--

ಮುಖ ಮತ್ತು ಮುಖವಾಡ

ಕಳೆದ ಒಂದು ವರ್ಷದಿಂದ ಒಂದು ರಾಜ್ಯದ ಆರೋಗ್ಯ ಇಲಾಖೆಯ ಪರಿಣಿತರ ತಂಡ ಮಾಡುವ ಕೆಲಸವನ್ನು ಡಾ.ಕಕ್ಕಿಲ್ಲಾಯರು ಏಕಾಂಗಿಯಾಗಿ ಮಾಡಿದ್ದಾರೆ. ಕೋವಿಡ್ ಬಗ್ಗೆ ಕಕ್ಕಿಲ್ಲಾಯರು ಹೇಳುತ್ತಾ ಬಂದಿದ್ದೆಲ್ಲ ನಿಜವಾಗಿದೆ. ಈ ಬಗ್ಗೆ ಅವರು ಕರ್ನಾಟಕ ಮತ್ತು ಕೇರಳ ಸರಕಾರಗಳಿಗೆ ಆಗಾಗ ಅತ್ಯಮೂಲ್ಯ ಮಾಹಿತಿ ಒಳಗೊಂಡ ಪತ್ರಗಳನ್ನು ಬರೆಯುತ್ತಲೇ ಇದ್ದಾರೆ. ಆದರೆ, ಕರ್ನಾಟಕ ಸರಕಾರ ಯಾವುದಕ್ಕೂ ಸ್ಪಂದಿಸಿಲ್ಲ.


ಭಾರತೀಯ ಬದುಕು ದಿನಕಳೆದಂತೆ ತನ್ನ ಮೂಲ ಸತ್ವ ಕಳೆದುಕೊಳ್ಳುತ್ತಿದೆ. ಸರಳ, ನೇರ, ಸಹಜ ಬದುಕಿನ ಜಾಗದಲ್ಲಿ ಕೃತಕ, ಕುಹಕದ ವ್ಯಾಪಾರಿ ಬದುಕು ಅನಾವರಣಗೊಳ್ಳುತ್ತಿದೆ. ಜಾಗತೀಕರಣದ ಅಬ್ಬರದಲ್ಲಿ ಮನುಷ್ಯರು ಕಳೆದು ಹೋಗುತ್ತಿದ್ದಾರೆ. ಇಂತಹ ಮಾರುಕಟ್ಟೆಯ ಜಗತ್ತಿನಲ್ಲಿ ಮುಖವಾಡವಿಲ್ಲದೇ ಬದುಕುವುದು ಬಹು ಕಷ್ಟದ ಕೆಲಸ.

ಸಾಮಾಜಿಕ ಕಾಳಜಿ ಬದಲಾಗಿ ಸ್ವಂತದ ವೈಯಕ್ತಿಕ ಸುಖ ಸಂಪತ್ತಿಗಾಗಿ ಧರ್ಮ, ಜಾತಿ, ಕುಲ, ಒಣ ಪ್ರತಿಷ್ಠೆಯ ಮುಖವಾಡ ಧರಿಸಲೇಬೇಕಾಗಿದೆ. ಮುಖವಾಡ ಧರಿಸದ ಸರಳ, ಸಜ್ಜನ, ನೇರಾ ನೇರ ವ್ಯಕ್ತಿತ್ವದ ಡಾ. ಶ್ರೀನಿವಾಸ ಕಕ್ಕಿಲ್ಲಾಯರಂಥವರು ಪೊಲೀಸ್ ಕೇಸ್ ಎದುರಿಸಬೇಕಾಗಿ ಬಂದಿದೆ.

ಬೇವಿಂಜೆ ವಿಷ್ಣು ಕಕ್ಕಿಲ್ಲಾಯರು ಹಣ ಮಾಡಲು ಶಾಸಕರಾಗಲಿಲ್ಲ. ಶಾಸಕರಾಗಿ ಹಣ ಕಳೆದುಕೊಂಡರು. ಈಗ ಅವರ ಮಗ ಶ್ರೀನಿವಾಸ ಕಕ್ಕಿಲ್ಲಾಯರು ದುಡ್ಡು ಗಳಿಸಲು ವೈದ್ಯಕೀಯ ವೃತ್ತಿಗೆ ಬಂದವರಲ್ಲ. ಸಮಾಜದ ನಿರ್ಲಕ್ಷಿತ, ಅವಕಾಶ ವಂಚಿತ ಸಮುದಾಯಗಳಿಗೆ ಸೇವೆ ಸಲ್ಲಿಸಲು ಅವರು ಆಯ್ದುಕೊಂಡ ಮಾರ್ಗ ವೈದ್ಯಕೀಯ ವೃತ್ತಿ. ಅದಕ್ಕೆಂದೇ ಅವರಿಗೆ ಬಡವರ ಡಾಕ್ಟರ್ ಎಂದು ಹೆಸರಿದೆ. ಅಂತಹವರು ಮಾಸ್ಕ್ ಧರಿಸದೇ ಅಗತ್ಯ ವಸ್ತುಗಳ ಖರೀದಿಗೆ ಮಾಲ್‌ವೊಂದಕ್ಕೆ ಬಂದಾಗ, ಮಾಸ್ಕ್ ಅಂದರೆ ಮುಖವಾಡ ಧರಿಸಿರಲಿಲ್ಲ ಎಂಬುದೇ ದೊಡ್ಡ ವಿವಾದವಾಗಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಈ ಕುರಿತು ಅವರು ಸ್ಪಷ್ಟೀಕರಣವನ್ನೂ ನೀಡಿದ್ದಾರೆ. ಇಷ್ಟೇ ಆಗಿದ್ದರೆ ಅದೊಂದು ದೊಡ್ಡ ವಿಷಯವಲ್ಲ. ಆದರೆ ಇದನ್ನು ಬಳಸಿಕೊಂಡು, ‘ಅವರಪ್ಪ ಕಮ್ಯುನಿಸ್ಟ್, ಇವನೂ ಕಮ್ಯುನಿಸ್ಟ್. ಅವನನ್ನು ಹೊಡೆಯಬೇಕಿತ್ತು’ ಎಂಬ ದೂರವಾಣಿಯಲ್ಲಿ ಯಾವನೊ ಆಡಿದ ಮಾತು ಕೇಳಿ ಬರುತ್ತಿದೆಯಲ್ಲ, ಅದು ನಮ್ಮ ದೇಶ ಇವತ್ತು ಯಾವ ದಿಕ್ಕಿನತ್ತ ಹೊರಟಿದೆ ಎಂಬುದಕ್ಕೆ ಸಾಕ್ಷಿ.

ಡಾ.ಶ್ರೀನಿವಾಸ ಕಕ್ಕಿಲ್ಲಾಯರು ನನಗೆ ತುಂಬ ವರ್ಷಗಳಿಂದ ಗೊತ್ತು. ಅವರ ತಂದೆ ಬಿ.ವಿ.ಕಕ್ಕಿಲ್ಲಾಯರು ನನಗೆ ಮತ್ತು ನನ್ನ ತಲೆಮಾರಿನ ಯುವಕರಿಗೆ ಮಾರ್ಕ್ಸ್‌ವಾದ, ಲೆನಿನ್‌ವಾದ ಮತ್ತು ಸಮಾಜವಾದಿ ಸಿದ್ಧಾಂತದ ಪಾಠ ಮಾಡಿದ ಗುರುಗಳು. ಅವರು ಬರೆದ ‘ಕಮ್ಯುನಿಸಂ’ ಎಂಬ ಪುಟ್ಟ ಪುಸ್ತಕ ಓದಿ ಅನೇಕರು ಕಮ್ಯುನಿಸ್ಟ್ ಚಳವಳಿಗೆ ಬಂದರು.

ಕಾಸರಗೋಡು ಸಮೀಪದ ಬೇವಿಂಜೆಯ ಭೂಮಾಲಕರ ಕುಟುಂಬದಲ್ಲಿ ಜನಿಸಿದ ಕಕ್ಕಿಲ್ಲಾಯರು ಮಂಗಳೂರಿನಲ್ಲಿ ಕಾಲೇಜು ವ್ಯಾಸಂಗ ಮಾಡುವಾಗಲೇ ವಿದ್ಯಾರ್ಥಿ ಸಂಘಟನೆಯ ಮೂಲಕ ಎಡಪಂಥೀಯ ಆಂದೋಲನಕ್ಕೆ ಧುಮುಕಿದವರು. ಒಂದು ಬಾರಿ ರಾಜ್ಯಸಭಾ ಸದಸ್ಯರಾಗಿ ಮತ್ತು ಎರಡು ಬಾರಿ ವಿಧಾನಸಭಾ ಸದಸ್ಯರಾಗಿ ಜನಪ್ರತಿನಿಧಿಗಳ ಸದನವನ್ನು ದುಡಿಯುವ ಜನರ ವೇದಿಕೆಯನ್ನಾಗಿ ಬಳಸಿಕೊಂಡವರು.

ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಕಕ್ಕಿಲ್ಲಾಯರು ರೂಪಿಸಿದ ಭೂ ಸುಧಾರಣಾ ಕಾಯ್ದೆಯು ಲಕ್ಷಾಂತರ ಭೂರಹಿತರಿಗೆ ಭೂ ಒಡೆತನ ನೀಡಿತು. ಭೂ ಒಡೆತನ ಪಡೆದವರ ಮಕ್ಕಳು ಇವತ್ತು ಕೋಮುವಾದಿ ಸಂಘಟನೆಗಳನ್ನು ಸೇರಿ ಬಿ.ವಿ.ಕಕ್ಕಿಲ್ಲಾಯರ ಪುತ್ರ ಶ್ರೀನಿವಾಸ ಕಕ್ಕಿಲ್ಲಾಯರ ಬಾಯಿ ಮುಚ್ಚಿಸಲು ಹೊರಟವರ ಕಾಲಾಳು ಪಡೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.

ಕಳೆದ ವರ್ಷ ಮಾರ್ಚ್‌ನಲ್ಲಿ ಕೊರೋನ ಎಂಬ ಮಾರಕ ಸೋಂಕು ವ್ಯಾಪಿಸತೊಡಗಿದಾಗ, ಭಾರತ ಮಾತ್ರವಲ್ಲ ಇಡೀ ವಿಶ್ವವೇ ದಿಕ್ಕು ತಪ್ಪಿ ನಿಂತಿತ್ತು. ಈ ಹೊಸ ವೈರಾಣು ವೈದ್ಯಕೀಯ ಲೋಕಕ್ಕೂ ಒಂದು ಸವಾಲಾಗಿತ್ತು. ಆಗ ಇದರ ಆಳ, ಅಗಲಗಳನ್ನು ಅಧ್ಯಯನ ಮಾಡಿ, ಸರಕಾರ ಮತ್ತು ಜನರಿಗೆ ಸಲಹೆ ಮತ್ತು ಮಾರ್ಗದರ್ಶನ ನೀಡುತ್ತಾ ಬಂದವರು ಡಾ. ಶ್ರೀನಿವಾಸ ಕಕ್ಕಿಲ್ಲಾಯರು.

ಆಗ ನನಗೂ ತುಂಬ ಆತಂಕ ಉಂಟಾಗಿತ್ತು. ಕಕ್ಕಿಲ್ಲಾಯರನ್ನು ಫೋನ್ ಮೂಲಕ ಸಂಪರ್ಕಿಸಿದಾಗ ಅವರು ಮೊದಲು ನೀಡಿದ ಸಲಹೆ, ‘ವಯಸ್ಸಾದ ನೀವು ಹೊರಗೆಲ್ಲೂ ಹೋಗಬೇಡಿ. ಅಕಸ್ಮಾತ್ ಹೊರಗೆ ಹೋದರೂ ತಪ್ಪದೇ ಮಾಸ್ಕ್ ಧರಿಸಿಕೊಳ್ಳಿ’ ಎಂಬುದಾಗಿತ್ತು. ಬಹುತೇಕ ನಮ್ಮ ಮನೆಯವರೆಲ್ಲ ಕಕ್ಕಿಲ್ಲಾಯರ ಸಲಹೆಯಂತೆ ನಡೆದುಕೊಂಡೆವು. ಇಂದಿಗೂ ಸುರಕ್ಷಿತವಾಗಿ ಇದ್ದೇವೆ. ಅವರು ನೀಡಿದ ವೈದ್ಯಕೀಯ ಸಲಹೆಗಿಂತ ‘ಏನೂ ಆಗುವುದಿಲ್ಲ, ಡೋಂಟ್ ಕೇರ್’ ಎಂದು ಧೈರ್ಯ ತುಂಬಿದರಲ್ಲ, ಅದೇ ನಮಗೆ ರಕ್ಷಾ ಕವಚವಾಯಿತು.

ಕಳೆದ ಒಂದು ವರ್ಷದಿಂದ ಒಂದು ರಾಜ್ಯದ ಆರೋಗ್ಯ ಇಲಾಖೆಯ ಪರಿಣಿತರ ತಂಡ ಮಾಡುವ ಕೆಲಸವನ್ನು ಡಾ.ಕಕ್ಕಿಲ್ಲಾಯರು ಏಕಾಂಗಿಯಾಗಿ ಮಾಡಿದ್ದಾರೆ. ಕೋವಿಡ್ ಬಗ್ಗೆ ಕಕ್ಕಿಲ್ಲಾಯರು ಹೇಳುತ್ತಾ ಬಂದಿದ್ದೆಲ್ಲ ನಿಜವಾಗಿದೆ. ಈ ಬಗ್ಗೆ ಅವರು ಕರ್ನಾಟಕ ಮತ್ತು ಕೇರಳ ಸರಕಾರಗಳಿಗೆ ಆಗಾಗ ಅತ್ಯಮೂಲ್ಯ ಮಾಹಿತಿ ಒಳಗೊಂಡ ಪತ್ರಗಳನ್ನು ಬರೆಯುತ್ತಲೇ ಇದ್ದಾರೆ. ಆದರೆ, ಕರ್ನಾಟಕ ಸರಕಾರ ಯಾವುದಕ್ಕೂ ಸ್ಪಂದಿಸಿಲ್ಲ.

ಈ ಸಲಹೆ ಮತ್ತು ಮಾರ್ಗದರ್ಶನವನ್ನು ಸಾಮಾಜಿಕ ಜಾಲತಾಣದ ಮೂಲಕ ನಾಡಿನ ಜನಸಾಮಾನ್ಯರಿಗೂ ಕಕ್ಕಿಲ್ಲಾಯರು ನೀಡಿದ್ದಾರೆ. ಇದಕ್ಕಾಗಿ ಅವರು ಯಾರಿಂದಲೂ ಒಂದು ಪೈಸೆ ಶುಲ್ಕವನ್ನೂ ಪಡೆದಿಲ್ಲ. ಮಂಗಳೂರಿನ ಹೆಸರಾಂತ ವೈದ್ಯರಾಗಿ ತಮ್ಮ ಅಮೂಲ್ಯ ಸಮಯವನ್ನು ಹೀಗೆ ಕೊರೋನ ಮಾರ್ಗದರ್ಶನಕ್ಕಾಗಿ ಅವರು ವ್ಯಯಿಸಿದ್ದಾರೆ.

ಮನಸ್ಸು ಮಾಡಿದ್ದರೆ ತಾವೇ ಒಂದು ಸುಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡಿ ಕೋಟಿ, ಕೋಟಿ ಹಣ ಗಳಿಸುವ ಸಾಮರ್ಥ್ಯ ಡಾ.ಕಕ್ಕಿಲ್ಲಾಯರಿಗೆ ಇತ್ತು. ಹಾಗೆ ಗಳಿಸಲು ಹೊರಟರೆ, ಅವರು ಮುಖಕ್ಕೆ ಮುಖವಾಡ ಹಾಕಿಕೊಂಡು ನಿಜ ವ್ಯಕ್ತಿತ್ವ ಕೊಂದುಕೊಂಡು ಬದುಕಬೇಕಾಗಿತ್ತು. ಹಾಗೆ ಬದುಕುವುದೂ, ಆತ್ಮಹತ್ಯೆ ಮಾಡಿಕೊಳ್ಳುವುದೂ ಒಂದೇ. ಅಂತಲೇ ಕಕ್ಕಿಲ್ಲಾಯರು ಆರಿಸಿಕೊಂಡಿದ್ದು ಮುಖವಾಡವಿಲ್ಲದ ಬದುಕನ್ನು. ಅದಕ್ಕಾಗಿ ಈಗ ಪ್ರವಾಹದ ಎದುರು ಈಜುತ್ತಿದ್ದಾರೆ. ಇಂತಹ ಸಮಯದಲ್ಲಿ ಅವರ ಜೊತೆಗೆ ನಿಲ್ಲಬೇಕಾಗಿದ್ದ ಮಂಗಳೂರಿನ ಅಖಿಲ ಭಾರತೀಯ ವೈದ್ಯಕೀಯ ಮಹಾಮಂಡಳಿ ಸರಕಾರದ ತುತ್ತೂರಿಯಾಗಿ ವೃತ್ತಿಧರ್ಮಕ್ಕೆ ದ್ರೋಹ ಬಗೆದಿದೆ ಎಂದರೆ ಅತಿಶಯೋಕ್ತಿಯಲ್ಲ.

‘ಕೊರೋನಕ್ಕೆ ಔಷಧಿಯಿಲ್ಲ, ಅದು ಬಂದು ಹೋಗುತ್ತದೆ’ ಎಂದು ಹೇಳುತ್ತಲೇ ಬಂದ ಕಕ್ಕಿಲ್ಲಾಯರು ಗಂಭೀರ ಸ್ಥಿತಿಯಲ್ಲಿರದ ಕೋವಿಡ್ ಪೀಡಿತರಿಗೆ ‘ಸ್ಟಿರಾಯಿಡ್’ ಮತ್ತು ‘ಆ್ಯಂಟಿಬಯೊಟಿಕ್ಸ್’ (Antibiotics) ಕೊಡಬೇಡಿ ಎಂದು ಹೇಳುತ್ತಲೇ ಬಂದರು. ಜಾಗತಿಕ ಮಟ್ಟದಲ್ಲಿ ವಿಜ್ಞಾನಿಗಳು ಇದನ್ನು ಒಪ್ಪಿದ್ದಾರೆ. ಹೀಗೆ ಹೇಳಿ ಅವರು ಸುಮ್ಮನಾಗಲಿಲ್ಲ. ತಮ್ಮ ಬಾಳ ಸಂಗಾತಿ ಡಾ.ಬಾಲಸರಸ್ವತಿ ಅವರ ಜೊತೆ ಸೇರಿ ಜನರಲ್ಲಿ ಅರಿವು ಮೂಡಿಸುವ ಅಭಿಯಾನ ನಡೆಸಿದರು. ವಿಚಾರ ಗೋಷ್ಠಿ, ವೆಬಿನಾರ್‌ಗಳಲ್ಲಿ ಮಾತಾಡಿದರು. ‘ಕೊರೋನಕ್ಕೆ ಹೆದರದಿರೋಣ’ ಎಂಬ ಪುಸ್ತಕ ಬರೆದು ನಾಡಿನ ಜನರಿಗೆ ನೀಡಿದರು. ರಾಜ್ಯ ಸರಕಾರದ ಆರೋಗ್ಯ ಇಲಾಖೆ ಮಾಡಬೇಕಾದ ಕೆಲಸವನ್ನು ಡಾ.ಕಕ್ಕಿಲ್ಲಾಯರು ಏಕಾಂಗಿಯಾಗಿ ಮಾಡಿದರು. ನ್ಯಾಯವಾಗಿ ಇದಕ್ಕಾಗಿ ಸರಕಾರ ರಾಜ್ಯೋತ್ಸವ ಪ್ರಶಸ್ತಿ ಕೊಡಬೇಕು. ಆದರೆ ಸರಕಾರ ಕೊಟ್ಟಿದ್ದೇನು? ಮಾಸ್ಕ್ ಧರಿಸಲಿಲ್ಲ ಎಂಬ ಕೇಸ್!

ಕೋವಿಡ್ ಸೋಂಕಿನಿಂದ ಕೊನೆಯುಸಿರೆಳೆಯುವ ಜನರ ಸಂಖ್ಯೆಯೂ ಸರಿಯಾಗಿ ದಾಖಲಾಗುತ್ತಿಲ್ಲ. ರಾಜಧಾನಿ ಬೆಂಗಳೂರಿನಲ್ಲೂ ನಿಜವಾದ ಅಂಕಿ ಸಂಖ್ಯೆಗಳು ಬಯಲಿಗೆ ಬರುತ್ತಿಲ್ಲ ಎಂದು ಜನ ಮಾತಾಡುತ್ತಿದ್ದಾರೆ. ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಸೂತಕದ ವಾತಾವರಣ ಉಂಟಾಗಿದೆ. ಅಲ್ಲಿ ಸಂಭವಿಸುವ ಸಾವುಗಳು ದಾಖಲಾಗುತ್ತಲೇ ಇಲ್ಲ. ಉದಾಹರಣೆಗೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನಲ್ಲಿ ಎಪ್ರಿಲ್ 1ರಿಂದ ಮೇ 16ರವರೆಗೆ 635 ಜನರು ಸಾವಿಗೀಡಾಗಿದ್ದಾರೆ. ಇದರಲ್ಲಿ ಕೋವಿಡ್‌ನಿಂದ ಸಾವಿಗೀಡಾದವರು 69ಕ್ಕೂ ಹೆಚ್ಚು ಎಂದು ಹೇಳಲಾಗುತ್ತದೆ. ಸರಕಾರದ ನಿರ್ಲಕ್ಷದಿಂದ ಆಗುವ ಸಾವುಗಳನ್ನು ಹತ್ಯೆಗಳೆಂದು ಪರಿಗಣಿಸಿ ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳಬೇಕಲ್ಲವೇ?.

ಚಾಮರಾಜನಗರದಲ್ಲಿ ಆಮ್ಲಜನಕವಿಲ್ಲದೆ 30ಕ್ಕೂ ಹೆಚ್ಚು ರೋಗಿಗಳು ಸರಕಾರಿ ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟರು. ಸರಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಹೈಕೋರ್ಟ್ ಮಧ್ಯಪ್ರವೇಶ ಮಾಡಿ, ಎಚ್ಚರಿಕೆ ನೀಡಿದ ನಂತರವೂ ಇದಕ್ಕೆ ಯಾರು ಕಾರಣ ಎಂಬುದನ್ನು ಪತ್ತೆ ಹಚ್ಚಿ, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಿಲ್ಲ. ಚಾಮರಾಜನಗರ ಮಾತ್ರವಲ್ಲ, ಆಮ್ಲಜನಕ ಇಲ್ಲದೆ ಕಲಬುರಗಿ, ಬೆಳಗಾವಿ ಮುಂತಾದ ಕಡೆ ಸಾವುಗಳು ಸಂಭವಿಸಿವೆ. ಇದಕ್ಕೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳದ ಸರಕಾರ ಮಾಸ್ಕ್ ಧರಿಸಲಿಲ್ಲ ಎಂಬ ನೆಪ ಮುಂದೆ ಮಾಡಿ ಡಾ.ಕಕ್ಕಿಲ್ಲಾಯರ ಮೇಲೆ ಕೇಸ್ ದಾಖಲಿಸಿದೆ.

ಡಾ.ಕಕ್ಕಿಲ್ಲಾಯರು ಸುಳ್ಳು ಔಷಧಿ ಬರೆದು ಔಷಧಿ ಕಂಪೆನಿಗಳ ಕಮಿಶನ್ ಮತ್ತು ಸ್ಯಾಂಪಲ್‌ಗಳನ್ನು ಬಯಸುವ ವೈದ್ಯರಲ್ಲ. ಅವರು ಹೇಳುತ್ತಿರುವುದು ಸರಳ, ಸಹಜ ಆಹಾರ ಪಥ್ಯವನ್ನು. ಇದರಲ್ಲಿ ಮಾಂಸ, ಮೊಟ್ಟೆ ಸೇರಿದ್ದು ಮನುವ್ಯಾಧಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ, ಮಾಂಸ ತಿನ್ನದವರು ಮಾಂಸ ತಿನ್ನಬೇಕೆಂದು ಕಕ್ಕಿಲ್ಲಾಯರ ಒತ್ತಾಯವಿಲ್ಲ. ಮಾಂಸ ಬೇಡವಾದವರು ಸೊಪ್ಪು, ಕಾಳುಗಳನ್ನು ತಿನ್ನಬಹುದು ಎಂದೂ ಹೇಳುತ್ತಾರೆ. ಆದರೂ ಇವರನ್ನು ಕಂಡರಾಗದವರಿಗೆ ಇದು ಕಾಣುತ್ತಿಲ್ಲ.

ಇವುಗಳನ್ನೆಲ್ಲ ಮುಚ್ಚಿ ಹಾಕಲು ಡಾ. ಕಕ್ಕಿಲ್ಲಾಯರ ಮಾಸ್ಕ್ ಪ್ರಕರಣವನ್ನು ದೊಡ್ಡದು ಮಾಡಲಾಗಿದೆ. ಇದಕ್ಕೆ ಕಾರಣ ಹಲವಾರು. ಕೋಮುವಾದದ ಪ್ರಯೋಗ ಶಾಲೆಯಾದ ಕರಾವಳಿಯಲ್ಲಿ ಡಾ.ಕಕ್ಕಿಲ್ಲಾಯರು ಬಹುದೊಡ್ಡ ಜಾತ್ಯತೀತ ಧ್ವನಿಯಾಗಿದ್ದಾರೆ. ನಿರಂತರ ವೈಚಾರಿಕ ಜಾಗೃತಿ ಮೂಡಿಸುತ್ತಿದ್ದಾರೆ. ‘ವೈಜ್ಞಾನಿಕ ಸತ್ಯಗಳನ್ನು ಹೇಳುವ ಬದಲು ದನದ ಗಂಜಲ ಮೈಗೆ ಬಳಿದುಕೊಂಡರೆ, ಗೋವಿನ ಮೂತ್ರ ಕುಡಿದರೆ ಕೊರೋನ ವಾಸಿಯಾಗುತ್ತದೆ’ ಎಂದು ಹೇಳಿದ್ದರೆ ಈಗ ಅವರನ್ನು ವಿರೋಧಿಸುತ್ತಿರುವವರೇ ಹೆಗಲ ಮೇಲೆ ಹೊತ್ತು ಮೆರೆಸುತ್ತಿದ್ದರು!

ಕಕ್ಕಿಲ್ಲಾಯರ ಮೇಲಿನ ಕೋಪಕ್ಕೆ ಇನ್ನೊಂದು ಕಾರಣ, ‘ಆರೋಗ್ಯ ಎಂಬುದು ಸೇವಾಕ್ಷೇತ್ರ’ ಎಂಬ ದೇಶ ಒಪ್ಪಿಕೊಂಡ ಪರಿಕಲ್ಪನೆಯನ್ನು ಅವರು ಪ್ರತಿಪಾದಿಸುತ್ತಾರೆ. ಆದರೆ ಇದಕ್ಕೆ ಪ್ರತಿಯಾಗಿ ‘ಹೆಲ್ತ್ ಕೇರ್ ಬಿಸಿನೆಸ್, ಹೆಲ್ತ್ ಕೇರ್ ಇಂಡಸ್ಟ್ರಿ, ಹೆಲ್ತ್ ಕೇರ್ ಟೂರಿಸಂ’ ಎಂಬ ನವ ಉದಾರೀಕರಣದ ಹೈಟೆಕ್ ಶಬ್ದಗಳ ಮೂಲಕ ಆರೋಗ್ಯ ಎಂಬ ಸೇವಾ ವಲಯ ಕಾಸು ಮಾಡಿಕೊಳ್ಳುವ ಖಾಸಗಿ ವ್ಯಾಪಾರಿ ದಂಧೆಯನ್ನಾಗಿ ಮಾಡಿಕೊಂಡವರಿಗೆ ಕಕ್ಕಿಲ್ಲಾಯರಂತಹ ವೈದ್ಯರನ್ನು ಕಂಡರೆ ಆಗುವುದಿಲ್ಲ.

ನಮ್ಮ ಸರಕಾರ ಕೂಡ ವೈದ್ಯಕೀಯ ಉದ್ಯಮಪತಿ ಡಾ.ದೇವಿ ಪ್ರಸಾದ್ ಶೆಟ್ಟಿ ಅಂತಹವರನ್ನು ಕೋವಿಡ್ ಮೂರನೇ ಅಲೆಯ ಕಾರ್ಯಪಡೆಯ ಅಧ್ಯಕ್ಷರನ್ನಾಗಿ ಮಾಡಿದೆ. ಕಕ್ಕಿಲ್ಲಾಯರು ಮಾತ್ರವಲ್ಲ, ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ತಮ್ಮನ್ನು ಅರ್ಪಿಸಿಕೊಂಡ ಡಾ.ಶಶಿಧರ ಬುಗ್ಗಿ ( ಶ್ವಾಸಕೋಶ ಪರಿಣಿತರು), ಡಾ.ಸಿ.ಎನ್.ಮಂಜುನಾಥ್ ಅಂತಹವರು ಸರಕಾರದ ಕಣ್ಣಿಗೆ ಕಾಣಲಿಲ್ಲ.

ಡಾ.ಕಕ್ಕಿಲ್ಲಾಯರು ಆ ದಿನ ಮಾಸ್ಕ್ ಧರಿಸದಿರುವ ಬಗ್ಗೆ ಕೆಲ ಪ್ರಗತಿಪರ ಗೆಳೆಯರಲ್ಲೂ ಪ್ರಶ್ನೆಗಳಿವೆ. ಒಮ್ಮೆ ಕೊರೋನದಿಂದ ಬಾಧಿತರಾಗಿ ಚೇತರಿಸಿದವರು ಮತ್ತೆ ಮಾಸ್ಕ್ ಧರಿಸಬೇಕಾಗಿಲ್ಲ ಎಂಬ ಕಕ್ಕಿಲ್ಲಾಯರ ನಿಲುವಿನ ಬಗ್ಗೆ ಭಿನ್ನಾಭಿಪ್ರಾಯವಿಲ್ಲ. ಆದರೆ, ಕೆಡವಿ ಹಾಕಲು ಕಾಯುತ್ತಿರುವ ‘ದುಷ್ಟ ಫ್ಯಾಶಿಸ್ಟ್ ಶಕ್ತಿ’ಗಳಿಗೆ ಯಾಕೆ ಅವಕಾಶ ಮಾಡಿಕೊಡಬೇಕು. ಮಾಸ್ಕ್ ಹಾಕದಿರುವುದನ್ನೇ ಅವರು ದೊಡ್ಡದು ಮಾಡುತ್ತಾರೆ ಎಂಬ ಅಭಿಪ್ರಾಯಗಳೂ ಇವೆ. ಆದರೆ, ನಾವು ಚರ್ಚಿಸಬೇಕಾದ ನಿಜವಾದ ಸಮಸ್ಯೆ ಮಾಸ್ಕ್ ಹಾಕದಿರುವ ಬಗ್ಗೆ ಅಲ್ಲ. ಕೊರೋನ ನಿಭಾಯಿಸುವಲ್ಲಿ ಸಂಪೂರ್ಣ ವಿಫಲಗೊಂಡು ತನ್ನ ನಾಯಕನ ವರ್ಚಸ್ಸನ್ನು ಉಳಿಸಿಕೊಳ್ಳಲು ಬಿಜೆಪಿ ನಡೆಸಿರುವ ಕಸರತ್ತುಗಳ ಬಗ್ಗೆ ಮಾತಾಡಬೇಕಾಗಿದೆ.

ಕೊರೋನ ನಿಭಾಯಿಸುವಲ್ಲಿ ಮೋದಿ ಸರಕಾರ ಯಾಕೆ ವಿಫಲಗೊಂಡಿತು? ಪರಿಣಿತರ ಸಲಹೆಗಳನ್ನು ಪರಿಗಣಿಸದಿರುವ ಸರಕಾರದ ಅಸಡ್ಡೆಯನ್ನು ಪ್ರತಿಭಟಿಸಿ ಕೇಂದ್ರ ಸರಕಾರದ ಕೊರೋನ ಕುರಿತ ವೈಜ್ಞಾನಿಕ ಸಲಹಾ ಸಮಿತಿ ಸದಸ್ಯ ಡಾ.ಶಹೀದ್ ಜಮೀಲ್ ಯಾಕೆ ರಾಜೀನಾಮೆ ನೀಡಿದರು? ಇಂತಹ ಗಂಭೀರ ಸನ್ನಿವೇಶದಲ್ಲಿ ಈ ಸರಕಾರ ವಿಫಲಗೊಂಡಿರುವುದರಿಂದ ಸರ್ವಪಕ್ಷಗಳ ರಾಷ್ಟ್ರೀಯ ಸರಕಾರವೊಂದು ರಚನೆಯಾಗುವುದು ಅಗತ್ಯವಾಗಿದೆ. ಈ ಬಗ್ಗೆ ದೇಶದಲ್ಲಿ ಚಿಂತನೆ ನಡೆಯಬೇಕಾಗಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top