ನಡು ಬಾಗದ 'ಪತ್ರಕರ್ತನ' ನಡುರಾತ್ರಿಯ ಸ್ವಗತ
-

ನಾಗೇಶ್ ಹೆಗ್ಡೆ
ಪತ್ರಕರ್ತನಿಗೆ ಬದ್ಧತೆ ಇರಬೇಕು; ತನಗನ್ನಿಸಿದ್ದನ್ನು ಗಟ್ಟಿಯಾಗಿ ಹೇಳಬೇಕು. ಅದಕ್ಕೆ ಅವಕಾಶ ಸಾಲದಿದ್ದರೆ ಗೆರಿಲ್ಲಾ ಯುದ್ಧದ ಹಾಗೆ ಗೆರಿಲ್ಲಾ ಜರ್ನಲಿಸಂ ಮಾಡಬೇಕು. ಬಹುಮಾಧ್ಯಮ ಪರಿಣತಿ ಪಡೆಯಬೇಕು; ಕೆಲಸದ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳಬೇಕು ಎಂಬೆಲ್ಲ ಮಾತುಗಳು ಈಗ ಚಾಲ್ತಿಗೆ ಬರುತ್ತಿವೆ. ಮೂವತ್ತು ವರ್ಷಗಳ ಹಿಂದೆ ಸಾಮಾಜಿಕ ಚಳವಳಿಗಳ ಪರ್ವಕಾಲದಲ್ಲಿ ಇಂಥವನ್ನೆಲ್ಲ ಜಾರಿಗೆ ತಂದು ಏನೆಲ್ಲ ಫಸಲು ಪಡೆದ ಪತ್ರಕರ್ತನ ಪ್ರಯೋಗಶಾಲೆಯ ಕಥನವೊಂದು ಇಲ್ಲಿದೆ.
‘‘ಪತ್ರಕರ್ತನಾಗುವುದೆಂದರೆ -ಅದು ಕೇವಲ ನೌಕರಿಯಲ್ಲ, ವೃತ್ತಿಯಲ್ಲ, ಅದೊಂದು ದೀಕ್ಷೆ; ಜೀವನವನ್ನು ಮುಡಿಪಾಗಿಡಬೇಕಾದ ಒಂದು ಧರ್ಮ.’’
‘‘ಈ ದಿನಗಳಲ್ಲಿ ನೀವು ಅದೆಷ್ಟೇ ಯತ್ನಿಸಿದರೂ ಮುಖ್ಯವಾಹಿನಿಯಲ್ಲಿ ಧೀಮಂತ ಪತ್ರಕರ್ತನಾಗಿರುವುದು ಸಾಧ್ಯವಿಲ್ಲ. ಅಲ್ಲಿ ನಿಮ್ಮ ಸತ್ಯಕ್ಕೆ ಸ್ಥಾನವೇ ಇಲ್ಲ. ನೀವು ವೃತ್ತಿಧರ್ಮಕ್ಕೆ ಬದ್ಧರಾಗಿರಬೇಕೆಂದರೆ, ಜನಪರ ಪತ್ರಕರ್ತನಾಗಬೇಕೆಂದರೆ ಈ ನಿಮ್ಮ ಮಾಮೂಲು ಶಸ್ತ್ರಾಸ್ತ್ರಗಳನ್ನು ಕಳಚಿಟ್ಟು ಬರಬೇಕು. ಗೆರಿಲ್ಲಾ ಪತ್ರಕರ್ತರಾಗಬೇಕು.’’
‘‘ಪತ್ರಕರ್ತನ ಬದ್ಧತೆಯೆಂದರೆ ಅವನ ಒಳದನಿಗೆ ಇರುವ ಬದ್ಧತೆ, ಅಷ್ಟೆ.’’
ಈಮೇಲಿನ ಆದರ್ಶದ ಮಾತುಗಳು ನೆನಪಾದಾಗಲೆಲ್ಲ ನಾನು ಬೊಕ್ಕ ತಲೆಯನ್ನು ಸವರಿಕೊಳ್ಳುತ್ತ, ಕನ್ನಡಿಯಲ್ಲಿ ನನ್ನ ಸುಕ್ಕುಗಟ್ಟಿದ ಮುಖವನ್ನು ನೋಡುತ್ತೇನೆ. ಸದ್ಯ, ಬೆನ್ನೆಲುಬು ನೇರವಾಗಿಯೇ ಇದೆ. ನಿವೃತ್ತನಾಗಿ ಒಂದೂವರೆ ದಶಕಗಳೇ ಕಳೆದವು. ವೃತ್ತಿಯಲ್ಲಿ ಇದ್ದಷ್ಟು ದಿನ ನಾನು ಅದಕ್ಕೆ ನಿಷ್ಠನಾಗಿದ್ದೆನೇ? ಅದನ್ನೊಂದು ದೀಕ್ಷೆಯೆಂದು ಪರಿಗಣಿಸಿದ್ದೇನೇ? ನಾನು ವೃತ್ತಿಗೆ ಮೌಲ್ಯವನ್ನು ಕೊಟ್ಟೆನೇ ಅಥವಾ ಈ ವೃತ್ತಿಯಲ್ಲಿ ನನ್ನ ಮೌಲ್ಯವನ್ನು ಹೆಚ್ಚಿಸಿಕೊಂಡೆನೆ? ನೆನಪಿನ ಹಾಳೆಗಳು ಸರಸರ ಮಗುಚಿಕೊಳ್ಳುತ್ತವೆ.
ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಪರಿಸರ ವಿಜ್ಞಾನದ ಪದವಿ ಪಡೆದು, ನಾನು ನೈನಿತಾಲ್ ವಿವಿಯಲ್ಲಿ ಅಧ್ಯಾಪಕನಾಗಿ ಕೆಲಸಕ್ಕೆ ಸೇರಿದೆ. ಪರಿಸರ ವಿಜ್ಞಾನವೂ ದೇಶಕ್ಕೆ ಹೊಸದು, ಅದಕ್ಕೆಂದೇ ಉಪನ್ಯಾಸಕ ಹುದ್ದೆಯೂ ದೇಶಕ್ಕೆ ಹೊಸದು. ನೈನಿತಾಲ್ ಚಿಕ್ಕ ಊರು. ಗ್ರಂಥಾಲಯದಲ್ಲಿ ಪುಸ್ತಕಕ್ಕೂ ತತ್ವಾರ, ಲ್ಯಾಬಿನಲ್ಲಿ ಸಲಕರಣೆಗಳಿಗೂ ತತ್ವಾರ. ಹೇಗೋ ಒಂದು ವರ್ಷ ಪೂರೈಸಿ ನಾನು ಮಾರ್ಗ ಬದಲಿಸಲು ನಿರ್ಧರಿಸಿ 1980ರಲ್ಲಿ ಪ್ರಜಾವಾಣಿ ಸೇರಿದೆ. ವಿಜ್ಞಾನ ಮತ್ತು ಅಭಿವೃದ್ಧಿ ಬಾತ್ಮೀದಾರ ಎಂಬ ಹುದ್ದೆಗೆ ನನ್ನ ನೇಮಕವಾಯಿತು. ನನಗೆ ಬೆಂಗಳೂರು ಹೊಸದು. ಕನ್ನಡ ಪತ್ರಿಕೋದ್ಯಮದಲ್ಲಿ ಈ ಹುದ್ದೆಯೂ ಹೊಸದು. ನನ್ನನ್ನು ‘ಪ್ರಜಾವಾಣಿ’ ಕಚೇರಿಯ ಯಾವ ವಿಭಾಗದಲ್ಲಿ ಕೂರಿಸಬೇಕು ಎಂಬುದು ಯಾರಿಗೂ ಸ್ಪಷ್ಟವಿರಲಿಲ್ಲ. ನನ್ನ ಮೇಲಧಿಕಾರಿ ಯಾರು ಎಂಬುದು ಕೂಡ ಯಾರಿಗೂ ಸ್ಪಷ್ಟ ಇರಲಿಲ್ಲ. ಏಕೆಂದರೆ ನನ್ನನ್ನು ಇಂಟರ್‌ವ್ಯೂ ಮಾಡಿ, ಈ ಹುದ್ದೆ ಕೊಟ್ಟವರು ಡೆಕ್ಕನ್ ಹೆರಾಲ್ಡ್‌ನಎಡಿಟರ್ ಆಗಿದ್ದ (ಹಾಗೂ ಕಂಪೆನಿಯ ಮಾಲಕರಾಗಿದ್ದ) ಹರಿಕುಮಾರ್. ಅವರು ದಿನದಿನದ ಆಗುಹೋಗುಗಳ ಬಗ್ಗೆ ‘ಪ್ರಜಾವಾಣಿ’ಯ ಕಡೆ ತಲೆ ಹಾಕುತ್ತಿರಲಿಲ್ಲ. ನನಗೆ ಪ್ರಜಾವಾಣಿಯಲ್ಲಿ ಯಾರ ಪರಿಚಯವೂ ಇರಲಿಲ್ಲ. ಗಿಜಿಗುಡುವ ಅಷ್ಟೊಂದು ಪತ್ರಕರ್ತರ ಮಧ್ಯೆ ನಾನು ಅದೃಶ್ಯ ಬೇತಾಳನಂತೆ ಓಡಾಡಿಕೊಂಡಿದ್ದೆ. ಸೈನ್ಸ್ ಆ್ಯಂಡ್ ಡೆವಲಪ್‌ಮೆಂಟ್ ಕರೆಸ್ಪಾಂಡೆಂಟ್. ಅಲ್ಲಿದ್ದ ಯಾರಿಗೂ ನನ್ನ ಹುದ್ದೆಯ ಹೆಸರೇ ಗೊತ್ತಿರಲಿಲ್ಲ. ಅಂತೂ ಎರಡು ದಿನಗಳ ನಂತರ ವರದಿಗಾರರ ವಿಭಾಗದಲ್ಲಿ ಒಂದು ಕುರ್ಚಿ ಸಿಕ್ಕಿತು. ಆ ವಿಭಾಗಕ್ಕೆ ಬಾಸ್ ಆಗಿದ್ದವರು ಪ್ರಚಂಡ ರಾಜಕೀಯ ವಿಶ್ಲೇಷಕ ರಘುರಾಮ ಶೆಟ್ಟಿ. ಅವರು ನನಗೂ ಬಾಸ್ ಆಗಿದ್ದರೇ? ಅವರಿಗೂ ಗೊತ್ತಿರಲಿಲ್ಲ, ನನಗೂ ಗೊತ್ತಿರಲಿಲ್ಲ! ನನಗೆ ಅಸೈನ್‌ಮೆಂಟ್ ಹಾಕಬೇಕೆ, ಬಿಡಬೇಕೆ ಎಂಬ ಬಗ್ಗೆ ಅವರಿಗೆ ಸ್ಪಷ್ಟವಿರಲಿಲ್ಲ. ಮೂಲತಃ ನನಗೆ ಅಸೈನ್ಮೆಂಟ್ ಎಂದರೆ ಏನೆಂಬುದೇ ಗೊತ್ತಿರಲಿಲ್ಲ. ಪತ್ರಿಕೋದ್ಯಮಕ್ಕೆ ನಾನು ಹೊಸಬ. ದಿಲ್ಲಿಯಲ್ಲಿದ್ದಾಗ ಆಗಾಗ ಹಿಂದೂಸ್ಥಾನ್ ಟೈಮ್ಸ್‌ಗೆ ಪರಿಸರ ಸಂಬಂಧಿ ಲೇಖನ ಹಾಗೂ ಇಲ್ಲಿ ಸುಧಾಕ್ಕೆ ಹಾಸ್ಯ, ಕತೆ, ಅದೂ ಇದೂ ಬರೆದು ಅಂಚೆಗೆ ಹಾಕುತ್ತಿದ್ದೆನೇ ವಿನಾ ಪತ್ರಿಕಾ ಕಚೇರಿಗೆ ಎಂದೂ ಕಾಲಿಟ್ಟಿರಲಿಲ್ಲ. ಇಲ್ಲಿ ಉಪಸಂಪಾದಕರು ಒಂದು ಕಡೆ, ಕ್ರೀಡಾ ವಿಭಾಗದವರು ಇನ್ನೊಂದು ಕಡೆ, ವರದಿಗಾರರು ಮತ್ತೊಂದು ಕಡೆ, ಪುರವಣಿಯವರು ಮಗದೊಂದು ಕಡೆ -ಹೀಗೆ ವಿಭಜಿಸಿ ಕೂರುತ್ತಾರೆ ಎಂಬುದೂ ಗೊತ್ತಿರಲಿಲ್ಲ. ಪ್ರಜಾವಾಣಿಯ ಸಂಪಾದಕರ (ವೈ.ಎನ್.ಕೃಷ್ಣಮೂರ್ತಿ-ವೈಎನ್‌ಕೆ) ಅವರ ಕೋಣೆಗೆ ಯಾವಾಗ ಬೇಕೋ ಆವಾಗ ನುಗ್ಗಬಾರದು ಎಂಬುದೂ ಗೊತ್ತಿರಲಿಲ್ಲ. ನುಗ್ಗುತ್ತಿದ್ದೆ. ಬೇರೆ ಯಾವುದೋ ಸಂದರ್ಭದಲ್ಲಿ ಅವರು ಅರ್ಜೆಂಟಾಗಿ ನನಗೆ ಬರಹೇಳಿದಾಗ ನಾನೆಲ್ಲೋ ಬೆಂಗಳೂರು ಪೇಟೆ ಸುತ್ತುತ್ತಿರುತ್ತಿದ್ದೆ. ನನಗೆ ಡ್ಯೂಟಿ ಟೈಮ್ ಕೂಡ ಗೊತ್ತಿರಲಿಲ್ಲ. ಸೈನ್ಸ್ ಸ್ಟೋರಿ ಹುಡುಕಿಕೊಂಡು ಎಲ್ಲೆಲ್ಲೋ ಅಲೆಯುತ್ತಿದ್ದೆ. ಹುಡುಕಿ ತಂದುಕೊಟ್ಟ ಸ್ಟೋರಿಗಳು ಬೈಲೈನ್ ಸಮೇತ ಮುಖಪುಟದಲ್ಲಿ ಪ್ರಕಟವಾಗುತ್ತಿದ್ದವು. ಬೈಲೈನ್ ಎಂದರೆ ಏನು, ಅದಕ್ಕೆ ಯಾಕಿಷ್ಟು ಮಹತ್ವ ಎಂಬುದು ಕೂಡ ಗೊತ್ತಿರಲಿಲ್ಲ. ಕಚೇರಿಯಲ್ಲಿ ನನ್ನ ಕೆಲಸ ಮುಗಿದ ಮೇಲೆ ಬೇರೆಯವರ ವಿಭಾಗದಲ್ಲಿ ತಲೆತೂರಿಸಲು ಹೋಗುತ್ತಿದ್ದೆ. ಅಲ್ಲಿನವರು ನನಗಾಗಿ ಕುರ್ಚಿ ಬಿಟ್ಟು ಸರಿಯುತ್ತಿರುವುದನ್ನು ಗಮನಿಸಿದಾಗಲೇ ನನಗೆ ಬೈಲೈನ್ ಮಹತ್ವ ಗೊತ್ತಾಗಿದ್ದು.
ಈ ಸಂದರ್ಭದಲ್ಲೇ ಬೇಡ್ತಿ ಚಳವಳಿ ಆರಂಭವಾಗಿತ್ತು. ಆ ನದಿಗೆ ಅಣೆಕಟ್ಟು ಬೇಕೆ ಬೇಡವೇ ಎಂಬ ಬಗೆಗಿನ ವಿವಾದಗಳು ಬೆಂಗಳೂರಿನಲ್ಲಿ ಪ್ರತಿಧ್ವನಿಸತೊಡಗಿದವು. ನಾನೂ ಆ ಬೇಡ್ತಿ ಭಾಗದವನೇ ಆಗಿದ್ದರಿಂದ, ಈಗಾಗಲೇ ಕೇರಳದ ಸೈಲೆಂಟ್ ವ್ಯಾಲಿ ಅಣೆಕಟ್ಟನ್ನು ಏಕೆ ಕೈಬಿಟ್ಟರೆಂಬ ಬಗ್ಗೆ ಸುಧಾದಲ್ಲಿ ನಾನೇ ದಿಲ್ಲಿಯಲ್ಲಿದ್ದಾಗ ಲೇಖನ ಬರೆದಿದ್ದರಿಂದ, ಮಳೆಕಾಡುಗಳ ಮಹತ್ವದ ಬಗ್ಗೆ ಓದಿಕೊಂಡಿದ್ದರಿಂದ, ಸರಣಿ ವರದಿಗಳನ್ನು ಬರೆದೆ. ಸಹಜವಾಗಿ ಬೇಡ್ತಿಯ ಪರಿಸರ ಹೋರಾಟಗಾರರು ನನ್ನನ್ನು ಉಪನ್ಯಾಸಕ್ಕೆ ಬೇರೆ ಬೇರೆ ಊರುಗಳಿಗೆ ಕರೆಯತೊಡಗಿದರು. ನಾನು ಮತ್ತೊಮ್ಮೆ ಅರೆಕಾಲಿಕ ಉಪನ್ಯಾಸಕನೇ ಆಗಿಬಿಟ್ಟೆ. ಡಾ. ಶಿವರಾಮ ಕಾರಂತರೂ ಪಶ್ಚಿಮ ಘಟ್ಟಗಳ ವಿನಾಶದ ಬಗ್ಗೆ ಆಗಾಗ ಮಾತಾಡತೊಡಗಿದ್ದರು. ಮುಂದಿನ ಮೂರು ವರ್ಷಗಳಲ್ಲಿ ಪಶ್ಚಿಮಘಟ್ಟಗಳಲ್ಲಿ ಒಂದರಮೇಲೊಂದು ಅಭಿವೃದ್ಧಿ ಯೋಜನೆಗಳು ದಾಳಿ ಇಟ್ಟವು. ಬಿಸಗೋಡ್ ಎಂಬಲ್ಲಿ ಮ್ಯಾಂಗನೀಸ್ ಗಣಿಗಾರಿಕೆ, ಕಾಳಿ ಕಣಿವೆಯ ಧ್ವಂಸಕಾರ್ಯ, ಕೈಗಾದಲ್ಲಿ ಅಣುಸ್ಥಾವರ, ಮಲೆನಾಡಿನಲ್ಲಿ ನೀಲಗಿರಿ ತೋಪುಗಳ ಸರಮಾಲೆ-ಹೀಗೆ ಎಲ್ಲಕ್ಕೂ ವಿರೋಧದ ನಿಲುವುಗಳೇ ನನ್ನ ವರದಿಗಳಲ್ಲಿ ಕಾಣತೊಡಗಿದವು. ವಿಜ್ಞಾನ ಮತ್ತು ಅಭಿವೃದ್ಧಿ ಬಾತ್ಮೀದಾರನಾದ ನಾನು ಅಭಿವೃದ್ಧಿ ವಿರೋಧಿ ಬಾತ್ಮೀದಾರ ಆಗಿಬಿಟ್ಟೆ. ನನ್ನ ಹುದ್ದೆಗೇ ಸಂಚಕಾರ ಬಂತು. ನೌಕರಿ ಹೋಗಲಿಲ್ಲ ಅನ್ನಿ. ‘ಅಭಿವೃದ್ಧಿ ಕರೆಸ್ಪಾಂಡೆಂಟ್’ ಬದಲಿಗೆ ಫೀಚರ್ ರೈಟರ್ ಎಂಬ ಇನ್ನೊಂದು (ಅದೂ ಕನ್ನಡಕ್ಕೆ ಹೊಸದೇ) ಹುದ್ದೆ ನನ್ನ ಪಾಲಿಗೆ ಬಂತು.
ಕುದುರೆಮುಖಕ್ಕೆ ಮಂಗಳಾರತಿ
ವರದಿಗಾರರು ನಿರ್ಲಿಪ್ತರಾಗಿರಬೇಕು ಎಂದು ಪತ್ರಿಕೋದ್ಯಮದ ನೀತಿ ಸಂಹಿತೆ ಹೇಳುತ್ತದೆ. ಅದನ್ನು ನನಗೆ ಆಗ ಯಾರೂ ಹೇಳಿರಲಿಲ್ಲ. ನಾನು ಹಾಗೆ ನಿರ್ಲಿಪ್ತ (ನ್ಯೂಟ್ರಲ್) ಆಗಿರಲಿಲ್ಲ. ಅಭಿವೃದ್ಧಿ ಯೋಜನೆಗಳ ದಾಂಗುಡಿಯ ಬಗ್ಗೆ ನಾನು ಅಸಹಿಷ್ಣುವಾಗಿದ್ದೆ. ಆ ದಾಂಗುಡಿ ಅದೆಷ್ಟು ಪ್ರಬಲವಾಗಿತ್ತೆಂದರೆ ನನ್ನ ಪಿಎಚ್‌ಡಿಯನ್ನೇ ಅದು ಹೊಸಕಿ ಹಾಕಿತ್ತು.
ಅದರ ಹಿನ್ನೆಲೆ ಹೀಗಿದೆ: ಕಬ್ಬಿಣದ ಅದುರಿನ ರಫ್ತಿನ ಅರ್ಥಶಾಸ್ತ್ರದ ಬಗ್ಗೆ ನಾನು ಜವಾಹರಲಾಲ್ ನೆಹರೂ ವಿವಿಯಲ್ಲಿ (ಜೆಎನ್‌ಯು) ಡಾಕ್ಟರೇಟ್ ಮಾಡುತ್ತಿದ್ದೆ. ಕುದುರೆಮುಖ, ಸಂಡೂರು, ಮಧ್ಯಪ್ರದೇಶದ ಬೈಲಾದಿಲ್ಲಾ, ಒಡಿಶಾದ ಕಿರುಬುರು ಗಣಿಗಳಿಗೆಲ್ಲ ಹೋಗಿ ಅದುರಿನ ರಫ್ತಿನ ವೈಖರಿಯನ್ನು ಕಣ್ಣಾರೆ ಕಂಡಿದ್ದೆ. ಆ ಅದುರನ್ನು ಅಗೆದು ಸಾಗಿಸುವ ಕೂಲಿ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ನಾವು ಅದನ್ನು ಜಪಾನ್, ಇರಾನ್‌ಗಳಿಗೆ ಮಾರುತ್ತಿದ್ದೆವು. ಹಾಗೆ ನಮ್ಮ ದೇಶದ ಸಂಪತ್ತನ್ನು ನಷ್ಟಕ್ಕೆ ಮಾರುತ್ತಿರುವುದನ್ನು ಪ್ರಶ್ನಿಸಿ ನಾನು ಬರೆದ ಸಂಶೋಧನ ಪ್ರಬಂಧ ಅಂದಿನ ಸಂಸತ್ತಿನಲ್ಲೂ ಚರ್ಚೆಗೆ ಬಂದಿತ್ತು. ಡಾಲರ್‌ಗಳಿಕೆಗಾಗಿ ದೇಶವನ್ನೇ ಮಾರುತ್ತಿದ್ದೀರೆಂದು ಟೀಕಿಸಿ ಪ್ರತಿಪಕ್ಷಗಳು ಕಾಂಗ್ರೆಸ್ ಸರಕಾರಕ್ಕೆ ಮುಜುಗರ ಉಂಟು ಮಾಡಿದ್ದವು. ಅದಾಗಿ ಮೂರು ತಿಂಗಳಲ್ಲೇ ತುರ್ತುಸ್ಥಿತಿ ಘೋಷಣೆಯಾದಾಗ ನನ್ನ ಮುಂದಿನ ಸಂಶೋಧನೆಗೆ ದಿಗ್ಬಂಧನ ಹಾಕಲಾಯಿತು. ನನ್ನ ಪಾಲಿಗೆ ಎಲ್ಲ ಸಚಿವಾಲಯಗಳ ಬಾಗಿಲು ಮುಚ್ಚಿದವು. ನಾನು ಜೆಎನ್‌ಯು ಬಿಟ್ಟು ದಿಕ್ಕುದೆಸೆಯಿಲ್ಲದೆ ಅಲೆಯಬೇಕಾಯಿತು. ಕರ್ನಾಟಕಕ್ಕೆ ಬಂದಮೇಲೆ, ಕುದುರೆಮುಖದ ಗಣಿಗಾರಿಕೆಯ ಅಧ್ವಾನಗಳನ್ನು ಮತ್ತೊಮ್ಮೆ ವರದಿಗಾರನಾಗಿ ನೋಡುವ ಭಾಗ್ಯ ಬಂತು. ಅಲ್ಲಿಗೆ ದಿಬ್ಬಣದಂತೆ ಬಂದಿಳಿದ ಫ್ರೆಂಚ್ ಯಂತ್ರೋಪಕರಣಗಳನ್ನು ಹಾಗೂ ಅವನ್ನು ಫ್ರಾನ್ಸ್‌ನಿಂದ ತರಿಸುತ್ತಿದ್ದ ದಲ್ಲಾಳಿಗಳ ವೈಭವದ ಬದುಕನ್ನು ಸಮೀಪದಿಂದ ನೋಡುವ ಭಾಗ್ಯವೂ ಲಭಿಸಿತು. ಅಭಿವೃದ್ಧಿಯ ಮಹಾರಥವನ್ನು ನಡೆಸುವವರು ರಾಷ್ಟ್ರದ ಏನೆಲ್ಲ ಸಂಪತ್ತನ್ನು ಬಲಿಹಾಕಿ, ಸ್ವಂತಕ್ಕೆ ಏನೇನನ್ನೆಲ್ಲ ಗಳಿಸುತ್ತಾರೆ ಎಂಬುದು ಕಣ್ಣಿಗೆ ಕಟ್ಟಿದಂತಿತ್ತು. ನಾನು ನಿರ್ಲಿಪ್ತನಾಗಿರಲು ಸಾಧ್ಯವೆ?
ವರದಿಗಾರನಾಗಿ ನಾನು ಗಣಿಗಾರಿಕೆಯ ಬಗ್ಗೆ, ಬೃಹತ್ ಅಣೆಕಟ್ಟು ಯೋಜನೆಗಳ ಬಗ್ಗೆ ಅಥವಾ ಕೈಗಾ ಪರಮಾಣು ಯೋಜನೆಯ ಬಗ್ಗೆ ಬರೆಯುವಾಗ ಲಾಭಗಳಿಗಿಂತ ಹಾನಿಯ ಬಗೆಗೇ ಹೆಚ್ಚಿಗೆ ಬರೆಯುತ್ತಿದ್ದೆ. ಅದರಲ್ಲೂ ಕೈಗಾ ಯೋಜನೆಯ ಬಗ್ಗೆ ತುಸು ಜಾಸ್ತಿಯೇ ಬರೆಯತೊಡಗಿದ್ದೆ. ಯೋಜನೆಯ ಲಾಭವನ್ನು ಹೇಗೂ ಅಟಾಮಿಕ್ ಎನರ್ಜಿ ಆಯೋಗದ ಅಧ್ಯಕ್ಷ ಡಾ. ರಾಜಾ ರಾಮಣ್ಣ ಮತ್ತು ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಬಣ್ಣಿಸುತ್ತಿದ್ದರು. ನಾನು ವಿರೋಧ ಪಕ್ಷದ ನೆಲೆಯಲ್ಲಿ ಪರಮಾಣು ಶಕ್ತಿಯ ಅಪಾಯಗಳ ಬಗ್ಗೆ ಬರೆಯುತ್ತಿದ್ದೆ. ಏಕೆಂದರೆ ಆ ಬಗ್ಗೆ ಜನಸಾಮಾನ್ಯರಿಗೆ ಏನೂ ಗೊತ್ತಿರಲಿಲ್ಲ; ಅಧಿಕಾರಿ ವರ್ಗದವರಿಗೂ ಗೊತ್ತಿರಲಿಲ್ಲ. ವಿರೋಧ ಪಕ್ಷದವರಿಗೆ ಹಾಗಿರಲಿ, ಆಡಳಿತ ಪಕ್ಷದವರಿಗೂ ಗೊತ್ತಿರಲಿಲ್ಲ. ವಿಜ್ಞಾನಿಗಳು ಅದರ ಥಳಕು ಮುಖಗಳ ಬಗ್ಗೆ ಮಾತ್ರ ಹೇಳುತ್ತಿದ್ದರು. ನಾನು ಯುರೋಪ್, ಅಮೆರಿಕಗಳಲ್ಲಿ ನಡೆಯುತ್ತಿರುವ ಪರಮಾಣು ವಿರೋಧಿ ಹೋರಾಟಗಳ ಬಗ್ಗೆ ಮಾಹಿತಿ ಕಲೆಹಾಕಿ ಪ್ರಜಾವಾಣಿ, ಸುಧಾದಲ್ಲಿ ಬರೆಯುತ್ತಿದ್ದೆ. ಸುರಕ್ಷಿತ, ಬದಲೀ ಶಕ್ತಿಮೂಲಗಳ ಬಗ್ಗೆ ಬರೆಯುತ್ತಿದ್ದೆ. ಅಭಿವೃದ್ಧಿಯ ಬದಲೀ ವಿನ್ಯಾಸಗಳ ಬಗ್ಗೆ ಬರೆಯುತ್ತಿದ್ದೆ. ಅಂದಿನ ದಿನಗಳಲ್ಲಿ ಅವೆಲ್ಲ ಹೊಸ ವಿಚಾರಗಳಂತೆ ಕಾಣುತ್ತಿದ್ದುದರಿಂದ ಸಾಕಷ್ಟು ಚರ್ಚೆಗಳೂ ನಡೆಯುತ್ತಿದ್ದವು. ಅದರ ವಿರುದ್ಧ ಚಳವಳಿಗಳೂ ಆರಂಭವಾಗಿದ್ದವು. ಅಣುಶಕ್ತಿ ಆಯೋಗದ ಅಧ್ಯಕ್ಷರಾಗಿದ್ದ ಡಾ. ರಾಜಾ ರಾಮಣ್ಣನವರನ್ನು ಕೈಗಾ ಸಮೀಪದ ಮಲ್ಲಾಪುರದಲ್ಲಿ ಸ್ಥಳೀಯರು ಘೇರಾವ್ ಮಾಡಿದಾಗ ಅನೇಕರು ಕೈಯಲ್ಲಿ ಸುಧಾ ಪತ್ರಿಕೆಯನ್ನು ಹಿಡಿದೇ ಪ್ರಶ್ನೆಗಳ ಸುರಿಮಳೆ ನಡೆಸುತ್ತಿದ್ದರು; ಅಂದಿನ ಸಚಿವ ಆರ್.ವಿ. ದೇಶಪಾಂಡೆ ಅಣುಶಕ್ತಿಯ ಬಗ್ಗೆ ತಿಳಿದುಕೊಳ್ಳಲೆಂದು ನನ್ನನ್ನು ತಮ್ಮ ಮನೆಗೇ ಕರೆಸಿಕೊಂಡು, ಇನ್ನೊಂದಿಬ್ಬರು ಶಾಸಕರನ್ನು ಕೂರಿಸಿಕೊಂಡು ಸ್ಲೈಡ್‌ಶೋ ಉಪನ್ಯಾಸ ಕೇಳಿಸಿಕೊಂಡಿದ್ದರು.
ಕೊಳ್ಳೇಗಾಲದ ಕಾಡುಗಳನ್ನು ಧ್ವಂಸ ಮಾಡಿ ಗ್ರಾನೈಟ್ ಕೊಳ್ಳೆ ಹೊಡೆಯುವವರ ಬಗ್ಗೆ ನಾನು ಬರೆದ ಡಾಲರ್ ಬಂಡೆಗಳು ಹೆಸರಿನ ತನಿಖಾ ವರದಿಯನ್ನು ಹಿಡಿದು, ವಿಧಾನಸಭೆಯಲ್ಲಿ ಆಳುವ ಪಕ್ಷವನ್ನು ಯಾರೋ ಕೆಣಕಿದ್ದರು; ಬಳ್ಳಾರಿಯ ಸಮೀಪ ಕೊಳಾರ ಎಂಬಲ್ಲಿನ ಔದ್ಯಮಿಕ ಮಾಲಿನ್ಯದ ಬಗ್ಗೆ ಬರೆದಾಗ ಯಲ್ಲಪ್ಪ ರೆಡ್ಡಿಯವರ ನೇತೃತ್ವದಲ್ಲಿ ವೀಕ್ಷಣಾ ಸಮಿತಿಯೊಂದು ಹೋಗಿ ಅಲ್ಲಿನ ಎಲ್ಲ ಕಾರ್ಖಾನೆಗಳನ್ನೂ ಬಂದ್ ಮಾಡಿಸಿತ್ತು. ಇವೆಲ್ಲ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಿದ್ದವು. ನ್ನ ಬರವಣಿಗೆ ಹರಿತವಾಗುತ್ತಿತ್ತು.
‘ರಾಕ್ಷಸ’ನನ್ನು ಹೊಡೆದು ಹಾಕಿದ ಸಿಂಗ್
ಹರಿಹರದಲ್ಲಿರುವ ಬಿರ್ಲಾ ಫ್ಯಾಕ್ಟರಿಯ ಸುತ್ತ ಓಡಾಡಿ ಬಂದು, ಅದರ ವಿರುದ್ಧ ‘ಸುಧಾ’ದಲ್ಲಿ ಮುಖಪುಟ ಲೇಖನವನ್ನು ಬರೆದು ಸಂಪಾದಕ ಎಂ.ಬಿ.ಸಿಂಗ್ ಅವರಿಗೆ ಕೊಟ್ಟಾಗ, (ಎಂದೂ ನನ್ನ ಲೇಖನದ ಒಂದಕ್ಷರವನ್ನೂ ಬದಲಿಸದ ಅವರು) ನನ್ನನ್ನು ಚೇಂಬರ್ ಒಳಕ್ಕೆ ಕರಸಿದರು. ಲೇಖನದಲ್ಲಿ ‘ಕೊಳೆ ಕಕ್ಕುವ ಇಂಥ ರಾಕ್ಷಸ ಫ್ಯಾಕ್ಟರಿಗಳು’ ಎಂಬ ಸಾಲಿನ ಕೆಳಗೆ ಕೆಂಪು ಶಾಯಿಯ ಗೆರೆ ಹಾಕಿ, ‘ಇಂಥ ಪದಗಳು ಬೇಕಾ?’ ಎಂದು ಕೇಳಿದರು. ‘ಮುಂದೆ ಓದಿ ಸರ್, ಬೇಡಾಂದರೆ ‘ರಾಕ್ಷಸ’ ಹೊಡೆದು ಹಾಕಿ’ ಎಂದು ಹೇಳಿ ನಾನು ಈಚೆ ಬಂದಿದ್ದೆ. ತುಸು ಸಮಯದ ನಂತರ ನನ್ನ ಲೇಖನ ಕಂಪೋಸಿಂಗ್ ವಿಭಾಗಕ್ಕೆ ಹೋದಾಗ ನಾನೂ ಮೆಲ್ಲಗೆ ಅಲ್ಲಿಗೆ ಹೋಗಿ ಮತ್ತೊಮ್ಮೆ ಹಸ್ತಪ್ರತಿಯನ್ನು ನೋಡಿದೆ. ಅದರಲ್ಲಿದ್ದ ರಾಕ್ಷಸ ಎಂಬ ಪದವನ್ನು ಸಂಪಾದಕರು ಹೊಡೆದು ಹಾಕಿ, ಮತ್ತೆ ಆ ಪದ ಹಾಗೇ ಇರಲೆಂದು ಅದರ ಮೇಲೆ ಡಬಲ್ ಟಿಕ್ ಮಾಡಿದ್ದರು! ನನಗೆ ಕೋಡು ಮೂಡಿತು. ನಾನೇ ತೆಗೆದಿದ್ದ ಚಿತ್ರಗಳೊಂದಿಗೆ ಲೇಖನ ಪ್ರಕಟವಾಯಿತು. ಕೆಲವೇ ದಿನಗಳಲ್ಲಿ ರಾಣೆಬೆನ್ನೂರಿನಲ್ಲಿ ಬಿರ್ಲಾ ಫ್ಯಾಕ್ಟರಿಯ ವಿರುದ್ಧ ಚಳವಳಿ ಆರಂಭವಾಯಿತು. ಪಶ್ಚಿಮಘಟ್ಟಗಳ ಮರಗಳ್ಳರ ವಿರುದ್ಧ, ವಿನಾಶಕಾರಿ ನೆಡುತೋಪುಗಳ ವಿರುದ್ಧ, ಶರಾವತಿ ಟೇಲ್‌ರೇಸ್ ಅಣೆಕಟ್ಟಿನ ವಿರುದ್ಧ, ಗಣಿಗಾರಿಕೆಯ ವಿರುದ್ಧ ನಾನು ಬರೆಯುತ್ತ ಹೋದಂತೆಲ್ಲ ಹೊಸ ಹೊಸ ಚಳವಳಿಗಳು ಹುಟ್ಟಿಕೊಳ್ಳುತ್ತಿದ್ದವು; ಅಷ್ಟೇ ಅಲ್ಲ, ನನ್ನನ್ನೂ ಹೆಡಮುರಿಗೆ ಕಟ್ಟಿ ಚಳವಳಿಗಳ ಧಾರೆಯತ್ತ ಸೆಳೆಯುತ್ತಿದ್ದವು. ಪರಿಸರ ಚಳವಳಿಗಳಿಗೆ ಗಾಳಿಯೂದುವ ಭರದಲ್ಲಿ ನಾನು ಸತ್ಯಾಗ್ರಹಿಗಳಿಗಾಗಿ ಕರಪತ್ರಗಳನ್ನೂ ಬರೆದು ಕೊಡುತ್ತಿದ್ದೆ. ನನ್ನ ಬೆಂಬಲಕ್ಕಿದ್ದ ಸ್ವಾತಂತ್ರ್ಯಯೋಧ ಎಚ್.ಎಸ್. ದೊರೆಸ್ವಾಮಿಯವರು ನಾನು ಬರೆದಿದ್ದನ್ನು ಓದಿ ಓಕೆ ಮಾಡಿದ ನಂತರ ಅವು ಅಚ್ಚಾಗುತ್ತಿದ್ದವು-ನನ್ನದೇ ಖರ್ಚಿನಲ್ಲಿ. ಮುದ್ರಿತ ಕರಪತ್ರಗಳ ಬಂಡ್ಲ್‌ಗಳು ಪರಿಸರ ಹೋರಾಟಗಾರರ ಸಂಘಟನೆಗಳಿಗೆ ಹೋಗುತ್ತಿದ್ದವು. ಅದೂ ಅಲ್ಲದೆ, ಶಾಲೆ ಕಾಲೇಜುಗಳಲ್ಲಿ ಉಪನ್ಯಾಸ ಮಾಡಬಲ್ಲವರಿಗಾಗಿ ನಾನು ಸ್ಲೈಡ್‌ಗಳನ್ನೂ, ಬ್ಯಾನರ್-ಪೋಸ್ಟರ್‌ಗಳನ್ನೂ ತಯಾರಿಸಿಕೊಡುತ್ತಿದ್ದೆ. ಜಿಲ್ಲಾ ಕೇಂದ್ರಗಳ ಚಿಕ್ಕಪುಟ್ಟ ಪತ್ರಿಕೆಗಳಿಗೆ ಉಚಿತವಾಗಿ ಲೇಖನಗಳನ್ನು ಅದೆಷ್ಟೊ ಬಾರಿ ಹೆಸರಿಲ್ಲದೇ ಬರೆಯುತ್ತಿದ್ದೆ. ನಮ್ಮ ಕೆಲವು ಉತ್ಸಾಹಿ ಚಳವಳಿಗಾರರ ಜೊತೆ ಸೇರಿ ‘ಸಿಟಿಝನ್ಸ್ ಅಗೆನ್‌ಸ್ಟ್ ನ್ಯೂಕ್ಲಿಯರ್ ಎನರ್ಜಿ’ (ಕೇನ್) ಎಂಬ ಸಂಸ್ಥೆಯನ್ನು ಹುಟ್ಟುಹಾಕಿ (ಕನ್ನಡದಲ್ಲಿ ಅದಕ್ಕೆ ‘ಅಣುಶಕ್ತಿ ವಿರೋಧ ನಾಗರಿಕ ಶಕ್ತಿ’ -ಅ.ವಿ.ನಾ.ಶ ಎಂಬ ಹೆಸರು ಕೊಟ್ಟು) ಅದರ ಲೆಟರ್ ಹೆಡ್‌ಗೆ ಬೇಕಿದ್ದ ಲೋಗೊವನ್ನು ಸುಧಾ ಕಲಾವಿದ ಚಂದ್ರನಾಥ್ ಅವರಿಂದ ಉಚಿತವಾಗಿ ಬರೆಸಿದ್ದೆ. ನಡುರಾತ್ರಿಯಲ್ಲಿ ಇಂಕ್ ಮತ್ತು ಬ್ರಶ್ ಹಿಡಿದು, ಸಂಗಡಿಗರ ಜೊತೆಗೆ ರೇಸ್‌ಕೋಸ್ ರಸ್ತೆಗೆ ಹೋಗುತ್ತಿದ್ದೆ. ಎದುರಿನ ಖಾಲಿ ಗೋಡೆಗಳ ಮೇಲೆ ನಾವು ಬಿರ್ಲಾ ವಿರುದ್ಧ, ಭೋಪಾಲ್ ಫ್ಯಾಕ್ಟರಿ ವಿರುದ್ಧ, ಗಣಿದೊರೆಗಳ ವಿರುದ್ಧ ಸ್ಲೋಗನ್ ಬರೆಯುತ್ತಿದ್ದೆವು. ಗಸ್ತು ಪೊಲೀಸರು ಬಂದು ಏನಿದೆಂದು ಕೇಳಿದಾಗ ಉಶ್, ಪತ್ರಕರ್ತರು ಇವರೆಲ್ಲ... ಎಂದು ಹೇಳಿ ಯಾರದ್ದೋ ಐಡಿ ಕಾರ್ಡ್ ತೋರಿಸಿ ಅವರನ್ನು ಸಾಗಹಾಕುತ್ತಿದ್ದೆವು.
ಗಣಿಯ ಹೆಬ್ಬಾಗಿಲಲ್ಲಿ ಹೆಬ್ಬಾರ್
ಚೆರ್ನೊಬಿಲ್ ಪರಮಾಣು ದುರಂತ ನಡೆದ ಒಂದು ತಿಂಗಳ ನಂತರ ನಾವು ಕೈಗಾ ಸಮೀಪದ ಅರೆಬೈಲ್ ಘಟ್ಟದ ಶೇವ್ಕಾರ್ ಎಂಬ ಹಳ್ಳಿಯ ಕಾನನದ ನಡುವೆ ಎರಡು ದಿನಗಳ ಪರಮಾಣು ವಿರೋಧಿ ಕಾರ್ಯಾಗಾರ ನಡೆಸಿದೆವು. ಶಿರಸಿ ಕಾಲೇಜಿನ ಪ್ರಿನ್ಸಿಪಾಲರಾಗಿ ನಿವೃತ್ತರಾಗಿದ್ದ (ನಂತರ ಮುಖ್ಯಮಂತ್ರಿ ಗುಂಡೂರಾಯರಿಗೆ ಮಾಧ್ಯಮ ಸಲಹೆಗಾರರಾಗಿದ್ದ) ಎಲ್.ಟಿ. ಶರ್ಮಾ ಎಂಬ ಅದ್ಭುತ ವ್ಯಕ್ತಿ ನಮ್ಮ ಬೆಂಬಲಕ್ಕಿದ್ದರು. ಅರೆಬೈಲ್ ಕಾರ್ಯಾಗಾರಕ್ಕೆಂದು ನಾನು ಕರಪತ್ರವನ್ನು ತಯಾರಿಸಿ ‘ಚೆರ್ನೊಬೈಲ್‌ನಿಂದ ಅರೆಬೈಲ್‌ವರೆಗೆ’ ಎಂದು ಹೆಸರು ಕೊಟ್ಟಿದ್ದೆ. ಅದೇ ಅರೆಬೈಲ್ ಘಟ್ಟದ ದಟ್ಟ ಅರಣ್ಯದಲ್ಲಿ ಯುರೇನಿಯಂ ಗಣಿಗಾರಿಕೆ ಆರಂಭವಾಗಿತ್ತು. ಜಗತ್ತಿನ ಬೇರೆಲ್ಲೂ ದಟ್ಟ ಮಳೆಕಾಡಿನಲ್ಲಿ ಅಣುಸ್ಥಾವರ ಇಲ್ಲ. ಅಂಥ ಕಾಡಿನಲ್ಲಿ ಯುರೇನಿಯಂ ಗಣಿಗಾರಿಕೆಯೂ ನಡೆಯುತ್ತಿಲ್ಲ.; ಅದೂ ಇಲ್ಲಿದ್ದ ಹಾಗೆ, ಅಣುಸ್ಥಾವರದ ಸಮೀಪದಲ್ಲೇ ಯುರೇನಿಯಂ ಗಣಿ ಇದ್ದ ದಾಖಲೆಯಂತೂ ಇಲ್ಲವೇ ಇಲ್ಲ ಎಂದು ಬರೆದಿದ್ದೆ. ನಮ್ಮ ಕಾರ್ಯಾಗಾರ ಯುರೇನಿಯಂ ಗಣಿಯ ಬಳಿಯ ಗಮ್ಯಸ್ಥಾನದಲ್ಲಿ ನಡೆಯುತ್ತಿತ್ತು. ಗುಪ್ತವಾಗಿ ನಾನು ಒಬ್ಬಂಟಿಯಾಗಿ ಯುರೇನಿಯಂ ಅಗೆತದ ಫೋಟೊ ತೆಗೆಯಲು ಹೋಗಿ, ಗುತ್ತಿಗೆದಾರರು ನನ್ನ ಕ್ಯಾಮರಾ ಕಸಿದುಕೊಂಡು ಹೊರಟೇ ಹೋದರು. ನನ್ನನ್ನೇ ಹೊಸಕಿ ಹಾಕಿ ಹೋಗಬಹುದಿತ್ತು, ಯಾಕೋ ಅವರು ಮನಸ್ಸು ಮಾಡಲಿಲ್ಲ. ಓಡೋಡಿ ನಮ್ಮ ಕ್ಯಾಂಪಿಗೆ ಬಂದೆ. ನಮ್ಮಾಂದಿಗೆ ಚಳವಳಿಯಲ್ಲಿ ಪಾಲ್ಗೊಂಡಿದ್ದ ಶಿವರಾಮ್ ಹೆಬ್ಬಾರ್ ಎಂಬ ಯುವಕ, ‘ನಿಲ್ಲಿ, ನಾನು ಕ್ಯಾಮರಾವನ್ನು ತರಿಸಿಕೊಡುತ್ತೇನೆ’ ಎಂದು ಹೇಳಿ ಎಲ್ಲಿಗೋ ಹೋಗಿ, ಯಾರಿಗೋ ಫೋನ್ ಮಾಡಿ ಅದೇ ದಿನ ಸಂಜೆಯೊಳಗೆ ನನ್ನ ಕ್ಯಾಮರಾ ಇಡಿಯಾಗಿ ಮರಳಿ ಸಿಕ್ಕಿತ್ತು. ‘ಎಂಥ ಪ್ರಭಾವಿ ಯುವಕ ಈತ’ ಎಂದು ನಾನು ಅಚ್ಚರಿಪಟ್ಟಿದ್ದೆ. ಇದೇ ಹೆಬ್ಬಾರ್ ಮುಂದೆ ಕಾಂಗ್ರೆಸ್ ಪಕ್ಷದ ಎಮ್ಮೆಲ್ಲೆಯಾಗಿ ಎರಡು ಬಾರಿ ಚುನಾಯಿತಗೊಂಡು, ಇದೀಗ ಬಿಜೆಪಿಗೆ ದಾಟಲು ಅರ್ಹತೆ ಪಡೆಯುವ ನಿಟ್ಟಿನಲ್ಲಿ ಅನರ್ಹ ಶಾಸಕ ಎಂಬ ಹಣೆಪಟ್ಟಿ ಹೊತ್ತು ಕೂತಿದ್ದಾರೆ.
ಅವರ ವಿಚಾರ ಹೇಗೂ ಇರಲಿ, ನಾನು ಮಾತ್ರ ಪತ್ರಕರ್ತನಿಗಿರುವ ಎಲ್ಲ ಗಡಿಮಿತಿಗಳನ್ನು ಮೀರಿ ವರ್ತಿಸುತ್ತಿದ್ದೆನೆಂದು ಕಾಣುತ್ತದೆ. ಆದರೆ ನಾನು ಬರೆಯುವ ವಿಷಯಗಳಿಗೆಲ್ಲ ನಿಖರ ಆಧಾರಗಳನ್ನು ಇಟ್ಟುಕೊಂಡಿರುತ್ತಿದ್ದೆ ಅನ್ನಿ. ನಾಡಿನ ಬಹುಪಾಲು ಪರಿಸರ ಚಳವಳಿಗಳಿಗೆ ಹೀಗೆ ದೇಶವಿದೇಶಗಳ ಪರಿಸರ ಧ್ವಂಸದ ಚಿತ್ರ-ಮಾಹಿತಿ ಪೂರೈಕೆ ಮಾಡುತ್ತಲೇ ಅದೆಷ್ಟೋ ಬಾರಿ ಡ್ಯೂಟಿಗೆ ರಜೆ ಹಾಕಿ ಚಳವಳಿಗಳಲ್ಲಿ ಭಾಗವಹಿಸುತ್ತಿದ್ದೆ. ಅಲ್ಲಿ ವೇದಿಕೆಯ ಮೇಲೆ ಭಾಷಣ ಮುಗಿಸಿ ಕೆಳಗಿಳಿದ ನಂತರ ಎಲ್ಲರೂ ಫಲಕ ಹಿಡಿದು, ಘೋಷಣೆ ಕೂಗುತ್ತ ಬೀದಿ ಮೆರವಣಿಗೆಗೆ ಹೊರಡುತ್ತಿದ್ದರು. ನನ್ನ ಕೈಗೂ ಒಂದು ಫಲಕ ಹಿಡಿಸುತ್ತಿದ್ದರು. ನನಗೆ ಇಷ್ಟವಿಲ್ಲದಿದ್ದರೂ ನಾನೂ ನೇರ ಪ್ರತಿಭಟನೆಯಲ್ಲಿ ಪಾಲುದಾರನಾಗಬೇಕಾಗಿ ಬರುತ್ತಿತ್ತು. ಫಲಕ ಹಿಡಿದ ಮೇಲೆ ಘೋಷಣೆ ಕೂಗಬೇಕಲ್ಲ? ಪಥಸಂಚಲನ ಮಾಡಲೇಬೇಕಲ್ಲ. ಅದೂ ಅಲ್ಲದೆ ಸ್ಥಳೀಯ ಪತ್ರಕರ್ತರು ಆಗಾಗ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ ವಕ್ತಾರನೂ ನಾನೇ ಆಗುತ್ತಿದ್ದೆ. ಪತ್ರಕರ್ತ ಮಾಡುವ ಕೆಲಸಗಳೆ ಇವೆಲ್ಲ?
ನನ್ನ ವೃತ್ತಿಯ ಅನೂಚಾನ ನೈತಿಕತೆಯ ಗಡಿದಾಟುವ ಪ್ರಸಂಗವೂ ಬಂತು. ಡಾ. ಶಿವರಾಮ ಕಾರಂತರನ್ನು ಪರಿಸರ ಅಭ್ಯರ್ಥಿಯಾಗಿ, ಚುನಾವಣೆಗೆ ನಿಲ್ಲಿಸಿದೆವು. ಅದಕ್ಕೆ ಬೇಕಿದ್ದ ಸಾಹಿತ್ಯ, ದೇಣಿಗೆ ಎತ್ತುವ ಬಿಲ್‌ಪಟ್ಟಿ, ಪ್ರಚಾರ ಪರಿಕರಗಳ ಸಿದ್ಧತೆಯಲ್ಲಿ ಪಾಲ್ಗೊಂಡಿದ್ದಂತೂ ಆಯಿತು. ಕೊನೆಗೆ ಕಚೇರಿಗೆ ರಜೆ ಹಾಕಿ ಚುನಾವಣಾ ಪ್ರಚಾರಕ್ಕೆ ನೇರವಾಗಿ ಪಾಲ್ಗೊಳ್ಳಲೇಬೇಕಾಯಿತು. ನಾಗತಿಹಳ್ಳಿ, ನಾನು ಮತ್ತು ಸುರೇಶ್ ಹೆಬ್ಳೀಕರ್ ತಂಡ ಕೆನರಾ ಕ್ಷೇತ್ರದ ಊರೂರಿಗೆ ಹೋಗಿ ಭಾಷಣ ಕುಟ್ಟಿದ್ದೇ ಕುಟ್ಟಿದ್ದು. ವೇದಿಕೆಯೇ ಸಿಗದ ಕೆಲವು ಕಡೆ ನಟ ಹೆಬ್ಳೀಕರರ ಅಂಬಾಸಡರ್ ಕಾರಿನ ಮೇಲೆ ನಿಂತೇ ಕುಟ್ಟಬೇಕಾಯಿತು. ಕಾರಂತರು ಬರೆದ ಪ್ರಮುಖ ಕಾದಂಬರಿಗಳ ಪಟ್ಟಿ, ಅವರಿಗೆ ಲಭಿಸಿದ ಗೌರವ ಡಾಕ್ಟರೇಟ್‌ಗಳ ಪಟ್ಟಿ ನಮ್ಮ ಭಾಷಣಗಳಲ್ಲಿ ಉದ್ದವಾಗುತ್ತ ಹೋದಷ್ಟೂ ಸಾಮಾನ್ಯ ಮತದಾರರು ನಮ್ಮಿಂದ ದೂರವಾಗುತ್ತಿರುವುದು ನಮ್ಮ ಗಮನಕ್ಕೆ ಬರುತ್ತಿತ್ತು. ‘ಕಾರಂತ ಹೋಟೆಲ್’ ಹೆಸರಿನ ಜನಪ್ರಿಯ ಖಾನಾವಳಿ ಇದ್ದ ಊರುಗಳಲ್ಲಂತೂ ಈ ಕಾರಂತರು ಹೋಟೆಲ್ ಮಾಲಕರಲ್ಲ ಎಂದು ಬಿಂಬಿಸುವುದೇ ಕಷ್ಟಕರವಾಗಿತ್ತು. ಇಂಗ್ಲಿಷ್ ಪತ್ರಿಕೆಗಳಲ್ಲಿ ನಮ್ಮ ಅಭ್ಯರ್ಥಿಯ ಪರ ಮೂರಂಗುಲ ಉದ್ದದ ವರದಿ ಬರುವಂತೆ ಮಾಡುವುದು ಇನ್ನೂ ಕಷ್ಟವಿತ್ತು. ಅಂತೂ ನಾವೆಲ್ಲ ಸೇರಿ ಕಾರಂತರನ್ನು ಬೀಳಿಸಿದೆವು. ಅವರ ವಿರುದ್ಧ ಸ್ಪರ್ಧಿಸಿದ್ದ ಅನಂತನಾಗ್ ಕೂಡ ಬಿದ್ದರು. ನಾಗೇಶ ಹೆಗಡೆಯೂ (ಕೆಲಸ ಕಳೆದುಕೊಂಡು) ಬೀಳುತ್ತಾನೆ ಎಂಬೆಲ್ಲ ಮಾತುಗಳು ಆಗ ಚಾಲ್ತಿಯಲ್ಲಿದ್ದವು. ಆಳುವ ಪಕ್ಷದ ಅಭ್ಯರ್ಥಿಯಾಗಿದ್ದ ಅನಂತನಾಗ್ ವಿರುದ್ಧವೇ ಬಹಿರಂಗ ಪ್ರಚಾರಕ್ಕೆ ಹೋಗಿದ್ದ ಪತ್ರಕರ್ತ ‘ಮನೆಗೆ ಹೋಗುವುದು ಗ್ಯಾರಂಟಿ’ ಎಂದು ಶಾಮರಾಯರ ಗರಡಿಯಲ್ಲಿ ಕೆಲಸಕ್ಕಿದ್ದವರು ಹೇಳಿದ್ದರು. ಆದರೆ ಹಾಗೇನೂ ಆಗಲಿಲ್ಲ.
ನಿರ್ಜನ ರಸ್ತೆಯಲ್ಲಿ ರೋಡ್ ಶೋ
ಈಗೇನೋ ಚುನಾಣೆಯ ಸಂದರ್ಭದ ಎಲ್ಲ ಮೆರವಣಿಗೆಗಳಿಗೆ ರೋಡ್‌ಶೋ ಎಂತಲೇ ಹೇಳುತ್ತಿದ್ದಾರೆ. ‘ರೋಡ್‌ಶೋ’ ಪದವನ್ನು ಈ ಭಾಗದಲ್ಲಿ ಮೊದಲು ಬಳಕೆಗೆ ತಂದಿದ್ದು ಈ ಬರಹಗಾರನೇ. ಪ್ರಜಾವಾಣಿಯ ಲೈಬ್ರರಿಗೆ ಬರುತ್ತಿದ್ದ ನ್ಯೂಯಾರ್ಕ್ ಟೈಮ್ಸ್ ಮತ್ತು ಗಾರ್ಡಿಯನ್‌ನಂಥ ಪತ್ರಿಕೆಗಳಲ್ಲಿ ಈ ಪದಗಳು ಕಂಡುಬರುತ್ತಿದ್ದವು. ‘ನಾವೂ ರೋಡ್ ಶೋ ಮಾಡೋಣ’ ಎಂದು ಹೋರಾಟದ ಗೆಳೆಯರಿಗೆ ನಾನು ಸೂಚಿಸಿದ್ದೆ. ರಸ್ತೆಯ ಮೇಲೆ ನಿಜವಾಗಿಯೂ ‘ಶೋ’ ಕೊಡಲೆಂದು ಕಿರು ನಾಟಕವನ್ನೂ ರೂಪಿಸಿದ್ದೆ. ಅದನ್ನು ನಾವೆಲ್ಲ ಸೇರಿ ರಸ್ತೆಗೂ ಇಳಿಸಿದ್ದೂ ಆಯಿತು. ಪರಮಾಣು ಸ್ಥಾವರದ ಆಸ್ಫೋಟದ ನಂತರ ಕಾಣಬಹುದಾದ ವಿಕಾರ ರೂಪದ ಮುಖವಾಡಗಳನ್ನು ರಚಿಸಿ, ಧರಿಸಿ, ನಾವು ಘೋಷಣೆ ಕೂಗುತ್ತ ವಿಧಾನ ಸೌಧ, ಬಸವೇಶ್ವರ ವೃತ್ತದ ಮೂಲಕ ರೇಸ್‌ಕೋರ್ಸ್ ರಸ್ತೆಗೆ ಹೋಗುತ್ತಿದ್ದೆವು. ಪ್ರತಿ ನೂರಿನ್ನೂರು ಮೀಟರಿನ ನಂತರ ಸಣ್ಣ ಸಿಳ್ಳೆ ಹಾಕಿದಾಗ ಮುಂದಿದ್ದ ಮುಕುಟಧಾರಿಗಳೆಲ್ಲ ಧೊಪ್ಪನೆ ಕೆಳಕ್ಕೆ ಬೀಳುವ ನಾಟಕ ಆಡುತ್ತಿದ್ದೆವು. ಚಣಕಾಲ ಹಾಗೇ ಮೂರ್ಛೆ ಬಿದ್ದಂತಿದ್ದು ಆಮೇಲೆ ಮತ್ತೆ ಜಾಥಾ ಮುಂದಕ್ಕೆ ಹೋಗುತ್ತಿತ್ತು. ನಿಜವಾದ ಅರ್ಥದಲ್ಲಿ ರೋಡ್-ಶೋ ಅದಾಗಿತ್ತು. ಬಹಳಷ್ಟು ದಿನಪತ್ರಿಕೆಗಳಲ್ಲಿ ಚಂದದ ಫೋಟೊ ಪ್ರಕಟವಾದವು.
ಒಮ್ಮೆ ಹೀಗಾಯಿತು: ಪ್ರಧಾನಿ ರಾಜೀವ್‌ಗಾಂಧಿ ಬೆಂಗಳೂರಿಗೆ ಬರುವವರಿದ್ದರು. ಇಲ್ಲಿ ಕೈಗಾ ವಿರೋಧಿ ಕೂಗು ಅದೆಷ್ಟೇ ಜೋರಾಗಿದ್ದರೂ ಕೇಂದ್ರ ಸರಕಾರ ಕ್ಯಾರೇ ಅಂದಿರಲಿಲ್ಲ. ಕಾಳಿ ಕಣಿವೆಯ ದಟ್ಟ ಅರಣ್ಯದಲ್ಲಿ ಅಗೆತ ಕೆರೆತವನ್ನು ಮುಂದುವರಿಸಿತ್ತು. ರಾಜೀವ್ ಗಾಂಧಿಯವರಿಗೆ ಖುದ್ದಾಗಿ ಮನವಿಪತ್ರ ಕೊಡಬೇಕೆಂದು ಚಳವಳಿಗಾರರು ಬಯಸಿದ್ದರು. ಆದರೆ ಅವರ ಭೇಟಿಗೆ ಯಾರೂ ಅವಕಾಶವನ್ನೇ ಕೊಡಲಿಲ್ಲ. ಅವರು ಮರುದಿನ ದಿಲ್ಲಿಗೆ ಮರಳಿ ಹೋಗುವವರಿದ್ದರು. ನಸುಕಿನ ನಾಲ್ಕು ಗಂಟೆಗೆ ವಿಮಾನ ನಿಲ್ದಾಣಕ್ಕೆ ಹೋಗುತ್ತಾರೆ ಎಂಬ ಖಚಿತ ಸೂಚನೆ ನಮಗೆ ಸಿಕ್ಕಿತ್ತು. ಪತ್ರಕರ್ತರಿಗೆ ಅಂಥದ್ದೆಲ್ಲ ಮಾಹಿತಿ ಸಲೀಸಾಗಿ ಸಿಗತ್ತದೆ ತಾನೆ? ನಿಲ್ದಾಣದ ಬಳಿ ಬ್ಯಾನರ್ ಹಿಡಿದು ಶಾಂತವಾಗಿ ನಿಲ್ಲಲು ನಮಗೆ ಪೊಲೀಸರ ಅನುಮತಿ ಸಿಕ್ಕಿತು. ರಸ್ತೆ ತಡೆ ಮಾಡುವಂತಿಲ್ಲ, ಘೋಷಣೆ ಕೂಗುವಂತಿಲ್ಲ ಇತ್ಯಾದಿ ನಿರ್ಬಂಧ ಹೇರಲಾಯಿತು.
‘ಸರಿ’ ಎಂದು ಒಪ್ಪಿದ ನಾವು ಚಿಂತೆಗೆ ಬಿದ್ದೆವು. ಪ್ರಧಾನಿಯೇನೋ ಬ್ಲ್ಯಾಕ್ ಕ್ಯಾಟ್ ಕಮಾಂಡೊಗಳಿಂದ ಸುತ್ತುವರಿದ ಜೀಪಿನಲ್ಲಿ ಸರ್ರೆಂದು ಸಾಗಿ ಹೋಗುತ್ತಾರೆ. ಅದೂ ನಸುಕಿನ ನಾಲ್ಕುಗಂಟೆಯ ಅರೆಗತ್ತಲಲ್ಲಿ. ಅವರಿಗೆ ಕಾಣುವಂಥ ದೊಡ್ಡ ಬ್ಯಾನರ್ ಹೇಗಿರಬೇಕು? ನಮ್ಮ ಬಳಿ ಹಣವೂ ಇರಲಿಲ್ಲ. ಅಷ್ಟು ಸಮಯವೂ ಇರಲಿಲ್ಲ. ಏನು ಮಾಡೋಣ? ನನಗೊಂದು ಉಪಾಯ ಹೊಳೆಯಿತು. ಪ್ರಜಾವಾಣಿಯ ಮುದ್ರಣಕ್ಕೆಂದು ಬಳಸುವ ನ್ಯೂಸ್‌ಪ್ರಿಂಟ್‌ಗಳ ದೊಡ್ಡ ದೊಡ್ಡ ರೀಮ್‌ಗಳು ಆಗೆಲ್ಲ ಮಹಾತ್ಮಾಗಾಂಧಿ ರಸ್ತೆಯ ಕಚೇರಿಗೇ ಬರುತ್ತಿದ್ದವು. ಪ್ರತಿ ರೀಮ್‌ಗಳ ಎರಡೂ ಪಕ್ಕಗಳಿಗೆ ಜೋಡಿಸಿದ್ದ ದೊಡ್ಡ, ಮೂರಡಿ ವ್ಯಾಸದ ವೃತ್ತಾಕಾರದ ಬಿಳಿ ರಟ್ಟುಗಳನ್ನು ರದ್ದಿ ರೂಪದಲ್ಲಿ ತೂಕಕ್ಕೆ ಹಾಕುತ್ತಿದ್ದರು. ನಾನು ಗುತ್ತಿಗೆದಾರನಿಗೆ ಹತ್ತು ರೂಪಾಯಿ ಕೊಟ್ಟು ಹತ್ತು ರಟ್ಟುಗಳನ್ನು ಖರೀದಿಸಿದೆ. ಒಂದೊಂದು ರಟ್ಟಿನ ಮೇಲೆ ದೊಡ್ಡ ಗಾತ್ರದ ಒಂದೊಂದು ಇಂಗ್ಲಿಷ್ ಅಕ್ಷರವನ್ನು ನಾನೇ ಬರೆದೆ. ಎಸ್‌ಟಿಒಪಿ ಕೆಎಐಜಿಎ (ಸ್ಟಾಪ್ ಕೈಗಾ) ಎಂಬ ಒಂಬತ್ತು ಅಕ್ಷರಗಳ ಒಂಬತ್ತು ಚಕ್ರಗಳು ತಯಾರಾದವು. ಅಲ್ಲೇ ಹಿಂಬದಿಯ ಚರ್ಚ್ ಬೀದಿಯ ಬದಿಯ ಗೋಡೆಯ ಮೇಲೆ ಅವನ್ನೆಲ್ಲ ಒರಗಿಸಿ ಇಟ್ಟು, ನಸುಕಿನ ಮೂರು ಗಂಟೆಗೆ ಚಳವಳಿಗೆ ಬಂದವರ ಮೂಲಕ ಆಟೊದಲ್ಲಿ ಹಾಕಿಸಿ ವಿಮಾನ ನಿಲ್ದಾಣದ ಸಮೀಪ, ದೊಮ್ಮಲೂರಿನ ರಸ್ತೆ ತಿರುವಿನ ಆಯಕಟ್ಟಿನ ಸ್ಥಾನದಲ್ಲಿ ಸಾಲಾಗಿ ಚಕ್ರ ಹಿಡಿದು ನಿಂತೆವು. ಒಂದಿಷ್ಟು ವಾಹನಗಳು ಭರ್ರನೆ ಸಾಗಿದವು. ಸಾಲಿನ ಮಧ್ಯೆ ಸಾಗುತ್ತಿದ್ದ ಒಂದು ಜೀಪಿನಲ್ಲಿ ನಾಲ್ಕು ಸಶಸ್ತ್ರ ಯೋಧರು ತಮ್ಮ ದೇಹವನ್ನು ವಿಚಿತ್ರ ಭಂಗಿಯಲ್ಲಿ ಹೊರಕ್ಕೆ ಚಾಚಿ ಕುಕ್ಕರಗಾಲಿನಲ್ಲಿ ಕೂತಿದ್ದರು. ಅದೇ ವಾಹನದಲ್ಲಿ ರಾಜೀವ್ ಇದ್ದಾರೆ ಎಂದು ಯಾರೊ ಹೇಳಿದರು. ಅವರು ಇದ್ದರೊ, ನಿದ್ದೆ ಮಾಡುತ್ತಿದ್ದರೊ ಯಾರಿಗೆ ಗೊತ್ತು?
ಅದು ನಮ್ಮ ನಸುಕಿನ ರೋಡ್ ಶೋ ಆಗಿತ್ತು. ಅದನ್ನು ಯಾರೂ ನೋಡಿದಂತಿಲ್ಲ. ಮಬ್ಬುಗತ್ತಲಲ್ಲಿ ನಾವೇ ತೆಗೆದ ಫೋಟೊ ಬಿಟ್ಟರೆ ಆ ಪ್ರದರ್ಶನದ ವರದಿ ಯಾವ ಪತ್ರಿಕೆಯಲ್ಲೂ ಬರಲಿಲ್ಲ. ನನ್ನನ್ನು ಕೆಲಸದಿಂದ ವಜಾ ಮಾಡಬೇಕೆಂದು ಯಾರೂ ‘ಪ್ರಿಂಟರ್ಸ್ ಮೈಸೂರು’ ಸಂಸ್ಥೆಯ ಮುಖ್ಯಸ್ಥರ ಮೇಲೆ ಒತ್ತಡ ಹೇರಿದಂತಿಲ್ಲ. ಅಥವಾ ಹೇರಿದ್ದರೂ ಅವರು ಅದನ್ನು ಮಾನ್ಯ ಮಾಡಿದಂತಿಲ್ಲ. ನನ್ನ ಅದೃಷ್ಟ ಗಟ್ಟಿ ಇತ್ತು; ಅದಕ್ಕಿಂತ ಮುಖ್ಯವಾಗಿ ಈ ಪತ್ರಿಕಾ ಸಂಸ್ಥೆಯವರು ಮತ್ತು ಸಂಪಾದಕರು ನೀಡಿದ ಬೆಂಬಲ ಗಟ್ಟಿ ಇತ್ತು. ನಾನು ಬರೆದ ಲೇಖನಗಳು ಶಾಲೆ-ಕಾಲೇಜುಗಳ ಪಠ್ಯಪುಸ್ತಕಗಳಲ್ಲಿ ಸೇರ್ಪಡೆಯಾದವು. ನನ್ನ ಲೇಖನಗಳ ಮೊದಲ ಸಂಕಲನ ‘ಇರುವುದೊಂದೇ ಭೂಮಿ’ ಪ್ರಕಟವಾಗಿ ಅದಕ್ಕೆ ಸಾಹಿತ್ಯ ಅಕಾಡಮಿಯ ಬಹುಮಾನವೂ ಬಂತು. ಇನ್ನೊಂದಕ್ಕೆ ಶಿವರಾಮ ಕಾರಂತ ಪ್ರಶಸ್ತಿ ಬಂತು. ಇತ್ತ ಜೆ.ಪಿ. ನಗರದಲ್ಲಿದ್ದ ನನ್ನ ಬಾಡಿಗೆ ಮನೆಯ ಬಳಿ ಮಾರುವೇಷದ ಪೊಲೀಸರು ಗಸ್ತು ತಿರುಗುತ್ತಿದ್ದುದನ್ನು ನನ್ನ ಪತ್ನಿ ಆಗಾಗ ಕಿಟಕಿಯ ಪರದೆಯ ಸಂದಿನಿಂದ ತೋರಿಸುತ್ತಿದ್ದಳು. ಬಿಡೆ, ನಮ್ಮ ರಕ್ಷಣೆಗೆಂದೇ ಅವರು ಕಾವಲು ಹಾಕಿರಬಹುದು ಎಂದು ನಾನು ಹೇಳುತ್ತಿದ್ದರೂ ಪರಿಸರವಾದಿಗಳ ಮುಂದಿನ ಸಭೆಗಳನ್ನು ನಮ್ಮ ಮನೆಯಲ್ಲೇ ನಡೆಸುವ ಬದಲು ಮೆಲ್ಲಗೆ ಬೇರೆ ಜಾಗ ಹುಡುಕಲು ಆರಂಭಿಸಿದ್ದೆ!
ಪತ್ರಕರ್ತರ ಸಂಘದಿಂದ-ಧಿಮ್ ರಂಗ
ಕೆಲಸ ಕಳೆದುಕೊಳ್ಳುವ ಬದಲು ನಾನು ಅಂತರ್‌ರಾಷ್ಟ್ರೀಯ ಮಟ್ಟಕ್ಕೆ ಏರುವಂತೆ ಮಾಡಿದ ಶ್ರೇಯ ನಮ್ಮ ಪತ್ರಕರ್ತರ ಸಂಘಟನೆಗೆ ಸೇರಬೇಕು. ಅದೇ ಮೊದಲ (ಮತ್ತು ಕೊನೆಯ) ಬಾರಿ ಎಂಬಂತೆ ಪತ್ರಕರ್ತರು ತಮ್ಮ ವೃತ್ತಿಧರ್ಮದ ಬಗ್ಗೆ ತಂತಮ್ಮಲ್ಲೇ ಸೆಮಿನಾರ್ ಮಾಡಲು ನಿರ್ಧರಿಸಿದರು. ಅದಕ್ಕೆ ಕಾರಣ ನನ್ನ ನಿತ್ಯದ ಒಡನಾಡಿಗಳಾಗಿದ್ದ ಜೆ. ರಾಮಮೂರ್ತಿ ಮತ್ತು ಯೂನಿಯನ್ ಲೀಡರ್ (ಕಲಾವಿದ) ಜಿ.ಕೆ. ಸತ್ಯ. ಆಗೆಲ್ಲ ಪ್ರಜಾವಾಣಿಯ ಸಹೋದ್ಯೋಗಿಗಳದ್ದೇ ಏಕಾಧಿಪತ್ಯವಿತ್ತು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಮೈಸೂರು ಪತ್ರಕರ್ತರ ಸಂಘ ಮತ್ತು ಪ್ರೆಸ್‌ಕ್ಲಬ್ ಎಲ್ಲ ಸೇರಿ ಒಂದು ವಿಚಾರ ಸಂಕಿರಣವನ್ನು ಸಂಘಟಿಸಿದ್ದರು. ‘ಪತ್ರಕರ್ತರ ಜವಾಬ್ದಾರಿಗಳು ಮತ್ತು ಸವಾಲುಗಳು’ ಕುರಿತು ದೇಶದ ಖ್ಯಾತ ಪತ್ರಕರ್ತರನ್ನು ಕರೆಸಿ, ನಾವೆಲ್ಲ ಕಬ್ಬನ್ ಪಾರ್ಕ್‌ನ ಎನ್‌ಜಿಒ ಸಭಾಭವನದಲ್ಲಿ ಸೇರಿ ನಡೆಸಿದ ಎರಡು ದಿನಗಳ, ಅಪ್ಪಟ ವೃತ್ತಿಪರ ಕಾರ್ಯಾಗಾರ ಅದಾಗಿತ್ತು. ಗೋವಾದ ಕ್ಲಾಡ್ ಅಲ್ವಾರೀಸ್, ದಿಲ್ಲಿಯ ಜನಾರ್ದನ್ ಠಾಕೂರ್, ಮುಂಬೈಯ ಡೆರಿಲ್ ಡಿಮಾಂಟ್ ಮುಂತಾದ ಖ್ಯಾತ ಪತ್ರಕರ್ತರು ಉಪನ್ಯಾಸ ನೀಡಿದರು. ನಮ್ಮ ಕೆಲವು ಪತ್ರಕರ್ತರೂ ತಂತಮ್ಮ ವಿಚಾರಗಳನ್ನು ಮಂಡಿಸಿದರು. ಪರಿಸರ ರಕ್ಷಣೆ ಮತ್ತು ಜರ್ನಲಿಸಂ ಕುರಿತ ನನ್ನ ಉಪನ್ಯಾಸ ಮುಗಿದ ನಂತರ ಕ್ಲಾಡ್ ಅಲ್ವಾರೀಸ್ ನನ್ನ ಬಳಿ ಬಂದರು. ‘ಮಲೇಶ್ಯಕ್ಕೆ ಹೋಗಿ ಬರ್ತೀರಾ? ಅಲ್ಲಿ ಜಾಗತಿಕ ಪರಿಸರ ಮೇಳ ನಡೆಯಲಿದೆ. ಪಶ್ಚಿಮಘಟ್ಟಗಳ ಸಂರಕ್ಷಣೆ ಕುರಿತು ನೀವು ಇಲ್ಲಿ ಮಾತಾಡಿದ ಹಾಗೆ ಅಲ್ಲಿನವರಿಗೂ ಒಂದು ಉಪನ್ಯಾಸ ಕೊಟ್ಟು ಬನ್ನಿ’ ಎಂದರು. ಅಲ್ಲಿಗೆ ಹೋದೆ. ಪೆನಾಂಗ್ ವಿವಿಯಲ್ಲಿ ನಡೆದ ಸಮ್ಮೇಳನದಲ್ಲಿ ನನ್ನ ಭಾಷಣ ಚೆನ್ನಾಗಿಯೇ ಆಯಿತು. ನಾನೇನೂ ಪ್ರಚಂಡ ವಾಗ್ಮಿಯೇನಲ್ಲ. ಆದರೆ ನಿಖರ ಅಂಕಿ-ಅಂಶಗಳು ಹಾಗೂ ಮನಕಲಕುವ ಚಿತ್ರಗಳೊಂದಿಗೆ ಉಪನ್ಯಾಸ ನೀಡುತ್ತಿದ್ದೆ. ನನ್ನ ಮಾತು ಮುಗಿದ ನಂತರ ಸ್ವಿಟ್ಸರ್‌ಲ್ಯಾಂಡ್‌ನ ರೇಡಿಯೊ ವರದಿಗಾರನೊಬ್ಬ ಬಂದು, ನಮ್ಮಲ್ಲಿಗೆ ಬರ್ತೀರಾ? ಎಂದು ಕೇಳಿದರು. ಆಫರ್ ಒಪ್ಪಿಕೊಂಡೆ. ಅಲ್ಲಿ ಝೂರಿಕ್‌ನಲ್ಲಿ ಸ್ವಿಸ್ ರೇಡಿಯೊದಲ್ಲಿ ಒಂದು ತಿಂಗಳ ಕೆಲಸ ಮಾಡುವ ಅವಕಾಶ ಸಿಕ್ಕಿತು. ಅದು ಮುಗಿದ ಮೇಲೆ ಹಾಂಗ್‌ಕಾಂಗ್‌ನಿಂದ ಕರೆ ಬಂತು. ಆಮೇಲೆ ನೈರೋಬಿ. ಬಳಿಕ ಅಮೆರಿಕದಲ್ಲಿ ಏಶ್ಯನ್ ಪರಿಸರ ಪತ್ರಕರ್ತರಿಗಾಗಿ ಏರ್ಪಡಿಸಿದ ಪ್ರವಾಸಕ್ಕೆ ಆಯ್ಕೆ. ಹೀಗೆ ಎಲ್ಲೆಲ್ಲೋ ಸುತ್ತಾಡಿ, ಬೆಂಗಳೂರಿನ ಬಾವುಟ ಹಾರಿಸಿ ಬರಲು ಇಲ್ಲಿಯ ಪತ್ರಕರ್ತರ ಸಂಘಟನೆ ಹಾಗೂ ಆಗಿನ ಪದಾಧಿಕಾರಿಗಳ ವೃತ್ತಿಪರ ಆಸಕ್ತಿಯೇ ಮೂಲ ಕಾರಣವಾಯಿತು. ಇದರ ಹಿಂದಿನ ನೀತಿಪಾಠವನ್ನು ನಾನೇನೂ ಇಲ್ಲಿ ಹೇಳಬೇಕಾಗಿಲ್ಲ.
‘ಕೆಲಸ ಕಳಕೊಳ್ತೀರಿ; ವ್ಯವಸ್ಥೆಯ ವಿರುದ್ಧ ತೀರಾ ಫಾಸ್ಟ್ ಹೋಗ್ತೀದೀರಿ, ಬ್ರೇಕ್ ಹಾಕಿ’ ಎಂದು ಕೆಲವು ಸಹೋದ್ಯೋಗಿಗಳು ನನಗೆ ಪ್ರೆಸ್‌ಕ್ಲಬ್‌ನಲ್ಲಿ ತಡರಾತ್ರಿಯ ಅಧಿವೇಶನದಲ್ಲಿ ಏರುದನಿಯಲ್ಲಿ ಕಿವಿಮಾತು ಹೇಳುತ್ತಿದ್ದರು. ಪ್ರಜಾವಾಣಿಯ ನ್ಯೂಸ್ ಎಡಿಟರ್ ಆಗಿದ್ದವರೊಬ್ಬರು, ‘ಅಲ್ಲಾರೀ ನಾಗೇಶ್, ರಾಜಾ ರಾಮಣ್ಣನವರ ವಿರುದ್ಧ ಬರೀತೀರಲ್ರೀ, ಅವರೆಲ್ಲಿ, ನೀವೆಲ್ಲಿ?’ ಎಂದು ಕಚೇರಿಯಲ್ಲೇ ಕೇಳಿದ್ದರು. ನಾನು ನಕ್ಕು, ಹಣೆಯಲ್ಲಿ ಏನು ಬರೆದಿದೆಯೊ ಆಗಲಿಬಿಡಿ, ಹರಿ-ಚಿತ್ತ! ನಾನು ಸುಳ್ಳೇನಾದರೂ ಬರೆದಿದ್ದರೆ ಹೇಳಿ ಎಂದು ಹೇಳಿದ್ದೆ. ಅದಾಗಿ ಕೆಲವೇ ದಿನಗಳಾಗಿದ್ದವಷ್ಟೆ. ಬ್ರಝಿಲ್‌ನಲ್ಲಿ ನಡೆಯಲಿರುವ ಪೃಥ್ವೀ ಶೃಂಗಸಭೆಗೆ ಪ್ರಜಾವಾಣಿಯ ವರದಿಗಾರನಾಗಿ ನಾನೇ ಹೋಗಬೇಕೆಂದು ಹರಿಕುಮಾರ್ ನನಗೆ ಸೂಚಿಸಿದರು.
ಸಾಕು ಬಿಡಿ, ಇನ್ನೂ ಎಷ್ಟೂಂತ ಕೊಚ್ಚಿಕೊಳ್ಳೋದು? ಇನ್ನೇನಿದ್ದರೂ ಕೊಚ್ಚಿಹೋದುದರ ಕತೆ. ಅಂತಿಮ ಫಲಿತಾಂಶ ಏನೆಂದರೆ-ಜಾಗತೀಕರಣವೆಂಬ ಸುನಾಮಿ ಬಂದು ನಮ್ಮ ನಾಡಿನ ಎಲ್ಲ ಬಗೆಯ ಚಳವಳಿಗಳೂ ಕೊಚ್ಚಿಕೊಂಡು ಹೋದವು. ಆ ಪ್ರಸಂಗವೂ ತುಸು ನಾಟಕೀಯವಾಗಿ ನಮ್ಮ ಕಣ್ಣೆದುರೇ ನಡೆಯಿತು. ಎಂಬತ್ತರ ದಶಕವಿಡೀ ನಾನಾ ಬಗೆಯ ಚಳವಳಿಗಳು ನಾಡಿನುದ್ದಕ್ಕೂ ಹಬ್ಬಿ ಹರಡಿದ್ದವು. ರೈತ ಚಳವಳಿ, ಪರಿಸರ ಚಳವಳಿ, ಗ್ರಾಹಕ ಚಳವಳಿ, ರಂಗ ಚಳವಳಿ, ಕಾರ್ಮಿಕ ಚಳವಳಿ, ದಲಿತ ಚಳವಳಿ, ಮಹಿಳಾ ಚಳವಳಿ, ವಿದ್ಯಾರ್ಥಿ ಚಳವಳಿ.. ಒಂದಕ್ಕೊಂದು ಪೂರಕವಾಗಿ, ಒಂದರಿಂದೊಂದು ಬೆಂಬಲ ಪಡೆಯುತ್ತ, ಮಹಾತ್ಮಾ ಗಾಂಧಿ ರಸ್ತೆಗಳಲ್ಲಿ ಪದೇ ಪದೇ ಮೆರವಣಿಗೆಗಳು ನಡೆಯುತ್ತಿದ್ದವು. ನಾವು ಪ್ರತಿ ರವಿವಾರವೂ ಬೆಂಗಳೂರಿನ ಗಾಂಧಿ ಭವನದಲ್ಲಿ ಸೇರಿ ಒಂದಲ್ಲ ಒಂದು ಚಳವಳಿಯ ರೂಪುರೇಷೆ ಸಿದ್ಧಪಡಿಸುತ್ತಿದ್ದೆವು. ಆಗ ಕಲರ್ ಟಿವಿ ಅದೇ ತಾನೆ ಬೆಂಗಳೂರಿಗೆ ಬಂತು. ರವಿವಾರ ಎಂದರೆ ರಾಮಾಯಣ, ಮಹಾಭಾರತದ ಧಾರಾವಾಹಿಯ ಶಂಖನಾದ ಮೊಳಗತೊಡಗಿತ್ತು. ಕ್ರಮೇಣ ನಮ್ಮ ಸಭೆಗೆ ಬರುವವರ ಸಂಖ್ಯೆ ಕಡಿಮೆಯಾಗುತ್ತ ಹೋಯಿತು. ಇತ್ತ ಐಟಿ ಯುಗವೂ ಕಾಲಿರಿಸಿತು. ಕರೆದಾಗಲೆಲ್ಲ ಬೀದಿಗಿಳಿದು ಬರುತ್ತಿದ್ದ ಯುವಜನರ ಸಂಖ್ಯೆ ಕಡಿಮೆಯಾಯಿತು. ಬೀದಿ ಬೀದಿಗಳಲ್ಲಿ ಯುವಕ ಯುವತಿಯರನ್ನು ಸೆಳೆಯುವ ಕಂಪ್ಯೂಟರ್ ತರಬೇತಿ ಕೇಂದ್ರಗಳು, ಸೈಬರ್ ಕೆಫೆಗಳು ತಲೆಯೆತ್ತಿದವು. ರಸ್ತೆಗಳು ಬಿಕೋ ಎನ್ನತೊಡಗಿದವು. ಮುದ್ರಣ ಮಾಧ್ಯಮಗಳ ಬೆಂಬಲದಿಂದಲೇ ಮೆರೆಯುತ್ತಿದ್ದ ಚಳವಳಿಗಳೆಲ್ಲ ಮರೆಯಾಗಿ, ಈಗ ಟಿವಿ ಮತ್ತು ಕಂಪ್ಯೂಟರ್ ಎಂಬ ಸೂಪರ್ ಮಾಧ್ಯಮಗಳು ಬಂದಮೇಲೆ ಮೂಲೆಗುಂಪಾದವು. ಕೊನೆಯ ಅಂಕದಲ್ಲಿ ಗಾಂಧಿ ಭವನಕ್ಕೆ ಮತ್ತೆ ಬರೋಣ. ಚಳವಳಿಗಳ ಯುಗ ಮುಗಿದು 20 ವರ್ಷಗಳ ನಂತರ, 2012ರಲ್ಲಿ ಗಾಂಧಿ ಭವನದಲ್ಲಿ ಪ್ರತಿಮಾಧ್ಯಮ ಪ್ರಶಸ್ತಿ (ಕೌಂಟರ್ ಮೀಡಿಯಾ ಅವಾರ್ಡ್) ಪ್ರದಾನ ಸಮಾರಂಭ ನಡೆಯಿತು. ಹೆಸರಾಂತ ಪತ್ರಕರ್ತ ಪಿ. ಸಾಯಿನಾಥ್ ಈ ಪ್ರಶಸ್ತಿಗಳ ಪ್ರಾಯೋಜಕರು. ಅವರು ತಮಗೆ ಹಿಂದೆ ಲಭಿಸಿದ್ದ ಮ್ಯಾಗ್ಸೆಸೆ ಪ್ರಶಸ್ತಿಯ ನಗದನ್ನು ಈ ಪ್ರಶಸ್ತಿಗೆಂದೇ ಮೀಸಲಿಟ್ಟಿದ್ದಾರೆ. ಈಗಿನ ಮುಖ್ಯವಾಹಿನಿಯ ಮಾಧ್ಯಮಗಳು ಜನಪರ ಹೋರಾಟಗಳನ್ನು ಕಡೆಗಣಿಸಿವೆ; ಆದುದರಿಂದ ಬದಲೀ ಮಾಧ್ಯಮಗಳ ಪತ್ರಕರ್ತರಿಗೆ ಉತ್ತೇಜನ ನೀಡುವುದು ಈ ಪ್ರಶಸ್ತಿಯ ಉದ್ದೇಶ. ಒಂದೊಂದು ವರ್ಷ ಒಂದೊಂದು ಭಾಷೆಯ ಇಬ್ಬರು ಪತ್ರಕರ್ತರನ್ನು ಆಯ್ದು ಗೌರವಿಸಲಾಗುತ್ತದೆ. 2012ರ ಪ್ರಶಸ್ತಿಗೆ ಕನ್ನಡ ಪತ್ರಕರ್ತರಿಬ್ಬರ ಹೆಸರು ಸೂಚಿಸಲೆಂದು ನಾನು ಮತ್ತು ಜಿ.ಎನ್. ಮೋಹನ್ ಕೂತು ಪಟ್ಟಿ ತಯಾರಿಸಿದೆವು. ವಿ.ಗಾಯತ್ರಿ ಮತ್ತು ಟಿ.ಕೆ.ದಯಾನಂದ್ ಹೆಸರನ್ನು ಆಯ್ಕೆ ಮಾಡಿದೆವು. ದೇವನೂರು ಮಹದೇವ್ ಪ್ರಶಸ್ತಿ ನೀಡಿದರು. ‘ಗೆರಿಲ್ಲಾ ಜರ್ನಲಿಸಂ’ ಬಗ್ಗೆ ಆಗ ಚರ್ಚೆಗೆ ಬಂತು. (ವಿಯೆಟ್ನಾಂ ಯೋಧರು ಸೈನ್ಯದಲ್ಲಿದ್ದುಕೊಂಡೇ ಸೈನ್ಯದಿಂದ ಬೇರೆಯಾಗಿ, ಒಂಟಿಯಾಗಿ ಅಲ್ಲಿ ಇಲ್ಲಿ ಅವಿತು, ಅನಿರೀಕ್ಷಿತ ತಾಣದಿಂದ ಅನಿರೀಕ್ಷಿತ ಶಸ್ತ್ರಪ್ರಯೋಗ ಮಾಡಿ ಶತ್ರುಗಳನ್ನು ಹೈರಾಣು ಮಾಡುತ್ತಾರೆ. ಅದಕ್ಕೆ ‘ಗೆರಿಲ್ಲಾ ವಾರ್‌ಫೇರ್’ ಅನ್ನುತ್ತಾರೆ.) ಅದೇ ಮಾದರಿಯನ್ನು ಪತ್ರಿಕಾವೃತ್ತಿಯ ನಾವೂ ಅನುಸರಿಸುವುದು ಹೇಗೆಂಬುದನ್ನು ಪಿ. ಸಾಯಿನಾಥ್ ಸಂಕ್ಷಿಪ್ತವಾಗಿ ಮುಂದಿಟ್ಟರು: ‘ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ನಿಮಗೆ ಅವಕಾಶ ಕಡಿಮೆ ಆಗುತ್ತಿದೆಯೇ? ಹಾಗೆಂದು ಚಿಂತಿಸಬೇಡಿ. ಅಲ್ಲಿದ್ದುಕೊಂಡೇ ಬದಲೀ ಮಾಧ್ಯಮಗಳತ್ತ, ಉಪಮಾಧ್ಯಮಗಳತ್ತ ಹೊರಳಿಕೊಳ್ಳಿ. ನೀವು ಕಿರುಪತ್ರಿಕೆಗಳಿಗೆ ಬರೆಯಿರಿ, ಕರಪತ್ರ ಬರೆಯಿರಿ, ಸಣ್ಣಪಟ್ಟಣಗಳಲ್ಲಿ ವೇದಿಕೆ ಏರಿರಿ, ಅನಾಮಿಕ ಓದುಗರಾಗಿ ನಿಮ್ಮದೇ ಪತ್ರಿಕೆಗೆ ಬರೆಯಿರಿ, ಇಮೇಲ್ ಬರೆಯಿರಿ...’
ಅವರು ಮುಂದೆ ಹೇಳಿದ್ದನ್ನು ನಾನು ಗ್ರಹಿಸುವ ಸ್ಥಿತಿಯಲ್ಲಿರಲಿಲ್ಲ. ನನ್ನದೇ ಕಳಚಿಬಿಟ್ಟ ಶಸ್ತ್ರಾಸ್ತ್ರಗಳ ಪಟ್ಟಿಯೇ ಕಣ್ಣೆದುರು ಬರತೊಡಗಿತ್ತು. ಕರಪತ್ರ, ಗೋಡೆಬರಹ, ರೋಡ್ ಶೋ, ತಾಲ್ಲೂಕುಗಳ ಸಣ್ಣ ಪತ್ರಿಕೆಗಳಲ್ಲಿ ಅನಾಮಿಕ ಬರಹ; ಅರೆಬೈಲ್ ಕಾಡಿನಲ್ಲಿ ಪತ್ತೇದಾರಿ, ಶರಾವತಿ ಕಣಿವೆಯಲ್ಲಿ ಸತ್ಯಾಗ್ರಹಿಗಳಿಗೆ ಭಾಷಣ ಇವೆಲ್ಲ ನೆನಪಾದವು. ಮುಖ್ಯವಾಹಿನಿಯಲ್ಲಿ ಬೈಲೈನ್ ವರದಿ ಬರುತ್ತಿದ್ದಾಗಲೇ ಇದೆಲ್ಲ ಸಾಧ್ಯವಾಗಿದ್ದು ನನ್ನ ಅದೃಷ್ಟ. ಆ ದಿನಗಳಲ್ಲಿ ಸಾಮಾಜಿಕ ಮಾಧ್ಯಮ ಇಲ್ಲವಾಗಿದ್ದು ಇನ್ನೊಂದು ಅದೃಷ್ಟ. ಆಗಿನ ಕಾಲದಲ್ಲಿ ವಾಟ್ಸ್‌ಆ್ಯಪ್, ಬ್ಲಾಗ್, ಟ್ವಿಟರ್, ಫೇಸ್‌ಬುಕ್ ಇವೆಲ್ಲ ಇದ್ದಿದ್ದರೆ ನಡುರಾತ್ರಿಯ, ಕಾಡಿನ ಕಗ್ಗತ್ತಲಿನ ಯಾವ ಅನುಭವವೂ ನನ್ನದಾಗುತ್ತಿರಲಿಲ್ಲ. ಸಾಮಾಜಿಕ ಮಾಧ್ಯಮದ ಫಲಾನುಭವಿಯಾಗಿ ಹೇಳಬೇಕಾದ ಕೊನೆಯ ಮಾತೊಂದಿದೆ: ನಾನು ಪ್ರಜಾವಾಣಿ ಬಳಗದಿಂದ ನಿವೃತ್ತಿ ಪಡೆದು ಒಂಬತ್ತು ವರ್ಷಗಳ ನಂತರದ ಘಟನೆ. ಆಗಲೂ ನನ್ನ ವಿಜ್ಞಾನ ವಿಶೇಷ ಅಂಕಣ ಈ ದಿನಪತ್ರಿಕೆಯಲ್ಲಿ ಪ್ರತಿ ಗುರುವಾರ ಪ್ರಕಟವಾಗುತ್ತಿತ್ತು. 2015ರಲ್ಲಿ ಕರಾವಳಿಯ ಅಭಿವೃದ್ಧಿಯ ವೈಖರಿಯನ್ನು ವಿವರಿಸುವ ಅಂಕಣವೊಂದನ್ನು ಬರೆದೆ. ಅದು ನನ್ನದೇ ಉತ್ತರ ಕನ್ನಡ ಜಿಲ್ಲೆಯಲ್ಲಿ ನನ್ನ ವಿರುದ್ಧ ಪ್ರತಿಭಟನೆಗೆ ಕಾರಣವಾಯಿತು. ಆ ಬರಹದ ಒಂದು ವಾಕ್ಯವನ್ನು ಯಾರೋ ತಿರುಚಿ ಅರ್ಥೈಸಿದ ಪರಿಣಾಮವಾಗಿ ಕುಮಟಾದಲ್ಲಿ ನಾಲ್ಕೈದು ಸಾವಿರ ಮೀನುಗಾರರ ಬೃಹತ್ ರೋಡ್‌ಶೋ, ನನ್ನ ಪ್ರತಿಕೃತಿಗೆ ಚಪ್ಪಲಿ ಮಾಲೆ, ಅಗ್ನಿಸ್ಪರ್ಶ, ಪೊಲೀಸ್ ಠಾಣೆಯಲ್ಲಿ ಖಟ್ಲೆ ಎಲ್ಲ ನಡೆದವು. ಎಂದಿನಂತೆ ಪ್ರಜಾವಾಣಿ ನನ್ನ ಬೆಂಬಲಕ್ಕೆ ದೃಢವಾಗಿ ನಿಂತಿತು. ನನ್ನ ಅಂಕಣದಲ್ಲಿ ಯಾವ ಸಮುದಾಯವನ್ನೂ ಅವಹೇಳನ ಮಾಡುವ ಒಂದು ವಾಕ್ಯವೂ ಇಲ್ಲವೆಂದು ಹೇಳಿತು. ಆದರೂ ನನ್ನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರಿಂದ ಕುಮಟಾದಿಂದ ಪೊಲೀಸ್ ಸಿಬ್ಬಂದಿಯೊಬ್ಬ ನನ್ನ ಹೇಳಿಕೆ ಪಡೆಯಲು ಕೆಂಗೇರಿ ಬಳಿಯ ನನ್ನ ಮನೆಗೆ ಬಂದ. ಕೂತು, ಚಹ ಕುಡಿಯುತ್ತ ಸುತ್ತೆಲ್ಲ ಪುಸ್ತಕಗಳ ರ್ಯಾಕ್ ಮೇಲೆ ಕಣ್ಣಾಡಿಸಿ, ಫೈಲ್ ಮುಚ್ಚುತ್ತ, ಇಲ್ರಿ ಸರ್, ಈಗೆಲ್ಲ ಮೀನುಗಾರರ ಯುವಕರಿಗೆ ಕೆಲಸ ಇಲ್ಲಲ್ರೀ... ಅವರ ಕೈಯಲ್ಲಿ ಅದೇನೊ ವಾಟ್ಸ್‌ಆ್ಯಪ್ ಅಂತ ಬಂದಿದೆಯಲ್ರೀ. ಯಾರ ವಿರುದ್ಧ ಬೇಕಾದರೂ ಗುಲ್ಲೆಬ್ಬಿಸಬಹುದು. ಸಾವಿರಾರು ಮಂದಿಯಿಂದ ಪ್ರತಿಭಟನೆ ಮಾಡಿಸಬಹುದು; ಮಾಡಿಸ್ತಾ ಇದಾರೆ ಎಂದ.
ಮಾರ್ಕ್ ಟ್ವೇನ್ ಹೇಳಿದ್ದನಲ್ಲ: ‘ಸತ್ಯ ಚಪ್ಪಲ್ ಹಾಕಿ ಹೊರಡುವಷ್ಟರಲ್ಲಿ ಸುಳ್ಳು ಇಡೀ ಪೃಥ್ವಿಯನ್ನು ಸುತ್ತಿ ಬರುತ್ತದೆ’ ಅಂತ? ನಾವು ಆ ಯುಗಕ್ಕೆ ಕಾಲಿಡಲು ಚಪ್ಪಲ್ ಹುಡುಕುತ್ತಿದ್ದೇವೆ.
(ಲೇಖಕರು ಟಿಎಸ್‌ಆರ್ ಪ್ರಶಸ್ತಿಗೆ ನಾಮಾಂಕಿತರಾಗಿದ್ದಾರೆ.)
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.