆಶಿ ಅವರ ಮಾತನ್ನೇ ಪರಿಗಣಿಸುವುದಾದರೆ ಗೆಲ್ಲುವ ಮಾನದಂಡವೇ ಅಂತಿಮವಾದರೆ ಸಾಮಾಜಿಕ, ಲಿಂಗ, ಆರ್ಥಿಕ ಆಧಾರದ ಬದಲಾವಣೆ ಇವರಿಂದ ಸಾಧ್ಯವೇ?. ಉತ್ತರಪ್ರದೇಶದಲ್ಲಿಯಂತೆ ಮಹಿಳೆಯರಿಗೆ ಹೆಚ್ಚು ಟಿಕೆಟ್ ಇಲ್ಲಿ ಅನ್ವಯ ಆಗುವುದಿಲ್ಲ. ಎಲ್ಲ ಪಕ್ಷಗಳ ಹಣೆಬರಹವೂ ಇಷ್ಟೆ. ಝಂಡಾ ಬೇರೆ ಅಜೆಂಡಾ ಒಂದೇ.

ಮತಕ್ಕಾಗಿ ದಾಂಧಲೆ?

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದಲ್ಲಿ ಮಂಗಳವಾರ ಮಸೀದಿ, ಮನೆ, ಶಾಲೆಗಳ ಮೇಲೆ ಕಲ್ಲುತೂರಾಟ ನಡೆಯಿತು. ವಾರದ ಹಿಂದಷ್ಟೇ ರಟ್ಟಿಹಳ್ಳಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮೆರವಣಿಗೆ ವೇಳೆ ಕಲ್ಲುತೂರಾಟ ನಡೆದ ಆರೋಪ ಕೇಳಿಬಂದಿತ್ತು. ಇದನ್ನೇ ನೆಪ ಮಾಡಿಕೊಂಡು ಹಿಂದುತ್ವ ಸಂಘಟನೆ ಕಾರ್ಯಕರ್ತರು ಶೋಭಾಯಾತ್ರೆ ಹಮ್ಮಿಕೊಂಡಿದ್ದರು. ಈ ವೇಳೆ ಸಂಘಪರಿವಾರ ಕಾರ್ಯಕರ್ತರು ಮಸೀದಿ, ಮನೆ, ಅಂಗನವಾಡಿ, ಶಾಲೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಆದರೆ ಇದು ವ್ಯವಸ್ಥಿತ ದಾಂಧಲೆ ಎಂಬ ಅನುಮಾನ ವ್ಯಕ್ತವಾಗಿದೆ. ಸೋಲಿನ ಭಯದಲ್ಲಿರುವ ಬಿಜೆಪಿ, ಸದ್ಯ ಆ ಭಾಗದ ಶಾಸಕರಾಗಿರುವ ಬಿ.ಸಿ. ಪಾಟೀಲ್ ಹಿಂದುತ್ವದ ಮೂಲಕ ಮತ ಸೆಳೆಯಲು ರಾಯಣ್ಣ ಪ್ರತಿಮೆ ವಿಚಾರವನ್ನು ದಾಳ ಮಾಡಿಕೊಂಡಿದ್ದಾರೆಂಬ ಅನುಮಾನವಿದೆ. ಇದಕ್ಕಾಗಿ ಪೊಲೀಸರನ್ನು ಬಳಸಿಕೊಳ್ಳಲಾಗಿದೆ, ದಾಂಧಲೆ ನಡೆಯುತ್ತಿದ್ದರೂ ಪೊಲೀಸರು ಮೂಕಪ್ರೇಕ್ಷಕರಾಗುವಂತೆ ಮಾಡಲಾಗಿದೆ ಎಂಬ ಆರೋಪಗಳು ವ್ಯಕ್ತವಾಗಿವೆ.

ಅದಾನಿ ಮತ್ತು ಎಲಾರಾ

ದೇಶದ ರಕ್ಷಣಾ ವಲಯದಲ್ಲಿ ಒಪ್ಪಂದ ಹೊಂದಿರುವ ಅದಾನಿ ಸಮೂಹದ ಕಂಪೆನಿಯಲ್ಲಿ ಹಣ ಹಾಕಿರುವ ಎಲಾರಾ ಎಂಬ ವಿದೇಶಿ ಕಂಪೆನಿ ವಿಚಾರದಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ತನಿಖಾ ವರದಿ ಎತ್ತಿರುವ ಗಂಭೀರ ಪ್ರಶ್ನೆಗಳು ಸಂಚಲನ ಮೂಡಿಸಿದೆ. ಇಸ್ರೋ ಮತ್ತು ಡಿಆರ್‌ಡಿಒ ಜೊತೆ ನಿಕಟವಾಗಿ ಕಾರ್ಯನಿರ್ವಹಿಸುವ ಮತ್ತು ಕ್ಷಿಪಣಿ, ರಾಡಾರ್ ವ್ಯವಸ್ಥೆಗಳ ನವೀಕರಣಕ್ಕಾಗಿ 590 ಕೋಟಿ ರೂ. ಒಪ್ಪಂದವಿರುವ ಬೆಂಗಳೂರು ಮೂಲದ ಆಲ್ಫಾ ಡಿಸೈನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ (ಎಡಿಟಿಪಿಎಲ್) ಎಂಬ ಡಿಫೆನ್ಸ್ ಕಂಪೆನಿಯ ಮೇಲೆ ಈ ಮಾರಿಷಸ್ ನೋಂದಾಯಿತ ಎಲಾರಾ ಐಒಎಫ್ ಮೇಲೆ ಸಂಪೂರ್ಣ ಹಿಡಿತ ಹೊಂದಿದೆ ಎಂಬುದು ಆತಂಕಕ್ಕೆ ಕಾರಣವಾಗಿರುವ ವಿಚಾರ. ರಕ್ಷಣಾ ವ್ಯವಸ್ಥೆಯೊಂದಿಗೆ ಕೆಲಸ ಮಾಡುವ ಕಂಪೆನಿಯೊಂದು ಯಾರ ನಿಯಂತ್ರಣದಲ್ಲಿದೆ ಎಂಬುದು ಗೊತ್ತಿಲ್ಲದೆ ಹೇಗೆ ಸರಕಾರ ಇಂಥದೊಂದು ಹೆಜ್ಜೆಯಿಟ್ಟಿದೆ ಎಂಬುದು ತನಿಖಾ ವರದಿ ಎತ್ತಿರುವ ಪ್ರಶ್ನೆ. ದೇಶದ ರಕ್ಷಣೆಯ ವಿಚಾರವಾಗಿ ಇಂಥ ರಾಜಿಯೇಕೆ ಎಂಬ ವಿಚಾರವನ್ನೇ ರಾಹುಲ್ ಗಾಂಧಿ ಕೂಡ ಕೇಳುತ್ತಿದ್ದಾರೆ. ಈ ನಡುವೆ ಅದಾನಿ ಹಗರಣದಲ್ಲಿ ವಿನೋದ್ ಅದಾನಿ ಪಾತ್ರ ಬಯಲಿಗೆ ಬಂದಾಗ ಅವರಿಗೂ ನಮಗೂ ಸಂಬಂಧವೇ ಇಲ್ಲ ಎನ್ನುತ್ತಿದ್ದ ಅದಾನಿ ಸಮೂಹ ಈಗ ಯೂಟರ್ನ್ ಹೊಡೆದು ಅವರು ತಮ್ಮದೇ ಭಾಗ ಎನ್ನುತ್ತಿದೆ. ಆದರೆ ಸರಕಾರ ಮಾತ್ರ ಎಂದಿನಂತೆ ಮೌನ ವಹಿಸಿದೆ. ದೇಶದ ರಕ್ಷಣೆ ವಿಚಾರಕ್ಕಿಂತಲೂ ಅದಾನಿ ಮಹತ್ವದವರೇ ಎಂಬ ಪ್ರಶ್ನೆಯೆದ್ದಿದೆ. ಆದರೆ ನಿಷ್ಪಕ್ಷ ತನಿಖೆಗೆ ಸರಕಾರ ಇನ್ನಾದರೂ ಮುಂದಾಗಲೇಬೇಕಾದ ಅಗತ್ಯವಿದೆ.

ಲಿಂಗತಾರತಮ್ಯದ ಕಾನೂನು ಪದಕೋಶ

ದೇಶದ ನ್ಯಾಯಾಲ ಯಗಳಲ್ಲಿನ ತೀರ್ಪುಗಳಲ್ಲಿ ಆಗಾಗ ಮಹಿಳೆಯರ ಕುರಿತು ಅವಹೇಳನಕಾರಿ ಪದ ಬಳಕೆಯಾಗುತ್ತಿರುವುದನ್ನು ಅವಲೋಕಿಸಿರುವ ಸುಪ್ರೀಂ ಕೋರ್ಟ್, ಅಂಥ ಅನುಚಿತ ಲಿಂಗತಾರತಮ್ಯದ ಪದಗಳ ಬಳಕೆ ತಡೆಗೆ ಮುಂದಾಗಿದೆ. ಮಹಿಳೆಯರ ವಿರುದ್ಧ ಅನುಚಿತ ನಡವಳಿಕೆಗಳಲ್ಲಿ ಶೂನ್ಯ ಸಹಿಷ್ಣುತೆ ತಾಳಬೇಕಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿದ್ದಾರೆ. ಕೋಲ್ಕತಾ ಹೈಕೋರ್ಟ್ ನ್ಯಾಯಾಧೀಶೆ ಮೌಸಮಿ ಭಟ್ಟಾಚಾರ್ಯ ನೇತೃತ್ವದ ಸಮಿತಿ ಅಂಥದೊಂದು ಪದಕೋಶ ಸಿದ್ಧಪಡಿಸುತ್ತಿದ್ದು, ಸಮಿತಿಯಲ್ಲಿ ಮಾಜಿ ನ್ಯಾಯಾಧೀಶರಾದ ಪ್ರಭಾ ಶ್ರೀದೇವನ್ ಹಾಗೂ ಗೀತಾ ಮಿತ್ತಲ್ ಇದ್ದಾರೆ. ಇಂದಿನ ವ್ಯವಸ್ಥೆಯಲ್ಲಿ ಹೆಜ್ಜೆಹೆಜ್ಜೆಗೂ ಮಹಿಳೆಯನ್ನು ಕುಂಕುಮ, ಬೊಟ್ಟು ಎಂದೆಲ್ಲ ಪುರುಷಪ್ರಾಧಾನ್ಯ ಹಿಡಿತದಲ್ಲಿಡುವ ಹುನ್ನಾರಗಳೇ ಕಾಣಿಸುತ್ತಿವೆ. ಮಹಿಳೆಗೊಂದು ಸ್ವತಂತ್ರ ವ್ಯಕ್ತಿತ್ವ ಇದೆಯೆಂಬುದನ್ನೇ ಸಹಿಸದ ಮನಃಸ್ಥಿತಿಗಳಿರುವ ಕಾಲದಲ್ಲಿ, ಕಡೇಪಕ್ಷ ಕಾನೂನಿನ ಕಣ್ಣಲ್ಲಾದರೂ ಮಹಿಳೆಯ ಕುರಿತ ಗೌರವ ಪೂರ್ವಕ ಗ್ರಹಿಕೆ ಸಾಧ್ಯವಾಗಲು ಇದೊಂದು ಮಹತ್ವದ ಕಾರ್ಯವಾಗಲಿದೆ.

ಯಾವುದು ಅವಮಾನ?

ಲಂಡನ್ ಪ್ರವಾಸದ ಸಂದರ್ಭ ರಾಹುಲ್ ಗಾಂಧಿ ನೀಡಿದ್ದ, ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಹೇಳಿಕೆಯನ್ನು ದೇಶಕ್ಕೆ ಅವಮಾನ ಮಾಡಿದ್ದಾರೆ ಎಂದು ಕೇಂದ್ರ ಸರಕಾರ ಮತ್ತು ಬಿಜೆಪಿ ಖಂಡಿಸಿದ್ದು, ರಾಹುಲ್ ಕ್ಷಮೆ ಕೇಳಲು ಬಿಜೆಪಿ ಪಟ್ಟು ಹಿಡಿದಿದೆ. ಕ್ಷಮೆ ಕೇಳದೆ ಸದನದಲ್ಲಿ ರಾಹುಲ್ ಮಾತನಾಡಲು ಬಿಡುವುದಿಲ್ಲ ಎಂದಿದೆ. ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ರಾಹುಲ್ ಗಾಂಧಿ ಮತ್ತು ಖರ್ಗೆ ಹೇಳಿದ್ದಾರೆ. ಮಾತ್ರವಲ್ಲ ಈ ಹಿಂದೆ ಪ್ರಧಾನಿ ಮೋದಿ ದಕ್ಷಿಣ ಕೊರಿಯಾ, ಚೀನಾ ಪ್ರವಾಸದ ವೇಳೆ ದೇಶದ ಬಗ್ಗೆ ಆಡಿರುವ ಮಾತುಗಳನ್ನು ನೆನಪಿಸಿದ್ದಾರೆ. ‘‘ಈ ದೇಶದಲ್ಲಿ ಹುಟ್ಟಲು ಹಿಂದಿನ ಜನ್ಮದಲ್ಲಿ ಮಾಡಿದ ಪಾಪ ಕಾರಣ, ಭಾರತದಲ್ಲಿ ಹುಟ್ಟಿದ್ದಕ್ಕೆ ನಾಚಿಕೆಪಡುತ್ತಿದ್ದೆ’’ ಎಂಬ ಪ್ರಧಾನಿ ಹೇಳಿಕೆಗಳು ದೇಶಕ್ಕೆ ಅಗೌರವ ಆಗದೇ ಇದ್ದಾಗ, ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎನ್ನುವುದು ಹೇಗೆ ದೇಶಕ್ಕೆ ಅಗೌರವ ಎಂದು ಪ್ರಶ್ನಿಸಿದ್ದಾರೆ. 

‘ಆಸ್ಕರ್’ ತಂದವರು

ಎಸ್.ಎಸ್.ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಚಿತ್ರದ ‘ನಾಟು ನಾಟು’ ಹಾಡು ಹಾಗೂ ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶನದ ಕಿರು ಸಾಕ್ಷ್ಯಚಿತ್ರ ‘ದಿ ಎಲಿಫಂಟ್ ವಿಸ್ಪರರ್ಸ್’ ಆಸ್ಕರ್ ಗೆಲ್ಲುವ ಮೂಲಕ ಇತಿಹಾಸ ಬರೆದಿವೆ. ಎಂ.ಎಂ. ಕೀರವಾಣಿ ಸಂಗೀತದ ‘ನಾಟು ನಾಟು’ ಮೂಲಗೀತೆ ವಿಭಾಗದಲ್ಲಿ ಪ್ರಶಸ್ತಿ ಪಡೆದಿದೆ. ‘ನಾಟು ನಾಟು’ ಗೀತರಚನೆಕಾರ ಚಂದ್ರಬೋಸ್. ಕಿರು ಸಾಕ್ಷ್ಯಚಿತ್ರ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ‘ದಿ ಎಲಿಫೆಂಟ್ ವಿಸ್ಪರರ್ಸ್’ ಅನಾಥ ಆನೆಮರಿಯ ಆರೈಕೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟ ತಮಿಳುನಾಡಿನ ಬೊಮ್ಮನ್-ಬೆಳ್ಳಿ ದಂಪತಿಯ ಭಾವನಾತ್ಮಕ ಕಥೆಯಿದೆ. ಇದೇ ಮೊದಲ ಬಾರಿ ಭಾರತದವರೇ ನಿರ್ಮಿಸಿದ ಚಿತ್ರದ ಹಾಡು ಹಾಗೂ ಸಾಕ್ಷಚಿತ್ರ ಪ್ರತಿಷ್ಠಿತ ಆಸ್ಕರ್‌ಗೆ ಪಾತ್ರವಾಗಿದೆ. ಭಾರತದ ಸಾಂಸ್ಕೃತಿಕ ಹಿರಿಮೆ ಆಸ್ಕರ್ ಅಂಗಳದಲ್ಲಿ ಈ ಮೂಲಕ ಬೆಳಗಿದೆ. ಇಂಥ ಸಾಂಸ್ಕೃತಿಕ ದಾಖಲೆಗಳೇ ದೇಶದ ಹಿರಿಮೆಯನ್ನು ಜಾಗತಿಕ ಮಟ್ಟದಲ್ಲಿ ಉಳಿಸುವಂಥವೇ ಹೊರತು, ರಾಜಕೀಯ ಬಡಾಯಿಗಳಲ್ಲ ಎಂಬ ಸತ್ಯವನ್ನು ಒಪ್ಪಲೇಬೇಕು.

share
Next Story
X