Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಅಸ್ಪೃಶ್ಯತೆ ತೊಲಗದೆ ದೇಶಕ್ಕೆ...

ಅಸ್ಪೃಶ್ಯತೆ ತೊಲಗದೆ ದೇಶಕ್ಕೆ ಭವಿಷ್ಯವಿಲ್ಲ

23 Nov 2022 12:05 AM IST
share
ಅಸ್ಪೃಶ್ಯತೆ ತೊಲಗದೆ ದೇಶಕ್ಕೆ ಭವಿಷ್ಯವಿಲ್ಲ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

ದಲಿತರಿಗೆ ಸಾಗುವಳಿ ಮಾಡಲು ನೀಡಿರುವ ಭೂಮಿಯನ್ನು ಪರಭಾರೆ ಮಾಡುವುದನ್ನು ತಡೆಯಲು ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ 1979ರಲ್ಲಿ ಪಿಟಿಸಿಲ್ ಕಾಯ್ದೆಯನ್ನು ಜಾರಿಗೆ ತಂದರು. ಆದರೂ ದಲಿತರ ಭೂಮಿಯನ್ನು ಅಗ್ಗದ ಬೆಲೆಗೆ ಕಬಳಿಸುವ ಭೂ ಮಾಫಿಯಾದ ಮಸಲತ್ತನ್ನು ತಪ್ಪಿಸಲು ಆಗಿಲ್ಲ. ಕಾಯ್ದೆಯೇನೋ ಬಿಗಿಯಾಗಿದೆ. ಆದರೆ ದಲಿತರ ಭೂಮಿ ಪರಭಾರೆಯಾಗುತ್ತಲೇ ಇದೆ. ಇದನ್ನು ತಡೆಯಬೇಕಾದ ಕಂದಾಯ ಇಲಾಖೆ ನಿಷ್ಕ್ರಿಯವಾಗಿದೆ. ಇದರಿಂದಾಗಿ ದಲಿತರಿಗೆ ಭೂ ಒಡೆತನ ನೀಡಲು 1924 ರಲ್ಲಿ ಮೈಸೂರು ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು ಕೈಗೊಂಡ ಕ್ರಮ ನಿರರ್ಥಕವಾದಂತಾಗಿದೆ. ಸ್ವಾತಂತ್ರ್ಯ ಬರುವ ಮೊದಲು ಹಾಗೂ ನಂತರ ಪರಿಶಿಷ್ಟ ವರ್ಗದ ಜನರಿಗೆ ಮಂಜೂರಾದ ಭೂಮಿಯನ್ನು ನಿರ್ದಿಷ್ಟ ಅವಧಿಯ ವರೆಗೆ ಪರಭಾರೆ ಮಾಡಬಾರದೆಂಬ ಷರತ್ತು ಕಾಗದದಲ್ಲಿ ಮಾತ್ರ ಉಳಿದಿದೆ.

ಒಂದೆಡೆ ದಲಿತರಿಗೆ ಮಂಜೂರಾದ ಭೂಮಿಯನ್ನು ಭೂ ಮಾಫಿಯಾ ಕಿತ್ತುಕೊಳ್ಳುತ್ತಿದ್ದರೆ ಇನ್ನೊಂದೆಡೆ ಈ ಸಮುದಾಯಗಳ ಮೇಲೆ ನಿರಂತರವಾಗಿ ಅತ್ಯಂತ ಅಮಾನವೀಯವಾದ ದೌರ್ಜನ್ಯ ಮುಂದುವರಿದಿದೆ. ದಲಿತ ಮಹಿಳೆಯೊಬ್ಬಳು ನೀರು ಕುಡಿದ ತಪ್ಪಿಗಾಗಿ ಕಿರು ನೀರು ಸರಬರಾಜು ಟ್ಯಾಂಕನ್ನು ಗೋಮೂತ್ರದಿಂದ ಶುದ್ಧೀಕರಣ ಮಾಡಿರುವ ಅತ್ಯಂತ ಹೇಯ ಘಟನೆ ಚಾಮರಾಜನಗರ ಜಿಲ್ಲೆಯ ಹೆಗ್ಗೋಠಾರ ಗ್ರಾಮದಲ್ಲಿ ನಡೆದಿದೆ. ಸ್ವಾತಂತ್ರ್ಯ ಬಂದು ಏಳು ದಶಕಗಳ ನಂತರವೂ ನಮ್ಮ ದೇಶವನ್ನು ಕಟ್ಟಿದ ದುಡಿಯುವ ದಲಿತ ಜನವರ್ಗ ಅನುಭವಿಸುತ್ತಿರುವ ನರಕ ಯಾತನೆ ಇದು.

ಹೆಗ್ಗೋಠಾರದ ದಲಿತ ಮಹಿಳೆ ಮಾಡಿದ ಅಪರಾಧವಾದರೂ ಏನು? ಮದುವೆಯೊಂದಕ್ಕೆ ಬಂದಿದ್ದ ಈ ಮಹಿಳೆ ಮಧ್ಯಾಹ್ನದ ಊಟ ಮುಗಿಸಿ ವಾಪಸಾಗುವಾಗ ಲಿಂಗಾಯತರ ಬೀದಿಯಲ್ಲಿರುವ ಟ್ಯಾಂಕ್‌ನ ನಲ್ಲಿಯಿಂದ ನೀರು ಕುಡಿದಿದ್ದಾರೆ. ಈಕೆ ದಲಿತ ಮಹಿಳೆ ಎಂದು ತಿಳಿದ ತಕ್ಷಣ ಸ್ಥಳೀಯ ಲಿಂಗಾಯತರು ನೀರು ಮೈಲಿಗೆಯಾಯಿತೆಂದು ಕೂಗಾಡಿ ಮಹಿಳೆಯನ್ನು ಜಾತಿ ಹೇಳಿ ಬೈದು ಅವಮಾನ ಮಾಡಿದ್ದಾರೆ. ಹನ್ನೆರಡನೇ ಶತಮಾನದಲ್ಲಿ ಜಾತಿ ಪದ್ಧತಿಯ ವಿರುದ್ಧ ಮತ್ತು ಅಸ್ಪೃಶ್ಯತೆ ವಿರುದ್ಧ ಹೋರಾಟ ಮಾಡಿದ ಬಸವಣ್ಣನವರ ಹೆಸರು ಹೇಳುವ ಸಮುದಾಯದ ಜನರೇ ಇಷ್ಟೊಂದು ಅಮಾನವೀಯವಾಗಿ ನಡೆದುಕೊಂಡರೆ ಹೇಗೆ?

ಕರ್ನಾಟಕದಲ್ಲಿ ಇತ್ತೀಚೆಗೆ ದಲಿತ ಸಮುದಾಯಗಳ ಜನರ ಮೇಲೆ ಅತ್ಯಂತ ಪೈಶಾಚಿಕವಾದ ದೌರ್ಜನ್ಯದ ಪ್ರಕರಣಗಳು ವರದಿಯಾಗುತ್ತಲೇ ಇವೆ. ಎರಡು ತಿಂಗಳ ಹಿಂದೆ ಕೋಲಾರ ಜಿಲ್ಲೆಯಲ್ಲಿ ಗ್ರಾಮದೇವತೆಯ ಗುಜ್ಜುಕೋಲನ್ನು ಮುಟ್ಟಿದ ಬಾಲಕನ ಮೇಲೆ ಅತ್ಯಂತ ಅಮಾನುಷವಾದ ದೈಹಿಕ ಹಲ್ಲೆಯಾಗಿತ್ತು.ಅಷ್ಟೇ ಅಲ್ಲ ಈ ಬಾಲಕನ ಕುಟುಂಬದ ಮೇಲೆ ಬಹಿಷ್ಕಾರ ಹಾಕಲಾಗಿತ್ತು. ಸರಕಾರ ಇಂತಹ ಪ್ರಕರಣಗಳ ಬಗ್ಗೆ ಸೌಮ್ಯವಾದ ಧೋರಣೆ ತಾಳಿದ ಪರಿಣಾಮವಾಗಿ ಜಾತಿವಾದಿಗಳಿಗೆ ದಲಿತರ ಮೇಲೆ ದೌರ್ಜನ್ಯ ನಡೆಸಲು ಮುಕ್ತ ಅವಕಾಶ ದೊರೆತಂತಾಗುತ್ತದೆ.

ಒಂದೆಡೆ ರಾಜ್ಯದಲ್ಲಿ ಪರಿಶಿಷ್ಟ ಮತ್ತು ಹಿಂದುಳಿದ ಸಮುದಾಯಗಳ ಮೇಲೆ ದೌರ್ಜನ್ಯದ ಪ್ರಕರಣಗಳು ಹೆಚ್ಚಾಗುತ್ತಿದ್ದರೆ, ಇನ್ನೊಂದೆಡೆ ಅಧಿಕಾರದಲ್ಲಿರುವ ಪಕ್ಷ ಪರಿಶಿಷ್ಟ ಮತ್ತು ಹಿಂದುಳಿದ ವರ್ಗಗಳ ಸಮುದಾಯಗಳ ಸಮಾವೇಶಗಳನ್ನು ನಡೆಸಿ ವೋಟಿನ ರಾಜಕಾರಣ ನಡೆಸಿದೆ. ದಲಿತರಿಗೆ ಸರಕಾರದ ಒಣ ಅನುಕಂಪ ಬೇಡ. ಸಂವಿಧಾನವೇ ದಮನಿತ ಸಮುದಾಯಗಳ ರಕ್ಷಾ ಕವಚವಾಗಿದೆ. ಬಾಬಾ ಸಾಹೇಬರ ಈ ಸಂವಿಧಾನಕ್ಕೆ ಚ್ಯುತಿಯಾಗದಂತೆ ನಡೆದುಕೊಳ್ಳುವ ಬದ್ಧತೆಯನ್ನು ಸರಕಾರ ತೋರಿಸಬೇಕಾಗಿದೆ.

ಇಂತಹ ದೌರ್ಜನ್ಯದ ಘಟನೆಗಳು ನಡೆದ ನಂತರ ಎಲ್ಲೆಡೆ ಹೋಗುವಂತೆ ಹೆಗ್ಗೋಠಾರ ಗ್ರಾಮಕ್ಕೂ ಕಂದಾಯ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹೋಗಿ ಘಟನೆಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಹಳ್ಳಿಯ ವಿವಿಧ ಬೀದಿಗಳಲ್ಲಿರುವ ಟ್ಯಾಂಕ್‌ಗಳ ನೀರನ್ನು ಪರಿಶಿಷ್ಟ ಸಮುದಾಯದ ಜನ ಕುಡಿಯುವಂತೆ ಮಾಡಿ ಅಸ್ಪೃಶ್ಯತೆ ಆಚರಣೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂಬ ಭಾವನೆ ಮೂಡುವಂತೆ ಮಾಡಿದ್ದಾರೆ. ಆದರೆ ಘಟನೆ ನಡೆದ ಬಳಿಕ ಹೋಗಿ ಹೀಗೆ ಮಾಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಅಸ್ಪೃಶ್ಯತೆ ಆಚರಣೆಯ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಕೈಗೊಂಡರೆ ಮಾತ್ರ ಇಂತಹ ಕ್ರೌರ್ಯವನ್ನು ತಡೆಯಬಹುದು.

ಈಗ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷದ ಅನೇಕ ಮಂತ್ರಿಗಳು, ಸಂಸದರು, ಶಾಸಕರು ಪದೇ ಪದೇ ಹಿಂದುತ್ವದ ಬಗ್ಗೆ ಆವೇಶಪೂರ್ಣವಾಗಿ ಮಾತಾಡುತ್ತಾರೆ. ಆದರೆ ದೇಶಕ್ಕೆ ಸ್ವಾತಂತ್ರ ಬಂದು ಎಪ್ಪತ್ತೈದು ವರ್ಷಗಳ ನಂತರವೂ ಕುಡಿಯುವ ನೀರಿಗಾಗಿ ದಲಿತರು ನಿತ್ಯವೂ ಅಮಾನವೀಯ ಹಿಂಸೆಯನ್ನು ಅನುಭವಿಸುತ್ತಿದ್ದಾರೆ. ಇಷ್ಟು ಮಾತ್ರವಲ್ಲ, ಅನೇಕ ಊರುಗಳಲ್ಲಿ ದಲಿತರಿಗೆ ಹೊಟೇಲ್‌ಗಳಲ್ಲಿ ಊಟ, ಉಪಾಹಾರ ನೀಡುವಾಗ ತಾರತಮ್ಯ ಮಾಡಲಾಗುತ್ತದೆ. ಕ್ಷೌರ ಮಾಡಲು ನಿರಾಕರಿಸಲಾಗುತ್ತದೆ. ಕೆಲವೆಡೆ ಕಿರಾಣಿ ಅಂಗಡಿಗಳಲ್ಲಿ ಪದಾರ್ಥವನ್ನು ಕೊಡುವುದಿಲ್ಲ. ಕುಡಿಯುವ ನೀರಿನ ಮಡಕೆಯನ್ನು ಮುಟ್ಟಿದ್ದಕ್ಕಾಗಿ ಶಾಲಾ ಶಿಕ್ಷಕನಿಂದ ಏಟು ತಿಂದ ಒಂಭತ್ತು ವರ್ಷದ ದಲಿತ ಬಾಲಕ ಸಾವಿಗೀಡಾದ ಘಟನೆ ರಾಜಸ್ಥಾನದಿಂದ ಎರಡು ತಿಂಗಳ ಹಿಂದೆ ವರದಿಯಾಗಿತ್ತು. ಇವೆಲ್ಲ ನಾಗರಿಕ ಸಮಾಜ ನಾಚಿಕೆಯಿಂದ ತಲೆ ತಗ್ಗಿಸುವ ಘಟನೆಗಳು.

ಇದಲ್ಲದೆ ದಲಿತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮತ್ತು ಮಾನಭಂಗದ ಪ್ರಕರಣಗಳು ವರದಿಯಾಗುತ್ತಲೇ ಇವೆ. ಮನುವಾದಿ, ಜಾತೀವಾದಿ ರೋಗಿಷ್ಟ ಮನಸ್ಸುಗಳು ಸಂವಿಧಾನ ಸಮಾನತೆಯ ಆಶಯಗಳಿಗೆ ಕೊಳ್ಳಿ ಇಡುತ್ತಲೇ ಇವೆ. ಭಾರತೀಯ ಸಮಾಜದಲ್ಲಿ ಬೇರು ಬಿಟ್ಟಿರುವ ಜಾತಿ ತಾರತಮ್ಯದ ಬೇರುಗಳನ್ನು ಕತ್ತರಿಸಿ ಹಾಕಬೇಕಾಗಿದೆ. ಅಸ್ಪೃಶ್ಯತೆ ಮತ್ತು ಜಾತೀಯತೆ ನಿವಾರಣೆಗೆ ಉಗ್ರ ಕಾನೂನು ಕ್ರಮದ ಜೊತೆಗೆ ಸಾಮಾಜಿಕ ಜಾಗೃತಿಯ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ. ವಿಭಿನ್ನ ಸಮುದಾಯದ ಹುಡುಗ-ಹುಡುಗಿ ಪ್ರೀತಿಸಿ ವಿವಾಹವಾದರೆ ‘ಲವ್ ಜಿಹಾದ್’ ಎಂದು ಬಣ್ಣ ಹಚ್ಚಿ ಕೋಲಾಹಲವನ್ನು ಉಂಟು ಮಾಡುವ ಸಂಘಟನೆಗಳು ಅಮಾನವೀಯವಾದ ಜಾತಿ ತಾರತಮ್ಯ, ಅಸ್ಪೃಶ್ಯತೆಯ ಬಗ್ಗೆ ಮೌನ ಮುರಿಯಬೇಕಾಗಿದೆ. ಈ ಕಾರ್ಯದಲ್ಲಿ ಧಾರ್ಮಿಕ ನಾಯಕರು, ಧರ್ಮ ಗುರುಗಳು ತಮ್ಮನ್ನು ತೊಡಗಿಸಿಕೊಳ್ಳಬೇಕಾಗಿದೆ. ಭಾರತದಿಂದ ಅಸ್ಪಶ್ಯತೆಯನ್ನು ಸಂಪೂರ್ಣವಾಗಿ ಬೇರು ಸಮೇತ ಕಿತ್ತು ಹಾಕದೇಹೋದರೆ ದೇಶಕ್ಕೆ ಭವಿಷ್ಯವಿಲ್ಲ ಎಂಬುದನ್ನು ಮರೆಯಬಾರದು.

share
Next Story
X