-

[ಡಿಸೆಂಬರ್ -2022] ಗೌರಿ ಲಂಕೇಶ್ ಹತ್ಯೆ ಪ್ರಕರಣದ ವಿಚಾರಣೆ ದಿನ ನಡೆದಿದ್ದೇನು?

-

ಬೆಂಗಳೂರು, ಡಿ. 17: ಡಿಸೆಂಬರ್ 12 ರಿಂದ  15 ರವೆಗೆ ನಾಲ್ಕು ದಿನಗಳು ನಡೆದ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ  ನ್ಯಾಯಾಲಯದ ವಿಚಾರಣೆಯ ವರದಿಯನ್ನು ಚಿಂತಕ ಶಿವ ಸುಂದರ್ ಅವರು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. 

ಶಿವ ಸುಂದರ್ ಅವರು ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡಿರುವುದು ಇಲ್ಲಿದೆ...

ಆತ್ಮೀಯರೇ ,

ಗೌರಿ ಲಂಕೇಶ್ ಹತ್ಯೆ ಪ್ರಕರಣದ ವಿಚಾರಣೆಯು ಡಿಸೆಂಬರ್ 12 ರಿಂದ  15 ರವೆಗೆ ನಾಲ್ಕು ದಿನಗಳು ನಡೆದವು.  

ಈ ನಾಲ್ಕು ದಿನಗಳಲ್ಲಿ ಐವರು ಸಾಕ್ಷಿಗಳ ಮುಖ್ಯ ವಿಚಾರಣೆ ಹಾಗೂ ಪಾಟಿ ಸವಾಲುಗಳು ಮಾತ್ರ ನಡೆಯಲು ಸಾಧ್ಯವಾಯಿತು. 

- ಟಾಟಾ  ಡೇಟಾ ಟೆಲಿ  ಸರ್ವಿಸಸ್ ನ ಕರ್ನಾಟಕದ ನೋಡಲ್ ಅಧಿಕಾರಿ  ಆಗಿರುವ ರವಿ ನರೋನ್ಹಾ ಎಂಬುವರು ಸಾಕ್ಷ್ಯ ನುಡಿಯುತ್ತಾ;  ಈ ಪ್ರಕರಣದಲ್ಲಿ ತನಿಖಾಧಿಕಾರಿಗಳು 21.3.2018 ಮತ್ತು  9.9.2018   ರಂದು ಎರಡು ಕೋರಿಕೆಗಳನ್ನು ಮಾಡಿ ಮೊಬೈಲ್ ಸಂಖ್ಯೆಗಳಾದ   8792143630, 8904755446 ಮತ್ತು  9035377415 ಗಳಿಗೆ ಸಂಬಂಧಪಟ್ಟ ಚಂದಾ ಅರ್ಜಿ, ವಿಳಾಸ ಧೃಢೀಕರಣ ಮತ್ತು   ಈ ಮೊಬೈಲ್ ನಂಬರುಗಳಲ್ಲಿ  1.3.2017 ರಿಂದ  18.2.2018 ವರೆಗೆ ನಡೆದ ಕರೆ ವರದಿಗಳನ್ನು ಒದಗಿಸಲು ಕೋರಿದರು. 

ಇದರಲ್ಲಿ  9035377415 ಸಂಖ್ಯೆಯ ಚಂದಾದಾರರು ಮದ್ದೂರು ವಿಳಾಸವನ್ನು ಹೊಂದಿದ್ದು ಕೋರಲಾದ  ಅವಧಿಗೆ ಸಂಬಂಧಪಟ್ಟ  ಕರೆಮಾಹಿತಿಯನ್ನು ಒಳಗೊಂಡ 28 ಪುಟಗಳ  ದಾಖಲೆಯ ನ್ನು ನೀಡಲಾಯಿತು.

ಈ ಮೊಬೈಲ್ ನ  ಚಂದಾದಾರರು  4.9.2017 ರಿಂದ ಮೊದಲುಗೊಂಡು ಬೆಂಗಳೂರಿನ ಯಶವಂತಪುರದ ಪರಿಧಿಯಲ್ಲಿ ಇದ್ದದ್ದು ಕಂಡುಬರುತ್ತದೆ ಎಂದು ಹೇಳಿದರು...

8792143630 ಮೊಬೈಲ್ ಸಂಖ್ಯೆಯ ಚಂದಾದಾರರು ಸಿಂಧಗಿಯ ವಿಳಾಸವನ್ನು ಕೊಟ್ಟಿದ್ದು ಕೋರಿದ ಕಾಲಾವಧಿಯಲ್ಲಿ ನಡೆದ ಕರೆ ಮಾಹಿತಿಗಳುಳ್ಳ ಆರು ಪುಟಗಳ ದಾಖಲೆಯನ್ನು ನೀಡಲಾಗಿದೆ. 

8904755446 ಮೊಬೈಲಿನ ಚಂದಾದಾರರು ಹುಬ್ಬಳಿಯ ವಿಳಾಸವನ್ನು ನೀಡಿದ್ದು ಕೋರಿದ ಕಾಲಾವಧಿಗೆ ಸಂಬಂಧಪಟ್ಟ 112 ಪುಟಗಳ ಕರೆಮಾಹಿತಿಯನ್ನು ನೀಡಲಾಗಿದೆ ಎಂದು ಸಾಕ್ಷ್ಯ ನುಡಿದರು. ಮತ್ತು ಅವನ್ನು ತೋರಿಸಿದಾಗ ಅದೇ ಮಾಹಿತಿ ಎಂದು ಧೃಢೀಕರಿಸಿದರು.  

- ಬೆಂಗಳೂರು ನಗರದ ಕಲಾಸಿ ಪಾಳ್ಯದಲ್ಲಿರುವ "ಬೆಂಗಳೂರು ಗನ್  ಹೌಸ್'" ನ ಮಾಲಕ ಅಯಾಝ್ ಉಲ್ಲಾ ಷರೀಫ್ ಅವರು ಸಾಕ್ಷ್ಯ ನುಡಿಯುತ್ತಾ;

 2018ರ ಮಾರ್ಚ್ 1ರಂದು ಪೊಲೀಸರು ಆರೋಪಿ ನವೀನ್ ಕುಮಾರ್ ಅವರನ್ನು ತಮ್ಮ ಅಂಗಡಿಗೆ ಕರೆದುಕೊಂಡು ಬಂದು ತನ್ನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಶಬ್ಬೀರ್ ನ ಜೊತೆ ನವೀನ್ ಮಾಡಿರುವ ವ್ಯವಹಾರದ ಬಗ್ಗೆ ಶಬ್ಬೀರನನ್ನು ಕೇಳಿದರು ಎಂದು ಸಾಕ್ಷಿ ನುಡುದರು. 

ಅದರಂತೆ ಈಗ್ಗೆ 7-8 ವರ್ಷಗಳ ಕೆಳಗೆ ನವೀನ್ ಕುಮಾರ್ ಎಂಬುವರು 3,500ರೂ. ಕೊಟ್ಟು ತಮ್ಮ ಅಂಗಡಿಯಿಂದ ಗನ್  ಒಂದನ್ನು ಖರೀದಿ ಮಾಡಿದ್ದರು. ಅದಾದ ಒಂದು ವಾರಕ್ಕೆ ಮತ್ತೆ ತಮ್ಮ ಅಂಗಡಿಗೆ ಬಂದ ನವೀನ್ ಒಂದು ರಿವಾಲ್ವರ್ ಬೇಕೆಂದು ಕೇಳಿದರು. ಆದರೆ ತಾವು ಲೈಸೆನ್ಸ್ ಇಲ್ಲದೆ ರಿವಾಲ್ವರ್ ನಾಗಲಿ , ಬುಲೆಟ್ಟುಗಳನ್ನಾಗಲಿ ಮಾರುವುದಿಲ್ಲ ಎಂದು ಹೇಳಿದವೆಂದು  ಸಾಕ್ಷಿ ನುಡಿದರು.

ಆದರೆ ಆ ನಂತರ ಶಬ್ಬೀರ್ ಅವರು ನವೀನ್ ಕುಮಾರ್ ನಿಂದ ಮೂರು ಸಾವಿರ ರೂಪಾಯಿ ಪಡೆದುಕೊಂಡು ಅವರ  ಕೋರಿಕೆಯ ಮೇರೆಗೆ ಅಮ್ಜದ್ ಎಂಬ ಮತ್ತೊಬ್ಬ ವ್ಯಕ್ತಿಯಿಂದ ಹಲವಾರು ವೇಸ್ಟ್  ಬುಲೆಟನ್ನು ಎರಡು ಸಾವಿರ ರೂ.ಗಳಿಗೆ ಖರೀದಿಸಿ ಅದನ್ನು ನವೀನ್ ಕುಮಾರ್ ಗೆ ಕೊಟ್ಟಿದ್ದು ತನಗೆ ನಂತರ ತಿಳಿದು ಬಂದ ಬಗ್ಗೆ ಸಾಕ್ಷ್ಯ ನುಡಿದರು. 

-  "ಬೆಂಗಳೂರು ಆರ್ಮರಿ"  ಎಂಬ ಅಂಗಡಿಯಲ್ಲಿ ಕೆಲಸ ಮಾಡುತಿರುವ ಅಮ್ಜದ್ ಎಂಬುವರು ಸಾಕ್ಷ್ಯ ನುಡಿಯುತ್ತಾ;

ಶಬ್ಬೀರ್ ಕೋರಿಕೆಯ ಮೇರೆಗೆ ತಮ್ಮ ಅಂಗಡಿಯಲ್ಲಿದ್ದ ವೇಸ್ಟ್ ಬುಲೆಟನ್ನು 2000 ರೂ  ಪಡೆದುಕೊಂದು ಶಬ್ಬೀರ್ ಗೆ  ಕೊಟ್ಟ ಬಗ್ಗೆ ಸಾಕ್ಷ್ಯ ನುಡಿದರು. 

- ಕಾಟನ್ ಪೇಟೆಯಲ್ಲಿ ವಾಸವಿರುವ ಡ್ರೈವರ್ ರಾಜ್ ಕುಮಾರ್  ಎಂಬುವರು ಸಾಕ್ಷ್ಯ ನುಡಿಯುತ್ತಾ;

ಅವರು 2018ರ ಮೇ 20 ರ ರಾತ್ರಿ ಕಾಟನ್ ಪೇಟೆ ಪೊಲೀಸ್ ಅಧಿಕಾರಿಯವರ ಕೋರಿಕೆಯ ಮೇರೆಗೆ ಠಾಣೆಗೆ ತೆರಳಿದಾಗ ಅಲ್ಲಿ ಆರೋಪಿ ಸುಜಿತ್ ಕುಮಾರ್ ಇದ್ದರು. ಸುಜಿತ್ ಕುಮಾರ್ ಅವರು ಇತರ ಆರೋಪಿಗಳನ್ನು ದಾವಣಗೆರೆಯಲ್ಲಿ  ತೋರಿಸಿಕೊಡಲಿರುವುದರಿಂದ ತಮ್ಮ ಜೊತೆ ದಾವಣಗೆರೆಗೆ  ಬಂದು ಪಂಚರಾಗಿ ಸಹಕರಿಸಬೇಕೆಂದು  ಪೊಲೀಸರು ನೋಟೀಸು ಕೊಟ್ಟರು.  ಅದರಂತೆ ಆ ರಾತ್ರಿ ಖಾಸಗಿ ವಾಹನದಲ್ಲಿ  ತಾನು ಎಸ್ ಐಟಿ ಅಧಿಕಾರಿ ಕುಮಾರಸ್ವಾಮಿ , ಮತ್ತೊಬ್ಬ ಪೊಲೀಸ್, ಲೋಕೇಶ್ ಎಂಬುವರು  ಹಾಗೂ ಡ್ರೈವರ್  ಜೊತೆ ಸೇರಿಕೊಂಡು  ದಾವಣೆಗೆರೆಗೆ ಹೋದವೆಂದು ಸಾಕ್ಷಿ ನುಡಿದರು. ತಾವು ಅಲ್ಲಿಂದ ಹೊರಡುವ ವೇಳೆಗೆ ಮತ್ತೆರೆಡು ವಾಹನಗಳು ಅಲ್ಲಿದ್ದವೆಂದು ಹೇಳಿದರು.

ದಾವಣಗೆರೆಯನ್ನು ಮೇ 21, ರಂದು ಬೆಳಿಗ್ಗೆ 9.30ಕ್ಕೆ ತಲುಪಿ ದಾವಣಗೆರೆ ಖಾಸಗಿ ಬಸ್ ಸ್ಟಾಂಡಿನ ಬಳಿ ಕಾಯುತ್ತಿದ್ದೆವು. ಆಗ  ಸುಜಿತ್ ಕುಮಾರ್ ಅವರು ಅಲ್ಲಿಗೆ ನಡೆದುಕೊಂಡು ಬರುತ್ತಿದ್ದ ಆರೋಪಿಗಳಾದ  ಅಮೋಲ್ ಕಾಳೆ  ಮತ್ತು ಅಮಿತ್  ದೇಗ್ವೆಕರ್ ಅವರುಗಳನ್ನು  ತೋರಿಸಿಕೊಟ್ಟರು.  ಅವರನ್ನು ಪೊಲೀಸರು ಬಂಧಿಸಿದರು. ನಂತರ ಬಂಧಿತರು ತೋರಿಸಿದಂತೆ ಅನತಿ ದೂರದಲ್ಲಿದ್ದ ಮಹಾರಾಷ್ಟ್ರ ರಿಜಿಸ್ಟ್ರೇಷನ್ ನಂಬರ್ ಹೊಂದಿದ್ದ ಕೆಂಪು  ಬಣ್ಣದ ಇಂಡಿಕಾ  ಕಾರಿನಲ್ಲಿ ಕೂತಿದ್ದ ಮನೋಹರ್ ಯಡವೆ  ಅವರನ್ನೂ ಕೂಡ ಬಂಧಿಸಿದರು. ನಂತರ ಎಲ್ಲರನ್ನು ಕರೆದುಕೊಂಡು  ಪಕ್ಕದಲ್ಲೇ ಇದ್ದ ಗೆಸ್ಟ್ ಹೌಸಿಗೆ ಹೋದವೆಂದು ತಿಳಿಸಿದರು. 

ಅಲ್ಲಿ ಪೊಲೀಸರು ತನ್ನ ಸಮಕ್ಷಮದಲ್ಲಿ 168 ವಸ್ತುಗಳನ್ನು ಆ ಮೂವರಿಂದ ವಶಪಡಿಸಿಕೊಂಡು, ಸೀಲ್ ಮಾಡಿ ಅದಕ್ಕೆ ತನ್ನ ಸಹಿ ಪಡೆದರು ಎಂದು ಸಾಕ್ಷಿ ನುಡಿದರು. 

ಆ ವಸ್ತುಗಳನ್ನು ಕೋರ್ಟಿನಲ್ಲಿ ಸೀಲ್ ತೆಗೆದು ಹಾಜರು ಪಡಿಸಿ ಒಂದೊಂದನ್ನೇ ತೋರಿಸಿ ಕೇಳಿದಾಗ ವಶಪಡಿಸಿಕೊಂಡ ವಸ್ತುಗಳು ಅವೇ ಎಂದು ಆರೋಪಿ ರಾಜ್ ಕುಮಾರ್ ಗುರುತಿಸಿದರು. 

ಅಮೋಲ್ ಕಾಳೆ ಮತ್ತು ಅಮಿತ್ ದೇಗ್ವೆಕರ್ ಹಾಗೂ ಯಡವೆ ಅವರಿಂದ  ವಶಪಡಿಸಿಕೊಂಡ  ವಸ್ತುಗಳಲ್ಲಿ; ಅಮೋಲ್ ಕಾಳೆ ಹೆಸರಿನಲ್ಲಿದ್ದ ಕೆಂಪು ಇಂಡಿಕಾ ಕಾರಿನ  MH 14 DF 2749 ಸಂಖ್ಯೆಯ RC ಕಾರ್ಡು ,ಬಿಳಿಯ ಬಣ್ಣದ SATCOMM  ಮೊಬೈಲ್ ಫೋನ್, ಶ್ರೀರಾಮ ಸೇನೆಯ ವಿಸಿಟಿಂಗ್ಸ ಕಾರ್ಡ್, ಹಲವರ ಹೆಸರುಗಳು ಮತ್ತು ಫೋನ್ ನಂಬರ್ ಗಳು, 8 ಪುಟದ   ಸನಾತನ ಪ್ರಭಾತ್  ಪತ್ರಿಕೆ,  ಡೈರಿ , 20 ಮೊಬೈಲ್ ಫೋನುಗಳು , ಇತ್ಯಾದಿಗಳ ಜೊತೆಗೆ ... ಒಂದು ಪೇಪರಿನಲ್ಲಿ ಇಂಗ್ಲಿಷಿನಲ್ಲಿ ಈ ಕೆಳಗಿನ ಹೆಸರುಗಳು ಇದ್ದವು: 

ಗಿರೀಶ್ ಕಾರ್ನಾಡ,  ಗೌರಿ ಲಂಕೇಶ್, ಚಂದ್ರಶೇಖರ ಪಾಟೀಲ್ , ಬರಗೂರು ರಾಮಚಂದ್ರಪ್ಪ, ಸಿ.ಎಸ. ದ್ವಾರಕಾನಾಥ್, ಬಂಜಗೆರೆ ಜಯಪ್ರಕಾಶ್ , ಬಿಟಿ ಲಲಿತಾ  ನಾಯಕ್ , ನಿಡುಮಾಮಿಡಿ ಸ್ವಾಮೀಜಿ ... ಎಂಬ ಹೆಸರುಗಳಿದ್ದವು. 

ಇನ್ನೊಂದು ಹಾಳೆಯಲ್ಲಿ ದೇಶದ ಇತರ ರಾಜ್ಯಗಳಲ್ಲಿರುವ ಕೆಲವು ಮುದ್ರಣಾಲಯ ಹಾಗೂ ಪತ್ರಿಕೆಗಳ ಹೆಸರುಗಳಿದ್ದವು. 

ಅಮಿತ್  ದೇಗ್ವೆಕರ್ ಬ್ಯಾಗಿನಲ್ಲಿ ಗೋವಾದ  ಪೊಂಡಾದ ಯೂನಿಯನ್ ಬ್ಯಾಂಕಿಗೆ ಸಂದಾಯ ಮಾಡಲಾಗಿದ್ದ 35,000 ರೂ ದುಡ್ಡಿನ ಚೀಟಿಯ ಜೊತೆಗೆ ಪನ್ಸಾರೆ, ಧಾಬೋಲ್ಕರ್ ಅವರಿಗೆ ಸಂಬಂಧಪಟ್ಟ ವರದಿಗಳು,  ಸ್ಥಳ ಸನಾತನ ಆಶ್ರಮ , ರಾಮನಾಥಿ , ಗೋವಾ ಎಂಬ ಹಿಂದಿ ಭಾಷೆಯ ಪೇಪರ್ ಮತ್ತು ಹಲವಾರು ಬಾಂಕುಗಳ ಬ್ಯಾಗುಗಳು, ಮಹಾರಾಷ್ಟ್ರ ಗ್ರಾಮೀಣ ಬ್ಯಾಂಕ್  ಹೆಸರಿನಲ್ಲಿ  ದೇಗ್ವೆಕರ್ ಹೆಸರಿನಲ್ಲಿ ನೀಡಲಾದ ಐಡಿ ಇತ್ಯಾದಿಗಳು ಸಿಕ್ಕವು . 

ಇದಲ್ಲದೇ ಅಮಿತ್ ದೇಗ್ವೆಕರ್ ಬ್ಯಾಗಿನಲ್ಲಿ 1,90,000ರೂ ಮತ್ತು ಕಾಳೆ ಯ ಬ್ಯಾಗಿನಲ್ಲಿ 26,000 ರೂ. ನಗದು ಹಾಗೂ ಅವರ ಜೋಬಿನಲ್ಲಿ 4000 ರೂ ನಗದು ದೊರೆಯಿತು. ತನಿಖಾಧಿಕಾರಿಗಳು ಇಷ್ಟು ಹಣ ಏಕೆಂದು ಪ್ರಶ್ನಿಸಿದಾಗ ದೈವ ಕಾರ್ಯಗಳಿಗೆ  ಎಂದು ಉತ್ತರಿಸಿದರು ಎಂದು ರಾಜ್ ಕುಮಾರ್ ಸಾಕ್ಷಿ ಹೇಳಿದರು.

ಇದನ್ನೂ ಓದಿ: ಗೌರಿ ಲಂಕೇಶ್‌ ಹತ್ಯೆ ಪ್ರಕರಣ: ಆರೋಪಿ ಪರಶುರಾಮ್ ವಾಗ್ಮೋರೆಯನ್ನು ಗುರುತಿಸಿದ್ದ ಸಾಕ್ಷಿಗೆ ಜೀವ ಬೆದರಿಕೆ

ಇದಲ್ಲದೆ ಆರೋಪಿಗಳ ಬಳಿ  ಇದ್ದ ಚೈತನ್ಯ  ಲಕ್ಷುರಿ  ಹೋಮ್ಸ್ ಹಾಸ್ಪಿಟಾಲಿಟಿ ಸರ್ವಿಸಸ್ ನ ಕಾರ್ಡು, ಹೊಸೂರು ಮತ್ತು ಇತ್ಯಾದಿ ಊರುಗಳ ಹೋಟೆಲ್ ಗಳ  ರಸೀದಿ ಮತ್ತು ಕಾರ್ಡ್ ಗಳನ್ನು ಸಹ ವಶಪಡಿಸಿಕೊಂಡರೆಂದು ಸಾಕ್ಷಿ ನುಡಿದರು. 

-  ಪುರುಷೋತ್ತಮ್ ಅವರು ಬೆಂಗಳೂರಿನ ವಿಧಿ ವಿಜ್ಞಾನ ಇಲಾಖೆ (FSL- ಫೋರೆನ್ಸಿಕ್  ಸೈನ್ಸ್ ಲಾಬರೋಟರಿ )ಯಲ್ಲಿ DNA ವಿಜಾನಿಯಾಗಿ  2004 ರಿಂದ  ಕೆಲಸ ಮಾಡುತ್ತಿದ್ದಾರೆ.

ಅವರು ಈವರೆಗೆ 3500 ಪ್ರಕರಣಗಳ DNA profiling ಮಾಡಿದ್ದಾರೆ. ಹಾಗೂ ಹಲವಾರು ಕ್ರಿಮಿನಲ್ ಕೋರ್ಟುಗಳಲ್ಲಿ ಸಾಕ್ಷ್ಯ ನುಡಿದಿದ್ದಾರೆ 

ಅವರು ಸಾಕ್ಷ್ಯ ನುಡಿಯುತ್ತಾ;  ಈ ಪ್ರಕರಣದ ಮುಖ್ಯ ತನಿಖಾಧಿಕಾರಿಗಳ ಕೋರಿಕೆಯಂತೆ 2017ರ ಸೆಪ್ಟೆಂಬರ್ 9 ರಂದು ಕಳಿಸಲಾದ swab sample, ರಕ್ತ ಸಿಕ್ತ ಬಟ್ಟೆ , ಬುಲೆಟ್ ಗಳು ಇತ್ಯಾದಿಗಳ  ಸಾಂಪಲ್ಲು ಗಳನ್ನೂ ರಾಸಾಯನಿಕ ಪರೀಕ್ಷೆ ಮತ್ತು ಆ ನಂತರ ಅಂತರರಾಷ್ಟ್ರೀಯ ಮಟ್ಟದಲ್ಲಿ ಒಪ್ಪಿತವಾಗಿರುವ ಪ್ರಕ್ರಿಯೆಗಳ ಮೂಲಕ  DNA ಪರೀಕ್ಷೆ ಒಳಪಡಿಸಲಾಯಿತು. 

ಗುಂಡಿಗೆ ಹತ್ತಿರುವ ರಕ್ತ ಮತ್ತು ಬಟ್ಟೆಗೆ ಹತ್ತಿರುವ ರಕ್ತ ಹಾಗೂ DNA ಒಬ್ಬರದೇ ಆಗಿದ್ದು ಅದು ವಯಸ್ಕ ಹೆಂಗಸಿನದ್ದು ಎಂಬ ಫಲಿತಾಂಶವನ್ನು ತನಿಖಾಧಿಕಾರಿಗೆ  ತಿಳಿಸಲಾಯಿತು.

ಆ ನಂತರ ತಮಿಖಾಧಿಕಾರಿಗಳು . 14.6.2018 ರಂದು ಆರು ಕವರ್ ಗಳಲ್ಲಿ ಆರು ಕೂದಲುಗಳಿರುವ ಸಾಂಪಾಲನ್ನು  DNA ವಿಭಾಗಕ್ಕೆ ಕಳಿಸಿದರು. ಮತ್ತೊಂದು ಕವರಿನಲ್ಲಿದ್ದ ವ್ಯಾಕ್ಯೂಟೈನರ್ ನಲ್ಲಿ ಅಮೋಲ್ ಕಾಲೆಯವರ ರಕ್ತದ ಸ್ಯಾಂಪಲ್ ಇತ್ತು (ಮಾದರಿ).  ಮತ್ತೆ 18.6.2018  ರಂದು ಮತ್ತೊಂದು ವ್ಯಾಕ್ಯೂಟೈನರ್ ನಲ್ಲಿ ಪರಶುರಾಮ್ ವಾಘಮೋರೆಯ ರಕ್ತದ ಮಾದರಿಯನ್ನು DNA  ತಾಳೆ ಗೆ ಕಳಿಸಲಾಯಿತು. 

ತಾನು ಆ ಕೂದಲುಗಳ DNA ಪರೀಕ್ಷೆ ಮಾಡಲಾಗಿ ಅವು ವಯಸ್ಕ ಪುರುಷರದ್ದು ಎಂದು ಗೊತ್ತಾಯಿತು.

ಆ ಕೂದಲಿನ DNA ಮತ್ತು  ಅಮೋಲ್ ಕಾಳೆಯ DNA ತಾಳೆಯಾಯಿತು.

ಆದರೆ ಆ ಕೂದಲಿನ DNA ವಾಘಮೋರೆಯ DNA ಜೊತೆ ತಾಳೆಯಾಗಲಿಲ್ಲ. ಹೀಗಾಗಿ ಆ ವರದಿಯನ್ನು ಹಾಗೂ DNA ತಾಳೆ ಪರೀಕ್ಷೆಯ  ವಿವರಗಳನ್ನು ತನಿಖಾಧಿಕಾರಿಗಳಿಗೆ ಕಳಿಸಿದೆ. ಎಂದು ಹೇಳಿದ ಸಾಕ್ಷಿಯು ಆ ವರದಿಯನ್ನು ಮತ್ತು ಸಹಿಯನ್ನು ಕೋರ್ಟಿನಲ್ಲಿ ಗುರುತಿಸಿದರು. . 

ಇದಾದ ನಂತರ  6.8.2018 ರಂದು ತನಿಖಾಧಿಕಾರಿಗಳು ಅಮಿತ್ ಬಡ್ಡಿ, ಗಣೇಶ್ ಮಿಸ್ಕಿನ್ ಮತ್ತು ಎಚ್.ಎಲ್ ಸುರೇಶ್ ಎಂಬುವರ ರಕ್ತದ ಸಾಂಪಲ್ ಕಳಿಸಿ DNA ಪ್ರೊಫೈಲಿಂಗ್ ಮಾಡಲು ಕೋರಿದರು. ಅದಾದ ನಂತರ  10.8.2018 ರಂದು ಐದು ವಸ್ತುಗಳನ್ನು - ಟೂತ್ ಬ್ರಶ್ - ಕಳಿಸಿ ಇದರಲ್ಲಿ ದೊರಕುವ ಎಪಿತೀಲಿಯಲ್ ಸೆಲ್ ಗಳ DNA ಗೂ ಈ ಮೂವರ DNAಗೂ ತಾಳೆಯಾಗುವುದೇ ಎಂದು ಪತ್ತೆ ಹಚ್ಚಲು ಕೋರಿದರು. ಹಾಗೆಯೇ ಮಾಡಲಾಗಿ ಅವು ತಾಳೆಯಾಗಲಿಲ್ಲ. ಅದಕ್ಕೆ ಸಂಬಂಧಪಟ್ಟ ವರದಿಯನ್ನು ನೀಡಲಾಗಿದೆ. ಅದನ್ನು ಕೋರ್ಟು ಮುಂದೆ ತೆರೆದು ತೋರಿಸಿದಾಗ ಸಾಕ್ಷಿಯು ಅದೇ ವರದಿ ಎಂದು ಗುರುತಿಸಿದರು. 

ಆ ನಂತರ  16.11.2018 ರಂದು ನನಗೆ DNA comparitive profiling ವರದಿ ದೊರೆಯಿತು.

ಅದರ ಪ್ರಕಾರ 10.8.2018 ರಂದು ಕಳಿಸಲಾದ tooth brush ನಲ್ಲಿ ಸಿಕ್ಕ ಎಪಿತೀಲಿಯಲ್ ಸೆಲ್ಲಿನ DNA ಮತ್ತು  ಪರಶುರಾಮ್ ವಾಘಮೋರೆಯ DNA ತಾಳೆಯಾಯಿತು. 

ಇದಕ್ಕೆ ಸಂಬಂಧಪಟ್ಟಂತೆ ಕೊಟ್ಟ ವರದಿಯನ್ನು ಕೋರ್ಟಿನಲ್ಲಿ ಸಾಕ್ಷಿಯು ಗುರುತಿಸಿದರು. 

ಪಾಟಿ ಸವಾಲು :

- ಆರೋಪಿ ಪರ ವಕೀಲರುಗಳು ಸಾಕ್ಷಿದಾರರಾದ ರಾಜ್ ಕುಮಾರ್ ಅವರ ಪಾಟಿ ಸವಾಲನ್ನು ಇನ್ನೂ ಮುಗಿಸಿಲ್ಲ....

ಈವರೆಗೆ ನಡೆದಿರುವ ಪಾಟಿ ಸವಾಲಿನಲ್ಲಿ  ರಾಜ್ ಕುಮಾರ್ ಅವರ  ವೃತ್ತಿಯ ಸ್ವರೂಪ, ದಾವಣಗೆರೆಗೆ ಈ ಹಿಂದೆ ಭೇಟಿ ಕೊಟ್ಟಿದ್ದರ , ಬೆಂಗಳೂರಿಂದ ದಾವಣಗೆರೆಗೆ ಹೋಗುವಾಗ ಯಾವ ವಾಹನ, ಯಾವ ಮಾರ್ಗ,  ಪ್ರಯಾಣದ ರೀತಿ, ಜೊತೆಗಿದ್ದವರ ವಿವರ, ದಾವಣಗೆರೆಯಲ್ಲಿ ವಾಹನವನ್ನು ನಿಲ್ಲಿಸಿದ ರೀತಿ, ಆರೋಪಿಗಳನ್ನು ಪೊಲೀಸರು ಬಂಧಿಸಿದಾಗ ಅವರ ಹಾಕಿದ್ದ ಧಿರಿಸಿನ ವಿವರ, ವಶಪಡಿಸಿಕೊಳ್ಳಲಾದ ಕರೆನ್ಸಿಯ ಮೇಲಿದ್ದ ಸಂಖ್ಯೆಗಳನ್ನು ಬರೆದುಕೊಂಡರೆ ..ಇನ್ನಿತ್ಯಾದಿ ಸವಾಲುಗಳನ್ನು ಕೇಳಿದ್ದಾರೆ. ಈ ಸಾಕ್ಷಿಯ ಪಾಟಿ ಸವಾಲು ಮುಂದುವರೆಯಬೇಕಿದೆ . 

-ಸಾಕ್ಷಿದಾರರಾದ ಪುರುಷೋತ್ತಮ್ ಅವರನ್ನು ಕೇಳಬೇಕಿರುವ ಪ್ರಶ್ನೆಗಳು ಮುಂದೆ ಬರಲಿರುವ ಸಾಕ್ಷಿಗಳಿಗೂ ಸಂಬಂಧ ಪಟ್ಟಿರುತ್ತದೆ. ಈಗಲೇ ನಾವು ಆ ಪ್ರಶ್ನೆಗಳನ್ನು ಕೇಳಿ ಬಿಟ್ಟರೆ ಉಳಿದ ಸಾಕ್ಷ್ಯಗಳು ಎಚ್ಚೆತ್ತುಕೊಳ್ಳುವ ಸಾಧ್ಯತೆಗಳಿವೆ, ಆದ್ದರಿಂದ ಆ ನಿರ್ದಿಷ್ಟ ಸಾಕ್ಷಿಗಳ ವಿಚಾರಣೆಯಾದ ನಂತರವೇ ಪುರುಷೋತ್ತಮ್ ಅವರನ್ನು ಪ್ರಶ್ನಿಸಲು ಅವಕಾಶ ಮಾಡಿಕೊಡಬೇಕೆಂದು ಆರೋಪಿ ಪರ ವಕೀಲರಾದ ಕೃಷ್ಣಮೂರ್ತಿಯವರು ನ್ಯಾಯಾಲಯವನ್ನು ಕೋರಿದರು. . 

ಆದರೆ ಅದಕ್ಕೆ ಸರ್ಕಾರಿ ವಕೀಲರಾದ ಬಾಲನ್ ಅವರು ಆಕ್ಷೇಪಣೆ ಮಾಡಿದರು. ಈ ಸಾಕ್ಷಿಯು ಕೇವಲ DNA ಬಗೆಗಿನ ಪರಿಣಿತ ಸಾಕ್ಷಿ . ಅವರಿಗೂ ಇತರ ಸಾಕ್ಷಿಗಳಿಗೂ ಯಾವುದೇ ಸಂಬಂಧವಿಲ್ಲ. ಸಾಕ್ಷಿಯು ತನಿಖಾಧಿಕಾರಿಯಾಗಿದ್ದರೆ ಈಬಗೆಯ ಕೋರಿಕೆಯು ಮನ್ನಾ. ಆದರೆ ಪರಿಣಿತ ಸಾಕ್ಷಿಯ ವಿಚಾರಣೆಗೆ ಈ ರೀತಿಯ ಕೋರಿಕೆ ಮಾನ್ಯ ಅಲ್ಲ ಎಂದು ವಾದಿಸಿದರು. 

ಆದರೆ ಕೋರ್ಟು ಆರೋಪಿ ಪರ ವಕೀಲರ ಮನಸ್ಸಿನಲ್ಲಿ ಬೇರೆ ಯಾವುದೋ ಪ್ರಶ್ನೆಗಳಿರುತ್ತವೆ. ಅದನ್ನು ಆಧರಿಸಿ ಅವರು ತಮ್ಮ ವಾದವನ್ನು ರೂಪಿಸಿಕೊಳ್ಳಬೇಕಿರುತ್ತದೆ. ಹೀಗಾಗಿ ಆರೋಪಿ ಪರ ವಕೀಲರಿಗೆ ಈ ಸಾಕ್ಷಿಯನ್ನು ನಂತರ ಪ್ರಶ್ನಿಸಲು ಅವಕಾಶ ಕೊಡುವುದರಲ್ಲಿ ತಪ್ಪಿಲ್ಲ ಎಂದು ತಿಳಿಸಿದರು.  ಅದರಂತೆ ಸಾಕ್ಷಿಗೆ ನಂತರ ಕರೆ ಬಂದಾಗ ಪಾಟಿ ಸವಾಲಿಗೆ ಹಾಜರಾಗಲು ತಿಳಿಸಿದರು. 

- ಆರೋಪಿ ಪರ ವಕೀಲರು ರವಿ ನೊರೊನ್ಹಾ  ಅವರಿಗೆ ಹಲವಾರು ಪ್ರಶ್ನೆಗಳನ್ನು ಕೇಳಿದರು. 

ಈ ವೇಳೆ ಪ್ರಶ್ನೆಯೊಂದಕ್ಕೆ ಉತ್ತರ ಕೊಡುತ್ತಾ  ರವಿ ನರೋನ್ಹಾ ರವರು ಟಾಟಾ  ಟೆಲಿ  ಸರ್ವಿಸಸ್ ಕಂಪನಿಯು ತನ್ನ ಎಲ್ಲಾ ಕರೆ ಮಾಹಿತಿಗಳನ್ನು ಹೈದರಾಬಾದಿನಲ್ಲಿರುವ ಸರ್ವರ್ ನಲ್ಲಿ ದಾಖಲಿಸಿಡುತ್ತದೆಂದು, ಕರೆ ಮಾಹಿತಿಯನ್ನು ಅಲ್ಲಿಂದಲೇ ಡೌನ್  ಲೋಡ್ ಮಾಡಿಕೊಳ್ಳಬೇಕಾಗುತ್ತದೆಂದೂ , ನೋಡಲ್ ಆಫೀಸರ್ ಆದ ತನಗೆ ಅದನ್ನು ಡೌನ್ ಲೋಡ್ ಮಾಡಿಕೊಳ್ಳಲು ಮೇಲಧಿಕಾರಿಗಳ ಅನುಮತಿ ಅಗತ್ಯವಿಲ್ಲವೆಂದೂ ತಿಳಿಸಿದರು. ಹಾಗೆಯೇ GSM ತಂತ್ರಜ್ಞಾನದ ಮೊಬೈಲ್ ಟವರ್ ಒಂದರ ತಲುಪುವ ವಿಸ್ತೀರ್ಣ 700-1000 ಮೀಟರ್ ಇರುತ್ತದೆಂದು ತಿಳಿಸಿದರು. 

ಅತ್ಯಂತ ಮುಖ್ಯವಾಗಿ ಕಾಲ್ ರೆಕಾರ್ಡ್ ಮಾಹಿತಿಯು  1.3.2017 ರಿಂದ 18.2.2018 ವರೆಗೆ ಮಾತ್ರವಲ್ಲದೆ 28-3-2018ರ ವರೆಗೆ ಇರುವುದು ಒಂದು ವರ್ಷದ ಅವಧಿಯ ಕಾಲ್ ರೆಕಾರ್ಡ್ ಮಾಹಿತಿಯನ್ನು ಸಂಗ್ರಹಿಸಡಬೇಕು ಎಂಬ ಕಾನೂನಿನ ಉಲ್ಲಂಘನೆಯಲ್ಲವೇ ಎಂದು ಆರೋಪಿ ಪರ ವಕೀಲರಾದ ಕೃಷ್ಮಮೂರ್ತಿಯವರು ಪ್ರಶ್ನಿಸಿದರು.  

ಅದಕ್ಕೆ ನರೋನ್ಹಾ ಅವರು ತಮಗೆ ನೀಡಲಾಗಿರುವ ಲೈಸೆನ್ಸ್ ಷರತ್ತಿನ ಪ್ರಕಾರ ಪೋಲಿಸ್ ಅಧಿಕಾರಿಗಳು ಕೋರಿಕೊಂಡರೆ ಅವರು ಕೇಳುವ ಮಾಹಿತಿಯನ್ನು ಕೊಡಬೇಕಾಗುತ್ತದೆ ಎಂದು ಉತ್ತರಿಸಿದರು. ಆರೀತಿ ನಿರ್ದಿಷ್ಟ ಕೋರಿಕೆಯನ್ನು ತನಿಖಾಧಿಕಾರಿಗೆ ಯಾವಾಗ ಮತ್ತು ಹೇಗೆ ಮಾಡಿದರು ಎಂದು ಕೇಳಿದಾಗ ಅದರ ಬಗ್ಗೆ ತಮಗೆ ನೆನಪಿಲ್ಲ ಎಂದು ಉತ್ತರಿಸಿದರು. 

ಹಾಗೆಯೇ ಅವರು ಕೊಟ್ಟಿರುವ ದಾಖಲೆಗಳಲ್ಲಿ ಪುಟದ ಕೊನೆಯಲ್ಲಿ ಪುಟ ಸಂಖ್ಯೆಯು  169/518  ಎಂದಿದೆ. ಎಂದರೆ ನೀವು 518  ಪುಟಗಳಷ್ಟು ಮಾಹಿತಿ ಕೊಟ್ಟಿದ್ದರೂ ಬರಿ 28 ಪುಟಗಳ ಮಾಹಿ ಎಂದು  ಹೇಳುತ್ತಿರುವುದು ಸುಳ್ಳಲ್ಲವೆ ಎಂದು ಪ್ರಶ್ನಿಸಿದರು, ಆದ್ದರಿಂದ ನೀವು ಪೊಲೀಸರಿಗೆ  ಅನುಕೊಲವಾಗುವ ಮಾಹಿತಿಯನ್ನು ಮಾತ್ರ ಸೃಷ್ಟಿಸಿ ಕೊಟ್ಟಿದ್ದೀರಿ ಎಂದು ಆರೋಪಿಸಿದರು. 

ರವಿ ನರೋನ್ಹಾ ಅವರು ಪುಟದ ಕೊನೆಯಲ್ಲಿ ಆ ರೀತಿ ಸಂಖ್ಯೆಗಳು ಇರುವುದು ನಿಜವಾದರೂ ಅದರ ಅರ್ಥ ತಾನು ಪೊಲೀಸರಿಗೆ  ಬೇಕಿರುವಷ್ಟು ಮಾಹಿತಿಯನ್ನು ಸೃಷ್ಟಿಸಿ ಕೊಟ್ಟಿದ್ದೇನೆಂದು ಎಂದಾಗುವುದಿಲ್ಲ  ಎಂದು ಉತ್ತರಿಸಿದರು. 

ಮತ್ತೊಂದು ಪ್ರಶ್ನೆಗೆ ಉತ್ತರಿಸುತ್ತಾ ಕರೆ ಮಾಹಿತಿ ದಾಖಲೆಗಳಲ್ಲಿ ಮೊಬೈಲ್ ಸ್ವಿಚ್ ಆಫ್ ಆದ ಮಾಹಿತಿ ಇರುವುದಿಲ್ಲವೆಂದು ಹೇಳಿದರು . 

- ಆರೋಪಿ ಪರ ವಕೀಲರು ಸಾಕ್ಷಿಗಳಾದ ಅಯಾಜುಲ್ಲಾ ಷರೀಫ್ ಮತ್ತು ಅಮ್ಜದ್ ಅವರಿಗೆ  ಪ್ರಧಾನವಾಗಿ ವೆಸ್ಟ್ ಬುಲೆಟಗಳನ್ನು ಕೊಟ್ಟಿರುವ ಬಗ್ಗೆ ಹಾಗೂ ಗನ್  ರಿಪೇರಿ ಮಾರಾಟದ ಬಗ್ಗೆ ಕಡ್ಡಾಯವಾಗಿ ಇಟ್ಟುಕೊಳ್ಳಬೇಕಾದ ರಿಜಿಸ್ಟ್ರಿಯನ್ನು ಅಂಗಡಿಯಲ್ಲಿ ಇಟ್ಟುಕೊಳ್ಳಲಾಗಿದೆಯೇ ಮತ್ತು ನವೀನ್ ಕುಮಾರ್ ಗೆ ಕೊಟ್ಟ ವೆಸ್ಟ್ ಬುಲೆಟ್ಗಳು ರಿಜಿಸ್ಟ್ರಿಯಲ್ಲಿ ಯಾಕೆ ನಮೂದಾಗಿಲ್ಲ ಎಂಬ ಬಗ್ಗೆ ಪ್ರಶ್ನೆಗಳನ್ನು ಕೇಳಿದರು.

ಅಯಾಝುಲ್ಲ ಅವರು ರಿಜಿಸ್ಟ್ರಿಯನ್ನು ಇಟ್ಟುಕೊಳ್ಳಲಾಗಿದೆ  ಎಂದು ಉತ್ತರಿಸಿದರು. ನವೀನ್ ಕುಮಾರ್ ಜೊತೆ ನಡೆದ ವ್ಯವಹಾರದ ದಾಖಲೆಗಳನ್ನು ಪೊಲೀಸರಿಗೆ ಒದಗಿಸಿಲ್ಲವೆಂದು ಉತ್ತರಿಸಿದರು.  ಅಮ್ಜದ್ ಅವರು ತಾನು ಕೊಟ್ಟಿದ್ದು  ಕೊಟ್ಟು ಕೆಲವೇ ವೆಸ್ಟ್ ಬುಲೆಟ್ ಗಳಾದ್ದರಿಂದ ಒಂದು ಪ್ಲಾಸ್ಟಿಕ್ ಕವರಿನಲ್ಲಿ ಹಾಕಿ ಕೊಟ್ಟೆನೆಂದು ಉತ್ತರಿಸಿದರು. ಮತ್ತು ವೆಸ್ಟ್ ಬುಲೆಟ್ ಗಳನ್ನೂ ಫೈರ್  ಮಾಡಲೂ ಆಗುವುದಿಲ್ಲ, ಗುಜರಿಯಲ್ಲೂ  ಅದಕ್ಕೆ ಬೆಲೆ ಇರುವುದಿಲ್ಲ ಎಂದು ಉತ್ತರಿಸಿದರು.  

ಪೊಲೀಸರೊಂದಿಗೆ ಒಳ್ಳೆ ಸಂಬಂಧ ಇಟ್ಟುಕೊಳ್ಳುವ ಸಲುವಾಗಿ ಸುಳ್ಳು ಸಾಕ್ಷಿ ನುಡಿಯುತ್ತಿದ್ದೀರೆಂದು ಆರೋಪಿ ಪರ ವಕೀಲರು ಆರೋಪಿಸಿದರು . ಅದನ್ನು ಸಾಕ್ಷಿಗಳು ನಿರಾಕರಿಸಿದರು. 

ಮುಂದಿನ ವಿಚಾರಣೆ  2023ರ ಜನವರಿ 16 ರಿಂದ 21  ರವರೆಗೆ ನಡೆಯಲಿದೆ. 

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top