-

ಹಿಂದುತ್ವ, ಅಹಿಂದ ಮತ್ತು ಕರ್ನಾಟಕ

-

ಒಂದು ವರ್ಷದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಈ ಸಂದರ್ಭದಲ್ಲಿ ಬಿಜೆಪಿ ಸರಕಾರದ ಬಗ್ಗೆ ಜನರು ಅಸಮಾಧಾನ ಗೊಂಡಿರುವಾಗ ಮುಖ್ಯ ಪ್ರತಿಪಕ್ಷವಾದ ಕಾಂಗ್ರೆಸ್ ಅತ್ಯಂತ ಜಾಗರೂಕತೆಯಿಂದ ಚುನಾವಣಾ ತಂತ್ರ ರೂಪಿಸಬೇಕಾಗಿದೆ. ಜನರಿಗೆ ಬೇರೆ ಪರ್ಯಾಯ ಬೇಕಾಗಿದೆ. ಬರೀ ಹಣ ಚೆಲ್ಲಿದರೆ ಗೆಲುವು ಸಾಧ್ಯವಿಲ್ಲ. ಬಿಜೆಪಿ ಬಳಿ ಎಲ್ಲರಿಗಿಂತ ಹೆಚ್ಚು ಹಣವಿದೆ. ಪ್ರಚಾರಕ್ಕೆ ಹಣ ಬೇಕು, ಆದರೆ ಅದರ ಜೊತೆಗೆ ಶುದ್ಧ ಚಾರಿತ್ರ್ಯದ ನಾಯಕತ್ವ ಬೇಕು. ಅಂಥ ನಾಯಕತ್ವಕ್ಕೆ ಜನಸಮುದಾಯಗಳ ಬೆಂಬಲವಿರುತ್ತದೆ.

ತೊಂಬತ್ತರ ದಶಕದಲ್ಲಿ ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ನೆಪದಲ್ಲಿ ಗುಜರಾತಿನ ಸೋಮನಾಥದಿಂದ ರಥಯಾತ್ರೆ ಹೊರಟ ಅಡ್ವಾಣಿ ಈಗ ಶಿಷ್ಯ ನೀಡಿದ ಗುರು ದಕ್ಷಿಣೆಯಿಂದ ವಿಶ್ರಾಂತಿಯಲ್ಲಿದ್ದಾರೆ. ಆದರೆ ಆಗ ಅವರು ಬಳಸಿದ ಅಸ್ತ್ರ ಬಿಜೆಪಿಯನ್ನು ಹಿಂದೂ ರಾಷ್ಟ್ರ ನಿರ್ಮಾಣದ ಗುರಿಯತ್ತ ತಂದು ನಿಲ್ಲಿಸಿದೆ. ಚುನಾವಣಾ ಫಲಿತಾಂಶ ಏನೇ ಆಗಿರಲಿ, ಯಾವ ರಾಜ್ಯದಲ್ಲಿ ತನ್ನ ಸರಕಾರ ತರಬೇಕೆಂಬ ಮಂತ್ರ ಒಕ್ಕೂಟ ಸರಕಾರದ ಆಡಳಿತ ಸೂತ್ರ ಹಿಡಿದ ಪಕ್ಷಕ್ಕೆ ಸಿದ್ಧಿಸಿದೆ.

ಚಾರಿತ್ರಿಕ ರೈತ ಹೋರಾಟದ ನಂತರ ಪ್ರತಿಪಕ್ಷಗಳಲ್ಲೂ ಹೊಸ ಹುರುಪು ಬಂದಿತ್ತು. ಆದರೆ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶ ಈ ಎಲ್ಲ ಲೆಕ್ಕಾಚಾರಗಳನ್ನು ತಲೆ ಕೆಳಗೆ ಮಾಡಿದೆ. ಬೀದಿ ಹೋರಾಟಗಳು ಬೇರೆ, ಚುನಾವಣಾ ರಾಜಕೀಯವೇ ಬೇರೆ ಎಂಬುದು ಸಾಬೀತಾಗಿದೆ.

ಅತ್ಯಂತ ಅಚ್ಚರಿ ಉಂಟು ಮಾಡಿದ್ದು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ನಂತರ ಇತ್ತೀಚೆಗೆ ನಡೆದ ಆ ರಾಜ್ಯದ ಎರಡು ಲೋಕಸಭಾ ಚುನಾವಣೆಯ ಫಲಿತಾಂಶ. ಅಝಂಗಡ ಮತ್ತು ರಾಮಪುರ ಈ ಎರಡೂ ಲೋಕಸಭಾ ಕ್ಷೇತ್ರಗಳು ಮುಲಾಯಂ ಸಿಂಗ್ ಯಾದವ್ ಮತ್ತು ಅವರ ಪುತ್ರ ಅಖಿಲೇಶ್ ಯಾದವ್‌ರ ಸಮಾಜವಾದಿ ಪಕ್ಷದ ಭದ್ರ ಕೋಟೆ ಎಂದು ಹೆಸರಾದ ಪ್ರತಿಷ್ಠೆಯ ಕ್ಷೇತ್ರಗಳು. ಈ ಎರಡೂ ಕ್ಷೇತ್ರಗಳಲ್ಲಿ ಶೇ.೫೦ಕ್ಕಿಂತ ಹೆಚ್ಚು ಮುಸ್ಲಿಮ್ ಮತದಾರರಿದ್ದಾರೆ. ಆದರೆ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಈ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿ ಅಚ್ಚರಿ ಮೂಡಿಸಿತು. ರಾಮಪುರ ಮತಕ್ಷೇತ್ರ ಸಮಾಜವಾದಿ ಪಕ್ಷದ ಪ್ರಭಾವಿ ನಾಯಕ ಅಝಮ್ ಖಾನ್‌ರ ಭದ್ರ ಕೋಟೆ ಇಲ್ಲಿ ಮುಲಾಯಂ ಕಾಲದಿಂದಲೂ ಮುಸ್ಲಿಮ್ ಯಾದವ ಮೈತ್ರಿ ರಾಜಕೀಯ ಯಶಸ್ವಿಯಾಗುತ್ತ ಬಂದಿದೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲೂ ಇಲ್ಲಿ ಸಮಾಜವಾದಿ ಪಕ್ಷವೇ ಆರಿಸಿ ಬಂದಿತ್ತು. ಆದರೆ ಲೋಕಸಭಾ ಚುನಾವಣೆಯಲ್ಲಿ ಇಲ್ಲಿಂದ ಗೆದ್ದಿದ್ದ ಅಖಿಲೇಶ್ ಯಾದವ್‌ರು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಯಲ್ಲಿ ಸ್ಪರ್ಧಿಸಿ ಜಯಶಾಲಿಯಾಗಿದ್ದರಿಂದ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಘನಶಾಮ್ ಸಿಂಗ್ ಲೋದಿಯವರು ಸಮಾಜವಾದಿ ಪಕ್ಷದ ಮುಹಮ್ಮದ್ ಅಸೀಮ್ ರಜಾ ಅವರನ್ನು ೪೨,೧೯೨ ಮತಗಳ ಅಂತರದಿಂದ ಸೋಲಿಸಿದರು. ಅಝಂಗಡನಲ್ಲಿ ಬಿಜೆಪಿ ಅಭ್ಯರ್ಥಿ ದಿನೇಶ್ ಲಾಲ್ ಯಾದವ್ ಅವರು ಸಮಾಜವಾದಿ ಪಕ್ಷದ ಧರ್ಮೇಂದ್ರ ಯಾದವ್‌ರನ್ನು ಸೋಲಿಸಿದರು.

ಈ ಎರಡು ಲೋಕಸಭಾ ಚುನಾವಣಾ ಫಲಿತಾಂಶಗಳನ್ನು ಗಮನದಲ್ಲಿ ಇರಿಸಿಕೊಂಡು ಉತ್ತರ ಭಾರತದ ಚುನಾವಣಾ ರಾಜಕೀಯದ ಸ್ವರೂಪ ಬದಲಾಗುತ್ತಿರುವ ಬಗ್ಗೆ ವಿಶ್ಲೇಷಣೆ ನಡೆಸಬೇಕಾಗಿದೆ. ದಕ್ಷಿಣ ಭಾರತದ ಮೇಲೆ ಇದರ ಪ್ರಭಾವ ಎಷ್ಟಾಗುತ್ತದೆ ಎಂಬುದರ ಪರಾಮರ್ಶೆ ನಡೆಸಬೇಕಾಗಿದೆ.

ಮುಲಾಯಂ ಮತ್ತು ಲಾಲು ಪ್ರಸಾದ್ ಯಾದವ್‌ರ ಅಹಿಂದ ಕೋಟೆಯ ಒಳ ಹೊಕ್ಕು ಹಿಂದುಳಿದ ವರ್ಗಗಳನ್ನು ಹಿಂದುತ್ವ ಆಪೋಶನ ಮಾಡಿಕೊಳ್ಳುತ್ತಿರುವುದು ಅಝಂಗಡ ಮತ್ತು ರಾಮಪುರ ಲೋಕಸಭಾ ಉಪಚುನಾವಣೆ ಫಲಿತಾಂಶದಿಂದ ಇನ್ನಷ್ಟು ಸ್ಪಷ್ಟವಾಗಿದೆ.ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವ ಕರ್ನಾಟಕಕ್ಕೆ ಇದು ಎಚ್ಚರಿಕೆಯ ಗಂಟೆಯಾಗಿದೆ.

ಕರ್ನಾಟಕದಲ್ಲಿ ಕಳೆದ ಎರಡು ವರ್ಷಗಳ ಬಿಜೆಪಿ ಆಡಳಿತದ ಕಹಿ ಅನುಭವವಿರುವ ಯಾರೂ ಅದನ್ನು ಇಷ್ಟಪಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಅದರಲ್ಲೂ ಪಠ್ಯಪುಸ್ತಕ ಪರಿಷ್ಕರಣೆಯ ವಿಷಯದಲ್ಲಿ ಸಂಘಪರಿವಾರದ ಬಿ.ಎಲ್. ಸಂತೋಷ್ ಆದೇಶಗಳನ್ನು ಜಾರಿಗೆ ತರಲು ಹೋಗಿ ಮಾಡಿಕೊಂಡ ಅವಾಂತರಗಳು ಸರಕಾರಕ್ಕೆ ಒಳ್ಳೆಯ ಹೆಸರನ್ನು ತರುವುದಿಲ್ಲ. ವಿವೇಕ ಇರುವ ಯಾರೂ ಈ ಅವಿವೇಕತನವನ್ನು ಸಮರ್ಥಿಸುವುದಿಲ್ಲ.

ಉತ್ತರಪ್ರದೇಶದಲ್ಲಿ ಮುಸಲ್ಮಾನರನ್ನು ಪ್ರತ್ಯೇಕಿಸಿ ಎಲ್ಲ ಮುಸ್ಲಿಮೇತರ ಸಮುದಾಯಗಳನ್ನು ಹಿಂದುತ್ವದ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಬಿಜೆಪಿ ಯಶಸ್ವಿ ಯಾಯಿತು. ಹಿಂದುಳಿದ ವರ್ಗಗಳ ನಾಯಕರ ವಿರುದ್ಧ ಇತರ ಹಿಂದುಳಿದ ವರ್ಗಗಳನ್ನು ಎತ್ತಿ ಕಟ್ಟುವ ಸೋಷಿಯಲ್ ಇಂಜಿನಿಯರಿಂಗ್ ತಂತ್ರವನ್ನು ಬಿಜೆಪಿ ಪ್ರಯೋಗಿಸಿತು. ಆದರೆ ಇದು ಕರ್ನಾಟಕದಲ್ಲಿ ಅಂದುಕೊಂಡಷ್ಟು ಸುಲಭವಲ್ಲ. ಯಡಿಯೂರಪ್ಪನವರನ್ನು ಬಿಟ್ಟರೆ ಇಲ್ಲಿ ಬಿಜೆಪಿಗೆ ನಾಯಕರೇ ಇಲ್ಲ. ಹಿಂದುಳಿದ ವರ್ಗಗಳ ಪ್ರಭಾವೀ ನಾಯಕರೂ ಅವರಿಗಿಲ್ಲ. ಹೀಗಾಗಿ ಕರ್ನಾಟಕವನ್ನು ಗೆಲ್ಲುವುದು ಅಷ್ಟು ಸುಲಭವಲ್ಲ. ಆದರೆ ಹಾಗೆಂದು ನೂರೈವತ್ತು ಸೀಟು ಗೆಲ್ಲುತ್ತೇವೆಂದು ಕಾಂಗ್ರೆಸ್‌ನವರು ಸೋಮಾರಿತನ ತೋರಿಸಿದರೆ ಅದು ಕಾಂಗ್ರೆಸ್‌ಗೆ ಮುಳುವಾಗಲಿದೆ. ಈಗಿನಿಂದಲೇ ಅದು ಕ್ರಿಯಾಶೀಲವಾದರೆ ಉತ್ತಮ ಅವಕಾಶವಿದೆ.

ಆದರೆ ಕರ್ನಾಟಕ ಉತ್ತರ ಪ್ರದೇಶವಲ್ಲ. ಇಲ್ಲಿನ ತಳ ಸಮುದಾಯಗಳು ಜಾಗೃತವಾಗಿವೆ ಎಂಬುದು ಇತ್ತೀಚೆಗೆ ನಡೆದ ಪಠ್ಯಪುಸ್ತಕ ಪರಿಷ್ಕರಣೆಯ ವಿವಾದದಿಂದ ಗೊತ್ತಾಗಿದೆ. ಬೊಮ್ಮಾಯಿ ಸರಕಾರ ಒಂದು ಹೆಜ್ಜೆ ಹಿಂದೆ ಇಟ್ಟಂತೆ ಗೋಚರಿಸಿದರೂ ಕೆಲ ಸಣ್ಣಪುಟ್ಟ ತಿದ್ದುಪಡಿಗಳೊಂದಿಗೆ ಪರಿಷ್ಕೃತ ಪಠ್ಯಪುಸ್ತಕಗಳನ್ನೇ ಅದು ಉಳಿಸಿಕೊಂಡಿದೆ. ಆದರೂ ಕರ್ನಾಟಕ ಎಂಬುದು ಬಿಜೆಪಿ ಅದರಲ್ಲೂ ಮೋದಿ, ಶಾ ಜೋಡಿಗೆ ಸುಲಭದ ತುತ್ತಲ್ಲ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಬಿಜೆಪಿ ಯವರಿಗೆ ವಿಶೇಷವಾಗಿ ಸಂಘ ಪರಿವಾರದವರಿಗೆ ಇಲ್ಲಿ  ಕಾಂಗ್ರೆಸ್‌ಗಿಂತ  ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ ಬಗೆಗಿನ ಭಯ ಎದ್ದು ಕಾಣುತ್ತದೆ. ಅಂತಲೇ ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷವನ್ನು ಟೀಕಿಸುವುದಕ್ಕಿಂತ ಹೆಚ್ಚಾಗಿ ಸಿದ್ದರಾಮಯ್ಯನವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ.

ಹೀಗಾಗಿ ಉತ್ತರ ಪ್ರದೇಶದಂತೆ ಕರ್ನಾಟಕವನ್ನು ಗೆಲ್ಲುವುದು ಸುಲಭ ವಲ್ಲ. ಯಡಿಯೂರಪ್ಪನವರಂಥ ಘಟಾನುಘಟಿ ಇದ್ದಾಗಲೂ ಬಿಜೆಪಿ ಕರ್ನಾಟಕ ವಿಧಾನಸಭೆಯ ಚುನಾವಣೆಯಲ್ಲಿ ಎಂದೂ ನಿಚ್ಚಳ ಬಹುಮತ ಗಳಿಸಿಲ್ಲ. ಅದು ಅಧಿಕಾರ ಹಿಡಿದಿದ್ದು ಆಪರೇಷನ್ ಕಮಲದ ಮೂಲಕ. ಕರ್ನಾಟಕದ ಎಲ್ಲಾ ಲಿಂಗಾಯತರು ಎಂದೂ ಬಿಜೆಪಿಗೆ ಮತ ನೀಡಿಲ್ಲ. ಲಿಂಗಾಯತರಲ್ಲಿ ಶೇ.೩೦ರಷ್ಟು ಮತಗಳು ಮಾತ್ರ ಬಿಜೆಪಿಗೆ ಹೋಗುತ್ತಿದ್ದವು. ಈ ಬಾರಿ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಬಸವಣ್ಣನವರಿಗೆ ಅಪಚಾರ ಮಾಡಿರುವುದರಿಂದ ಬಹುತೇಕ ಲಿಂಗಾಯತರು ತಿರುಗಿ ಬಿದ್ದಿದ್ದಾರೆ. ಒಕ್ಕಲಿಗರು ಕೋಪಗೊಂಡಿದ್ದಾರೆ. ಸದಾಶಿವ ಆಯೋಗದ ವರದಿ ಜಾರಿ ಮಾಡುತ್ತೇವೆಂದು ಕಿವಿಯ ಮೇಲೆ ಹೂವಿಟ್ಟ ಬಿಜೆಪಿ ವಿರುದ್ಧ ಪರಿಶಿಷ್ಟ ಜಾತಿಗಳ ಮಾದಿಗ ಸಮುದಾಯ ಕೋಮುವಾದಿಗಳಿಗೆ ಪಾಠ ಕಲಿಸಲು ಸಿದ್ಧವಾಗಿದೆ. ಜಾತಿ ಮತಗಳಾಚೆ ಬಹುತೇಕ ಕನ್ನಡಿಗರು ಹಿಂದಿ ಹೇರಲು ಹೊರಟ, ಅನುದಾನ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡಿದ ನರೇಂದ್ರ ಮೋದಿ ಸರಕಾರದ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಕರ್ನಾಟಕ ಬಿಜೆಪಿ ಪಾಲಿಗೆ ನುಂಗಲಾಗದ ತುತ್ತಾಗಿದೆ.

ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷ ಶಾಲಾ, ಕಾಲೇಜುಗಳು ಮುಚ್ಚಿದ್ದವು. ಈ ವರ್ಷ ತಡವಾಗಿ ಆರಂಭವಾದರೂ ಮಕ್ಕಳಿಗೆ ಪಠ್ಯಪುಸ್ತಕ ಗಳಿಲ್ಲ. ಬರಗೂರು ನೇತೃತ್ವದ ಪರಿಣಿತರ ಸಮಿತಿ  ಪರಿಷ್ಕರಿಸಿ ಸಿದ್ಧಪಡಿಸಿದ ಪಠ್ಯಪುಸ್ತಕಗಳು ಲಕ್ಷಾಂತರ ಸಂಖ್ಯೆಯಲ್ಲಿ ಗೋದಾಮಿನಲ್ಲಿದ್ದರೂ ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರ ಸಂತೋಷ್ ಮೂಲಕ ಕೊಡಿಸಿದ ಆದೇಶದಂತೆ ಪಠ್ಯಪುಸ್ತಕಗಳನ್ನು ಅವಿವೇಕಿಯೊಬ್ಬನಿಂದ ಪರಿಷ್ಕರಿಸಲು ಹೋಗಿ ಸರಕಾರ ಎಡವಿ ಬಿದ್ದಿದೆ. ಎಲ್ಲ ಸಮುದಾಯಗಳನ್ನು ಎದುರು ಹಾಕಿಕೊಂಡಿದೆ.ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳಲು ಹೋಗಿ ಮತ್ತೆ ಮತ್ತೆ ತಪ್ಪುಗಳನ್ನು ಮಾಡುತ್ತಲೇ ಇದೆ. ಈಗ ಪಠ್ಯಪುಸ್ತಕ ಪೂರೈಸಲಾಗದೆ ಪ್ರತೀ ಶಾಲೆಗೆ ಒಂದು ತಿದ್ದೋಲೆಯನ್ನು ಕಳಿಸಲು ಹೊರಟಿದೆ. ಇದು ತಲೆಯಲ್ಲಿ ಮೆದುಳಿಲ್ಲದ ಕೋಮು ವ್ಯಾಧಿಗಳ ಕೈಗೆ ಅಧಿಕಾರ ಸಿಕ್ಕರೆ ಏನಾಗುತ್ತದೆ ಎಂಬುದಕ್ಕೆ ಒಂದು ಉದಾಹರಣೆಯಾಗಿದೆ.

ಒಂದು ವರ್ಷದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಈ ಸಂದರ್ಭದಲ್ಲಿ ಬಿಜೆಪಿ ಸರಕಾರದ ಬಗ್ಗೆ ಜನರು ಅಸಮಾಧಾನ ಗೊಂಡಿ ರುವಾಗ ಮುಖ್ಯ ಪ್ರತಿಪಕ್ಷವಾದ ಕಾಂಗ್ರೆಸ್ ಅತ್ಯಂತ ಜಾಗರೂಕತೆಯಿಂದ ಚುನಾವಣಾ ತಂತ್ರ ರೂಪಿಸಬೇಕಾಗಿದೆ. ಜನರಿಗೆ ಬೇರೆ ಪರ್ಯಾಯ ಬೇಕಾಗಿದೆ. ಬರೀ ಹಣ ಚೆಲ್ಲಿದರೆ ಗೆಲುವು ಸಾಧ್ಯವಿಲ್ಲ. ಬಿಜೆಪಿ ಬಳಿ ಎಲ್ಲರಿಗಿಂತ ಹೆಚ್ಚು ಹಣವಿದೆ. ಪ್ರಚಾರಕ್ಕೆ ಹಣ ಬೇಕು, ಆದರೆ ಅದರ ಜೊತೆಗೆ ಶುದ್ಧ ಚಾರಿತ್ರ್ಯದ ನಾಯಕತ್ವ ಬೇಕು. ಅಂಥ ನಾಯಕತ್ವಕ್ಕೆ  ಜನಸಮುದಾಯ ಗಳ ಬೆಂಬಲವಿರುತ್ತದೆ. ಕರ್ನಾಟಕದ ಕಾಂಗ್ರೆಸ್ ಪಕ್ಷದಲ್ಲಿ ಅಂಥ ಜನಪ್ರಿಯ ನಾಯಕ ಯಾರೆಂಬುದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್‌ನಲ್ಲಿ ಇಂಥ ಅನೇಕ ಸಮರ್ಥ ನಾಯಕರಿದ್ದಾರೆ. ಅವರಲ್ಲಿ ಜನಮೆಚ್ಚುವ ಮುಖವನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋದರೆ ಕಾಂಗ್ರೆಸ್ ಪಕ್ಷಕ್ಕೆ ಗೆಲ್ಲುವ ಅವಕಾಶವಿದೆ. ಹಿಂದುತ್ವದ ಕೋಮುವಾದಿ ತಂತ್ರಕ್ಕೆ ಪ್ರತ್ಯಾಸ್ತ್ರವಾಗಿ ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ, ದಲಿತ) ಶಕ್ತಿಯನ್ನು ಕಣಕ್ಕಿಳಿಸುವುದೇ ಈಗ ಕಾಂಗ್ರೆಸ್‌ಗೆ ಉಳಿದ ದಾರಿಯಾಗಿದೆ. ಕರ್ನಾಟಕ ಉತ್ತರ ಪ್ರದೇಶವಲ್ಲ. ಉತ್ತರ ಪ್ರದೇಶದಲ್ಲಿ ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆಯವರಂಥ ನಾಯಕರು ಕಾಂಗ್ರೆಸ್‌ನಲ್ಲಿರಲಿಲ್ಲ.ಆದ್ದರಿಂದ ಕರ್ನಾಟಕ ಎಂಬ ಬಸವ, ಕನಕ, ಕುವೆಂಪು, ಟಿಪ್ಪು ಮತ್ತು ಶಿಶುನಾಳ ಶರೀಫರ ರಾಜ್ಯ ಬಿಜೆಪಿ ಪಾಲಿಗೆ ನುಂಗಲಾಗದ ತುತ್ತಾಗಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top