ಕನ್ನಡದ ಘನ ವಿವೇಕ 'ಕೆವಿಎನ್' | Vartha Bharati- ವಾರ್ತಾ ಭಾರತಿ

--

ಕನ್ನಡದ ಘನ ವಿವೇಕ 'ಕೆವಿಎನ್'

ಜಾನಪದದಿಂದ ಸಿನೆಮಾದವರೆಗೆ, ಆಡುನುಡಿಯಿಂದ ವ್ಯಾಟ್ಸ್ ಆ್ಯಪ್‌ವರೆಗೆ, ಕರ್ನಾಟಕದಲ್ಲಿದ್ದೂ ಕನ್ನಡ ಮರೆಯುವವರಿಂದ ಕೆನಡಾದಲ್ಲಿದ್ದೂ ಕನ್ನಡ ಮರೆಯದವರವರೆಗೆ, ಕನ್ನಡದ ಉದ್ಧಾರಕ್ಕೆಂದು ಆರಿಸಲ್ಪಟ್ಟ ಸರಕಾರಗಳು ನಡೆಸುತ್ತಿರುವ ಭಾಷಾ ನಾಶದಿಂದ, ಕನ್ನಡವನ್ನು ನಾಶ ಮಾಡಲೆಂದೇ ಬಂದಿರುವುವೆಂದು ತಿಳಿಯಲಾದ ಜಾಗತಿಕ ಕಂಪೆನಿಗಳು ಲಾಭಕ್ಕೋ, ಇನ್ನೇನಕ್ಕೋ ಕನ್ನಡ ಬೆಳೆಸುತ್ತಿರುವವರೆಗೆ, ಹೀಗೆ ದಶದಿಕ್ಕುಗಳ ಆಯಾಮದಲ್ಲಿ, ಎಲ್ಲಾ ನಾಶವಾಗುತ್ತದೆ ಎನ್ನುವ ನಿರಾಶಾವಾದ, ಏನೂ ಆಗುವುದಿಲ್ಲವೆಂಬ ಸಿನಿಕತನ, ದೀರ್ಘ ಇತಿಹಾಸದ ಕಾರಣಕ್ಕೆ ಮೂಡುವ ಹುಸಿ ವಿಶ್ವಾಸಗಳೆಲ್ಲದರಿಂದ ಬಿಡುಗಡೆ ಪಡೆದ ಘನ ವಿವೇಕದ ಕನ್ನಡ ಅಸ್ಮಿತೆಯ ಚಿಂತನೆ ಕೆವಿಎನ್ ಅವರದ್ದು.

ಕನ್ನಡ ಅಸ್ಮಿತೆ ಕುರಿತ ಚಿಂತನೆಯಲ್ಲಿ ಸಮಗ್ರ ಎನಿಸುವಂತಹ ಚಿಂತನೆಗಳಿಗೆ ಹತ್ತಿರವಾಗಿರುವವು ಕೆವಿಎನ್ (ಕೆ.ವಿ. ನಾರಾಯಣ) ಅವರ ಚಿಂತನೆಗಳು ಎನ್ನ ಬಹುದು. ಯಾವ ಸಿದ್ಧಾಂತಕ್ಕೂ ತಮ್ಮನ್ನು ತೆತ್ತುಕೊಳ್ಳದೆ, ಆದರೆ ಎಲ್ಲಾ ಸಿದ್ಧಾಂತಗಳ ಬೆಳಕಿನಲ್ಲಿ ಭಾಷೆ ಯನ್ನು ನೋಡುತ್ತ, ಮುಗ್ಧ ಕುತೂಹಲದ ದೃಷ್ಟಿಯಲ್ಲಿ ಅದು ಭೂತದಿಂದ ನಡೆದು ಬಂದ ಸಾವಿರಾರು ವರ್ಷಗಳ ಹೆಜ್ಜೆಯ ಜಾಡನ್ನು ಪರೀಕ್ಷಿಸುತ್ತ, ಈ ಹೆಜ್ಜೆಯ ಜಾಡನ್ನು ಪ್ರಭಾವಿಸಿರಬಹುದಾದ ರಾಜಸತ್ತೆ, ಹಾದಿಯ ಉಬ್ಬು ತಗ್ಗುಗಳನ್ನು ಉಂಟು ಮಾಡಿದ ಜನಬದುಕಿನ ಏರಿಳಿತದ ಭಾರದ ಲಯ, ಹಾದಿಯಲ್ಲಿ ಜೊತೆಯಾದ ಸಹಭಾಷೆಗಳ ಯಜಮಾನಿಕೆ ಮೂಡಿಸಿದ ತನ್ನತನದ ಎಚ್ಚರ, ಸಹಭಾಷೆಗಳ ದೈನ್ಯತೆ ಮೂಡಿಸಿದ ಗರ್ವ ಎಲ್ಲವನ್ನೂ ಅರಿಯಬಲ್ಲರು. ಈ ಅರಿಯುವ ಪಯಣ ಅಂತರ್‌ರಾಷ್ಟ್ರೀಯ ಮತ್ತು ಸ್ಥಳೀಯ ವಿದ್ಯಮಾನಗಳ ಜತೆ ಜತೆಗೆ ತುಲನೆ ಮಾಡುತ್ತ ಸಾಗುತ್ತದೆ. ಪಯಣವನ್ನು ಯಶಸ್ವಿಗೊಳಿಸಲು ಭಾಷಾಶಾಸ್ತ್ರ, ಮನಃಶಾಸ್ತ್ರ, ಹೊಸಕಾಲದಲ್ಲಿ ವಿಜ್ಞಾನ ಸಂಶೋಧಿಸಿ ದೃಢಪಡಿಸಿದ ಕಲಿಕೆಯ ಸಾಮರ್ಥ್ಯಗಳೆಲ್ಲ ಬೆಂಗಾವಲಿನಲ್ಲಿರುತ್ತವೆ.

ಜಾನಪದದಿಂದ ಸಿನೆಮಾದವರೆಗೆ, ಆಡುನುಡಿಯಿಂದ ವ್ಯಾಟ್ಸ್ ಆ್ಯಪ್‌ವರೆಗೆ, ಕರ್ನಾಟಕದಲ್ಲಿದ್ದೂ ಕನ್ನಡ ಮರೆಯುವವರಿಂದ ಕೆನಡಾದಲ್ಲಿದ್ದೂ ಕನ್ನಡ ಮರೆಯದವರವರೆಗೆ, ಕನ್ನಡದ ಉದ್ಧಾರಕ್ಕೆಂದು ಆರಿಸಲ್ಪಟ್ಟ ಸರಕಾರಗಳು ನಡೆಸುತ್ತಿರುವ ಭಾಷಾ ನಾಶದಿಂದ, ಕನ್ನಡವನ್ನು ನಾಶ ಮಾಡಲೆಂದೇ ಬಂದಿರುವುವೆಂದು ತಿಳಿಯಲಾದ ಜಾಗತಿಕ ಕಂಪೆನಿಗಳು ಲಾಭಕ್ಕೋ, ಇನ್ನೇನಕ್ಕೋ ಕನ್ನಡ ಬೆಳೆಸುತ್ತಿರುವವರೆಗೆ, ಹೀಗೆ ದಶದಿಕ್ಕುಗಳ ಆಯಾಮದಲ್ಲಿ, ಎಲ್ಲಾ ನಾಶವಾಗುತ್ತದೆ ಎನ್ನುವ ನಿರಾಶಾವಾದ, ಏನೂ ಆಗುವುದಿಲ್ಲವೆಂಬ ಸಿನಿಕತನ, ದೀರ್ಘ ಇತಿಹಾಸದ ಕಾರಣಕ್ಕೆ ಮೂಡುವ ಹುಸಿ ವಿಶ್ವಾಸಗಳೆೆಲ್ಲದರಿಂದ ಬಿಡುಗಡೆ ಪಡೆದ ಘನ ವಿವೇಕದ ಕನ್ನಡ ಅಸ್ಮಿತೆಯ ಚಿಂತನೆ ಕೆವಿಎನ್ ಅವರದ್ದು. ಭಾಷೆಗೆ ಸಂಬಂಧಿಸಿದಂತೆ ಕೆವಿಎನ್ ಅವರ ಕೃತಿಗಳು: ಭಾಷೆಯ ಸುತ್ತಮುತ್ತ, ಸಂಪಾದಿತ ಕೃತಿ ಕನ್ನಡ ವಿಶ್ವವಿದ್ಯಾನಿಲಯ ವಿಶ್ವಕೋಶ-1: ಭಾಷೆ. ಮತ್ತೆ ಭಾಷೆಯ ಸುತ್ತಮುತ್ತ, ನಮ್ಮೆಡನೆ ನಮ್ಮ ನುಡಿ, ಮತ್ತು ಕನ್ನಡ ಜಗತ್ತು; ಅರ್ಧ ಶತಮಾನ.

ಇಪ್ಪತ್ತನೆಯ ಶತಮಾನದಲ್ಲಿ ಎಲ್ಲಾ ಭಾರತದ ದೇಶಿ ಭಾಷೆ ಗಳಂತೆ ಕನ್ನಡವನ್ನೂ ಕಂಗೆಡಿಸಿದ್ದು ಬ್ರಿಟಿಷರು ತಮ್ಮಿಂದಿಗೆ ಹೊತ್ತು ತಂದ ಇಂಗ್ಲಿಷ್. ಇದು ಭಾಷಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ನೆಲೆಗಳಲ್ಲಿ ಉಂಟು ಮಾಡಿದ ತಲ್ಲಣಗಳು ಈಗಲೂ ಬಾಧಿಸುತ್ತಲೇ ಇವೆ. ಇಂಗ್ಲಿಷ್ ಭಾಷೆ ಕರ್ನಾಟಕದ ಪ್ರತಿಯೊಂದು ಕ್ಷೇತ್ರವನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದ್ದು, ಎರಡು ಸಾವಿರ ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಬೆಳೆದು ಬಂದ ಕನ್ನಡವನ್ನು ಸಂಪೂರ್ಣ ನಾಶ ಮಾಡುತ್ತದೆ ಎನ್ನುವುದು ಭಾಷಿಕ ನೆಲೆಯ ತಲ್ಲಣ. ಇಂಗ್ಲಿಷ್ ಮೂಲಕ ದೊರಕುವ ವೈಚಾರಿಕತೆ, ವೈಜ್ಞಾನಿಕತೆ, ವಿಚಾರವಾದ ಇವೆಲ್ಲವೂ ಪರಂಪರೆಯ ಬೇರುಗಳಿಗೆ ಕೊಡಲಿ ಪೆಟ್ಟು ಹಾಕುತ್ತವೆ ಎನ್ನುವುದು ಸಾಂಸ್ಕೃತಿಕ ನೆಲೆಯ ತಲ್ಲಣ. ಸಾಂಸ್ಕೃತಿಕ ತಲ್ಲಣಗಳು ಪರಿಣಾಮದಲ್ಲಿ ಸಮಾಜದಲ್ಲಿ ಪಲ್ಲಟಗಳನ್ನು ತರುತ್ತವೆ ಎನ್ನುವುದು ಸಾಮಾಜಿಕ ನೆಲೆಯ ತಲ್ಲಣ. ಕೊನೆಗೆ ಕನ್ನಡವನ್ನು ಬಿಡದೆ ಇಂಗ್ಲಿಷಿನಿಂದ ಸಿಗುವ ಪ್ರಯೋಜನಗಳನ್ನು ಪಡೆಯುವ ಕನ್ನಡ ಮಾಧ್ಯಮದಿಂದ ಬರುವ ಸಹಜ ಶೈಕ್ಷಣಿಕ ಲಾಭ ಮತ್ತು ಇಂಗ್ಲಿಷಿನಿಂದ ದತ್ತವಾಗುವ ಸಾಮಾಜಿಕ ಪ್ರಗತಿಯ ಅಧಿಕಾರ ಇವೆರಡನ್ನು ಒಟ್ಟಿಗೇ ಬೆರೆಸುವ ನೀತಿಯೊಂದನ್ನು ನಾವೀಗ ರೂಪಿಸಬೇಕಾಗಿದೆ ಎಂಬ ರಾಜಿ ಹೊಂದಾಣಿಕೆಯ ಸೂತ್ರಕ್ಕೆ ಸಮಾಜ ಶರಣಾಗುತ್ತಿದೆ. ಆದರೆ ನಮ್ಮ ಎಲ್ಲಾ ತಲ್ಲಣಗಳಿಗೆ ನಿಜಕ್ಕೂ ಇಂಗ್ಲಿಷ್ ಎಷ್ಟರಮಟ್ಟಿಗೆ ಕಾರಣವಾಗಿದೆ ಎನ್ನುವುದನ್ನು ಅರಿಯಲು ಹಲವು ಆಯಾಮಗಳ ಅಧ್ಯಯನ ಮತ್ತು ವಿಶ್ಲೇಷಣೆಯ ಅಗತ್ಯವಿದೆ. ನಮ್ಮ ಸಮಸ್ಯೆ ಇರುವುದು ಭಾಷೆಯಲ್ಲಲ್ಲ. ಭಾಷೆಯ ಸಾಮರ್ಥ್ಯ ಮತ್ತು ಸಾಧ್ಯತೆಗಳನ್ನು ಸರಿಯಾಗಿ ಗ್ರಹಿಸದ ನಮ್ಮ ಸ್ಥಿತಿಯಿಂದಾಗಿ ತಕ್ಕ ಪರಿಹಾರೋಪಾಯಗಳನ್ನು ರೂಪಿಸಲಾಗುತ್ತಿಲ್ಲ. ಭಾಷೆಯ ಸಾಮರ್ಥ್ಯ ಮತ್ತು ಸಾಧ್ಯತೆಗಳನ್ನು ಸರಿಯಾಗಿ ಗ್ರಹಿಸದೆ ಯಾವುದೇ ಒಂದು ಭಾಷೆಯನ್ನು ಆತಂಕದಿಂದ ನೋಡುವುದು ತಪ್ಪು ನಿರ್ಧಾರಗಳಿಗೆ ಮತ್ತು ಅನಗತ್ಯ ಭಯಕ್ಕೆ ಕಾರಣವಾಗುತ್ತದೆ ಎನ್ನುವುದು ಕೆವಿಎನ್ ಚಿಂತನೆ.

ಕನ್ನಡದ ಸಂದರ್ಭದಲ್ಲಿ ಭಾಷೆಯ ಸಾಮರ್ಥ್ಯ ಮತ್ತು ಸಾಧ್ಯತೆ ಗಳನ್ನು ವೈಜ್ಞಾನಿಕವಾಗಿ ಅರಿಯಲು ಯತ್ನಿಸಿದವರು ಕೆವಿಎನ್ ಅವರು. ಹಾಗಾಗಿ ಭಾಷಾ ವಿಜ್ಞಾನಿ ಎನ್ನುವ ಪದನಾಮ ನಿಜ ಅರ್ಥದಲ್ಲಿ ಅನ್ವರ್ಥವಾಗುವುದು ಇವರ ಸಂದರ್ಭದಲ್ಲಿಯೇ.

 ಕನ್ನಡದೊಂದಿಗಿನ ಇಂಗ್ಲಿಷ್ ಸಂಬಂಧ ಕುರಿತ ಕೆವಿಎನ್ ಅವರ ಗ್ರಹಿಕೆಗಳು ಇಂಗ್ಲಿಷ್ ಕುರಿತ ನಮ್ಮ ಹಲವು ಆತಂಕಗಳನ್ನು ದೂರ ಮಾಡುವಂತಿವೆ. ಪ್ರಾಥಮಿಕ ಶಿಕ್ಷಣದಲ್ಲಿ ಇಂಗ್ಲಿಷ್ ಮಾಧ್ಯಮದ ಕುರಿತು ಪರ-ವಿರೋಧದ ಚರ್ಚೆಗಳು ಇನ್ನೂ ಬಿರುಸಾಗಿ ನಡೆಯುತ್ತಲೇ ಇದೆ. ಇಂಗ್ಲಿಷ್ ಮಾಧ್ಯಮದ ಪರ ವಾದಿಸುವವರು ಜಾಗತೀಕರಣದಿಂದಾಗಿ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಇಂಗ್ಲಿಷ್ ಅನಿವಾರ್ಯವಾಗಿದೆ. ತಾಂತ್ರಿಕ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಶಿಕ್ಷಣ ಇಂಗ್ಲಿಷ್ ಮಾಧ್ಯಮದಲ್ಲಿಯೇ ಇದ್ದು ಈ ಕ್ಷೇತ್ರಗಳನ್ನು ಪ್ರವೇಶಿಸಲು ಪ್ರಾಥಮಿಕ ಹಂತದಿಂದಲೇ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತರೆ ಸುಲಭ ಎನ್ನುತ್ತಾರೆ. ಮಗು ತನ್ನ ಮಾತೃಭಾಷೆಯಲ್ಲಿ ಮಾತ್ರ ವಿಷಯಗಳನ್ನು ಗ್ರಹಿಸಬಲ್ಲುದು, ಇನ್ನೊಂದು ಪರಕೀಯ ಭಾಷೆ ಅದಕ್ಕೆ ಹೊರೆಯಾಗುತ್ತದೆ ಎನ್ನುವುದು ಸಾಮಾನ್ಯವಾಗಿ ಇಂಗ್ಲಿಷ್ ಮಾಧ್ಯಮವನ್ನು ವಿರೋಧಿಸುವವರ ವಾದವಾಗಿದೆ. ಇದರೊಂದಿಗೆ ಇಂಗ್ಲಿಷ್ ಮಾಧ್ಯಮವನ್ನು ವಿರೋಧಿಸುವವರು ಪ್ರಾಥಮಿಕ ಹಂತದಲ್ಲಿ ಮಗುವಿನ ಭಾಷಾ ಕಲಿಕೆ ಮತ್ತು ವಿಷಯ ಕಲಿಕೆಗಳನ್ನು ಒಟ್ಟೊಟ್ಟಿಗೆ ಮಾಡಬೇಕಾಗುತ್ತದೆ; ಇದು ಶ್ರಮದಾಯಕ ಎನ್ನುತ್ತಾರೆ. ಈ ಮಾತನ್ನು ಸಮರ್ಥಿಸಲು ಆಧಾರಗಳಿಲ್ಲ ಎನ್ನುವ ಕೆ.ವಿ.ನಾರಾಯಣ ಅವರು ಇದಕ್ಕೆ ನೀಡುವ ವಿಶ್ಲೇಷಣೆಗಳು ತರ್ಕಬದ್ಧವಾಗಿವೆ. ಮಗುವಿಗೆ ಒಂದೇ ಸಮಯಕ್ಕೆ ಒಂದಕ್ಕಿಂತ ಹೆಚ್ಚು ಭಾಷೆಗಳ ಪರಿಸರ ದೊರೆತರೆ ಮಗು ತನ್ನ ಅಂತಸ್ಥ ಸಾಮರ್ಥ್ಯದಿಂದ ಹಲವು ಭಾಷೆಗಳನ್ನು ಕಲಿಯಬಹುದು. ಇದು ವೈಜ್ಞಾನಿಕವಾಗಿ ಸಾಬೀತಾಗಿರುವ ಸಂಗತಿ. ಈ ಹಿನ್ನೆಲೆಯಲ್ಲಿ ಮಕ್ಕಳು ಇಂಗ್ಲಿಷ್ ಭಾಷೆಯನ್ನು ಅಥವಾ ಇನ್ನಾವುದೋ ಭಾಷೆಯನ್ನು ಕಲಿಯಲು ಕಷ್ಟವಾಗುತ್ತದೆ ಎಂದು ವಾದಿಸುವುದು ತರ್ಕಹೀನ ಎನ್ನುವುದು ಅವರ ಅಭಿಮತ. ಮಗುವಿನ ಭಾಷಾ ಕಲಿಕೆ ಮತ್ತು ವಿಷಯ ಕಲಿಕೆಗಳು ಬೇರೆ ಬೇರೆ ರೀತಿಯಲ್ಲಿ ನಡೆದಿರುವ ಕಲಿಕೆಗಳು. ವಿಷಯಗಳ ಕಲಿಕೆಗೆ ಅನುಗಮನ ತಾರ್ಕಿಕತೆ ಹೆಚ್ಚಾಗಿ ಬೇಕಾದರೆ, ಭಾಷೆಯ ಕಲಿಕೆಗೆ ನಿಗಮನ ತರ್ಕವನ್ನು ಬಳಸಲಾಗುತ್ತದೆ. ಆದ್ದರಿಂದ ಈ ಹಂತದಲ್ಲಿ ಕಲಿಕೆಯ ಯಶಸ್ಸು ಅದು ಪರಿಚಿತ ಭಾಷೆಯೋ ಅಪರಿಚಿತ ಭಾಷೆಯೋ ಎಂಬ ಅಂಶವನ್ನು ಅವಲಂಬಿಸುವುದಿಲ್ಲ. ಕಲಿಯುವವರು ಇಂಗ್ಲಿಷ್ ಭಾಷೆಯನ್ನು ಕಲಿಯುತ್ತಿರುತ್ತಾರೆ. ಈ ಜೋಡಿ ಪ್ರಕ್ರಿಯೆಯಲ್ಲಿ ಒಂದು ಇನ್ನೊಂದನ್ನು ನೇತ್ಯಾತ್ಮಕವಾಗಿ ಪ್ರಭಾವಿಸುತ್ತದೆ ಎಂದು ವಾದಿಸಲು ಪುರಾವೆ ಇಲ್ಲ. ಆದ್ದರಿಂದ ಇಂಗ್ಲಿಷ್ ಮಾಧ್ಯಮದ ಸಾಮಾಜಿಕ ನೆಲೆಯ ಮೌಲ್ಯಭಾರವನ್ನು ಯಥಾವತ್ತಾಗಿ ನಾವು ಒಂದು ಕಡೆಯಿಂದ ಇನ್ನೊಂದು ಕಡೆಗೆ ರವಾನಿಸಲಾರೆವು ಈ ಹಿನ್ನೆಲೆಯಲ್ಲಿ ಖಾಸಗಿ ಇಂಗ್ಲಿಷ್ ಮಾಧ್ಯಮದ ಶಾಲೆಗಳು, ಅಲ್ಲಿಂದ ಕಲಿತು ಹೊರಬರುತ್ತಿರುವ ಮಕ್ಕಳನ್ನು ನೋಡಿ ಕನ್ನಡದ ಭವಿಷ್ಯದ ಬಗ್ಗೆ ಮೂಡುವ ಆತಂಕ ಅಷ್ಟು ವಾಸ್ತವದ್ದಲ್ಲವೆಂಬುದು ಕೆ.ವಿ ನಾರಾಯಣರ ವಿಶ್ಲೇಷಣೆ.

ಸಹಜವಾಗಿ ಹಲವು ಭಾಷೆಗಳನ್ನು ಕಲಿಯುವ ವಾತಾವರಣ ದಲ್ಲಿರುವ ಮಕ್ಕಳ ಪರಿಸ್ಥಿತಿಗೂ ಒತ್ತಾಯಪೂರ್ವಕವಾಗಿ ಇಂಗ್ಲಿಷ್ ಮಾಧ್ಯಮಕ್ಕೆ ತಳ್ಳಲಾದ ಮಕ್ಕಳಿಗೂ ವ್ಯತ್ಯಾಸವಿದೆ. ಇದು ಪ್ರಜ್ಞಾವಂತ ಸಮಾಜದ ತಳಮಳಕ್ಕೆ ಕಾರಣವಾಗಿದೆ. ಆದರೆ ನಮ್ಮ ತಳಮಳಕ್ಕೂ ಹೆಚ್ಚಿನ ಆಧಾರವಿಲ್ಲವೆಂದು ಕೆ.ವಿ. ನಾರಾಯಣ ಅವರ ಅಭಿಮತ. ಅವರ ಪ್ರಕಾರ ಕನ್ನಡ ಮತ್ತು ಇಂಗ್ಲಿಷ್‌ಗಳ ನಡುವೆ ಇರುವ ಈ ಪೈಪೋಟಿಯಲ್ಲಿ ಇಂಗ್ಲಿಷ್ ಹೆಚ್ಚು ಯಶಸ್ಸನ್ನು ಪಡೆದಿದೆ ಎಂದು ನಮಗೆ ತೋರುತ್ತದೆ. ಆದರೆ ಪರಿಸ್ಥಿತಿ ಕೊಂಚ ಭಿನ್ನವಾಗಿಯೇ ಇದೆ. ಕನ್ನಡವನ್ನು ಬಿಟ್ಟುಕೊಟ್ಟು ಒತ್ತಾಯಪೂರ್ವಕವಾಗಿ ಇಂಗ್ಲಿಷ್ ಮಾಧ್ಯಮಕ್ಕೆ ತಳ್ಳಲಾದ ವಿದ್ಯಾರ್ಥಿಗಳು ಔಪಚಾರಿಕವಾಗಿ ಮಾತ್ರ ಇಂಗ್ಲಿಷನ್ನು ನಂಬಿದ್ದಾರೆ. ಅನೌಪಚಾರಿಕವಾಗಿ ಅವರು ತಮ್ಮ ಕಲಿಕೆಯ ಮಾಧ್ಯಮವಲ್ಲದ ಕನ್ನಡವನ್ನೇ ಆಶ್ರಯಿಸುತ್ತಾರೆ. ಇದೊಂದು ಅಪರೂಪದ ಗ್ರಹಿಕೆಯಾಗಿದ್ದು, ಮಗುವೊಂದು ಇಂಗ್ಲಿಷ್ ಮಾಧ್ಯಮದಲ್ಲಿ ಓದುತ್ತ ಕನ್ನಡ ಸೇರಿದಂತೆ ಇತರ ವಿಷಯಗಳನ್ನು ಕಲಿಯಬಹುದು ಎನ್ನುವುದು ಸ್ಥಿರಪಟ್ಟರೆ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ಸಾಧ್ಯವಾಗುತ್ತದೆ. ಕೆವಿಎನ್ ಅವರ ಕನ್ನಡದ ಸಾಧ್ಯತೆಗಳನ್ನು ವೈಜ್ಞಾನಿಕ ವಾದ ರೀತಿಯಲ್ಲಿ ಎಲ್ಲ ನೆಲೆಗಳಲ್ಲಿ ನೋಡುತ್ತಿದ್ದು ಇದು ಕನ್ನಡದ ಚಿಂತನಾ ಪರಂಪರೆಯಲ್ಲಿಯೇ ವಿಶಿಷ್ಟವಾದದ್ದಾಗಿದೆ. ಇಂಗ್ಲಿಷ್ ಮಾಧ್ಯಮ ಸೇರಿದರೂ ಬಹುತೇಕ ವಿದ್ಯಾರ್ಥಿಗಳು ಕನ್ನಡ ವನ್ನೇ ಆಶ್ರಯಿಸಿದ್ದಾರೆ ಎನ್ನುವುದು ಕನ್ನಡಕ್ಕೆ ಇಂಗ್ಲಿಷ್ ಮಾಧ್ಯಮದ ಭಯವನ್ನು ಹೋಗಲಾಡಿಸುವಂತಿದೆ.

ಕನ್ನಡ ಭಾಷಾ ಸಮುದಾಯ ಇಂಗ್ಲಿಷ್ ಕಲಿಯುವುದು ಔಪಚಾರಿಕ ಶಿಕ್ಷಣದ ಭಾಗವಾಗಿ ಮಾತ್ರ. ಆದರೆ ಅಧಿಕಾರದ ಸಂಬಂಧದಲ್ಲಿ ಇಂಗ್ಲಿಷ್‌ಗೆ ಇರುವ ಒತ್ತಾಸೆಗಳಿಂದಾಗಿ ಕನ್ನಡದ ಜೊತೆಗೆ ಅದು ಯಾಜಮಾನ್ಯದ ನೆಲೆಯನ್ನು ಪಡೆದುಕೊಳ್ಳುತ್ತಿದೆ. ಎಷ್ಟೇ ಭಾಷಿಕ ವ್ಯವಹಾರಗಳು ಈ ಸಂಬಂಧವನ್ನು ಹೊಂದಿದ್ದರೂ ಅವು ಜನರ ಅರಿವಿನ ಭಾಗವಾಗುವುದಿಲ್ಲ ಎನ್ನುವ ಕೆವಿಎನ್ ಅವರ ಗ್ರಹಿಕೆ ಕನ್ನಡದ ಮತ್ತೊಂದು ಭರವಸೆಯಾಗಿದೆ. ಇಂಗ್ಲಿಷ್ ಅಧಿಕಾರದ ಸಂಬಂಧದಲ್ಲಿ ಯಾಜಮಾನ್ಯತೆ ಪಡೆದುಕೊಂಡರೂ, ಕನ್ನಡಿಗರು ಪ್ರವಾಹೋಪಾದಿಯಲ್ಲಿ ಇಂಗ್ಲಿಷಿನ ಹಿಂದೆ ಬಿದ್ದಿದ್ದರೂ ಅವರು ಇಂಗ್ಲಿಷ್ ಕಲಿಯುವುದು ಔಪಚಾರಿಕ ಶಿಕ್ಷಣದ ಭಾಗವಾಗಿ ಮಾತ್ರ. ಇಂಗ್ಲಿಷ್ ಎಷ್ಟೇ ಪ್ರಾಮುಖ್ಯ ಪಡೆದರೂ ಅದು ಕನ್ನಡದಂತೆ ಅರಿವಿನ ಭಾಗವಾಗುವುದಿಲ್ಲ ಎಂಬ ಗ್ರಹಿಕೆ ಮುಖ್ಯವಾದದ್ದು. ಏಕೆಂದರೆ ಇಂಗ್ಲಿಷಿನಿಂದ ಕನ್ನಡಕ್ಕೆ ಎದುರಾಗಿರುವ ದೊಡ್ಡ ಆತಂಕವೆಂದರೆ ಅದು ನಮ್ಮ ಸಂಸ್ಕೃತಿಯನ್ನು ಮರೆಸಿ ಬೇರೊಂದು ಸಂಸ್ಕೃತಿಯನ್ನು ನೆಲೆಯೂರಿಸುತ್ತದೆ ಎನ್ನುವುದು. ಇಂಗ್ಲಿಷ್ ಅರಿವಿನ ಭಾಷೆಯಾಗದಿರುವ ಕಾರಣಕ್ಕೆ ಕನ್ನಡಕ್ಕೆ ಈ ಭಯದಿಂದ ಹೊರ ಬರುವುದು ಸಾಧ್ಯವಾಗುತ್ತದೆ. ಮಾತೃಭಾಷೆಯಲ್ಲಿ ಓದಿದವರು ಅದರೊಂದಿಗೆ ತಮ್ಮ ಸಂಸ್ಕೃತಿಯನ್ನೂ ಮೈಗೂಡಿಸಿಕೊಳ್ಳುತ್ತಾರೆ ಮತ್ತು ಕಾಲಾಂತರದಲ್ಲಿ ಅದರ ವಾರಸುದಾರರಾಗುತ್ತಾರೆ ಎನ್ನುವುದು ಸಮಾಜದಲ್ಲಿ ಗಟ್ಟಿಯಾಗಿ ಬೇರುಬಿಟ್ಟ ನಂಬಿಕೆಯಾಗಿದ್ದು, ಈ ಕಾರಣದಿಂದಲೇ ಇಂಗ್ಲಿಷ್ ಮಾಧ್ಯಮ ನಮ್ಮ ಸಂಸ್ಕೃತಿಯನ್ನು ನಾಶ ಮಾಡುತ್ತಿದೆ ಎನ್ನುವ ಆತಂಕವನ್ನು ಸೃಷ್ಟಿಸಿದೆ. ಆದರೆ ಕೆವಿಎನ್ ಅವರ ಚಿಂತನೆ ಇವನ್ನೆಲ್ಲ ಮರುಪರಿಶೀಲಿಸುವಂತೆ ಒತ್ತಾಯಿಸುತ್ತವೆ. ಅವರ ಪ್ರಕಾರ ಕನ್ನಡ ಮಾಧ್ಯಮದಲ್ಲಿ ಓದಿದವರು, ಹಾಗೆ ಓದಿದ್ದರಿಂದಲೇ ಸಂಸ್ಕೃತಿಗೆ ನಿಕಟವಾಗಿರುತ್ತಾರೆ ಮತ್ತು ಅದರ ವಾರಸುದಾರರಾಗಿರುತ್ತಾರೆ ಎಂದು ಸಾಧಿಸುವುದು ಕಷ್ಟ. ಅದಕ್ಕೂ ಪುರಾವೆಗಳಿಲ್ಲ. ಏಕೆಂದರೆ ಇಂಗ್ಲಿಷ್ ಮಾಧ್ಯಮದ ಅವಕಾಶ ಸಿಗದೆ ಕನ್ನಡದಲ್ಲೇ ಕಲಿತ ತಲೆಮಾರೊಂದು ನಮ್ಮಿಡನೆ ಇದೆ. ಅದರಲ್ಲಿಯೂ ಸಾಂಸ್ಕೃತಿಕ ನೆಲೆಯ ಬಂಧ ಬಲವಾಗಿದೆಯೆಂದು ಹೇಳಲು ಸಾಕಷ್ಟು ಕಾರಣಗಳಿಲ್ಲ. ಆದ್ದರಿಂದ ಶಿಕ್ಷಣ ಮಾಧ್ಯಮಕ್ಕೂ ಸಾಂಸ್ಕೃತಿಕ ಪರಂಪರೆ ಮುಂದುವರಿಕೆಗೂ ನೇರವಾದ ಸಂಬಂಧ ಇದ್ದಿರಲಾರದು. ಸಾಮಾಜಿಕವಾದ ಬೇರೆ ಯಾವುದೋ ಕಾರಣಗಳು ಈ ನೆಲೆಯಲ್ಲಿ ಹೆಚ್ಚು ತೀವ್ರವಾಗಿ, ಪ್ರಭಾವಶಾಲಿಯಾಗಿ ಇರುವಂತೆ ತೋರುತ್ತದೆ. ಮಕ್ಕಳ ಕಲಿಕೆಯ ಜೈವಿಕವಾಗಿಯೇ ಇರುವ ಸಾಮರ್ಥ್ಯದ ಕುರಿತು ವೈಜ್ಞಾನಿಕ ಹಿನ್ನೆಲೆಯಲ್ಲಿನ ಕೆವಿಎನ್ ಅವರ ಗ್ರಹಿಕೆಗಳು ಪ್ರಾಥಮಿಕ ಶಿಕ್ಷಣ ಯಾವ ಭಾಷಾ ಮಾಧ್ಯಮದಲ್ಲಿ ಇರಬೇಕೆಂಬ ಚರ್ಚೆಯ ತಳಹದಿಯನ್ನು ಅಲ್ಲಾಡಿಸುವಂತಿದ್ದು ಮರುಚಿಂತನೆಗೆ ಒತ್ತಾಯಿಸುತ್ತವೆ. ಇವು ಕನ್ನಡ ಅಸ್ಮಿತೆಯ ಸ್ವರೂಪವನ್ನು ಬದಲಿಸುವಷ್ಟು ಶಕ್ತವಾಗಿವೆ.

ಇಂಗ್ಲಿಷ್ ಮಾರುಕಟ್ಟೆಯ ಭಾಷೆಯಾಗಿರುವುದು ಕನ್ನಡಕ್ಕೆ ಹೆಚ್ಚಿನ ಆತಂಕವನ್ನು ತಂದಿರುವುದಾಗಿದೆ. ಪ್ರಧಾನವಾಗಿ ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿರುವ ಬಹುರಾಷ್ಟ್ರೀಯ ಕಂಪೆನಿಗಳ ಸಕಲ ವಹಿವಾಟುಗಳೂ ಇಂಗ್ಲಿಷಿನಲ್ಲಿ ನಡೆಯುತ್ತ, ಇವೆಲ್ಲ ಇಂಗ್ಲಿಷಿನ ಪ್ರವರ್ತಕರಂತೆ ಕಾರ್ಯನಿರ್ವಹಿಸುತ್ತಿವೆ. ಇವು ತಮ್ಮ ವ್ಯವಹಾರದ ಬೆಳವಿಗೆ ದೇಶೀ ಭಾಷೆ ತೊಡಕೆನಿಸಿದರೆ ಅದನ್ನು ಬಿಟ್ಟುಬಿಡಬೇಕು ಎಂದು ನಿರಾಳವಾಗಿ ನುಡಿಯುತ್ತವೆ. ಅವು ಇಂಗ್ಲಿಷನ್ನು ಅಪ್ಪಿಕೊಳ್ಳುತ್ತಿರುವುದು, ಬಿ.ಎಂ.ಶ್ರೀ ಅಥವಾ ಕುವೆಂಪು ಅವರಂತೆ ಜ್ಞಾನಕ್ಕಲ್ಲ. ಸಾಹಿತ್ಯಕ ಪ್ರೇರಣೆಗೂ ಅಲ್ಲ. ಬದಲಿಗೆ ತಮ್ಮ ಸಾಮ್ರಾಜ್ಯದ ವಿಸ್ತರಣೆಗೆ. ಅದೂ ಇಂಗ್ಲಿಷಿನ ಅಪ್ಪುವಿಕೆ ಕನ್ನಡವನ್ನು ಇಟ್ಟುಕೊಂಡಲ್ಲ; ಕನ್ನಡವನ್ನು ಬಿಟ್ಟುಕೊಟ್ಟು. ಎಲ್ಲವನ್ನೂ ಲಾಭ-ನಷ್ಟಗಳ ಕಣ್ಣಲ್ಲೇ ನೋಡುವ ಅವಕ್ಕೆ ತಮ್ಮ ಈ ಭಾಷಾನೀತಿಯಿಂದ ನಾಡಿನ ವಿಶಾಲ ಸಮುದಾಯಗಳ ಮೇಲೆ ಸಂಭವಿಸುವ ಪರಿಣಾಮದತ್ತ ಖಬರಿಲ್ಲ ಎಂಬ ಅಸಮಾಧಾನ, ಆಕ್ರೋಶಗಳಿಗೂ ಕಾರಣವಾಗಿವೆ. ಅಲ್ಲದೆ ಕರ್ನಾಟಕದ ಪ್ರಸಿದ್ಧ ಕಂಪ್ಯೂಟರ್ ಉದ್ಯಮಿಗಳು ಏನು ಮಾಡಿದ್ದಾರೆ? ಕನ್ನಡದ ಬದಲು ಇಂಗ್ಲಿಷ್ ಮಾಧ್ಯಮದ ಪ್ರಚಾರಕರಾಗಿದ್ದಾರೆ. ಇಂಗ್ಲಿಷ್ ಭಾಷೆಯನ್ನು ಕನ್ನಡ ಮಾಧ್ಯಮದೊಂದಿಗೆ ಚೆನ್ನಾಗಿ ಕಲಿಯಿರಿ ಎಂದು ಹೇಳುತ್ತಿಲ್ಲ; ಇಂಗ್ಲಿಷ್ ಮಾಧ್ಯಮದಲ್ಲೇ ಕಲಿಯಿರಿ ಎಂದು ಒತ್ತಾಯಿಸುತ್ತಿದ್ದಾರೆ. ಇದರಿಂದ ಕನ್ನಡ ಭಾಷೆಗೆ ಆಪತ್ತು ಬಂದೊದಗಿದೆ ಎನ್ನುವ ಸಿಟ್ಟು ಮಡುಗಟ್ಟಿದೆ.

ಬಂಡವಾಳಶಾಹಿಗಳಿಗೆ ಲಾಭಗಳಿಕೆಯ ಉದ್ದೇಶವಿರುವುದು ಮೇಲ್ನೊಟಕ್ಕೆ ತಿಳಿಯುವಂತಹದು. ಅವುಗಳಿಗೆ ಸಮುದಾಯ ಪ್ರಜ್ಞೆಯಾಗಲೀ, ದೇಶೀ ಭಾಷೆಗಳ ಕುರಿತ ಕಾಳಜಿಯಾಗಲಿ ಇಲ್ಲ. ಹಾಗೆಂದು ಅವುಗಳಿಗೆ ಇಂಗ್ಲಿಷ್‌ನ ಕುರಿತು ಕುರುಡು ವ್ಯಾಮೋಹವೇನೂ ಇಲ್ಲ. ಬಂಡವಾಳಶಾಹಿಗಳಿಗೆ ಪೂರಕವಾಗಿ ಕನ್ನಡ ಭಾಷಿಕರು ಆಧುನೀಕರಣದ ನೆಲೆಯಲ್ಲಿ ಇಂಗ್ಲಿಷಿಗೆ ಮುಖಾಮುಖಿಯಾಗುತ್ತಾರೆ. ಅಂದರೆ ಕನ್ನಡದ ದೊಡ್ಡ ಸಮುದಾಯ ಇಂಗ್ಲಿಷ್ ಜೊತೆ ಗಟ್ಟಿಯಾದ ಸಂಬಂಧವನ್ನು ಬೆಳೆಸಿಕೊಳ್ಳುತ್ತಿದೆ. ಇದು ಮುಖ್ಯವಾಗಿ ಆರ್ಥಿಕ ಮತ್ತು ಆಧುನೀಕರಣದ ಕಾರಣಕ್ಕಾಗಿ. ಇಂಗ್ಲಿಷ್ ಭಾಷೆ ತನ್ನ ಅಧಿಪತ್ಯವನ್ನು ಏಕಪಕ್ಷೀಯವಾಗಿ ಸಾಧಿಸುತ್ತದೆ ಎನ್ನುವ ಮಾತು ಅಷ್ಟು ಸರಳವಲ್ಲ. ಏಕೆಂದರೆ ಮಾರುಕಟ್ಟೆಯ ಶಕ್ತಿಗಳು ಇಂಗ್ಲಿಷನ್ನು ಅಸ್ತ್ರವಾಗಿ ಬಳಸುತ್ತಿವೆ ಎಂಬುದು ನಿಜ. ಆದರೆ ಕೊಳ್ಳುವ ಜನರನ್ನು ತನ್ನ ತೆಕ್ಕೆಗೆ ತೆಗೆದು ಕೊಳ್ಳುವುದು ಮಾರುಕಟ್ಟೆಯ ಶಕ್ತಿಗಳ ಮುಖ್ಯ ಗುರಿಯೇ ಹೊರತು ಇಂಗ್ಲಿಷನ್ನು ಬೆಳೆಸುವುದಲ್ಲ. ಒಂದು ವೇಳೆ ಕೊಳ್ಳುವವರನ್ನು ಓಲೈಸಲು ಅವರ ಭಾಷೆಯನ್ನು ಬಳಸಬೇಕು ಎಂಬ ಪ್ರಸಂಗ ಒದಗಿದರೆ ಆಗ ಇಂಗ್ಲಿಷಿನ ಜೊತೆಗೆ ಈ ಭಾಷೆಯನ್ನು ಬಳಸಲು ಹಿಂಜರಿಯುವುದಿಲ್ಲ ಎಂದು ಕೆವಿಎನ್ ಅವರು ವಿಶ್ಲೇಷಿಸುತ್ತಾರೆ. ಇದಕ್ಕೆ ನಿದರ್ಶನವಾಗಿ ಏಕಪಕ್ಷೀಯವಾಗಿ ಇಂಗ್ಲಿಷನ್ನು ಹೇರುತ್ತಿದ್ದ ಮಾಹಿತಿ ತಂತ್ರಜ್ಞಾನ ವಲಯದ ದೈತ್ಯ ಕಂಪೆನಿ ಮೈಕ್ರೋಸಾಫ್ಟ್ ಈಗ ಕನ್ನಡವೂ ಸೇರಿದಂತೆ ಜಗತ್ತಿನ ನೂರಾರು ಭಾಷೆಗಳನ್ನು ತನ್ನ ಕಾರ್ಯವಾಹಿಯಲ್ಲಿ ಭಾಗಿಯಾಗುವ ಅವಕಾಶ ಕಲ್ಪಿಸಿರುವುದನ್ನು ಉದಾಹರಿಸುತ್ತಾರೆ. ಕೆವಿಎನ್ ಅವರ ಈ ಗ್ರಹಿಕೆಯನ್ನು ಸಮರ್ಥಿಸುವಂತೆ ಇದುವರೆಗೆ ಇಂಗ್ಲಿಷಿನಲ್ಲಷ್ಟೇ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ವೀಕ್ಷಕ ವಿವರಣೆ ನೀಡುತ್ತಿದ್ದ ಸ್ಟಾರ್ ಸ್ಪೋರ್ಟ್ಸ್ ರಾಷ್ಟ್ರೀಯ ಟಿವಿ ಚಾನಲ್ ಈಗ ತಮಿಳು ಹಾಗೂ ಕನ್ನಡದಲ್ಲಿಯೂ ವೀಕ್ಷಕ ವಿವರಣೆ ನೀಡಲಾರಂಭಿಸಿದೆ. ಬಹುರಾಷ್ಟ್ರೀಯ ಕಂಪೆನಿಗಳು ಅಗತ್ಯಬಿದ್ದರೆ ದೇಶಿ ಭಾಷೆಗಳನ್ನು ಬಳಸುತ್ತವೆ ಎನ್ನುವುದು ನಿಜ. ಆದರೆ ಅವು ಬಳಸುವ ದೇಶಿ ಭಾಷೆಯ ಸ್ವರೂಪ ಭಾಷೆಯನ್ನು ವಿರೂಪಗೊಳಿಸುವ ಅಪಾಯ ಗಳ ಬಗ್ಗೆಯೂ ಕೆವಿಎನ್ ಅವರ ಗಮನವಿದೆ. ಬಹುರಾಷ್ಟ್ರೀಯ ಕಂಪೆನಿಗಳು ಸೃಷ್ಟಿಸುತ್ತಿರುವ ಉಪಭೋಗಿ ಸಂಸ್ಕೃತಿಗೆ ಕರ್ನಾಟಕದ ಜನಸಮುದಾಯದ ಒಂದು ದೊಡ್ಡ ಭಾಗ ಗುರಿಯಾಗಿದೆ. ಅಂದರೆ ಹೊಸ ಸಾಮಗ್ರಿಗಳನ್ನು ಕೊಂಡು ಬಳಸುವ ಸಾಮರ್ಥ್ಯ ಈ ಜನವರ್ಗಕ್ಕೆ ಇದೆ. ಜಾಗತಿಕ ನೆಲೆಯಿಂದ ಗಮನಿಸಿದರೆ ಸುಮಾರು ಮೂರೂವರೆ ಕೋಟಿ ಜನರ ಈ ಗುಂಪು ತುಂಬಾ ಗಣನೀಯವಾದದ್ದು. ಅವರ ಆಸಕ್ತಿಯನ್ನು ಕಾಯ್ದುಕೊಳ್ಳಲು ಮೊದಮೊದಲು ಇಂಗ್ಲಿಷ್ ಬಳಸುತ್ತಿದ್ದ ಈ ಮಾರಾಟಗಾರರು ಗ್ರಾಹಕರು ಬಳಸುವ ದೇಶಿ ಭಾಷೆಗಳ ಕಡೆ ಒಲವು ತೋರಿಸಿದ್ದಾರೆ. ಅವರು ರೂಪಿಸುತ್ತಿರುವ ಕನ್ನಡವು ಕೂಡಾ ಹೀಗೆ ಅವರ ಅಪೇಕ್ಷೆಯ ಕನ್ನಡ. ನಮ್ಮ ಅಗತ್ಯಕ್ಕೆ ನಾವು ರೂಪಿಸಿಕೊಂಡಿಲ್ಲ. ತಂತ್ರಜ್ಞಾನದ ಜಾಲಕ್ಕೆ ಸಿಲುಕಿದ್ದಾಗ ಈ ಬಗೆಯ ಭಾಷಾ ಪ್ರಯೋಗಗಳನ್ನು ಒಪ್ಪಿಕೊಳ್ಳುವುದು ಅನಿವಾರ್ಯವಾಗಿ ಬಿಡುತ್ತದೆ. ಮಾರುಕಟ್ಟೆ ಸಂಸ್ಕೃತಿಯಲ್ಲಿ ಇಂತಹ ತುರ್ತುಗಳು ಸೃಷ್ಟಿಸುವ ಪರಿಹಾರಗಳು ನಮ್ಮ ಕೊರಳಿಗೆ ಗಂಟು ಬೀಳುತ್ತವೆ ಎಂದು ವಿಶ್ಲೇಷಿಸುತ್ತಾರೆ.

ಕೆವಿಎನ್ ಅವರು ಮಂಡಿಸುತ್ತಿರುವ ಮಾರುಕಟ್ಟೆ ಶಕ್ತಿಗಳ ಭಾಷೆಯೊಂದಿಗಿನ ಅನುಕೂಲಸಿಂಧು ಚಲನಶೀಲ ಸಂಬಂಧಗಳ ಕುರಿತ ಗ್ರಹಿಕೆಗಳು, ಸಾಮ್ರಾಜ್ಯಶಾಹಿಗಳು ಮತ್ತು ದೇಶೀಯ ಆಳುವ ವರ್ಗಗಳು ಭಾಷೆಯನ್ನು ರಾಜಕಾರಣದ ಅಸ್ತ್ರವನ್ನಾಗಿ ಬಳಸುತ್ತಿವೆ ಎನ್ನುವ ಕನ್ನಡ ವಿಚಾರ ಸಾಹಿತ್ಯದಲ್ಲಿನ ಗ್ರಹಿಕೆಯಾಚೆಗಿನ ಆಯಾಮಗಳತ್ತ ಬೆಳಕು ಬೀರುತ್ತಿವೆ. ಕಳೆದ 50 ವರ್ಷಗಳಲ್ಲಿ ಕನ್ನಡ ಇಂಗ್ಲಿಷ್ ಜೊತೆಗಿನ ತನ್ನ ಸಂಬಂಧವನ್ನು ಮತ್ತೆ ಮತ್ತೆ ಮರುವ್ಯಾಖ್ಯಾನಗೊಳ್ಳುತ್ತ ಬಂದಿದೆ. ಏಕೀಕರಣದ ಮೊದಲ ಕೆಲವು ವರ್ಷಗಳಲ್ಲಿ ಇಂಗ್ಲಿಷನ್ನು ನಾವು ಎಚ್ಚರಿಕೆಯಿಂದ ಬಳಸಿಕೊಳ್ಳಬೇಕಾದ ಸಾಧ್ಯತೆ ಎಂದು ಭಾವಿಸಿದ್ದೆವು. ಅದು ಸ್ವಯಂಚಾಲಿತ ಸಾಮರ್ಥ್ಯವುಳ್ಳ ಭಾಷೆ ಎಂದು ನಾವು ಒಪ್ಪಲಿಲ್ಲ. ಇಂಗ್ಲಿಷನ್ನು ಗೆಲ್ಲಬಹುದು ಎಂಬ ಹುಮ್ಮಸ್ಸಿನಲ್ಲಿ ನಾವು ಮುಂದಾದೆವು ಎಂದು ತೋರುತ್ತದೆ. ಆನಂತರದ ದಿನಮಾನಗಳು ಆ ಇಂಗ್ಲಿಷಿಗೆ ಇರುವ ಸ್ವಯಂಚಾಲಿತ ಸಾಮರ್ಥ್ಯದ ಅರಿವನ್ನು ನಮಗೆ ಮಾಡಿಕೊಟ್ಟಿದೆ. ಇಲ್ಲಿ ಇಂಗ್ಲಿಷಿಗೆ ದಕ್ಕಿದ ಈ ಸ್ವಯಂಚಾಲಿತ ಸಾಮರ್ಥ್ಯಕ್ಕೆ ಕಾರಣವಾಗಿರುವ ಇಂಧನ ಮೂಲಗಳು ಈಗಾಗಲೇ ಗುರುತಿಸಲಾಗಿರುವಂತೆ ಈ ಭಾಷೆ ಮೂಲಕ ಸಮಾಜದ ಕೆಲವರ್ಗಗಳಿಗೆ ಸಿಗುತ್ತಿರುವ ಆರ್ಥಿಕ ಭದ್ರತೆ, ಪ್ರತಿಷ್ಠೆ, ಆಧುನಿಕರಣಗೊಳ್ಳುವ ಬಯಕೆಗಳೇ ಆಗಿವೆ ಕೆವಿಎನ್ ಅವರ ಈ ಗ್ರಹಿಕೆಯೂ ಅಂತಹದ್ದೊಂದು ಆಯಾಮ. ಬಹುಷಃ ಇದುವೇ ಕೆವಿಎನ್ ಅವರು ಭಾಷೆಯ ರಾಜಕಾರಣದ ಹಿಂದಿರುವ ವಂಚನೆಗಳನ್ನು, ಅಂದರೆ ಪ್ರಭುತ್ವಗಳು ಜನರಿಗೆ ವಂಚಿಸುತ್ತಿರುವುದನ್ನು ತಮ್ಮ ಒಟ್ಟು ಅಧ್ಯಯನದ ಸಂದರ್ಭದಲ್ಲಿ ನವಿರುಗೊಳಿಸಿ ಹೇಳುವುದೇಕೆ? ಎಂಬ ಪ್ರಶ್ನೆಗೆ ಉತ್ತರವನ್ನೂ ಅಡಗಿಸಿಕೊಂಡಿದೆ ಎನಿಸುತ್ತದೆ.

ಪ್ರಭುತ್ವದ ಭಾಷೆಗಳಾದ ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳು ವರ್ತಿಸುವ ಭಿನ್ನ ಬಗೆಗಳನ್ನು ಕೆವಿಎನ್ ಅವರು ವರ್ಗನೆಲೆಯ ಹಿನ್ನೆಲೆಯಲ್ಲಿ ನೋಡುತ್ತ ನೀಡುವ ಒಳನೋಟಗಳು ಭಾಷೆ ಮತ್ತು ಸಮಾಜದ ಸಂಬಂಧವನ್ನು ಅರ್ಥ ಮಾಡಿಕೊಳ್ಳಲು ಬೆಳಕಿಂಡಿಯಾಗಿವೆ. ಬದಲಾದ ಚಾರಿತ್ರಿಕ ಸಂದರ್ಭದಲ್ಲಿ ಸಂಸ್ಕೃತಕ್ಕೆ ಸೇರಿದ ಪಾವಿತ್ರದ ನಂಟು ಇಂಗ್ಲಿಷಿಗೆ ಇಲ್ಲ. ಬದಲಿಗೆ ಅದು ಆಧುನಿಕತೆಯ ಚಹರೆಯನ್ನು ಭಾಷಾ ಬಳಕೆದಾರರಿಗೆ ದೊರಕಿಸಿಕೊಡುತ್ತದೆ ಎಂದವರು ವಿಶ್ಲೇಷಿಸುತ್ತಾರೆ. ಇಂಗ್ಲಿಷ್ ಭಾಷೆ ಕನ್ನಡದ ಸಂದರ್ಭದಲ್ಲಿ ಮೊದಮೊದಲು ಕೇವಲ ಆಧುನಿಕತೆಯ ಮತ್ತು ತಿಳುವಳಿಕೆಯ ಆಕರ ಎಂಬ ನೆಲೆಯನ್ನು ಪಡೆದಿತ್ತು. ಆಧುನಿಕತೆಯ ಸೂಚಕವಾಗಿ ಈ ಭಾಷೆಯನ್ನು ಪರಿಶೀಲಿಸಿದಾಗ ಕನ್ನಡ ಸಂಸ್ಕೃತಿಗೆ ಅಘಾತಕಾರಿಯಾದ ಅಂಶಗಳು ಅಷ್ಟು ಕಂಡು ಬರಲಿಲ್ಲ. ಆದರೆ ತಿಳಿವಳಿಕೆಯ ಆಕರವಾಗುತ್ತಲೇ ಭಾಷೆ ಯಜಮಾನಿಕೆಯ ನೆಲೆಗೂ ತಲುಪುವುದು ಸಾಧ್ಯ ಎಂಬ ಅರಿವು ಏಳನೇ ದಶಕದಿಂದ ಈಚೆಗೆ ಕನ್ನಡ ಜನಮನದಲ್ಲಿ ನೆಲೆಯೂರಲು ಮೊದಲಾಯಿತು. ವಿದ್ಯಾಭ್ಯಾಸ ಮತ್ತು ಇಂಗ್ಲಿಷ್ ಭಾಷೆಯನ್ನು ಸಮಾನವಾಗಿ ನೋಡುತ್ತ ಇದರಿಂದ ನಮ್ಮ ಪಾರಂಪರಿಕ ಮೌಲ್ಯಗಳಿಗೆ ಧಕ್ಕೆಯಾಗುತ್ತವೆ ಎಂದು ಸಮಾಜ ನೋಡಲಾರಂಭಿಸಿದ್ದನ್ನು ಈ ಕಾಲಘಟ್ಟದಲ್ಲಿ ಬಂದ ಜನಪ್ರಿಯ ಸಿನೆಮಾಗಳಲ್ಲಿ ಇಂಗ್ಲಿಷ್ ಕಲಿತ ಮಕ್ಕಳು ತಂದೆ ತಾಯಿಗಳನ್ನೂ, ಕೌಟುಂಬಿಕ ಮೌಲ್ಯಗಳನ್ನೂ ತಿರಸ್ಕರಿಸುವ ಉದಾಹರಣೆಯೊಂದಿಗೆ ಕೆವಿಎನ್ ಅವರು ಮಂಡಿಸುವುದು ಪರಿಣಾಮಕಾರಿಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಡಿಯಿಟ್ಟು ಅರ್ಧ ಶತಮಾನ ದಾಟಿದ್ದರೂ ದೇಶಿ ಭಾಷೆಗಳು ರಾಜಪ್ರಭುತ್ವ ಮತ್ತು ಬ್ರಿಟಿಷ್ ಆಡಳಿತದಲ್ಲಿತ್ತೆಂದು ಚರಿತ್ರೆ ಕಟ್ಟಿಕೊಟ್ಟ ಹುಸಿವೈಭವವನ್ನು ನೆನೆಸಿಕೊಳ್ಳುತ್ತ ವರ್ತಮಾನವನ್ನು ಹೀಗೆಳೆಯುತ್ತಿರುವುದು ವಿಪರ್ಯಾಸವಾಗಿದೆ. ಖಚಿತ ಹಿತಾಸಕ್ತಿಗಳನ್ನು ಹೊಂದಿದ ಮೂಲಭೂತವಾದಿ ನೆಲೆಯು ಆಳಿಹೋದ ರಾಜಸತ್ತೆಯನ್ನು ವೈಭವೀಕರಿಸುವುದು ಅಚ್ಚರಿಯ ಸಂಗತಿಯಲ್ಲ. ಆದರೆ ಜನಸಮುದಾಯದ ಎಲ್ಲ ವರ್ಗಗಳಲ್ಲಿ ಇದೊಂದು ಬಗೆಯ ಸಾರ್ವತ್ರಿಕ ಕಾಮನ್ ಸೆನ್ಸ್ ಆಗಿರುವುದು ಆತಂಕಕಾರಿಯಾದ ಸಂಗತಿಯಾಗಿದೆ.

ಸಾಮಾನ್ಯವಾಗಿ ಬ್ರಿಟಿಷರ ಆಡಳಿತದಲ್ಲಿ ಕನ್ನಡಕ್ಕೆ ವಿಶೇಷ ಮಾನ್ಯತೆಯಿತ್ತು ಎಂಬ ಅಭಿಪ್ರಾಯ ಚಾಲ್ತಿಯಲ್ಲಿದೆ. ಕೆಲವು ಬ್ರಿಟಿಷ್ ಅಧಿಕಾರಿಗಳು ಕನ್ನಡದ ಬೆಳವಣಿಗೆಗೆ ಮಾಡಿದ ಪ್ರಯತ್ನಗಳನ್ನು ಉಲ್ಲೇಖಿಸುತ್ತ ಇಡೀ ಬ್ರಿಟಿಷ್ ಪ್ರಭುತ್ವವೇ ಕನ್ನಡದ ಪರವಾಗಿತ್ತು ಎನ್ನುವ ಭಾವನೆ ಮೂಡುವ ರೀತಿಯಲ್ಲಿ ಕೃತಿಗಳೂ ಹೊರಬಂದಿವೆ. ಆದರೆ ಇದು ಬ್ರಿಟಿಷರ ಆಡಳಿತದಲ್ಲಿ ಈ ಕಿರುವಲಯದಲ್ಲಿ ಕಂಡುಬರುವ ಕನ್ನಡದ ಬಳಕೆಯನ್ನು ಗಮನಿಸಿ ಇಡೀ ಆಡಳಿತದಲ್ಲೇ ಕನ್ನಡಕ್ಕೆ ಮಾನ್ಯತೆ ಇತ್ತು ಎಂದು ಬಿಂಬಿಸುವುದು ಸರಿಯಾದ ವ್ಯಾಖ್ಯಾನ ವಾಗಲಾರದು ಎಂದು ಕೆವಿಎನ್ ಅವರು ಅಭಿಪ್ರಾಯ ಪಡುತ್ತಾರೆ. ಬ್ರಿಟಿಷ್ ಅಥವಾ ರಾಜಪ್ರಭುತ್ವದ ಆಡಳಿತದ ತಾತ್ವಿಕತೆಯೇ ಇಂದಿನ ಪ್ರಜಾಪ್ರಭುತ್ವದ ತಾತ್ವಿಕತೆಗಿಂತ ಬೇರೆಯಾದುದು. ಇಲ್ಲಿ ಜನರು ತಮ್ಮ ದೈನಂದಿನ ಬದುಕಿನಲ್ಲಿ ಆಡಳಿತಕ್ಕೆ ಯಾವ ಸಂಪರ್ಕವನ್ನು ಇರಿಸಿಕೊಳ್ಳದೇ ಕೇವಲ ತೆರಿಗೆದಾರನಾಗಿ ಅಥವಾ ಸರಕಾರಕ್ಕೆ ಬೇಕಾದ ಸೇವಾವಲಯದಲ್ಲಿ ಸೇವೆಗಳನ್ನು ಸಲ್ಲಿಸುವವರಾಗಿ ಇರುತ್ತಿದ್ದರು. ಆಡಳಿತದ ಸಾರ್ವಭೌಮತ್ವವೆಲ್ಲ ಜನರ ಪ್ರಜ್ಞೆಯ ಆಚೆಗಿನ ಮಾತಾಗಿತ್ತು. ಹೀಗಿರುವಾಗ ಆಗಿನ ಆಡಳಿತದಲ್ಲಿ ಕನ್ನಡಕ್ಕೆ ಸಾರ್ವಭೌಮ ಸ್ಥಾನ ದೊರಕುವುದು ಖಂಡಿತ ಸಾಧ್ಯವಿರಲಿಲ್ಲ ಎನ್ನುವ ಅವರ ನಿಲುವು ತರ್ಕಬದ್ಧವಾಗಿದೆ.

ಸಾಹಿತ್ಯ ಕ್ಷೇತ್ರದಲ್ಲಿಯೂ ಆಳರಸರನ್ನು ವೈಭವೀಕರಿಸುವುದನ್ನು ಕಾಣಬಹುದು. ಕಡು ಪ್ರಜಾಪ್ರಭುತ್ವವಾದಿಗಳಾದ ಸಾಹಿತಿಗಳಲ್ಲಿ ಯೂ ಇದನ್ನು ಕಾಣಬಹುದಾಗಿದೆ. ಕುವೆಂಪು ಅವರು ತಮ್ಮ ನಾಡಗೀತೆಯಲ್ಲಿ, ಸುಬ್ಬಣ್ಣ ಅವರು ತಮ್ಮ ಚಿಂತನಾ ಸಾಹಿತ್ಯದಲ್ಲಿ ಕರ್ನಾಟಕವನ್ನು ಆಳಿದ ಅರಸರನ್ನು ಅವಿಮರ್ಶತ್ಮಾಕವಾಗಿ ವರ್ಣಿಸುತ್ತಾರೆ. ಇದು ಕೆ.ವಿ ನಾರಾಯಣ ಅವರನ್ನು ಚಿಂತನೆಗೆ ಹಚ್ಚಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವ ಈ ದಿನಗಳಲ್ಲಿ ಸಾಮಂತಶಾಹಿಯ ನೆನಪುಗಳನ್ನು ನಮ್ಮ ಪರಂಪರೆಯ ಹೆಮ್ಮೆ ಎಂದು ಹಾಡುವ ಗೀತೆ ಸಹಜವಾಗಿಯೇ ವಿವಾದಗಳಿಗೆ ಅನುವು ಮಾಡಿಕೊಡುತ್ತದೆ. ಆದರೆ ನಮ್ಮ ಸದ್ಯದ ಸಾಮಾಜಿಕ ಚಿಂತನೆಗಳು ಚರಿತ್ರೆಯ ಬಗೆಗೆ ಇಬ್ಬಂದಿತನವನ್ನು ಪ್ರದರ್ಶಿಸುತ್ತವೆ. ಒಂದೆಡೆ ಆ ಚರಿತ್ರೆಯ ಜನವಿರೋಧಿ ನೆನಪುಗಳಿಂದ ಹೊರಬರಲು ಇಂದಿನ ತಲೆಮಾರು ಯತ್ನಿಸುತ್ತಿರುವಾಗಲೇ ಆ ನೆನಪುಗಳನ್ನು ನಮ್ಮ ಸಾಂಸ್ಕೃತಿಕ ಆಸ್ತಿ ಎಂಬಂತೆ ಬಿಂಬಿಸಲಾಗುತ್ತದೆ. ಕನ್ನಡದ ಪ್ರಮುಖ ಚಿಂತಕರಲ್ಲಿನ ಈ ವೈರುಧ್ಯ ಮೂಲಭೂತವಾದಿ ನೆಲೆಯ ಹಿತಾಸಕ್ತಿಗಳಿಗೆ ಪೂರಕವಾಗುವುದು ಇಲ್ಲಿನ ಅಪಾಯವಾಗಿದೆ. ಇದುವೇ ಬಹುಶಃ ಕೆವಿಎನ್ ಅವರ ಮೇಲ್ಕಂಡ ಗ್ರಹಿಕೆಯ ಒಳದನಿಯಾಗಿರುವಂತಿದೆ. ಇತರ ಭಾಷೆಗಳ ಕುರಿತ ಕೆವಿಎನ್ ಅವರ ಚಿಂತನೆಗಳಲ್ಲಿಯೂ ಪ್ರಜಾಪ್ರಭುತ್ವೀಯ ನಿಲುವನ್ನು ಕಾಣಬಹುದು. ಕರ್ನಾಟಕದಲ್ಲಿ ತುಳು, ಕೊಡವ, ಉರ್ದು, ಲಂಬಾಣಿಯಂತಹ ಇತರ ಭಾಷೆಗಳನ್ನಾಡುವ ಜನರು ಸಾಕಷ್ಟಿದ್ದಾರೆ. ಕನ್ನಡದಂತೆಯೇ ಈ ಭಾಷೆಗಳು ಸಹಜವಾಗಿಯೇ ತಮ್ಮ ಅಸ್ಮಿತೆಯ ರಕ್ಷಣೆಗಾಗಿ ಹೋರಾಟಗಳನ್ನು ಹಮ್ಮಿಕೊಳ್ಳುತ್ತಿವೆ. ಇತರ ಭಾಷೆಗಳಲ್ಲಿ ತಲೆ ಎತ್ತುತ್ತಿರುವ ಇಂತಹ ಅಸ್ಮಿತೆಯ ಹೋರಾಟವನ್ನು ಕನ್ನಡ ವಿರೋಧಿ ನೆಲೆಯಲ್ಲಿ ಪರಿಭಾವಿಸುವ ಚಿಂತನೆಗಳು ಕಾಣತೊಡಗಿರುವುದರ ಕುರಿತು ಹೀಗೆ ಭಾವಿಸಲು ಕಾರಣಗಳಿಲ್ಲ ಎನ್ನುವುದರ ಜೊತೆಗೆ ಕನ್ನಡಕ್ಕೆ ಅವುಗಳೊಡನೆ ಯಜಮಾನ್ಯದ ಸಂಬಂಧವನ್ನು ಕಲ್ಪಿಸುವುದು ಸೂಕ್ತವಾಗದು ಎಂದೂ ಎಚ್ಚರಿಸುತ್ತಾರೆ. ಗೋಕಾಕ್ ಚಳವಳಿ ಕನ್ನಡ ಭಾಷೆಯ ಉಳಿವಿಗೆ ನಡೆದ ಚಳವಳಿಯಾದರೂ ಅದು ಕನ್ನಡ ಸಮಾಜದ ಒಳಗಿನ ತರತಮದ ನೆಲೆಗಳನ್ನು ಜಾಹೀರುಗೊಳಿಸಿತು. ಕನ್ನಡದ ಮುಸುಕಿನಲ್ಲಿ ಸಂಸ್ಕೃತದ ಪರವಾದ ನಿಲುವನ್ನೂ ಉರ್ದು ವಿರೋಧವಾಗಿ ಮತೀಯ ನಿಲುವನ್ನೂ ಅದು ಜಾಹೀರುಗೊಳಿಸಿತು. ಅನಂತ ಮೂರ್ತಿ ಅವರು ಈ ಹಿನ್ನೆಲೆಯಲ್ಲಿ ಗೋಕಾಕ್ ವರದಿಯನ್ನು ವಿಮರ್ಶಿಸಿ ಟೀಕಿಸಿದ್ದು ಗಮನಾರ್ಹ. ಗೋಕಾಕ್ ವರದಿಗೆ ವ್ಯಕ್ತವಾದ ಪ್ರತಿಕ್ರಿಯೆಗಳನ್ನು ವರ್ಗನೆಲೆಯಲ್ಲಿ ಕೆವಿಎನ್ ಅವರು ಅತ್ಯಂತ ಸೂಕ್ಷ್ಮವಾಗಿ ವಿಶ್ಲೇಷಿಸುತ್ತಾರೆ. ಕನ್ನಡ ಭಾಷೆಯ ಹಿತಚಿಂತನೆಯ ನೇಪಥ್ಯದಲ್ಲಿ ಮೂಲಭೂತವಾದಿ ನೆಲೆ ಹೇಗೆ ತನ್ನ ಹಿತಸಾಧನೆಗಾಗಿ ಪ್ರಯತ್ನಿಸುತ್ತಿರುತ್ತದೆ ಎನ್ನುವುದು ಈ ವಿಶ್ಲೇಷಣೆಯಲ್ಲಿ ಅನಾವರಣವಾಗುತ್ತದೆ. ಎಂಟನೆಯ ತರಗತಿಯ ಆನಂತರ ವಿದ್ಯಾರ್ಥಿಗಳು ಕನ್ನಡದ ಬದಲು ಸಂಸ್ಕೃತವನ್ನು ಪ್ರಥಮ ಭಾಷೆಯನ್ನಾಗಿ ಆಯ್ಕೆ ಮಾಡಿಕೊಂಡು ಅಭ್ಯಾಸ ಮಾಡುತ್ತಿದ್ದುದರಿಂದ ಕನ್ನಡಕ್ಕೆ ಸಿಗಬೇಕಾದ ಮನ್ನಣೆ ಸಿಗುತ್ತಿಲ್ಲ ಎಂಬ ಆಕ್ಷೇಪಣೆಯ ಹಿನ್ನೆಲೆಯಲ್ಲಿ ಸಂಸ್ಕೃತವನ್ನು ಮೊದಲ ಭಾಷೆಯ ಸ್ಥಾನದಿಂದ ತೆಗೆದು ಆ ಜಾಗದಲ್ಲಿ ಈಗ ಜನ ಬಳಸುತ್ತಿರುವ ಭಾರತದ ಯಾವುದೇ ಒಂದು ಭಾಷೆ ಇರಬಹುದೆಂದು ಪರ್ಯಾಯ ಚಿಂತನೆಯೊಂದು ಮೂಡತೊಡಗಿತ್ತು. ಸಂಸ್ಕೃತದ ಸ್ಥಾನ ಪಲ್ಲಟವಾಗಿ ಆ ಜಾಗದಲ್ಲಿ ಕನ್ನಡದ ಜೊತೆಗೆ ಉರ್ದು, ತಮಿಳು, ತೆಲುಗು, ಮರಾಠಿಗಳು ಉಳಿಯುವುದು ಹಲವಾರು ಮಠಾಧಿಪತಿಗಳಿಗೆ ಸಹ್ಯವಾಗದ ವಿಷಯವಾಯಿತು. ಅಂತಿಮವಾಗಿ ಕನ್ನಡ ಪರವಾದ ಚಳವಳಿ ಸಂಸ್ಕೃತ ಮತ್ತು ಉರ್ದುಗಳ ನಡುವಣ ಮುಖಾಮುಖಿಯಾಗಿ ರೂಪುಗೊಂಡಿತ್ತು. ಗೋಕಾಕ್ ಚಳವಳಿಯು ರಾಜ್ಯವ್ಯಾಪಿ ಯಾಗಿ ಕನ್ನಡ ಪರ ಹೋರಾಡಲು ಸಿದ್ಧವಿದ್ದ ಜನರ ಸಮುದಾಯವೊಂದನ್ನು ಬೆಳಕಿಗೆ ತಂದಿತ್ತು. ಈ ಸಮುದಾಯ ತನ್ನ ಸಾಮಾಜಿಕ ರಚನೆಯಲ್ಲಿ ಅಂತಿಮವಾಗಿ ಪಾರಂಪರಿಕ ಮೌಲ್ಯಗಳ ಸಮರ್ಥನೆಗೆ ಸಿದ್ಧವಿತ್ತು. ಜೊತೆಗೆ ಸಾಮಾಜಿಕ ಅಸಹನೆಯನ್ನು ಯಾವ ಮುಜುಗರವೂ ಇಲ್ಲದೆ ವ್ಯಕ್ತಪಡಿಸಲು ಸಿದ್ಧವಿತ್ತು. ಸಂಸ್ಕೃತವನ್ನು ಸಮರ್ಥಿಸುವ ಉರ್ದುವನ್ನು ವಿರೋಧಿಸುವ ನೆಲೆಗೆ ಈ ಚಳವಳಿಯ ಹಂತ ಬಂದು ನಿಂತಿತ್ತು. ಗೋಕಾಕ್ ಚಳವಳಿಯ ಸಂದರ್ಭ ಮತ್ತು ನಂತರದ ಸಂದರ್ಭದಲ್ಲಾದ ಬೆಳವಣಿಗೆಗಳಿಗೆ ಕಾರಣವಾದ ಹಿನ್ನೆಲೆಯನ್ನು ಕೆ.ವಿ. ನಾರಾಯಣ ಅವರು ಗಮನಕ್ಕೆ ತರುತ್ತಾರೆ. ಮೊದಲನೆಯದು ಗೋಕಾಕ್ ಚಳವಳಿಯ ಪೂರ್ವದಲ್ಲಾದ ಬಂಡಾಯ ದಲಿತ ಚಳವಳಿಯ ಪ್ರಭಾವ. ಎರಡನೆಯದು ಗೋಕಾಕ್ ಚಳವಳಿ ನಂತರದಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದ ಉದ್ದೇಶ. ಗೋಕಾಕ್ ಚಳವಳಿಯನ್ನು ಸಮರ್ಥಿಸುವವರು ಕನ್ನಡ ಪರವೆಂದೂ, ಉಳಿದವರು ಕನ್ನಡ ವಿರೋಧಿಗಳೆಂದೂ ವಿಭಜನೆಗೊಂಡುದಕ್ಕೂ ಕೆಲವು ವರ್ಷಗಳ ಹಿಂದೆ ಬಂಡಾಯ ದಲಿತ ಚಳವಳಿಗಳು ಕನ್ನಡ ಸಮಾಜವನ್ನು ಸಾಮಾಜಿಕ ನೆಲೆಯಲ್ಲಿ ಸಮಾನಾಂತರವಾಗಿ ವಿಭಜಿಸಿದ್ದಕ್ಕೂ ಸಂಬಂಧವಿದೆ. ಬಂಡಾಯ ದಲಿತ ಚಳವಳಿಗಳು ಮಾಡಿದ ಸಮಾನಾಂತರ ವಿಭಜನೆಯಿಂದಾಗಿ ಪಟ್ಟಭದ್ರ ಹಿತಾಸಕ್ತಿಗಳಿಗೆ ತಮ್ಮ ಶೋಷಣೆಯ ಅಸ್ತ್ರಗಳು ಮೊಂಡಾಗಬಹುದು ಎಂಬ ಭಯ ಮೂಡಿ ಅದರ ಮಹತ್ವವನ್ನು ಕಡಿಮೆ ಮಾಡಲು ಗೋಕಾಕ್ ಚಳವಳಿ ಅವಕಾಶ ಮಾಡಿಕೊಟ್ಟಿತ್ತು. ಕನ್ನಡದ ಮರೆಯಲ್ಲಿ ಸಮಾಜದ ಎಲ್ಲ ಸ್ತರಗಳ ಜನರನ್ನು ಒಂದು ನೆಲೆಗೆ ತಂದು ಪರವಿರೋಧದ ನೆಲೆಗಳನ್ನು ಸ್ಥಾಪಿಸುವುದು ಮುಖ್ಯ ಉದ್ದೇಶವಾಗಿತ್ತೆಂದು ಕೆ.ವಿ. ನಾರಾಯಣ ಅವರು ವಿಶ್ಲೇಷಿಸುತ್ತಾರೆ. ಗೋಕಾಕ್ ಚಳವಳಿ ನಡೆದ ನಂತರದಲ್ಲಿ ವಿಶ್ವಕನ್ನಡ ಸಮ್ಮೇಳನ ನಡೆದದ್ದು ಒಂದು ಯೋಜಿತ ಉದ್ದೇಶಕ್ಕಾಗಿ ಎನ್ನುವುದು ಕೆವಿಎನ್ ಅವರ ಚಿಂತನೆ. ಗೋಕಾಕ್ ಚಳವಳಿಯ ನಂತರ ಕನ್ನಡದ ಭಾಷಿಕರ ಒಳಗಡೆಯೇ ಉಂಟಾದ ಭಿನ್ನಮತಗಳನ್ನು ಮತ್ತು ಏಳನೇ ದಶಕದ ರಾಜಕಾರಣ ಮತ್ತು ಸಾಂಸ್ಕೃತಿಕ ಬೆಳವಣಿಗೆಗಳು ಕನ್ನಡಿಗ ಎಂಬ ಪರಿಕಲ್ಪನೆಯನ್ನೇ ಛಿದ್ರಗೊಳಿಸಿದ್ದು, ಇದನ್ನು ಹತ್ತಿಕ್ಕಲು ಇಂಥ ಸಮ್ಮೇಳನಗಳ ಮೂಲಕ ಭಾವನಾತ್ಮಕ ಲೇಪನ ಅಗತ್ಯವಾಗಿತ್ತು ಎನ್ನುವುದು ಮುಖ್ಯ ಒಳನೋಟವಾಗಿದೆ.

ಚಳವಳಿಗಳು ಆಳದಲ್ಲಿ ಬಚ್ಚಿಟ್ಟುಕೊಂಡಿರುವ ಉದ್ಧೇಶಗಳ ಬಗ್ಗೆ ಕೆವಿಎನ್ ಅವರಿಗೆ ಸಕಾರಣ ಗುಮಾನಿಗಳಿವೆ. ಸಾಮಾಜಿಕ ಅಸಹನೆಗಳು ವ್ಯಕ್ತವಾಗಲು ಪ್ರಚೋದನೆಯೊಂದು ಬೇಕು. ಅದು ದೊರಕಿದ ಕೂಡಲೇ ಈ ಅಸಹನೆ ಭುಗಿಲೇಳುತ್ತದೆ ಎಂದು ಕಾವೇರಿ ವಿವಾದ ಮತ್ತು ಬೆಂಗಳೂರು ದೂರದರ್ಶನದಲ್ಲಿ ಉರ್ದು ವಾರ್ತಾ ಪ್ರಸಾರವನ್ನು ವಿರೋಧಿಸಿ ನಡೆದ ಚಳವಳಿಗಳನ್ನು ಉಲ್ಲೇಖಿಸುತ್ತ ಅವರು ಮಾಡುವ ವಿಶ್ಲೇಷಣೆಯಲ್ಲಿ ಇದನ್ನು ಗಮನಿಸಬಹುದು. ಕಾವೇರಿ ವಿವಾದದಲ್ಲಿ ಆರಂಭದಲ್ಲಿದ್ದ ಅದರ ಕಾರಣ, ಪರಿಹಾರ ಕಂಡುಕೊಳ್ಳುವ ಕಾಳಜಿಗಳು ನಂತರದಲ್ಲಿ ಹಿಂದೆ ಸರಿದು ತಮಿಳು ಮಾತನಾಡುವ ಜನರನ್ನು ತಮ್ಮ ಆಕ್ರಮಣಕ್ಕೆ ಗುರಿ ಮಾಡಿಕೊಂಡದ್ದರ ಕಡೆ ಅವರು ಗಮನ ಸೆಳೆಯುತ್ತಾರೆ. ಕಾವೇರಿ ವಿವಾದದ ಕಾರಣ, ಪರಿಹಾರ ಇತ್ಯಾದಿಗಳು ಹಿಂದೆ ಸರಿದು ಚಳವಳಿಗಾರರು ತಮಿಳು ಮಾತನಾಡುವ ಜನರನ್ನು ತಮ್ಮ ಆಕ್ರಮಣಕ್ಕೆ ಗುರಿ ಮಾಡಿಕೊಂಡರು. ಬೆಂಗಳೂರು ದೂರದರ್ಶನದಲ್ಲಿ ಉರ್ದು ಭಾಷೆಯ ವಾರ್ತಾ ಪ್ರಸಾರ ಕುರಿತ ಚಳವಳಿ ಉರ್ದು ಭಾಷೆಗೆ ದೊರೆತ ಅವಕಾಶವನ್ನು ವಿರೋಧಿಸುವ ಭರದಲ್ಲಿ ಆ ಭಾಷೆಯನ್ನಾಡುವ ಮುಸ್ಲಿಮರನ್ನು ಗುರಿಮಾಡಿಕೊಂಡರು. ಜನಪ್ರಿಯ ಚಳವಳಿಗಳ ಇಂತಹ ತರ್ಕಗಳು ಸ್ಪಷ್ಟವಾಗಿವೆ. ಸಾಮಾಜಿಕ ಮತ್ತು ಮತೀಯ ಅಸಹನೆಗಳು ಹೊರಬರಲು ಒಂದು ಪ್ರಚೋದಕ ಅಗತ್ಯ. ಅದು ದೊರಕಿದ ಕೂಡಲೇ ಈ ಅಸಹನೆ ಭುಗಿಲೇಳುತ್ತದೆ ಎನ್ನುವ ಕೆವಿಎನ್ ಅವರು ಭಾಷಿಕ ಚಳವಳಿಗಳ ಕುರಿತು ತೆಗೆದುಕೊಳ್ಳಬೇಕಾದ ನಿಲುವುಗಳು ಎಚ್ಚರಿಕೆಯಿಂದ ಕೂಡಿರಬೇಕು ಎಂದು ಸೂಚಿಸುತ್ತಿದ್ದಾರೆ.

ಕನ್ನಡ ಮತ್ತು ಸಂಸ್ಕೃತದ ಸಂಬಂಧ ಕುರಿತಂತೆ ಕೆ.ವಿ ನಾರಾಯಣ ಅವರ ಚಿಂತನೆ ಹಲವು ಒಳನೋಟಗಳನ್ನು ಹೊಂದಿದೆ. ಅಂಡಯ್ಯನ ಕಾವ್ಯಭಾಷೆಯನ್ನು ಕುರಿತು ಚರ್ಚಿಸುವಾಗ ವಿಮರ್ಶಕರು ಅಂಡಯ್ಯ ಸಂಸ್ಕೃತ ಪದಗಳ ಬದಲು ಅವುಗಳ ತದ್ಭವವನ್ನು ಬಳಸಿ ತನ್ನ ಕಾವ್ಯದ ಭಾಷೆಯ ಸೋಲಿಗೆ ಕಾರಣವಾಗಿದ್ದಾನೆ ಎನ್ನುತ್ತಾರೆ. ಆದರೆ ಅಂಡಯ್ಯನ ಈ ತಂತ್ರದ ಹಿಂದಿನ ಉಪಯುಕ್ತತೆ ಎಷ್ಟೆಂಬುದನ್ನು ನಾವು ಸರಿಯಾಗಿ ಗುರುತಿಸಿಲ್ಲ ಎನ್ನುವ ಕೆವಿಎನ್ ಅವರು ಸಂಸ್ಕೃತ ಪದಗಳನ್ನು ಬಳಸದಿರುವ ಮೂಲಕ ಅಂಡಯ್ಯ ಒಂದು ಮುಖ್ಯ ಆಯ್ಕೆಯನ್ನು ಮಾಡಿಕೊಂಡಿದ್ದಾನೆ. ಸಂಸ್ಕೃತದ ಮೇಲರಿಮೆಯ ಭಾವದಿಂದ ಹೊರಬರಲು ಈ ಭಾಷೆಯ ಸ್ವೀಕೃತ ರೂಪಗಳ ತದ್ಭವಗಳನ್ನು ಬಳಸುವುದು ಸರಿ ಎನ್ನುವುದು ಅವನ ನಿಲುವು. ಇದರಿಂದ ಕನ್ನಡ ಭಾಷೆಗೆ ಅಂತರ್ಮುಖಿಯಾಗಲು ಶಕ್ತಿ ತಾನಾಗಿಯೇ ಒದಗಿ ಬರುತ್ತದೆ. ನಯಸೇನ, ಅಂಡಯ್ಯರ ಮೂಲಕ ಕನ್ನಡ ಸಂಸ್ಕೃತದ ಹಂಗಿನಿಂದ ಹೊರಬರಲು ಮಾಡಿದ ಪ್ರಯತ್ನವು, ಅದು ತನ್ನ ಕೀಳರಿಮೆಯಿಂದ ಹೊರಬರಲು ಮಾಡಿದ ಪ್ರಯತ್ನವೂ, ತನ್ನ ಶಕ್ತಿಯನ್ನು ತಾನೇ ಕಂಡುಕೊಳ್ಳಲು ಮಾಡಿದ ಪ್ರಯತ್ನವೂ ಆಗಿದೆ ಎಂದು ಕೆವಿಎನ್ ಅವರು ಈ ಮೂಲಕ ಸೂಚಿಸುತ್ತಿದ್ದಾರೆ ಎನಿಸುತ್ತದೆ.

ಲಾಗಾಯ್ತಿನಿಂದಲೂ ಸಂಸ್ಕೃತಕ್ಕೆ ಅಚ್ಚಗನ್ನಡ ಪರ್ಯಾಯ ವಾಗಿದ್ದರೆ ಇಪ್ಪತ್ತನೆಯ ಶತಮಾನದ ಕೊನೆಯ ದಶಕಗಳಲ್ಲಿ ಇಂಗ್ಲಿಷ್ ಪರ್ಯಾಯವಾಗಿ ಗೋಚರಿಸಿದ್ದು ಮತ್ತು ಅದಕ್ಕೆ ಪ್ರೇರಣೆ ಯಾಗಿರುವ ಸಂಗತಿಗಳು ಕುತೂಹಲ ಮೂಡಿಸುತ್ತವೆ. ನಯಸೇನನಿಂದ ಮುದ್ದಣನವರೆಗೂ ಕನ್ನಡವನ್ನು ಸಂಸ್ಕೃತದಿಂದ ಮುಕ್ತಗೊಳಿಸಬೇಕು ಎನ್ನುವ ಚಿಂತನೆ ದಟ್ಟವಾಗಿದ್ದು ಅದರಿಂದ ಬಿಡಿಸಿಕೊಳ್ಳುವ ಪ್ರಯತ್ನ ನಡೆದಿದ್ದರೆ ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ಸಂಸ್ಕೃತ ಭಾಷೆಯ ಮರುಸ್ಥಾಪನೆಯಾಯಿತು. ಏಕೀಕರಣದ ಆನಂತರದಲ್ಲಿ ಕನ್ನಡ ಭಾಷೆಯಲ್ಲಿ ಸೃಷ್ಟಿಯಾದ ಚಿಂತನಾ ಸಾಹಿತ್ಯ ಹೆಚ್ಚು ಸಂಸ್ಕೃತಮಯವಾದದ್ದನ್ನು ಇದಕ್ಕೆ ನಿದರ್ಶನವಾಗಿ ನೋಡಬಹುದು. ಕನ್ನಡವನ್ನು ಸಂಸ್ಕೃತದ ಚೌಕಟ್ಟಿಗೆ ಸಿಲುಕಿಸುವ ಪ್ರಯತ್ನ ಮೂಲಭೂತವಾಗಿ ಪುರೋಹಿತಶಾಹಿ ಪ್ರೇರಣೆಯನ್ನು ಪಡೆದಿತ್ತು. ಎಂಟನೇ ದಶಕದಿಂದ ಆದ ಸಾಮಾಜಿಕ ಚಿಂತನೆಗಳ ಪಲ್ಲಟದಿಂದ ಈ ಪುರೋಹಿತಶಾಹಿ ಪ್ರೇರಣೆಗಳನ್ನು ನಿರಾಕರಿಸುವ, ಪ್ರತಿಭಟಿಸುವ ಪ್ರಯತ್ನಗಳು ಮೊದಲಾದವು. ಇದರ ಹಿಂದೆ ದಲಿತ ಬಂಡಾಯ ಚಳವಳಿಗಳ ಪ್ರಭಾವವಿದೆ. ದಲಿತ ಬಂಡಾಯ ಚಳವಳಿಗಳ ಸಾಮಾಜಿಕ ಪ್ರಣಾಳಿಕೆಗಳು ಏನೇ ಇರಲಿ; ಭಾಷಿಕವಾಗಿ ಅವು ಸಂಸ್ಕೃತದ ಯಜಮಾನಿಕೆಯನ್ನು ಪಾವಿತ್ರ ಪರಿವೇಶವನ್ನು ನಿರಾಕರಿಸಿದವು ಮತ್ತು ಪರ್ಯಾಯವಾಗಿ ಇಂಗ್ಲಿಷನ್ನು ಒಂದು ಹೊರದಾರಿಯನ್ನಾಗಿ ಪರಿಗಣಿಸಿದ್ದವು. ಈ ಇಂಗ್ಲಿಷ್ ಕುರಿತ ಪರಿಭಾವನೆ ಪರೋಕ್ಷವಾಗಿ ಕನ್ನಡ ಸಂಸ್ಕೃತಿಯ ಒಳಗಿದ್ದ ಯಜಮಾನಿಕತೆಯೂ ಆಘಾತ ನೀಡುವಂತಿದೆ ಎನ್ನುವುದು ಗಮನಿಸಬೇಕಾದ ಮಾತು. ಭಾಷೆಯ ಮೂಲಕ ಸಾಮಾಜಿಕ ತಾರತಮ್ಯಗಳನ್ನು ಹೇರುವ ಯಜಮಾನ್ಯದ ನೆಲೆಗಳನ್ನು ಭಾಷೆಯ ಮೂಲಕವೇ ಎದುರಿಸುವ ಪ್ರತಿಸಂಸ್ಕೃತಿಯ ಮಾರಿ ಇದಾಗಿದೆ ಎನ್ನುವ ಚಿಂತನೆ ಇಲ್ಲಿದೆ.

(ಲೇಖಕರು ಮೈಸೂರಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದಲ್ಲಿ ಅಸೋಸಿಯೇಟ್ ಫೆಲೋ ಆಗಿದ್ದಾರೆ)

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top