-

ಚಕ್ರ ವರ್ತಿ ಅಶೋಕನಬಗ್ಗೆ ಇನ್ನೂ ಯಾಕೆ ಓದಬೇಕೆಂದರೆ..

-

 ಅಪರ್ಣ ಕಪಾಡಿಯ

ಅಶೋಕ ತಾನು ಶಿಲಾಶಾಸನಗಳಲ್ಲಿ ಕೆತ್ತಿಸಿದ ತತ್ವಗಳನ್ನು ತನ್ನ ನಿಜ ಜೀವನದಲ್ಲಿ ಎಷ್ಟರಮಟ್ಟಿಗೆ ಪಾಲಿಸಿದ್ದ ಎಂಬುದು ನಮಗೆ ಎಂದೂ ತಿಳಿಯಲಾರದು. ಆದರೆ ನಮಗೆ ಇಷ್ಟಂತೂ ತಿಳಿದಿದೆ; ಆತನ ವಿಚಾರಗಳು ಭಾರತದ ಸಂವಿಧಾನವನ್ನು ರಚಿಸಿದ ಭಾರತದ ನಾಯಕರ ಒಂದು ತಲೆಮಾರಿಗೆ ಸ್ಫೂರ್ತಿಯಾಗಿದ್ದವು ಮತ್ತು ಆದ್ದರಿಂದಲೇ ಅವರು ಭಾರತೀಯ ಗಣರಾಜ್ಯದ ಸಂಕೇತವಾಗಿ ಅಶೋಕ ಚಕ್ರವನ್ನು ಅಳವಡಿಸಿಕೊಂಡರು.

ಜನವರಿ 26ರಂದು ಭಾರತ ಪ್ರತಿವರ್ಷ ತನ್ನ ಗಣರಾಜ್ಯೋತ್ಸವವನ್ನು ಆಚರಿಸುತ್ತದೆ. ಆ ದಿನ 70 ವರ್ಷಗಳ ಹಿಂದೆ ಭಾರತದ ಸಂವಿಧಾನ ಅನುಷ್ಠಾನಗೊಂಡಿತು. ಒಂದು ಹೊರರಾಷ್ಟ್ರವಾಗಿ, ಗಣರಾಜ್ಯವಾದ ಭಾರತ ಅದೇ ದಿನ ಒಂದು ಹೊಸ ಲಾಂಛನವನ್ನು ಅಂಗೀಕರಿಸಿತು. ಅದು ಕ್ರಿ.ಪೂ.ಸುಮಾರು 304ರಿಂದ 232ರ ನಡುವೆ ಬದುಕಿದ್ದ ಮೌ ಚಕ್ರವರ್ತಿ ಅಶೋಕನ ಒಂದು ಸ್ತೂಪದ ಕಲಾಕೃತಿಯಿಂದ ಸ್ಫೂರ್ತಿ ಪಡೆದುದಾಗಿತ್ತು. ಶಾಂತಿ ನಿಕೇತನದ ನಂದಲಾಲ್ ಬೋಸ್ ಜತೆಗೂಡಿ ದೀನನಾಥ್ ಭಾರ್ಗವ ವಿನ್ಯಾಸಗೊಳಿಸಿದ್ದ ಲಾಂಛನವು ಅಶೋಕನ ತಾರಾನಾಥ್ ಸ್ತೂಪದಲ್ಲಿರುವ ಸಿಂಹಗಳ ಪ್ರತಿಕೃತಿಯಾಗಿದೆ. ಕ್ರಿ.ಪೂ. 250ರಲ್ಲಿ ನಿರ್ಮಾಣವಾದ ಈ ಸ್ತಂಭದ ಮೇಲೆ ವೃತ್ತಾಕಾರದ ಒಂದು ವೇದಿಕೆಯ ಮೇಲೆ ಪರಸ್ಪರ ಬೆನ್ನು ಹಾಕಿ ನಿಂತಿರುವ ನಾಲ್ಕು ಸಿಂಹಗಳು ಮತ್ತು ಒಂದು ಎತ್ತು ನೆಗೆಯುತ್ತಿರುವ, ಒಂದು ಕುದುರೆ ಮತ್ತು ಒಂದು ಚಿಕ್ಕ ಸಿಂಹ ಹಾಗೂ ಒಂದು ಆನೆಯ ಕೆತ್ತನೆಗಳಿವೆ. ಇವುಗಳ ನಡುವೆ 24 ಕಡ್ಡಿಗಳಿರುವ ಒಂದು ಚಕ್ರ ಇದೆ. ವೇದಿಕೆಯು ಗಂಟೆಯಾಕಾರದ ಒಂದು ಕಮಲದ ಮೇಲಿದೆ. ಭಾರತದ ರಾಷ್ಟ್ರಧ್ವಜದ ನಡುವೆ ಕೂಡ ಅದೇ ಚಕ್ರವಿದೆ. ದೇಶದ ಸರಕಾರಿ ಸ್ಟೇಶನರಿಗಳ ಮೇಲೆ, ಭಾರತದ ಪಾಸ್‌ಪೋರ್ಟ್‌ನ ಮುಖ ಪುಟದ ಮೇಲೆ ಹಾಗೂ ಪ್ರತಿಯೊಂದು ಕರೆನ್ಸಿ ನೋಟಿನ ಮೇಲೆ ಕೂಡ ಅದೇ ಚಕ್ರವನ್ನು ಮುದ್ರಸಿಲಾಗಿದೆ. ಭಾರತದ ಪ್ರಾಚೀನ ಇತಿಹಾಸದಲ್ಲಿ ಹಾಗೂ ಜಾಗತಿಕ ನೆಲೆಗಳಲ್ಲಿ ಚಕ್ರವರ್ತಿ ಅಶೋಕ ಬಹಳ ಮುಖ್ಯವಾದ ಒಂದು ವ್ಯಕ್ತಿತ್ವ. ಭಾರತದ ಸಂದರ್ಭದಲ್ಲಿ ಆತ ನೈಸರ್ಗಿಕ ಬಂಡೆಕಲ್ಲುಗಳ ಮೇಲೆ ಹಾಗೂ ಮಾನವ ನಿರ್ಮಿತ ಸ್ತಂಭಗಳಲ್ಲಿ ಕೆತ್ತಲ್ಪಟ್ಟ ಶಾಸನಗಳ ಸರಣಿಗಳಲ್ಲಿ ಮೂಡಿಬರುತ್ತಾನೆ. ಅಶೋಕನ ಶಾಸನಗಳು ಇಂದಿನ ಅಫ್ಘಾನಿಸ್ತಾನದಿಂದ ದಕ್ಷಿಣದ ಕರ್ನಾಟಕದವರೆಗೆ ಕಾಣಸಿಗುತ್ತದೆ. ಪಶ್ಚಿಮದಲ್ಲಿ ಗುಜರಾತ್‌ನಿಂದ ಪೂರ್ವದಲ್ಲಿ ಬಂಗಾಲದವರೆಗೆ ಆತನ ಶಾಸನಗಳಿವೆ. ಈ ಶಾಸನಗಳಲ್ಲಿ ಚಕ್ರವರ್ತಿಯೊಬ್ಬನ ವೈಯಕ್ತಿಕ ಅನಿಸಿಕೆಗಳು, ಚಿಂತನೆಗಳು ವ್ಯಕ್ತಿವಾಗಿವೆ. ಈ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ಓದಿ ಮನನ ಮಾಡಿಕೊಳ್ಳಲು ಅರ್ಹವಾಗಿವೆ. ಇತಿಹಾಸದಲ್ಲಿ ಯಾವ ಒಬ್ಬ ರಾಜ ಕೂಡ ಈ ರೀತಿಯಾಗಿ ತನ್ನ ಯೋಜನೆಗಳನ್ನು ಹಾಗೂ ಮಾರ್ಗದರ್ಶಿ ಸೂತ್ರಗಳನ್ನು ಸಾರ್ವಜನಿಕರಿಗಾಗಿ ದಾಖಲಿಸಿದ್ದಿಲ್ಲ. ಅಶೋಕನ ನಂತರ ಬಂದ ಯಾವ ರಾಜ ಕೂಡ ಹೀಗೆ, ಈ ಮಟ್ಟದಲ್ಲಿ ಶಿಲಾಶಾಸನಗಳನ್ನು ಬರೆಸಿದ್ದು ಕೂಡ ಇತಿಹಾಸದಲ್ಲಿ ಕಾಣಸಿಗುವುದಿಲ್ಲ. ಒಂದು ವೇಳೆ ಯಾರಾದರೂ ಬರೆಸಿದ್ದರೂ, ಒಂದೇ ಒಂದು ಶಾಸನ ಕೂಡ ಭಾರತದಲ್ಲಾಗಲಿ ವಿಶ್ವದ ಇತರ ಭಾಗಗಳಲ್ಲಾಗಲಿ ಉಳಿದಿಲ್ಲ.

ಅಶೋಕ ಕ್ರಿ.ಪೂ. ಸುಮಾರು 269/268 ವೇಳೆಗೆ ತನ್ನ ಆಳ್ವಿಕೆಯನ್ನು ಆರಂಭಿಸಿದ. ಆತ ಮೌರ್ಯ ಸಾಮ್ರಾಜ್ಯದ ಮೂರನೆಯ ರಾಜ. ಆತನ ರಾಜಧಾನಿ ಇಂದಿನ ಬಿಹಾರ್‌ನಲ್ಲಿರುವ ಪಾಟಲೀಪುತ್ರ. ಆತನ ಕಾಲದ ಗ್ರೀಕ್ ಲೇಖಕರಾದ ಮೆಗಸ್ತನಿಸ್ ಮತ್ತು ಅರಿಯನ್‌ರಂತಹವರು ಅದನ್ನು ‘‘ಭಾರತದ ನಗರಗಳಲ್ಲೇ ಅತ್ಯಂತ ಶ್ರೇಷ್ಠವಾದದ್ದು’’ ಎಂದು ಕರೆಯುತ್ತಾರೆ. ಅಶೋಕ ಸಿಂಹಾಸನವನ್ನು ಏರುವ ವೇಳೆಗೆ ವೌರ್ಯ ಸಾಮ್ರಾಜ್ಯ ಭಾರತೀಯ ಉಪಖಂಡದ ಬಹಳ ಭಾಗಕ್ಕೆ ವ್ಯಾಪಿಸಿತ್ತು ಮತ್ತು ಆತನಿಗೆ ಈ ಸಾಮ್ರಾಜ್ಯವು ಆಧ್ಯಾತ್ಮಿಕ ಬಹುತ್ವದ ಹಿನ್ನೆಲೆ ಇದ್ದ ಒಂದು ವಂಶದಿಂದ ಬಂದಿತ್ತು; ಅಶೋಕನ ಅಜ್ಜ ಚಂದ್ರಗುಪ್ತ ಓರ್ವ ಜೈನನಾಗಿದ್ದ ಎಂದು ಹೇಳಲಾಗಿದೆ. ಆತ ಮುದುಕನಾದಾಗ ಜೈನರ ಸಾಂಪ್ರದಾಯಿಕ ಆಚರಣೆಯಾದ ಪಲ್ಲೇಖನವನ್ನು ಸ್ವೀಕರಿಸಿ, ತನ್ನ ಸಿಂಹಾಸನವನ್ನು ತನ್ನ ಮಗ ಬಿಂದುಸಾರನಿಗೆ ಬಿಟ್ಟುಕೊಟ್ಟ. ಬಿಂದುಸಾರ ಆಗ ಜನಪ್ರಿಯನಾಗಿದ್ದ ಆಜೀವಿಕ ತ್ಯಾಗ ಪಂಥದಿಂದ ಪ್ರಭಾವಿತನಾಗಿದ್ದ.

ಯುವ ಅಶೋಕನಿಗೆ ಆಯ್ದುಕೊಳ್ಳಲು ಹಲವು ಆಯ್ಕೆಗಳಿದ್ದವು. ಆದರೆ ವಿಶ್ವದ ಇತಿಹಾಸದಲ್ಲಿ ಅತ್ಯಂತ ಅನಿರೀಕ್ಷಿತವಾದ ಪಶ್ಚಾತ್ತಾಪದ ಒಂದು ಸಂದರ್ಭದಲ್ಲಿ ಕಳಿಂಗ ಯುದ್ಧದ ರಕ್ತಪಾತವನ್ನು ಕಂಡ ಬಳಿಕ ಆತ ಬೌದ್ಧ ಧರ್ಮವನ್ನು ಸ್ವೀಕರಿಸಿದ. ಆತನ ಅತ್ಯಂತ ಪ್ರಸಿದ್ಧವಾದ ಹದಿಮೂರನೆಯ ಶಿಲಾ ಶಾಸನದಲ್ಲಿ ಕಳಿಂಗ ಯುದ್ಧದಲ್ಲಿ ನಡೆದ ನರಮೇಧದ ಬಳಿಕ ತನಗಾದ ದುಃಖ ಹಾಗೂ ಪಶ್ಚಾತ್ತಾಪದ ಬಗ್ಗೆ ಹೇಳುತ್ತಾನೆ, ತಾನು ಹೇಗೆ ದಮ್ಮದ ಹುಡುಕಾಟದಲ್ಲಿ ತೊಡಗಲು ನಿರ್ಧರಿಸಿದೆ ಎನ್ನುವುದನ್ನು ಮತ್ತು ‘‘ಜನರು ದಮ್ಮವನ್ನಾಚರಿಸುವಂತೆ ಅವರಿಗೆ ಉಪದೇಶಿಸಲು’’ ನಿರ್ಧರಿಸಿದೆ ಎನ್ನುವುದನ್ನು ಅಭಿವ್ಯಕ್ತಿಸುತ್ತಾನೆ. ಹಿಮಾಲಯದ ಪ್ರದೇಶಗಳು ಹಾಗೂ ಶ್ರೀಲಂಕಾ ಸೇರಿದಂತೆ ಭಾರತೀಯ ಉಪಖಂಡದ ಮೂಲೆಮೂಲೆಗೂ ಆತ ಬೌದ್ಧ ಧರ್ಮ ಪ್ರಚಾರಕರನ್ನು ಕಳುಹಿಸಿದ. ಈಶಾನ್ಯ ಏಶ್ಯದವರೆಗೂ ಅವರು ಧರ್ಮ ಪ್ರಸಾರಕ್ಕಾಗಿ ಹೋಗಿದ್ದರು. ಅಶೋಕ ಬೌದ್ಧ ಧರ್ಮಕ್ಕೆ ಮತಾಂತರಗೊಂಡದ್ದು ವಿಶ್ವದ ಇತಿಹಾಸದಲ್ಲಿ ಬಹಳ ಮುಖ್ಯವಾದ ಒಂದು ಕ್ಷಣ. ಯಾಕೆಂದರೆ ಆತ ಬೌದ್ಧ ಧರ್ಮಕ್ಕೆ ನೀಡಿದ ರಾಜಾಶ್ರಯವು ಬೌದ್ಧ ಧರ್ಮವನ್ನು ಒಂದು ದೇಶದ ಸಿದ್ಧಾಂತವಾಗಿ ರೂಪಾಂತರಿಸಿತು ಹಾಗೂ ಅದನ್ನು ಒಂದು ಜಾಗತಿಕ ದಮ್ಮವಾಗುವಂತೆ ಮಾಡಿತು. ಇದು ಐದುನೂರು ವರ್ಷಗಳ ಬಳಿಕ ಯುರೋಪಿನಲ್ಲಿ ರೋಮನ್ ಚಕ್ರವರ್ತಿ ಕಾನ್‌ಸ್ಟಂಟೀನ್ ಕ್ರಿಶ್ಚಿಯನ್ ಧರ್ಮಪ್ರಚಾರಕ್ಕೆ ಕೈಗೊಂಡ ಕಾರ್ಯಕ್ಕೆ ಹೋಲಿಸಬಹುದಾದ ಒಂದು ಐತಿಹಾಸಿಕ ಸಾಧನೆ.

ಅದೇನಿದ್ದರೂ, ಗಣರಾಜ್ಯೋತ್ಸವದ ಸಂದರ್ಭದಲ್ಲಿ ನಾವು ನೆನಪಿಸಿಕೊಳ್ಳಬೇಕಾದದ್ದು ಆಧ್ಯಾತ್ಮಿಕ ದಿಕ್ಕಿನಲ್ಲಿ ಸಾಧನೆಗೈದ ಅಶೋಕನಿಗಿಂತ ಮಿಗಿಲಾಗಿ, ಲೌಕಿಕ ವ್ಯಕ್ತಿಯಾಗಿ, ವಿಶ್ವ ಮಾನವನಾಗಿ ಸಾಧನೆಗೈದ ಅಶೋಕನನ್ನು. ಇತ್ತೀಚೆಗೆ ಅಶೋಕನ ಜೀವನಗಾಥೆಯನ್ನು ಬರೆದಿರುವ ಪ್ರಾಚ್ಯಶಾಸ್ತ್ರಜ್ಞೆ ಹಾಗೂ ಇತಿಹಾಸಕಾರ್ತಿ ನಯನ್‌ಜೋತ್ ಲಹಿರಿ ತನ್ನ ಆಳವಾದ ಸಂಶೋಧಿತ ಕೃತಿಯಲ್ಲಿ ವಿವರಿಸುವಂತೆ, ಅಶೋಕ ಹೊಸ ಚಿಂತನೆಯ ಓರ್ವ ಚಿಂತಕ ಹಾಗೂ ಆಡಳಿತಗಾರನಾಗಿದ್ದ, ಆತ ರಾಜತ್ವದ ಹೊಸ ವಿಚಾರಗಳನ್ನು ಪರಿಚಯಿಸಿದ; ಜನರ ಚಕ್ರವರ್ತಿಯಾಗುವುದು ಆತನ ಗುರಿಯಾಗಿತ್ತು. ಅದು ಕೂಡ ಹಿಂದೆಂದೂ ಅಸ್ತಿತ್ವಕ್ಕೆ ಬರದಿದ್ದಂತಹ ಬೃಹತ್ ಸಾಮ್ರಾಜ್ಯವೊಂದರಲ್ಲಿ, ಮುಂದೆ ಒಂದು ಸಾವಿರ ವರ್ಷಗಳವರೆಗೆ ಬಾರದಂತಹ ವಿಸ್ತಾರವಾದ ಒಂದು ಸಾಮ್ರಾಜ್ಯದಲ್ಲಿ ಆತ ಜನ ಸಾಮಾನ್ಯರ, ಜನರ ಚಕ್ರವರ್ತಿಯಾಗುವ ಗುರಿ ಹೊಂದಿ, ರಾಜನಾಗಿ ಕಾರ್ಯನಿರ್ವಹಿಸಿದನೆಂಬುದು ತುಂಬ ಮುಖ್ಯವಾಗುತ್ತದೆ.

ಅಶೋಕನ ಹಲವಾರು ಶಿಲಾಶಾಸನಗಳ ವಿಷಯ, ಅವುಗಳಿರುವ ಸ್ಥಳ ಮತ್ತು ಅವುಗಳ ಐತಿಹಾಸಿಕ ಸಂದರ್ಭ ಆ ಶಾಸನಗಳಲ್ಲಿರುವ ಪ್ರಾದೇಶಿಕ ವ್ಯತ್ಯಾಸ, ವೈಶಿಷ್ಟವನ್ನು ಹೇಳುತ್ತದೆ. ಅಲ್ಲದೆ ಮೊತ್ತ ಮೊದಲಬಾರಿಗೆ ಚಕ್ರವರ್ತಿಗೆ ವಯಸ್ಸಾದಂತೆ ಆತನ ಈ ವಿಚಾರಗಳು ಹೇಗೆ ಬದಲಾದವು ಎನ್ನುವುದನ್ನು ಕೂಡ ಐತಿಹಾಸಿಕ ಕಥಾನಕ ಓದುಗರ ಮುಂದೆ ಪ್ರಸ್ತುತಪಡಿಸುತ್ತದೆ. ಅಶೋಕನ ಬದುಕು ಹಾಗೂ ಆಡಳಿತದಲ್ಲಿ ಮೂರು ವಿಷಯಗಳು ಪ್ರಧಾನವಾಗಿ ಎದ್ದು ಕಾಣುತ್ತವೆ. ಅಶೋಕನ ಜೀವನ ಮತ್ತು ಆಳ್ವಿಕೆಯಲ್ಲಿ ಎದ್ದು ಕಾಣುವ ಮೂರು ವಿಷಯಗಳಲ್ಲಿ ಮೊದಲನೆಯದು, ವಿಸ್ತಾರವಾದ ಆತನ ಸಾಮ್ರಾಜ್ಯ. ಅಲ್ಲಿ ಭಾರತೀಯ ಉಪಖಂಡದಲ್ಲೆ ಓರ್ವ ರಾಜ ಅಂದಿನವರೆಗೆ ಎದುರಿಸದ ಗರಿಷ್ಠ ಬಹು ಸಾಂಸ್ಕೃತಿಕ ಹಾಗೂ ಬಹು ಭಾಷಿಕವಾದ ಒಂದು ಸಾಮ್ರಾಜ್ಯವನ್ನು ಜನರ ಸಂಕೀರ್ಣತೆಗಳನ್ನು ಅಶೋಕ ಎದುರಿಸಬೇಕಾಯಿತು. ಅಂತಹ ಒಂದು ಪರಿಸ್ಥಿತಿಯಲ್ಲಿ ಸಂಬಂಧಿತ ಎಲ್ಲರಿಗೂ ಚಕ್ರವರ್ತಿ ತನ್ನ ಸಂದೇಶಗಳನ್ನು ತಲುಪಿಸುವುದು ಹೇಗೆ? ಸಂದೇಶಗಳ ಸಂವಹನ ಹೇಗೆ? ಉತ್ತರ ಹಾಗೂ ದಕ್ಷಿಣ ಭಾರತದ ಹೆಚ್ಚಿನ ಭಾಗಗಳಲ್ಲಿ ತನ್ನ ಪ್ರಾಂತೀಯ ಆಡಳಿತಗಾರರು ತನ್ನ ಸಂದೇಶಗಳನ್ನು ಬ್ರಾಹ್ಮೀ ಲಿಪಿಯಲ್ಲಿ ಮತ್ತು ಪ್ರಾಕೃತ ಭಾಷೆಯಲ್ಲಿ ತಿಳಿಸುವಂತೆ ಅಶೋಕ ನೋಡಿಕೊಂಡ. ಆಗ ಇದು ಅಧಿಕೃತ ಆಡಳಿತ ಭಾಷೆಯಾಗಿತ್ತು.

ಆದರೆ ಜನರಿಗೆ ಪ್ರಾಕೃತ ಅರ್ಥವಾಗದ ಪ್ರದೇಶಗಳಲ್ಲಿ ಹೇಗೆ ಸಂವಹಿಸುವುದು? ಉದಾಹರಣೆಗೆ ಪಾಟಲಿಪುತ್ರದಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿದ್ದ ಹಾಗೂ ಏಶ್ಯದ ವಿವಿಧ ಭಾಗಗಳಿಗೆ ವಾಣಿಜ್ಯ ಮಾರ್ಗಗಳನ್ನು ಸಂಪರ್ಕಿಸುವ ಕೇಂದ್ರವಾಗಿದ್ದ ಕಂದಹಾರ್. ಒಂದು ಕಾಲದಲ್ಲಿ ಪರ್ಷಿಯನ್ ಸಾಮ್ರಾಜ್ಯದ ಒಂದು ಪ್ರಾಂತವಾಗಿದ್ದ ಅಲ್ಲಿ ಗ್ರೀಕರ ಹಲವು ಸಮುದಾಯಗಳಿದ್ದವು. ಅವರು ಕೆಲವು ದಶಕಗಳ ಹಿಂದೆ ನಡೆದಿದ್ದ ಅಲೆಕ್ಸಾಂಡರ್‌ನ ದಾಳಿಯ ಬಳಿಕ ಸ್ವದೇಶಕ್ಕೆ ಮರಳದೆ ಅಲ್ಲಿಯೇ ನೆಲೆನಿಂತ ಸೈನಿಕರ ವಂಶದವರು ಮತ್ತು ಸ್ಥಳೀಯರು.

ಅಶೋಕ ತುಂಬ ಪ್ರಾಯೋಗಿಕವಾಗಿ ಯೋಚಿಸಿದ; ಪ್ರಾಕೃತ ಭಾಷಾಂತರಕಾರನಿಗಾಗಿ ಜನರು ಹುಡುಕಾಟ ನಡೆಸುವ ಬದಲು, ಆತ ಗ್ರೀಕ್ ಮತ್ತು ಅರಮಿಕ್‌ನಲ್ಲಿ ತನ್ನ ಶಾಸನಗಳನ್ನು ಕೆತ್ತಿಸಿದ.

 ಚಕ್ರವರ್ತಿಗೆ ಎದುರಾದ ಎರಡನೇ ಸವಾಲು: ಉಪಖಂಡದ ವಿವಿಧ ಭಾಗಗಳಲ್ಲಿ ಅಲ್ಲಿಯದೇ ಆದ ಸ್ಥಳೀಯ ಪರಂಪರೆಗಳು, ಪದ್ಧತಿಗಳು ಹಾಗೂ ನಂಬಿಕೆಗಳಿದ್ದವು. ಆಚಾರ ಸೇವನೆಯ ಬಗ್ಗೆ ಅಶೋಕನ ಶಾಸನಗಳಲ್ಲಿ ನಮನೀಯತೆ ಕಾಣಿಸುತ್ತದೆ. ಆದ್ದರಿಂದ, ಅಶೋಕ ಜನರ ಆಹಾರದ ಬಗ್ಗೆ ಕಟ್ಟುನಿಟ್ಟಿನ ನಿಯಮಗಳನ್ನು ವಿಧಿಸಲಿಲ್ಲ. ಬದಲಾಗಿ ಆತ ಪ್ರಾಣಿವಧೆಯನ್ನು ಆದಷ್ಟು ಕಡಿಮೆ ಮಾಡುವಂತೆ (ಮಾಂಸಾಹಾರವನ್ನು ಮಿತಿಗೊಳಿಸುವಂತೆ) ತನ್ನ ಪ್ರಜೆಗಳಿಗೆ ಅಜ್ಞೆ ಮಾಡಿದ.

ಲಹಿರಿ ಹೇಳುವಂತೆ ಮಾಂಸಾಹಾರ ನಿಷೇಧಿಸಬೇಕೆಂದು ಆತ ಎಲ್ಲರಿಗೂ ಹೇಳಲು ಸಾಧ್ಯವಿಲ್ಲವೆಂಬ ಅರಿವು ಆತನಿಗಿತ್ತು. ಉದಾಹರಣೆಗೆ ಕರ್ನಾಟಕ-ಆಂಧ್ರದ ಹಲವು ಭಾಗಗಳಲ್ಲಿ ಮಾಂಸ ಸೇವನೆ ಹಾಗೂ ಪ್ರಾಣಿ ಬಲಿ ಜನರ ಪದ್ಧತಿಗಳ ಅವಿಭಾಜ್ಯ ಅಂಗ ವಾಗಿತ್ತು. ‘‘ಯಾವುದೇ ಜೀವಂತ ಪ್ರಾಣಿಯನ್ನು ಬಲಿಗಾಗಿ ಕೊಲ್ಲಬಾರದು’’ ಎಂಬ ಸಲಹೆಯೊಂದಿಗೆ ಆತ ಸ್ವತಃ ತಾನೇ ತನ್ನ ಅರಮನೆಯಲ್ಲಿ ಬದಲಾವಣೆಯನ್ನು ತಂದ. ಆ ಮೊದಲು ಅರಮನೆಯಲ್ಲಿ ‘‘ಕರಿ ತಯಾರಿಗಾಗಿ’’ ಸಾವಿರಾರು ಪ್ರಾಣಿಗಳನ್ನು ವಧಿಸಲಾಗುತ್ತಿತ್ತು. ಆದರೆ ಈಗ ‘‘ಕೇವಲ ಮೂರು ಜೀವಂತ ಪ್ರಾಣಿಗಳನ್ನು ಮಾತ್ರ ಪ್ರತಿದಿನ ಕೊಲ್ಲಲಾಗುತ್ತದೆ. ಎರಡು ಹಕ್ಕಿಗಳು ಮತ್ತು ಒಂದು ಪಶು’’

ಅಶೋಕ ವಹಿಸಿದ ಮುನ್ನೆಚ್ಚರಿಕೆ ಸಮರ್ಥನೀಯವಾಗಿತ್ತು ಅನ್ನಿಸುತ್ತದೆ; ಅಫ್ಘಾನಿಸ್ತಾನದಲ್ಲಿ ದೊರಕಿದ ಪ್ರಾಣಿಗಳ ಭಾರೀ ಮೂಳೆಗಳ ಅವಶೇಷಗಳು ಅಶೋಕನ ಸಾಮ್ರಾಜ್ಯದಲ್ಲಿ ಮಾಂಸ ಪ್ರಿಯ ಪ್ರದೇಶಗಳ ಜನರು ಅವರು ಆಹಾರಸಂಬಂಧಿ ಆಜ್ಞೆಗಳನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎನ್ನುವುದನ್ನು ತೋರಿಸುತ್ತದೆ. ಮೂರನೆಯ ವಿಷಯವೆಂದರೆ, ತನ್ನ ವೈಯಕ್ತಿಕ ಸಿದ್ಧಾಂತಗಳನ್ನು, ನಂಬಿಕೆಗಳನ್ನು ಎಷ್ಟರ ಮಟ್ಟಿಗೆ ತನ್ನ ಪ್ರಜೆಗಳ ಮೇಲೆ ಒತ್ತಾಯಪೂರ್ವಕವಾಗಿ ಹೇರುವುದು ಎಂಬ ಪ್ರಶ್ನೆ ಅಶೋಕನನ್ನು ಕಾಡಿತ್ತು. ಆತ ತನ್ನದೇ ದಮ್ಮವನ್ನು ತನ್ನ ಸಾಮ್ರಾಜ್ಯದಾದ್ಯಂತ ಪ್ರಚಾರ ಮಾಡಿಸಿದ್ದ. ಆದರೂ ಕೂಡ, ಲಹರಿ ಹೇಳುವಂತೆ, ತನ್ನನ್ನು ‘‘ದೇವನಾರಿ ಪ್ರಿಯ’’ (ದೇವತೆಗಳಿಗೆ ಪ್ರಿಯನಾದವ) ಎಂದು ಕರೆದುಕೊಂಡಿದ್ದ ಅಶೋಕ, ತನ್ನ ಯೌವನದಲ್ಲಿ ತನ್ನ ಸಿಂಹಾಸನಕ್ಕೆ ಪ್ರತಿಸ್ಪರ್ಧಿ ಗಳಾಗಿದ್ದವರ ತಲೆ ಕಡಿಸಿದ್ದನೆಂದು ಹೇಳಲಾಗಿದೆ. ಅಲ್ಲದೆ ಆತನೇ ಒಪ್ಪಿಕೊಂಡಿರುವಂತೆ, ಕಳಿಂಗ ಯುದ್ಧದಲ್ಲಿ ಆತ ಕಳಿಂಗದ ಬಹಳಷ್ಟು ಮಂದಿಯನ್ನು ಸಾಮೂಹಿಕವಾಗಿ ಹತ್ಯೆಗೈದಿದ್ದ. ಆದ್ದರಿಂದ ಆತ ತನ್ನ ಹೊಸ ತತ್ವಜ್ಞಾನವನ್ನು (ಅಹಿಂಸೆಯನ್ನು) ಜನರ ಮೇಲೆ ಹೇರುವಾಗ ಬಹಳ ಜಾಗ್ರತೆ ವಹಿಸಿದ.

ಅಶೋಕನ ಶಾಸನಗಳು, ಆತನ ದಮ್ಮ ಎಲ್ಲರನ್ನೂ ಒಳಗೊಳ್ಳುವ (ಇನ್‌ಕ್ಲೂಸಿವ್) ಹಾಗೂ ಎಲ್ಲರಿಗೂ ಲಭ್ಯವಾಗುವ ರೀತಿಯಲ್ಲಿ ವಿಶಾಲವಾಗಿತ್ತು; ಉದಾರವಾಗಿತ್ತು ಎಂಬುದನ್ನು ಸೂಚಿಸುತ್ತದೆ. ಬುದ್ಧನ ಮಾರ್ಗವನ್ನು ಅನುಸರಿಸಿದವರಿಗೂ ಅಲ್ಲಿ ಅವಕಾಶವಿತ್ತು. ಅಶೋಕ ಎಲ್ಲ ನಂಬಿಕೆಗಳವರಿಗೂ ಗೌರವ ನೀಡಬೇಕು ಹಾಗೂ ಅವರನ್ನು ರಕ್ಷಿಸಬೇಕೆಂದು ತನ್ನ ಅಧಿಕಾರಿಗಳಿಗೆ ಸೂಚನೆ ನೀಡಿದ್ದಷ್ಟೇ ಅಲ್ಲದೆ, ಜನರಿಗೆ ಪರಸ್ಪರ ನಂಬಿಕೆಗಳನ್ನು ಗೌರವಿಸುವಂತೆ ಅವರನ್ನು ಪ್ರೋತ್ಸಾಹಿಸಿದ ಎಂದು ಅವನ ಒಂದು ಶಾಸನದಿಂದ ತಿಳಿದುಬರುತ್ತದೆ. ಸುಮಾರು ನಾಲ್ಕು ದಶಕಗಳ ಕಾಲ ಆಳ್ವಿಕೆ ನಡೆಸಿದ ಬಳಿಕ ಅಶೋಕ ತನ್ನ 72ನೇ ವಯಸ್ಸಿನಲ್ಲಿ ಮರಣ ಹೊಂದಿದ. ಆತನ ಆಳ್ವಿಕೆಯ ವಿವಿಧ ಹಂತಗಳಲ್ಲಿ ಆತ ಕೆತ್ತಿಸಿದ ಶಿಲಾ ಶಾಸನಗಳು ಆತ ಓರ್ವ ಮಾನವತಾವಾದಿಯಾದ ಅರಸನಾಗಿದ್ದ ಮತ್ತು ಭೌಗೋಳಿಕವಾಗಿ ತುಂಬಾ ವಿಸ್ತಾರವಾದ ಹಾಗೂ ಸಾಂಸ್ಕೃತಿಕವಾಗಿವಿಭಿನ್ನವಾದ ಒಂದು ಭೂಭಾಗವನ್ನು ಆಳುವಾಗ ಆತ ತುಂಬ ನಮನೀಯವಾದ ದೃಷ್ಟಿ, ಧೋರಣೆಗಳನ್ನು ಹೊಂದಿದ್ದ ಎನ್ನುವುದನ್ನು ಸಾರಿ ಹೇಳುತ್ತದೆ. ಅಶೋಕ ತಾನು ಶಿಲಾಶಾಸನಗಳಲ್ಲಿ ಕೆತ್ತಿಸಿದ ತತ್ವಗಳನ್ನು ತನ್ನ ನಿಜ ಜೀವನದಲ್ಲಿ ಎಷ್ಟರಮಟ್ಟಿಗೆ ಪಾಲಿಸಿದ್ದ ಎಂಬುದು ನಮಗೆ ಎಂದೂ ತಿಳಿಯಲಾರದು. ಆದರೆ ನಮಗೆ ಇಷ್ಟಂತೂ ತಿಳಿದಿದೆ; ಆತನ ವಿಚಾರಗಳು ಭಾರತದ ಸಂವಿಧಾನವನ್ನು ರಚಿಸಿದ ಭಾರತದ ನಾಯಕರ ಒಂದು ತಲೆಮಾರಿಗೆ ಸ್ಫೂರ್ತಿಯಾಗಿದ್ದವು ಮತ್ತು ಆದ್ದರಿಂದಲೇ ಅವರು ಭಾರತೀಯ ಗಣರಾಜ್ಯದ ಸಂಕೇತವಾಗಿ ಅಶೋಕ ಚಕ್ರವನ್ನು ಅಳವಡಿಸಿಕೊಂಡರು. ವಸಾಹತುವಾದದ ಅಂತ್ಯದಲ್ಲಿ ಜನರಿಗೆ ಹಸ್ತಾಂತರಿಸಲಾದ ಅಧಿಕಾರ ವ್ಯವಸ್ಥೆಗಳಲ್ಲಿ ಭಾರತ ಒಂದು ಬಲಿಷ್ಠ ಪ್ರಜಾಪ್ರಭುತ್ವವಾಗಿ ಉಳಿಯಲು, ಭಾರತದ ನಾಯಕರು ಭಾರತದ ‘‘ಮೊದಲ ಚಕ್ರವರ್ತಿ’’ಯ ಜೀವನ ಸಂದೇಶವನ್ನು ಓದಿ ಅರ್ಥಮಾಡಿಕೊಂಡದ್ದು ಒಂದು ಕಾರಣ.

(ಅಪರ್ಣ ಕಪಾಡಿಯ ಅಮೆರಿಕದ ವಿಲಿಯಮ್ಸ್ ಕಾಲೇಜಿನಲ್ಲಿ ಇತಿಹಾಸಕಾರರಾಗಿದ್ದಾರೆ. ಆಕೆ ‘‘ಇನ್‌ಫ್ರೈಸ್ ಆಫ್ ಕಿಂಗ್ಸ್: ರಜಪೂತ್ಸ್, ಸುಲ್ತಾನ್ ಆ್ಯಂಡ್ ಪೊಯೆಟ್ಸ್ ಇನ್ ಫಿಫ್ಟೀಂತ್ ಸೆಂಚುರಿ’’ ಬರೆದ ಪುಸ್ತಕದ ಲೇಖಕಿ)

ಕೃಪೆ: scroll.in

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top