ಜಿಯೋ ಗ್ರಾಹಕರಿಗೆ ಮತ್ತೊಂದು ‘ಸಿಹಿಸುದ್ದಿ’?

ಮುಂಬೈ, ಅ.25: ರಿಲಯನ್ಸ್ ಜಿಯೋದ ಉಚಿತ ವೆಲ್‌ಕಂ ಆಫರ್‌ಗಳು ಟ್ರಾಯ್ ನಿರ್ದೇಶನದನ್ವಯ ಡಿಸೆಂಬರ್ 3 ರಂದು ಅಂತ್ಯಗೊಳ್ಳುವುದೆಂದು ಈ ಹಿಂದೆ ವರದಿಗಳು ತಿಳಿಸಿದ್ದವು. ಆದರೆ ಇದೀಗ ಕೆಲವು ವರದಿಗಳ ಪ್ರಕಾರ ಪರಿಸ್ಥಿತಿಯನ್ನು ಅವಲೋಕಿಸಿ ರಿಲಿಯನ್ಸ್ ಈ ಫ್ರೀ ಆಫರನ್ನುಹೇಗಾದರೂ ಮಾಡಿ ಡಿಸೆಂಬರ್ 3 ರ ನಂತರವೂ ಮುಂದುವರಿಸಿಕೊಂಡು ಹೋಗಲು ಯಾವುದಾದರೂ ದಾರಿಯನ್ನು ಹುಡುಕುವ ಪ್ರಯತ್ನದಲ್ಲಿದೆ.
ತಾನು ಉಚಿತ ಡಾಟಾ ಮತ್ತು ವಾಯ್ಸ್ ಕಾಲ್ ಸೇವೆಗಳನ್ನು ತನ್ನ ಗ್ರಾಹಕರಿಗೆ 2017 ರ ಮಾರ್ಚ್ವರೆಗೆ ಮುಂದುವರಿಸಿಕೊಂಡು ಹೋಗುವ ಸಾಧ್ಯತೆಯಿದೆಯೆಂದು ಸ್ವತಹ ರಿಲಯನ್ಸ್ ಜಿಯೋ ಕೆಲ ವಿಶ್ಲೇಷಕರಿಗೆ ಮಾಹಿತಿ ನೀಡಿದೆಯೆಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
‘‘ಹೆಚ್ಚೆಚ್ಚು ಗ್ರಾಹಕರನ್ನು ಸೆಳೆದು ತನ್ನ ಗುರಿಯಾದ 100 ಮಿಲಿಯನ್ ಗ್ರಾಹಕರನ್ನು ತಲುಪುವ ಉದ್ದೇಶ ಈಡೇರಿಸಿಕೊಳ್ಳಲು ಮಾರ್ಚ್ 2017 ರ ವರೆಗೆ ವೆಲ್‌ಕಂ ಆಫರ್ ಮುಂದುವರಿಯಬಹುದಾಗಿ ಹಾಗೂ ರಿಲಯನ್ಸ್ ಜಿಯೋದ ಡಾಟಾ ದರಗಳು ಪ್ರತಿ ಜಿಬಿಗೆ 130ರೂ.ನಿಂದ 140 ರೂ. ಆಗಿರುತ್ತದೆ’’ಎಂಬ ಮಾಹಿತಿ ಮೋತಿಲಾಲ್ ಒಸ್ವಾಲ್ ವಿಶ್ಲೇಷಕರಿಂದ ಬಂದಿದೆ.
ಟ್ರಾಯ್ ನಿಯಮಾವಳಿಗಳ ಪ್ರಕಾರ ಉಚಿತ ಸೇವೆಗಳನ್ನು90 ದಿನಗಳಿಗಿಂತ ಹೆಚ್ಚು ಕಾಲ ಗ್ರಾಹಕರಿಗೆ ನೀಡುವ ಹಾಗಿಲ್ಲ. ಆದರೆ ಕಂಪೆನಿಯೊಂದು ಜಾರಿಗೆ ತರಬಲ್ಲ ಪ್ರಮೋಷನಲ್ ಆಫರ್ ಗಳಿಗೆ ಯಾವುದೇ ಮಿತಿಯಿರುವುದಿಲ್ಲ ಎಂದು ರಿಲಯನ್ಸ್ ಹೇಳಿಕೊಂಡಿದೆ.
‘‘ರಿಲಯನ್ಸ್ ಜಿಯೋ ಈಗಾಗಲೇ ತನ್ನ ಗ್ರಾಹಕರಿಗೆ ನಿರೀಕ್ಷಿತ ಮಟ್ಟದಲ್ಲಿ ಗುಣವಟ್ಟದ ಸೇವೆ ಒದಗಿಸುವಲ್ಲಿ ಸಫಲವಾಗಿಲ್ಲ. ಗ್ರಾಹಕರ ನಿರೀಕ್ಷೆಯಂತೆ ಸೇವೆ ಒದಗಿಸಲು ಸಮರ್ಥವಾಗುವ ತನಕ ಅವರಿಂದ ಶುಲ್ಕ ಸಂಗ್ರಹಿಸುವುದು ಸರಿಯಾದ ಕ್ರಮವಲ್ಲ,’’ ಎಂದು ಹೇಳಿದ ರಿಲಯನ್ಸ್ ಜಿಯೋ ಇದರ ಯೋಜನಾ ವಿಭಾಗದ ಮುಖ್ಯಸ್ಥ ಅಂಶುಮಾನ್ ಠಾಕುರ್, ಅದೇ ಸಮಯ ಡಿಸೆಂಬರ್ ನಿಂದಾಚೆಗೆ ತನ್ನ ಉಚಿತ ಸೇವೆಗಳನ್ನು ಮುಂದುವರಿಸಿಕೊಂಡು ಹೋಗಲು ಜಿಯೋಗೆ ಟ್ರಾಯ್ ಅನುಮತಿ ಬೇಕಾಗಿಲ್ಲ ಎಂದು ಹೇಳಿಕೊಂಡಿದ್ದಾರೆ.







