-

ಸಾಹಿತ್ಯವೆಂದರೆ ಊಟದ ಬಳಿಕದ ಎಲೆಯಡಿಕೆಯೇ?

-

ಸಾಹಿತ್ಯವೆನ್ನುವುದು ಪ್ರಭುತ್ವಕ್ಕೆ ಸಡ್ಡು ಹೊಡೆಯುತ್ತಲೇ ತನ್ನ ಸಮೃದ್ಧತೆಯನ್ನು ಹೆಚ್ಚಿಸಿಕೊಳ್ಳುತ್ತಾ ಬಂದಿದೆೆ. ಅದರ ಜೀವ ದ್ರವ್ಯವೇ ಪ್ರತಿಭಟನೆ. ವ್ಯವಸ್ಥೆಯ ಪರವಾಗಿರುವ ಸಾಹಿತ್ಯಕ್ಕೆ ಸುದೀರ್ಘವಾದ ಭವಿಷ್ಯವಿಲ್ಲ. ಆದುದರಿಂದಲೇ ಆಸ್ಥಾನ ಕವಿಗಳಿಗೆ ಜನಸಾಮಾನ್ಯರನ್ನು ಮುಟ್ಟಲು ಸಾಧ್ಯವಾಗಲಿಲ್ಲ. ಬೀದಿಯಲ್ಲಿ ನಿಂತು ಬರೆದ ಸಾಹಿತ್ಯವಷ್ಟೇ ಇತಿಹಾಸವನ್ನು ಬರೆಯಿತು. ಪಂಪನ ಕಾಲದಿಂದ ಚಂಪಾನ ಕಾಲದವರೆಗೂ ಸಾಹಿತ್ಯದ ಮೇಲೆ ನಿಯಂತ್ರಣ ಸಾಧಿಸಲು ಪ್ರಭುತ್ವ ಒಂದಲ್ಲ ಒಂದು ರೀತಿಯಲ್ಲಿ ಪ್ರಯತ್ನಿಸುತ್ತ ಬಂದಿದೆ. ಇದು ಕರ್ನಾಟಕ ಅಥವಾ ಭಾರತಕ್ಕಷ್ಟೇ ಸೀಮಿತವಾಗಿಲ್ಲ. ಬೃಹತ್ ಪ್ರಶಸ್ತಿಗಳು ಹುಟ್ಟಿರುವುದೇ ಇಂತಹ ಸಾಹಿತಿಗಳನ್ನು ಕೊಂಡು ಕೊಳ್ಳುವುದಕ್ಕಾಗಿ. ಈ ಕಾರಣಕ್ಕೇ ಜಗತ್ತಿನ ಸರ್ವ ಶ್ರೇಷ್ಠ ಸಾಹಿತಿಗಳು, ಲೇಖಕರು ನೊಬೆಲ್ ಪ್ರಶಸ್ತಿಯಿಂದ ವಂಚಿತರಾದರು. ಆ ಮೂಲಕವೇ ಅವರು ಜಗತ್ತಿಗೆ ಶ್ರೇಷ್ಠ ಸಾಹಿತಿ ಎಣಿಸಿಕೊಂಡರು. ಇಂದು ನೊಬೆಲ್ ಅಥವಾ ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿಗಳಿಗಿಂತ ಅವುಗಳನ್ನು ನಿರಾಕರಿಸಿದ ಅಥವಾ ಆ ಪ್ರಶಸ್ತಿ ವಂಚಿತರಾದವರೇ ಅತ್ಯುತ್ತಮ ಬರಹಗಾರರಾಗಿ ಗುರುತಿಸಲ್ಪಡುತ್ತಿದ್ದಾರೆ.

ಪ್ರಭುತ್ವ ಮತ್ತು ಸಾಹಿತ್ಯದ ನಡುವಿನ ಸಂಘರ್ಷ ಇಂದು ನಿನ್ನೆಯದಲ್ಲ. ಸಾಹಿತ್ಯವನ್ನು ನೇರವಾಗಿ ನಿಯಂತ್ರಿಸಲು ಪ್ರಭುತ್ವವು ವಿಫಲವಾದಾಗ ಪುರೋಹಿತ ಶಾಹಿ ವೇಷದಲ್ಲಿ ಸಾಹಿತ್ಯವನ್ನು ಆಕ್ರಮಿಸುತ್ತದೆ. ಭಾರತದಂತಹ ದೇಶದಲ್ಲಿ ಇದು ಅತಿ ಸುಲಭ. ಇತ್ತೀಚೆಗೆ ಕನ್ನಡ ಸಾಹಿತ್ಯ ಸಮ್ಮೇಳನವೂ ಇದೇ ಕಾರಣಕ್ಕೆ ಸುದ್ದಿಯಾಯಿತು. ಯಾವ ಸಾಹಿತ್ಯ ವಿಧವೆಯರ, ಮಹಿಳೆಯರ ಶೋಷಣೆಯನ್ನು ಪ್ರತಿಭಟಿಸಿ ಮಾತನಾಡಬೇಕಾಗಿತ್ತೋ, ಅದೇ ವೇದಿಕೆ ಮಹಿಳೆಯರನ್ನು ಸುಮಂಗಲಿ-ಅಮಂಗಲಿ ಎಂದು ವಿಂಗಡಿಸುವ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಪ್ರಭುತ್ವ ವೈದಿಕ ಶಕ್ತಿಯನ್ನು ಬಳಸಿಕೊಂಡು ಸಾಹಿತ್ಯವನ್ನು, ಸಾಹಿತಿಗಳನ್ನು ಅಪಹರಿಸುತ್ತಿರುವುದಕ್ಕೆ ಭಾರತದ ಸಾಹಿತ್ಯಸಮ್ಮೇಳನಗಳೇ ಅತ್ಯುತ್ತಮ ಉದಾಹರಣೆ. ಸಾಹಿತ್ಯ ಸಮ್ಮೇಳನವನ್ನು ವೈದಿಕೀಕರಿಸುವ ಮೂಲಕ ಪ್ರಭುತ್ವ ಒಂದೆಡೆ ಸಾಹಿತಿಗಳನ್ನು ನಿಯಂತ್ರಣದಲ್ಲಿಡಲು ಯತ್ನಿಸುತ್ತಿರುವಾಗಲೇ ಮಗದೊಂದೆಡೆ ಇಂತಹ ಸಾಹಿತ್ಯ ಸಮ್ಮೇಳನಗಳಿಂದ ಪ್ರಭುತ್ವದ ವಿರೋಧಿಗಳನ್ನು ದೂರ ಇಡುವ ಸಂಚುಗಳೂ ನಡೆಯುತ್ತಿವೆ. ಇದು ಕರ್ನಾಟಕದಂತಹ ರಾಜ್ಯಗಳಲ್ಲಿ ಮಾತ್ರವಲ್ಲ, ದೇಶದ್ಯಾಂತ ನಡೆಯುತ್ತಿರುವ ಬೆಳವಣಿಗೆಯಾಗಿದೆ.

ನೆರೆಯ ಮರಾಠಿ ಸಮ್ಮೇಳನದಲ್ಲಿ ನಡೆದ ಬೆಳವಣಿಗೆಗಳು ಅದಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ. ಮಹಾರಾಷ್ಟ್ರದ ಯಾವತ್ಮಲ್‌ನಲ್ಲಿ ಜನವರಿ 11 ಕ್ಕೆ ನಡೆದ 92ನೇ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಮಾಡಲು ನಯನತಾರಾ ಸೆಹಗಲ್ ಅವರಿಗೆ ಕೊಟ್ಟಿದ್ದ ಆಹ್ವಾನವನ್ನು ಆಯೋಜಕರು ಹಿಂದೆದುಕೊಂಡಿದ್ದು ಸಾಹಿತ್ಯ ಗಣ್ಯರನ್ನೂ ಒಳಗೊಂಡಂತೆ ಹಲವರ ಖಂಡನೆಗೆ ಮತ್ತು ಟೀಕಾಪ್ರಹಾರಗಳಿಗೆ ಗುರಿಯಾಗಿದೆ. ಆಯೋಜಕರ ಈ ಕ್ರಮವು ಕೇವಲ ನಯನತಾರ ಸೆಹಗಲ್ ಅವರಿಗೆ ಮಾತ್ರವಲ್ಲದೆ ಅಭಿವ್ಯಕ್ತಿ ಸ್ವಾತಂತ್ರ್ಯದಂಥ ಪ್ರಜಾತಾಂತ್ರಿಕ ಮೌಲ್ಯಗಳ ಹಿತಾಸಕ್ತಿಯನ್ನು ಹೊಂದಿರುವ ಪ್ರತಿಯೊಬ್ಬರನ್ನೂ ವಿಚಲಿತಗೊಳಿಸಿದೆಯಲ್ಲದೆ ಹಲವು ಪ್ರಶ್ನೆಗಳನ್ನೂ ಹುಟ್ಟುಹಾಕಿದೆ. ಮೊದಲನೆಯದಾಗಿ ಕೊಟ್ಟ ಆಹ್ವಾನವನ್ನು ಹಿಂದೆದುಕೊಂಡಿದ್ದರಿಂದ ಸಂಸ್ಥೆಯ ಘನತೆಗೆ ಪೆಟ್ಟು ತಗುಲಿದೆ. ಆದರೆ ಇದರಿಂದ ನಷ್ಟವಾಗಿರುವುದು ಯಾರಿಗೆ? ಆಹ್ವಾನಿತರಿಗೋ? ಆತಿಥೇಯರಿಗೋ? ಇಂಥಾ ತೀರ್ಮಾನಗಳು ಅಭಿವ್ಯಕ್ತಿ ಸ್ವಾತಂತ್ರ್ಯದಂಥ ಪ್ರಜಾತಾಂತ್ರಿಕ ಮೌಲ್ಯಗಳ ರಕ್ಷಣೆಗೆ ಹೋರಾಡುತ್ತಿರುವವರ ಆತ್ಮ ಗೌರವದ ಸಾರವನ್ನು ಕಡಿಮೆ ಮಾಡಬಲ್ಲದೇ?

ಅಖಿಲ ಭಾರತೀಯ ಮರಾಠಿ ಸಾಹಿತ್ಯ ಮಹಾಮಂಡಳಕ್ಕೆ ಒಂದು ಘನತೆಯಿದೆ. ಸೆಹಗಲ್ ಕುರಿತಂತೆ ಅದು ತಳೆದ ನಿರ್ಧಾರ ಆ ಘನತೆಗೆ ತೀವ್ರವಾದ ಧಕ್ಕೆಯನ್ನು ಮಾಡಿದೆ. ಮಂಡಳದ ತೀರ್ಮಾನವನ್ನು ವಿರೋಧಿಸಿ ಕಾರ್ಯದರ್ಶಿ ತಮ್ಮ ರಾಜೀನಾಮೆಯನ್ನು ನೀಡಿದ್ದಾರೆ. ಅಂದರೆ, ಮಂಡಳದೊಳಗೇ ಈ ತೀರ್ಮಾನಕ್ಕೆ ವಿರೋಧವಿತ್ತು. ಹೊರಗಿನ ಶಕ್ತಿಗಳ ಒತ್ತಡಕ್ಕೆ ಸಿಲುಕಿ ಸಮ್ಮೇಳನದಿಂದ ಸೆಹಗಲ್‌ರನ್ನು ಹೊರಗಿಟ್ಟಿದೆ. ಬಹುಶಃ ದೇಶಾದ್ಯಂತ ಬೆಳೆಯುತ್ತಿರುವ ಅಸಹನೆಯ ವಿರುದ್ಧ ಯಾವಾಗ ಸಾಹಿತಿಗಳು, ಬರಹಗಾರರು, ಚಿಂತಕರು ಪ್ರತಿಕ್ರಿಯಿಸಲು ತೊಡಗಿದರೋ ಅಂದಿನಿಂದ ಸರಕಾರಕ್ಕೂ ಸಾಹಿತ್ಯದ ಮೇಲೆ ಆಸಕ್ತಿ ಬಂದಿದೆ. ಈ ಸಂದರ್ಭದ ಲಾಭವನ್ನು ಪಡೆಯಲು ಹೊಂಚು ಹಾಕಿ ಕುಳಿತ ಬರಹಗಾರರೂ ಸರಕಾರದ ಓಲೈಕೆಗೆ ಪೈಪೋಟಿಯಲ್ಲಿದ್ದಾರೆ. ಒಂದೆಡೆ ಬರಹಗಾರರು ದೇಶದಲ್ಲಿ ನಡೆಯುವ ಹಿಂಸಾಚಾರದ ವಿರುದ್ಧ ಪ್ರಶಸ್ತಿಗಳನ್ನು ಮಾತ್ರವಲ್ಲ, ಪ್ರಾಣವನ್ನೇ ಕೊಡುತ್ತಿರುವಾಗ ಇನ್ನೊಂದೆಡೆ ಪ್ರಶಸ್ತಿಗಳಿಗಾಗಿ ಸರಕಾರದ ಊಳಿಗಕ್ಕೆ ತುದಿಗಾಲಲ್ಲಿ ನಿಂತಿರುವ ಬರಹಗಾರರ ದೊಡ್ಡ ಸಂಖ್ಯೆ ಸೃಷ್ಟಿಯಾಗಿದೆ.

ಸರಕಾರವನ್ನು ಓಲೈಸುತ್ತಲೇ ಎಸ್. ಎಲ್. ಭೈರಪ್ಪರಂತಹ ಲೇಖಕರು ರಾಷ್ಟ್ರೀಯ ಪ್ರೊಫೆಸರ್‌ಗಳಾದರು. ಒಂದು ಕಾಲದಲ್ಲಿ ಸಮಾಜವಾದಿಗಳೆಂದು ಗುರುತಿಸಿಕೊಂಡು ಅದರಿಂದ ಸಿಗುವ ಲಾಭಗಳನ್ನೆಲ್ಲ ತನ್ನದಾಗಿಸಿಕೊಂಡ ಹಿರಿಯ ಸಾಹಿತಿಗಳು ಇದೀಗ ಸರಕಾರ ಬದಲಾಗುತ್ತಿದ್ದಂತೆಯೇ ತಮ್ಮ ನಿಲುವುಗಳನ್ನು ಬದಲಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಬಲಪಂಥೀಯರನ್ನು ಟೀಕಿಸುತ್ತಿದ್ದ, ವ್ಯಂಗ್ಯ ಮಾಡುತ್ತಿದ್ದ ಈ ಸಾಹಿತಿಗಳು ಇದೀಗ, ಬಲ ಎಂದರೆ ಏನು ಎನ್ನುವುದೇ ಗೊತ್ತಿಲ್ಲ ಎಂಬಲ್ಲಿಗೆ ಬಂದು ನಿಂತಿದ್ದಾರೆ. ಇದೇ ಸಂದರ್ಭದಲ್ಲಿ ಮೋದಿ ಆಡಳಿತದ ಕಾಲದಲ್ಲಿ ತಾರಕಕ್ಕೇರುತ್ತಿರುವ ಅಸಹಿಷ್ಣುತೆಯನ್ನು ಕಂಡ ಬಲಪಂಥೀಯ ಒಲವುಳ್ಳ ಲೇಖಕರು ವ್ಯವಸ್ಥೆಯ ವಿರುದ್ಧ ಸಿಡಿದು ನಿಂತಿರುವ ಉದಾಹರಣೆಗಳೂ ಇವೆ. ಒಂದು ಕಾಲದಲ್ಲಿ ಬಿಜೆಪಿಯ ಜೊತೆಗೆ ಮೃದು ನಿಲುವು ತಳೆದಿದ್ದ ಸಾಹಿತಿಗಳು ಬರಹಗಾರರು ಬಿಜೆಪಿ ಆಡಳಿತದಲ್ಲಿ ವಿಫಲವಾಗುತ್ತಿರುವುದನ್ನು ಕಂಡು ತಕ್ಷಣ ಆಡಳಿತ ವಿರೋಧಿ ನಿಲುವನ್ನು ತಳೆದು ಸಾಹಿತ್ಯದ ಘನತೆಯನ್ನು ಎತ್ತಿ ಹಿಡಿದಿದ್ದಾರೆ. ಇತ್ತ ಎಡಪಂಥೀಯ, ಸಮಾಜವಾದ ಎಂದು ಬೊಗಳೆ ಬಿಡುತ್ತಿದ್ದ ಹಲವು ಲೇಖಕರು ಇಂದು ಪ್ರಭುತ್ವದ ಊಳಿಗಕ್ಕಿಳಿದಿದ್ದಾರೆ. ಸೆಹಗಲ್ ಅವರನ್ನು ಅವಮಾನಿಸುವುದರ ಹಿಂದೆ ಇಂತಹ ಬರಹಗಾರರ ದೊಡ್ಡ ದಂಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ವ್ಯವಸ್ಥೆಯೊಂದಿಗೆ ಸೇರಿಕೊಂಡು ಅನ್ಯಾಯವನ್ನು ವೌನವಾಗಿ ನೋಡುವ ಅಥವಾ ವ್ಯವಸ್ಥೆಯನ್ನು ಸಮರ್ಥಿಸುವ ಸಾಹಿತಿ ಯಾವುದೇ ರಾಜಕಾರಣಿಗಳಿಗಿಂತ ಹೆಚ್ಚು ಅಪಾಯಕಾರಿ. ಯಾಕೆಂದರೆ, ಈ ಸಾಹಿತಿಗಳ ಬರಹಗಳನ್ನು ನಂಬಿದ ಜನರು ಇವರ ಸಮಯಸಾಧಕ ನಡೆಯನ್ನು ಗುರುತಿಸಲು ವಿಫಲವಾದರೆ ಅದು ಸಮಾಜಕ್ಕೆ ಅತಿ ದೊಡ್ಡ ಅಪಾಯವನ್ನುಂಟು ಮಾಡಬಹುದು. ಆದುದರಿಂದಲೇ ರಾಜಕಾರಣಿಗಳಿಗೆ ತಮ್ಮನ್ನು ಓಲೈಸುವ ಬರಹಗಾರರು ಬೇಕಾಗಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ವಿರುದ್ಧ ಮಾತನಾಡುವ ಬರಹಗಾರರ ವಿರುದ್ಧ ದೇಶದ್ರೋಹದ ಆರೋಪಗಳನ್ನು ದಾಖಲಿಸುವ ಹೊಸ ಚಾಳಿಯೂ ಆರಂಭವಾಗಿದೆ. ಒಂದು ಕಾಲದಲ್ಲಿ ವ್ಯವಸ್ಥೆಯನ್ನು ವಿರೋಧಿಸುವ ಲೇಖಕ ಪ್ರಶಸ್ತಿಯಿಂದಷ್ಟೇ ವಂಚಿತನಾಗಬೇಕಾಗಿತ್ತು. ಇಂದು ಸ್ಥಿತಿ ಅದಕ್ಕಿಂತ ಭಿನ್ನವಾಗಿದೆ. ವ್ಯವಸ್ಥೆಯನ್ನು ಪ್ರಶ್ನಿಸುವ ಲೇಖಕನನ್ನು ಉಗ್ರವಾದಿ, ದೇಶದ್ರೋಹಿ ಎಂದು ಯಾವಾಗ ಬೇಕಾದರೂ ಪೊಲೀಸರು ಬಂಧಿಸಬಹುದು. ಸಮಾಜದ ಕುರಿತಂತೆ ಕಾಳಜಿಯಿರುವ, ಆದರೆ ಪ್ರಭುತ್ವದ ವಿರುದ್ಧ ಭಯವಿರುವ ಲೇಖಕರು ವೌನವನ್ನೇ ತಮ್ಮ ತಾಣವಾಗಿ ಆರಿಸಿಕೊಂಡಿದ್ದಾರೆ. ಸಾಹಿತ್ಯ ಕ್ಷೇತ್ರದ ಒಂದು ಸಣ್ಣ ವರ್ಗವಷ್ಟೇ ಇಂದು ದೊಡ್ಡ ದನಿಯಲ್ಲಿ ಮಾತನಾಡುತ್ತಿದೆ ಮತ್ತು ಅತ್ಯಂತ ಅಪಾಯಕಾರಿ ಸನ್ನಿವೇಶವನ್ನು ಅದು ಎದುರಿಸುತ್ತಿದೆ.

ಸೆಹಗಲ್ ಅವರಿಗೆ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಯಾಕೆ ಅವಕಾಶ ಸಿಗಲಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯವೇ ಆಗಿದೆ. ಅವರು ಆ ವೇದಿಕೆಯನ್ನು ವರ್ತಮಾನದ ಸತ್ಯಗಳನ್ನು ಹೇಳಲು ಬಳಸಬಹುದು ಎಂಬ ಭಯ ಸರಕಾರಕ್ಕಿತ್ತು. ಸೆಹಗಲ್ ಅವರನ್ನು ಅಲ್ಲಿಂದ ದೂರ ಇಡಲು ಸರಕಾರ ನೇರವಾಗಿ ಭಾಗಿಯಾಗದೇ ಇರಬಹುದು. ಆದರೆ ತನ್ನನ್ನು ಓಲೈಸುವ ಸಂಘಟಕರನ್ನು ಅದು ಬಳಸಿಕೊಂಡಿದೆ. ಆದರೆ ಸೆಹಗಲ್ ಸಮ್ಮೇಳನದಲ್ಲಿ ಭಾಗವಹಿಸದೆಯೂ ಹೇಳಬೇಕಾದುದನ್ನು ಹೇಳಿದ್ದಾರೆ. ಸಾಹಿತ್ಯ ಸಮ್ಮೇಳನ ಹೇಗೆ ರಾಜಕೀಯ ಶಕ್ತಿಗಳ ನಿಯಂತ್ರಣದಿಂದ ಸೊರಗುತ್ತಿದೆ ಮತ್ತು ಸಾಹಿತಿಗಳು ಇಂತಹ ಸಂದರ್ಭದಲ್ಲಿ ಎಂತಹ ನಿಲುವನ್ನು ತಳೆಯಬೇಕು ಎನ್ನುವ ಸಂದೇಶ ಸೆಹಗಲ್ ಮೂಲಕ ದೇಶಕ್ಕೆ ಸಿಕ್ಕಿದೆ.

ರಾಜನ ಆಸ್ಥಾನದಲ್ಲಿ ಆತನ ವರ್ಣನೆ ಮಾಡುವವನದು ಊಳಿಗದ ಕೆಲಸ. ಆಸ್ಥಾನದಿಂದ ಹೊರಗೆ ನಿಂತು ರಾಜನ ವಿರುದ್ಧವೇ ಮಾತನಾಡುವುದು ನಿಜವಾದ ಕವಿ, ಸಾಹಿತಿಯ ಕೆಲಸ. ಅಂತಹ ಕೆಲಸ ಮಾಡುತ್ತಾ ಕಲಬುರ್ಗಿ, ಗೌರಿಯಂತಹವರು ಪ್ರಾಣ ಕಳೆದುಕೊಂಡಿರಬಹುದು. ಆದರೆ ಜನಮಾನಸದೊಳಗೆ ಅವರು ಇನ್ನಷ್ಟು ವಿಸ್ತಾರಗೊಂಡಿದ್ದಾರೆ. ಪ್ರಭುತ್ವದ ವಿರುದ್ಧ ಜನರು ಹೋರಾಟ ನಡೆಸುವುದಕ್ಕೆ ಸ್ಫೂರ್ತಿಯಾಗಿದ್ದಾರೆ. ಇಂದು ಸಾಹಿತ್ಯವನ್ನು ಸಾಹಿತ್ಯ ಸಮ್ಮೇಳನದಲ್ಲಿ ನಾವು ಹುಡುಕಲು ಹೋಗಬಾರದು. ಅದು ಬೀದಿಯಲ್ಲಿ, ಜೈಲುಗಳಲ್ಲಿ, ನ್ಯಾಯಾಲಯದ ಕಟಕಟೆಯಲ್ಲಿ ಅಭಿವ್ಯಕ್ತಿಗೊಳ್ಳುವ ಸಮಯ. ಕಂಬಾರರಂತಹವರಿಗೆ ಸಾಹಿತ್ಯವೆನ್ನುವುದು ಊಟದ ಬಳಿಕದ ಎಲೆಯಡಿಕೆಯಾದರೆ, ನಿಜವಾದ ಕವಿಗೆ ಅದು ಅಗ್ನಿದಿವ್ಯ. ಅದನ್ನು ದಾಟಿ ಬರಲು ಎಂಟೆದೆ ಬೇಕು. ಅಂತಹ ಸಾಹಿತಿಗಳ, ಬರಹಗಾರರ ಸಂಖ್ಯೆ ಹೆಚ್ಚಳವಾಗುವುದನ್ನು ದೇಶ ಎದುರು ನೋಡುತ್ತಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top