-

ಲೋಕಸಭೆಯನ್ನು 'ನಡುಗಿಸಿದ' ರಾಹುಲ್ ಗಾಂಧಿ ಭಾಷಣದ ಪೂರ್ಣ ಪಠ್ಯ

"ಆರೆಸ್ಸೆಸ್, ಬಿಜೆಪಿ ಜನರ ಸೌಹಾರ್ದತೆ, ಸಂಸ್ಕೃತಿಗಳನ್ನು ಹಾಳುಗೆಡವುತ್ತಿದೆ"

-

ರಾಹುಲ್ ಗಾಂಧಿ (PTI)

ಸದನವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಯವರು ದೇಶದ ಹಲವು ವಿಷಯಗಳ ಬಗ್ಗೆ ಬೆಳಕು ಚೆಲ್ಲಲಿಲ್ಲ. ನಾನು ಅಂತಹ ಒಂದಷ್ಟು ವಿಷಯಗಳ ಬಗ್ಗೆ ಮಾತನಾಡಲು ಬಯಸುತ್ತೇನೆ. ರಾಷ್ಟ್ರಪತಿ ಭಾಷಣ ಎಂಬುದು ಕೇವಲ ಅಧಿಕಾರಿಗಳು ಕಾಗದದಲ್ಲಿ ಬರೆದುಕೊಟ್ಟ ಭಾಷಣವೇ ಹೊರತು ದೇಶದ ದೂರದೃಷ್ಟಿ ಭವಿಷ್ಯವನ್ನು ಹೊಂದಿಲ್ಲ. 

ಮೂರು ಮೂಲಭೂತ ವಿಷಯಗಳನ್ನು ರಾಷ್ಟ್ರಪತಿ ಭಾಷಣದಲ್ಲಿ ಉಲ್ಲೇಖ ಮಾಡಲಾಗಿಲ್ಲ. ಅದರಲ್ಲಿ ಮೊದಲನೆಯದ್ದು ಮತ್ತು ಮುಖ್ಯವಾದದು ಎರಡು ಹಿಂದೂಸ್ತಾನ ಸೃಷ್ಟಿಯಾಗಿರುವ ಆತಂಕ. ಈಗ "ಒನ್ ಇಂಡಿಯಾ" ಎಂಬುದೇ ಇಲ್ಲ. ಈಗ ಎರಡು ಭಾರತ ಇದೆ.  ಅಗರ್ಭ ಶ್ರೀಮಂತರದ್ದೇ ಆಗಿರುವ ಒಂದು ಭಾರತ. ಶ್ರೀಮಂತರ ಭಾರತದಲ್ಲಿ ಜನಬಲ, ಹಣ ಬಲ ಇದೆ. ಇವರೇ ಇಡೀ ದೇಶವನ್ನು ನಿಯಂತ್ರಣ ಮಾಡುತ್ತಿದ್ದಾರೆ. ಇನ್ನೊಂದು ಬಡವರ ಭಾರತ ಅಸ್ತಿತ್ವದಲ್ಲಿದೆ.

ನಾನು ಟೀಕೆಗಾಗಿ ಟೀಕೆ ಮಾಡುತ್ತಿಲ್ಲ. ದೇಶದಲ್ಲಿ ಏನು ನಡೆಯುತ್ತಿದೆಯೋ ಅದನ್ನು ಒಬ್ಬ ನಾಗರಿಕನಾಗಿ ಮಾತನಾಡುತ್ತಿದ್ದೇನೆ. ನಾನಾಗಲೇ ಹೇಳಿದ್ದನ್ನು ಮತ್ತೆ ಮತ್ತೆ ಹೇಳುತ್ತಿದ್ದೇನೆ. ಈಗ ಎರಡು ಹಿಂದೂಸ್ತಾನ ಆಗುತ್ತಿದೆ. ಒಂದು ಅಗರ್ಭ ಶ್ರೀಮಂತರ ಭಾರತ, ಇನ್ನೊಂದು ಬಡವರ ಭಾರತ. ಈ ಎರಡು ಭಾರತಗಳ ನಡುವಿನ ಕಂದಕ ನಿರಂತರವಾಗಿ ಹೆಚ್ಚುತ್ತಿದೆ.

ಉತ್ತರಪ್ರದೇಶ ಮತ್ತು ಬಿಹಾರದ ಯುವಕರ ಉದ್ಯೋಗದ ಸ್ಥಿತಿಗತಿ ಹೇಗಿದೆ ? ಈ ಬಗ್ಗೆ ನೀವು ಮಾತನಾಡಲ್ಲ. ಬಡವರ ಭಾರತದಲ್ಲಿ ಈಗ ನಿರುದ್ಯೋಗ ತಾಂಡವವಾಡುತ್ತಿದೆ. ರಾಷ್ಟ್ರಪತಿ ಭಾಷಣದಲ್ಲಿ ಈ ನಿರುದ್ಯೋಗದ ಬಗ್ಗೆ ಒಂದು ಶಬ್ದವೂ ಇಲ್ಲ. ಇಡೀ ಭಾರತದಲ್ಲಿ ಯುವಕರು ಉದ್ಯೋಗವನ್ನು ಅರಸುತ್ತಿದ್ದಾರೆ. ದೇಶದ ಎಲ್ಲಾ ರಾಜ್ಯಗಳ ಯುವಕರದ್ದು ಒಂದೇ ಬೇಡಿಕೆ. ಅದು ಉದ್ಯೋಗ. ಆದರೆ ಸರ್ಕಾರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. 50 ವರ್ಷಗಳಲ್ಲಿ ಇಂತಹ ನಿರುದ್ಯೋಗ ವ್ಯವಸ್ಥೆಯನ್ನು ಭಾರತ ಕಂಡಿಲ್ಲ. ಮೇಕ್ ಇನ್ ಇಂಡಿಯಾ, ಸ್ಟಾರ್ಟ್ ಅಪ್ ಬಗ್ಗೆ ಮಾತನಾಡುತ್ತಾರೆ. ಆದರೆ ಇದ್ಯಾವುದರಿಂದಲೂ ಉದ್ಯೋಗ ಯಾಕೆ ಸೃಷ್ಟಿಯಾಗುತ್ತಿಲ್ಲ ? ಎಷ್ಟು ಉದ್ಯೋಗ ಸೃಷ್ಟಿ ಮಾಡಲಾಗಿದೆ ? ಯಾವ ರೀತಿಯ ಉದ್ಯೋಗ ಸೃಷ್ಟಿ ಮಾಡಲಾಗಿದೆ ? ಇದನ್ನೂ ರಾಷ್ಟ್ರಪತಿ ಭಾಷಣದಲ್ಲಿ ಹೇಳಲಾಗಿಲ್ಲ. ಈ ರೀತಿಯ ಎರಡು ಭಾರತದ ಸೃಷ್ಟಿ ಯಾಕೆ ಆಯ್ತು ? 

ಉದ್ಯೋಗ ಎಂಬುದು ಸಣ್ಣ ಕೈಗಾರಿಕೆಗಳಿಂದ ಸೃಷ್ಟಿಯಾಗುತ್ತದೆ. ಲಕ್ಷ ಕೋಟಿ ರೂಪಾಯಿಗಳನ್ನು ನೀವು ಸಣ್ಣ ಕೈಗಾರಿಕೆಗಳಿಂದ ಕಿತ್ತುಕೊಂಡು ಭಾರತದ ಕೋಟ್ಯಾಧಿಪತಿಯ ದೊಡ್ಡ ಉಧ್ಯಮಿಗಳಿಗೆ ನೀಡಿದ್ರಿ. ಕಳೆದ ಏಳು ವರ್ಷಗಳಲ್ಲಿ ಬಿಜೆಪಿ ಸರ್ಕಾರವು  ಅಸಂಘಟಿತ ವಲಯವನ್ನು ಮತ್ತು  ಎಂಎಸ್‌ಎಂಇಗಳ ಒಂದರ ಮೇಲೊಂದು ದಾಳಿ ಮಾಡಿ ನಾಶ ಮಾಡಿದೆ. ನೋಟು ರದ್ದತಿ, ಜಿಎಸ್ ಟಿಯ ಮೂಲಕ ಅಸಂಘಟಿತ ಮತ್ತು ಸಣ್ಣ ಕೈಗಾರಿಕೆಗಳ ಮೇಲೆ ನೀವು ದಾಳಿ ಮಾಡಿದ್ರಿ. ಕೊರೋನಾ ಸಮಯದಲ್ಲಿ ಈ ವಲಯಕ್ಕೆ ಕೊಡಬೇಕಾದ ಸಹಾಯ ಸಹಕಾರವನ್ನು ನೀವು ನೀಡಲಿಲ್ಲ. 

ಕೊರೋನಾ ಸಮಯದಲ್ಲಿ ಹಲವು ರೂಪಾಂತರಗಳು (ವೇರಿಯೆಂಟ್) ಬಂದವು. ಡೆಲ್ಟಾ, ಒಮಿಕ್ರಾನ್ ರೀತಿ ದೇಶಕ್ಕೆ ಎ ( AA) ಎಂಬ ಡಬಲ್ ವೇರಿಯೆಂಟ್ (ಅಂಬಾನಿ, ಅಧಾನಿ ) ವಕ್ಕರಿಸಿದೆ. ಈ ಡಬಲ್ ಎ ವೇರಿಯೆಂಟ್ ಇಡೀ ದೇಶದ ಅರ್ಥ ವ್ಯವಸ್ಥೆಯನ್ನು ಹಾಳು ಮಾಡುತ್ತಿದೆ. ಒಬ್ಬ ವ್ಯಕ್ತಿಗಳಿಗೆ ಭಾರತದ  ಎಲ್ಲಾ ಉದ್ಯಮವನ್ನು ನೀಡಲಾಗುತ್ತಿದೆ. ಭಾರತದ ಎಲ್ಲಾ ಬಂದರು, ಎಲ್ಲಾ ಏರ್ ಪೋರ್ಟ್, ವಿದ್ಯುತ್, ಗಣಿಗಾರಿಕೆ, ಗ್ರೀನ್ ಎನರ್ಜಿ, ಗ್ಯಾಸ್ ಸರಬರಾಜು ಎಲ್ಲವನ್ನು ಅದಾನಿ ಕೈಗೆ ಒಪ್ಪಿಸಲಾಗಿದೆ‌. ಮತ್ತೊಂದೆಡೆಯಲ್ಲಿ ಅಂಬಾನಿಗೆ ಪೆಟ್ರೋಕೆಮಿಕಲ್, ಟೆಲಿಕಾಂ, ಸಗಟು, ಇ ಕಾಮರ್ಸ್ ವನ್ನು ಧಾರೆ ಎರೆಯಲಾಗಿದೆ. ಈ ರೀತಿ ದೇಶದ ಎಲ್ಲಾ ಉಧ್ಯಮಗಳನ್ನು ಈ ಇಬ್ಬರ ಕೈಗೆ ವಹಿಸಲಾಗಿದೆ. 

ನೀವು ಅಸಂಘಟಿತ ವಲಯ ಮತ್ತು ಸಣ್ಣ, ಮಧ್ಯಮ ಕೈಗಾರಿಕೆಗಳನ್ನು ಬಂದ್ ಮಾಡಿಸಿದ್ದೀರಿ. ಅವುಗಳಿಗೇನಾದರೂ ಬೆಂಬಲ‌ ನೀಡಿದ್ದರೆ, ಉತ್ಪಾದನಾ ವಲಯವನ್ನು ಹೆಚ್ಚಿಸಿದ್ದರೆ ಇವತ್ತಿನ ಭಾರತ ಎರಡಾಗುತ್ತಿರಲಿಲ್ಲ. ಮಾತೆತ್ತಿದರೆ ಮೇಡ್ ಇನ್ ಇಂಡಿಯಾ, ಮೇಕ್ ಇನ್ ಇಂಡಿಯಾ ಅಂತ ಹೇಳ್ತೀರಿ.‌ ಮೇಡ್ ಇನ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾ ಎಂಬುದು ಮುಗಿದ ಅಧ್ಯಾಯ. ಸಣ್ಣ ಮಧ್ಯಮ‌ ಕೈಗಾರಿಕೆಗಳು, ಅಸಂಘಟಿತ ವಲಯಗಳು ನಾಶ ಆಗಿ ಮೇಡ್ ಇನ್ ಇಂಡಿಯಾ, ಮೇಕ್ ಇನ್ ಇಂಡಿಯಾ ಸಕ್ಸಸ್ ಆಗಲು ಹೇಗೆ ಸಾಧ್ಯ ? 

ಕಳೆದ ಐದು ವರ್ಷಗಳಲ್ಲಿ ಉತ್ಪಾದನಾ ಉದ್ಯೋಗಗಳು ಗಣನೀಯ ಇಳಿಕೆ ಕಂಡಿದೆ. ಯಾಕೆ ಎಂದು ಯೋಚಿಸಿದ್ದೀರಾ ? ಅಸಂಘಟಿತ ಮತ್ತು ಸಣ್ಣಮದ್ಯಮ ಕೈಗಾರಿಕಾ ವಲಯಗಳ ನಾಶವೇ ಇದಕ್ಕೆ ಕಾರಣ. ನೀವು ಕೇವಲ ಐದು ಹತ್ತು ಜನರ ಬಗೆಗಷ್ಟೇ ಯೋಚಿಸುತ್ತಿದ್ದೀರಿ. 

 ದೊಡ್ಡ ಕೈಗಾರಿಕೆಗಳೊಂದಿಗೆ ನನಗೆ ಸಮಸ್ಯೆ ಇಲ್ಲ. ಅವುಗಳ ಮೇಲೆ ನಿಮ್ಮ ಕೇಂದ್ರೀಕರಿಸಿ. ನನಗೇನೂ ಅಡ್ಡಿ ಇಲ್ಲ.  ಆದರೆ ಒಂದು ವಿಷಯ ತಿಳಿದುಕೊಳ್ಳಿ. ಕೇವಲ ದೊಡ್ಡ ಕೈಗಾರಿಕೆಗಳು ನಮ್ಮ ಯುವಕರಿಗೆ ಉದ್ಯೋಗಗಳನ್ನು ಸೃಷ್ಟಿಸಲು ಸಾಧ್ಯವಿಲ್ಲ.  ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಮಾತ್ರ ದೇಶದಲ್ಲಿ ಉದ್ಯೋಗಗಳನ್ನು ಸೃಷ್ಟಿಸಬಲ್ಲವು. ಇದೇ ವಾಸ್ತವ.
ನ್ಯೂ ಇಂಡಿಯಾ, ನಯಾ ಭಾರತ್, ಮೇಕ್ ಇನ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ ಇವೆಲ್ಲ ಕೇವಲ ಪುಕ್ಕಟೆ ಭಾಷಣಗಳಷ್ಟೆ. ನಿಮ್ಮದು ಭಾಷಣ ಭಾಷಣ ಮತ್ತು ಭಾಷಣವಷ್ಟೆ. ದೇಶದಲ್ಲಿ ನಿರುದ್ಯೋಗ ಬೆಳೆಯುತ್ತಲೇ ಇದೆ.

ಹಾಗಂತ ಬಡವರ ಭಾರತ ಸುಮ್ಮನಿರುತ್ತದೆ ಎಂದು ಭಾವಿಸಬೇಡಿ. ಭಾರತದ 40% ಜನರ ಸಂಪತ್ತು ಕೇವಲ ಬೆರಳೆಣಿಕೆಯ ಜನರ ಕೈಯ್ಯಲ್ಲಿದೆ. ಇದು ನರೇಂದ್ರ ಮೋದಿ ಸರ್ಕಾರದ ಸಾಧನೆ. ನೀವೇ ಸೃಷ್ಟಿಸಿದ ಎರಡು ಭಾರತವನ್ನು ಜೋಡಿಸುವ ಕೆಲಸವನ್ನು ನೀವೇ ಮಾಡಬೇಕು. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಬೆಂಬಲಿಸಿ. ಕೇವಲ ಹತ್ತು ಜನರಿಗೆ ಹಂಚಿರುವ ಸಂಪತ್ತನ್ನು ವಾಪಸ್ ಪಡೆಯಿರಿ. ಆ ಹತ್ತು ಜನ ನಿಮ್ಮ ಮಾರ್ಕೆಟಿಂಗ್ ಮಾಡಬಹುದು, ಟಿವಿ, ವಾಟ್ಸಪ್ ಗಳಲ್ಲಿ ಆ ಹತ್ತು ಜನ ನಿಮ್ಮನ್ನು ಬೆಂಬಲಿಸಬಹುದು. ಆದರೆ ದೇಶ ಹಾಳಾಗುತ್ತದೆ. 

ನೀವು ಭಾರತದ ಸಂವಿಧಾನವನ್ನು ಓದಬೇಕು. ಸಂವಿಧಾನದ ಪ್ರಕಾರ ಭಾರತ ಎನ್ನುವುದು ರಾಜ್ಯಗಳ ಒಕ್ಕೂಟ. ಹಾಗೆಂದರೆ ಅರ್ಥವೇನು?  ಇದರರ್ಥ ತಮಿಳನಾಡು,  ಮಹಾರಾಷ್ಟ್ರ, ಯುಪಿ, ಬಿಹಾರ, ಮಣಿಪುರ, ನಾಗಾಲ್ಯಾಂಡ್, ಮಿಜೋರಾಂ ಮತ್ತು ಎಲ್ಲಾ ರಾಜ್ಯಗಳ ನನ್ನ ಸಹೋದರ ಮತ್ತು ಸಹೋದರಿಯರಿಗೆ ಈ ದೇಶದ ಮೇಲೆ ಸಮಾನ ಹಕ್ಕಿದೆ ಎಂದರ್ಥ. ಜಮ್ಮುಕಾಶ್ಮೀರ, ಲಕ್ಷದ್ವೀಪ ಸೇರಿದಂತೆ ಎಲ್ಲಾ ರಾಜ್ಯಗಳು ಸೇರಿದರೆ ಭಾರತವಾಗುತ್ತದೆ. ಸಂಸತ್ತಿನಲ್ಲಿ ರಾಜ್ಯಗಳ ಒಕ್ಕೂಟದ ಬಗ್ಗೆಯೇ ಗಂಭೀರ ಚರ್ಚೆಯಾಗಬೇಕು. 

ಭಾರತಕ್ಕೆ ಎರಡು ದೃಷ್ಟಿಕೋನ ಇದೆ. ಮೊದಲನೆಯದ್ದು ರಾಜ್ಯಗಳ ಒಕ್ಕೂಟ. ಇದನ್ನು ರಾಜ್ಯಗಳ ಜೊತೆಗಿನ ಚರ್ಚೆ, ಸಂವಹನದ ಮೂಲಕ ಸಾಧ್ಯವಾಗಿಸಬೇಕು. ರಾಜ್ಯಗಳ ಜೊತೆ ಒಕ್ಕೂಟ ಸರ್ಕಾರ ಪಾಲುದಾರಿಕೆಯನ್ನು ಹೊಂದಬೇಕೇ ವಿನಹ ಯಜಮಾನಿಕೆಯನ್ನಲ್ಲ. ಒಕ್ಕೂಟ ಸರ್ಕಾರವು ರಾಜ್ಯಗಳಿಗೆ ಏನು ಬೇಕು ಎಂದೂ, ರಾಜ್ಯಗಳು ಒಕ್ಕೂಟ ಸರ್ಕಾರಕ್ಕೆ ಏನು ಬೇಕು ಎಂದು ಕೇಳುವಂತಹ ಪರಿಸ್ಥಿತಿ ಇರಬೇಕು.  ನೀವು ನಿಮ್ಮ ಜೀವಮಾನದಲ್ಲೇ ತಮಿಳುನಾಡಿನಲ್ಲಿ ಆಳ್ವಿಕೆ ಮಾಡಲು ಸಾಧ್ಯವಿಲ್ಲ. ನೀವು ನಿಮ್ಮ ಜೀವಮಾನದಲ್ಲೇ ರಾಜ್ಯಗಳ ಒಕ್ಕೂಟವನ್ನು ಸಂಪೂರ್ಣವಾಗಿ ಆಳ್ವಿಕೆ ಮಾಡಲು ಸಾಧ್ಯವಿಲ್ಲ. 
ಸಾಮ್ರಾಟ್ ಅಶೋಕನಿಂದ ಹಿಡಿದು ಯಾವ ರಾಜ ಮಹರಾಜರ ಇತಿಹಾಸ ಓದಿದರೂ ಅವರೆಲ್ಲರೂ ಸಂವಹನದ ಮೂಲಕವೇ ಆಳ್ವಿಕೆ ಮಾಡಿದ್ದಾರೆ. ನೀವು ರಾಜ್ಯಗಳ ಜೊತೆ ಮಾತುಕತೆ ಮಾಡದೆಯೇ ಆಡಳಿತ ನಡೆಸುತ್ತೇನೆ ಎಂದು ಹೊರಟರೆ ಅದು ಯಾವತ್ತಿಗೂ ಸಾಧ್ಯವಿಲ್ಲ. 

ನಿಮ್ಮಲ್ಲಿ ಸಮಸ್ಯೆ ಇದೆ. ದಕ್ಷಿಣ ಭಾರತದ ಭಾಷೆಗಳು, ಸಂಸ್ಕೃತಿ, ಇತಿಹಾಸವನ್ನು ತುಳಿಯಬಹುದು ಎಂದು ನೀವು ಅಂದುಕೊಂಡಿರಬಹುದು. ಉತ್ತರ ಮತ್ತು ದಕ್ಷಿಣದ ರಾಜ್ಯಗಳಿಗಿರುವ ಪ್ರತ್ಯೇಕ ಭಾಷೆ, ಸಂಸ್ಕೃತಿಯನ್ನು ನಾಶ ಮಾಡಬಹುದು ಎಂದು ನೀವಂದುಕೊಂಡಿರಬಹುದು. ಉದಾಹರಣೆಗೆ ತಮಿಳುನಾಡಿನ ಹೃದಯದ ಭಾಷೆ ತಮಿಳು. ಹೃದಯದ ಭಾಷೆ, ಸಂಸ್ಕೃತಿಯ ಜೊತೆ ಜೊತೆಗೆ ಅವರು ಭಾರತವನ್ನು ಬೆಳೆಸುತ್ತಾರೆ. ಕೇರಳದ ಸಂಸ್ಕೃತಿ, ಇತಿಹಾಸ, ರಾಜಸ್ಥಾನದ ಸಂಸ್ಕೃತಿ ಇತಿಹಾಸ ಇವೆಲ್ಲವೂ ಭಾರತವೆಂಬ ಹೂಗುಚ್ಚ. ಇದೇ ಭಾರತದ ಶಕ್ತಿ. 

ನೀವು ಭಾರತವನ್ನು ಕೇಂದ್ರ ಎಂಬ ಬೆತ್ತ ಹಿಡಿದುಕೊಂಡು ಆಳ್ವಿಕೆ ಮಾಡಲು ಹೊರಟಿದ್ದೀರಿ. ನಿಮಗೆ ಇತಿಹಾಸದ ಅರಿವಿಲ್ಲ. ಇತಿಹಾಸದಲ್ಲಿ ಕೇಂದ್ರ ಎಂಬ ಬೆತ್ತ ಹಲವು ಬಾರಿ‌ ಮುರಿದು ನಾಶವಾಗಿದೆ‌. ನಾನು ಮಾತನಾಡಲು ಹೆದರುವುದಿಲ್ಲ. ಎಮರ್ಜೆನ್ಸಿಯಿಂದ ಹಿಡಿದು ಇವತ್ತಿನವರೆಗಿನ ಎಲ್ಲಾ ವಿಷಯಗಳ ಬಗ್ಗೆ ನಾನು ಮಾತನಾಡುತ್ತೇನೆ. 

ರಾಜ್ಯಗಳ ಒಕ್ಕೂಟ, ಭಾಷೆಗಳ ಒಕ್ಕೂಟ, ಸಂಸ್ಕೃತಿಗಳ ಒಕ್ಕೂಟವೆಲ್ಲಾ ಸೇರಿ ಸುಂದರ ಹೂಗುಚ್ಚದಂತಹ ದೇಶ ನಮ್ಮದು. ಇದನ್ನು ಹಾಳು ಮಾಡಲು ನೀವಲ್ಲ, ಜಗತ್ತಿನ ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ. 

ಕಾಂಗ್ರೆಸ್ ರಾಜನ ಕಲ್ಪನೆಯನ್ನು ತೆಗೆದುಹಾಕಿತು: ಭಾರತದ ಎರಡು ದೃಷ್ಟಿಕೋನಗಳಿವೆ.  1947ರಲ್ಲಿ ಕಾಂಗ್ರೆಸ್ ತೆಗೆದು ಹಾಕಿದ್ದ ರಾಜನ ಕಲ್ಪನೆ ಮತ್ತೆ ಈಗ ಬಂದಿದೆ. ಈಗ ಶೆಹನ್‌ಷಾ ಇದ್ದಾರೆ. ಈ ಶೆಹನ್ ಷಾ ರೂಲರ್ ಗಳ ರೂಲರ್ ಆಗಿದ್ದಾನೆ.  ಈಗ ನಮ್ಮ ರಾಜ್ಯಗಳು ಒಕ್ಕೂಟ ಸರ್ಕಾರದ ಮಧ್ಯೆ ಸಂಭಾಷಣೆಯೇ ನಿಂತು ಹೋಗಿದೆ. ಒಂದು ಸಿದ್ದಾಂತವನ್ನು ಹೇರಲು ರಾಜ್ಯಗಳ ಮೇಲೆ ನಿರಂತರ ದಾಳಿ ಮಾಡಲಾಗುತ್ತಿದೆ. 
ಉದಾಹರಣೆಗೆ ತಮಿಳುನಾಡಿನ ಧ್ವನಿಯನ್ನೇ ಭಾರತದಿಂದ ಹೊರಗಿಡಲಾಗಿದೆ‌. ತಮಿಳುನಾಡು ಉದಾಹರಣೆಯಷ್ಟೆ. ಎಲ್ಲಾ ರಾಜ್ಯಗಳ ಧ್ವನಿಯನ್ನು ಅಡಗಿಸಲಾಗಿದೆ. ಕೇಳಿದರೆ ಗೆಟ್ ಔಟ್ ಎನ್ನುತ್ತೀರಿ. ನಿಮ್ಮ ಕೇಂದ್ರ ಎನ್ನುವ ಚೌಕಟ್ಟಿನಲ್ಲಿ ರಾಜ್ಯಗಳಿಗೆ ಧ್ವನಿಯೂ ಇಲ್ಲ, ಸ್ಥಾನಮಾನವೂ ಇಲ್ಲ.

ಪಂಜಾಬಿನ ರೈತರು ನಿಮ್ಮ ಕೃಷಿ ಕಾಯ್ದೆಯನ್ನು ಒಪ್ಪಲ್ಲ ಎಂದ ಎದ್ದು ನಿಂತರೆ ನಿಮ್ಮ ಕೇಂದ್ರ ಎಂಬ ಚೌಕಟ್ಟಿನೊಳಗೆ ಅದಕ್ಕೆ ಅವಕಾಶವನ್ನೇ ಕೊಡಲಿಲ್ಲ. ಒಂದು ವರ್ಷದಿಂದ ರೈತರು ಪ್ರತಿಭಟನೆ ಕುಳಿತರು. ಕೊರೋನಾ ಸಂಧರ್ಭದಲ್ಲೂ ಪ್ರತಿಭಟನೆ ನಡೆಸಿದರು‌‌. ಹಲವು ರೈತರು ಪ್ರತಿಭಟನೆಯ ಸಂದರ್ಭದಲ್ಲಿ ನಿಧನ ಹೊಂದಿದರು.‌ ಅದ್ಯಾವುದಕ್ಕೂ ನೀವು ತಲೆಕೆಡಿಸಿಕೊಳ್ಳಲಿಲ್ಲ. ನಿಮ್ಮ ರಾಜ ಪಂಜಾಬಿನ ರೈತರ ಮಾತು ಕೇಳಲಿಲ್ಲ. ನಿಮ್ಮ ರಾಜನೇ ಮಾತನಾಡುತ್ತಾನೆ. ಇಲ್ಲಿ ರಾಜನದ್ದೇ ಮಾತು ಮತ್ತು ರಾಜನದ್ದೇ ಮಾತು. ನಿಮ್ಮ ರಾಜ ಯಾರ ಮಾತನ್ನೂ ಅಲಿಸಲು ಸಿದ್ದನಿಲ್ಲ. 

 ನ್ಯಾಯಾಂಗ, ಚುನಾವಣಾ ಆಯೋಗ, ಪೆಗಾಸಸ್ ಅನ್ನು ಬಳಸಿಕೊಂಡು ರಾಜ್ಯಗಳ ಧ್ವನಿಯನ್ನು ಕಸಿಯಲಾಗುತ್ತಿದೆ. ಈ ಮೂಲಕ ರಾಜ್ಯಗಳ ಒಕ್ಕೂಟವನ್ನು ನಾಶ ಮಾಡಲಾಗುತ್ತಿದೆ. ಪೆಗಾಸಸ್ ಅನ್ನು ದೇಶದ ರಾಜಕಾರಣಿಗಳ ಮೇಲೆ ಬಳಸಲಾಗಿತ್ತು. ಪ್ರಧಾನಿಗಳೇ ಖುದ್ದು ಇಸ್ರೇಲ್ ಗೆ ಭೇಟಿ ನೀಡಿ ಭಾರತದ ರಾಜಕಾರಣಿಗಳ ಮೇಲೆ ಪೆಗಾಸಸ್ ಬಳಸಲು ಸೂಚನೆ ನೀಡಿದರು. ರಾಜ್ಯಗಳ ಮೇಲೆ ಇದೇ ಪೆಗಾಸಸ್ ಅನ್ನು ಬಳಸಲಾಯಿತು‌. ಒಂದು ವಿದೇಶಿ ಸಂಸ್ಥೆಯ ಮೂಲಕ ಇಡೀ ದೇಶದ ಆಂತರಿಕ ವ್ಯವಸ್ಥೆಯನ್ನು ಹಿಡಿತದಲ್ಲಿ ಇಟ್ಟುಕೊಂಡು ರಾಜ್ಯಗಳ ಮೇಲಿನ ದಾಳಿಗೆ ಬಳಸಿಕೊಳ್ಳಲಾಗುತ್ತಿದೆ. ನೀವು ಇದಕ್ಕೆ ಪ್ರತಿಕ್ರಿಯೆಯನ್ನು ಇಂದಲ್ಲಾ ನಾಳೆ ಪಡೆದೇ ಪಡೆಯುತ್ತೀರಿ. ಇದಕ್ಕೆ ರಾಜ್ಯಗಳ ಒಕ್ಕೂಟ ಇಂದಲ್ಲ ನಾಳೆ ಪ್ರತಿಕ್ರಿಯೆ ಕೊಡುತ್ತೆ.

 ನನ್ನ ಮುತ್ತಜ್ಜ 15 ವರ್ಷಗಳ ಕಾಲ ಜೈಲಿನಲ್ಲಿದ್ದರು. ನನ್ನ ಅಜ್ಜಿಗೆ 32 ಬಾರಿ ಗುಂಡು ಹಾರಿಸಲಾಗಿದೆ. ನನ್ನ ತಂದೆಯನ್ನು ಛಿದ್ರಛಿದ್ರ ಮಾಡಲಾಯಿತು‌. ಹಾಗಾಗಿ ನಾನು ಏನು ಮಾತನಾಡುತ್ತಿದ್ದೇನೆ ಮತ್ತು ದೇಶ ಏನು ಮಾತನಾಡುತ್ತಿದೆ ಎಂದು ನನಗೆ ಸ್ಪಷ್ಟವಾಗಿ ತಿಳಿದಿದೆ. ನಾನಲ್ಲದಿದ್ದರೂ ನನ್ನಲ್ಲಿರುವ ರಕ್ತ ಈ ದೇಶಕ್ಕಾಗಿ ತ್ಯಾಗ ಮಾಡಿದೆ. ಆದ್ದರಿಂದ ದೇಶದ ಬಗ್ಗೆ ನನಗೆ ಅರಿವಿದೆ‌. ನೀವು ತುಂಬಾ ಅಪಾಯಕಾರಿ ಏನೇನೋ ಮಾಡುತ್ತಿದ್ದೀರಿ. ಪಿಟೀಲು ಮಾಡುತ್ತಿದ್ದೀರಿ. ಇದನ್ನೆಲ್ಲಾ ನಿಲ್ಲಿಸಲು ನಾನು ನಿಮಗೆ ಸಲಹೆ ನೀಡುತ್ತೇನೆ. ನೀವು ನಿಲ್ಲಿಸದಿದ್ದರೆ, ನೀವು ಸಮಸ್ಯೆಯನ್ನು ಮೈಮೇಲೆ ಎಳೆದುಕೊಳ್ಳುತ್ತೀರಿ. ಈಗಾಗಲೇ ನಾರ್ತ್ ಈಸ್ಟ್ ರಾಜ್ಯಗಳು, ದಕ್ಷಿಣ ಭಾರತದಲ್ಲಿ ಈ ಸಮಸ್ಯೆ ಆರಂಭವಾಗಿದೆ‌. 

ನೀವು ಇತಿಹಾಸ ಮತ್ತು ವರ್ತಮಾನವನ್ನು ಅರಿಯುವಲ್ಲಿ ಸಂಪೂರ್ಣ ಎಡವಿದ್ದೀರಿ. ಈ ದೇಶವನ್ನಾಳಿದ ಎಲ್ಲಾ ಚಕ್ರವರ್ತಿಗಳ ಇತಿಹಾಸ ಓದಿ‌. ಪ್ರಾದೇಶಿಕವಾರು ಗೌರವ ಕೊಡದ ಯಾವ ಚಕ್ರಾಧಿಪತ್ಯವೂ ಉಳಿದಿಲ್ಲ. ನೀವು ಎಲ್ಲಾ ರಾಜ್ಯಗಳಿಗೆ ಗೌರವ ಕೊಡುವುದನ್ನು ಕಲಿಯಿರಿ. ನೀವು ನನಗೆ ಗೌರವ ಕೊಡದೇ ಇದ್ದರೂ ಪರವಾಗಿಲ್ಲ. ರಾಜ್ಯಗಳ ಜನರಿಗೆ ನೀವು ಗೌರವ ಕೊಡಲೇಬೇಕು. 

ರಾಜ್ಯಗಳ ಒಕ್ಕೂಟ ಎನ್ನುವುದೇ ರಾಜಪ್ರಭುತ್ವ ಎಂಬ ಕಲ್ಪನೆಯ ವಿರುದ್ದವಾಗಿರುವುದು. ನಾನು ಗೃಹ ಸಚಿವರ ಕ್ಷಮೆ ಕೇಳಿ ಒಂದು ಘಟನೆಯನ್ನು ಹೇಳಲು ಬಯಸುತ್ತೇನೆ. ಮಣಿಪುರದ ರಾಜಕಾರಣಿಯೊಬ್ಬರು ನನ್ನ ಜೊತೆ ಮಾತನಾಡುತ್ತಾ "ರಾಹುಲ್ ಜೀ, ನಾನು ಬಹಳಷ್ಟು ಹಿರಿಯ ರಾಜಕಾರಣಿಗಳು ಒಟ್ಟಾಗಿ ಕೇಂದ್ರ ಗೃಹ ಸಚಿವರಲ್ಲಿಗೆ ನಿಯೋಗ ಹೋಗಿದ್ದೆವು. ನಮ್ಮನ್ನು ಚಪ್ಪಲಿ ಕಳಚಿ ಗೃಹ ಸಚಿವರ ಕಚೇರಿಗೆ ಹೋಗುವಂತೆ ಸೂಚಿಸಲಾಯಿತು. ನಾವು ಚಪ್ಪಲಿ ಕಳಚಿ ಒಳ ಹೋಗಿ ನೋಡಿದರೆ ಗೃಹ ಸಚಿವರು ಶೂ ಹಾಕಿ ಕಾಲ ಮೇಲೆ ಕಾಲು ಹಾಕಿ ಕುಳಿತಿದ್ದರು" ಎಂದರು. ಇದು ಏನನ್ನು ಸೂಚಿಸುತ್ತದೆ ? ಗೃಹ ಸಚಿವರು ಶೂ ಧರಿಸಬಹುದು. ಅವರನ್ನು ಕಾಣಬರುವ ನಿಯೋಗ ಶೂ ಹಾಕಬಾರದು ಎಂದರೆ ಇದರ ಹಿಂದಿರುವ ಮನಸ್ಥಿತಿ ಎಂತದ್ದು ? ಇದು ದೇಶದ ಜನರೊಂದಿಗೆ, ರಾಜ್ಯಗಳೊಂದಿಗೆ ವರ್ತಿಸುವ ಕ್ರಮವಲ್ಲ. ನೀನು ಏನೂ ಅಲ್ಲ, ನಾನೇ ಎಲ್ಲ ಎಂಬ ಮನಸ್ಥಿತಿಯ ಪ್ರದರ್ಶನವಿದು. 

ನನ್ನ ಪ್ರಕಾರ ಆರ್ ಎಸ್ ಎಸ್ ಮತ್ತು ಬಿಜೆಪಿ ಭಾರತದ ಭದ್ರ ಬುನಾದಿಯನ್ನೇ ಅಲುಗಾಡಿಸುತ್ತಿದೆ. ದೇಶದ ಬುನಾದಿಯನ್ನು ದುರ್ಬಲಗೊಳಿಸಲು ಈ ಎರಡೂ ಸಂಸ್ಥೆಗಳು ಪ್ರಯತ್ನ ಪಡುತ್ತಿವೆ. ಆರ್ ಎಸ್ ಎಸ್ ಮತ್ತು ಬಿಜೆಪಿ ಜನರ ಸೌಹಾರ್ದತೆ, ಜನರ ಭಾಷೆ, ಜನ ಸಂಸ್ಕೃತಿಯನ್ನು ದುರ್ಬಲಗೊಳಿಸಲು ಯತ್ನಿಸುತ್ತಿದೆ.  

ಗಣರಾಜ್ಯೋತ್ಸವದಂದು ಭಾರತಕ್ಕೆ ವಿದೇಶಿ  ಅತಿಥಿಯನ್ನು ಈ ಬಾರಿ ಕರೆಯಲು ಯಾಕೆ ಸಾಧ್ಯವಾಗಿಲ್ಲ  ಎಂದು ನಿಮಗೆ ನೀವೇ ಕೇಳಿಕೊಳ್ಳಿ. ಭಾರತ ಇಂದು ವಿಶ್ವದಿಂದ ಸಂಪೂರ್ಣವಾಗಿ ಪ್ರತ್ಯೇಕವಾಗುತ್ತಿದೆ. ನಾವು ಇಂದು ವಿಶ್ವದಲ್ಲಿ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾದ ದೇಶವಾಗಿದ್ದೇವೆ. ನಾನು ಚೀನಾ, ಅಫ್ಘಾನ್, ಪಾಕಿಸ್ತಾನದಿಂದ ಅಪಾಯಕಾರಿಯಾಗಿ ಸುತ್ತುವರಿಲ್ಪಟ್ಟಿದ್ದೇವೆ. ನಮ್ಮ ಶತ್ರುಗಳು ವಿಶ್ವಮಟ್ಟದಲ್ಲಿ ನಮ್ಮ ಸ್ಥಾನಮಾನ ಏನು ಎಂಬುದನ್ನು ಸರಿಯಾಗಿ ಅರಿತುಕೊಂಡಿದ್ದಾರೆ. ನಾವು ಈಗ ದುರ್ಬಲರಾಗಿದ್ದೇವೆ. ನಾವು ಚೀನಾ, ಪಾಕ್, ಅಫ್ಘಾನ್ ನ ವ್ಯೂಹದಲ್ಲಿದ್ದೇವೆ‌. ಚೀನ ತಾನು ಏನು ಮಾಡಬೇಕು ಎಂಬ ಬಗ್ಗೆ ಬಹಳ ಸ್ಪಷ್ಟವಾದ ದೃಷ್ಟಿಕೋನವನ್ನು ಹೊಂದಿದೆ.

ಭಾರತದ ವಿದೇಶಾಂಗ ನೀತಿಯ ಪ್ರಕಾರ ಪಾಕಿಸ್ತಾನ ಮತ್ತು ಚೀನಾವನ್ನು ಯಾವತ್ತೂ ಪ್ರತ್ಯೇಕವಾಗಿ ಇಡುವಂತಹ ಬಹಳ ದೊಡ್ಡ ಕಾರ್ಯತಂತ್ರವನ್ನು ನಾವು ಹೊಂದಿರಬೇಕಿತ್ತು. ವಿಪರ್ಯಾಸ ಮತ್ತು ಅಘಾತಕಾರಿಯಾದ ವಿಷಯವೆಂದರೆ ಈವರೆಗೂ ಪರಸ್ಪರ ವಿರೋಧಿಗಳಾದ ಚೀನಾ ಮತ್ತು ಪಾಕಿಸ್ತಾನ ಈಗ ನಿಮ್ಮಿಂದಾಗಿ ಒಟ್ಟಾಗಿದೆ. ಇದು ನರೇಂದ್ರ ಮೋದಿ ಸರ್ಕಾರ ಭಾರತಕ್ಕೆ ಮಾಡಿದ ದೊಡ್ಡ ಅನ್ಯಾಯವಾಗಿದೆ. 

ಪಾಕಿಸ್ತಾನ ಮತ್ತು ಚೀನಾವನ್ನು ಒಂದಾಗುವಂತೆ ಮಾಡಿದ್ದು ನೀವು ಮಾಡಿದ ಮಹಾ ಅಪರಾಧವಾಗಿದೆ. ಇದು ಮೋದಿ ಸರ್ಕಾರ ಮಾಡಿದ ಅತ್ಯಂತ ದೊಡ್ಡ ಕ್ರೈಂ. ಈ ಎರಡೂ ದೇಶಗಳು ಒಂದಾದಾಗ ಭಾರತದ ವಿರುದ್ದ ಸೃಷ್ಟಿಯಾಗುವ ಶಕ್ತಿಯನ್ನು ನೀವು ಅಲ್ಲಗಳೆಯಬೇಡಿ. ಶತ್ರು ರಾಷ್ಟ್ರಗಳು ಒಟ್ಟಾಗುವಂತೆ ಮಾಡಿದ್ದು ಭಾರತದ ವಿರುದ್ದ ನೀವುಗಳು ಮಾಡಿದ ಘೋರ ಅಪರಾಧ‌. ಈಗ ಪಾಕ್ ಮತ್ತು ಚೀನಾ ಎರಡೂ ಕೂಡಾ ಭಾರತದ ವಿರುದ್ದ ಕಾರ್ಯತಂತ್ರಗಳನ್ನು ಮಾಡುತ್ತಿದೆ. ಎರಡೂ ರಾಷ್ಟ್ರಗಳು ಸಶಸ್ತ್ರ ವ್ಯವಹಾರಗಳನ್ನು ಮಾಡುತ್ತಿದೆ. ಇದಕ್ಕೆ ಮೋದ ಸರ್ಕಾರದ ವಿದೇಶಾಂಗ ನೀತಿಯೇ ಕಾರಣ‌.  ನಾನು ಒಂದಂತೂ ಸ್ಪಷ್ಟವಾಗಿ ಹೇಳುತ್ತೇನೆ : ಚೀನಾ ತನ್ನದೇ ಸ್ಪಷ್ಟ ಕಾರ್ಯಸೂಚಿಯನ್ನು ಹೊಂದಿದೆ‌. ಡೋಕ್ಲಾಮ್ ಮತ್ತು ಲಡಾಕ್ ನಲ್ಲಿ ಚೀನಾ ಅದರ ಭವಿಷ್ಯದ  ಕಾರ್ಯಸೂಚಿಯ ಸುಳಿವು ನೀಡಿದೆ. ಈ ಬೆಳವಣಿಗೆ  ಭಾರತಕ್ಕೆ ಅಪಾಯಕಾರಿಯಾಗಿದೆ. ಎಚ್ಚರ ವಹಿಸಿಕೊಳ್ಳಿ. 

ನಾವು ರಾಷ್ಟ್ರೀಯವಾದಿಗಳು. ಆದ್ದರಿಂದಲೇ ನಾವು ರಾಜ್ಯಗಳ ಒಕ್ಕೂಟ, ಇಲ್ಲಿನ ಜನರ ಬದುಕು, ಭಾಷೆ, ಸಂಸ್ಕೃತಿ ಬಗ್ಗೆ ಮಾತನಾಡುತ್ತೇವೆ. ಜಮ್ಮು ಕಾಶ್ಮೀರ, ರಾಜ್ಯಗಳ ಸ್ವಾತಂತ್ರ್ಯ ಕಸಿಯುವಿಕೆ, ಚೀನಾ ಗಡಿ, ವಿದೇಶಾಂಗ ನೀತಿ ವಿಷಯದಲ್ಲಿ ಬಹಳ ದೊಡ್ಡ ತಪ್ಪನ್ನು ಮಾಡಿದ್ದೀರಿ. ಇದನ್ನು ಸರಿ ಮಾಡದೇ ಇದ್ದರೆ, ಮುಂದೆ ಆಗುವ ಅನಾಹುತಗಳಿಗೆ ನೀವು ಜವಾಬ್ಧಾರಿಯನ್ನು ಹೊರಬೇಕಾಗುತ್ತದೆ. ಭಾರತದ ಜನರು ಸಂತ್ರಸ್ತರಾಗಬೇಕಾಗುತ್ತದೆ. 

ದೇಶ ಈಗ ಅಪಾಯದಲ್ಲಿದೆ. ದೇಶದ ಹೊರಗಿನ ಬೆಳವಣಿಗೆಗಳು, ದೇಶದೊಳಗಿನ ಬೆಳವಣಿಗೆಗಳಿಂದ ನಮ್ಮ ದೇಶ ಅಪಾಯದಲ್ಲಿದೆ. ದೇಶದೊಳಗಿನ ಅಸಹನೀಯ ಘಟನೆಗಳಿಂದಾಗಿ ವಿಶ್ವ ಮಟ್ಟದಲ್ಲಿ ನಾವು ಪ್ರತ್ಯೇಕವಾಗಿರುವುದು ನನ್ನನ್ನಂತೂ ಆತಂಕಕ್ಕೀಡು ಮಾಡಿದೆ. 

(ರಾಹುಲ್ ಗಾಂಧಿ ಭಾಷಣದಲ್ಲಿನ ಕೆಲ ಹಿಂದಿ ಇಂಗ್ಲೀಷ್ ಪದ/ವಾಕ್ಯಗಳಿಗೆ ಸರಿಯಾದ ಅರ್ಥ ತಿಳಿಯದೇ ಇದ್ದಾಗ ಅರ್ಥ ವ್ಯತ್ಯಾಸ ಆಗದಂತೆ ಸಮಾನ ಅರ್ಥದ ವಾಕ್ಯ/ಪದ ಬಳಸಲಾಗಿದೆ - ನವೀನ್ ಸೂರಿಂಜೆ)

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top