-

ಸಂಸತ್ ಕಲಾಪ; ಆಗ ಮತ್ತು ಈಗ

-

ಮನಮೋಹನ್ ಸಿಂಗ್ ನೇತೃತ್ವದ ಹಿಂದಿನ ಯುಪಿಎ ಸರಕಾರದ ವಿರುದ್ಧ ಸಂಸತ್ತಿನಲ್ಲಿ ವಾಗ್ದಾಳಿ ನಡೆಸಿದರೆ, ಅದಾನಿ ಬಾನಗಡಿಗಳಿಗೆ ಸಂಬಂಧಿಸಿದಂತೆ ಬಂದ ಆರೋಪಗಳು ಸುಳ್ಳಾಗುವುದಿಲ್ಲ. ಗೌತಮ್ ಅದಾನಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ನಡುವಿನ ಗೆಳೆತನ ಜಗತ್ತಿಗೆ ಗೊತ್ತಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಆಗ ಅವರು ನಿತ್ಯ ವಿಮಾನದಲ್ಲಿ ಭಾರತದ ಎಲ್ಲೆಡೆ ಸಂಚರಿಸಿ ರಾತ್ರಿ ಅಹ್ಮದಾಬಾದ್‌ಗೆ ವಾಪಸಾಗುತ್ತಿದ್ದರು. ಈ ವಿಮಾನ ಅದಾನಿಯವರದು ಎಂಬುದು ಕೂಡ ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ.


ಸಂಸತ್ತಿನ ಉಭಯ ಸದನಗಳ ಕಲಾಪಗಳನ್ನು ಅತ್ಯಂತ ಆಸಕ್ತಿಯಿಂದ ಗಮನಿಸುವ ಅಭ್ಯಾಸ ನನಗೆ ಚಿಕ್ಕ ವಯಸ್ಸಿನಿಂದಲೂ ಇದೆ. ಸ್ವಾತಂತ್ರ್ಯ ಹೋರಾಟಗಾರರ ಮನೆತನದಲ್ಲಿ ಜನಿಸಿದ ಹಿನ್ನೆಲೆ, ಇಂಚಗೇರಿ ಮಠದ ಮುರಗೋಡ ಮಹಾದೇವರ ಒಡನಾಟದಲ್ಲಿ ಪಡೆದ ರಾಜಕೀಯ ತಿಳುವಳಿಕೆ, ಹೀಗೆ ಹಲವಾರು ಕಾರಣಗಳಿಂದ ಪತ್ರಿಕೆಗಳನ್ನು ಓದುವ ಹಸಿವು ಚಿಕ್ಕ ವಯಸ್ಸಿ ನಿಂದಲೂ ಬಂತು. ನಮ್ಮ ಮನೆಗೆ ಐವತ್ತು ವರ್ಷಗಳ ಹಿಂದೆಯೂ ಬರುತ್ತಿದ್ದ ಕನ್ನಡ ಮತ್ತು ಮರಾಠಿ ಭಾಷೆಯ ಐದಾರು ಪತ್ರಿಕೆಗಳಲ್ಲಿ ನಾನು ಓದುತ್ತಿದ್ದದ್ದು ಕನ್ನಡದ 'ಸಂಯುಕ್ತ ಕರ್ನಾಟಕ', 'ಪ್ರಜಾವಾಣಿ' ಹಾಗೂ ಆಗ ಪಾಟೀಲ ಪುಟ್ಟಪ್ಪನರು ಹುಬ್ಬಳ್ಳಿಯಿಂದ ಪ್ರಕಟಿಸುತ್ತಿದ್ದ 'ವಿಶ್ವ ವಾಣಿ' 'ಪ್ರಪಂಚ' ಹಾಗೂ ಕೆ.ಎಚ್.ಪಾಟೀಲರ 'ವಿಶಾಲ ಕರ್ನಾಟಕ'. ನಂತರ ಕಲ್ಲೆ ಶಿವೋತ್ತಮರಾಯರ 'ಜನ ಪ್ರಗತಿ' ಪತ್ರಿಕೆ.

ಆಗ ಟಿವಿ ಇರಲಿಲ್ಲ. ಪತ್ರಿಕೆಗಳೇ ಸುದ್ದಿಯ ಮೂಲ. ಅಂದಿನ ದೈನಿಕ ಪತ್ರಿಕೆಗಳಲ್ಲಿ ಬರುತ್ತಿದ್ದ ಸಂಸತ್ತಿನ ಮತ್ತು ರಾಜ್ಯ ವಿಧಾನಸಭೆಯ ಕಲಾಪಗಳನ್ನು ಅತ್ಯಂತ ಆಸಕ್ತಿಯಿಂದ ಓದುತ್ತಿದ್ದೆ. ಪಂಡಿತ ನೆಹರೂ ಪ್ರಧಾನ ಮಂತ್ರಿಯಾಗಿದ್ದಾಗ ಮತ್ತು ನಂತರ ಇಂದಿರಾ ಗಾಂಧಿಯವರು ಪ್ರಧಾನಿಯಾದಾಗಿನಿಂದ ಹಿಡಿದು ಇಂದಿನವರೆಗೆ ಸಂಸತ್ ಕಲಾಪಗಳನ್ನು ಆಸಕ್ತಿಯಿಂದ ಗಮನಿಸುತ್ತಿದ್ದೇನೆ. ಈಗ ಟಿವಿಯಲ್ಲಿ ಬರುವ ಸಂಸತ್ ಕಲಾಪಗಳನ್ನು ನೋಡುತ್ತೇನೆ. ತಂತ್ರಜ್ಞಾನದ ಆವಿಷ್ಕಾರದಿಂದ ಮನೆಯಲ್ಲೇ ಕುಳಿತು ಸಂಸತ್ ಕಲಾಪ ವೀಕ್ಷಿಸುವ ಅವಕಾಶ ದೊರಕಿದೆ. ರಾಮಕೃಷ್ಣ ಹೆಗಡೆ ಮತ್ತು ಬಂಗಾರಪ್ಪ ಹಾಗೂ ಜೆ.ಎಚ್. ಪಟೇಲರು ಮುಖ್ಯಮಂತ್ರಿಗಳಾಗಿದ್ದಾಗ ನಾನು ಸಂಯುಕ್ತ ಕರ್ನಾಟಕದ ಪ್ರತಿನಿಧಿಯಾಗಿ ವಿಧಾನ ಸಭೆ ಮತ್ತು ವಿಧಾನ ಪರಿಷತ್ ಕಲಾಪಗಳನ್ನು ವರದಿ ಮಾಡಿದ್ದೇನೆ.ಈ ಅನುಭವದಿಂದ ಹೇಳುವುದಾದರೆ ನಮ್ಮ ಶಾಸನ ಸಭೆಗಳ ಅಂದಿನ ಗುಣಮಟ್ಟ ಈಗ ಉಳಿದಿಲ್ಲ. ಅಷ್ಟೇ ಅಲ್ಲ, ಇಂದಿನ ಕಲಾಪಗಳು ಅಸಹ್ಯ ಎನಿಸುವಷ್ಟು ಮಟ್ಟಿಗೆ ಹದಗೆಟ್ಟಿವೆ. ಇದು ಭಾರತದ ಸಂಸದೀಯ ಜನತಂತ್ರದ ದುರಂತ.

ಸಂಸತ್ತಿನ ಗುಣಮಟ್ಟ ಹದಗೆಡುತ್ತಿರುವ ಬಗ್ಗೆ ಬಹಳ ಹಿಂದೆ ಹೋಗಬೇಕಿಲ್ಲ. ಈಗ ನಡೆಯುತ್ತಿರುವ ಸಂಸತ್ತಿನ ಅಧಿವೇಶನದಲ್ಲಿ ಪ್ರತಿಪಕ್ಷ ಸದಸ್ಯರು ಅದಾನಿ ಹಗರಣದ ಬಗ್ಗೆ ಪ್ರಸ್ತಾಪಿಸಿದರು. ಅದಾನಿ ಜೊತೆ ಪ್ರಧಾನಿ ಮೋದಿಯವರು ಹೊಂದಿರುವ ಸಂಬಂಧದ ಬಗ್ಗೆ ನೇರವಾಗಿ ಆರೋಪಿಸಿದರು.ಈ ಆರೋಪ ಸುಳ್ಳಾಗಿದ್ದರೆ ಪ್ರಧಾನಿ ಮೋದಿಯವರು ಆರೋಪವನ್ನು ಸಾಬೀತುಪಡಿಸಲು ಸವಾಲು ಹಾಕಬೇಕಿತ್ತು. ಅದನ್ನು ಬಿಟ್ಟು ವಿಷಯಾಂತರ ಮಾಡಲು ಯತ್ನಿಸಿದರು. ವಿಷಯಕ್ಕೆ ಸಂಬಂಧವೇ ಇಲ್ಲದ 2004-2014ರ ಅವಧಿಯ ಭ್ರಷ್ಟಾಚಾರದ ಬಗ್ಗೆ ರೈಲು ಬಿಟ್ಟರು.ಆಗ ಪ್ರತಿಪಕ್ಷಗಳು, ಅಂಬಾನಿ ಮತ್ತು ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರದ ಕುಮ್ಮಕ್ಕಿನಿಂದ ಹುಯಿಲೆಬ್ಬಿಸಿ ಮನಮೋಹನ ಸಿಂಗ್ ಸರಕಾರವನ್ನು ಕೆಡವಿದ 2ಜಿ ಹಗರಣದ ಆರೋಪ ದಲ್ಲಿ ಸುಪ್ರೀಂ ಕೋರ್ಟ್ ಸುದೀರ್ಘ ವಿಚಾರಣೆ ನಡೆಸಿ ಯಾರೂ ತಪ್ಪಿತಸ್ಥರಲ್ಲ ಎಂದು ತೀರ್ಪು ನೀಡಿತು.ಈ ತೀರ್ಪಿನ ಬಗೆಗೆ ವ್ಯತಿರಿಕ್ತವಾಗಿ ಪ್ರಧಾನಿ ತನ್ನ ಮುಖಕ್ಕೆ ಹತ್ತಿದ ಮಸಿಯನ್ನು ಪ್ರತಿಪಕ್ಷ ಗಳ ಮುಖಕ್ಕೆ ಹಚ್ಚಲು ಹೋಗಿ ಅಪಹಾಸ್ಯಕ್ಕೀಡಾದರು. ಅವರ ಜಾರಿಕೆಯ ಹಾರಿಕೆಯ ಮಾತು ಇಷ್ಟಕ್ಕೆ ಸೀಮಿತವಾಗಲಿಲ್ಲ.ಅನವಶ್ಯಕವಾಗಿ 'ನೆಹರೂ ವಂಶಸ್ಥರು ಅವರ ಉಪನಾಮವನ್ನು ಯಾಕೆ ಬಳಸುವುದಿಲ್ಲ' ಎಂದು ಹರಿಹಾಯ್ದರು.ಇದು ಭಾರತದಂಥ ದೇಶವೊಂದರ ಪ್ರಧಾನಿಯ ಉತ್ತರ.

ನೆಹರೂ ಪ್ರಧಾನಿಯಾಗಿದ್ದಾಗ ನಾನಿನ್ನೂ ಚಿಕ್ಕವ.ಅವರ ಬಗ್ಗೆ ಕೇಳಿ ಗೊತ್ತು. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಪತ್ರಿಕೆಗಳನ್ನು ಓದುತ್ತಿದ್ದೆ.ಆಗ ಸಂಸತ್ತಿನ ಉಭಯ ಸದನಗಳಲ್ಲಿ ಸೋಷಲಿಸ್ಟ್ ನಾಯಕ ರಾದ ರಾಮ ಮನೋಹರ ಲೋಹಿಯಾ, ಎಸ್.ಎಂ.ಜೋಶಿ, ಮಧು ಲಿಮಯೆ, ನಾಥ್ ಪೈ, ಅಶೋಕ ಮೆಹತಾ, ಜಾರ್ಜ್ ಫೆರ್ನಾಂಡಿಸ್, ಕಮ್ಯುನಿಸ್ಟ್ ಪಕ್ಷದ ನೇತಾರರಾದ ಎಸ್.ಎ. ಡಾಂಗೆ, ಎ.ಕೆ.ಗೋಪಾಲನ್, ಭೂಪೇಶ ಗುಪ್ತಾ, ಪ್ರೊ.ಹಿರೇನ್ ಮುಖರ್ಜಿ, ರೇಣು ಚಕ್ರವರ್ತಿ, ಸ್ವತಂತ್ರ ಪಕ್ಷದ ಎನ್.ಜಿ.ರಂಗಾ,ಮೀನೂ ಮಸಾನಿ,ಪೀಲೂ ಮೋದಿ,ಜನಸಂಘದ ಅಟಲ್ ಬಿಹಾರಿ ವಾಜಪೇಯಿ ಮೊದಲಾದ ಘಟಾನು ಘಟಿಗಳಿದ್ದರು. ಪತ್ರಿಕೆಗಳಲ್ಲಿ ಬರುತ್ತಿದ್ದ ಅವರ ಭಾಷಣ ಮತ್ತು ನೆಹರೂ , ಇಂದಿರಾಗಾಂಧಿ ಅವರು ಪ್ರತಿಪಕ್ಷ ಗಳಿಗೆ ನೀಡುತ್ತಿದ್ದ ಉತ್ತರಗಳನ್ನು ಓದಿ,ಕೇಳಿ ಬೆಳೆದವರು ನಾವು.ಆಗ ಈಗಿನಂತೆ ಯಾರೂ ಅಸಹ್ಯವಾಗಿ ವಯಕ್ತಿಕ ನಿಂದನೆ ಮಾಡುತ್ತಿರಲಿಲ್ಲ. ಅಧಿಕಾರದಲ್ಲಿ ಇರುವವರು ಜಾರಿಕೊಳ್ಳುವ ಸುಳ್ಳು ಉತ್ತರ ಹೇಳಿ, ತಮ್ಮ ಸದಸ್ಯರಿಂದ ಗಲಾಟೆ ಮಾಡಿಸಿ ಪ್ರತಿಪಕ್ಷ ಸದಸ್ಯರ ಬಾಯಿ ಮುಚ್ಚಿಸುತ್ತಿರಲಿಲ್ಲ.

ಕಮ್ಯುನಿಸ್ಟ್ ನಾಯಕ ಭೂಪೇಶ್ ಗುಪ್ತಾ ಮಾತನಾಡುತ್ತಾರೆ ಅಂದರೆ ಆ ದಿನ ಕಲಾಪವನ್ನು ಪ್ರಧಾನಿ ನೆಹರೂ ತಪ್ಪಿಸಿಕೊಳ್ಳುತ್ತಿರಲಿಲ್ಲ.ಪುಟ್ಟ ಡೈರಿ ಹಿಡಿದುಕೊಂಡು ಬಂದು ಗುಪ್ತಾ ಮಾತುಗಳನ್ನು ಡೈರಿಯಲ್ಲಿ ಬರೆದುಕೊಂಡು ಸಮರ್ಪಕ ಉತ್ತರ ನೀಡುತ್ತಿದ್ದರು. ಈ ಪರಂಪರೆ ಮನಮೋಹನ ಸಿಂಗ್ ರ ವರೆಗೂ ಮುಂದುವರಿಯಿತು.ನಮ್ಮ ದೇವೇಗೌಡರು ಪ್ರಧಾನಿಯಾಗಿದ್ದಾಗಲೂ ಅತ್ಯಂತ ಗೌರವಾನ್ವಿತವಾಗಿ ಕಲಾಪದಲ್ಲಿ ಪಾಲ್ಗೊಂಡು ಸಮಾಧಾನಕರ ಉತ್ತರ ನೀಡುತ್ತಿದ್ದರು.ಇಂಥ ಸತ್ಪರಂಪರೆಯ ನಮ್ಮ ಸಂಸತ್ತಿನ ಗುಣಮಟ್ಟ ಕೆಡತೊಡಗಿದ್ದು 2014 ರಿಂದ ಈಚೆಗೆ ಎಂದರೆ ತಪ್ಪಿಲ್ಲ.

ಅದಾನಿ ಸಮೂಹದ ಉದ್ದಿಮೆಗಳ ಬಗ್ಗೆ ಅಮೆರಿಕದ ಹೂಡಿಕೆ ಮತ್ತು ಸಂಶೋಧನಾ ಸಂಸ್ಥೆ ಹಿಂಡನ್‌ಬರ್ಗ್ ವರದಿ ಹೊರ ಬಿದ್ದ ನಂತರ ಕುಸಿದ ಅದಾನಿಶೇರು ವೌಲ್ಯ,ಜೀವ ವಿಮೆ ಮತ್ತು ಎಸ್.ಬಿ.ಐ.ಗೆ ಅದಾನಿ ಹಾಕಿದ ಪಂಗನಾಮ, ಅದಾನಿ ಜೊತೆಗೆ ಪ್ರಧಾನಿ ಮೋದಿಯವರು ಹೊಂದಿರುವ ಸಂಶಯಾಸ್ಪದ ಸಂಬಂಧ, ರಾಜಕೀಯ ವಿರೋಧಿಗಳ ಮೇಲೆ ಎರಗುವ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಗಳು,ಅದಾನಿ ದೋಚಿದ ಭಯಾನಕ ಹಗರಣದಲ್ಲಿ ವೌನ ತಾಳಿರುವುದು. ದೇಶದ ವಿಮಾನ ನಿಲ್ದಾಣ, ಬಂದರುಗಳನ್ನು ಅದಾನಿ ಲಪಟಾಯಿಸಿದ ರೀತಿ ಇವೆಲ್ಲವುಗಳಿಗೆ ಉತ್ತರ ನೀಡಬೇಕಾದ ಸರಕಾರದ ವೌನ ಸಹಜವಾಗಿ ಆತಂಕವನ್ನು ಮೂಡಿಸಿದೆ.

ಹತ್ತು ವರ್ಷಗಳ ಹಿಂದಿನ ಭ್ರಷ್ಟಾಚಾರದ ಬಗ್ಗೆ ಸುಳ್ಳಿನ ಸುರಿಮಳೆ ಸುರಿಸುವವರು ಅದಾನಿ ಉದ್ಯಮ ಸಮೂಹ ಮತ್ತು ಅದಕ್ಕೆ ಸಂಬಂಧಿಸಿದ ಸಂಸ್ಥೆಗಳಿಂದ ಹಾಗೂ ವ್ಯಕ್ತಿಗಳಿಂದ ಚುನಾವಣಾ ಬಾಂಡ್ ಮೂಲಕ ಬಿಜೆಪಿಗೆ ಎಷ್ಟು ಹಣ ಬಂದಿದೆ ಎಂಬುದನ್ನು ಬಹಿರಂಗಪಡಿಸುವರೇ? ಅದಾನಿ ಪ್ರಕರಣದ ಬಗ್ಗೆ ಗಂಭೀರ ಆರೋಪಗಳು ಬಂದಾಗ ಸರಕಾರದ ಪ್ರತಿನಿಧಿಗಳು ಜಾರಿಕೊಳ್ಳುವ ರೀತಿಯ ಸಂಕ್ಷಿಪ್ತ ಹೇಳಿಕೆಯನ್ನು ಮಾತ್ರ ಏಕೆ ಕೊಡುತ್ತಾರೆ? ಇಂಥ ವಿಷಯದ ಬಗ್ಗೆ ಸಂಸತ್ತಿನಲ್ಲಿ ಚರ್ಚೆಗೆ ಸರಕಾರ ಯಾಕೆ ತಯಾರಿಲ್ಲ? ಸ್ವತಂತ್ರ ತನಿಖೆಯನ್ನು ಯಾಕೆ ನಿರಾಕರಿಸುತ್ತಿದೆ. ತನಿಖೆಯ ಬದಲಿಗೆ ಹಿಂಡನ್ ಬರ್ಗ್ ಸಂಸ್ಥೆಯನ್ನು ಹಿಯಾಳಿಸು ತ್ತಿರುವ ಹಿಂದಿನ ಷಡ್ಯಂತ್ರದ ಉದ್ದೇಶವೇನು,ಈ ಪ್ರಶ್ನೆಗಳಿಗೆ ಉತ್ತರ ಬೇಕಾಗಿದೆ.

ಸಾರ್ವಜನಿಕ ಒಡೆತನಕ್ಕೆ ಸೇರಿದ ಸ್ವತ್ತುಗಳನ್ನು ಪರಭಾರೆ ಮಾಡುವುದಕ್ಕಾಗಿ ನಡೆದ ಟೆಂಡರ್ ವ್ಯವಹಾರದಲ್ಲಿ ಅದಾನಿ ಸಮೂಹಕ್ಕೆ ಅನುಕೂಲ, ಅದಾನಿ ಸಂಪತ್ತು ಒಮ್ಮಿಂದೊಮ್ಮೆಲೆ ನೂರಾರು ಪಟ್ಟು ಜಾಸ್ತಿಯಾಗಿರುವುದು ಸಂಶಯಕ್ಕೆ ಕಾರಣವಾಗಿದೆ. ಇದರ ಮೇಲೆ ಕಣ್ಣಿಡಬೇಕಾದ ತನಿಖಾ ಸಂಸ್ಥೆಗಳು ಅದಾನಿ ಬಗ್ಗೆ ರಿಯಾಯಿತಿ ಯನ್ನು ತೋರಿಸಿವೆ ಎಂಬುದು ಬರೀ ಆರೋಪವಲ್ಲ.ಅದಾನಿಯ ಈ ದಿಢೀರ ಸಂಪತ್ತಿನ ಬೆಳವಣಿಗೆಯ ಹಿಂದೆ ಪ್ರಧಾನಿ ಮೋದಿಯವರ ಅಚಲವಾದ ಬೆಂಬಲವಿದೆ ಎಂಬ ಸಂದೇಹ ಜನರಲ್ಲಿ ಮೂಡಿದೆ.ಈ ಪ್ರಶ್ನೆಗೆ ಉತ್ತರ ನೀಡಬೇಕಾದ ಮೋದಿಯವರು ವಿರೋಧ ಪಕ್ಷಗಳ ಮೇಲೆ ಕೆಸರೆರಚುವುದು, ಲೇವಡಿ ಮಾಡುವುದು ಪಲಾಯನವಾದ ಆಗುತ್ತದೆ. ಅದು ಅವರ ಸ್ಥಾನದ ಘನತೆಗೆ ಶೋಭೆ ತರುವುದಿಲ್ಲ.

ಪ್ರಜಾಪ್ರಭುತ್ವದಲ್ಲಿ ಸಂಸತ್ತು ಇರುವುದು ಜನರಿಗೆ ಮತ್ತು ದೇಶಕ್ಕೆ ಸಂಬಂಧಿಸಿದ ಮಹತ್ವದ ವಿಷಯಗಳ ಕುರಿತ ಚರ್ಚೆಗಾಗಿ. ಇಡೀ ದೇಶವನ್ನು ಆತಂಕಕ್ಕೀಡು ಮಾಡಿರುವ ಇಂಥ ಮಹತ್ವದ ವಿಷಯದ ಬಗ್ಗೆ ಪ್ರಸ್ತಾಪಿಸುವುದು ಪ್ರತಿಪಕ್ಷಗಳ ಸಹಜ ಕರ್ತವ್ಯ. ಒಂದು ವೇಳೆ ಸರಕಾರದಿಂದ ಕರ್ತವ್ಯ ಲೋಪವಾಗಿದ್ದರೆ ಸರಕಾರದಲ್ಲಿ ಇರುವವರು ತಮ್ಮ ಮೇಲಿನ ಆರೋಪಗಳಿಗೆ ಪುರಾವೆ ಸಹಿತ ಉತ್ತರ ನೀಡಬೇಕು. ಅದರ ಬದಲಾಗಿ ಪ್ರಧಾನಿ ಸ್ಥಾನದಲ್ಲಿ ಇರುವ ವ್ಯಕ್ತಿ ರಾಜ್ಯಸಭೆಯ ಪ್ರತಿಪಕ್ಷ ನಾಯಕರಿಗೆ ಖರ್ಗೆಯವರೇ ಕಲಬುರಗಿ ಯಲ್ಲಿ ನಿಮ್ಮ ಖಾತೆ ಕ್ಲೋಸ್ ಆಗಿದೆ ಎಂದು ಲೇವಡಿ ಮಾಡುವುದು ಪಲಾಯನವಾದ ಅಲ್ಲದೇ ಬೇರೇನೂ ಅಲ್ಲ. ಅದಾನಿ ಉದ್ದಿಮೆ ಸಮೂಹದ ವಹಿವಾಟು,ರಾಜಕೀಯ ನಂಟು ಮತ್ತು ಪ್ರಧಾನಿ ಜೊತೆಗೆನ ಒಡನಾಟದಂಥ ಆರೋಪಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯಾಗಬಾರದು. ಪ್ರಧಾನಿ ಸ್ಥಾನದಲ್ಲಿ ಇರುವವರು ಪ್ರಶ್ನಾತೀತರು ಎಂದು ಹೇಳಿ ಚರ್ಚೆಗೆ ಅವಕಾಶ ನಿರಾಕರಿಸುವುದು ಸಂಸತ್ತಿಗೆ ಮಾಡಿದ ಅಪಚಾರವಲ್ಲದೇ ಮತ್ತೇನು?

ಮನಮೋಹನ್ ಸಿಂಗ್ ನೇತೃತ್ವದ ಹಿಂದಿನ ಯುಪಿಎ ಸರಕಾರದ ವಿರುದ್ಧ ಸಂಸತ್ತಿನಲ್ಲಿ ವಾಗ್ದಾಳಿ ನಡೆಸಿದರೆ, ಅದಾನಿ ಬಾನಗಡಿಗಳಿಗೆ ಸಂಬಂಧಿಸಿದಂತೆ ಬಂದ ಆರೋಪಗಳು ಸುಳ್ಳಾಗುವುದಿಲ್ಲ. ಗೌತಮ್ ಅದಾನಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ನಡುವಿನ ಗೆಳೆತನ ಜಗತ್ತಿಗೆ ಗೊತ್ತಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಮೋದಿಯವರು ಗುಜರಾತ್ ಮುಖ್ಯ ಮಂತ್ರಿಯಾಗಿದ್ದರು. ಆಗ ಅವರು ನಿತ್ಯ ವಿಮಾನದಲ್ಲಿ ಭಾರತದ ಎಲ್ಲೆಡೆ ಸಂಚರಿಸಿ ರಾತ್ರಿ ಅಹ್ಮದಾಬಾದ್‌ಗೆ ವಾಪಸಾಗುತ್ತಿದ್ದರು. ಈ ವಿಮಾನ ಅದಾನಿಯವರದು ಎಂಬುದು ಕೂಡ ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ಪ್ರತಿಪಕ್ಷ ಗಳು ಮಾತ್ರವಲ್ಲ ಸಾರ್ವಜನಿಕರೂ ಈ ಬಗ್ಗೆ ಮಾತನಾಡುತ್ತಿದ್ದಾರೆ. ಈ ಬಗ್ಗೆ ಸಂಸತ್ತಿನಲ್ಲಿ ಪ್ರತಿಪಕ್ಷ ಗಳು ಪ್ರಸ್ತಾಪಿಸಿದರೆ ನಿಮ್ಮ ಕಾಲದಲ್ಲಿ ಹಾಗೆ ಆಗಿಲ್ಲವೇ ಎಂದು ನುಣುಚಿಕೊಳ್ಳುವುದು ಸರಿಯಲ್ಲ. ಈ ರೀತಿ ನುಣುಚಿಕೊಳ್ಳುವುದು ಭಿನ್ನ ಪಕ್ಷವೆಂದು ಹೇಳಿಕೊಳ್ಳುವ ಬಿಜೆಪಿಯ ಚಾಳಿಯಾಗಿದೆ. ಕರ್ನಾಟಕದಲ್ಲಿ ಕೂಡ ನಲವತ್ತು ಪರ್ಸೆಂಟ್ ಕಮಿಶನ್ ಹಗರಣ, ಪಿ.ಎಸ್ಸೈ ನೇಮಕಾತಿ ಪ್ರಕರಣ ಬಯಲಿಗೆ ಬಂದ ನಂತರ ಹಿಂದಿನ ಮುಖ್ಯಮಂತ್ರಿ ಸಿದ್ದ್ಧರಾಮಯ್ಯನವರ ಕಾಲದ ಹಗರಣಗಳನ್ನು ಲೋಕಾಯುಕ್ತ ತನಿಖೆಗೆ ಕೊಡುವುದಾಗಿ ಮುಖ್ಯ ಮಂತ್ರಿಗಳು ಬೆದರಿಕೆ ಹಾಕಿದರು. ಕಳೆದ ಮೂರುವರೆ ವರ್ಷಗಳಿಂದ ರಾಜ್ಯದಲ್ಲಿ ಬಿಜೆಪಿ ಸರಕಾರವಿದೆ. ಸಿದ್ದರಾಮಯ್ಯನವರ ಮೇಲೆ ಆರೋಪಗಳಿದ್ದರೆ ಮೊದಲೇ ಲೋಕಾಯುಕ್ತಕ್ಕೆ ಕೊಡಬೇಕಾಗಿತ್ತು. ತನಿಖೆ ನಡೆಸಬೇಕಾಗಿತ್ತು. ಈಗ ಚುನಾವಣೆ ಅರವತ್ತು ದಿನಗಳಿರುವಾಗ ಇಂಥ ಪೊಳ್ಳು ಬೆದರಿಕೆಗಳೇಕೆ?

ಅದಾನಿ ಬಾನಗಡಿಗಳ ಬಗ್ಗೆ ಸಂಸತ್ತಿನಲ್ಲಿ ಪ್ರಶ್ನಿಸಿದರೆ, ಉತ್ತರಿಸಬೇಕಾದವರು ಹತ್ತು ವರ್ಷಗಳ ಹಿಂದಿನ 2004-2014ರ ಕಾಲಾವಧಿಯ ಭ್ರಷ್ಟಾಚಾರದ ಬಗ್ಗೆ ಮಾತಾಡುತ್ತಾರೆ.ಮಾಧ್ಯಮಗಳಲ್ಲಿ ಅದೇ ಹೈಲೈಟ್, ಬಹುತೇಕ ಜನರೂ ಈ ಉತ್ತರ ನೋಡಿ ಸಂಭ್ರಮಿಸುತ್ತಾರೆ. ಇದನ್ನು ಜಾಲತಾಣದಲ್ಲಾದರೂ ಪ್ರಶ್ನಿಸಬೇಕಾದ ಕೆಲ ಪ್ರಗತಿಪರ ಸಿದ್ಧಾಂತ ನಿಷ್ಟ ಸ್ನೇಹಿತರು ಅಧಿಕಾರದಲ್ಲಿಲ್ಲದ ರಾಹುಲ್ ಗಾಂಧಿಯ ಭಾರತ ಜೋಡೊ ಯಾತ್ರೆಯನ್ನು ಕಟು ಶಬ್ದಗಳಲ್ಲಿ ಟೀಕಿಸುತ್ತ, ಪರೋಕ್ಷವಾಗಿ ಇಂದಿನ ಫ್ಯಾಶಿಸ್ಟ್ ಪ್ರಭುತ್ವಕ್ಕೆ ರಕ್ಷಣೆ ನೀಡುತ್ತಾರೆ. ನವ ಉದಾರವಾದಿ ಆರ್ಥಿಕತೆಯ ಪುರಾಣ ಬಿಚ್ಚುತ್ತಾರೆ. ಜನಸಮೂಹವೇ ಜನಾಂಗ ದ್ವೇಷದ ವ್ಯಾಧಿಗೊಳಗಾದ ಈ ಸನ್ನಿವೇಶದಲ್ಲಿ ಭಾರತ ಜೋಡೊ ಟೀಕೆ ಪರೋಕ್ಷವಾಗಿ ಕೋಮುವಾದಿ ಪರಿವಾರಕ್ಕೆ ಸಹಾಯಕ.ಇದು ಭಾರತದ ಇಂದಿನ ದುರಂತ.ಇನ್ನೊಬ್ಬ ಗಾಂಧೀಜಿ, ಇನ್ನೊಬ್ಬ ಬಾಬಾ ಸಾಹೇಬರಿಗಾಗಿ ( ಇನ್ನೊಬ್ಬ ಜೆಪಿಗಾಗಿ ಅಲ್ಲ) ಈ ನೆಲ ಕಾಯುತ್ತಿದೆ. ಭಾಗವತರ ತಂತ್ರಗಳ ಮುಂದೆ ಜನತಂತ್ರ ಅತಂತ್ರವಾಗಿದೆ. ಸಂಸತ್ತು ಅಧಿಕಾರದಲ್ಲಿರುವವರ ಅಡಗುತಾಣವಾಗಿದೆ.ನ್ಯಾಯಾಂಗದ ತಲೆ ಮೇಲೆ ಕತ್ತಿ ತೂಗಾಡುತ್ತಿದೆ. ಬೆಲೆ ಏರಿಕೆ, ನಿರುದ್ಯೋಗ, ರಾಷ್ಟ್ರದ ಸಂಪತ್ತಿನ ಲೂಟಿಯ ಬಗ್ಗೆ ಮಾತಾಡಬೇಕಾದ ಜನಸಾಮಾನ್ಯರು ಅದರಲ್ಲೂ ವಿಶೇಷವಾಗಿ ಯುವಕರು ಮುಸ್ಲಿಮ್ ಮತ್ತು ಕ್ರೈಸ್ತ ವಿರೋಧಿ ದ್ವೇಷ ಮತ್ತು ದಲಿತ ಸಮುದಾಯದ ಮೀಸಲು ವ್ಯವಸ್ಥೆಯ ಬಗ್ಗೆ ಅಸಹನೆಯನ್ನು ತುಂಬಿಕೊಂಡು ಮೋದಿಯವರ ಮಾತಿಗೆ ಚಪ್ಪಾಳೆ ಹೊಡೆಯುತ್ತಿದ್ದಾರೆ. ಇಂಥ ಸನ್ನಿವೇಶದಲ್ಲಿ ಸಂಸದೀಯ ಜನತಂತ್ರದ ರಕ್ಷಣೆ ನಮ್ಮ ಮೊದಲ ಆದ್ಯತೆಯಾಗಬೇಕಾಗಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top