ಬ್ಯಾಂಕ್ ಅಧಿಕಾರಿ ವಿರುದ್ಧದ ಅಜೇಯ ಸಿಂಗ್ ದೂರು ವಜಾ

ಅಲಹಾಬಾದ್,.ಫೆ.23: ಮಾಜಿ ಪ್ರಧಾನಿ ದಿ.ವಿ.ಪಿ.ಸಿಂಗ್ ಅವರ ಪುತ್ರ ಅಜೇಯ ಸಿಂಗ್ ಅವರು ಎರಡು ವರ್ಷಗಳ ಹಿಂದೆ ಎಚ್‌ಡಿಎಫ್‌ಸಿ ಬ್ಯಾಂಕಿನ ಹಿರಿಯ ಅಧಿಕಾರಿಯೋರ್ವರ ವಿರುದ್ಧ ಇಲ್ಲಿಯ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿದ್ದ ಎಫ್‌ಐಆರ್‌ನ್ನು ರದ್ದುಗೊಳಿಸಿರುವ ಅಲಹಾಬಾದ್ ಉಚ್ಚ ನ್ಯಾಯಾಲಯವು, ಅವರಿಗೆ 10 ಲ.ರೂ.ಗಳ ಭಾರೀ ದಂಡವನ್ನು ವಿಧಿಸಿದೆ.
ಸಿಂಗ್ ತನ್ನ ವಿರುದ್ಧ ದಾಖಲಿಸಿದ್ದ ಎಫ್‌ಐಆರ್‌ನ್ನು ಪ್ರಶ್ನಿಸಿ ಎಚ್‌ಡಿಎಫ್‌ಸಿ ಬ್ಯಾಂಕಿನ ಡಿಜಿಎಂ ಡಿ.ಕೆ.ಗುಪ್ತಾ ಅವರು ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು.
ವಂಚನೆ,ಫೋರ್ಜರಿ,ನಂಬಿಕೆ ದ್ರೋಹ ಮತ್ತು ಬೆದರಿಕೆ ಆರೋಪಗಳಲ್ಲಿ ಇಲ್ಲಿಯ ಕಂಟೋನ್ಮೆಂಟ್ ಪೊಲೀಸ್ ಠಾಣೆಯಲ್ಲಿ ಈ ಎಫ್‌ಐಆರ್ ದಾಖಲಾಗಿತ್ತು.
ಸಿಂಗ್ ತನ್ನ ಕಂಪನಿ ಅಟ್ಲಾಂಟಿಸ್ ಮಲ್ಟಿಪ್ಲೆಕ್ಸ್ ಪ್ರೈ.ಲಿ.ನ ಹೆಸರಿನಲ್ಲಿ ಬ್ಯಾಂಕಿನಿಂದ ಸಾಲ ಪಡೆದುಕೊಂಡಿದ್ದು, ಸುಸ್ತಿದಾರರಾಗಿದ್ದಾರೆ. ಅಸಲು ಮತ್ತು ಬಡ್ಡಿ ಸೇರಿ ಅವರಿಂದ 40 ಕೋ.ರೂ.ಬರಬೇಕಾಗಿದ್ದು, ಸಾಲ ವಸೂಲಿ ಕ್ರಮವನ್ನು ಕೈಬಿಡುವಂತೆ ತನ್ನ ಮೇಲೆ ಒತ್ತಡ ಹೇರಲು ಅವರು ಈ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಗುಪ್ತಾ ತನ್ನ ಅರ್ಜಿಯಲ್ಲಿ ಆರೋಪಿಸಿದ್ದರು.







