-

ಈ ಕೆಟ್ಟ ದಿನಗಳಲ್ಲಿ ನೆನಪಿಗೆ ಬಂದ ಕಾಮ್ರೇಡ್ ಪಂಪಾಪತಿ

-

ಅಪಾರ ತ್ಯಾಗ, ಬಲಿದಾನದ ಇತಿಹಾಸ ಇರುವ ಎಡಪಂಥೀಯರು ತಮ್ಮ ಇತಿಹಾಸವನ್ನು ದಾಖಲಿಸುವಲ್ಲಿ ಸಫಲರಾಗಿಲ್ಲ. ಈ ಕೊರತೆಯನ್ನು ತುಂಬಿದ ಇಮ್ತಿಯಾಝ್ ಹುಸೈನ್ ಅವರು ಎಲ್ಲೂ ಪೂರ್ವಾಗ್ರಹಕ್ಕೆ ಒಳಗಾಗದೆ ಇದ್ದುದನ್ನು ಇದ್ದಂತೆ ಬರೆದಿದ್ದಾರೆ. ಒಂದೊಂದು ಘಟನೆಗಳನ್ನು ಕ್ರಮಬದ್ಧವಾಗಿ ಎಲ್ಲೂ ಅತಿರಂಜಿತ ಗೊಳಿಸದೆ ನಮ್ಮ ಮುಂದಿಟ್ಟಿದ್ದಾರೆ. ಸರಳವಾಗಿ ಓದಿಸಿಕೊಂಡು ಹೋಗುವ ಈ ಪುಸ್ತಕ ಜನಪರ ಹೋರಾಟಗಳಿಗೆ ಮತ್ತು ಚಳವಳಿಗಾರರಿಗೆ ಗೈಡ್‌ನಂತಿದೆ ಎಂದರೆ ಅತಿಶಯೋಕ್ತಿಯಲ್ಲ.

ದಾವಣಗೆರೆ ಜಿಲ್ಲೆಯ ಚನ್ನಗಿರಿಯ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪನ ಭ್ರಷ್ಟಾಚಾರದ ಭಾರೀ ಹಗರಣ ಬಯಲಿಗೆ ಬಂದಿದೆ.

ಕರ್ನಾಟಕ ಸಾಬೂನು ಹಾಗೂ ಮಾರ್ಜಕ ನಿಗಮದ ಅಧ್ಯಕ್ಷ ಕೂಡ ಆಗಿರುವ ಮಾಡಾಳು ಪುತ್ರ ಪ್ರಶಾಂತನ ಬೆಂಗಳೂರಿನ ಮನೆ ಮತ್ತು ಕಚೇರಿಯ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದಾಗ 6 ಕೋಟಿ ರೂಪಾಯಿ ಸಿಕ್ಕಿದೆ ಎಂದು ಒಬ್ಬರು ಹೇಳುತ್ತಾರೆ. 6 ಅಲ್ಲ 8 ಕೋಟಿ ಎಂದು ಇನ್ನೊಬ್ಬರು ಹೇಳುತ್ತಾರೆ.

ನೋಟುಗಳ ಬಂಡಲ್‌ಗಳು ಮಾತ್ರವಲ್ಲ ನೋಟು ಎಣಿಸುವ ಯಂತ್ರಗಳು ಸಿಕ್ಕಿವೆ. ಒಬ್ಬ ಶಾಸಕನ ಮನೆಯಲ್ಲಿ ಇಷ್ಟು ಸಿಕ್ಕರೆ ಮಂತ್ರಿಗಳ ಮನೆಯ ಮೇಲೆ ದಾಳಿ ಮಾಡಿದರೆ ಇನ್ನೆಷ್ಟು ಸಿಗಬಹುದು.

ಈಗ ಹೇಳಲು ಹೊರಟಿದ್ದು ಈ ಮಹಾನುಭಾವರ ಕತೆಯನ್ನಲ್ಲ. ಇದೇ ದಾವಣಗೆರೆ ಜಿಲ್ಲೆಯಲ್ಲಿ 20 ವರ್ಷಗಳ ಹಿಂದೆ ಪಂಪಾಪತಿ ಎಂಬ ಕಮ್ಯುನಿಸ್ಟ್ ಪಕ್ಷದ ಶಾಸಕರೊಬ್ಬರಿದ್ದರು. ಜವಳಿಗಿರಣಿಯಲ್ಲಿ ಕಸ ಗುಡಿಸುತ್ತಿದ್ದ ಪಂಪಾಪತಿ ದುಡಿಯುವ ಜನರ ಬೆಂಬಲದಿಂದ ದಾವಣಗೆರೆ ನಗರಸಭಾಧ್ಯಕ್ಷರಾಗಿ ನಂತರ ಶಾಸಕರಾಗಿ ಸಲ್ಲಿಸಿದ ಸೇವೆಯನ್ನು ಈ ಕೆಟ್ಟ ಕಾಲದಲ್ಲಿ ನಾವು ಸ್ಮರಿಸಬೇಕಾಗಿದೆ. ಇಂಥವರು ಚರಿತ್ರೆಯ ಪುಟಗಳಲ್ಲಿ ಮರೆತು ಹೋಗಬಾರದು ಎಂಬ ಕಾಳಜಿ ಯಿಂದ ದಾವಣಗೆರೆಯ ಅವರ ಕಿರಿಯ ಸಂಗಾತಿ ಇಮ್ತಿಯಾಝ್ ಹುಸೈನ್ ಅವರು ಇತ್ತೀಚೆಗೆ ‘ಕಪ್ಪುನೆಲದ ಕೆಂಪುಗಾಥೆ’ ಎಂಬ ಪುಸ್ತಕ ಬರೆದಿದ್ದಾರೆ. ಅದನ್ನು ಓದಿದರೆ ಅಂದಿನ ಮತ್ತು ಇಂದಿನ ರಾಜಕೀಯದ ನಡುವಿನ ವ್ಯತ್ಯಾಸ ಅರ್ಥ ಮಾಡಿಕೊಳ್ಳಬಹುದು.

ಕರ್ನಾಟಕದ ಮಧ್ಯದಲ್ಲಿ ಇರುವ ನಗರ ದಾವಣಗೆರೆ. ಅದು ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ, ಮಲೆನಾಡು ಬಯಲುಸೀಮೆಗಳ ನಡುವಿನ ಕೊಂಡಿಯಂತಿದೆ. ಜವಳಿ ಉದ್ಯಮಕ್ಕೆ ಹೆಸರಾದ ಅದನ್ನು ಕರ್ನಾಟಕದ ಮ್ಯಾಂಚೆಸ್ಟರ್ ಎಂದು ಕರೆಯುತ್ತಿದ್ದರು. ನಂತರ ಅದು ಕರ್ನಾಟಕದ ಮಾಸ್ಕೋ ಎಂದು ಹೆಸರಾಯಿತು.

ಕಳೆದ ಶತಮಾನದ ಮೂರು ಮತ್ತು ನಾಲ್ಕನೇ ದಶಕದಲ್ಲಿ ರಾಜನಹಳ್ಳಿ ಹನುಮಂತಪ್ಪನವರು ಇಲ್ಲಿ ದಾವಣಗೆರೆ ಕಾಟನ್ ಮಿಲ್ ಆರಂಭಿಸಿದರು. ಆಗ ಉತ್ತರ ಕರ್ನಾಟಕದಿಂದ ಅದರಲ್ಲೂ ಬಿಜಾಪುರ, ರಾಯಚೂರು, ಗದಗ ಮುಂತಾದ ಜಿಲ್ಲೆಗಳಿಂದ ಅಲ್ಲಿನ ಬರಗಾಲದ ಪರಿಣಾಮವಾಗಿ ರೈತರು, ಕೂಲಿ ಕಾರ್ಮಿಕರು ದಾವಣಗೆರೆಗೆ ವಲಸೆ ಬರಲಾರಂಭಿಸಿದರು. ಹೀಗಾಗಿ ದಾವಣಗೆರೆಯದ್ದು ಉತ್ತರ ಮತ್ತು ದಕ್ಷಿಣ ಕರ್ನಾಟಕದ ಸಮ್ಮಿಶ್ರ ಸಂಸ್ಕೃತಿಯ ಇತಿಹಾಸ.

ಇಂಥ ದಾವಣಗೆರೆ 30 ವರ್ಷಗಳ ಹಿಂದೆ ಹೇಗಿತ್ತು? ಹೇಗಾಯಿತು ಎಂದು ತಿಳಿಯಲು ಇಮ್ತಿಯಾಝ್‌ರ ಈ ಪುಸ್ತಕ ಓದಬೇಕು. ದಾವಣಗೆರೆಯ ಜೊತೆ ನನಗೆ ಎಪ್ಪತ್ತರ ದಶಕದಿಂದ ಒಡನಾಟ. ಇಮ್ತಿಯಾಝ್ ಪುಸ್ತಕ ಓದುವಾಗ ಆ ದಿನಗಳು ನೆನಪಿಗೆ ಬಂದವು. ದುಡಿಯುವ ಜನ ಜಾತಿ, ಮತಗಳ ಅಡ್ಡಗೋಡೆಗಳನ್ನು ಕೆಡವಿ ಒಂದಾಗಿ ತಮ್ಮ ಶಕ್ತಿಯನ್ನು ಪ್ರದರ್ಶಿಸಿದ ಉದಾಹರಣೆಗಳು ಅಪರೂಪ.ಆದರೆ ಜಾಗತಿಕ ಇತಿಹಾಸದಲ್ಲಿ 1871ರಲ್ಲಿ ಪ್ಯಾರಿಸ್ ನಗರದ ದುಡಿಯುವ ಜನ 70 ದಿನ ಹೋರಾಟ ನಡೆಸಿ ಪ್ಯಾರಿಸ್ ನಗರವನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡಿದ್ದರು. ನಮ್ಮ ದೇಶದಲ್ಲಿ ಸೊಲ್ಲಾಪುರದ ಜವಳಿ ಕಾರ್ಮಿಕರು ಒಂದು ವಾರ ನಗರವನ್ನು ತಮ್ಮ ವಶಕ್ಕೆ ತೆಗೆದುಕೊಂಡಿ ದ್ದರು. 1974ರಲ್ಲಿ ಸೊಲ್ಲಾಫುರದಲ್ಲಿ ಮಹಾರಾಷ್ಟ್ರದ ಕಮ್ಯುನಿಸ್ಟ್ ಪಕ್ಷದ ಸಮ್ಮೇಳನ ನಡೆದಾಗ ನಾವು ಬಿಜಾಪುರದಿಂದ ನರಸಿಂಗರಾವ್ ಕುಲಕರ್ಣಿ, ಪ್ರಕಾಶ ಹಿಟ್ನಳ್ಳಿ ಮುಂತಾದವರು ಸೊಲ್ಲಾಪುರ ಸಮ್ಮೇಳನಕ್ಕೆ ಹೋದಾಗ ಭಾರತದ ಕಮ್ಯುನಿಸ್ಟ್ ಪಕ್ಷದ ಸಂಸ್ಥಾಪಕರಲ್ಲಿ ಒಬ್ಬರಾದ ಶ್ರೀಪಾದ ಅಮೃತ ಡಾಂಗೆಯವರು ‘ಸೊಲ್ಲಾಪುರ ಇನ್ನೊಂದು ಪ್ಯಾರಿಸ್ ಕಮ್ಯೂನ್’ ಎಂದು ಹೆಮ್ಮೆಯಿಂದ ವರ್ಣಿಸಿದ್ದರು. ಇದೇ ಸಾಲಿಗೆ ನಿಲ್ಲುವ ದಾವಣಗೆರೆಯ ಕಾರ್ಮಿಕ ವರ್ಗದ ಇತಿಹಾಸ ರೋಮಾಂಚಕಾರಿಯಾದದ್ದು.

ದಾವಣಗೆರೆಯಲ್ಲಿ ಕೆಂಬಾವುಟ ಹಾರಾಡಿದ ಕತೆ ಸಾಮಾನ್ಯವಾದುದಲ್ಲ. ಅದಕ್ಕಾಗಿ ದುಡಿಯುವ ಜನ ತಮ್ಮ ನೆತ್ತರಿನ ಬೆಲೆ ತೆತ್ತರು.ಆಗ ತಾನೇ ಕಣ್ಣು ಬಿಡುತ್ತಿರುವ ಶ್ರಮಿಕರ ಧ್ವನಿಯನ್ನು ಅಡಗಿಸಲು ಮಾಲಕ ವರ್ಗ ನಾನಾ ಕಸರತ್ತು ನಡೆಸಿತು. ಗೂಂಡಾ ದಾಳಿಗಳು ನಡೆದವು. ಸುರೇಶ್ ಮತ್ತು ಶೇಖರಪ್ಪ ಎಂಬ ಯುವ ಕಾರ್ಮಿಕ ನಾಯಕರನ್ನು ಹಾಡಹಗಲು ಹತ್ಯೆ ಮಾಡ ಲಾಯಿತು. ಅದಕ್ಕಿಂತ ಮೊದಲು ಕಾರ್ಮಿಕ ಸಂಘಟನೆ ಆರಂಭವಾಗುವಾಗ ಸಂಘಟನೆ ಕಟ್ಟಲು ಮಂಗಳೂರಿನಿಂದ ಬಂದ ಅಡ್ಡೂರು ಶಿವಶಂಕರರಾವ್, ಬಿ.ವಿ.ಕಕ್ಕಿಲ್ಲಾಯರು, ಬೆಂಗಳೂರಿನ ಎನ್.ಡಿ.ಶಂಕರ್, ನರಸಿಂಹನ್ ಹೀಗೆ ಅನೇಕರು ಪೊಲೀಸರು ಮತ್ತು ಮಾಲಕರ ಗೂಂಡಾಗಳಿಂದ ನಾನಾ ರೀತಿಯ ಚಿತ್ರಹಿಂಸೆ ಅನುಭವಿಸಿದರು.

ಬಸವರಾಜ ಕಟ್ಟೀಮನಿಯವರು ತಮ್ಮ ಜ್ವಾಲಾಮುಖಿಯ ಮೇಲೆ ಕಾದಂಬರಿಯಲ್ಲಿ ದಾವಣಗೆರೆಯ ಕಾರ್ಮಿಕ ಹೋರಾಟದ 40-50ರ ದಶಕದ ಇತಿಹಾಸವನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ.ಇಮ್ತಿಯಾಝ್ ಹುಸೈನರು ಅದಕ್ಕಿಂತ ಭಿನ್ನವಾಗಿ 70-80ರ ದಶಕದ ಘಟನಾವಳಿಗಳ ಮೇಲೆ ಬೆಳಕು ಚೆಲ್ಲಿದ್ದಾರೆ.

1970ರ ಎಪ್ರಿಲ್ 1ರಂದು ಎಐಟಿಯುಸಿ ಕಾರ್ಮಿಕ ಸಂಘಟನೆಯ ನಾಯಕರಾದ ಸುರೇಶ್, ಶೇಖರಪ್ಪ ಹಾಗೂ ಪಂಪಾಪತಿ ಅವರ ಮೇಲೆ ಮಾಲಕ ವರ್ಗ ದಿಂದ ಮಾರಣಾಂತಿಕ ಹಲ್ಲೆ ನಡೆಯಿತು. ಈ ಘಟನೆಯಲ್ಲಿ ಸುರೇಶ್ ಮತ್ತು ಶೇಖರಪ್ಪ ಅಸುನೀಗಿದರು. ಪಂಪಾಪತಿ ಬದುಕಿ ಉಳಿದರು. ಕಾರ್ಮಿಕ ಸಂಘಟನೆಗಳ ನಾಯಕತ್ವ ಅವರ ಕೈಗೆ ಬಂತು. ಎರಡನೇ ವರ್ಗದವರೆಗೆ ಮಾತ್ರ ಓದಿದ್ದ ಪಂಪಾಪತಿ ಅವರಿಗೆ ಇದು ಸವಾಲಾಗಿ ಪರಿಣಮಿಸಿತು. ನಂತರ ನಡೆದ ದಾವಣಗೆರೆ ನಗರಸಭಾ ಚುನಾವಣೆಯಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ 13

ಸ್ಥಾನಗಳನ್ನು ಗೆದ್ದು 35 ಸದಸ್ಯ ಬಲದ ನಗರಸಭೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ನಗರದ 8 ಜವಳಿ ಗಿರಣಿಗಳ ಸಾವಿರಾರು ಕಾರ್ಮಿಕರು ಒಂದಾಗಿ ತಮ್ಮ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದರು. ಕಮ್ಯುನಿಸ್ಟ್ ಪದಿಂದ ಗೆದ್ದವರಲ್ಲಿ ಡಾ. ಘನಿಸಾಹೇಬರು ಮತ್ತು ಶಶಿಕಲಾ ಅವರನ್ನು ಹೊರತುಪಡಿಸಿದರೆ ಬಹುತೇಕ ಎಲ್ಲರೂ ಮಿಲ್‌ಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು. ಆಗ ಬಿಜೆಪಿ ಇರಲಿಲ್ಲ. ಶಾಮನೂರು ಶಿವಶಂಕರಪ್ಪ ಅವರಂತಹ ಸಿರಿವಂತ ಕೋಟ್ಯಧೀಶರು ಕಾಂಗ್ರೆಸ್‌ನಲ್ಲಿದ್ದರು. ಈ ಸಂದರ್ಭದಲ್ಲಿ ನಗರಾ ಧ್ಯಕ್ಷರು ಯಾರಾಗಬೇಕೆಂಬ ಪ್ರಶ್ನೆ ಎದುರಾದಾಗ ವಿದ್ಯೆಯಿಲ್ಲದ ಪಂಪಾಪತಿ ಬದಲಿಗೆ ಸಿಪಿಐ ಬೆಂಬಲಿತ ಅಭ್ಯರ್ಥಿ ಪಿ.ಬಸವನಗೌಡರ ವಕೀಲರ ಹೆಸರು ಪ್ರಸ್ತಾಪಕ್ಕೆ ಬಂತು. ಆದರೆ, ಕಮ್ಯುನಿಸ್ಟ್ ಪಕ್ಷದ ಒಮ್ಮತದ ಆಯ್ಕೆ ಪಂಪಾಪತಿ ಆಗಿದ್ದರು. ಹೀಗೆ ಜವಳಿ ಗಿರಣಿ ಕಾರ್ಮಿಕ ಪಂಪಾಪತಿ ನಗರದ ಪ್ರಥಮ ಪ್ರಜೆಯಾದರು.

ವಿದ್ಯೆಯಿಲ್ಲದ ಪಂಪಾಪತಿ ಹೇಗೆ ಆಡಳಿತ ನಡೆಸುತ್ತಾರೆ ಎಂದು ಮಧ್ಯಮ ವರ್ಗದ ಜನರು ಕುತೂಹಲದಿಂದ ನೊಡುತ್ತಿದ್ದರು. ಆದರೆ, ಯಾವ ವಿದ್ಯಾ ವಂತರು ಮಾಡಲಾಗದ ಕೆಲಸಗಳನ್ನು ಪಂಪಾಪತಿ ಮಾಡಿ ತೋರಿಸಿದರು. ಅವರ ದಕ್ಷ, ಪಾರದರ್ಶಕ ಆಡಳಿತ ಇಡೀ ರಾಜ್ಯದ ಗಮನ ಸೆಳೆಯಿತು. ಆಗಿನ ಮುಖ್ಯ ಮಂತ್ರಿ ದೇವರಾಜ ಅರಸು ಅವರು ಪಂಪಾಪತಿ ಆಡಳಿತವನ್ನು ಮನದುಂಬಿ ಶ್ಲಾಘಿಸಿದರು.

ಪ್ರತಿನಿತ್ಯ ಬೆಳಗಿನ ಜಾವ 4 ಗಂಟೆಗೆ ಎದ್ದು ಪಾಲಿಕೆಯ ಸಿಬ್ಬಂದಿಯೊಂದಿಗೆ ನಗರ ಪರ್ಯಟನೆಗೆ ಹೊರಡುತ್ತಿದ್ದ ಪಂಪಾಪತಿ ಅವರು ಜನಸಾಮಾನ್ಯರ ಕುಂದು ಕೊರತೆ ಆಲಿಸಿದರು. ಸಾರ್ವಜನಿಕ ರಸ್ತೆಗಳು ಸ್ವಚ್ಛ ಇರುವಂತೆ ನೋಡಿಕೊಂಡರು. ನೀರು ಪೂರೈಕೆ ಸರಾಗವಾಗುವಂತೆ ಕ್ರಮ ಕೈಗೊಂಡರು. ಎಲ್ಲಕ್ಕಿಂತ ಮುಖ್ಯವಾಗಿ ದಾವಣಗೆರೆಯಲ್ಲಿ ಸಾವಿರಾರು ಮರಗಳನ್ನು ನೆಟ್ಟು ಬೆಳೆಸಿದರು. ಮರಗಳು ಬೆಳೆಯುವವರೆಗೆ ಕಾರ್ಮಿಕರು ಕಾವಲು ಕಾಯ್ದರು. ಇಡೀ ದಾವಣಗೆರೆ ನಗರ ಪಂಪಾಪತಿ ಅವರನ್ನು ಕೊಂಡಾಡತೊಡಗಿತು.

ಎಲ್ಲವೂ ಜಾತಿ, ಕೋಮು ಹಾಗೂ ಹಣದ ಮೇಲೆ ನಡೆಯುತ್ತಿರುವ ಇಂದಿನ ದಿನಗಳಲ್ಲಿ ಪಂಪಾಪತಿ ಅವರು ದಾವಣಗೆರೆಯ ಪ್ರಥಮ ಪ್ರಜೆಯಾಗಿದ್ದು, ನಂತರ ಎರಡು ಬಾರಿ ಶಾಸಕರಾಗಿದ್ದು ನಿಜಕ್ಕೂ ಅಚ್ಚರಿಯ ಸಂಗತಿ.

ತಮಿಳುನಾಡು ಮೂಲದ ಪಂಪಾಪತಿ ಅವರ ತಂದೆ ಹೊಸಪೇಟೆಯ ತುಂಗಭದ್ರಾ ಅಣೆಕಟ್ಟು ಕಟ್ಟುವಾಗ ಕೂಲಿ ಕಾರ್ಮಿಕರಾಗಿ ವಲಸೆ ಬಂದವರು. ಅಣೆಕಟ್ಟು ಕಟ್ಟುವ ಕೆಲಸ ಪೂರ್ಣಗೊಂಡ ನಂತರ ಅವರ ಕುಟುಂಬ ದಾವಣಗೆರೆಗೆ ವಲಸೆ ಬಂತು. ದಾವಣಗೆರೆಯಲ್ಲಿ ಪಂಪಾಪತಿ ಕಾಟನ್ ಮಿಲ್‌ನಲ್ಲಿ ಕಸಗುಡಿಸುವ ಕೆಲಸಕ್ಕೆ ಸೇರಿದರು. ಮುಂದೆ ಸಂಘಟನೆಯಲ್ಲಿ ತೊಡಗಿಸಿ

ಕೊಂಡರು. ನಂತರ ಕಮ್ಯುನಿಸ್ಟ್ ಪಕ್ಷದ ಪರವಾಗಿ ನಗರಸಭೆಗೆ ಗೆದ್ದು ಅಧ್ಯಕ್ಷರಾದರು. ಶಾಸಕರಾದರು. ಆದರೆ, ದಾವಣಗೆರೆಯಲ್ಲಿ ಪಂಪಾಪತಿ ಅವರ ಸಮುದಾಯದ 50 ಮನೆಗಳೂ ಇಲ್ಲ. ಕೈಯಲ್ಲಿ ಕಾಸಿಲ್ಲ.

ಆದರೆ, ಅವರ ಗೆಲುವಿನ ಮೂಲ ವರ್ಗಸಕ್ತಿ. ದುಡಿಯುವ ಜನರ ರಾಜಕೀಯ ಪ್ರಜ್ಞೆ, ಕೆಂಬಾವುಟದ ಒಲವು. ಹೀಗೆ ಪಂಪಾಪತಿ ಕರ್ನಾಟಕದ ಇತಿಹಾಸದಲ್ಲಿ ದಾಖಲೆಯನ್ನು ಸ್ಥಾಪಿಸಿದರು.

ಕಮ್ಯುನಿಸ್ಟರು ಬಂದರು ಎಲ್ಲೆಡೆ ಬೆಂಕಿ ಹಚ್ಚುತ್ತಾರೆ ಎಂಬ ಪಟ್ಟಭದ್ರ ಹಿತಾಸಕ್ತಿಗಳ ಅಪಪ್ರಚಾರ ಮೆಟ್ಟಿ ನಿಂತು ಸುಮಾರು 20 ವರ್ಷ ಈ ನಗರದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರು. ಪಂಪಾಪತಿ ಅವರ ಪ್ರಭಾವ ಎಷ್ಟಿತ್ತೆಂದರೆ ಅಶೋಕ ರಸ್ತೆಯ ಕಮ್ಯುನಿಸ್ಟ್ ಪಕ್ಷದ ಕಚೇರಿಯಲ್ಲಿ ಜನಸಾಮಾನ್ಯರ ಮನೆಯ ವ್ಯಾಜ್ಯ, ಗಂಡ ,ಹೆಂಡತಿ ಜಗಳಗಳನ್ನು ಅವರು ಬಗೆ ಹರಿಸುತ್ತಿದ್ದರು.ಅವರೊಂದಿಗೆ ಎಚ್.ಕೆ.ರಾಮಚಂದ್ರಪ್ಪ, ತಿಪ್ಪೇಸ್ವಾಮಿ, ಅಬ್ದುಲ್ ರಹ್ಮಾನ್ ಸಾಬ್, ಜಕ್ರಿಯಾಸಾಬ್, ಅಬ್ದುಲ್ ಹಮೀದ್, ಆನಂದತೀರ್ಥ ಮುಂತಾದ ಸಂಗಾತಿಗಳಿದ್ದರು.

ಆ ಕಾಲಘಟ್ಟದಲ್ಲಿ ಪಂಪಾಪತಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಪದಚ್ಯುತಗೊಳಿಸುವ ಮಸಲತ್ತು ನಡೆಯಿತು. ದಾವಣಗೆರೆಯ ಮಿಲ್ ಮಾಲಕರು, ಧನಿಕರು, ಶಿಕ್ಷಣ ವ್ಯಾಪಾರಿಗಳು ಸಿಪಿಐ ಸದಸ್ಯರನ್ನು ಖರೀದಿಸಲು ಹೇಗೆಲ್ಲ ಪ್ರಯತ್ನಿಸಿದರು ಮತ್ತು ಹೇಗೆ ವಿಫಲಗೊಂಡರು ಎಂಬುದನ್ನು ಇಮ್ತಿಯಾಝ್ ದಾಖಲಿಸಿದ್ದಾರೆ.

 ಪಂಪಾಪತಿ ಅವರ ಕೊನೆಯ ದಿನಗಳಲ್ಲಿ ಕಮ್ಯುನಿಸ್ಟ್ ಚಳವಳಿ ಇಳಿಮುಖ ವಾಗಲು ಕಾರಣವೇನು ಎಂಬುದನ್ನು ಅತ್ಯಂತ ವಸ್ತುನಿಷ್ಠವಾಗಿ ವಿಶ್ಲೇಷಣೆ ಮಾಡಿ

ದ್ದಾರೆ. ಆ ಕಾಲದಲ್ಲಿ ಲಕ್ಷಾಂತರ ರೂ. ಮತ್ತು ನಿವೇಶನದ ಆಸೆ ತೋರಿಸಿದರೂ ಶಶಿಕಲಾ ಮತ್ತು ಜಹಿರಾಬಿ ಹೇಗೆ ಕಮ್ಯುನಿಸ್ಟ್ ಪಕ್ಷದ ಪಂಪಾಪತಿ ಅವರ ಜೊತೆ ಗಟ್ಟಿಯಾಗಿ ನಿಂತರೆಂಬುದನ್ನು ಇಮ್ತಿಯಾಝ್ ಈಚೆಗೆ ನಡೆದಿದೆ ಎಂಬಷ್ಟೇ ಪರಿಣಾಮಕಾರಿಯಾಗಿ ದಾಖಲಿಸಿದ್ದಾರೆ.

ದಾವಣಗೆರೆ ವೀರಶೈವ, ಲಿಂಗಾಯತ ಪ್ರಾಬಲ್ಯದ ನಗರ, ಕೋಟ್ಯಧೀಶರ ಕೋಟೆ. ಇಂಥ ನಗರದಲ್ಲಿ ಜವಳಿ ಗಿರಣಿಯ ಕಸಗುಡಿಸುವ ಕಾರ್ಮಿಕ ನೊಬ್ಬ ನಗರಾಧ್ಯಕ್ಷನಾಗಿ, ಎರಡು ಬಾರಿ ಶಾಸಕನಾಗಿ ದಕ್ಷ ಆಡಳಿತ ನೀಡುವುದು ಸಾಮಾನ್ಯ ಸಂಗತಿಯಲ್ಲ.

ಅದು ಇಂದಿರಾಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿದ ಕಾಲ.ಸಿಪಿಐ ಇಂದಿರಾಗಾಂಧಿ ಅವರಿಗೆ ಆರಂಭದಲ್ಲಿ ಬೆಂಬಲಿಸಿದ್ದರಿಂದ ಅಂಥ ತೊಂದರೆ ಇರಲಿಲ್ಲ. ಆಗ ಬಿಜಾಪುರದ ನಾವು ಕೆಲವು ಗೆಳೆಯರು ಪ್ರಗತಿಶೀಲ ಸಾಹಿತ್ಯ ಚಳವಳಿಗೆ ಮರುಜೀವ ಕೊಡಲು ಹೊರಟೆವು. ನಾನೇ ಅದರ ನೇತೃತ್ವ ವಹಿಸಿದ್ದೆ. ಧಾರವಾಡಕ್ಕೆ ಹೋಗಿ ಬಸವರಾಜ ಕಟ್ಟೀಮನಿ ಅವರನ್ನು ಮತ್ತು ಬೆಂಗಳೂರಿಗೆ ಹೋಗಿ ನಿರಂಜನ ಅವರನ್ನು ಭೇಟಿ ಮಾಡಿ ಅವರ ಮುಂದೆ ಪ್ರಸ್ತಾಪಿಸಿದೆವು. ಪ್ರಗತಿಶೀಲ ಸಾಹಿತ್ಯ ಚಳವಳಿಗೆ ಪ್ರಗತಿಪಂಥ ಎಂದು ಹೆಸರಿಟ್ಟು ದಾವಣಗೆರೆಯಲ್ಲಿ ಸಮ್ಮೇಳನ ಮಾಡಿದೆವು.ಈ ಸಮ್ಮೇಳನಕ್ಕೆ ಸಂಪೂರ್ಣ ನೆರವು ನೀಡಿ ಯಶಸ್ವಿಯಾಗಿಸಿದವರು ಪಂಪಾಪತಿಯವರು.

ಆದರೆ, ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ. ಸೋವಿಯತ್ ರಶ್ಯದ ಸಮಾಜವಾದಿ ವ್ಯವಸ್ಥೆ ಕುಸಿದ ನಂತರ ಜಾಗತಿಕ ಪರಿಸ್ಥಿತಿ ಬದಲಾಯಿತು. ಮಾರುಕಟ್ಟೆ ಆರ್ಥಿಕತೆಯ ಅಬ್ಬರ ಆರಂಭವಾಯಿತು. ಜಾಗತೀಕರಣದ ಪರಿಣಾಮವಾಗಿ ಜವಳಿ ಉದ್ಯಮ ಬಿಕ್ಕಟ್ಟಿನ ಸುಳಿಗೆ ಸಿಲುಕಿತು. ದಾವಣಗೆರೆಯ ಜವಳಿ ಗಿರಣಿ ಗಳು ಒಂದೊಂದಾಗಿ ಮುಚ್ಚತೊಡಗಿದವು. ಅದೇ ವೇಳೆ ಅಯೋಧ್ಯೆಗೆ ಅಡ್ವಾಣಿಯ ರಥಯಾತ್ರೆ ಎಂಬ ರಕ್ತಯಾತ್ರೆ ಹೊರಟಿತು. ದಾವಣಗೆರೆಯಲ್ಲೂ ರಾಮಜ್ಯೋತಿ ಮೆರವಣಿಗೆ ನಡೆದು ಭಾರೀ ಕೋಮು ಗಲಭೆ ನಡೆಯಿತು. ದುಡಿಯುವ ಜನರನ್ನು ಕೋಮು ಆಧಾರದಲ್ಲಿ ವಿಭಜಿಸುವಲ್ಲಿ ಕೋಮು ವಾದಿ ಶಕ್ತಿಗಳು ಯಶಸ್ವಿಯಾದವು.

ಜೊತೆಗೆ ಕಮ್ಯುನಿಸ್ಟ್ ಪಕ್ಷದೊಳಗಿನ ಆಂತರಿಕ ದೌರ್ಬಲ್ಯ, ಪಂಪಾಪತಿ ನಂತರದ ನಾಯಕರ ಲೋಪದೋಷ, ಜಾತೀಯತೆ ಮೇಲೆ ಇಮ್ತಿಯಾಝ್ ಹುಸೈನ್ ಬೆಳಕು ಚೆಲ್ಲಿದ್ದಾರೆ. ಯಾವುದೇ ಮುಲಾಜಿಲ್ಲದೆ ಕಣ್ಣಿಗೆ ಕಂಡಿದ್ದನ್ನು, ಅನುಭವಿಸಿದ್ದನ್ನು ಬರೆದಿದ್ದಾರೆ. ಇಮ್ತಿಯಾಝ್ ಹುಸೈನ್ ಇತಿಹಾಸದ ವಿದ್ಯಾರ್ಥಿ ಅಲ್ಲ. ವೃತ್ತಿ ನಿರತ ಬರಹಗಾರರಲ್ಲ.ಆದರೆ ಜನಸಾಮಾನ್ಯರ ಮನಸ್ಸಿನಿಂದ ಮರೆಯಾದ, ಹೊಸ ಪೀಳಿಗೆಗೆ ಗೊತ್ತೇ ಇಲ್ಲದ ಕರ್ನಾಟಕದ ರಾಜಕೀಯ ಇತಿಹಾಸದ ಅದರಲ್ಲೂ ದಾವಣಗೆರೆಯ ಮಹತ್ವದ ವಿದ್ಯಮಾನಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಭಾರತದಲ್ಲಿ ಎಡಪಂಥೀಯರು ಅದರಲ್ಲೂ ವಿಶೇಷವಾಗಿ ಕಮ್ಯುನಿಸ್ಟರು ಸ್ವಾತಂತ್ರ್ಯ ಹೋರಾಟ, ನಂತರದ ಜನಪರ ಹೋರಾಟಗಳಲ್ಲಿ ಸಾಕಷ್ಟು ತ್ಯಾಗ, ಬಲಿದಾನ ಮಾಡಿದ್ದಾರೆ.

ಆದರೆ, ಅವರ ಇತಿಹಾಸ ಸರಿಯಾಗಿ ದಾಖಲಾಗಿಲ್ಲ. ಹೀಗಾಗಿ ನಕಲಿ ದೇಶ ಭಕ್ತರು ಸುಳ್ಳು ಇತಿಹಾಸ ರಚಿಸಿ, ಉರಿಗೌಡ, ನಂಜೇಗೌಡರಂಥ ಇತಿಹಾಸದಲ್ಲಿ ಇಲ್ಲದ ಪಾತ್ರಗಳನ್ನು ಓಟಿಗಾಗಿ ಸೃಷ್ಟಿಸಿ ಹೀರೋಗಳಾಗುತ್ತಿದ್ದಾರೆ.

ಆದರೆ, ಅಪಾರ ತ್ಯಾಗ, ಬಲಿದಾನದ ಇತಿಹಾಸ ಇರುವ ಎಡಪಂಥೀಯರು ತಮ್ಮ ಇತಿಹಾಸವನ್ನು ದಾಖಲಿಸುವಲ್ಲಿ ಸಫಲರಾಗಿಲ್ಲ. ಈ ಕೊರತೆಯನ್ನು ತುಂಬಿದ ಇಮ್ತಿಯಾಝ್ ಹುಸೈನ್ ಅವರು ಎಲ್ಲೂ ಪೂರ್ವಾಗ್ರಹಕ್ಕೆ ಒಳಗಾಗದೆ ಇದ್ದುದನ್ನು ಇದ್ದಂತೆ ಬರೆದಿದ್ದಾರೆ. ಒಂದೊಂದು ಘಟನೆಗಳನ್ನು ಕ್ರಮಬದ್ಧವಾಗಿ ಎಲ್ಲೂ ಅತಿರಂಜಿತ ಗೊಳಿಸದೆ ನಮ್ಮ ಮುಂದಿಟ್ಟಿದ್ದಾರೆ. ಸರಳವಾಗಿ ಓದಿಸಿಕೊಂಡು ಹೋಗುವ ಈ ಪುಸ್ತಕ ಜನಪರ ಹೋರಾಟಗಳಿಗೆ ಮತ್ತು ಚಳವಳಿಗಾರರಿಗೆ ಗೈಡ್‌ನಂತಿದೆ ಎಂದರೆ ಅತಿಶಯೋಕ್ತಿಯಲ್ಲ.

 ದಾವಣಗೆರೆಯ ಹೋರಾಟದ ಚರಿತ್ರೆಯಂತೆ ಕರ್ನಾಟಕದ ಇತರ ಭಾಗಗಳಲ್ಲಿ ನಡೆದ ಸ್ವಾತಂತ್ರ್ಯಕ್ಕಿಂತ ಮೊದಲಿನ ಮತ್ತು ನಂತರದ ಜನಪರ, ರೈತಪರ, ಕಾರ್ಮಿಕ ಪರ ಹೋರಾಟಗಳ ದಾಖಲೀಕರಣ ಆಗಬೇಕಾಗಿದೆ.

ಕಮ್ಯುನಿಸ್ಟ್ ಪಕ್ಷಗಳ ಕಚೇರಿಗಳಲ್ಲೂ ಅಗತ್ಯದ ಮಾಹಿತಿಯ ದಾಖಲಾತಿ ಸರಿಯಾಗಿ ಆಗಿಲ್ಲ. ಆದರೆ ಸಂಶೋಧನಾ ವಿದ್ಯಾರ್ಥಿಗಳಿಗೆ ಮತ್ತು ಮುಂದಿನ ಪೀಳಿಗೆಯ ಚಳವಳಿ ಗಾರರಿಗೆ ಇದರ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿ ದವರು ಚಿಂತನೆ ಮಾಡಬೇಕು.

 (ಇಮ್ತಿಯಾಝ್ ಹುಸೇನ್ ಪುಸ್ತಕಕ್ಕಾಗಿ ಸಂಪರ್ಕಿಸಿ-9448534347)

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top