-

ಹದಿನಾಲ್ಕು ವರ್ಷ ಜೈಲುವಾಸ ಅನುಭವಿಸಿದ ಅಮಾಯಕನ ಕರುಣಕಥೆ

ಗುಪ್ತಾಂಗ ಮುಚ್ಚಿಕೊಂಡಾಗ ನಾಚಿಕೆ ಬಿಡು ಎಂದರು ದಿಲ್ಲಿ ಪೊಲೀಸರು !

-

ಇಂಟ್ರೊ ದೆಹಲಿ ಪೊಲೀಸರು 18ನೇ ವಯಸ್ಸಿನಲ್ಲೇ ಇವರನ್ನು ಬಂಧಿಸಿದರು. ರಾಜಧಾನಿಯಲ್ಲಿ 17 ಬಾಂಬ್‌ಸ್ಫೋಟಕ್ಕೆ ಸಂಚು ರೂಪಿಸಿದ ಆರೋಪ ಹೊರಿಸಿದರು. ಇದೀಗ ಮಹ್ಮದ್ ಆಮಿರ್ ಖಾನ್‌ಗೆ 35 ವರ್ಷ. ಇವರ ಮೇಲಿನ ಎಲ್ಲ ಆರೋಪಗಳು ಖುಲಾಸೆಯಾಗಿವೆ. ಈ ತಿಂಗಳು ಪ್ರಕಟವಾಗುವ ಇವರ ಕೃತಿಯಲ್ಲಿ ಹದಿನಾಲ್ಕು ವರ್ಷದ ಸೆರೆಮನೆವಾಸದ ಭಯಾನಕ ಚಿತ್ರಣಗಳಿವೆ. ಭವಿಷ್ಯದಲ್ಲಿ ಗ್ರಂಥಪಾಲಕನಾಗುವ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ.

ವರ್ಷಗಳ ಹಿಂದೆಯೇ ಸರ್ಕಾರ ಮಾಡಬೇಕಾದ್ದನ್ನು ಇದೀಗ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮಾಡುತ್ತಿದೆ. ಕನಿಷ್ಠ ಐದು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆಯೋಗ, ದೆಹಲಿ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಪ್ರಕರಣವನ್ನು ಕೈಗೆತ್ತಿಕೊಂಡಿದ್ಧಕ್ಕೆ ಆಯೋಗಕ್ಕೆ ನಾನು ಆಭಾರಿ. ವಿನಾಕಾರಣ ನನ್ನನ್ನು ಸುಧೀರ್ಘ ಜೈಲುವಾಸಕ್ಕೆ ಕಾರಣರಾಗಿ ಮಾಡಿದ ಕೃತ್ಯಕ್ಕೆ ಯಾವ ಮೊತ್ತವೂ ಪರಿಹಾರವಾಗಲಾರದು. ಆಯೋಗ ಇದನ್ನು ಅರ್ಥಮಾಡಿಕೊಂಡಿದೆ. ಆದ್ದರಿಂದಲೇ ಆಯೋಗ ಇದನ್ನು ಪರಿಹಾರ ಎಂದು ಕರೆಯದೇ ತಾತ್ಕಾಲಿಕ ಸಹಾಯ ಎಂದು ಪರಿಗಣಿಸಿದೆ. ನನ್ನ ಕರುಣಕಥೆಯನ್ನು ಮಾಧ್ಯಮ ಪ್ರಕಟಿಸಿದ ಬಳಿಕ ಆಯೋಗದ ನ್ಯಾಯಮೂರ್ತಿ ಡಿ.ಮುರುಗೇಶನ್ ಪ್ರಕರಣದ ತನಿಖೆ ಕೈಗೊಂಡರು. 

ದೆಹಲಿ ಪೊಲೀಸ್ ಕಮಿಷನರ್ ಹಾಗೂ ಗೃಹ ಕಾರ್ಯದರ್ಶಿಗೆ ನೋಟಿಸ್ ಕಳುಹಿಸಿದರು. 2014ರಲ್ಲಿ ಅಹವಾಲು ಆಲಿಸಲು ನನ್ನನ್ನೂ ಆಹ್ವಾನಿಸಿದರು. ನಾನು ಉತ್ತರ ನೀಡಿದ ಒಂದೂವರೆ ವರ್ಷದ ಬಳಿಕ ಮಾನವ ಹಕ್ಕುಗಳ ಆಯೋಗ ಸಮರ್ಪಕ ಕ್ರಮ ಕೈಗೊಳ್ಳುವಂತೆ ದೆಹಲಿ ಸರ್ಕಾರಕ್ಕೆ ಸೂಚಿಸಿದೆ.

ಸರ್ಕಾರಕ್ಕೆ ಉತ್ತರಿಸಲು ನೀಡಿದ್ದ ಆರು ವಾರಗಳ ಗಡುವುದು ಮುಗಿದಿದೆ. ಆದರೆ ಎಎಪಿ ಸರ್ಕಾರದಿಂದ ಯಾವ ಉತ್ತರವೂ ಬಂದಿಲ್ಲ. ಸರ್ಕಾರ ಸೂಕ್ತ ಕ್ರಮ ಕೈಗೊಂಡು ನನಗೆ ಜೀವನಾಧಾರ ಕಲ್ಪಿಸುತ್ತದೆ ಎಂಬ ನಿರೀಕ್ಷೆ ನನ್ನದು. ಎಎಪಿ ಶಾಸಕ ಅಮಾನತುಲ್ಲಾ ಈ ಪ್ರಕರಣವನ್ನು ವಿಧಾನಸಭೆಗೆ ಒಯ್ಯುವುದಾಗಿ ಭರವಸೆ ನೀಡಿದ್ದಾರೆ. ಆದರೆ ಸರ್ಕಾರದಿಂದ ನನಗೆ ಇದುವರೆಗೆ ಯಾವ ಪ್ರತಿಕ್ರಿಯೆಯೂ ಸಿಕ್ಕಿಲ್ಲ.

* ಒಂದೂವರೆ ದಶಕವನ್ನು ಜೈಲಲ್ಲಿ ಕಳೆದಿದ್ದೀರಿ. ಇಷ್ಟೊಂದು ಸುಧೀರ್ಘ ಅವಧಿಗೆ ವಿನಾಕಾರಣ ಜೈಲಿಗೆ ಕಳುಹಿಸಿರುವ ನಿದರ್ಶನ ನಿಮ್ಮ ಗಮನಕ್ಕೆ ಬಂದಿದೆಯೇ?

1998ರಿಂದ 2004ರ ಅವಧಿಯಲ್ಲಿ ಹಲವಾರು ಎನ್‌ಕೌಂಟರ್‌ಗಳು ಹಾಗೂ ಬಂಧನಗಳು ನಡೆದಿವೆ. ಆ ಕಾಲಘಟ್ಟದಲ್ಲಿ ಆಡಳಿತ ನಡೆಸಿದವರ ಸಿದ್ಧಾಂತಗಳು ಇದಕ್ಕೆ ಕಾರಣ. ದೆಹಲಿ ಪೊಲೀಸರಿಗೆ ಮುಕ್ತ ಅವಕಾಶ ನೀಡಿದ್ದರಿಂದ ಹಲವು ಮಂದಿ ಅಮಾಯಕರನ್ನು ಕಂಬಿ ಹಿಂದೆ ತಳ್ಳಲಾಯಿತು. ನನ್ನ ಬಂಧನದ ಅವಧಿಯಲ್ಲೇ, ಕೆಲ ನಿರ್ದಿಷ್ಟ ಬಗೆಯ ವ್ಯಕ್ತಿಗಳ ಬಂಧನ ವ್ಯಾಪಕವಾಗಿ ನಡೆಯಿತು. ಒಂದು ಅವಧಿಯಲ್ಲಿ ಬಹುತೇಕ ಕಾಶ್ಮೀರಿಗಳಾಗಿದ್ದರೆ, ಮತ್ತೊಂದು ಅವಧಿಯಲ್ಲಿ ಸಿಕ್ಖರು. ಆ ಕಾಲದ ರಾಜಕೀಯ ವಾತಾವರಣ, ಯಾರು ಜೈಲಿನಲ್ಲಿರಬೇಕು ಎಂದು ನಿರ್ಧರಿಸುತ್ತಿತ್ತು. ನಾನು ನನ್ನ ಉನ್ನತ ಶಿಕ್ಷಣದ ಅವಕಾಶ ಕಳೆದುಕೊಂಡು, ಜೈಲೇ ನನಗೆ ವಿಶ್ವವಿದ್ಯಾನಿಲಯವಾಯಿತು. ಅದು ನನಗೆ ಕಾನೂನು ತೊಡಕುಗಳನ್ನು ತಿಳಿದುಕೊಳ್ಳಲು ಕರ್ಮಭೂಮಿಯಾಯಿತು. ಜತೆಗೆ ರಾಜಕೀಯ ಸಿದ್ಧಾಂತಗಳನ್ನು ಹೇಗೆ ಚಲಾಯಿಸಲಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳುವ ಕಾರ್ಯಕ್ಷೇತ್ರವಾಯಿತು.

* ಕುತೂಹಲಕಾರಿ ಅಂಶವೆಂದರೆ, ಇಷ್ಟು ವರ್ಷಗಳ ಕಾಲ ನಿಮಗೆ ಒಂದು ದಿನವೂ ಜಾಮೀನಿನ ಮೇಲೆ ಬಿಡುಗಡೆಯಾಗುವ ಅವಕಾಶವೂ ಸಿಗಲಿಲ್ಲ. ಜಾಮೀನಿಗಾಗಿ ಪ್ರಯತ್ನಿಸಬಹುದಿತ್ತಲ್ಲವೇ?

ಭಾರತದ ನ್ಯಾಯವ್ಯವಸ್ಥೆ ಒಂದು ಸಂಕೀರ್ಣ ಬಲೆ. ಇಲ್ಲಿಂದ ಪ್ರಭಾವಿ ಹಾಗೂ ದೊಡ್ಡ ವ್ಯಕ್ತಿಗಳು ಸುಲಭವಾಗಿ ಹೊರಬರಬಹುದು. ಆದರೆ ಬಡವರು ಹಾಗೂ ದುರ್ಬಲರು ಈ ವ್ಯವಸ್ಥೆಯಲ್ಲಿ ನರಳಲೇ ಬೇಕು. ಜತೆಗೆ ಭಯೋತ್ಪಾದನೆ ಪ್ರಕರಣಗಳಲ್ಲಿ ಜಾಮೀನು ಪಡೆಯುವ ಸಾಧ್ಯತೆಯೇ ಇಲ್ಲ ಎಂದು ವಕೀಲರು ಸ್ಪಷ್ಟವಾಗಿ ತಿಳಿದಿದ್ದರು. ಮಾರುತಿ ಸಂಸ್ಥೆಯ ಒಬ್ಬ ವ್ಯವಸ್ಥಾಪಕ ಸತ್ತ ಹಿನ್ನೆಲೆಯಲ್ಲಿ 100ಕ್ಕೂ ಹೆಚ್ಚು ಉದ್ಯೋಗಿಗಳು ಅನ್ಯಾಯ ಎದುರಿಸುತ್ತಿರುವ ಜ್ವಲಂತ ನಿದರ್ಶನ ನಮ್ಮ ಮುಂದಿದೆ. ವಾಸ್ತವವಾಗಿ 100 ಮಂದಿ ಕಾರ್ಮಿಕರು ಒಬ್ಬನನ್ನು ಕೊಲ್ಲಲು ನಿಜವಾಗಿ ಪ್ರಯತ್ನಿಸಿದ್ದರೆ, ಆತನ ಮೂಳೆ ಕೂಡಾ ಸಿಗುತ್ತಿರಲಿಲ್ಲ. ಇಷ್ಟಾಗಿಯೂ ನ್ಯಾಯಾಲಯ ಅವರಿಗೆ ಜಾಮೀನು ನೀಡಲು ನಿರಾಕರಿಸಿದೆ.

ದೆಹಲಿ ಹೈಕೋರ್ಟ್‌ನಲ್ಲಿ ನನ್ನ ವಿರುದ್ಧದ ಎಲ್ಲ ಪ್ರಕರಣಗಳೂ ಖುಲಾಸೆಯಾದ ಬಳಿಕವೂ, ಗಾಜಿಯಾಬಾದ್‌ನಲ್ಲಿ ನನ್ನ ಜಾಮೀನು ಅರ್ಜಿ ತಿರಸ್ಕರಿಸಲಾಯಿತು. ನನ್ನ ತಾಯಿ ಪಾರ್ಶ್ವವಾಯುಪೀಡಿತರಾಗಿ ಹಾಸಿಗೆ ಹಿಡಿದದ್ದರಿಂದ ಅವರ ಆರೈಕೆಗೆ ಯಾರೂ ಇಲ್ಲ ಎಂಬ ಕಾರಣಕ್ಕೆ ನಾನು ಜಾಮೀನು ಅರ್ಜಿ ಸಲ್ಲಿಸಿದ್ದೆ. ನನ್ನ ಬಂಧನದ ಮೂರು ವರ್ಷ ಬಳಿಕ ತಂದೆ ಅಸು ನೀಗಿದ್ದರು. 2008ರಲ್ಲಿ ದೆಹಲಿಯಲ್ಲಿ ನನ್ನ ಮೇಲಿನ ಆರೋಪ ವಜಾ ಆದ ಬಳಿಕ, ಅಲ್ಪಕಾಲ ನನ್ನನ್ನು ಹರ್ಯಾಣದ ಕೈತಾಲ್ ಜೈಲಿನಲ್ಲಿಡಲಾಯಿತು. ಬಳಿಕ ನಾಲ್ಕು ವರ್ಷಕ್ಕೂ ಹೆಚ್ಚು ಕಾಲ ಗಾಜಿಯಾಬಾದ್‌ನ ದಾಸ್ನಾ ಜೈಲಿನಲ್ಲಿ ಇಡಲಾಯಿತು. ಸಲ್ಮಾನ್‌ಖಾನ್ ಪ್ರಕರಣದಲ್ಲಿ ಅವರಿಗೆ ತಕ್ಷಣ ಜಾಮೀನು ಸಿಗುತ್ತದೆ. ಆದರೆ ನಮ್ಮಂಥ ಬಡವರು ಮಾತ್ರ ಅಪವಾದವಾಗುತ್ತೇವೆ.

* ಜೈಲಿನಿಂದ ಬಿಡುಗಡೆಯಾದ ಬಳಿಕ ನಿಮಗೆ ಹೊಂದಿಕೊಳ್ಳಲು ಅತ್ಯಂತ ಕಷ್ಟ ಎನಿಸಿದ ಅಂಶ ಯಾವುದು?

ಹದಿನಾಲ್ಕು ವರ್ಷದ ಬಳಿಕ ನಾನು ಜೈಲಿನಿಂದ ಹೊರಬಂದ ನಂತರ, ನಾನು ಜೈಲಿನಲ್ಲಿ ಬದಲಾಗಿದ್ದಕ್ಕಿಂತ ಹೆಚ್ಚಾಗಿ ಜಗತ್ತು ಬದಲಾಗಿತ್ತು. ನನಗೆ ಯಾವುದನ್ನೂ ಗುರುತಿಸುವುದು ಅಸಾಧ್ಯವಾಯಿತು. ದೆಹಲಿಯಲ್ಲಿ ಮೆಟ್ರೊ ರೈಲು ನಿರ್ಮಾಣವಾಗಿತ್ತು. ಮೆಟ್ರೊದಲ್ಲಿದ್ದ ಮಕ್ಕಳು ಕೂಡಾ ನನ್ನಷ್ಟು ಅಚ್ಚರಿಯಿಂದ ಅದನ್ನು ನೋಡುತ್ತಿರಲಿಲ್ಲ. ಈ ಹೊಸ ಜಗತ್ತಿನಲ್ಲಿ ಒಬ್ಬಂಟಿ ಎನಿಸಿತು. ವಾಟ್ಸಪ್, ಇಂಟರ್‌ನೆಟ್ ಗೀಳು, ಫೇಸ್‌ಬುಕ್, ಇ-ಮೇಲ್ ಮತ್ತಿತರ ವಿಷಯಗಳಲ್ಲಿ ಪರಿಣತಿ ಸಾಧಿಸಲು ನಾನಿನ್ನೂ ಸಾಹಸ ಮಾಡುತ್ತಿದ್ದೇನೆ. ಇಲ್ಲಿ ಅಸ್ತಿತ್ವ ಉಳಿಸಿಕೊಳ್ಳಬೇಕಾದರೆ ನಾನು ಹೊಸ ಮಾರ್ಗಗಳನ್ನು ಕಲಿತುಕೊಳ್ಳಲೇಬೇಕು ಎಂದು ಅರ್ಥ ಮಾಡಿಕೊಳ್ಳಲು ಸಮಯ ಹಿಡಿಯಿತು. ಮೂರು ವರ್ಷದ ಬಳಿಕವೂ ನಾನು ಹೊಸದನ್ನು ಸಂಶೋಧಿಸುತ್ತಾ, ವೀಕ್ಷಿಸುತ್ತಾ ಕಲಿಯುತ್ತಿದ್ದೇನೆ.

ನನ್ನ ಕುಟುಂಬದಲ್ಲಿ ಆದ ಬದಲಾವಣೆ ಹಾಗೂ ಹೊರ ಜಗತ್ತಿನ ಬದಲಾವಣೆ ಎರಡೂ ಅಚ್ಚರಿದಾಯಕ. ತಂದೆ 2001ರಲ್ಲಿ ಮೃತಪಟ್ಟಿದ್ದರು. ಆ ಬಳಿಕ ಏಕೈಕ ಆಧಾರಸ್ತಂಭವಾಗಿ ನಿಂತು ನನ್ನ ಪ್ರಕರಣದಲ್ಲಿ ದಶಕದ ಕಾಲ ಹೋರಾಡಿದ ತಾಯಿ ಕೂಡಾ ಪಾರ್ಶ್ವವಾಯುಪೀಡಿತರಾದರು. ಕಳೆದ ವರ್ಷ ಅವರೂ ಅಸು ನೀಗಿದರು. ನನ್ನ ನರಳಿಕೆಗೆ ಹಲವರು ಅನುಕಂಪ ತೋರಿದರು. ಆದರೆ ನನ್ನ ಕುಟುಂಬದ ಸ್ಥಿತಿಯ ಬಗ್ಗೆಯ ಕೆಲವರು ನಿಜವಾಗಿಯೂ ಕಳಕಳಿ ವ್ಯಕ್ತಪಡಿಸಿದರು. ನಮ್ಮ ಕುಟುಂಬದವರನ್ನು ಭೇಟಿ ಮಾಡಲು ಬರುವ ಪ್ರತಿಯೊಬ್ಬ ಬಂಧುಗಳನ್ನೂ ಠಾಣೆಗೆ ಎಳೆದೊಯ್ಯಲಾಗುತ್ತಿತ್ತು ಹಾಗೂ ಉಗ್ರಗಾಮಿಗಳ ಕುಟುಂಬದ ಜತೆಗೆ ಯಾವ ಸಂಬಂಧವೂ ಇಟ್ಟುಕೊಳ್ಳದಂತೆ ಎಚ್ಚರಿಕೆ ನೀಡಿ ಕಳುಹಿಸಲಾಗುತ್ತಿತ್ತು. ಇಡೀ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರದ ಪರಿಸ್ಥಿತಿ ಎದುರಾಗಿತ್ತು.

* ಸಾಮಾಜಿಕ ಕಳಂಕ ಇನ್ನೂ ಇದೆಯೇ?

2012ರಲ್ಲಿ ನಾನು ಜೈಲಿನಿಂದ ಹೊರಬಂದ ಬಳಿಕ ಹಲವು ಮಾಧ್ಯಮಗಳು ನನ್ನ ಕಥೆಯನ್ನು ಪ್ರಕಟಿಸಿದವು. ಮಾಧ್ಯಮಗಳಿಗೆ ನಾನು ಆಭಾರಿ. ಆರಂಭಿಕ ದಿನಗಳಲ್ಲಿ ನಾನು ನನ್ನ ಪ್ರತಿಯೊಬ್ಬ ಸಂಬಂಧಿಕರ ಮನೆಗೆ ಹೋಗಿ, ಪತ್ರಿಕೆಗಳನ್ನು ಹಂಚುತ್ತಿದ್ದೆ. ಆ ಮೂಲಕ ಅವರು ಸತ್ಯ ತಿಳಿದುಕೊಂಡು ನನ್ನ ಬಗ್ಗೆ ಅನಗತ್ಯ ಭೀತಿಪಡುವುದು ಬೇಡ ಎನ್ನುವುದು ನನ್ನ ಉದ್ದೇಶವಾಗಿತ್ತು. ತಾಯಿ ಸಾವಿನ ಬಳಿಕ ನನಗೆ ಕುಟುಂಬದ ಅಗತ್ಯತೆ ಕಾಣತೊಡಗಿತು. ಸಂಬಂಧಿಕರನ್ನು ಭೇಟಿ ಮಾಡಲು ಮುಂದಾದೆ. ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಅಪಹರಣದ ನೆನಪು (ನಾನು ಅದನ್ನು ಬಂಧನ ಎಂದು ಕರೆಯುವುದಿಲ್ಲ. ಅತ್ಯಂತ ಕ್ರೌರ್ಯ ಹಾಗೂ ಕಾನೂನುಬಾಹಿರವಾಗಿ ಎಸಗಿದ ಕೃತ್ಯ ಅದು) ಅದು ಇನ್ನೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಜೈಲಿನಲ್ಲಿ ಹಲವು ವರ್ಷಗಳ ಕಾಲ ಅನುಭವಿಸಿದ ಚಿತ್ರಹಿಂಸೆಗಿಂತಲೂ, ನನ್ನ ತಂದೆ-ತಾಯಿಯ ಸಾವು, ನನ್ನ ಶಿಕ್ಷಣ ಅವಕಾಶ ಹಾಳಾದ ನೆನಪಿಗಿಂತಲೂ ಅದು ಕರಾಳ. ಅಮಾಯಕ ಹದಿಹರೆಯದ ನನ್ನನ್ನು ಎಳೆದೊಯ್ದು, ವಾರದ ಕಾಲ ಒಂದು ಸಣ್ಣ ಆವರಣದಂತಿದ್ದ ಸೆಲ್‌ನಲ್ಲಿ ಕೂಡಿ ಹಾಕಿದರು. ಬೆತ್ತಲು ಮಾಡಿ ಚಿತ್ರಹಿಂಸೆ ನೀಡಿದರು. ನನ್ನ ಗುಪ್ತಾಂಗಮುಚ್ಚಿಕೊಂಡಾಗ, ಸಂಕೋಚ ಮಾಡಿಕೊಳ್ಳಬೇಡ ಎಂದು ಹೇಳಿದರು. ಅವರು ನನ್ನಿಂದ ಏನನ್ನೋ ನಿರೀಕ್ಷಿಸುತ್ತಿರುವ ಒರಟರು ಎಂದು ನನಗೆ ಖಚಿತವಾಗಿ ಅನಿಸಿತು. ವಾರದ ಕಾಲ ವಿದ್ಯುತ್ ಶಾಕ್ ನೀಡಿದರು. ತಣ್ಣೀರು ಸುರಿದರು. ನಿದ್ದೆಗೆಡಿಸಿದರು. ಉಪವಾಸ ಕೆಡವಿದರು. ಅಂತಿಮವಾಗಿ ಒಂದು ದಿನ ನಾನು ರಾಜಧಾನಿ ಹಾಗೂ ಸುತ್ತಮುತ್ತ 1996-97ರ ಅವಧಿಯಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ ರೂವಾರಿ ಎಂದು ಒಪ್ಪಿಕೊಳ್ಳುವ ಹೇಳಿಕೆಗೆ ಸಹಿ ಹಾಕಿಸಿಕೊಂಡರು. ಆಗ ನನಗಿನ್ನೂ ಕೇವಲ 18 ವರ್ಷ.

ವಿನಯಪೂರ್ವಕವಾಗಿ ಅದನ್ನು ನಿರಾಕರಿಸಿದಾಗ, ನನ್ನ ತೋರು ಬೆರಳಿನ ಉಗುರು ಕೀಳಲು ಮುಂದಾದರು. ಅಂಥ ಚಿತ್ರಹಿಂಸೆಯನ್ನು ತಾಳಿಕೊಳ್ಳುವ ಸ್ಥಿತಿಯಲ್ಲಿ ನಾನಿರಲಿಲ್ಲ. ಮರುಮಾತನಾಡದೇ ನಾನು ಸಹಿ ಮಾಡಿದೆ. ನಾನು ಅವರನ್ನು ಸಮವಸ್ತ್ರದಲ್ಲಿ ನೋಡಿದ್ದು ಅದೇ ಮೊದಲು. ಆ ದಿನ ನ್ಯಾಯಾಲಯದಲ್ಲಿ ಹಾಜರುಪಡಿಸುವುದಾಗಿ ತಿಳಿಸಿದರು. ಎಲ್ಲ ಅಪರಾಧಗಳನ್ನು ಎಸಗಿದ್ದಾಗಿ ಅಲ್ಲಿ ಒಪ್ಪಿಕೊಳ್ಳಬೇಕು ಎಂದು ಸೂಚಿಸಿದರು. ಇವೆಲ್ಲವನ್ನೂ ಹೇಳಿದರೆ, ಮುಂದೆ ಹೊಡೆಯುವುದಿಲ್ಲ ಎಂಬ ಭರವಸೆ ಅವರಿಂದ ದೊರಕಿತು. ವಾರದ ಚಿತ್ರಹಿಂಸೆಯ ಬಳಿಕ, ಅವರ ಮುಖ ನೋಡಿದರೇ ನನಗೆ ಸಾವಿನ ದರ್ಶನವಾಗುತ್ತಿತ್ತು. ಈ ಎಲ್ಲ ಚಿತ್ರಗಳು ಇನ್ನೂ ನನ್ನ ಮನಸ್ಸಿನಲ್ಲಿ ಮುದ್ರೆಯೊತ್ತಿವೆ. ಇಂದಿಗೂ ನಾನು ಚಿಕಿತ್ಸೆ ಪಡೆಯುತ್ತಿದ್ದೇನೆ. ಕಳೆದ ಮೂರು ವರ್ಷಗಳಿಂದ ಶೂನ್ಯದಿಂದ ಬದುಕು ಕಟ್ಟಿಕೊಳ್ಳುವ ಪ್ರಯತ್ನ ಮಾಡುತ್ತಲೇ ಇದ್ದೇನೆ.

* ಇಂದು ನೀವು ವಿವಾಹವಾಗಿ ಒಂದು ಹೆಣ್ಣುಮಗುವನ್ನೂ ಹೊಂದಿದ್ದೀರಿ. ಸಭ್ಯ ಜೀವನಾಧಾರವನ್ನು ಗಳಿಸಿಕೊಳ್ಳುವುದು ಹೇಗೆ ಸಾಧ್ಯವಾಗಿದೆ?

ಇದು ವಿಚಿತ್ರ; ಆದರೆ ಇಂದಿಗೂ ನಾನು ವ್ಯವಸ್ಥೆಯ ಬಲಿಪಶು. ನನ್ನ ಬಿಡುಗಡೆ ಬಳಿಕ ಅನ್ಹಾದ್ ಎಂಬ ಮಾನವಹಕ್ಕು ಸಂಘಟನೆಯಲ್ಲಿ ನಾನು ಕೆಲಸ ಮಾಡುತ್ತೇನೆ. ಅದಾಗ್ಯೂ ಕಳೆದ ವರ್ಷ ಈ ಸ್ವಯಂಸೇವಾ ಸಂಸ್ಥೆ ಮೇಲೆ ದಾಳಿ ನಡೆದ ಬಳಿಕ, ಇಲ್ಲಿಗೆ ನೆರವು ನೀಡುವ ಹಾಗೂ ಆದಾಯ ತೆರಿಗೆ ವಿಷಯದ ಬಗ್ಗೆ ಪ್ರಶ್ನೆಗಳು ಉದ್ಭವಿಸಿದ್ದರಿಂದ, ಬಹುತೇಕ ಸ್ವಯಂಸೇವಾ ಸಂಸ್ಥೆಗೆ ನೆರವು ನಿಡುವ ಸಂಸ್ಥೆಗಳು ನಮ್ಮ ಸರ್ಕಾರೇತರ ಸಂಸ್ಥೆಯ ಯೋಜನೆಗಳಿಗೆ ನೆರವು ನೀಡುತ್ತಿಲ್ಲ. ಪರಿಸ್ಥಿತಿ ಎಷ್ಟರಮಟ್ಟಿಗೆ ಹದಗೆಟ್ಟಿದೆ ಎಂದರೆ ವೇತನ ಕೊಡಲೂ ಹಣ ಇಲ್ಲದೇ ನಾಲ್ಕು ತಿಂಗಳ ಹಿಂದೆ ಕೆಲಸ ಬಿಡುವಂತೆ ನನಗೆ ಸೂಚಿಸಲಾಯಿತು. ಇದೀಗ ಸಾಮಾಜಿಕ ಕಾರ್ಯಕರ್ತ ಹರ್ಷ ಮಂದೆರ್ ಅವರ ಸೆಂಟರ್ ಫಾರ್ ಈಕ್ವಿಟಿ ಸ್ಟಡೀಸ್ ಸಂಸ್ಥೆಯಲ್ಲಿ ಜೈಲು ಸುಧಾರಣೆ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದೇನೆ.

* ಸದ್ಯದ ಪರಿಸ್ಥಿತಿಯಂತೆ ಭವಿಷ್ಯದ ಬಗ್ಗೆ ಏನನಿಸುತ್ತದೆ? ಸರ್ಕಾರದಿಂದ ಪರಿಹಾರವಾಗಿ ಏನನ್ನು ಆಗ್ರಹಿಸುತ್ತಿದ್ದೀರಿ?

ಮಾನವ ಹಕ್ಕುಗಳ ಆಯೋಗದ ಆದೇಶ, ನನಗೆ ಸಭ್ಯ ಭವಿಷ್ಯದ ನಿರೀಕ್ಷೆ ಹುಟ್ಟುಹಾಕಿದೆ. ಅದು ಪರಿಹಾರ ಮೊತ್ತದ ಬಗ್ಗೆ ಅಲ್ಲ; ಹಣಕ್ಕಿಂತ ಹೆಚ್ಚಾಗಿ ನನಗೆ ಸಭ್ಯ, ಗೌರವಯುತ ಕೆಲ ಬೇಕು. ಗೌರವಯುತ ಎಂದರೆ, ದೊಡ್ಡ ಉದ್ಯೋಗಗಳಿಗೆ ಅಗತ್ಯವಾದ ಯಾವುದೇ ಪದವಿ ನನ್ನಲ್ಲಿ ಇಲ್ಲ ಎನ್ನುವುದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಏಕೆಂಧರೆ ಆ ಅಮೂಲ್ಯ ವರ್ಷಗಳನ್ನು ನನ್ನಿಂದ ಕಿತ್ತುಕೊಳ್ಳಲಾಗಿದೆ. ಅದಾಗ್ಯೂ ಜೈಲಿನಲ್ಲಿ ಸಾಧ್ಯವಿದ್ದಷ್ಟೂ ಪುಸ್ತಕಗಳನ್ನು ಓದಿ ನನ್ನ ಜ್ಞಾನ ಹೆಚ್ಚಿಸಿಕೊಂಡಿದ್ದೇನೆ. ಕಾಟಾಚಾರಕ್ಕೆ ತೃತೀಯ ದರ್ಜೆ ಉದ್ಯೋಗ ನೀಡುವ ಬದಲಾಗಿ ನನ್ನ ಸಾಮರ್ಥ್ಯವನ್ನು ನೋಡಿ, ಅದಕ್ಕೆ ಅನುಗುಣವಾದ ಉದ್ಯೋಗ ನೀಡಬೇಕು ಎನ್ನುವುದು ನನ್ನ ಬಯಕೆ. ಗ್ರಂಥಪಾಲಕನಾಗುವುದು ನನ್ನ ಇಚ್ಛೆ. ಜೈಲಿನಲ್ಲಿದ್ದಷ್ಟು ಅವಧಿಯೂ ಪುಸ್ತಕಗಳಷ್ಟೇ ನನಗೆ ಸ್ನೇಹಿತರಾಗಿದ್ದವು. ನಾನು ಅದನ್ನು ಬಹುವಾಗಿ ಪ್ರೀತಿಸುತ್ತೇನೆ. ಆಗ ಮಾತ್ರ ನನಗೆ ಮಗಳ ಬಗ್ಗೆಯೂ ಕಾಳಜಿ ವಹಿಸಲು ಸಾಧ್ಯವಾಗುತ್ತದೆ.

(ಕೃಪೆ : ಔಟ್ ಲುಕ್ )

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top