-

ಸಿದ್ದರಾಮಯ್ಯ ಮೇಲೆ ಈ ಪರಿ ದ್ವೇಷವೇಕೆ?

-

ದೇಶವ್ಯಾಪಿ ಕಾಂಗ್ರೆಸ್ ದುರ್ಬಲಗೊಂಡಿರುವ ಈ ದಿನಗಳಲ್ಲಿ, ಮೋದಿಯವರಿಗೆ ಪರ್ಯಾಯವೇ ಇಲ್ಲ ಎಂಬಂತಹ ವಾತಾವರಣದಲ್ಲಿ, ಯುವಜನರು ಮತಾಂಧತೆಯ ನಶೆಯನ್ನು ನೆತ್ತಿಗೇರಿಸಿಕೊಂಡ ಈ ದಿನಗಳಲ್ಲಿ, ಪ್ರಜಾಪ್ರಭುತ್ವ ವಾದಿ ಶಕ್ತಿಗಳು ಏದುಸಿರು ಬಿಡುತ್ತಿರುವ ಈ ಸಂದರ್ಭದಲ್ಲಿ ಮನುವಾದಿ ಫ್ಯಾಶಿಸ್ಟ್ ಶಕ್ತಿಗಳ ಸವಾಲನ್ನು ಎದುರಿಸಲು ಸಿದ್ದರಾಮಯ್ಯನವರಂಥ ಒಬ್ಬ ನಾಯಕನ ಅನಿವಾರ್ಯತೆಯಿದೆ.


ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗಲೂ ಅವರ ಮೇಲೆ ನಿರಂತರ ದ್ವೇಷದ ಪ್ರಚಾರ ನಡೆಯುತ್ತಿತ್ತು. ಅಮೆರಿಕದಲ್ಲಿ ಕುಳಿತು ಟ್ರೋಲ್ ಮಾಡುತ್ತಿದ್ದ ಕೊಳಕು ಜಾತಿಯವಾದಿ ಜಂತುಗಳು ಆಯಾಸದಿಂದ ಸಿದ್ದರಾಮಯ್ಯನವರು ಸಭೆಗಳಲ್ಲಿ ನಿದ್ರೆಗೆ ಜಾರಿದರೆ ಅದನ್ನೂ ಲೇವಡಿ ಮಾಡುತ್ತಿದ್ದರು.ಇದಕ್ಕೆ ಬಹುಮುಖ್ಯ ಕಾರಣ ಹಿಂದುಳಿದ ಸಮುದಾಯದ ವ್ಯಕ್ತಿ ರಾಜಕೀಯ ಅಧಿಕಾರದ ಉನ್ನತ ಸ್ಥಾನಕ್ಕೇರಿರುವುದು. ಇನ್ನೊಂದು ಕಾರಣ ಕೋಮುವಾದಿ ಶಕ್ತಿಗಳ ವಿರುದ್ಧ ಅವರು ಗಟ್ಟಿ ಧ್ವನಿಯಲ್ಲಿ ಮಾತಾಡುತ್ತಿರುವುದು. ಹಿಂದುಳಿದ ವರ್ಗಕ್ಕೆ ಸೇರಿದ್ದರೂ ಈಶ್ವರಪ್ಪನಂತೆ ಗುಲಾಮನಂತಿರಬೇಕು ಎಂಬುದು ಜಾತಿ ಶ್ರೇಣೀಕರಣ ಒಳ ಬಯಕೆಯಾಗಿತ್ತು ಮತ್ತು ಆಗಿದೆ. ಅದರಲ್ಲೂ ಸಂಘ ಪರಿವಾರದ ಸಿದ್ಧಾಂತವನ್ನು ನೇರವಾಗಿ ತರಾಟೆಗೆ ತೆಗೆದುಕೊಳ್ಳುವವರು ಕಾಂಗ್ರೆಸ್‌ನಲ್ಲಿ ತುಂಬಾ ಕಡಿಮೆ.
ರಾಷ್ಟ್ರೀಯ ಮಟ್ಟದಲ್ಲಿ ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯದಲ್ಲಿ ಪ್ರಿಯಾಂಕ ಖರ್ಗೆ, ಸತೀಶ್ ಜಾರಕಿಹೊಳಿ, ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌ರಂಥ ಕೆಲವರು ಮಾತ್ರ ನೇರವಾಗಿ ಕೋಮುವಾದಿ ಶಕ್ತಿಗಳ ವಿರುದ್ಧ ಮಾತಾಡುತ್ತಾರೆ. ಇವರಲ್ಲಿ ಮಾಸ್ ಲೀಡರ್ ಎಂದು ರಾಜ್ಯದ ತುಂಬಾ ಸುತ್ತಾಡುವವರು ಸಿದ್ದರಾಮಯ್ಯನವರು. ಅಂತಲೇ ಅವರು ಕೋಮುವಾದಿಗಳ ಟಾರ್ಗೆಟ್ ಆಗಿದ್ದಾರೆ.

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಐದು ವರ್ಷಗಳ ಕಾಲ ದಕ್ಷ ಆಡಳಿತ ನೀಡಿದರೆಂಬುದರ ಬಗ್ಗೆ ಬಹುತೇಕ ಭಿನ್ನಾಭಿಪ್ರಾಯ ಇಲ್ಲ. ಆದರೆ ಅವರು ಅಧಿಕಾರದಲ್ಲಿ ಇದ್ದಾಗಲೂ ಮತ್ತು ಈಗ ಪ್ರತಿಪಕ್ಷ ನಾಯಕನಾಗಿರು ವಾಗಲೂ ಅವರನ್ನು ಕೋಮುವಾದಿ ಶಕ್ತಿಗಳು, ಅವುಗಳ ಸುಳ್ಳು ಹರಡುವ ವಾಟ್ಸ್‌ಆ್ಯಪ್ ಯುನಿವರ್ಸಿಟಿಗಳು ನಖ ಶಿಖಾಂತವಾಗಿ ದ್ವೇಷಿಸುತ್ತಿವೆ. ಅವರ ಮೇಲೆ ಮಾಡಲು ಯಾವ ಆರೋಪಗಳೂ ಇಲ್ಲ.ಅವರಿಗೆ ಸಕ್ಕರೆ ಕಾರ್ಖಾನೆ, ಮೆಡಿಕಲ್ ಕಾಲೇಜು, ಮೈನಿಂಗ್ ದಂಧೆಗಳು, ರಿಯಲ್ ಎಸ್ಟೆಟ್ ವ್ಯವಹಾರಗಳು ಇಲ್ಲ. ಅವರ ಒಂದು ಸಣ್ಣ ತಪ್ಪು ಇದ್ದರೂ ಮೋದಿ, ಅಮಿತ್ ಶಾ ಅವರು ಬಿಡುತ್ತಿ ದ್ದರೇ? ಐಟಿ ದಾಳಿ, ಸಿಬಿಐ ದಾಳಿ ಮಾಡಿಸುತ್ತಿದ್ದರು. ಹೀಗಾಗಿ ಯಾರಿಗೂ ಹೆದರದ ಸಿದ್ದರಾಮಯ್ಯನವರು ಡಬಲ್ ಇಂಜಿನ್ ಸರಕಾರದ ಹಗರಣಗಳ ಬಗ್ಗೆ ನೇರವಾಗಿ ಮಾತನಾಡುತ್ತಾರೆ. ಇಷ್ಟೇ ಮಾತಾಡಿದ್ದರೆ ಅವರನ್ನು ಕೋಮು ವಾದಿಗಳು ಈ ಪರಿ ದ್ವೇಷಿಸುತ್ತಿರಲಿಲ್ಲ. ಸಿದ್ದರಾಮಯ್ಯನವರು ಆರೆಸ್ಸೆಸ್- ಬಿಜೆಪಿ ಹುನ್ನಾರ ಗಳ ವಿರುದ್ಧ ನೇರವಾಗಿ ಬಹಿರಂಗವಾಗಿ ತರಾಟೆಗೆ ತೆಗೆದುಕೊಳ್ಳುತ್ತಾರೆ. ಇದರಿಂದ ಹತಾಶಗೊಂಡ ಫ್ಯಾಶಿಸ್ಟ್ ಶಕ್ತಿಗಳು ಅವರನ್ನು ಇನ್ನಿಲ್ಲದಂತೆ ದ್ವೇಷಿಸುತ್ತವೆ.

ರಾಜಕಾರಣದಲ್ಲಿ ಈಗ ಜನನಾಯಕರ ಅಭಾವವಿದೆ. ಹಿಂದೆ ಜನಚಳವಳಿ ಗಳಿಂದ ಬಂದವರು ನಾಯಕರಾಗಿ ಹೊರಹೊಮ್ಮುತ್ತಿದ್ದರು. ಶಾಸನ ಸಭೆಗಳಿಗೂ ಗೆದ್ದು ಬರುತ್ತಿದ್ದರು. ಆದರೆ ತೊಂಬತ್ತರ ದಶಕದಿಂದ ಈಚೆಗೆ ರಿಯಲ್ ಎಸ್ಟೇಟ್ ಕುಳಗಳು, ಮೈನಿಂಗ್ ಮಾಫಿಯಾ ಖದೀಮರು, ಸಕ್ಕರೆ ಕಾರ್ಖಾನೆ ಮಾಲಕರು, ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳೆಂಬ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುವವರು ಇಂಥವರೇ ಗೆದ್ದು ಬರುತ್ತಿರುವುದರಿಂದ ಅವರ ಲಾಭದ ಹಿತಾಸಕ್ತಿ ಯಾಚೆಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ.ಇಂಥ ಸನ್ನಿವೇಶದಲ್ಲಿ ಕರ್ನಾಟಕದ ಎಲ್ಲೆಡೆ ಜನಸಮೂಹವನ್ನು ಆಕರ್ಷಸುವ ನಾಯಕನೆಂದರೆ ಸಿದ್ದರಾಮಯ್ಯನವರು. ಹಿಂದೆ ಸಾರೆಕೊಪ್ಪ ಬಂಗಾರಪ್ಪ ನವರು ಇದೇ ವರ್ಚಸ್ಸು ಹೊಂದಿದ ನಾಯಕರಾಗಿದ್ದರು. ತಾವು ಸ್ಪರ್ಧಿಸಿದ ಸೊರಬ ಮತ ಕ್ಷೇತ್ರಕ್ಕೆ ಕೊನೆಯ ಮತದಾನದ ದಿನ ಮಾತ್ರ ಹೋಗಿ ಅವರು ಗೆದ್ದು ಬರುತ್ತಿದ್ದರು.ಸಿದ್ದರಾಮಯ್ಯನವರಿಗೂ ಆ ಇಮೇಜ್ ಇದೆ. ಜೊತೆಗೆ ಅವರಿಗೆ ಜನರ ಮುಂದೆ ಹೇಳಲು ಸಾಧನೆಗಳ ಪಟ್ಟಿಯೇ ಇದೆ. ಇಂದಿರಾ ಕ್ಯಾಂಟಿನ್ ಮುಂತಾದ ಯೋಜನೆಗಳು ಇನ್ನೂ ಜನರ ನೆನಪಿನಂಗಳದಲ್ಲಿ ಉಳಿದಿವೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ನಾಯಕರ ಬಳಿ ಸಾಧನೆಯ ಪಟ್ಟಿಯೇ ಇಲ್ಲ. ಅಂತಲೇ ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಬಿಜೆಪಿ ಪ್ರಚಾರ ಸಭೆಯಲ್ಲಿ, ‘ರಸ್ತೆ, ಚರಂಡಿ, ಶಾಲೆಯಂಥ ವಿಷಯದ ಬಗ್ಗೆ ಮಾತಾಡಬೇಡಿ, ಲವ್ ಜಿಹಾದ್ ಮತಾಂತರದ ಬಗ್ಗೆ ಮಾತನಾಡಿ’ ಎಂದು ಹೇಳುವ ಪರಿಸ್ಥಿತಿ ಬಂದಿದೆ. ದಕ್ಷಿಣ ಭಾರತದಲ್ಲಿ ಕೋಮುವಾದಿಗಳು ನೆಲೆಯೂರಲು ಅತ್ಯಂತ ಅನುಕೂಲಕರ ರಾಜ್ಯವೆಂದು ಆಯ್ಕೆ ಮಾಡಿಕೊಂಡಿದ್ದು ಕರ್ನಾಟಕ. ಹಲವಾರು ವರ್ಷಗಳಿಂದ ಸಾವಿರಾರು ಕಾರ್ಯಕರ್ತರ ಪರಿಶ್ರಮದಿಂದ ನೆಲೆಯನ್ನು ವಿಸ್ತರಿಸಿಕೊಂಡಿದ್ದಾರೆ.ಇಲ್ಲಿ ಬಹುದೊಡ್ಡ ಸಮುದಾಯಗಳಾದ ವೀರಶೈವ ಲಿಂಗಾಯತ, ಒಕ್ಕಲಿಗ ಹಾಗೂ ಹಾಲುಮತ ಕುರುಬ ಸಮುದಾಯದ ಮೇಲೆ ಅವರು ಗಮನವನ್ನು ಕೇಂದ್ರೀಕರಿಸಿದರು. ಯಡಿಯೂರಪ್ಪನವರ ಮೂಲಕ ಉತ್ತರ ಕರ್ನಾಟಕದ ಕೆಲವೆಡೆ ಲಿಂಗಾಯತರ ನಡುವೆ ಪ್ರಭಾವವನ್ನು ವಿಸ್ತರಿಸಿಕೊಂಡಿದ್ದಾರೆ. ಒಕ್ಕಲಿಗರ ನಡುವೆ ನೆಲೆ ಕಂಡುಕೊಳ್ಳಲು ರಾಷ್ಟ್ರ ಕವಿ ಕುವೆಂಪು ವಿಚಾರಧಾರೆ ಮತ್ತು ಎಚ್.ಡಿ.ದೇವೇಗೌಡರ ರಾಜಕೀಯ ಪ್ರಮುಖ ಅಡ್ಡಿಯಾಗಿದೆ. ಇನ್ನು ಕುರುಬ ಸಮುದಾಯದಲ್ಲಿ ನೆಲೆ ಕಂಡುಕೊಳ್ಳಲು ಬಂಡೆಗಲ್ಲಿನಂತೆ ಅಡ್ಡ ನಿಂತಿರುವವರು ಸಿದ್ದರಾಮಯ್ಯ.
ಇವರು ಎಷ್ಟು ಹತಾಶೆಗೊಂಡಿದ್ದಾರೆಂದರೆ ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಮಂಡ್ಯದಲ್ಲಿ ಉರಿಗೌಡ ಮತ್ತು ನಂಜೇಗೌಡರನ್ನು ಸೃಷ್ಟಿಸಿದರು, ‘ಟಿಪ್ಪು ಸುಲ್ತಾನನ್ನು ಕೊಂದಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರನ್ನು ಹೊಡೆದು ಹಾಕಬೇಕು’ ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣರು ಬಹಿರಂಗವಾಗಿ ಕರೆ ಕೊಟ್ಟರು, ನಂತರ ಕಾಟಾಚಾರಕ್ಕೆ ಕ್ಷಮೆ ಯಾಚಿಸಿದರು.ಇದು ಅತ್ಯಂತ ಆತಂಕ ಪಡುವ ಸಂಗತಿ, ಲಘುವಾಗಿ ತಳ್ಳಿ ಹಾಕುವಂಥದ್ದಲ್ಲ. ಈಗ ಸಿದ್ದರಾಮಯ್ಯನವರನ್ನು ಫ್ಯಾಶಿಸ್ಟ್ ಶಕ್ತಿಗಳು ಟಾರ್ಗೆಟ್ ಮಾಡಿದಂತೆ ಕಾಣುತ್ತದೆ. ಸಿದ್ದರಾಮಯ್ಯನವರ ಬಾಯಿ ಮುಚ್ಚಿಸಲು ಆಗುವುದಿಲ್ಲ. ಅವರಿಗೆ ಯಾವುದೇ ದೋನ್ ನಂಬರ್ ದಂಧೆಯಿಲ್ಲ. ಬೇನಾಮಿ ಹಣವಿಲ್ಲ. ಸಕ್ಕರೆ ಕಾರ್ಖಾನೆ ಇಲ್ಲ. ಹೀಗಾಗಿ ಜನಪ್ರಿಯತೆ ಗಳಿಸಿದ ಅವರನ್ನು ನಿರಂತರವಾಗಿ ಟ್ರೋಲ್ ಮಾಡಲಾಗುತ್ತಿದೆ. ಡಾ. ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ್‌ರ ಹತ್ಯೆಯನ್ನು ನೋಡಿದ್ದೇವೆ. ಮತ್ತೆ ಅಂಥ ಅಹಿತಕರ ಘಟನೆ ಸಂಭವಿಸಬಾರದು. ಸಿದ್ದರಾಮಯ್ಯನವರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಸರಕಾರಕ್ಕೆ ಮನವಿ ಮಾಡಿಕೊಳ್ಳುವ ಜೊತೆಗೆ ಕಾಂಗ್ರೆಸ್ ಪಕ್ಷ ತನ್ನ ನಾಯಕನಿಗೆ ಪ್ರತ್ಯೇಕ ಭದ್ರತಾ ವ್ಯವಸ್ಥೆ ಮಾಡುವುದು ಸೂಕ್ತ. ಹಳೆಯ ಜನಸಂಘದ ಕಾಲದಿಂದಲೂ ನಾನು ವಾಜಪೇಯಿ, ಅಡ್ವಾನಿ, ಜಗನ್ನಾಥರಾವ್ ಭಾಷಣಗಳನ್ನು ಕೇಳುತ್ತ ಬಂದಿದ್ದೇನೆ. ಅವರು ಎಂದೂ ಇಂಥ ಪ್ರಚೋದನಾಕಾರಿ ಮಾತುಗಳನ್ನು ಆಡುತ್ತಿರಲಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಮ್ಮ ಸಂಪುಟದ ಸಚಿವರ ಬಾಯಿಗೆ ಮಾಸ್ಕ್ ಹಾಕಲಿ. ಕಂಡ ಕಂಡಲ್ಲಿ ಬಾಯಿ ಹಾಕಬಾರದೆಂದು ದನಗಳ ಬಾಯಿಗೆ ಹಗ್ಗದ ಮುಖ ಕವಚ ಹಾಕುತ್ತಿದ್ದರು. ಮಂತ್ರಿಗಳಿಗೆ ಅದು ಅಗತ್ಯವಿದೆ.
ಬಿಜೆಪಿ ರಾಜ್ಯಾಧ್ಯಕ್ಷರು ಲವ್ ಜಿಹಾದನ್ನು ಚುನಾವಣೆಯ ಮುಖ್ಯ ಪ್ರಚಾರ ವಸ್ತುವನ್ನಾಗಿ ಬಳಸಿಕೊಳ್ಳಬೇಕೆಂದು ಬಹಿರಂಗವಾಗಿ ಕಾರ್ಯಕರ್ತರಿಗೆ ಕರೆ ನೀಡಿದರೆ, ಬಿಜೆಪಿ ರಾಷ್ಟ್ರೀಯ ನಾಯಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಇನ್ನೂ ಮುಂದೆ ಹೋಗಿ ಇತ್ತೀಚೆಗೆ ಕರ್ನಾಟಕಕ್ಕೆ ಬಂದಾಗ ಈ ವಿಧಾನಸಭಾ ಚುನಾವಣೆ ಟಿಪ್ಪು ಸುಲ್ತಾನ್ ಮತ್ತು ರಾಣಿ ಅಬ್ಬಕ್ಕದೇವಿ ನಡುವಿನ ಚುನಾವಣೆ ಎಂದು ಘೋಷಿಸಿದರು. ಇಂಥ ಭಾಷಣಗಳನ್ನು ನೋಡಿ ಬೇರೆ ದೇಶದ ಜನ ನಗುತ್ತಾರೆ. ನಮ್ಮ ಮುಂದೆ ಸಾವಿರಾರು ಸಮಸ್ಯೆಗಳಿವೆ. ದುಡಿಯುವ ಕೈಗಳಿಗೆ ಕೆಲಸವಿಲ್ಲ, ಸರಕಾರಿ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ಬಂದಿದೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಪಿಎಸ್ಸೈ ನೇಮಕಾತಿ ಹಗರಣ ಬಯಲಿಗೆ ಬಂದಿದೆ. ಶೇ.40 ಕಮಿಷನ್ ವ್ಯವಹಾರ, ರೈತರ ಸಮಸ್ಯೆ, ರೈತರ ಫಸಲಿಗೆ ನ್ಯಾಯ ಬೆಲೆ ಹೀಗೆ ಹಲವಾರು ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡುವುದು ರಾಜಕೀಯ ಪಕ್ಷಗಳ ನಾಯಕರಿಗೆ ಶೋಭೆ ತರುತ್ತದೆ. ಅದನ್ನು ಬಿಟ್ಟು ಕೇಂದ್ರ ಗೃಹ ಸಚಿವರೇ ಬಂದು ನಾವ್ಯಾರೂ ನೋಡದ, ಚರಿತ್ರೆಯ ಪುಟಗಳನ್ನು ಸೇರಿದ ಟಿಪ್ಪು ಮತ್ತು ಅಬ್ಬಕ್ಕ ದೇವಿ ನಡುವಿನ ಚುನಾವಣೆ ಎಂದು ಹೇಳುವುದು ಭಾರತಿಯರನ್ನು, ಕನ್ನಡಿಗರನ್ನು ಓಟಿಗಾಗಿ ಕೋಮು ಆಧಾರದಲ್ಲಿ ಒಡೆಯುವ ಹುನ್ನಾರವಲ್ಲದೆ ಬೇರೆನೂ ಅಲ್ಲ.
ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರ ಬಗೆಗೂ ಇಂಥ ಅಪಪ್ರಚಾರ ಮಾಡಿ ಲೋಕಸಭಾ ಚುನಾವಣೆಯಲ್ಲಿ ಸೋಲಿಸಿದರು. ಬಹಳ ಜನಕ್ಕೆ ಗೊತ್ತಿಲ್ಲ, ಅವರಿಗೂ ಕಳೆದ ಲೋಕಸಭಾ ಚುನಾವಣೆಗೆ ಮುನ್ನ ಹತ್ಯೆಯ ಬೆದರಿಕೆ ಬಂದಿತ್ತು.ಕೊಲ್ಲುವುದಾಗಿ ಫೋನ್ ಕರೆಗಳು ಬರುತ್ತಿದ್ದವು. ಅವರು ಪೊಲೀಸರಿಗೂ ದೂರು ಕೊಟ್ಟಿದ್ದರು. ಖರ್ಗೆಯವರನ್ನು ಟಾರ್ಗೆಟ್ ಮಾಡಲು ಕಾರಣ ಬುದ್ಧ ಮತ್ತು ಬಾಬಾಸಾಹೇಬರನ್ನು ಓದಿಕೊಂಡ ಅವರು ಕೋಮುವಾದಿ ಶಕ್ತಿಗಳಿಗೆ ಸೊಪ್ಪು ಹಾಕಲಿಲ್ಲ. ಬಹಿರಂಗ ಸಭೆಗಳಲ್ಲಿ ಸಂಘ ಪರಿವಾರದ ಸಂಘಟನೆಗಳನ್ನು ನೇರವಾಗಿ ಟೀಕಿಸುತ್ತಿದ್ದರು. ಖರ್ಗೆಯವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ವಿಶ್ವ ಹಿಂದೂ ಪರಿಷತ್‌ನಂಥ ಸಂಘಟನೆಗಳ ಜೊತೆ ಗುರುತಿಸಿಕೊಳ್ಳಬಾರದೆಂದು ಕಾಂಗ್ರೆಸ್ ಪಕ್ಷದ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ್ದರು ಎಂಬುದನ್ನು ಇಲ್ಲಿ ಗಮನಿಸಬಹುದು.
ಕಾಂಗ್ರೆಸ್ ಒಳಗಿನ ತತ್ವನಿಷ್ಠೆ, ಸೈದ್ಧಾಂತಿಕ ಬದ್ಧತೆಯುಳ್ಳ ನಾಯಕರನ್ನು ದುರ್ಬಲ ಗೊಳಿಸಿದರೆ ತನ್ನ ಹಿಂದೂ ರಾಷ್ಟ್ರ ನಿರ್ಮಾಣದ ಗುರಿಯನ್ನು ಸುಲಭವಾಗಿ ಸಾಧಿಸ ಬಹುದೆಂದು ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರದ ಲೆಕ್ಕಾಚಾರವಾಗಿದೆ.ಅದಕ್ಕಾಗಿ ಕರ್ನಾಟಕದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅವರ ಟಾರ್ಗೆಟ್ ಸಿದ್ದರಾಮಯ್ಯನವರಾಗಿದ್ದಾರೆ. ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರ ಗರಡಿಯಲ್ಲಿ ತಯಾರಾದ ಸಿದ್ದರಾಮಯ್ಯ ಲೋಹಿಯಾವಾದಿ. ಅಧಿಕಾರ ರಾಜಕಾರಣದ ತಂತ್ರ, ಕುತಂತ್ರಗಳನ್ನು ಬಲ್ಲವರು. ಎಲ್ಲಕ್ಕಿಂತ ಹೆಚ್ಚಾಗಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳ ಮೆಚ್ಚಿನ ನಾಯಕರು. ಅಂತಲೇ ಅವರ ತೇಜೋವಧೆ ಕೋಮುವಾದಿ ಶಕ್ತಿಗಳ ಗುರಿಯಾಗಿದೆ.
ದಮನಿತ, ನಿರ್ಲಕ್ಷಿತ ಸಮುದಾಯಗಳಿಗೆ ಬಾಬಾಸಾಹೇಬರು ಸಂವಿಧಾನ ಎಂಬ ಬೆಳಕನ್ನು ನೀಡಿದ್ದಾರೆ. ಎಲ್ಲರೂ ಒಂದಾಗಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವನ್ನು ಕಾಪಾಡಿಕೊಳ್ಳಬೇಕಾಗಿದೆ. ಸಂಘಪರಿವಾರಕ್ಕೆ ಬೈಯುತ್ತ ಕೂತರೆ ಪ್ರಯೋಜನ ವಿಲ್ಲ. ತಮ್ಮ ಕಾರ್ಯಸೂಚಿಯನ್ನು ಜಾರಿಗೆ ತರುವುದು ಅವರ ಸಹಜ ಕರ್ತವ್ಯ. ನಮ್ಮ ಕಾರ್ಯಸೂಚಿಯನ್ನು ಅವರೇಕೆ ಅನುಸರಿಸುತ್ತಾರೆ? ಸಮಾನತೆಯ, ಸಂವಿಧಾನ ರಕ್ಷಣೆಯ ನಮ್ಮ ಕಾರ್ಯಸೂಚಿಯನ್ನು ನಾವೇ ಜಾರಿಗೆ ತರಲು ಶ್ರಮಿಸಬೇಕಾಗಿದೆ. ಸೆಕ್ಯುಲರ್ ಎಂದು ಕರೆಯಲ್ಪಡುವ ಸಂಘಟನೆಗಳು ಶಿಥಿಲಗೊಂಡಿವೆ. ಒಂದಾಗಿ ನಿಲ್ಲಬೇಕಾದ ಹಿಂದುಳಿದ ಸಮುದಾಯವನ್ನು ಆಯಾ ಜಾತಿಯ ಹೆಸರಿನಲ್ಲಿ ವಿಭಜಿಸುವಲ್ಲಿ ಕೋಮುವಾದಿ ಶಕ್ತಿಗಳ ತಂತ್ರ ಯಶಸ್ವಿಯಾಗುತ್ತಿದೆ. ಸುಳ್ಳುಗಳ ಮೂಲಕ ಗೆಲುವು ಸಾಧಿಸುವ ಕಲೆ ಅವರಿಗೆ ಸಿದ್ಧಿಸಿದೆ. ಅವರಿಗೆ ಸ್ಫೂರ್ತಿ ಜರ್ಮನಿಯ ಹಿಟ್ಲರ್. ಹಿಟ್ಲರ್‌ನ ಸಂಪುಟದಲ್ಲಿ ಗೊಬೆಲ್ಸ್ ಎಂಬ ಪ್ರಚಾರ ಮಂತ್ರಿ ಇದ್ದ.ಒಂದು ಸುಳ್ಳನ್ನು ನೂರು ಬಾರಿ ಹೇಳಿದರೆ ಜನ ಅದನ್ನೇ ಸತ್ಯವೆಂದು ನಂಬುತ್ತಾರೆ ಎಂದು ಗೊಬೆಲ್ಸ್ ಹೇಳುತ್ತಿದ್ದ.ಈಗ ಟಿಪ್ಪು ಬಗ್ಗೆ, ಲವ್ ಜಿಹಾದ್ ಬಗ್ಗೆ ಉರಿಗೌಡ, ನಂಜೇಗೌಡರ ಇವರು ಕಟ್ಟಿದೆ ಕತೆಗಳು ಇಂಥ ಸುಳ್ಳಿನ ಕತೆಗಳು.
 
ಚುನಾವಣೆ ಸಮೀಪಿಸುತ್ತಿದ್ದಂತೆ ಸುಳ್ಳಿನ ಕಂತೆಗಳ ಸುರಿಮಳೆ ಆಗಲಿದೆ. ಹಗರಣಗಳನ್ನು, ವೈಫಲ್ಯಗಳನ್ನು ಮುಚ್ಚಿ ಕೊಳ್ಳಲು ಶತಮಾನಗಳ ಹಿಂದೆ ಮತದಾರರನ್ನು ಕರೆದೊಯ್ಯುವ ಮಸಲತ್ತುಗಳು ನಡೆಯುತ್ತಿವೆ.ಕಲಬುರಗಿ ಜಿಲ್ಲೆಯ ಆಳಂದದಲ್ಲಿ ಈವರೆಗೆ ಇಲ್ಲದ ಹೊಸ ವಿವಾದವೊಂದನ್ನು ಸೃಷ್ಟಿಸಿದ್ದಾರೆ. ಅಲ್ಲಿನ ಲಾಡ್ಲೆ ಮಶಾಕ್ ದರ್ಗಾದಲ್ಲಿ ರಾಘವ ಚೈತನ್ಯ ಲಿಂಗವಿದೆ ಎಂದು ವಿವಾದ ಉಂಟು ಮಾಡಿದ್ದಾರೆ. ಈ ಸಲದ ಶಿವರಾತ್ರಿ ನಿಷೇಧಾಜ್ಞೆಯ ನಡುವೆ ನಲುಗಿ ಹೋಗಿದೆ. ಈ ವಿವಾದ ಕೋರ್ಟಿಗೆ ಹೋಗಿದ್ದು,ಕೋರ್ಟ್ ಆದೇಶದ ಪ್ರಕಾರ ಹಿಂದೂ ಸಮಾಜದ 15 ಜನರಿಗೆ ಪೂಜೆಗೆ ಅವಕಾಶ ಕಲ್ಪಿಸಲಾಗಿದೆ.ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳನ್ನು ಕಬ್ಜಾ ಮಾಡಿಕೊಳ್ಳಲು ಅಂದರೆ ಸಂಘಪರಿವಾರ ಸ್ವಾಧಿನಪಡಿಸಿಕೊಳ್ಳಲು ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದ, ಚಿಕ್ಕಮಗಳೂರಿನ ಬಾಬಾಬುಡಾನಗಿರಿ ವಿವಾದದಂತೆ ಇದನ್ನು ಜೀವಂತವಾಗಿಡುವ ಷಡ್ಯಂತ್ರ ರೂಪುಗೊಂಡಿದೆ. ಶರಣರು, ಸೂಫಿಗಳ ನೆಲ ಈಗ ಅಪಾಯದ ಅಂಚಿನಲ್ಲಿದೆ.
ಸಿದ್ದರಾಮಯ್ಯನವರ ಹತ್ಯೆಗೆ ಮಂತ್ರಿ ಅಶ್ವತ್ಥ ನಾರಾಯಣ ಕರೆ ನೀಡಿರುವ ವಿಷಯವನ್ನು ಕಾಂಗ್ರೆಸ್ ಲಘುವಾಗಿ ಪರಿಗಣಿಸಬಾರದು. ಸಿದ್ದರಾಮಯ್ಯ ನವರಿಗೆ ಸೂಕ್ತ ರಕ್ಷಣಾ ವ್ಯವಸ್ಥೆಯನ್ನು ಪಕ್ಷವೇ ಮಾಡುವುದು ಸೂಕ್ತ. ಬರಲಿರುವ ದಿನಗಳಲ್ಲಿ ಸಿದ್ದರಾಮಯ್ಯನವರಂಥ ಸೈದ್ಧಾಂತಿಕ ಹಿನ್ನೆಲೆಯ ರಾಜಕಾರಣಿಗಳು ಸಿಗುವುದು ಕಷ್ಟ. ಹಣ ಹಾಕಿ ಹಣ ಮಾಡಿಕೊಳ್ಳಲು ಉದ್ಯಮಿಗಳು, ಭೂ ಗಳ್ಳರು ಚುನಾವಣಾ ರಾಜಕೀಯಕ್ಕೆ ಇಳಿದಿರುವುದರಿಂದ ಮುಂದಿನ ಪೀಳಿಗೆಗೆ ಒಂದು ಆದರ್ಶ ಪರ್ಯಾಯವನ್ನು, ಮಾದರಿಯನ್ನು ನೀಡಬೇಕಾಗಿದೆ.
ಹಿಂದುಳಿದ ಸಮುದಾಯಗಳಾದ ಬಂಜಾರಾ, ವಾಲ್ಮೀಕಿ, ನಾಯಕ, ಗಂಗಾ ಮತ, ಬೇಸ್ತ, ನೇಕಾರ ಮತ್ತಿತರ ಸಮುದಾಯಗಳನ್ನು ವಿಭಜಿಸಿ ಒಂದೊಂದು ಸಮು ದಾಯಕ್ಕೂ ಒಂದೊಂದು ಮಠವನ್ನು ಮಾಡಿಕೊಟ್ಟು ಐಕ್ಯತೆಯನ್ನು ಮುರಿಯ ಲಾಗಿದೆ.ಇದರಾಚೆಯೂ ಸಿದ್ದರಾಮಯ್ಯನವರ ಜನಪ್ರಿಯತೆ ನಾಗಪುರದ ಗುರುಗಳ, ಗುಜರಾತಿನ ಶಿಷ್ಯರ ನಿದ್ದೆಗೆಡಿಸಿದೆ. ಅವರನ್ನು ಹೇಗಾದರೂ ಮಾಡಿ ರಾಜಕೀಯದಿಂದ ದೂರ ಸರಿಸುವ ಮಸಲತ್ತು ನಡೆಯುತ್ತಲೇ ಇದೆ. ಬಿಜೆಪಿ ನಾಯಕರ ಹತಾಶೆ ಎಲ್ಲಿಯವರೆಗೆ ಹೋಗಿದೆ ಯೆಂದರೆ ಸಿದ್ದರಾಮಯ್ಯನವರ ಜೀವ ತೆಗೆಯುವ ಮಾತನ್ನಾಡುವವರೆಗೆ ಹೋಗಿದೆ. ಇಂಥ ಸನ್ನಿವೇಶದಲ್ಲಿ ಕಾಂಗ್ರೆಸ್ ಮಾತ್ರವಲ್ಲ ಎಲ್ಲಾ ಪ್ರಜಾಪ್ರಭುತ್ವ ವಾದಿ ಶಕ್ತಿಗಳು ಹತ್ಯೆಯ ಬೆದರಿಕೆ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಬೇಕಾಗಿದೆ.
ದೇಶವ್ಯಾಪಿ ಕಾಂಗ್ರೆಸ್ ದುರ್ಬಲಗೊಂಡಿರುವ ಈ ದಿನಗಳಲ್ಲಿ, ಮೋದಿಯ ವರಿಗೆ ಪರ್ಯಾಯವೇ ಇಲ್ಲ ಎಂಬಂತಹ ವಾತಾವರಣದಲ್ಲಿ, ಯುವಜನರು ಮತಾಂಧತೆಯ ನಶೆಯನ್ನು ನೆತ್ತಿಗೇರಿಸಿಕೊಂಡ ಈ ದಿನಗಳಲ್ಲಿ, ಪ್ರಜಾಪ್ರಭುತ್ವ ವಾದಿ ಶಕ್ತಿಗಳು ಏದುಸಿರು ಬಿಡುತ್ತಿರುವ ಈ ಸಂದರ್ಭದಲ್ಲಿ ಮನುವಾದಿ ಫ್ಯಾಶಿಸ್ಟ್ ಶಕ್ತಿಗಳ ಸವಾಲನ್ನು ಎದುರಿಸಲು ಸಿದ್ದರಾಮಯ್ಯನವರಂಥ ಒಬ್ಬ ನಾಯಕನ ಅನಿವಾರ್ಯತೆಯಿದೆ. ಭಾರತಕ್ಕೆ ಮಲ್ಲಿಕಾರ್ಜುನ ಖರ್ಗೆಯವರು, ಕರ್ನಾಟಕಕಕ್ಕೆ ಸಿದ್ದರಾಮಯ್ಯನವರು ಎಂಬುದು ನಮ್ಮ ಸದ್ಯದ ಘೋಷಣೆ ಆಗಬೇಕಿದೆ. ಸಂಸದೀಯ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಉಳಿವಿಗೆ ಈಗ ಇದೊಂದೇ ವಾಸ್ತವಿಕತೆಯಿಂದ ಕೂಡಿದ ದಾರಿಯಾಗಿದೆ.
ಸಿದ್ದರಾಮಯ್ಯನವರ ಆಡಳಿತದಲ್ಲಿ ಲೋಪಗಳಿರಲಿಲ್ಲವೆಂದಲ್ಲ. ಇಂದಿನ ನವ ಉದಾರೀಕರಣದ ಯುಗದಲ್ಲಿ ಎಲ್ಲಾ ಅಡ್ಡಿ ಆತಂಕಗಳನ್ನು ಎದುರಿಸಿ ಜನಪರ ಆಡಳಿತ ನೀಡುವುದು ಅಷ್ಟು ಸುಲಭವಲ್ಲ. ಆದರೂ ಲೋಕಾಯುಕ್ತ ರದ್ದುಪಡಿಸಿದ್ದು ಸಮರ್ಥನೀಯವಲ್ಲ. ಆದರೂ ಸಿದ್ದರಾಮಯ್ಯನವರು ತಮ್ಮ ಸಂಪುಟದ ಸಚಿವರಿಗೆ ನೀಡಿದ ಸ್ವಾತಂತ್ರ, ಕಳಂಕರಹಿತ ಆಡಳಿತ ಈ ಕಾಲದಲ್ಲಿ ಉತ್ತಮ ಮಾದರಿಯೆಂದರೆ ತಪ್ಪಲ್ಲ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top