ತಿಹಾರ್ ಜೈಲಲ್ಲಿ ಫ್ಯಾಷನ್ ಶೋ!
ಹೊಸದಿಲ್ಲಿ, ಫೆ.9: ತಿಹಾರ್ ಜೈಲಲ್ಲಿ ಫ್ಯಾಷನ್ ಶೋ! ದಂಗಾಗಬೇಡಿ. ಬುಧವಾರ ಇಂಥ ಅಪೂರ್ವ ಕ್ಷಣಕ್ಕೆ ಈ ಜೈಲು ಸಾಕ್ಷಿಯಾಯಿತು. ಜೈಲಿನಲ್ಲಿರುವ ಮಹಿಳಾ ಕೈದಿಗಳೇ ವಿನ್ಯಾಸಗೊಳಿಸಿದ ವಿಶೇಷ ಫ್ಯಾಷನ್ ಡ್ರೆಸ್ ತೊಟ್ಟು, ಬೆಡಗಿಯರು ರ್ಯಾಂಪ್ ಮೇಲೆ ಹೆಜ್ಜೆ ಹಾಕಿದರು.
ಕೇಂದ್ರೀಯ ಜೈಲಿನ ಫ್ಯಾಷನ್ ಲ್ಯಾಬ್ನಲ್ಲಿ ಆಸಕ್ತ ಮಹಿಳಾ ಕೈದಿಗಳಿಗೆ ಫ್ಯಾಷನ್ ಡಿಸೈನಿಂಗ್ ತರಬೇತಿ ನೀಡಲಾಗಿತ್ತು. ಖ್ಯಾತ ಫ್ಯಾಷನ್ ಡಿಸೈನಿಂಗ್ ತರಬೇತಿದಾರರಿಂದ ತರಬೇತಿಗೂ ವ್ಯವಸ್ಥೆ ಮಾಡಿ ಪುನರ್ವಸತಿ ಯೋಜನೆಯಡಿ ಕೌಶಲ ಅಭಿವೃದ್ಧಿಪಡಿಸಲಾಗಿತ್ತು. ಹೀಗೆ ಕೈದಿಗಳೇ ವಿನ್ಯಾಸಗೊಳಿಸಿದ ವಸ್ತ್ರಗಳನ್ನು ತೊಟ್ಟು ಬೆಡಗಿಯರು ರ್ಯಾಂಪ್ ಮೇಲೆ ಹೆಜ್ಜೆಹಾಕಿದರು.
"ಇದು ಕೈದಿಗಳು ಬಿಡುಗಡೆಯಾದ ಬಳಿಕ ಸ್ವಾವಲಂಬಿ ಜೀವನ ನಿರ್ವಹಿಸಿಕೊಳ್ಳಲು ಸಹಕಾರಿಯಾಗುವುದಲ್ಲದೇ ರಾಷ್ಟ್ರೀಯ ಪ್ರಗತಿಗೂ ಕಾರಣವಾಗಲಿದೆ" ಎಂದು ಜೈಲುಗಳ ಮಹಾನಿರ್ದೇಶಕ ಸುಧೀರ್ ಯಾದವ್ ಅಭಿಪ್ರಾಯಪಟ್ಟಿದ್ದಾರೆ. ಮೂರು ತಿಂಗಳ ತರಬೇತಿ ಕಾರ್ಯಕ್ರಮ ಮುಗಿದ ಬಳಿಕ ಈ ಫ್ಯಾಷನ್ ಶೋ ಏರ್ಪಡಿಸಲಾಗಿತ್ತು. ಪರ್ಲ್ ಅಕಾಡಮಿ ನೆರವಿನೊಂದಿಗೆ ಈ ಯೋಜನೆ ಕೈಗೊಳ್ಳಲಾಗಿತ್ತು.