ಜೈನರ ಶ್ರದ್ಧಾ ಕೇಂದ್ರಗಳೂ ಅಪಾಯದಲ್ಲಿ
-

ಅನೇಕಾಂತವನ್ನು ಪ್ರತಿಪಾದಿಸುವ ಜೈನ ಧರ್ಮ ಜಗತ್ತಿನ ಅತ್ಯಂತ ಪ್ರಾಚೀನವಾದ ಪ್ರಜಾಪ್ರಭುತ್ವವಾದಿ ಧರ್ಮ. ಈ ಧರ್ಮ ಮನುಷ್ಯರ ನಡುವೆ ತಾರತಮ್ಯ ಮಾಡುವುದಿಲ್ಲ. ಇಲ್ಲಿ ಮೇಲು ಕೀಳುಗಳಿಲ್ಲ. ವರ್ಣಾಶ್ರಮ ವ್ಯವಸ್ಥೆ ಇಲ್ಲಿಲ್ಲ. ಶತಮಾನಗಳಿಂದ ವೈಷ್ಣವರು ಮತ್ತು ಶೈವರ ದಾಳಿಯಿಂದ ಜೈನ ಧರ್ಮ ಆಘಾತಕ್ಕೊಳಗಾಗಿದೆ. ಜೈನರ ಸಂಖ್ಯೆ ಅತ್ಯಂತ ಕಡಿಮೆ. ಈಗ ಜೈನರೂ ಆತಂಕದಲ್ಲಿ ಬದುಕುತ್ತಿದ್ದಾರೆ.
ಶತಮಾನಗಳಿಂದ ಅಸ್ಪ್ರಶ್ಯತೆಯ ಅನ್ಯಾಯಕ್ಕೊಳಗಾದ ಸಮುದಾಯಗಳಿಗಾಗಿ ಬಂದ ಮೀಸಲು ಸೌಕರ್ಯದ ಬುಟ್ಟಿಗೆ ಜಾತಿ ಶ್ರೇಷ್ಠತೆಯನ್ನು ಬಿಟ್ಟು ಕೊಡದ ಸಮುದಾಯಗಳು ಕೈ ಹಾಕಿರುವ ಈ ದಿನಗಳಲ್ಲಿ ಅಲ್ಪಸಂಖ್ಯಾತ ಸಮುದಾಯಗಳು ತಮ್ಮನ್ನು ಬದುಕಲು ಬಿಟ್ಟರೆ ಸಾಕೆಂದು ಭೀತಿಯ ನೆರಳಲ್ಲಿ ಬದುಕುತ್ತಿವೆ.
ಈ ಸಮುದಾಯಗಳಲ್ಲಿ ಅತ್ಯಂತ ಆತಂಕಕ್ಕೆ ಒಳಗಾಗಿರುವ ಮುಸ್ಲಿಮ್ ಸಮುದಾಯ ತನಗೆ ಬರಬೇಕಾದ ಮೀಸಲು ಪಾಲನ್ನು ಕೇಳುವುದು ಒತ್ತಟ್ಟಿಗಿರಲಿ ನಿತ್ಯವೂ ಧಗಧಗಿಸುತ್ತಿರುವ ಜನಾಂಗ ದ್ವೇಷದ ದಳ್ಳುರಿಯಿಂದ ಬಚಾವ್ ಆದರೆ ಸಾಕೆಂದು ನಿಟ್ಟುಸಿರು ಬಿಡುತ್ತಿದೆ.
ಈಗ ಸಾಮಾಜಿಕ ನ್ಯಾಯಕ್ಕಾಗಿ ತಂದ ಒಳ ಮೀಸಲಾತಿಯಲ್ಲಿ ತಮಗೂ ಪಾಲು ಬೇಕೆಂದು ಬಲಿಷ್ಠ ಜಾತಿ ಮತ್ತು ವರ್ಗಗಳು ಕೇಳುತ್ತಿರುವುದು ಹಸಿದವರ ಊಟದ ತಟ್ಟೆಗೆ ಹೊಟ್ಟೆ ತುಂಬಿದವರು ಕೈ ಹಾಕುವಂತಹ ದ್ರೋಹದ ಕೆಲಸವಲ್ಲದೇ ಬೇರೇನೂ ಅಲ್ಲ. ಎಲ್ಲರೂ ಮೀಸಲಾತಿ ಕೇಳುವ ಮೂಲಕ ಅದರ ಸಾಮಾಜಿಕ ನ್ಯಾಯದ ಪ್ರಾಮುಖ್ಯತೆ ಕ್ರಮೇಣ ನಶಿಸಿ ಮೀಸಲು ವ್ಯವಸ್ಥೆಯನ್ನೇ ಇಲ್ಲವಾಗಿಸುವರೇನೋ ಎಂಬ ಆತಂಕ ತಳ ಸಮುದಾಯಗಳಲ್ಲಿ ಇದ್ದರೆ, ಅಲ್ಪಸಂಖ್ಯಾತರು ತಮಗೆ ಯಾವ ಮೀಸಲಾತಿಯೂ ಬೇಡ ತಮ್ಮನ್ನು ಬದುಕಲು ಬಿಟ್ಟರೆ ಸಾಕೆಂದು ಬಯಸುತ್ತಿದ್ದಾರೆ.
ಅದರಲ್ಲೂ ಮುಸ್ಲಿಮರ ಪರಿಸ್ಥಿತಿ ಅತ್ಯಂತ ದಾರುಣವಾಗಿದೆ.
ಲವ್ ಜಿಹಾದ್, ಗೋ ಹತ್ಯೆ, ಜನಸಂಖ್ಯಾ ಹೆಚ್ಚಳ, ಪ್ರಾರ್ಥನಾ ಸ್ಥಳಗಳ ಮೇಲೆ ಧರ್ಮ ರಕ್ಷಕ ವೇಷದ ಗೂಂಡಾಗಳ ನಿತ್ಯದ ದಾಳಿ, ಪೊಲೀಸರಿಂದಲೂ ಸಿಗದ ರಕ್ಷಣೆ, ಈ ನಿತ್ಯದ ಸಂಕಟದ ಯಾತನೆಯಿಂದ ಈ ಸಮುದಾಯದ ಜನ ನರಳುತ್ತಿದ್ದಾರೆ.
ಮುಸಲ್ಮಾನರು ಇಬ್ಬರು ಹೆಂಡಿರನ್ನು ಕಟ್ಟಿಕೊಂಡು ಮನೆ ತುಂಬಾ ಮಕ್ಕಳನ್ನು ಹಡೆಯುತ್ತಾರೆ ಎಂಬ ತಳಬುಡವಿಲ್ಲದ ವದಂತಿ ಹರಡುವವರು ಬಹುಸಂಖ್ಯಾತ ಸಮುದಾಯದ ಅನೇಕರಲ್ಲಿ ಅನೈತಿಕ ಸಂಬಂಧ ಇಟ್ಟುಕೊಂಡು ಹಡೆಯುವ ಮಕ್ಕಳ ಬಗ್ಗೆ ಹೇಳುವುದಿಲ್ಲ.ಇನ್ನೂ ಅತ್ಯಂತ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಕ್ರೈಸ್ತರೂ ನೆಮ್ಮದಿಯಿಂದಿಲ್ಲ. ಮತಾಂತರದ ನೆಪ ಮುಂದೆ ಮಾಡಿ ಅವರ ಚರ್ಚ್ ಗಳ ಮೇಲೆ ದಾಳಿ ಮಾಡುವುದು, ಶಿಲುಬೆಯನ್ನು ಭಗ್ನಗೊಳಿಸುವುದು, ಬೈಬಲ್‌ಗೆ ಬೆಂಕಿ ಹಚ್ಚುವುದು ತಮ್ಮ ಧರ್ಮದ ರಕ್ಷಣೆಗಾಗಿ ಎಂದು ಅವಿವೇಕಿಗಳು ತಿಳಿದುಕೊಂಡಿದ್ದಾರೆ.
ಮುಸಲ್ಮಾನರ ಮಸೀದಿ, ದರ್ಗಾಗಳನ್ನು ಬಲಾತ್ಕಾರವಾಗಿ ವಶಪಡಿಸಿಕೊಳ್ಳುವ ಹುನ್ನಾರಗಳು ದೇಶದಾದ್ಯಂತ ನಡೆಯುತ್ತಿವೆ.ಅಯೋಧ್ಯೆಗೆ ಇದು ಮುಗಿಯಲಿಲ್ಲ. ಮಥುರಾ, ಕಾಶಿಗಳು ಮುಂದಿನ ಗುರಿಯಾಗಿವೆ. ಅಲ್ಲಿಗೂ ಮುಗಿಯುವುದಿಲ್ಲ. ಬಾಬಾಬುಡನ್‌ಗಿರಿ, ಶ್ರೀ ರಂಗ ಪಟ್ಟಣ ಹೀಗೆ ಮೂರು ಸಾವಿರ ಪ್ರಾರ್ಥನಾ ಸ್ಥಳಗಳ ಪಟ್ಟಿ ಮಾಡಿದ್ದಾರೆ. ಅಂದರೆ ಇನ್ನು ಸಾವಿರ ವರ್ಷವಾದರೂ ಈ ದೇಶದ ಜನ ತಮ್ಮ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ಚಿಂತಿಸದಂತೆ ಅಂಧ ಧಾರ್ಮಿಕತೆ ಮತ್ತು ಭಾವನಾತ್ಮಕ ಕಂದಕದಿಂದ ಮೇಲೇಳದಂತೆ ಮಾಡಲು ನಡೆದಿರುವ ಹುನ್ನಾರದಲ್ಲಿ ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರ ಮತ್ತು ಕಾರ್ಪೊರೇಟ್ ಲಾಬಿಗಳು ಜಂಟಿಯಾಗಿ ಯೋಜನೆಯನ್ನು ರೂಪಿಸಿವೆ.
ಇನ್ನು ಉಳಿದ ಅಲ್ಪಸಂಖ್ಯಾತ ಸಮುದಾಯಗಳೆಂದರೆ ಬೌದ್ಧ, ಜೈನ, ಸಿಖ್, ಲಿಂಗಾಯತ ಸಮುದಾಯಗಳು. ಈ ಪೈಕಿ ಸಿಖ್ಖರು ಕರ್ನಾಟಕದ ವೀರಶೈವ, ಲಿಂಗಾಯತರಂತೆ ಹಿಂದುತ್ವದ ವಂಚನೆಯ ಬಲೆಗೆ ಬಿದ್ದಿಲ್ಲ.ಅವರ ಗುರುದ್ವಾರಗಳು ಇಂದಿಗೂ ಸರ್ವಧರ್ಮ ಸೌಹಾರ್ದದ ಕೇಂದ್ರಗಳಾಗಿವೆ. ಪಂಜಾಬಿನಲ್ಲಿ ಏನೇ ಕಸರತ್ತು ಮಾಡಿದರೂ ಬಿಜೆಪಿ ಗೆದ್ದು ಅಧಿಕಾರ ಹಿಡಿಯಲು ಸಾಧ್ಯವಿಲ್ಲ. ಸಿಖ್ ಸಮುದಾಯದವರನ್ನು ಬಿಟ್ಟರೆ ಉಳಿದವರು ಜೈನ, ಬೌದ್ಧ ಸಮುದಾಯಗಳ ಜನ. ಈಗ ಕೋಮುವಾದಿಗಳು ಇವರನ್ನು ಟಾರ್ಗೆಟ್ ಮಾಡಿದ್ದಾರೆ.
ವೈದಿಕಶಾಹಿಗೆ ಎದುರಾಗಿ ನಿಂತ ಜೈನ ಮತ್ತು ಬೌದ್ಧ ಧರ್ಮಗಳ ಮೇಲೆ ಸಾವಿರಾರು ವರ್ಷಗಳಿಂದ ದಾಳಿ ನಡೆಯುತ್ತಲೇ ಇದೆ. ಅವುಗಳ ಅಸ್ತಿತ್ವವನ್ನು ಅಳಿಸಿ ಹಾಕಿ ಹಿಂದುತ್ವದ ಬುಟ್ಟಿಯಲ್ಲಿ ಹಾಕಿಕೊಳ್ಳಲು ಶತಮಾನಗಳಿಂದ ಮಸಲತ್ತು ನಡೆಯುತ್ತಲೇ ಇದೆ. ಮೊದಲು ಬಹುಸಂಖ್ಯಾತರಾಗಿದ್ದ ಜೈನರು ಮತ್ತು ಬೌದ್ಧರ ಸಂಖ್ಯೆ ಈಗ ಕುಸಿದಿದೆ. ಇಲ್ಲಿನ ಮನುವಾದಿಗಳ ಉಪಟಳ ತಾಳದೇ ವಿದೇಶಕ್ಕೆ ಹೋಗಿ ಬೆಳೆದ ಬೌದ್ಧ ಧರ್ಮ ಭಾರತದಲ್ಲಿ ಮತ್ತೆ ಚೇತರಿಸಿದ್ದು ಬಾಬಾಸಾಹೇಬ್ ಅಂಬೇಡ್ಕರ್ ಅವರು ತಮ್ಮ ಲಕ್ಷಾಂತರ ಅನುಯಾಯಿಗಳ ಜೊತೆ ಬೌದ್ಧ ಧರ್ಮ ಸೇರಿದಾಗ.
ಆದರೆ ಅನೇಕಾಂತವನ್ನು ಪ್ರತಿಪಾದಿಸುವ ಜೈನ ಧರ್ಮ ಜಗತ್ತಿನ ಅತ್ಯಂತ ಪ್ರಾಚೀನ ವಾದ ಪ್ರಜಾಪ್ರಭುತ್ವ ವಾದಿ ಧರ್ಮ. ಈ ಧರ್ಮ ಮನುಷ್ಯರ ನಡುವೆ ತಾರತಮ್ಯ ಮಾಡುವುದಿಲ್ಲ. ಇಲ್ಲಿ ಮೇಲು ಕೀಳುಗಳಿಲ್ಲ. ವರ್ಣಾಶ್ರಮ ವ್ಯವಸ್ಥೆ ಇಲ್ಲಿಲ್ಲ. ಶತಮಾನಗಳಿಂದ ವೈಷ್ಣವರು ಮತ್ತು ಶೈವರ ದಾಳಿಯಿಂದ ಜೈನ ಧರ್ಮ ಆಘಾತಕ್ಕೊಳಗಾಗಿದೆ. ಜೈನರ ಸಂಖ್ಯೆ ಅತ್ಯಂತ ಕಡಿಮೆ. ಈಗ ಜೈನರೂ ಆತಂಕದಲ್ಲಿ ಬದುಕುತ್ತಿದ್ದಾರೆ.
ಜೈನರೆಂದರೆ ಸಿರಿವಂತರು ಅವರು ಆರ್ಥಿಕವಾಗಿ ಪ್ರಬಲರು ಎಂಬ ಅಭಿಪ್ರಾಯ ಕೂಡ ಸಮಾಜದಲ್ಲಿ ಇದೆ.
ಆದರೆ, ಇದು ಸತ್ಯವಲ್ಲ. ನಗರಗಳಲ್ಲಿ ಇರುವ ಗುಜರಾತ್ ಮತ್ತು ರಾಜಸ್ಥಾನಗಳಿಂದ ಬಂದ ಮಾರವಾಡಿಗಳು ಧನವಂತರಾಗಿರಬಹುದು. ಇವರಷ್ಟೇ ಜೈನರಲ್ಲ. ಕರ್ನಾಟಕ ಸೇರಿದಂತೆ ಈ ಭಾರತದ ಹಳ್ಳಿ, ಹಳ್ಳಿಗಳಲ್ಲಿ ಆರ್ಥಿಕವಾಗಿ ಅತ್ಯಂತ ತೊಂದರೆಯಲ್ಲಿರುವ ಜೈನರಿದ್ದಾರೆ. ಸಿರಿವಂತ ಜೈನ ವ್ಯಾಪಾರಿಗಳ ಕಣ್ಣಿಗೂ ಇವರು ಕಾಣುವುದಿಲ್ಲ. ಎಷ್ಟೇ ತೊಂದರೆ ಇದ್ದರೂ ಜೈನರು ಮೀಸಲಾತಿ ಕೇಳಿಲ್ಲ. ಆದರೆ ಈ ಸಮುದಾಯದ ಆರ್ಥಿಕವಾಗಿ ಹಿಂದುಳಿದವರಿಗೆ ಸರಕಾರ ಮೀಸಲಾತಿ ನೀಡಿದೆ. ಆದರೆ ಸರಕಾರದ ಹುದ್ದೆಗಳಲ್ಲಿ, ಜೈನರ ಸಂಖ್ಯೆ ಅತ್ಯಂತ ಕಡಿಮೆ.
ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ಜೈನರ ಕೊಡುಗೆ ಸಾಕಷ್ಟಿದೆ ಎಂದು ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಅವರು ಆಗಾಗ ಹೇಳುತ್ತಿದ್ದರು. ಆದರೆ ಇಷ್ಟೆಲ್ಲಾ ಕೊಡುಗೆ ನೀಡಿದ ಜೈನಧರ್ಮೀಯರು ಚರಿತ್ರೆಯುದ್ದಕ್ಕೂ ವೈಷ್ಣವರಿಂದ, ಶೈವರಿಂದ ದಾಳಿಗೆ ಒಳಾಗಾಗಿದ್ದಾರೆ. ಸಾವಿರಾರು ಬಸದಿಗಳು ನೆಲಸಮಗೊಂಡಿವೆ. ಜೈನ ಮುನಿಗಳನ್ನು ಸಾಮೂಹಿಕವಾಗಿ ಹತ್ಯೆ ಮಾಡಿ ವಿಜಯ ಶಾಸನವನ್ನು ಕೊರೆಸಿಕೊಂಡ ನೆಲವಿದು. ಭಾರತದ ಎಲ್ಲೇ ಉತ್ಖನನ ನಡೆಯಲಿ ನೆಲದಲ್ಲಿ ದೊರೆಯುವ ಸಾವಿರಾರು ಜಿನ ಬಿಂಬಗಳು, ಶತಮಾನಗಳಿಂದ ಜೈನರ ಮೇಲೆ ನಡೆಸಲಾಗಿರುವ ದೌರ್ಜನ್ಯಕ್ಕೆ ಸಾಕ್ಷಿಯಾಗಿವೆ.
ಈಗಲೂ ಜೈನರು ಸುರಕ್ಷಿತವಾಗಿಲ್ಲ. ಈ ಧರ್ಮವನ್ನು ಮುಗಿಸಲು ಈಗಲೂ ಮಸಲತ್ತುಗಳು ನಡೆಯುತ್ತಲೇ ಇವೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಜೈನರ ಮೇಲೆ ದಾಳಿಗಳು ಹೆಚ್ಚಾಗಿವೆ.ಶತಮಾನಗಳಿಂದ ಜೈನರ ಶ್ರದ್ಧಾ ಕೇಂದ್ರವಾಗಿದ್ದ ನೇಮಿನಾಥ ತೀರ್ಥಂಕರರ ಮುಕ್ತಿ ಸ್ಥಾನವಾಗಿರುವ ಉಜ್ಜಯಂತ ಗಿರಿಯನ್ನು ದತ್ತ ಪೀಠದ ಹೆಸರಿನಲ್ಲಿ ಇತ್ತೀಚೆಗೆ ಕಿತ್ತುಕೊಳ್ಳಲಾಗಿದೆ. ಇದೊಂದೇ ಅಲ್ಲ.ಇಪ್ಪತ್ತು ತೀರ್ಥಂಕರರ ಮುಕ್ತಿಸ್ಥಾನವಾದ, ಜೈನರಿಗೆ ಅತ್ಯಂತ ಪವಿತ್ರ ಕ್ಷೇತ್ರವಾಗಿರುವ ಬಿಹಾರದ ಸಮ್ಮೇದ ಶಿಖರ್ಜಿಯನ್ನು ಕಬಳಿಸಲು ಇತ್ತೀಚೆಗೆ ಅದನ್ನು ಪ್ರವಾಸಿ ಕೇಂದ್ರವೆಂದು ಘೋಷಣೆ ಮಾಡಲಾಗಿದೆ. ಇದರ ಪರಿಣಾಮವಾಗಿ ಜೈನರ ಈ ಪವಿತ್ರ ತಾಣ ಇನ್ನು ಮುಂದೆ ಸಿರಿವಂತರ ಮೋಜು, ಮಸ್ತಿಗಳ ಕೇಂದ್ರವಾಗಲಿದೆ. ಇದಕ್ಕೆ ಪರ್ವತದ ತುದಿಯಲ್ಲಿ ಹೆಲಿಪ್ಯಾಡ್ ನಿರ್ಮಾಣವಾಗಿದೆ. ಇದರ ಜೊತೆಗೇ ಬಾರ್, ರೆಸಾರ್ಟ್, ಮಸಾಜ್ ಪಾರ್ಲರ್‌ಗಳು ಇಲ್ಲಿ ಆರಂಭವಾಗಲಿವೆ. ಅಲ್ಪಸಂಖ್ಯಾತ ಜೈನರ ಅತ್ಯಂತ ಪವಿತ್ರವಾದ ಧಾರ್ಮಿಕ ಕೇಂದ್ರ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಭೀತಿಗೆ ಒಳಗಾಗಿದೆ. ಸರಕಾರದ ಈ ಆಕ್ರಮಣಕಾರಿ ನೀತಿಯ ವಿರುದ್ಧ ಜೈನರು ಬೀದಿಗೆ ಬಂದು ಪ್ರತಿಭಟನೆ ಆರಂಭಿಸಿದ್ದಾರೆ. ಅತ್ಯಂತ ಅಲ್ಪಸಂಖ್ಯಾತರಾದ ತಾವು ಯಾವುದೇ ಪಕ್ಷದ ಓಟ್ ಬ್ಯಾಂಕ್ ಅಲ್ಲ. ಪ್ರತಿಭಟನೆ ಮಾಡಿದರೂ ಕೇಳುವವರಿಲ್ಲ ಎಂದು ಹತಾಶಗೊಂಡಿದ್ದಾರೆ.
ಅಯೋಧ್ಯೆಯ ಬಾಬರಿ ಮಸೀದಿ ಕೆಡವಿ ಮಂದಿರ ಕಟ್ಟಲು ಹೊರಟವರು ಅದಕ್ಕೆ ಚರಿತ್ರೆಯಲ್ಲಾದ ತಪ್ಪುಗಳನ್ನು ಸರಿಪಡಿಸುವ ಕ್ರಿಯೆ ಎಂದು ಸಮರ್ಥನೆ ಮಾಡುತ್ತಾರೆ. ಆದರೆ ಸಾವಿರಾರು ಬೌದ್ಧ ವಿಹಾರಗಳು, ಜೈನ ಬಸದಿಗಳು ಇವರ ದಾಳಿಗೆ ಬಲಿಯಾಗಿ ರೂಪಾಂತರ ಗೊಂಡಿವೆಯಲ್ಲ ಅವುಗಳನ್ನು ಮರಳಿ ಬೌದ್ಧರಿಗೆ, ಜೈನರಿಗೆ ಕೊಡುವರೇ?
ಪುರಿಯ ಜಗನ್ನಾಥ ದೇವಾಲಯ ತಲೆ ಎತ್ತಿದ್ದು ಬೌದ್ಧ ವಿಹಾರಗಳ ಮೇಲೆ. ಸ್ವಾಮಿ ವಿವೇಕಾನಂದರೂ ಇದನ್ನು ದೃಢೀಕರಿಸಿದ್ದಾರೆ. ಜಗನ್ನಾಥ ರಥೋತ್ಸವದ ಜಗನ್ನಾಥ, ಬಲರಾಮ ಹಾಗೂ ಸುಭದ್ರರ ಪ್ರತಿಮೆಗಳ ಮೆರವಣಿಗೆಯು ಬೌದ್ಧ ಧರ್ಮದ ಬುದ್ಧ, ದಮ್ಮ ಹಾಗೂ ಸಂಘದ ರಥೋತ್ಸವವನ್ನು ಆಧರಿಸಿದೆ ಎಂದು ಬಂಕಿಮ ಚಂದ್ರ ಚಟರ್ಜಿ ಬರೆದಿದ್ದಾರೆ. ಪಶ್ಚಿಮ ಉತ್ತರ ಪ್ರದೇಶದ ಮಥುರಾದಲ್ಲಿ ಕುಶಾನರ ಕಾಲದಲ್ಲಿ ಬುದ್ಧ ವಿಹಾರಗಳಾಗಿದ್ದವು. ಅವುಗಳನ್ನು ನಾಶ ಮಾಡಿ ಭೂತೇಶ್ವರ ಮತ್ತು ಗೋಕರ್ಣೇಶ್ವರ ದೇವಾಲಯಗಳನ್ನು ನಿರ್ಮಿಸಲಾಯಿತು. ಅಲಹಾಬಾದ್‌ನ ಸಮೀಪ ಕೌಶಾಂಬಿಯಲ್ಲಿ ಬೌದ್ಧ ಮಂದಿರವನ್ನು ಸುಟ್ಟುಹಾಕಲಾಯಿತು.
ಜೈನ, ಸಿಖ್, ಬೌದ್ಧ ಮತ್ತು ಲಿಂಗಾಯತ ಧರ್ಮಗಳನ್ನು ಹಿಂದೂ ಧರ್ಮದ ಭಾಗವೆಂದು ಹೇಳಿ ಅವುಗಳನ್ನು ನುಂಗಿ ಅವುಗಳ ಅಸ್ತಿತ್ವವನ್ನೇ ಮಾಯ ಮಾಡುವ ಆ ಮೂಲಕ ಏಕ ಧರ್ಮ, ಏಕ ಸಂಸ್ಕೃತಿ ಹೇರುವ ಷಡ್ಯಂತ್ರ ನಡೆದಿದೆ. ಆ ಷಡ್ಯಂತ್ರದ ಭಾಗವಾಗಿ ಸಮ್ಮೇದ ಶಿಖರ್ಜಿಯನ್ನು ಪ್ರವಾಸಿ ತಾಣವನ್ನಾಗಿ ಮಾಡುವ ಮಸಲತ್ತು ನಡೆದಿದೆ. ಗಿರಿನಾರನ ನೇಮಿನಾಥ ತೀರ್ಥಂಕರರ ಮುಕ್ತಿ ಸ್ಥಾನವನ್ನು ಆಕ್ರಮಿಸಿ ದತ್ತ ಪೀಠವನ್ನಾಗಿ ಮಾಡುವಲ್ಲಿ ಈ ಶಕ್ತಿಗಳ ಕೈ ಮೇಲಾಗಿದೆ.
ಇದರರ್ಥ ಮೇಲ್ನೋಟಕ್ಕೆ ಸಂಘ ಪರಿವಾರ ಮುಸ್ಲಿಮ್ ಮತ್ತು ಕ್ರೈಸ್ತ ಸಮುದಾಯಗಳ ವಿರೋಧಿ ಎಂದು ಕಂಡು ಬಂದರೂ ಅವರ ನಿಜವಾದ ಕೋಪ ಇರುವುದು ಅವೈದಿಕ ಧರ್ಮಗಳಾದ ಜೈನ, ಬೌದ್ಧ ಮೇಲೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ
ಈಗ ಸಮ್ಮೇದ ಶಿಖರ್ಜಿಯನ್ನು ಕಬಳಿಸಲು ಹೊರಟವರು ಮುಂದೆ ಉಳಿದ ಜೈನ ಮಠ ಮತ್ತು ಬಸದಿಗಳ ಮೇಲೆ ಕಣ್ಣು ಹಾಕಿದರೆ ಅಚ್ಚರಿಯಿಲ್ಲ. ಜೈನರು, ಬೌದ್ಧರು ಉಳಿದ ಹಿಂದುಳಿದ ಅಲ್ಪಸಂಖ್ಯಾತ ಮತ್ತು ಸಮಾನ ಮನಸ್ಕ ಧರ್ಮಗಳು ಮತ್ತು ಸಂಘಟನೆಗಳ ಜೊತೆ ಸೇರಿ ಪ್ರತಿರೋಧ ಒಡ್ಡುವುದೊಂದೇ ಉಳಿದ ದಾರಿಯಾಗಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.