-

ಮನೆಯಿಂದ ಶಾಲೆಗೆ ಶಾಲೆಯಿಂದ ಬಯಲಿಗೆ

-

ಮನೆಗೂ ಮತ್ತು ಶಾಲೆಗೂ ಸಂಬಂಧವಿಲ್ಲದಂತೆಯೇ ಬದುಕುವ ಪೋಷಕರೊಂದು ಕಡೆಯಾದರೆ, ಇನ್ನು ಶಾಲೆಯಿಂದ ನೇರ ಸುರಕ್ಷಿತ ಉದ್ಯೋಗ ಕ್ಷೇತ್ರಕ್ಕೆ ಎಂಬಂತಹ ಧೋರಣೆ ಮತ್ತೂ ಕೆಲವು ಪೋಷಕರದು. ಆದರೆ ಎಷ್ಟೋ ಬಾರಿ ಅದೆಷ್ಟೇ ನೀಲನಕ್ಷೆಯನ್ನು ಅನುಸರಿಸುತ್ತಾ ಓದು ಮತ್ತು ತರಬೇತಿಗಳನ್ನು ಮುಗಿಸಿದರೂ, ಮಕ್ಕಳು ದೊಡ್ಡವರಾದ ಮೇಲೆ ಇನ್ನಾವುದೋ ಕ್ಷೇತ್ರದಲ್ಲಿ, ಇನ್ನಾವುದೋ ಕಸುಬಿನಲ್ಲಿ ತೊಡಗಿಕೊಳ್ಳುತ್ತಾರೆ. ಅವರು ಓದಿರುವುದಕ್ಕೂ ಮತ್ತು ಅವರು ಕೆಲಸ ಮಾಡುವುದಕ್ಕೂ ಏನೇನೂ ಸಂಬಂಧವೇ ಇಲ್ಲದಂತಿರುತ್ತದೆ. ಎಲ್ಲವೂ ನೀಲನಕ್ಷೆಯ ಮೇಲೆ ಆಧಾರಿತವಾಗಿರುವುದಿಲ್ಲ.

ರಜೆಯಲ್ಲಿ ಮಜೆ ಶಾಲೆಯಲ್ಲಿ ಸಜೆ

ಬೇಸಿಗೆಯ ರಜೆಯಲ್ಲಿ ಮಕ್ಕಳಿಗೆ ಆರಾಮವಾಗಿ ಮಲಗಲು, ಬೆಳಗಿನ ಹೊತ್ತು ನಿಧಾನವಾಗಿ ಏಳಲು, ಆಡಲು, ಅಜ್ಜಿ ಅಥವಾ ಇನ್ನಾರೋ ಸಂಬಂಧಿಕರ ಮನೆಗೆ ಹೋಗಲು, ಜಾತ್ರೆ, ಸಮಾರಂಭಗಳಲ್ಲಿ ಸ್ವೇಚ್ಛೆಯಿಂದ ಓಡಾಡಿಕೊಂಡಿರಲು ಬಿಟ್ಟಿರಬೇಕು. ಆದರೆ, ಅದರಂತೆಯೇ ಮಕ್ಕಳನ್ನು ಶಾಲೆಗೆ ಕಳುಹಿಸಲೂ ಸಿದ್ಧವಾಗಿರಬೇಕು. ಈ ಸಿದ್ಧತೆಯ ಬಗ್ಗೆಯೇ ನಾವು ತಿಳಿಯಬೇಕಾಗಿರುವುದು. ಇಲ್ಲವಾದರೆ ರಜೆಯಲ್ಲಿ ಮಜೆ ಮಾಡಿದ ಮಕ್ಕಳಿಗೆ ಶಾಲೆಯಲ್ಲಿ ಸಜೆಯಾಗುತ್ತದೆ. ಬಹಳಷ್ಟು ಪೋಷಕರಿಗೆ ಈಗ ಮಜವಾಗಿರಲಿ, ಶಾಲೆಗೆ ಹೋದಾಗ ನೋಡಿಕೊಳ್ಳೋಣ. ಆಗ ಬೇಗ ಏಳುವುದು ಮತ್ತು ಓದುವುದು ಬರೆಯುವುದು ಇದ್ದೇ ಇರುತ್ತದೆ ಎಂಬ ಧೋರಣೆ ಇರುತ್ತದೆ. ಆದರೆ ಕೆಲವೊಂದು ಸಿದ್ಧತೆಗಳನ್ನು ಮಾಡಿಕೊಂಡಿದ್ದೇ ಆದರೆ ಮಕ್ಕಳಿಗೆ ರಜೆಯೂ ಅರ್ಥಪೂರ್ಣವಾಗಿರುತ್ತದೆ ಮತ್ತು ಶಾಲೆಗೆ ಹೋಗುವುದಕ್ಕೂ ಮಾನಸಿಕವಾಗಿ ಮತ್ತು ಬೌದ್ಧಿಕವಾಗಿ ಸಿದ್ಧವಾಗಿರುತ್ತಾರೆ.

ಸಿದ್ಧತೆ ಎಂದರೆ ಬದ್ಧತೆ

ಸಿದ್ಧತೆ ಎಂದರೆ ಬೇರಿನ್ನೇನೋ ಭೌತಿಕವಾಗಿ ಅಥವಾ ವಸ್ತುಗಳನ್ನು ಸಿದ್ಧಪಡಿಸಿಕೊಳ್ಳುವುದು ಎಂದೇನಲ್ಲ. ಮಾಡುವ ಕೆಲಸಗಳಲ್ಲಿ ಅಚ್ಚುಕಟ್ಟುತನ ಮತ್ತು ಬದ್ಧತೆಯನ್ನು ಕಲಿಸುವುದು. ರಜೆ ಎಂದಾಕ್ಷಣ ಎಷ್ಟು ಹೊತ್ತಿಗಾದರೂ ಪರವಾಗಿಲ್ಲ ಎಂಬಂತೆ ಮಲಗುವ ರೂಢಿಯನ್ನು ಮಾಡಿಸಬಾರದು. ಹೊತ್ತಿನ ಪರಿವೇ ಇಲ್ಲದೇ, ಕೆಲಸದಲ್ಲೇ ಮುಳುಗಿ ಯಾವಾಗಲೋ ಮಲಗುವುದು ಅಥವಾ ಯಾವಾಗಲೋ ತಿನ್ನುವುದು ಕಾರ್ಯದ ಓಘದಲ್ಲಿ ಒಂದು ಹಂತಕ್ಕೆ ಸಮ್ಮತವೇ. ಆದರೆ ಅದು ಸಣ್ಣವಯಸ್ಸಿಗಲ್ಲ. ಏಕೆಂದರೆ ಆ ಬಗೆಯ ಕ್ರಮವಿಲ್ಲದ ಕಾರ್ಯ ನಿರ್ವಹಣೆಯಿಂದ ಮಕ್ಕಳಲ್ಲಿ ಮಾನಸಿಕ ಮತ್ತು ಭಾವನಾತ್ಮಕ ಒತ್ತಡಗಳನ್ನು ತರುತ್ತದೆ. ಹಗುರವಾಗಿ ದಿನಗಳನ್ನು ಕಳೆದುಬಿಡುವುದು, ನಂತರ ಒಮ್ಮಿಂದೊಮ್ಮೆಲೆ ಅವರ ಮೇಲೆ ಒತ್ತಡ ಹೇರುವುದು ನಿಜಕ್ಕೂ ಸಲ್ಲದು. ಅದಕ್ಕೇ ಮಕ್ಕಳಿಗೆ ರಜೆಯಲ್ಲಿ ಬೆಳಗ್ಗೆ ಬೇಗ ಏಳುವಂತಹ ಕಾರ್ಯಕ್ರಮವನ್ನೇನಾದರೂ ಇಟ್ಟುಕೊಂಡಿರಬೇಕು. ಈಜಿಗೆ ಹೋಗುವುದೋ, ವ್ಯಾಯಾಮಕ್ಕೋ, ಬ್ಯಾಡ್ಮಿಂಟನ್, ಹೊರಾಂಗಣ ಆಟಗಳು, ಕರಾಟೆ, ಯೋಗ ಅಥವಾ ಇನ್ನಾವುದಾದರೂ ಬೆಳಗಿನ ಚಟುವಟಿಕೆಗಳಿಗೆ ಸೂಕ್ತವಾಗಿರುವಂತಹುದನ್ನು ಖಂಡಿತ ಗಮನಿಸಿಕೊಂಡು ಅಭ್ಯಾಸ ಮಾಡಿಸ ಬೇಕು. ಆಗ ಬೇಗ ಏಳುವುದು ಮತ್ತು ಚಟುವಟಿಕೆಯಿಂದ ಇರುವುದು ಚಾಲ್ತಿ ಯಲ್ಲಿಯೇ ಇರುತ್ತದೆ. ಅದರೊಂದಿಗೆ ಇನ್ನಿತರ ಸಮಯಗಳಲ್ಲಿ ಬೇಸಿಗೆಯ ಶಿಬಿರಕ್ಕೆ ಹೋಗುವುದೋ, ವಿಶೇಷ ತರಗತಿಗಳಿಗೆ ಹೋಗುವುದೋ ಇತ್ಯಾದಿಗಳನ್ನು ರೂಢಿಸಲೇಬೇಕು. ಅದು ಅತ್ಯಲ್ಪಾವಧಿಯಾಗಿದ್ದರೂ ಕೂಡ ಅದು ಖಂಡಿತ ಮಕ್ಕಳಿಗೆ ಉಪಯೋಗಕ್ಕೆ ಬರುತ್ತದೆ.

ರಜೆಯನ್ನು ಬೈಯಬೇಡಿ

ಮಕ್ಕಳು ಸ್ವೇಚ್ಛೆಯಿಂದ ಓಡಾಡಿಕೊಂಡು, ಗಲಾಟೆ ಮಾಡಿಕೊಂಡು, ಆಟವಾಡಿಕೊಂಡು ತಮ್ಮ ರಜಾದಿನಗಳನ್ನು ಮಜಾ ಮಾಡುತ್ತಿದ್ದಾಗ ಎಷ್ಟೋ ಬಾರಿ ಪೋಷಕರು ಈ ಮಕ್ಕಳಿಗೆ ಯಾಕಾದರೂ ರಜಾ ಬಂತೋ ಎಂದು ಅಥವಾ ಯಾವಾಗ ಇವರಿಗೆ ಸ್ಕೂಲ್ ಶುರು ಆಗತ್ತೋ ಎಂದು ಗಟ್ಟಿಯಾಗಿಯೇ ಹೇಳುತ್ತಿರುತ್ತಾರೆ. ಇದರಿಂದ ಮಕ್ಕಳಿಗೆ ತಮ್ಮ ಚಟುವಟಿಕೆಗಳಿಂದ ಪೋಷಕರಿಗೆ ಕಿರಿಕಿರಿ ಆಗುತ್ತಿದೆ ಎಂದು ತಿಳಿಯುತ್ತದೆಯೇ ಹೊರತು, ಏಕೆ ಏನಾಗುತ್ತಿದೆ ಎಂದು ತಿಳಿಯುವುದಿಲ್ಲ. ಮಕ್ಕಳಿಗೆ ದಿಢೀರನೆ ರಜೆಯೇನೂ ಬರುವುದಿಲ್ಲ ತಾನೇ? ಅದೊಂದು ಆಕಸ್ಮಿಕವೋ, ಅಪಘಾತವೋ ಅಲ್ಲ. ರಜೆಯಲ್ಲಿ ತಾವೇನು ಮಾಡಬೇಕು. ತಾವೆಷ್ಟರ ಮಟ್ಟಿಗೆ ಮಕ್ಕಳಿಗೆ ಸಮಯ ಕೊಡಬೇಕೆಂದು ಪೋಷಕರು ಒಂದು ನೀಲನಕ್ಷೆ ತಯಾರು ಮಾಡಿಕೊಳ್ಳಬೇಕು. ಮಾನಸಿಕವಾಗಿ ಮತ್ತು ಕ್ರಿಯಾತ್ಮಕವಾಗಿ ಒಂದು ಸಿದ್ಧತೆಯನ್ನು ಮಾಡಿಕೊಂಡಿರಬೇಕು.

ಒಂದಷ್ಟು ಕಾಲ ಅವರ ಜೊತೆಗೆ ಇರುವುದಾದರೆ, ಮತ್ತೊಂದಷ್ಟು ಕಾಲ ಅವರು ತಮ್ಮ ಚಟುವಟಿಕೆಯಲ್ಲಿ ತಾವು ತೊಡಗಿರುವಂತೆ ನೋಡಿಕೊಳ್ಳಬೇಕು. ಇದರಿಂದ ಪರಸ್ಪರ ಮಧ್ಯೆ ಪ್ರವೇಶ ಅಥವಾ ಕೆಲಸಕ್ಕೆ ತೊಂದರೆ ಕೊಡುವುದನ್ನು ತಪ್ಪಿಸಿಕೊಳ್ಳಬಹುದು. ಇನ್ನೊಂದು ಮುಖ್ಯವಾಗಿ ಮಕ್ಕಳಿಗೆ ಆ ಸಮಯದಲ್ಲೇ ಮನೆಗೆಲಸಗಳನ್ನು ಮಾಡುವುದನ್ನು ಹೇಳಿಕೊಡಬೇಕು. ಬಟ್ಟೆ ತೊಳೆಯುವುದು, ಮನೆ ಸಾರಿಸುವುದು, ವಾಹನಗಳನ್ನು ತೊಳೆಯುವುದು ಇತ್ಯಾದಿ. ಇದರ ಜೊತೆಗೆ ರಿಪೇರಿ ಕೆಲಸಗಳೂ ಕೂಡ ಅವರಿಗೆ ಕಲಿಸಬೇಕು. ಇನ್ನು ಹೊಸ ಅಡುಗೆಯಲ್ಲಿ ಅವರನ್ನು ಭಾಗಿಗಳನ್ನಾಗಿ ಮಾಡಿಕೊಳ್ಳುವುದು, ಅವರಿಂದಲೇ ಸಣ್ಣ ಸಣ್ಣ ಪ್ರಮಾಣದ ಅಡುಗೆ ಅಥವಾ ತಿಂಡಿಗಳನ್ನು ಮಾಡಿಸುವುದು ಕೂಡ ಅವರಿಗೆ ಒಳಿತು. ಮಕ್ಕಳಿಗೆ ತಾನು ಮಾಡಿರುವ ಅಡುಗೆ ಅಥವಾ ತಿಂಡಿಯನ್ನು ಮನೆಯವರು, ಅದರಲ್ಲೂ ಪಾಕಶಾಸ್ತ್ರದಲ್ಲಿ ನಿಪುಣರಾಗಿರುವ ಹಿರಿಯರು ತಿಂದು ಮೆಚ್ಚುಗೆ ತೋರಿಸುವುದು ಅವರ ಕೆಲಸ ಮಾಡುವ ಮನಸ್ಥಿತಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತದೆ. ನನಗೆ ಸಹಾಯಕರಾಗಿ ಬರುವ ಅನೇಕ ಯುವಕರಲ್ಲಿ ಮನೆಗೆಲಸ ಮಾಡುವ ಅಭ್ಯಾಸವೇ ಇಲ್ಲದಿರುವುದನ್ನು ಕಾಣುತ್ತೇನೆ.

ತಾವು ಊಟ ಮಾಡಿದ ತಟ್ಟೆಯನ್ನೂ ತೊಳೆಯಲು ಬಾರದ ಹುಡುಗರನ್ನು ಕಾರಣ ಕೇಳಿದಾಗ, ನಮ್ಮನೇಲಿ ಗಂಡು ಮಕ್ಕಳ ಕೈಯಲ್ಲಿ ಅಡುಗೆ ಮನೆ ಕೆಲಸವೆಲ್ಲಾ ಮಾಡಿಸೋದಿಲ್ಲ ಎನ್ನುತ್ತಾರೆ. ಕೆಲವರ ಮನೆಯಲ್ಲಿ ಲಿಂಗಾಧಾರಿತದಲ್ಲಿ ಮನೆಗೆಲಸಗಳು ನಿರ್ಧರಿತವಾಗುತ್ತದೆ. ಆದರೆ ಅದೇ ಗಂಡು ಮಕ್ಕಳು ಒಬ್ಬರೇ ಇರುವಂತಹ ಸಂದರ್ಭ ಬಂದಾಗ ಅವರ ಜೀವನ ನಿರ್ವಹಣೆಯನ್ನು ಹೇಗೆ ಮಾಡಿಕೊಳ್ಳುತ್ತಾರೆ ಎಂದು ಪೋಷಕರು ಆಲೋಚಿಸುವುದೇ ಇಲ್ಲ. ಹಾಗಾಗಿಯೇ ಕೆಲವು ಅವಿವಾಹಿತ ಮತ್ತು ಕುಟುಂಬದಿಂದ ಹೊರಗೆ ಕೆಲಸಕ್ಕಾಗಿ ಬಂದು ಬದುಕುವ ಹುಡುಗರ ಕೋಣೆಗಳನ್ನು ನೋಡಲಾಗದು. ಮನೆ ಅಥವಾ ಕೋಣೆಯಲ್ಲಿ ಎಲ್ಲಾ ಕಡೆ ಅಸ್ತವ್ಯಸ್ತ, ಗಲೀಜು, ಕ್ರಮವಿಲ್ಲದ ಜೋಡಣೆ, ಅಶಿಸ್ತಿನ ಪರಮಾವಧಿ. ಸಾಲದಕ್ಕೆ ಬ್ಯಾಚುಲರ್ಸ್‌ ರೂಂ ಅಂದ್ರೆ ಹೀಗೇ ಇರೋದು ಅನ್ನೋ ಮಾತು ಬೇರೆ. ಇದೇನಿದ್ದರೂ ಪೋಷಕರು ಗಂಡು ಮಕ್ಕಳಿಗೆ ಶಿಸ್ತನ್ನು ಮತ್ತು ಮನೆಗೆಲಸವನ್ನು ಕಲಿಸಿಕೊಡದಿರುವ ಫಲ. ತುಂಬಾ ಮುದ್ದು ಮಾಡಿ ಬೆಳೆಸಿದ್ದೇವೆ.

ಏನೂ ಮನೆಗೆಲಸ ಬರುವುದಿಲ್ಲ ಎಂಬ ಮಾತು ಹೆಣ್ಣು ಮಕ್ಕಳ ಕುರಿತೂ ಕೇಳುತ್ತಿರುತ್ತೇವೆ. ಮುದ್ದಿಗೂ ಅಚ್ಚುಕಟ್ಟುತನಕ್ಕೂ ಏನೂ ಸಂಬಂಧವಿಲ್ಲ. ತಮ್ಮ ಜವಾಬ್ದಾರಿಯನ್ನು ತಾವು ಹೊರುವಷ್ಟು, ತಮ್ಮ ಅಗತ್ಯಕ್ಕೆ ತಕ್ಕಷ್ಟು ಕೆಲಸಗಳನ್ನು ಮಾಡಿಕೊಳ್ಳುವಷ್ಟು ಅವರನ್ನು ಸಿದ್ಧರನ್ನಾಗಿ ಮಾಡಲೇಬೇಕು. ಅದು ಬಾಲ್ಯದಲ್ಲಿಯೇ, ಅದೂ ಶಾಲಾದಿನಗಳಲ್ಲಿಯೇ. ಕೆಲವು ಮಕ್ಕಳು ಅಡುಗೆ ಮಾಡುವ ಸಾಹಸಕ್ಕೇ ಹೋಗದೇ ದೊಡ್ಡವರಾದ ಮೇಲೂ ಅದೊಂದು ದೊಡ್ಡ ವಿದ್ಯೆ ಅಥವಾ ಅಸಡ್ಡೆಯ ಕೆಲಸವೆಂಬಂತೆ ಅದಕ್ಕೆ ಕೈಯೇ ಇಡುವುದಿಲ್ಲ.

ಸಣ್ಣ ಉಪಕರಣಗಳು ಮತ್ತು ಮಿತಿಯ ಪರಿಕರಗಳಿಂದ, ಅಲ್ಪ ಸಮಯ ಮತ್ತು ಕಡಿಮೆ ವೆಚ್ಚದ ಸಾಮಗ್ರಿಗಳಿಂದ ಅಡುಗೆ ಮಾಡಿಕೊಳ್ಳಬಹುದಾಗಿದ್ದರೂ, ಅಡುಗೆಯ ಮಾಡಿಕೊಳ್ಳುವ ಗೋಜಿಗೇ ಹೋಗದೇ ಹಸಿವಾದಾಗ ಹೊರಗಡೆಯೇ ಹೋಗಿ ತಿನ್ನುವಂತಹ ಅಭ್ಯಾಸ ಮಾಡಿಕೊಂಡುಬಿಡುತ್ತಾರೆ. ಇದರಿಂದಾಗಿ ಸಣ್ಣ ವಯಸ್ಸಿನಲ್ಲಿಯೇ ಅನೇಕ ಸಣ್ಣ ಪುಟ್ಟ ಹೊಟ್ಟೆ ಸಮಸ್ಯೆಗಳಿಗೆ ಈಡಾಗುತ್ತಾರೆ. ಮಕ್ಕಳಿಗೂ ತಾವು ಏನೇನೆಲ್ಲಾ ಮಾಡಿದೆವೆಂದು ಶಾಲೆಯಲ್ಲಿ ಹೇಳಿಕೊಳ್ಳಲು, ವಿಷಯ ಹಂಚಿಕೊಳ್ಳಲು ಚಟುವಟಿಕೆಗಳು ಬೇಕು. ರಜೆಯಲ್ಲಿ ಮಕ್ಕಳನ್ನು ರಚನಾತ್ಮಕವಾಗಿ ಚಟುವಟಿಕೆಯಿಂದಿಡೋಣ.

ಪಠ್ಯ ಪಾಠ

ಕೆಲವರ ಮನೆಯಲ್ಲಂತೂ ರಜೆಯಲ್ಲಿ ಓದುವ ಅಥವಾ ಬರೆಯುವ ಆಲೋಚನೆ ಬರುವುದೇ ಇಲ್ಲ. ಸರಿ, ಶಾಲೆಯ ಪುಸ್ತಕಗಳೇನೂ ಓದುವುದು ಬೇಡ. ಆದರೆ, ಇತರ ಕತೆ ಪುಸ್ತಕಗಳು, ವಾರ್ತಾ ಪತ್ರಿಕೆಗಳು, ನಾಟಕದಲ್ಲಿ ಭಾಗವಹಿಸುವುದು, ಹಾಡುಗಳನ್ನು ಹಾಡುವುದು, ಚಿತ್ರಗಳನ್ನು ಬರೆದು ಅದರ ಅಡಿಯಲ್ಲಿ ಆ ಚಿತ್ರದ ಬಗ್ಗೆ ಬರೆಯುವುದು ಇತ್ಯಾದಿ ಭಾಷೆಯ ಬಳಕೆಯಾಗುವಂತಹ ಚಟುವಟಿಕೆಗಳನ್ನು ಮಾಡಿಸಬೇಕು. ಇದರಿಂದಾಗಿ ಅವರಿಗೆ ಅಕ್ಷರಗಳು ಅಪರಿಚಿತವಾಗುವಂತಿರುವುದಿಲ್ಲ. ಓದುವ, ಬರೆಯುವ, ಅರ್ಥ ಮಾಡಿಕೊಳ್ಳುವ, ವ್ಯಾಕರಣ, ರಚನೆ ಇವುಗಳ ಅಭ್ಯಾಸ ಆಗುತ್ತಲೇ ಇರುತ್ತದೆ. ಎಷ್ಟೋ ಬಾರಿ ಧಾರ್ಮಿಕ ಆಚರಣೆಯ ಭಾಗವಾಗಿ ಪಾರಾಯಣ ಮಾಡುವ ಅಥವಾ ಪಠಣ ಮಾಡುವ ಕ್ರಿಯೆಯಿಂದಾಗಿ ಓದುವ ಮತ್ತು ಭಾಷೆಯಲ್ಲಿ ಕಲಿಕೆ ಸದಾ ಜಾಗೃತವಾಗಿಯೇ ಇರುತ್ತದೆ. ನನ್ನ ವಿಷಯದಲ್ಲಂತೂ ಧಾರ್ಮಿಕ ಪುಸ್ತಕಗಳೇ ನನಗೆ ಭಾಷೆಯನ್ನು ಚೆನ್ನಾಗಿ ಕಲಿಸಿದ್ದು. ದೇವರ ಕಷ್ಟಕರ ಸ್ತೋತ್ರಗಳು, ಭಜನೆಗಳು, ಸಾಧು ಸಂತರ ಜೀವನ ಚರಿತ್ರೆಗಳು, ನವರಾತ್ರಿಯಂತಹ ಹಬ್ಬಗಳಲ್ಲಿ ದೇವಿ ಭಾಗವತ, ದುರ್ಗಾ ಸಪ್ತಶತಿ, ಶಿವ ಮಹಿಮ್ನಾಪುರಾಣ, ಇನ್ನು ಲಲಿತಾ ಸಹಸ್ರನಾಮ, ವಿಷ್ಣು ಸಹಸ್ರನಾಮ ಇತ್ಯಾದಿಗಳಿಂದ ಭಾಷೆ ಮತ್ತು ವ್ಯಾಕರಣದಿಂದ ದೂರಾಗುತ್ತಲೇ ಇರಲಿಲ್ಲ. ಅವುಗಳಿಗೆ ರಜೆ ಎಂಬುವುದಿರುವುದಿಲ್ಲವಲ್ಲ.

ನಾನು ಬಾಲ್ಯದಲ್ಲಿ ಗಮನಿಸುತ್ತಿದ್ದಂತೆ ಇದೇ ರೀತಿ ನನ್ನ ಅನ್ಯ ಧರ್ಮೀಯ ಮಿತ್ರರೂ ಕೂಡ ಪಠಣ ಮಾಡುವ ಅಭ್ಯಾಸವಿರುವವರು ಭಾಷೆಯಲ್ಲಿ ಮುಂದಾಗಿಯೇ ಇರುತ್ತಿದ್ದರು. ಯಾವುದೇ ಧಾರ್ಮಿಕ ಅಥವಾ ಆಧ್ಯಾತ್ಮಿಕ ಪುಸ್ತಕಗಳನ್ನು ಬಿಡದೇ ಓದುತ್ತಿದ್ದ ನನ್ನ ಗೆಳೆಯರು ಓದಿನಲ್ಲಿ ಚುರುಕಾಗಿಯೇ ಇರುತ್ತಿದ್ದರು. ಆದರೆ ಅದರ ಹೊರತಾಗಿ ವಿಚಾರಗಳನ್ನು ವಿಸ್ತರಿಸಿಕೊಳ್ಳುವಂತಹ ಇತರ ಪುಸ್ತಕಗಳನ್ನು ಓದದೇ ಹೋದಾಗ ವೈಚಾರಿಕವಾಗಿ ಸಮಸ್ಯೆ ಉಂಟಾಗುವುದು. ಅಥವಾ ಸೀಮಿತ, ನಿರ್ದಿಷ್ಟ ವಿಚಾರಗಳ ಚೌಕಟ್ಟುಗಳ ಆಚೆಗೆ ನೋಡದಿರುವುದು, ವಿಚಾರಿಸದಿರುವುದು. ಅರಿವನ್ನು ವಿಸ್ತರಿಸಿಕೊಳ್ಳಲು ತಿಳಿಯುವ ಹಸಿವು ಬಹಳ ಪ್ರಯೋಜನಕಾರಿ ಎಂಬುದನ್ನು ಪೋಷಕರೂ ಅರಿತಿರಬೇಕು ಮತ್ತು ಮಕ್ಕಳಿಗೂ ಕಲಿಸಬೇಕು.

ಶಾಲೆಯಿಂದ ಬಯಲಿಗೆ

ಮನೆಗೂ ಮತ್ತು ಶಾಲೆಗೂ ಸಂಬಂಧವಿಲ್ಲದಂತೆಯೇ ಬದುಕುವ ಪೋಷಕರೊಂದು ಕಡೆಯಾದರೆ, ಇನ್ನು ಶಾಲೆಯಿಂದ ನೇರ ಸುರಕ್ಷಿತ ಉದ್ಯೋಗ ಕ್ಷೇತ್ರಕ್ಕೆ ಎಂಬಂತ ಧೋರಣೆ ಮತ್ತೂ ಕೆಲವು ಪೋಷಕರದು.

ಆದರೆ ಎಷ್ಟೋ ಬಾರಿ ಅದೆಷ್ಟೇ ನೀಲನಕ್ಷೆಯನ್ನು ಅನುಸರಿಸುತ್ತಾ ಓದು ಮತ್ತು ತರಬೇತಿಗಳನ್ನು ಮುಗಿಸಿದರೂ, ಮಕ್ಕಳು ದೊಡ್ಡವರಾದ ಮೇಲೆ ಇನ್ನಾವುದೋ ಕ್ಷೇತ್ರದಲ್ಲಿ, ಇನ್ನಾವುದೋ ಕಸುಬಿನಲ್ಲಿ ತೊಡಗಿಕೊಳ್ಳುತ್ತಾರೆ. ಅವರು ಓದಿರುವುದಕ್ಕೂ ಮತ್ತು ಅವರು ಕೆಲಸ ಮಾಡುವುದಕ್ಕೂ ಏನೇನೂ ಸಂಬಂಧವೇ ಇಲ್ಲದಂತಿರುತ್ತದೆ. ಎಲ್ಲವೂ ನೀಲನಕ್ಷೆಯ ಮೇಲೆ ಆಧಾರಿತವಾಗಿರುವುದಿಲ್ಲ. ಬದುಕು ನಿರ್ದಿಷ್ಟ ದಾರಿಗಳಿಲ್ಲದ, ಅಷ್ಟೇಕೆ ನಿರ್ದಿಷ್ಟ ಗುರಿಯೂ ಇಲ್ಲದಂತಹ ಬಯಲಾಗಿರುವುದರಿಂದ ಎಂತಹುದೇ ಸ್ಥಿತಿಯಲ್ಲಿ, ಯಾವುದೇ ಸ್ಥಳದಲ್ಲಿ ತಮ್ಮ ಬದುಕನ್ನು ನಿಭಾಯಿಸಿಕೊಳ್ಳುವ, ಜೀವನವನ್ನು ಕಟ್ಟಿಕೊಳ್ಳುವಂತಹ ಮನಸ್ಥಿತಿಯನ್ನು ಮಕ್ಕಳಿಗೆ ನಿರ್ಮಾಣ ಮಾಡುವುದು ಬಹುದೊಡ್ಡ ಸವಾಲಿನ ಕೆಲಸ. ಏಕೆಂದರೆ ನಿರ್ದಿಷ್ಟ ದಾರಿ ತೋರಬೇಕು, ಆದರೆ ಈ ದಾರಿಯೇ ಅಂತಿಮವಲ್ಲ ಎಂಬ ಅರಿವಿರಬೇಕು.

ಗುರಿ ಸ್ಪಷ್ಟಪಡಿಸಬೇಕು, ಆದರೆ ಗುರಿ ಬಿಡಲೂ ಸಿದ್ಧರಾಗಿರಬೇಕು. ಹೀಗೇ ಬದುಕು ಎಂದು ತೋರುತ್ತಲೇ, ಹೀಗೇ ಬದುಕಬೇಕಾಗಿಲ್ಲ ಎಂದು ಸೂಕ್ಷ್ಮತೆಯನ್ನು ಧಾರೆ ಎರೆಯುವುದು ನಿಜಕ್ಕೂ ಸುಲಭದ ಮಾತಲ್ಲ. ಹಾಗಾಗಿಯೇ ಕನಸು ಕಾಣಲು ಕಲಿಸಿದರೂ, ಕನಸು ನನಸಾಗದೇ ಕರಗಿಹೋಗುವುದನ್ನು ನೋಡಲೂ ಕಲಿಸಿರಬೇಕು. ಅಭಿಮಾನಕ್ಕೂ ಅಹಂಕಾರಕ್ಕೂ ವ್ಯತ್ಯಾಸವನ್ನು ಕಲಿಸಿಕೊಡುತ್ತಲೇ, ಮಹತ್ವಾಕಾಂಕ್ಷೆಯನ್ನೂ ಕಟ್ಟಿಕೊಡುತ್ತಾ, ಯಾವುದೇ ಸಮಯದಲ್ಲಿ ಅದು ಕೈಜಾರುವಾಗ ಅದನ್ನು ಬಿಟ್ಟು ಹಗುರವಾಗುವ ಕಲೆಯನ್ನೂ ಕಲಿಸಿಕೊಡುವುದು ಸವಾಲಿನ ಕೆಲಸವೇ ಸರಿ.

ಪೂರ್ವಾಗ್ರಹಗಳಿಲ್ಲದೇ, ಸರೀಕರ ಜೊತೆಗೆ ಸ್ಪರ್ಧೆ, ಪೈಪೋಟಿಗಳಿಲ್ಲದೇ, ಸಾಮಾಜಿಕ ಸ್ಥಾನಮಾನದ ಭಯವಿಲ್ಲದೇ, ಸಹಜವಾಗಿ ಬದುಕಲು ಕಲಿಸಿದರೆ ಅಥವಾ ಬದುಕುತ್ತಾ ಅವರಿಗೆ ಜೀವಂತ ಉದಾಹರಣೆಯಾದರೆ, ಹೊಗಳಿಕೆಗೆ ಉಬ್ಬದೇ, ತೆಗಳಿಕೆಗಳಿಗೆ ಕುಗ್ಗದೇ, ಸನ್ಮಾನವಾದಾಗ ಮೇಲೆ ಹೋಗದೇ, ಅಪಮಾನವಾದಾಗ ಕುಸಿಯದೇ ತಮ್ಮ ನಿಂತ ನೆಲೆಯಲ್ಲಿ ಭದ್ರ ಬದುಕನ್ನು ಕಂಡುಕೊಳ್ಳಲು ಸಾಧ್ಯವಾಗುವುದು. ಅದಕ್ಕೆಲ್ಲಾ ತಯಾರಿ ಬಾಲ್ಯದಲ್ಲೇ.

 

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top