ಭಾಗವತರ ಆಂತರಿಕ ಶತ್ರುಗಳು ಯಾರು?
-

ಒಂದು ಮನೆ, ದೇಶವನ್ನಾಗಲಿ ಬೆವರು ಬಸಿದು ಕಟ್ಟಬೇಕಾಗುತ್ತದೆ. ಮಂತ್ರ, ಪೂಜೆಗಳಿಂದ, ಅಭಿಷೇಕಗಳಿಂದಲ್ಲ. ದೇವರಲ್ಲಿ ನಂಬಿಕೆ ಬೇಡವೆಂದಲ್ಲ. ನಂಬುವವರು ನಂಬಲಿ ಅಭ್ಯಂತರವಿಲ್ಲ. ಆದರೆ, ದೇವರು ಮತ್ತು ಧರ್ಮ ಓಟಿನ ಬೆಳೆ ತೆಗೆಯುವ, ವ್ಯಾಪಾರ ಮಾಡುವ ಮಟ್ಟಿಗೆ ದುರ್ಬಳಕೆ ಆಗಬಾರದು. 'ದೇಹವೇ ದೇವಾಲಯ' ಎಂಬ ಅಣ್ಣ ಬಸವಣ್ಣನವರ ಸಂದೇಶ ಒಪ್ಪಿಕೊಂಡರೆ ಯಾವ ವೈರತ್ವ , ವೈಷಮ್ಯವೂ ಇರುವುದಿಲ್ಲ. ಭಾಗವತರೇ ನೀವು ಮತ್ತು ನಿಮ್ಮ ಸಂಘಟನೆ ಬದಲಾಗಬೇಕು. ಕೆಡವುವ ಮನಸ್ಥಿತಿಯಿಂದ ಹೊರಬಂದು ಕಟ್ಟುವ ಕೆಲಸಕ್ಕೆ ಕೈ ಗೂಡಿಸಬೇಕು.
ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತರು ಕಳೆದ ವಾರ ಸಂಘ ಪರಿವಾರದ ಮುಖವಾಣಿ 'ಆರ್ಗನೈಝರ್' ಮತ್ತು 'ಪಾಂಚ ಜನ್ಯ' ಪತ್ರಿಕೆಗಳ ಸಂಪಾದಕರಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಇಷ್ಟು ದಿನ ಬಹಿರಂಗವಾಗಿ ಹೇಳದ ತಮ್ಮ ಸಂಘಟನೆಯ ಇನ್ನೊಂದು ಕಾರ್ಯಸೂಚಿ ಪ್ರಕಟಿಸಿದ್ದಾರೆ.
ಹೊಸ ಶತ್ರುಗಳ ವಿರುದ್ಧ ಸಮರದ ಪ್ರಸ್ತಾವ ಮಾಡಿದ್ದಾರೆ. ಭಾಗವತರು ಹೇಳಿದ ಹೊಸ ಶತ್ರುಗಳು ಗಡಿಯಾಚೆಯ ಬಾಹ್ಯ ಶತ್ರುಗಳಲ್ಲ. ನಮ್ಮಾಳಗೆ ಇರುವ ಆಂತರಿಕ ಶತ್ರುಗಳ ಸಮರದ ಅಪಾಯಕಾರಿ ಸಂದೇಶವನ್ನು ನೀಡಿದ್ದಾರೆ.
ಭಾಗವತರು ಗುರುತಿಸಿರುವ ಒಳಗಿನ ಶತ್ರುಗಳು ಯಾರೆಂಬುದು ಗುಟ್ಟಿನ ಸಂಗತಿಯಲ್ಲ. ಆರೆಸ್ಸೆಸ್‌ನ ಎರಡನೇ ಸರ ಸಂಘಚಾಲಕ ಮಾಧವ ಸದಾಶಿವ ಗೋಳ್ವಲ್ಕರ್ ತಮ್ಮ 'ಬಂಚ್ ಆಫ್ ಥಾಟ್ಸ್ ' ಪುಸ್ತಕದಲ್ಲಿ ಈ ಬಗ್ಗೆ ನೇರವಾಗಿ ಉಲ್ಲೇಖಿಸಿದ್ದಾರೆ.ಗುರೂಜಿ ಎಂದೇ ಸಂಘದ ಕಾರ್ಯಕರ್ತರಿಂದ ಕರೆಯಲ್ಪಡುತ್ತಿದ್ದ ಗೋಳ್ವಲ್ಕರ್ ಪ್ರಕಾರ 'ಕಮ್ಯುನಿಸ್ಟರು, ಮುಸಲ್ಮಾನರು ಮತ್ತು ಕ್ರೈಸ್ತರು' ಸಂಘದ ಆಂತರಿಕ ಶತ್ರುಗಳಾಗಿದ್ದಾರೆ. ಇದನ್ನು ಸಂಘದ ಶಾಖೆಗಳಲ್ಲಿ ಗುಟ್ಟಾಗಿ ಓದಿ ಹೇಳಿ ತರಬೇತಿ ನೀಡಲಾಗುತ್ತಿತ್ತು.
ಅಲ್ಲಿ ತರಬೇತಿ ಪಡೆದು ಬಂದವರು ಜನಸಂಖ್ಯಾ ಹೆಚ್ಚಳ, ಲವ್ ಜಿಹಾದ್, ಮತಾಂತರ ಮುಂತಾದ ವಿವಾದಗಳು ಸೃಷ್ಟಿಸಿ ನೇರ ದಾಳಿಗೆ ಇಳಿಯುತ್ತಿರುವುದು ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಇದು ಅತಿರೇಕಕ್ಕೆ ಹೋಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಬಹಿರಂಗವಾಗಿ ಇಂಥ ದಾಳಿಗಳನ್ನು ಸಮರ್ಥಿಸಲು ಹಿಂಜರಿಯುತ್ತಿದ್ದ ಸಂಘದ ನಾಯಕರು ಒಳಗಿಂದೊಳಗೆ ಚಿತಾವಣೆ ಮಾಡುತ್ತ ಬಂದಿರುವ ಆರೋಪದಲ್ಲಿ ಸತ್ಯಾಂಶ ಇಲ್ಲದಿಲ್ಲ.ಈಗಂತೂ ಈಗಿನ ಬಾಸ್ ಭಾಗವತರೇ ಬಹಿರಂಗವಾಗಿ ಘೋಷಿಸಿರುವುದರಿಂದ ಈ ಕುರಿತ ಸಂದೇಹ ನಿವಾರಣೆಯಾದಂತಾಗಿದೆ.
ಭಾರತ ಈವರೆಗೆ ಹೆಮ್ಮೆಯಿಂದ ಹೇಳುತ್ತ ಬಂದ 'ಸರ್ವೇ ಜನಾ ಸುಖಿನೋಭವಂತು' ಬಸವಣ್ಣನವರ ' ಸಕಲ ಜೀವಾತ್ಮರಿಗೆ ಲೇಸನು ಬಯಸುವ' ಉದಾತ್ತ ವೌಲ್ಯಗಳನ್ನು ಹಳ್ಳ ಹಿಡಿಸಿ ಶೂದ್ರ ಹುಡುಗರ ಕೈಯಲ್ಲಿ ತಲವಾರು, ತ್ರಿಶೂಲ ನೀಡಿ ಸಿವಿಲ್ ವಾರ್ ಗೆ ಸಜ್ಜಾಗಿರುವ ನವ ನಾಝಿವಾದಿಗಳ ಪಡೆ ಈಗ ಸಂವಿಧಾನಕ್ಕೆ ಸವಾಲೊಡ್ಡಿದೆ.
ಭಾರತದಲ್ಲಿ ಶತಮಾನಗಳಿಂದ ವಾಸಿಸುತ್ತ ಬಂದ ಮುಸಲ್ಮಾನರು , ಕ್ರೈಸ್ತರು ಮತ್ತು ಕಳೆದ 98 ವರ್ಷಗಳಿಂದ ಕಾಣಿಸಿಕೊಂಡ ಕಮ್ಯುನಿಸ್ಟರು ಇನ್ನು ಮುಂದೆ ಉಸಿರಾಡಲೂ ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರದ ಅಪ್ಪಣೆ ಪಡೆಯಬೇಕಾಗಿ ಬಂದಿದೆ.
ಜರ್ಮನಿಯ ಹಿಟ್ಲರನಂತೆ, ಇಟಲಿಯ ಮುಸ್ಸೊಲಿನಿಯಂತೆ ಚುನಾವಣೆ ಯ ಮೂಲಕ ಅಧಿಕಾರಕ್ಕೆ ಬಂದ ಭಾಗವತರ ಭಕ್ತರೇ ಕಾನೂನು ಸುವ್ಯವಸ್ಥೆ ಯನ್ನು ಕಾಪಾಡುವ ಅಧಿಕಾರ ಹೊಂದಿರುವುದರಿಂದ ಆಂತರಿಕ ಶತ್ರುಗಳ ವಿರುದ್ಧದ ಸಮರ ಯಾವ ಸ್ವರೂಪ ತಾಳುತ್ತದೆ ಎಂಬುದನ್ನು ಈಗಲೇ ಹೇಳಲು ಆಗುವುದಿಲ್ಲ.
ಬಾಬಾಸಾಹೇಬ್ ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನದ ಪ್ರಕಾರ, ಭಾರತದ ಪ್ರಜೆಗಳೆಲ್ಲ ಸಮಾನರು. ಆದರೆ, ಆರೆಸ್ಸೆಸ್ ನ ಅಂದಿನ ಮತ್ತು ಇಂದಿನ ಗುರುಗಳಾದ ಗೋಳ್ವಲ್ಕರ್ ಮತ್ತು ಭಾಗವತರ ಪ್ರಕಾರ ಅಲ್ಪಸಂಖ್ಯಾತರು ಎರಡನೇ ದರ್ಜೆಯ ಪ್ರಜೆಗಳು ಮಾತ್ರವಲ್ಲ ಆಂತರಿಕ ಶತ್ರುಗಳು. ಈ ಸಾಲಿಗೆ ಕಮ್ಯುನಿಸ್ಟರನ್ನು ಕೂಡ ಸೇರಿಸಲಾಗಿದೆ. ಭಾಗವತರ ಪ್ರಕಾರ 'ಒಂದು ಸಾವಿರ ವರ್ಷಗಳಿಂದ ವಿದೇಶಿ ಆಕ್ರಮಣಕಾರರ ವಿರುದ್ಧ ಯುದ್ಧ ನಡೆಸಿಕೊಂಡು ಬಂದಿರುವ ಹಿಂದೂಗಳು ಈಗ ಒಳಗಿನ ವೈರಿಗಳ ವಿರುದ್ಧ ಸಮರ ನಡೆಸಬೇಕಾಗಿದೆ' ಎಂದು ಹೇಳುವ ಮೂಲಕ ಯಾದವಿ ಕಲಹದ (Civil war) ಮುನ್ಸೂಚನೆ ನೀಡಿದ್ದಾರೆ. ಬರಲಿರುವ ದಿನಗಳು ಭಾರತದ ಪಾಲಿಗೆ ಘನ ಘೋರ ಆಂತರಿಕ ಕಲಹದ ದಿನಗಳಾಗಿವೆ.
ಮುಂದೆ ಬರಬಹುದಾದ ಈ ಅಪಾಯವನ್ನು ಅಂದೇ ಗುರುತಿಸಿದ್ದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ 'ಭಾರತದಲ್ಲಿ ಬಹು ಸಂಖ್ಯಾತ ಕೋಮುವಾದ ಅತ್ಯಂತ ಅಪಾಯಕಾರಿ, ಅದು ಫ್ಯಾಶಿಸಂ ರೂಪ ತಾಳುವ ಸೂಚನೆಗಳಿವೆ' ಎಂದಿದ್ದರು.
ನೆಹರೂ ಅವರನ್ನು ಬಿಟ್ಟರೆ ಈ ಬಗ್ಗೆ ಆಗಾಗ ಎಚ್ಚರಿಸುತ್ತ ಬಂದವರು ಕಮ್ಯುನಿಸ್ಟರು. ಅದರಲ್ಲೂ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಈ ಗಂಡಾಂತರದ ಬಗ್ಗೆ ಐದಾರು ದಶಕಗಳ ಹಿಂದೆಯೇ ಹೇಳಿತ್ತು.ಈ ದೇಶ ಕಂಡ ಮಹಾನ್ ಸಂಸದೀಯ ಪಟು, ಸಿಪಿಐ ನಾಯಕ ಭೂಪೇಶ್ ಗುಪ್ತಾ ಅವರು ಕಳೆದ ಶತಮಾನದ ಎಪ್ಪತ್ತರ ದಶಕದ ಆರಂಭದಲ್ಲೇ 'ಬಲಪಂಥೀಯ ಪ್ರತಿಗಾಮಿ ಶಕ್ತಿಗಳ ಅಪಾಯ' ಎಂಬ ಪುಸ್ತಕ ಬರೆದು ಎಚ್ಚರಿಸಿದ್ದರು.
ಈ ಅಪಾಯ ಅರಿತುಕೊಂಡೆ 1974ರ ಜೆಪಿ ಚಳವಳಿಯಲ್ಲಿ ಸಿಪಿಐ ಪಾಲ್ಗೊಳ್ಳಲಿಲ್ಲ. ಜೆಪಿ ಚಳವಳಿಯೇ ಭಾಗವತರು ಈ ರೀತಿ ಬಹಿರಂಗವಾಗಿ ಬೆದರಿಕೆ ಹಾಕಲು ಅನುಕೂಲ ಮಾಡಿಕೊಟ್ಟಿತು.ಗಾಂಧಿ ಹತ್ಯೆಯ ನಂತರ ಭಾರತದ ಜನ ಸಮುದಾಯದಿಂದ ತಿರಸ್ಕರಿಸಲ್ಪಟ್ಟಿದ್ದ ನವ ನಾಝಿ ಮನುವಾದಿ ಸಂಘಟನೆ ಇಷ್ಟೊಂದು ಮಾನ್ಯತೆ ಪಡೆಯಲು ಜೆಪಿ ಚಳವಳಿಯ ಕೊಡುಗೆ ಸಾಕಷ್ಟಿದೆ.
ಸ್ವಾತಂತ್ರಾ ನಂತರ ಭಾರತದ ಪ್ರಜೆಗಳನ್ನು ಕಿತ್ತು ತಿನ್ನುತ್ತಿರುವ ಬಡತನ, ನಿರುದ್ಯೋಗ, ಹಸಿವು,ಅಪೌಷ್ಟಿಕತೆಯಿಂದ ಬಳಲುತ್ತಿರುವ ಹಸುಗೂಸುಗಳು, ತುತ್ತು ಅನ್ನಕ್ಕಾಗಿ ಮೈ ಮಾರಿಕೊಳ್ಳುವ ಸೋದರಿಯರು, ಹೆಣ್ಣು ಭ್ರೂಣ ಹತ್ಯೆ, ಅನಕ್ಷರತೆ, ಅಸ್ಪಶ್ಯತೆ ಇದಾವುದೂ ಭಾಗವತರ ಕಣ್ಣಿಗೆ ಕಾಣುವುದಿಲ್ಲ. ಮಸೀದಿ, ಚರ್ಚುಗಳನ್ನು ಕೆಡವಿ ಗುಡಿ ಗುಂಡಾರಗಳನ್ನು ನಿರ್ಮಿಸುವುದು ಅಲ್ಲೊಬ್ಬ ಪುರೋಹಿತನ ಉದ್ಧಾರ, ಮಂತ್ರ, ದಕ್ಷಿಣೆ, ಅಭಿಷೇಕ, ಅದಕ್ಕೊಂದು ದರ ಪಟ್ಟಿ. ಇವು ಅವರ ಆದ್ಯತೆಗಳು. ಇಂಥ ವ್ಯವಸ್ಥೆಯ ಮರು ಸ್ಥಾಪನೆಗಾಗಿ ಅಡ್ಡಿಯಾಗಿರುವ ಸ್ವಕಲ್ಪಿತ ಆಂತರಿಕ ಶತ್ರುಗಳ ಸಂಹಾರ ಇವರ ಅಘೋಷಿತ,ಘೋಷಿತ ಕಾರ್ಯ ಸೂಚಿಯಾಗಿದೆ.
ಲೋಕಸಭೆಯಲ್ಲಿ ಕೇವಲ ಇಬ್ಬರು ಸದಸ್ಯರನ್ನು ಹೊಂದಿದ ಬಿಜೆಪಿ ತನ್ನ ಸಂಖ್ಯಾಬಲವನ್ನು ಹೆಚ್ಚಿಸಿಕೊಂಡು ಈಗ ಕೇಂದ್ರದ ಅಧಿಕಾರ ಸೂತ್ರ ಹಿಡಿದಿದೆ. ಅಧಿಕಾರ ಭದ್ರಪಡಿಸಿಕೊಳ್ಳಲು ಸಿಬಿಐ, ಜಾರಿ ನಿರ್ದೇಶನಾಲಯ, ರಾಷ್ಟ್ರೀಯ ತನಿಖಾ ಸಂಸ್ಥೆಗಳಂಥ ಸ್ವಾಯತ್ತ ಸಂಸ್ಥೆ ಗಳನ್ನೂ ಬಳಸಿಕೊಳ್ಳುತ್ತಿದೆ. ಶಾಸಕಾಂಗ, ಕಾರ್ಯಾಂಗಗಳ ಮೇಲೆ ಹಿಡಿತ ಸಾಧಿಸಿ ಈಗ ನ್ಯಾಯಾಂಗವನ್ನು ನಿಯಂತ್ರಿಸಲು ಹೊರಟಿದೆ. ಪತ್ರಿಕಾರಂಗ ಅಂದರೆ ವಿಶಾಲಾರ್ಥದಲ್ಲಿ ಮಾಧ್ಯಮ ರಂಗವಂತೂ ಸಂಪೂರ್ಣ ಶರಣಾಗತಿಯಾಗಿದೆ. ಕಾರ್ಪೊರೇಟ್ ಲಾಬಿಯ ಜೊತೆಗಿನ ಮೈತ್ರಿ ಕೋಮುವಾದಿ ಕಾರ್ಯ ಸೂಚಿ ಜಾರಿಗೆ ತರಲು ನೆರವಾಗಿದೆ.ಹಿಂದೆ ದೇಶವನ್ನಾಳಿದ ಕಾಂಗ್ರೆಸ್ ಬಲ ಎರಡಂಕಿಗೆ ಕುಸಿದಿದೆ. ಒಂದು ಕಾಲದಲ್ಲಿ ಸಮಾನತೆಯ ಬದುಕಿನ ಭರವಸೆ ಮೂಡಿಸಿದ್ದ ಸಮಾಜವಾದಿ ಪಕ್ಷಗಳು ಕಾಂಗ್ರೆಸ್ ವಿರೋಧಿ ರಾಜಕಾರಣದಿಂದಾಗಿ ಲೋಹಿಯಾ, ಜೆಪಿಯವರ ತತ್ವಾದರ್ಶಗಳನ್ನು ಕೈ ಬಿಟ್ಟಿದೆ. ಕೇರಳವನ್ನು ಹೊರತುಪಡಿಸಿದರೆ ಕಮ್ಯುನಿಸ್ಟ್ ಪಕ್ಷಗಳ ಸ್ಥಿತಿ ಶೋಚನೀಯವಾಗಿದೆ. ತಮಿಳುನಾಡಿನ ಡಿಎಂಕೆಯನ್ನು ಬಿಟ್ಟರೆ ಪ್ರಾದೇಶಿಕ ಪಕ್ಷಗಳೂ ದುರ್ಬಲಗೊಂಡಿವೆ. ವಿರೋಧ ಪಕ್ಷವೇ ಇಲ್ಲದ ಇಂಥ ಸನ್ನಿವೇಶದಲ್ಲಿ ಭಾಗವತರು ಆಂತರಿಕ ಶತ್ರುಗಳ ದಮನದ ಮಾತನ್ನು ಆಡುತ್ತಿದ್ದಾರೆ.
ಶತಮಾನಗಳ ಇತಿಹಾಸವನ್ನು ಅವಲೋಕಿಸಿದರೆ ಭರತ ಭೂಮಿ ಎಂದು ಹೆಸರಾದ ಈ ಇಂಡಿಯಾ ವಿದೇಶಿ ಆಕ್ರಮಣಕ್ಕೆ ಬಲಿಯಾಗುತ್ತ ಬಂದಿದ್ದು ಒಳಗಿನ ಒಡಕಿನಿಂದ. ಇಲ್ಲಿನ ಜಾತಿ, ಮತ, ಮೇಲು, ಕೀಳು, ಅಸ್ಪಶ್ಯತೆ ಇವೆಲ್ಲವುಗಳ ಕಾರಣ ಒಡೆದು ಹೋದ ಜನ ಇಲ್ಲಿದ್ದಾರೆ. ಸ್ವಾತಂತ್ರ ಬರುವ ಮುಂಚೆ ಇಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇರಲಿಲ್ಲ. ಊರೂರಿಗೆ ಒಬ್ಬ ರಾಜ,ಆತನ ಕೆಳಗೆ ಪಾಳೆಯಗಾರರು, ಅವರ ಕೆಳಗೆ ಗೌಡ, ದೇಸಾಯಿ, ಕುಲಕರ್ಣಿ ಗಳು ಹೀಗಿದ್ದ ದೇಶ ಸ್ವಾತಂತ್ರ ಚಳವಳಿಯ ನಾಯಕರ ಪರಿಶ್ರಮದ ಫಲವಾಗಿ ಒಂದಾಗಿದೆ.ಒಂದಾದ ಭಾರತವನ್ನು ಒಡೆದು ಮತ್ತೆ ವಿದೇಶಿ ಆಕ್ರಮಣವನ್ನು ಆಹ್ವಾನಿಸಲು ಭಾಗವತರು ಹೊರಟಿದ್ದಾರೆಯೇ?
ಭಾಗವತರೇ ಭಾರತೀಯರೆಲ್ಲ ಅಣ್ಣ ತಮ್ಮಂದಿರು ಇಲ್ಲಿ ಆಂತರಿಕ ಶತ್ರುಗಳಾರೂ ಇಲ್ಲ.ಕಳೆದ ಎಪ್ಪತ್ತು ವರ್ಷಗಳಲ್ಲಿ ಭಾರತ ಜಗತ್ತಿನ ಪ್ರಬಲ ರಾಷ್ಟ್ರ ವಾಗಿ ಹೊರಹೊಮ್ಮಲು ಸಾಧ್ಯ ವಾಗಿದ್ದು ಭಾರತ ಒಪ್ಪಿಕೊಂಡ ಜಾತ್ಯತೀತ ಅಂದರೆ ಮತ ನಿರಪೇಕ್ಷ ವ್ಯವಸ್ಥೆ ಮತ್ತು ಬಾಬಾಸಾಹೇಬರ ಸಂವಿಧಾನ ಹಾಗೂ ಗಾಂಧೀಜಿ , ನೆಹರೂ ಅವರ ದೂರದೃಷ್ಟಿಯ ಪರಿಶ್ರಮದಿಂದ. ಅದಕ್ಕಿಂತ ಹೆಚ್ಚಾಗಿ ಎಲ್ಲಾ ಜಾತಿ ಮತಗಳ ಜನ ಒಂದಾಗಿ ಬೆವರು ಹರಿಸಿದ್ದರಿಂದ. ಒಂದು ಮನೆ, ದೇಶವನ್ನಾಗಲಿ ಬೆವರು ಬಸಿದು ಕಟ್ಟಬೇಕಾಗುತ್ತದೆ. ಮಂತ್ರ, ಪೂಜೆಗಳಿಂದ, ಅಭಿಷೇಕಗಳಿಂದಲ್ಲ. ದೇವರಲ್ಲಿ ನಂಬಿಕೆ ಬೇಡವೆಂದಲ್ಲ. ನಂಬುವವರು ನಂಬಲಿ ಅಭ್ಯಂತರವಿಲ್ಲ. ಆದರೆ, ದೇವರು ಮತ್ತು ಧರ್ಮ ಓಟಿನ ಬೆಳೆ ತೆಗೆಯುವ, ವ್ಯಾಪಾರ ಮಾಡುವ ಮಟ್ಟಿಗೆ ದುರ್ಬಳಕೆ ಆಗಬಾರದು. 'ದೇಹವೇ ದೇವಾಲಯ' ಎಂಬ ಅಣ್ಣ ಬಸವಣ್ಣನವರ ಸಂದೇಶ ಒಪ್ಪಿಕೊಂಡರೆ ಯಾವ ವೈರತ್ವ, ವೈಷಮ್ಯವೂ ಇರುವುದಿಲ್ಲ.
ಭಾಗವತರೇ ನೀವು ಮತ್ತು ನಿಮ್ಮ ಸಂಘಟನೆ ಬದಲಾಗಬೇಕು. ಕೆಡವುವ ಮನಸ್ಥಿತಿಯಿಂದ ಹೊರಬಂದು ಕಟ್ಟುವ ಕೆಲಸಕ್ಕೆ ಕೈ ಗೂಡಿಸಬೇಕು.
'ಒಳಗಿನ ವೈರಿಗಳ ವಿರುದ್ಧ ಯುದ್ಧ'ದ ನಿಮ್ಮ ಮಾತು ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿಯಾಗಿದೆ.ಇಂಥ ಒಡಕಿನ,ದ್ರೋಹದ ಮಾತುಗಳನ್ನು ಆಡಿದರೆ ಈ ನೆಲದ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ.
ಈ ಕಾನೂನು ಭಾಗವತರಿಗೂ ಅನ್ವಯವಾಗಲಿ.
ಯಾವುದೇ ಧರ್ಮ, ಸಂಘಟನೆಗಳಿಗಿಂತ ಈ ನೆಲದ ಕಾನೂನು, ಮತ್ತು ಸಂವಿಧಾನ ಅತ್ಯುನ್ನತ ವಾದುದು. ಪ್ರಜಾಪ್ರಭುತ್ವ ವೇ ಧರ್ಮ, ಸಂವಿಧಾನವೇ ಧರ್ಮಗ್ರಂಥ ಎಂಬುದನ್ನು ನೀವು ಒಪ್ಪಿಕೊಂಡರೆ ನಿಮಗೂ, ನಮಗೂ ಎಲ್ಲರಿಗೂ ಇಡೀ ದೇಶಕ್ಕೂ ಕ್ಷೇಮ. ಇನ್ನಾದರೂ ಬದಲಾಗಿ. ಈಗಿನ ಯುವಕರ ಸಮೂಹ ಸನ್ನಿ ಮತ್ತು ಉನ್ಮಾದ ಬಹಳ ಕಾಲ ಉಳಿಯುವುದಿಲ್ಲ.
ಮತಾಂಧತೆಯ ನಶೆ ಇಳಿದ ನಂತರ ಅವರೇ ಮನುಷ್ಯರಾಗಿ ನಿಮ್ಮನ್ನು ಪ್ರಶ್ನಿಸುತ್ತಾರೆ,ಉತ್ತರಿಸಲು ಸಿದ್ಧವಾಗಿರಿ
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.