ಕಂಗನಾ ಎದುರು ಹೀರೋಯಿನ್ ಆಗಲು ಸಿದ್ಧ : ಇರ್ಫಾನ್ ಖಾನ್
ರಾಷ್ಟ್ರ ಪ್ರಶಸ್ತಿ ಪುರಸ್ಕೃತ, ಇತ್ತೀಚಿಗೆ ಭಾರೀ ಬೇಡಿಕೆಯ ನಟಿಯಾಗಿರುವ ಕಂಗನಾ ರಾಣಾವತ್ ಅಂತಾರಾಷ್ಟ್ರೀಯ ಖ್ಯಾತಿಯ ನಟ ಇರ್ಫಾನ್ ಖಾನ್ ಜೊತೆ ನಟಿಸಲು ಒಲ್ಲೆ ಎಂದರೆ ? ಹೌದು ಎನ್ನುತ್ತವೆ ಬಾಲಿವುಡ್ ಮೂಲಗಳು.
ಇದಕ್ಕೆ ಪ್ರತಿಕ್ರಿಯಿಸಿರುವ ಇರ್ಫಾನ್, ಕಂಗನಾ ಎದುರು ಹೀರೋಯಿನ್ ಆಗಲು ನನಗೆ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ . ಇದು ಕಂಗನಾಗೆ ಕುಟುಕುವ ಯತ್ನವೇ ಅಥವಾ ಹೃತ್ಪೂರ್ವಕ ಹೊಗಳಿಕೆಯೇ ಎಂದು ನೀವೇ ನಿರ್ಧರಿಸಬೇಕು.
ನಿಜವಾಗಿ ಆಗಿದ್ದಿಷ್ಟು. ನಿರ್ದೇಶಕ ಸಾಯಿ ಕಬೀರ್ ಅವರ ಡಿವೈನ್ ಲವರ್ಸ್ ಚಿತ್ರದಲ್ಲಿ 49 ವರ್ಷದ ಇರ್ಫಾನ್ ಹಾಗು 29 ವರ್ಷದ ಕಂಗನಾ ಜೋಡಿಯಾಗಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಡೇಟ್ಸ್ ಸಮಸ್ಯೆ ಮುಂದಿಟ್ಟು ಕಂಗನಾ ಚಿತ್ರದಿಂದ ಹಿಂದೆ ಸರಿದರು. ಆದರೆ ನಿಜವಾಗಿ ಇರ್ಫಾನ್ ಎದುರು ನಾಯಕಿಯಾಗುವುದು ಕಂಗನಾಗೆ ಇಷ್ಟವಿರಲಿಲ್ಲ ಎಂದು ವದಂತಿಗಳಿವೆ. ಸಾಲದ್ದಕ್ಕೆ ಇತ್ತೀಚಿಗೆ ಆಕೆ ನಾಯಕಿ ಪ್ರಧಾನ ಚಿತ್ರಗಳಲ್ಲೇ ಮಿಂಚಿ, ಪ್ರಶಸ್ತಿಗಳನ್ನು ಬಾಚುತ್ತಿದ್ದಾರೆ.
ಅದಕ್ಕೆ ಇರ್ಫಾನ್ ಸರಿಯಾಗಿಯೇ ಪ್ರತಿಕ್ರಿಯಿಸಿದ್ದಾರೆ. " ಕಂಗನಾ ಈಗ ಬಹಳ ಎತ್ತರಕ್ಕೆ ಏರಿದ್ದಾರೆ. ಹಾಗಾಗಿ ಇನ್ನು ಆಕೆಯೆದುರು ನಾಯಕಿ ಪಾತ್ರ ಇದ್ದರೆ ಮಾತ್ರ ನಾನು ಮಾಡಬಹುದು. ಯಾವುದಾದರೂ ಚಿತ್ರಕ್ಕೆ ಆಕೆ ನಾಯಕನಾಗಿ ನಾನು ನಾಯಕಿಯಾಗಲು ಅವಕಾಶ ಸಿಕ್ಕಿದರೆ ಇದು ಸಾಧ್ಯ " ಎಂದು ಹೇಳಿದ್ದಾರೆ ಇರ್ಫಾನ್. ಯಾರಿಗೆ ಹೇಗೆ ಬೇಕೋ ಹಾಗೆ ಅರ್ಥ ಮಾಡಿಕೊಂಡರಾಯಿತು.